ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಾಲತ್ವದಲ್ಲಿ ತನ್ನ ಮಲಮೂತ್ರದೊಡನೆ ಹೊರಳಾಡಿ, ಯೌವನಪ್ರಾಯದಲ್ಲಿ ಮದಮತ್ಸರದಿಂದ ಹೋರಾಡಿ, ಕಾಮದಲ್ಲಿ ಕರಗಿ, ಕ್ರೋಧದಲ್ಲಿ ಕೊರದು, ಲೋಭ ಮೋಹದಿಂದ ಮಗ್ನರಾಗಿ, ಯೌವನಬಲಗುಂದಿ ಮುಪ್ಪುವರಿದು ಹಲ್ಲು ಬಿದ್ದು, ಕಣ್ಣು ಒಳನಟ್ಟು, ಬೆನ್ನು ಬಾಗಿ, ದಮ್ಮು ಹತ್ತಿ, ಗುರುಗೂರಿ ಗರಹತ್ತಿ, ಸಾಯುವ ಮನುಜರಿಗೆ, ವಿಭೂತಿ ವೀಳ್ಯೆ ಎಂದು ಮಾಡಿ, ಅವನ ಪಣೆಯಲ್ಲಿ ವಿಭೂತಿಯ ಧರಿಸಿ, ಸರ್ವಾಂಗದಲ್ಲಿ ವಿಭೂತಿ ಲೇಪನ ಮಾಡಿ, ಸ್ಥಾನಸ್ಥಾನಂಗಳಲ್ಲಿ ರುದ್ರಾಕ್ಷಿಯ ಧರಿಸಿ, ಅವನ ಮನೆಯಲ್ಲಿ ಶಿವಗಣಂಗಳು ಸಲಿಸಿ, ಅವನ ಮಸ್ತಕದ ಮೇಲೆ ಸಕಲ ಗಣಂಗಳು ತಮ್ಮ ಪಾದವನಿಟ್ಟು ಅವನ ಕೈಯಲ್ಲಿ ವಿಭೂತಿ ರುದ್ರಾಕ್ಷಿ ಬಿಲ್ವಪತ್ರಿ ಸುವರ್ಣ ಮೊದಲಾದ ಕಾಂಚನವ ಬ್ಥಿಕ್ಷವ ಕೊಂಡು ಅವನು ಸತ್ತುಹೋದ ಮೇಲೆ ಊರ ಹೊರಗಾಗಲಿ, ಊರೊಳಗಾಗಲಿ, ಲಿಂಗಸ್ಥಾಪನೆಯಿದ್ದ ಮಠಮಾನ್ಯದಲ್ಲಿ ಏಳುಪಾದ ನಿಡಿದು, ಏಳುಪಾದ ಉದ್ದ ಭೂಮಿಯ ಒಳಗೆ, ಐದುಪಾದ ಚೌಕು, ಮೂರುಪಾದ ಅಡ್ಡಗಲ, ಮೂರುಪಾದ ಒಳಯಕ್ಕೆ ತ್ರಿಕೋಣೆ. ಇಂತೀ ಕ್ರಮದಲ್ಲಿ ಕ್ರಿಯಾಸಮಾದ್ಥಿಯ ಮಾಡಿ, ಸುಣ್ಣ ಕೆಂಪುಮಣ್ಣಿನ ಸಾರಣೆಯ ಮಾಡಿ ರಂಗವಾಲಿಯ ತುಂಬಿ, ತಳಿರುತೋರಣವ ಕಟ್ಟಿ, ಕೋಣಿ ಕೋಣಿ ಸ್ಥಾನಕ್ಕೆ ಓಲೆಯ ಮೇಲೆ ಪ್ರಣಮವಂ ಬರೆದು ಆ ಸಮಾದ್ಥಿಯಲ್ಲಿ ಸಂಬಂದ್ಥಿಸಿ, ಮತ್ತಂ, ಅವನ ಶವಕ್ಕೆ ಹಾಗೆ ಪ್ರಣಮವಂ ಬರೆದು ಸಂಬಂದ್ಥಿಸಿ, ಸಂಚರಿಸಿ ಮೇಲೆ ಮೋಕ್ಷವಾಯಿತು ಎಂಬರಯ್ಯಾ; ಮೋಕ್ಷವಾಗಲರಿಯದು. ಅದೆಂತೆಂದಡೆ, ಇಂತಿವೆಲ್ಲವು ಹೊರಗಣ ಉಪಚಾರವು. ಈ ಉಪಚಾರದಿಂದ ಕರ್ಮದೋಷಗಳು ಹರಿದು ಪಿಶಾಚಿಯಾಗನು, ಭವ ಹಿಂಗದು. ಇಂತೀ ಕ್ರಮದಲ್ಲಿ, ಅಂತರಂಗದಲ್ಲಿ ಲಿಂಗಾಂಗಕ್ಕೆ ಸ್ವಾನುಭಾವಜ್ಞಾನಸೂತ್ರದಿಂ ಪ್ರಣವಸಂಬಂಧ ಮಾಡಿಕೊಂಡಡೆ ಅದೇ ಕ್ರಿಯಾಸಮಾದ್ಥಿ, ಗೋಮುಖಸಮಾದ್ಥಿ, ಮಹಾನಿಜ ಅಖಂಡ ಚಿದ್ಬಯಲಸಮಾದ್ಥಿ. ಇಂತಪ್ಪ ಸಮಾದ್ಥಿ ಉಳ್ಳವರಿಗೆ ಭವಬಂಧನ ಹಿಂಗಿ ಮುಂದೆ ಮೋಕ್ಷವಾಗುವದು ನೋಡೆಂದನಯ್ಯ ನಿಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮಯ್ಯನವರು ನಿತ್ಯದಲ್ಲಿ ಹಾದರವನಾಡಿ ಹಾಗದ ಕಾಯಕದ ಹಣವ ತಂದು, ಜಂಗಮಾರ್ಚನೆಯ ಮಾಡುವರು. ಅದರೊಳಗೆ ಒಂದು ದಿವಸ ಬ್ರಹ್ಮಯ್ಯನವರು ಹಾದರಕಾಯಕವ ತಡೆಯಲು, ಆತನ ಸತಿಯಳು ಪುರುಷನ ಅಪ್ಪಣೆಯಕೊಂಡು ಪೋಗಿ ಹಾದರವನಾಡಿ ಹಾಗದ ಕಾಯಕವ ತಂದು, ಜಂಗಮಾರ್ಚನೆ ಮಾಡುವರೆಂದು ವೇದ ಶ್ರುತಿ ಪುರಾಣ ವಾಕ್ಯದಲ್ಲಿ ಪೇಳುವರು. ಇದರ ಅನುಭಾವವನು ಬಲ್ಲಿದರೆ ಪೇಳಿ, ಅರಿಯದಿದ್ದರೆ ಕೇಳಿ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಯಲ ಪಟ್ಟಣದ ರಾಜಕುಮಾರನು ಮಲೆಯಪುರದಲ್ಲಿ ಶಿಕಾರಿಯ ಮಾಡಲು, ಆ ಪಟ್ಟಣದ ಬೀದಿಬಾಜಾರದೊಳಗೆ ಪದ್ಮಜಾತಿನಿಯೆಂಬ ಸ್ತ್ರೀ ಇರುವಳು. ಆ ಸ್ತ್ರೀಯ ಕೈಯೊಳಗಿನ ಕೋತಿಯ ವಿಲಾಸವನು, ಆ ಸ್ತ್ರೀಯ ರೂಪಲಾವಣ್ಯವನು, ರಾಜಕುಮಾರನು ಕಂಡು, ಬೆರಗಾಗಿ ಮರುಳುಗೊಂಡು, ಆ ನಾರಿಯ ವಾಸದೊಳಗೆ ಬಹುಕಾಲವಿರ್ದು, ಪಟ್ಟಣ ಪಾಳೆಯಲ್ಲಿ ಚರಿಸುತ್ತಿರಲು, ಅತ್ತಳ ಊರಿಂದ ಜೋಗಿ ಬಂದು ಪತ್ರವ ಕೊಡಲಾಗಿ ಆ ಪಟ್ಟಣ ಬೆದರಿ, ಪಾಳ್ಯ ಅಳಿದು, ಪಾಳ್ಯದ ನಾಯಕರು ಪಲಾಯನವಾಗಿ, ನಾರಿಯಮುಖ ವಿಕಾರವಾಗಿ, ಬಹುವರ್ಣದ ಕೋತಿ ಏಕವರ್ಣವಾಗಿ, ಆ ಹಸ್ತದೊಳಗಿನ ಪತ್ರವ ಸುಕುಮಾರ ನೋಡಿ, ಅಗ್ನಿಸ್ಪರ್ಶದ ಬೆಣ್ಣಿಯಂತೆ, ಜ್ಯೋತಿಯ ಸಂಗದ ಕರ್ಪೂರದಂತೆ, ಆ ಪತ್ರದಲ್ಲಿ ನಿರ್ವಯಲಾದುದು ಸೋಜಿಗ ಸೋಜಿಗವೆಂದನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮಾಂಡವು ಹೇಗೆ ಪುಟ್ಟಿತ್ತು ಪೇಳ್ವೆ ಕೇಳಿರಯ್ಯಾ. ಆದಿ, ಅನಾದಿಯಿಂದತ್ತತ್ತಲಾದ ನಿರಾಕಾರ ಪರವಸ್ತು ತನ್ನ ಸ್ವರೂಪವ ತಾನರಿಯದೆ ಅನಂತ ಕಲ್ಪಕಲ್ಪಾಂತರ ಇರ್ದು ತನ್ನ ಸ್ವಲೀಲೆಯಿಂದ ತಾನೇ ಜಗತ್ಸøಷ್ಟಿ ನಿಮಿತ್ತವಾಗಿ, ನೆನವುದೋರಲು, ಆ ನೆನವು ನಿರ್ಧರವಾಗಿ ಚಿತ್ತೆನಿಸಿತ್ತು. ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು. ಆ ಚಿತ್ತು ತ್ರಿವಿಧಮಲ ಸಹವಾಗಿ ಚತುರ್ವಿಧವು ಘಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾಲಿಂಗದಿಂದ ಆತ್ಮ ಜನನ ; ಆತ್ಮದಿಂದ ಭಾವ ಪುಟ್ಟಿತ್ತು. ಆ ಭಾವದಿಂದ ಮೋಹ ಪುಟ್ಟಿತ್ತು. ಆ ಮೋಹವೆಂದಡೆ, ಮಾಯವೆಂದಡೆ, ಆಶೆಯೆಂದಡೆ, ಮನವೆಂದಡೆ ಏಕಪರ್ಯಾಯಾರ್ಥ. ಇಂತಪ್ಪ ಮೋಹದಿಂದ ತ್ರೈಲೋಕ ಮೊದಲಾಗಿ ಚತುರ್ದಶಭುವನಂಗಳು ಪುಟ್ಟಿದವು. ಆ ಚತುರ್ದಶಭುವನದ ಮಧ್ಯದಲ್ಲಿ ಇರುವೆ ಮೊದಲು ಆನೆ ಕಡೆಯಾಗಿ ಎಂಬತ್ತುನಾಲ್ಕುಲಕ್ಷ ಜೀವರಾಶಿಯೊಳಗೆ ದೇವ-ದಾನವ-ಮಾನವರು ಮೊದಲಾದ ಹೆಣ್ಣು-ಗಂಡು, ಸಚರಾಚರಂಗಳೆಲ್ಲವು ಉತ್ಪತ್ತಿಯಾದವು. ಇಂತೀ ಎಲ್ಲವು ಪರಶಿವನ ನೆನವುಮಾತ್ರದಿಂದ ಮರೀಚಿಕಾಜಲದಂತೆ, ಸುರಚಾಪದಂತೆ, ತೋರಿ ತೋರಿ ಅಡಗುವವಲ್ಲದೆ ನಿಜವಲ್ಲ ಮಿಥ್ಯವೆಂದು ತಿಳಿದು ವಿಸರ್ಜಿಸಿ ಬಿಡುವಾತ ತಾನೇ ಪರಶಿವನೆಂದು ತಿಳಿವುದಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬುದ್ದಲಿಕಿ ಎಣ್ಣೆಯ ಊರೊಳಗಿನ ಶೀಲವಂತರಿಗೆ ಮಾರುವಳು. ಮಣ್ಣ ಕೊಡದಿಣ್ಣೆಯ ಹೊರಕೇರಿ ಹೊಲೆಮಾದಿಗರಿಗೆ ಮಾರುವಳು. ಕೊಡದೆಣ್ಣೆಯ ಕುಡಿದವರು ಲಯವಾದರು. ಬುದ್ದಲಿಕಿ ಎಣ್ಣೆಯ ಕುಡಿದವರು ಎರವಾದರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮಂಗೆ ಕಾಲಕೊಟ್ಟು, ವಿಷ್ಣುವಿಂಗೆ ಕೈಯಕೊಟ್ಟು, ರುದ್ರಂಗೆ ತಲೆಯಕೊಟ್ಟು, ಉಳಿದ ಪರುಷರಿಗೆ ಸರ್ವಾಂಗವನು ಕೊಟ್ಟು, ಹಾದರ ಮಾಡಿ ಕಾಯಕವ ಮಾಡುತ್ತಿರ್ಪೆನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಯಲ ಹೊತ್ತವರು ಅಳಲಿಲ್ಲ; ಆಕಾಶ ಹೊತ್ತವರು ಅಳುತ್ತಿರ್ಪರು. ಅತ್ತವರು ಇತ್ತಾದರು, ಅಳದವರು ಆತ್ತಾದರು ನೋಡೆಂದನಯ್ಯಾ ಪ್ರಾಣಲಿಂಗಿ ಕಾಡನೊಳಗಾದ ಶಂಕರಪರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬೆಳ್ಳನ್ನವರ ಭಾಷೆಯ ಹಿಂಗಿ ಕಂಬಳಿಯವರ ಭಾಷೆಯ ನುಂಗಿ ತೃಷೆಯಾದ ವ್ಯಾಘ್ರನಂತೆ ತೋರುವರ ಗೊಲ್ಲನೆಂದೆನ್ನೆ. ಬೆಳ್ಳನ್ನವರ ಭಾಷೆಯ ನುಂಗಿ ಕಂಬಳಿಯವರ ಭಾಷೆಯ ಹಿಂಗಿ ತೃಷೆಯಾದ ತುರುಕನಂತೆ ತೋರುವರ ಗೊಲ್ಲನೆಂದೆನ್ನೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬೇರಿಲ್ಲದೆ ಭೂಮಿಗೆ ಹೊಂದದೆ ಒಂದು ಮಾವಿನ ವೃಕ್ಷವು ಪುಟ್ಟಿತ್ತು. ಆ ವೃಕ್ಷ ನೀರಿಲ್ಲದೆ ಗಾಳಿ ಸೋಂಕದೆ ಪಲ್ಲವಿಸಿತ್ತು. ಮೂರಾರು ಗಂಟಾಗಿರ್ಪವು. ತುದಿಗಂಟಿನಲ್ಲಿ ಮೊಳೆದೋರಿ ಎರಡು ಶಾಖೆ ಪುಟ್ಟಿದವು. ಎರಡು ಶಾಖೆಗೆ ಮೂರು ಕವಲು, ಮೂರು ಕವಲಿಗೆ ಆರು ಬಗಲು, ಆರು ಬಗಲಿಗೆ ಮೂವತ್ತಾರು ಪರ್ಣಂಗಳು, ಇನ್ನೂರಾಹದಿನಾರು ಕುಡಿಗಳು, ಅನೇಕ ಕುಸುಮಂಗಳು. ಅದರೊಳಗೆ ಅಗ್ನಿವರ್ಣದ ಕುಸುಮ ಮೂರುಗಂಟಿನ ಮೇಲೆ ಪುಟ್ಟಿ, ತುದಿಯಲ್ಲಿ ಅರಳಿ ಫಲವಾಗಿ, ಐದು ಗಂಟಿನ ಮೇಲೆ ಹಣ್ಣಾಗಿ, ಅಮೃತಜೇವಣಿಯೆಂಬ ಹಣ್ಣನು ಕಮಲದಲ್ಲಿ ಕಂಡು ಸೇವಿಸಿ ವ್ಯಾಧಿಯ ಪರಿಹರಿಸಬಲ್ಲಡೆ ಅಸುಲಿಂಗಸಂಬಂಧಿಯೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬೇವಿನಮರಕ್ಕೆ ಬೆಲ್ಲದ ಕಟ್ಟೆಯ ಕಟ್ಟಿ, ಚಿನ್ನಿ ಸಕ್ಕರೆಯ ಖಾತವ ಹಾಕಿ, ಜೇನುತುಪ್ಪ ನೊರೆವಾಲೆಂಬ ನೀರೆರೆದರೆ, ಬೇವಿನಮರವಳಿದು ಬೆಲ್ಲದ ಮರವಾಗಬಲ್ಲುದೆ ? ಮಾವಿನಮರಕ್ಕೆ ವಿಷದ ಕಟ್ಟೆಯ ಕಟ್ಟಿ, ಉಪ್ಪಿನ ಖಾತವ ಹಾಕಿ, ಬೇವಿನ ಈಚಲ ತಾಡಿನ ಹಣ್ಣು ಮೊದಲಾದ ತ್ರಿವಿಧ ಹಣ್ಣಿನ ರಸವೆಂಬ ನೀರೆರೆದರೆ ಮಾವಿನಮರವಳಿದು ಬೇವು ಈಚಲ ತಾಡ ಮೊದಲಾದ ತ್ರಿವಿಧ ವೃಕ್ಷವಾಗುವುದೆ ? ಇಂತೀ ದೃಷ್ಟಾಂತದಂತೆ ಲೋಕದ ಮಧ್ಯದಲ್ಲಿ ಸಂಸಾರವಿಷಯರಸಪೂರಿತವಾದ ಕಡುಪಾತಕ ಜಡಜೀವಿಗಳಾದ ಕುರಿಮನುಜರ ತಂದು ಭಿನ್ನಜ್ಞಾನಿಗಳಾದ ಆಶಾಬದ್ಭ ಗುರುಮೂರ್ತಿಗಳು ಅಂತಪ್ಪ ಜಡಮತಿಗಳಿಗೆ ವಿಭೂತಿಯ ಪಟ್ಟವಗಟ್ಟಿ, ರುದ್ರಾಕ್ಷಿಯ ಧರಿಸಿ, ಅವನ ಮಸ್ತಕದ ಮೇಲೆ ಪತ್ರಿ ಪುಷ್ಪವನಿಟ್ಟು, ಮೂರೇಳು ಪೂಜೆಯ ಮಾಡಿ, ಇದಕ್ಕೆ ದೃಷ್ಟಾಂತ : ಹಸಿಯ ಕುಳ್ಳಲ್ಲಿ ಬೆಂಕಿಯನಿಟ್ಟು ಊದಿ ಪುಟುಮಾಡುವ ಮರುಳರಂತೆ, ಬರಡು ಆವಿನ ಹಾಲ ಕರಸಿಹೆನೆಂಬ ಅಧಮನಂತೆ, ದುಮ್ಮಡಿಯ ಹಚ್ಚಿ ಊದಿ ಕಿವಿಯೊಳಗಣ ತೊನಸಿ ತೆಗೆವ ಗಂಧಿಗಾರನಂತೆ, ಅಂತಪ್ಪ ಮಲತ್ರಯಯುಕ್ತವಾದ ಜೀವಾತ್ಮರ ದಕ್ಷಿಣ ವಾಮಭಾಗದ ಕರ್ಣದಲ್ಲಿ ತಾರಕಮಂತ್ರದುಪದೇಶವನು ತಮ್ಮ ನಿಲವ ತಾವರಿಯದ ಭಿನ್ನಭಾವದ ಗುರುಮೂರ್ತಿಗಳು ಊದಿ ಊದಿ ಬಾಯಾರಿ ಗಂಟಲೊಣಗಿ ಧ್ವನಿಬಿದ್ದು ದಣಿದು ಹೋದರಲ್ಲದೆ ಸದ್ಭಕ್ತ ಶರಣಜನಂಗಳು ಮಾಡಲರಿಯರು. ಮತ್ತಂ, ಚಿದಂಶಿಕನಾದಾತ್ಮನು ಶಿವಕೃಪೆಯಿಂ ಸುಜ್ಞಾನೋದಯವಾಗಿ, ಸಕಲಪ್ರಪಂಚವನ್ನೆಲ್ಲ ನಿವೃತ್ತಿಯ ಮಾಡಿ, ಶ್ರೀಗುರುಕಾರುಣ್ಯವ ಪಡೆದ ಲಿಂಗಾಂಗಸಂಬಂಧಿಯಾದ ಸದಾಚಾರಸದ್ಭಕ್ತ ಶರಣಜನಂಗಳಿಗೆ ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಸಕಲ ಭಿನ್ನಭಾವದ ಜೀವಾತ್ಮರು ವೇದಾಗಮ ಶಾಸ್ತ್ರ ಪುರಾಣ ತರ್ಕ ತಂತ್ರಗಳೆಲ್ಲವು ತಮ್ಮ ವೇದಾಗಮ ಬೋಧಿಸಿ ಶಿವಾಗಮವನೋದಿದ ಶಿವಶರಣರಿಗೆ ಹೇಳಿ ಹೇಳಿ ತಾವೇ ಬೇಸತ್ತು ಬಳಲಿ ಬೆಂಡಾಗಿ ಮುಖಭಂಗಿತರಾಗಿ ಹೋದರಲ್ಲದೆ ಅವರೇನು ಮರಳಿ ಜಡಮತಿಜೀವರಾಗಲರಿಯರು. ಅಂತಪ್ಪ ಶಿವಜ್ಞಾನಸಂಪನ್ನರಾದ ಶರಣಜನಂಗಳು ಎಷ್ಟು ಪ್ರಪಂಚವ ಮಾಡಿದಡೂ ಮಲತ್ರಯಯುಕ್ತವಾದ ಜೀವರಾಗಲರಿಯರು. ಅವರು ಎಷ್ಟು ಕ್ರೀಯವನಾಚರಿಸಿದೊಡೆಯು ಫಲಪದವಿಯ ಪಡೆದು ಭವಭಾರಕ್ಕೆ ಬರುವ ಜಡಮತಿ ನರಕಜೀವಿಗಳಾಗಲರಿಯರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬೆಳ್ಳಿ, ಬಂಗಾರ, ತಾಮ್ರ, ಹಿತ್ತಾಳಿಯ ಕೊಡದೆ, ತಾಮ್ರದುಡ್ಡು ಕೊಟ್ಟು ಜೋಗಿಯ ಕೈಯಲ್ಲಿ ಒಂದು ರತ್ನವ ಕೊಂಡೆ. ಆ ರತ್ನ ಮೂರುಲೋಕಕ್ಕೆ ಬೆಲೆಯಾಯಿತ್ತು. ಅಂತಪ್ಪ ರತ್ನವ ಆರಿಗೂ ತೋರದೆ ಬೀರದೆ ಒಬ್ಬ ಬಡಭಕ್ತನು ಬಂದು ಕಬ್ಬಿಣವ ಕೊಟ್ಟರೆ ಆ ರತ್ನವ ಕೊಟ್ಟು ಉದ್ಯೋಗ ಮಾಡುತಿರ್ದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬೇಡಿಸಿಕೊಂಡು ನೀಡುವಾತ ಭಕ್ತನಲ್ಲ, ಬೇಡಿ ಉಂಬಾತ ಜಂಗಮನಲ್ಲ. ರೂಪಕ್ಕೆ ಪರಿದಾಡುವಾತ ಭಕ್ತನಲ್ಲ, ರುಚಿಗೆ ಹರಿದಾಡುವಾತ ಜಂಗಮನಲ್ಲ. ಜಂಗಮಕ್ಕೆ ಅನ್ನ ವಸ್ತ್ರವ ಕೊಟ್ಟು ಸುಖಿಸಿದೆನೆಂಬಾತ ಭಕ್ತನಲ್ಲ, ಆ ಭಕ್ತನ ಅನ್ನ ವಸ್ತ್ರದಿಂದ ನಾನು ಸುಖಿಯಾದೆನೆಂಬಾತ ಜಂಗಮನಲ್ಲ. ಅದೆಂತೆಂದೊಡೆ: ಆ ಜಂಗಮನಂತುವ ಭಕ್ತನರಿಯ, ಆ ಭಕ್ತನಂತುವ ಜಂಗಮನರಿಯದ ಕಾರಣ, ದೇವಭಕ್ತನೆಂಬ ನಾಮವಾಯಿತು. ಇಂತೀ ಉಭಯರ ಭೇದವ ನಿಮ್ಮ ಶರಣರೇ ಬಲ್ಲರಲ್ಲದೆ ಈ ಲೋಕದ ಗಾದಿಯಮನುಜರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ?
--------------
ಕಾಡಸಿದ್ಧೇಶ್ವರ
ಬೇವಿನಮರದ ಬೆಂಕಿ ಪುಟವಾಗಿ, ಕಾಗೆ ಸತ್ತು ಗೂಡು ಉಳಿದಿತ್ತ ಕಂಡೆ. ಆ ಗೂಡಿನೊಳಗಣ ಕೋಗಿಲೆ ಬೇವಿನಮರದ ಬಳಗವನೊಂದುಳಿಯದೆ ಕೊಂದು ಆರ ಹಂಗಿಲ್ಲದೆ ಎಲ್ಲರ ಕೂಡಿಕೊಂಡು ಮೇಲುದೇಶಕ್ಕೆ ಹಾರಿಹೋಯಿತ್ತು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಯಲಭೂಮಿಯಲ್ಲಿ ನಿಂತು ನಮಾಜ ಮಾಡಲು ಸಹೀದಪಾಶ್ಚಾ ಬಂದು ಪಾತಿಯ ಕೊಟ್ಟು ಮಸೂತಿಯ ಸುಟ್ಟು, ಪೀರಜಾಜಿಯರ ಕೊಂದು, ವಲ್ಲಿಯ ಸಹೀದ ಕೊಂದು, ಸಹೀದನ ವಲ್ಲಿ ನುಂಗಿರ್ಪನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ