ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗವಿಲ್ಲದ ಪುರುಷನ ಸಂಗವಿಲ್ಲದ ಸ್ತ್ರೀ ಗರ್ಭವಿಲ್ಲದೆ ಬಸುರಾದುದ ಕಂಡೆ. ದಿನ ವಾರ ಮಾಸವಿಲ್ಲದೆ ಬೇನೆತೋರದೆ ಒಂದು ಶಿಶು ಹಡೆದುದ ಕಂಡೆ. ಆ ಶಿಶು ಮಂಡಲಾದ್ಥಿಪತಿಯ ಕೊಂದು ಮಂಡಲವೆಲ್ಲ ಸುಡುವುದ ಕಂಡೆ. ಕಂಡವರ ನುಂಗಿ ಸೂಲಗಿತ್ತಿಯ ಕೊಲ್ಲುವದ ಕಂಡೆ. ತಾಯಿಸಂಗವ ಮಾಡಿ ತಂದೆಯಲ್ಲಿ ಸತ್ತು ಕೂಡಲಚನ್ನಸಂಗಯ್ಯನ ಪಾದದಲ್ಲಿ ಅಡಗಿ ಬಯಲಾದುದ ಕಂಡೆ. ಅದು ಅಡಗಿದಲ್ಲಿ ತಾನಡಗಬಲ್ಲರೆ ಪ್ರಳಯವಿರಹಿತ ಪರಶಿವಮೂರ್ತಿ ತಾನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗದ ಮೇಲೆ ಇಷ್ಟಲಿಂಗವ ಧರಿಸಿ ಪೂಜೋಪಚಾರವ ಮಾಡುವವರು ಲಿಂಗಪ್ರಾಣಿಗಳಲ್ಲ. ಎನ್ನ ಗುರುವೆಂದು ಭಾವಿಸಿ ಶರಣೆಂದು ನಮಸ್ಕಾರ ಮಾಡುವವರು ಲಿಂಗಪ್ರಾಣಿಗಳಲ್ಲ. ಜಂಗಮವೆಂದು ನಂಬಿ, ವಿಶ್ವಾಸ ಬಲಿದು, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಂಬುವವರು ಲಿಂಗಪ್ರಾಣಿಗಳಲ್ಲ. ಇಂತೀ ತ್ರಿಮೂರ್ತಿಗಳ ಪೂಜೆಯನ್ನು ಬಿಟ್ಟು ಬಿಡದೆ ಪಿಡಿದು ಪೂಜಿಸುವವರು ಪ್ರಾಣಲಿಂಗಿಗಳೆಂಬೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗೈಯೊಳಗಿನ ಕೂಸು ಆಕಾಶವ ನುಂಗಿ, ಮಂಗಳಾಂಗಿಯ ಸಂಗವ ಮಾಡಿ ಕಂಗಳಿಲ್ಲದವನ ಕೈಪಿಡಿದು, ಕೋಲ ಮುರಿದು, ಕಾಲ ಕಡಿದು, ಕಮಲದ ಹಾಲು ಕುಡಿದು, ಸತ್ತು ಎತ್ತ ಹೋಯಿತೆಂದರಿಯೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಬರದ ಪಕ್ಷಿಗೆ ಕಾಲಾರು, ತಲೆ ಮೂರು, ಬಾಲೆರಡು, ಕಣ್ಣೊಂದು, ಕೈ ಆರಾಗಿ, ನಡೆದರೆ ಹೆಜ್ಜೆಯಿಲ್ಲ, ನುಡಿದರೆ ಶಬ್ದವಿಲ್ಲ. ಅನ್ನ ಉದಕವನೊಲ್ಲದೆ ಅಗ್ನಿಯ ಸೇವಿಸುವದು. ಆ ಮೃಗವ ಕಣ್ಣಿಲ್ಲದೆ ನೋಡಿ, ಕಾಲಿಲ್ಲದೆ ನಡೆದು, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ನುಂಗಿ ಬೇಟೆಯನಾಡುವೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಬರದ ಕೂಸು ಆನೆಯ ನುಂಗಿ, ಕುಂಭಿನಿಯ ಕೂಸು ಕುದುರೆಯ ನುಂಗಿ, ಉಭಯರಂಗದ ಕೂಸು ಕುನ್ನಿಯ ನುಂಗಿ, ಆ ರಂಗದ ಕೂಸು ನಾಡೆಲ್ಲ ನುಂಗಿ ಕಣ್ಣೊಳಡಗಿ, ಅಡಗಿದ ಕೂಸ ಪಿಡಿದು ನುಂಗಬಲ್ಲಡೆ ಲಿಂಗೈಕ್ಯನೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗಭಾವ ಹಿಂಗಿ, ಲಿಂಗಭಾವ ಮುಂದುಗೊಂಡಿರುವುದೇ ಪಾರಮಾರ್ಥ. ಪಂಚೇಂದ್ರಿಯ ವಿಷಯಸುಖವನಳಿದು ಪಂಚಲಿಂಗದ ಸಮರಸದಲ್ಲಿರುವುದೇ ಪಾರಮಾರ್ಥ. ಅಹಂಕಾರವಳಿದು ನಿರಹಂಕಾರದಲ್ಲಿರುವುದೇ ಪಾರಮಾರ್ಥ. ಶಬ್ದಜಾಲಂಗಳನಳಿದು ನಿಶ್ಯಬ್ದವೇದಿಯಾಗಿರುವುದೇ ಪಾರಮಾರ್ಥ. ಈ ವಚನದ ತಾತ್ಪರ್ಯಾರ್ಥವನರಿದವರೆ ಗುರುಲಿಂಗಜಂಗಮವೆಂಬೆ. ಅರಿಯದಿರ್ದಡೆ ಭವಭಾರಿಗಳೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂತಪ್ಪ ಭವಭಾರಿಗಳಾದ ಜೀವಾತ್ಮರು ಒಂದುಗೂಡಿ ದಾಸೋಹಮಾಡಿ, ಅಗ್ನಿಜ್ವಾಲೆಯಲ್ಲಿ ಅರತು ಹೋಗುವ ನೀರಿಗೆ ಪಾದೋದಕವೆಂದು ಹೆಸರಿಟ್ಟು, ಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು, ಅಗ್ನಿ ನೀರಿನಿಂದ ಅಟ್ಟು ಪಾಕ ಮಾಡಿದ ಅನ್ನಕ್ಕೆ ಪ್ರಸಾದವೆಂದು ಹೆಸರಿಟ್ಟು, ಅಯ್ಯಾ ಹಸಾದ ಮಹಾಪ್ರಸಾದ ಪಾಲಿಸೆಂದು ಎಲ್ಲರೂ ಕ್ಯೆಯ್ಯೊಡ್ಡೊಡ್ಡಿ ಕೈಕೊಂಡು, ತಮ್ಮ ಕೈಯಲ್ಲಿರ್ದ ಇಷ್ಟಲಿಂಗಕ್ಕೆ ತೋರಿ ತೋರಿ ಲಿಂಗಕ್ಕೆ ಕೊಟ್ಟೆವೆಂದು ತಮ್ಮ ಉದರಾಗ್ನಿ ಹಸಿವು ತೃಷೆಯನಡಗಿಸಿಕೊಂಡು, ಮುಂಜಾವಿನಲ್ಲೆದ್ದು ಮಲಮೂತ್ರ ವಿಸರ್ಜಿಸುವ ಮೂಳಹೊಲೆಮಾದಿಗರಿಗೆಲ್ಲಿಹುದಯ್ಯಾ ಆ ಗುರುಲಿಂಗಜಂಗಮದ ತೀರ್ಥಪ್ರಸಾದಸಂಬಂಧ ? ಇಂತಪ್ಪ ಮತಿಭ್ರಷ್ಟ ಮರುಳಮಾನವರ ಭಿನ್ನಕ್ರಿಯಾಚಾರವನು ಸುಜ್ಞಾನಿ ಶರಣ ಕಂಡು ಹೊಟ್ಟಿ ಹುಣ್ಣಾಗುವನ್ನಬರ ನಕ್ಕು ಶಬ್ದಮುಗ್ಭನಾಗಿ ಸುಮ್ಮನಿದ್ದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ