ಅಥವಾ
(3) (3) (1) (0) (0) (0) (0) (0) (0) (0) (0) (0) (0) (0) ಅಂ (2) ಅಃ (2) (3) (0) (1) (0) (0) (0) (0) (2) (0) (0) (0) (0) (0) (0) (0) (0) (0) (0) (0) (1) (1) (0) (1) (1) (3) (0) (0) (0) (0) (0) (1) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಗಮ ನಿಗಮ ಶಾಸ್ತ್ರ ಪುರಾಣವೆಂಬ ಅಂಧಕನ ಕೈಗೆ ಕೋಲಕೊಟ್ಟು ನಡೆಸಿಕೊಂಡು ಹೋಗುವಾಗ, ತನ್ನ ಕಣ್ಣುಗೆಟ್ಟಡೆ ಮುಂದಕ್ಕೆ ಗಮನವಿಲ್ಲ. ಹಿಂದಕ್ಕೆ ತಿರುಗಲರಿಯದೆ, ಎರಡಕ್ಕೆ ಕೆಟ್ಟ ಜಂಬುಕನಂತೆ ಆಯಿತ್ತು ನೋಡಾ. ಸಜ್ಜನ ಗಂಡನ ಕದ್ದು, ಕಳ್ಳನ ಹಿಂದೆ ಹೋದ ಸತಿಯಂತೆ ಆದರಲ್ಲಾ. ಸಂತೆಯಲ್ಲಿ ಗುಡಿಸಲನಿಕ್ಕಿ ಹಡೆದುಂಬ ಸೂಳೆಯಂತೆ, ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನಿಕ್ಕಿಕೊಂಡು, ವಾಚಾಳಿಗತನದಿಂದ ಒಡಲ ಹೊರೆವವರೆಲ್ಲರೂ ಶರಣರಪ್ಪರೆ ? ಅಲ್ಲಲ್ಲ. ಅದೆಂತೆಂದಡೆ: ತನು ಕರಗಿ, ಮನ ಪುಳಕವಾದ ಮಹಾಮಹಿಮರಿಗಲ್ಲದೆ ಉಚ್ಚಿಯ ಬಚ್ಚಲಲ್ಲಿ ಓಲಾಡುವ ತೂತಜ್ಞಾನಿಗಳಿಗೆಂತಪ್ಪದು ಹೇಳಾ ? ಕಾಲಾಳು ಆಕಾಶವನಡರಿಹೆನೆಂಬ ಪರಿಯೆಂತೊ ? ಬ್ರಹ್ಮಪುರ ವೈಕುಂಠ ರುದ್ರಪುರ ಅಷ್ಟಾದಿ ಕೈಲಾಸವೆಂಬ ಈ ಪಂಚಗ್ರಾಮಂಗಳ ವರ್ಮ ಕರ್ಮವಳಿದ ಮಹಾದೇವಂಗಲ್ಲದೆ ಮುಂದಕ್ಕೆ ಅಡಿಯಿಡಬಾರದು. ಪಿಪೀಲಿಕ ಕಪಿಯ ಮತವೆಂಬ ಪಥ ಮೀರಿ, ವಿಹಂಗವೆಂಬ ವಾಹನಮಂ ಏರಿ, ಬ್ರಹ್ಮಾಂಡಕ್ಕೆ ದಾಳಿ ಮಾಡಿ, ಸುವರ್ಣಪುರಮಂ ಸುಟ್ಟು ಸೂರೆಗೊಂಡ ಮಹಾನುಭಾವಿಗಳ ತೋರಿ ಬದುಕಿಸಾ. ನಿಜಗುರು ಭೋಗೇಶ್ವರಾ, ನಾ ನಿಮ್ಮ ಧರ್ಮವ ಬೇಡಿಕೊಂಬೆ.
--------------
ಭೋಗಣ್ಣ
ಆಚಾರವುಳ್ಳನ್ನಕ್ಕ ಭಕ್ತನಲ್ಲ. ಅನಾಚಾರವುಳ್ಳನ್ನಕ್ಕ ಭವಿಯಲ್ಲ. ಅಂಗ ನಷ್ಟವಾಗಿ, ಕಂಗಳಲ್ಲಿ ಅರ್ಪಿಸಿ, ತಲೆಯಲಿ ಉಣ್ಣಬಲ್ಲಡೆ ಭಕ್ತ, ಅರ್ಪಿಸಿಕೊಳ್ಳ[ದ], ಅನರ್ಪಿತವ ಮುಟ್ಟದೆ ಅಚ್ಚಪ್ರಸಾದವ ಕೊಳಬಲ್ಲಡೆ ಭವಿ. ಉಭಯ ಒಂದಾದಡೆ ನಿಜಗುರು ಭೋಗೇಶ್ವರನಲ್ಲಿ ಲಿಂಗೈಕ್ಯನು.
--------------
ಭೋಗಣ್ಣ
ಆದಿ ಅನಾದಿಗಳಿಲ್ಲದಂದು ರೂಪು ನಿರೂಪುಗಳಿಲ್ಲದಂದು, ತನುಮಯ ಚಿನುಮಯವೆಂಬ ನಾಮವು ತಲೆದೋರದಂದು, ನೀನು ಇಲ್ಲದಿಪ್ಪಂದು, ಆನು ನಿನ್ನೊಳಗೆ ಹೆಸರಿಲ್ಲದೆ ಇಪ್ಪುದನರಿಯಾ. ಎನ್ನೊಳಗೆ ಉಭಯನಾಮವು ಪಸರಕ್ಕೆ ಬಾರದಂತೆ ಚೇತನವಾಗಿ ನೀನಿದ್ದುದನರಿಯಾ. ಏನು ಕಾರಣ ನೀನು ಶೂನ್ಯನಾದೆ, ನಿನ್ನ ಕಾರಣ ನಾನು ಸಾಕಾರನಾದೆ. ನಮ್ಮಿಬ್ಬರ ಬಯಕೆಯಿಂದ ಮಹಾದೇವನುದಯಿಸಿದ. ಆತನ ಮನೋಭಾವದಲ್ಲಿ ನೀನು ಹುಟ್ಟಿದೆ. ಆತನ ಅಭಯದಲ್ಲಿ ಆನು ಪುಟ್ಟಿದೆ. ಇಬ್ಬರಿಗೆ ಮದುವೆಯ ಮಾಡಿ ಕೈಗೂಡಿ, ಕಂಕಣದಾರವಂ ಕಟ್ಟಿದರಯ್ಯಾ. ಎನ್ನ ಸೋಂಕಿಂದ ನೀನು ಲಿಂಗವಾದೆ. ನಿನ್ನ ಸೋಂಕಿಂದ ಆನು ಅಂಗರೂಪಾದೆ. ಅದೆಂತೆಂದಡೆ : ಆನು ತೃಣ, ಎನ್ನೊಳಗಿಪ್ಪ ಅಗ್ನಿ ನೀನು. ಕರ್ಪುರ ಆನು, ಪರಿಮಳವಾಗಿ ವೇಧಿಸಿಕೊಂಡೆ ನೀ ಅಯ್ಯಾ. ಎನ್ನ ಕಂಗಳ ಕೊನೆಯ ಮೊನೆಯ ಮೇಲೆ ನೀನು ಮನೆಯ ಮಾಡಿಕೊಂಡಿಪ್ಪೆ, ನಿನ್ನ ಅಂತರಂಗದೊಳಗೆ ಆನು ಕಂದನಾಗಿ. ನಿಜಗುರು ಭೋಗೇಶ್ವರಾ, ನೀ ಮುನ್ನವೋ, ನಾ ಮುನ್ನವೋ ? ಬಲ್ಲಡೆ ಹೇಳಯ್ಯಾ.
--------------
ಭೋಗಣ್ಣ