ಅಥವಾ
(2) (0) (3) (0) (0) (0) (0) (0) (2) (0) (0) (1) (0) (0) ಅಂ (1) ಅಃ (1) (4) (0) (14) (0) (0) (1) (0) (3) (0) (0) (0) (0) (0) (0) (0) (1) (0) (0) (0) (3) (1) (0) (1) (1) (0) (0) (1) (0) (2) (0) (2) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುವ ಕುರಿತು ಮಾಡುವಲ್ಲಿ ಬ್ರಹ್ಮನ ಭಜನೆಯ ಹರಿಯಬೇಕು. ಲಿಂಗವ ಕುರಿತು ಮಾಡುವಲ್ಲಿ ವಿಷ್ಣುವಿನ ಸಂತೋಷಕ್ಕೆ ಸಿಕ್ಕದಿರಬೇಕು. ಜಂಗಮವ ಕುರಿತು ಮಾಡುವಲ್ಲಿ ರುದ್ರನ ಪಾಶವ ಹೊದ್ದದಿರಬೇಕು. ಒಂದನರಿದು ಒಂದ ಮರೆದು ಸಂದಿಲ್ಲದ ಸುಖ ಜಂಗಮ ದಾಸೋಹದಲ್ಲಿ ಸಂಗನಬಸವಣ್ಣ ನಿತ್ಯ ಚಂದೇಶ್ವರಲಿಂಗಕ್ಕೆ ತಲುಪಿ.
--------------
ನುಲಿಯ ಚಂದಯ್ಯ
ಗೋಡೆಯ ತೊಳೆದು ಕೆಸರ ಕೆಡಿಸಿಹೆನೆಂದಡೆ, ಅದಾರ ವಶ? ನೇಮಕ್ಕೆ ಕಡೆ ನಡು ಮೊದಲಿಲ್ಲ. ಒಂದ ಬಿಟ್ಟು ಒಂದ ಹಿಡಿದೆಹೆನೆಂದಡೆ, ಸಂದಿಲ್ಲದ ಸಂಶಯ. ಅದು ಚಂದೇಶ್ವರಲಿಂಗಕ್ಕೆ ದೂರ ಮಡಿವಾಳಯ್ಯಾ.
--------------
ನುಲಿಯ ಚಂದಯ್ಯ
ಗುರುವ ವಿಶ್ವಾಸಿಸಿದಲ್ಲಿ ಬಂಧನವಿಲ್ಲದಿಪ್ಪುದು. ಲಿಂಗವ ವಿಶ್ವಾಸಿಸಿದಲ್ಲಿ ಭವವಿಲ್ಲದಿಪ್ಪುದು. ಜಂಗಮವ ವಿಶ್ವಾಸಿಸಿದಲ್ಲಿ ಇಹ-ಪರ ಉಭಯವಿಲ್ಲ, ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯಲಾಗಿ
--------------
ನುಲಿಯ ಚಂದಯ್ಯ
ಗುರುಸೇವೆಯ ಮಾಡುವಲ್ಲಿ ಇಹದಲ್ಲಿ ಸುಖ; ಲಿಂಗಸೇವೆಯ ಮಾಡುವಲ್ಲಿ ಪರದಲ್ಲಿ ಸುಖ; ಜಂಗಮಸೇವೆಯ ಮಾಡುವಲ್ಲಿ ಇಹ-ಪರವೆಂಬ ಉಭಯವು ನಾಸ್ತಿ, ಚಂದೇಶ್ವರಲಿಂಗವ ಹಿಂಗದ ಭಾವ.
--------------
ನುಲಿಯ ಚಂದಯ್ಯ
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ. ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು. ಗುರುವಾದಡೂ ಚರಸೇವೆಯ ಮಾಡಬೇಕು. ಲಿಂಗವಾದಡೂ ಚರಸೇವೆಯ ಮಾಡಬೇಕು. ಜಂಗಮವಾದಡೂ ಚರಸೇವೆಯ ಮಾಡಬೇಕು ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
--------------
ನುಲಿಯ ಚಂದಯ್ಯ
ಗುರುವಿನಲ್ಲಿ ಶುದ್ಧಾತ್ಮನಾದಲ್ಲಿ ಲಿಂಗದಲ್ಲಿ ಸಲೆಸಂದು, ಜಂಗಮದಲ್ಲಿ ಹೆರಹಿಂಗದೆ ಮನ ಭಾವ ಕರಣಂಗಳಲ್ಲಿ ಒಂದೂ ತೋರದಿದ್ದುದು ಚಂದೇಶ್ವರಲಿಂಗಕ್ಕೆ ನಿಜ ನಿಂದುದು ಮಡಿವಾಳಯ್ಯಾ.
--------------
ನುಲಿಯ ಚಂದಯ್ಯ
ಗುರುವರಿದಲ್ಲಿ ಬ್ರಹ್ಮನ ಕಲ್ಪ ಹರಿವುದು. ಲಿಂಗವನರಿದಲ್ಲಿ ವಿಷ್ಣುವಿನ ಸ್ಥಿತಿಯು ಹರಿವುದು. ಜಂಗಮವನರಿದಲ್ಲಿ ರುದ್ರನ ಲಯಕ್ಕೆ ಸಿಕ್ಕ. ಈ ತ್ರಿವಿಧ ಭೇದವನರಿದು, ತನ್ನ ತಾನರಿದಲ್ಲಿ ಬಂಧ ಮೋಕ್ಷ ಕರ್ಮ ಒಂದೂ ಇಲ್ಲ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿದಲ್ಲಿ.
--------------
ನುಲಿಯ ಚಂದಯ್ಯ
ಗುರುಪೂಜಕರು ಲಿಂಗವನೆತ್ತ ಬಲ್ಲರು? ಲಿಂಗಪೂಜಕರು ಜಂಗಮವನೆತ್ತ ಬಲ್ಲರು? ಜಂಗಮ-ದಾಸೋಹವೆಂಬುದು ಉಭಯದ ಸಂಗನಾಸ್ತಿ; ಚಂದೇಶ್ವರಲಿಂಗವೆಂಬ ಲಿಂಗದ ಪೂಜೆ.
--------------
ನುಲಿಯ ಚಂದಯ್ಯ
ಗುರುವನರಿತು ಮಾಡುವಲ್ಲಿ ಅಹಂಕಾರವ ಮರೆದುಮಾಡಬೇಕು. ಲಿಂಗವನರಿತು ಮನಮುಟ್ಟುವಲ್ಲಿ ಪ್ರಕೃತಿ ತಲೆದೋರದಿರಬೇಕು ಜಂಗಮವನರಿತು ಮುಟ್ಟಿ ಪೂಜಿಸುವಲ್ಲಿ ಅರ್ಥ ಪ್ರಾಣ ಅಪಮಾನ ಈ ಮೂರರಲ್ಲಿ ನಿಶ್ಚಯವಾಗಿರಬೇಕು ಸಂಗನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯಬಲ್ಲಡೆ.
--------------
ನುಲಿಯ ಚಂದಯ್ಯ
ಗುರುವನರಿದಲ್ಲಿ ಉತ್ಪತ್ಯಕ್ಕೆ ಹೊರಗಾಗಬೇಕು. ಲಿಂಗವನರಿದಲ್ಲಿ ಸ್ಥಿತಿಗೆ ಹೊರಗಾಗಬೇಕು. ಜಂಗಮವನರಿದಲ್ಲಿ ಲಯಕ್ಕೆ ಹೊರಗಾಗಬೇಕು. ಈ ಗುಣವನರಿದಲ್ಲದೆ ಸದ್ಭಕ್ತನಲ್ಲ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಕಾಣಬಾರದು.
--------------
ನುಲಿಯ ಚಂದಯ್ಯ
ಗುರು ಇಷ್ಟವ ಕೊಟ್ಟು ಕೂಲಿಗೆ ಕಟ್ಟಿದ ಲಿಂಗ ವೃಷ್ಟವ ತೋರಿ ತನ್ನ ರಜತದ ಬೆಟ್ಟದ ಮೇಲಿರಿಸಿದ. ಇಂತು ಗುರುಲಿಂಗಕ್ಕೆ ಮಾಡಿ ಹಿಂದಣ ಮುಂದಣ ಸಂದೇಹಕ್ಕೀಡಾದೆ. ಪ್ರಸಿದ್ಧವಪ್ಪ ಜಂಗಮಲಿಂಗಕ್ಕೆ ಸಂದೇಹವಿಲ್ಲದೆ ಮನಸಂದು ಮಾಡಲಾಗಿ ಚಂದೇಶ್ವರಲಿಂಗಕ್ಕೆ ಹಿಂದುಮುಂದೆಂಬುದಿಲ್ಲ.
--------------
ನುಲಿಯ ಚಂದಯ್ಯ
ಗುರು ಶಿಷ್ಯಂಗೆ ಬೋಧಿಸುವಲ್ಲಿ ತನ್ನನಳಿದು ಲಿಂಗವ ತೋರಿಸಬೇಕು. ಲಿಂಗದ ಸಂಗ ನೆನಹಾದಲ್ಲಿ ಆ ಲಿಂಗಕ್ಕೆ ಉಂಬ ಬಾಯಿ ಜಂಗಮವಾದ ಕಾರಣ, ಆ ಜಂಗಮಲಿಂಗದ ದಾಸೋಹದಿಂದ ಬೇರೊಂದಂಗವಿಲ್ಲ. ಸಂಗನಬಸವಣ್ಣಪ್ರಿಯ ಚಂದೇಶ್ವರಲಿಂಗವು ಹಿಂಗದ ಭಾವ ಕಾಣಾ ಮಡಿವಾಳಯ್ಯಾ.
--------------
ನುಲಿಯ ಚಂದಯ್ಯ
ಗುರುವಿಂಗೆ ಮೋಹಿತವಾಗಿ ಮಾಡುವಲ್ಲಿ ಮನ ಲಿಂಗವ ಮುಟ್ಟದಿರಬೇಕು. ಲಿಂಗಕ್ಕೆ ಮೋಹಿತವಾಗಿ ಮಾಡುವಲ್ಲಿ ಮನ ಜಂಗಮವ ಮುಟ್ಟದಿರಬೇಕು. ಜಂಗಮಕ್ಕೆ ಮೋಹಿತವಾಗಿ ಮಾಡುವಲ್ಲಿ ಮೂರು ಮಲತ್ರಯವ ಮುಟ್ಟದಿರಬೇಕು. ಆ ಘನವನರಿತು ಮಾಡುವಲ್ಲಿ ಸಂಗನ ಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಅರ್ಪಿತ
--------------
ನುಲಿಯ ಚಂದಯ್ಯ
ಗುರುವಿಗೆ ತನುವೆಂದಲ್ಲಿ, ಲಿಂಗಕ್ಕೆ ಮನವೆಂದಲ್ಲಿ ಜಂಗಮಕ್ಕೆ ಧನವೆಂದಲ್ಲಿ ಮತ್ತೊಂದರಾಸೆಗೆ ಕೊಂಡಾಡಲೇತಕ್ಕೆ? ಆ ಗುಣ ಚಂದೇಶ್ವರಲಿಂಗಕ್ಕೆ ದೂರ.
--------------
ನುಲಿಯ ಚಂದಯ್ಯ