ಅಥವಾ

ಒಟ್ಟು 14 ಕಡೆಗಳಲ್ಲಿ , 7 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಂಭವಲೋಕದ ಕುಂಬ್ಥಿನಿಯುದರದ ಮೇಲೆ ಅಂಗನೆ ಅರುದಿಂಗಳ ಹಡೆದಳು ನೋಡಾ. ಅರುದಿಂಗಳ ಅದಾರನೂ ಅರಿಯದೆ ನಿರ್ವಯಲನೆ ಅರಿವುತ್ತರಿವುತ್ತ ಬೆರಗಾಗಲು ಕುಂಬ್ಥಿನಿಯುದರದಂಗನೆ ಸತ್ತುದ ಕಂಡು ಇಹಲೋಕ ಪರಲೋಕ ಆವ ಲೋಕವ ಹೊಗದೆ ಲೋಕಶ್ರೇಷ್ಠವಲ್ಲವೆಂದು ದೇಹವಿಲ್ಲದ ದೇವನ ಉದರವ ಬಗೆದು ಹೊಕ್ಕು ಅಗಣಿತನಪ್ರಮಾಣನಾದ ಲಿಂಗೈಕ್ಯಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಪ್ಪತ್ತೈದು ಕಂಬದ ಶಿವಾಲಯದೊಳಗೆ ಒಬ್ಬ ಅಂಗನೆ, ಹದಿನೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ, ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು ಆ ಅಂಗನೆಯ ಕೈಹಿಡಿದು ಹದಿನೆಂಟು ಕೇರಿಗಳ ಕೆಡಿಸಿ ಇಪ್ಪತ್ತೈದು ಕಂಬದ ಶಿವಾಲಯವ ಮೀರಿ ನಿಶ್ಚಿಂತ ನಿರಾಳಲಿಂಗದಲ್ಲಿ ಬೆರೆದಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರಣಿಯನಾಳುವ ಅರಸಿಂಗೆ, ಮಾರಿಯ ಭಯ, ಭೂರಿಯ ಭಯ, ಚೋರ ಭಯ. ಅಗ್ನಿಯ ಭಯ, ಹಿರಿದಪ್ಪ ಅರಿರಾಯರ ಭಯ. ಇವೈದು ಭಯಕಂಜಿ, ಅಷ್ಟದಳಮಂಟಪದ ಕೋಣೆಯ ನೆರೆ ಪೂರ್ವದಿಕ್ಕಿನ ರಾಜ್ಯಕ್ಕೊಳಿತಂ ಬಯಸಿ, ಅಗ್ನಿಕೋಣೆಯ ರಾಜ್ಯವ ಭಕ್ಷಿಪೆನೆಂದು, ಯಮದಿಕ್ಕಿನ ರಾಜ್ಯವ ಕ್ರೋಧದಲ್ಲುರುಹುವೆನೆಂದು, ನೈಋತ್ಯದಿಕ್ಕಿನ ರಾಜ್ಯವ ಮರತು ಮಲಗಿಸುವೆನೆಂದು, ವರುಣದಿಕ್ಕಿನ ರಾಜ್ಯಕ್ಕೆ ಸತ್ಯವ ಬಯಸಿ, ವಾಯುವ್ಯದಿಕ್ಕಿನ ರಾಜ್ಯವ ಗಾಳಿಗಿಕ್ಕಿ ಹಾರಿಸುವೆನೆಂದು, ಕುಬೇರದಿಕ್ಕಿನ ರಾಜ್ಯಕ್ಕೆ ಧರ್ಮನು ಬಯಸಿ ಈಶಾನ್ಯಕೋಣೆಯ ರಾಜ್ಯದ ಹೆಣ್ಣ ವಿಷಯತೂರ್ಯದಲ್ಲಿ ದಳೆಯ ಹಿಡಿವೆನೆಂದು, ಅಷ್ಟದಿಕ್ಕಿನ ರಾಜ್ಯದ ನಟ್ಟನಡುವೆ ಕಷ್ಟಬಡುತಿರ್ಪ ಅರಸಿನ ಕಳವಳಿಕೆ ; ಬುದ್ಧಿಗುಡುವ ಮಂತ್ರಿ, ಕಪಿಚಾಷ್ಠಿ ತಂತ್ರಿ, ತಾಮಸಬುದ್ಧಿ ದಳವಾಯಿಗಳು, ದಶಗುಣಿಗಳು ಮನ್ನೆಯ ನಾಯಕರು, ಮದಡರು ಪಾಯದಳ. ಪರಿಯಾಟಗೊಳಿಸುವ ಅರಸಿನ ಪ್ರಜೆ ಪರಿವಾರ ಮಂತ್ರಿಮನ್ನೆಯರನೆಲ್ಲ ಕೈಸೆರೆಯ ಹಿಡಿದು ಆಳುವ ಅಂಗನೆ ರಾಜ್ಯಾದ್ಥಿಪತಿಯಾದುದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅದ್ಭುತದಾಕಾಶದಲ್ಲಿ ಶುಭ್ರವರ್ಣದ ಅಂಗನೆ ವಿದ್ಯುರ್ಲತೆಯ ಹಡೆದಳು ನೋಡಾ. ವಿದ್ಯುರ್ಲತೆಯ ಬೆಳಗಿನಿಂದ ಶುದ್ಧಪ್ರಸಾದವ ಕಂಡು ಶುದ್ಧಾಶುದ್ಧವನಳಿದು, ನಾ ನೀನೆಂಬುದ ಹೊದ್ದದೆ ಎರಡಳಿದ ನಿರಾಳ ನೀನೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ! ಆ ನಲ್ಲಂಗೆ ಅಂಗವಿಲ್ಲದ ಅಂಗನೆ ಸತಿಯಾಗಿಪ್ಪಳು! ಇವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ, ನಾ ಹುಟ್ಟಿ, ತಾಯ ಕೈವಿಡಿದು ಸಂಗವ ಮಾಡಿ ನಿರ್ದೋಷಿಯಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಧರೆಯಾಗಿ ನಿಂದು, ಹರಿಯಾಗಿ ಹರಿದು, ಉರಿಯಾಗಿ ಉಲಿವ ಅಂಗನೆ, ಬ್ರಹ್ಮ ವಿಷ್ಣು ರುದ್ರರ ನುಂಗಿ ಜಾಲವ ಬೀಸುತಿಪ್ಪಳು ನೋಡಾ ! ಆಕೆಯ ಮಹೇಂದ್ರಜಾಲದ ತೆರೆಯೊಳು ಅನುಮಿಷ ಮೊದಲು ತಲೆಯಿಲ್ಲದ ಏಡಿಯ ನುಂಗಿ, ಆ ಏಡಿಯ ಬೆನ್ನಿನಲ್ಲಿ ಆನೆ ಎಂಟು, ಶ್ವಾನ ಐದು, ಆರು ಮೊಸಳೆಯ ನುಂಗಿ, ಏಳು ಬಗೆಯ ಮಡುವಿಗೆ ಬಿದ್ದು, ತಮ್ಮ ತಾವೆ ಒದ್ದಾಡುತಿವೆ ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !
--------------
ಹೇಮಗಲ್ಲ ಹಂಪ
ಉತ್ತರ ಲೋಕದಲ್ಲಿ ಸತ್ಯಜ್ಞಾನಾನಂದವೆಂಬ ಅಂಗನೆ ಮೃತ್ಯುಲೋಕವನೆಯ್ದಲು ಆ ಶಕ್ತಿಯರ ಕೃತ್ಯಾಕೃತ್ಯಂಗಳು ಕೆಟ್ಟು ಆ ಲೋಕವೆಲ್ಲಾ ಭಕ್ತಿ ಸಾಮ್ರಾಜ್ಯವಾಯಿತ್ತು ನೋಡಾ. ಶಕ್ತಿ ಭಕ್ತಿಯೆಂಬ ಸತ್ಕ ೃತ್ಯ ನಷ್ಟವಾಗಿ ಮುಕ್ತ್ಯಂಗನೆಯ ಮುಖವ ನೋಡುತ್ತ ನೋಡುತ್ತ ಸಚ್ಚಿದಾನಂದೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಾಸುವೆಯ ಮೇಲೆ ಸಾಗರ ಹರಿವುದ ಕಂಡೆನು. ರಾಶಿಯನೊಕ್ಕುವ ಒಕ್ಕಲಿಗ ರಾಶಿಯ ನುಂಗುವುದ ಕಂಡೆನು. ಮಾಸಿದ ಕಪ್ಪಡವ ಅಂಗಕ್ಕೆ ತೊಟ್ಟ ಅಂಗನೆ, ಮೂರುಲೋಕವ ಏಡಿಸುವುದ ಕಂಡೆನು. ಮುಂಡ ಕುಣಿಯದ ಮುನ್ನ ಲೋಕವೆಲ್ಲ ಭಂಡಾಗಿ, ಸಂಸಾರಬಂಧನರಾಗಿರುವುದ ಕಂಡೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂಗವೆಂಬ ಅಂಗನೆ ಆತ್ಮನೆಂಬ ಪುರುಷನನಪ್ಪಿ ಮುಂಡೆತನವಿಲ್ಲದೆಯಿಪ್ಪ ಭೇದವ ತಿಳಿದು ನೋಡಿರಣ್ಣಾ. ಕುಂಟಣಿಯಾದ ಒಡಹುಟ್ಟಿದ ಮನ ನಪುಂಸಕನಾದ ಕಾರಣ ಲಿಂಗಸಂಗಿಯಲ್ಲದೆ ಹೋದ ಕೇಳಿರಣ್ಣಾ. ಆತ್ಮನು ಪುರುಷನಾದಡೂ ಲಿಂಗವ ಕೂಡುವ ಭರದಿಂದ ಸತಿಯಾಗಬಲ್ಲ. ಶರಣಸತಿ ಲಿಂಗಪತಿಯೆಂಬುದುಂಟಾಗಿ, ಶಿವಜ್ಞಾನವೆಂಬ ಸಖಿಯ ಕೈವಿಡಿದು ಸೌರಾಷ್ಟ್ರ ಸೋಮೇಶ್ವರಲಿಂಗವ ಕೂಡಿ ಸುಖಿಯಾದನು.
--------------
ಆದಯ್ಯ
ಆಕಾಶವರ್ಣದ ಅಂಗನೆ ಲೋಕಾಲೋಕಂಗಳ ನೋಡಿಹೆನೆಂದು ಇಳಿದು ಬರಲು ಆ ಲೋಕದವರೆಲ್ಲರು ಕಂಡು ನಮ್ಮ ಈ ಲೋಕದ ಸ್ತ್ರೀಯಲ್ಲ ಇವಳಾವಲೋಕದ ಸ್ತ್ರೀಯೋಯೆಂದು ನೋಡುತ್ತ ನೋಡುತ್ತ ಆ ದೇವ ಸ್ತ್ರೀಯ ಸಂಗವ ಮಾಡಿ ದೇವನಾದುದ ಕಂಡೆ. ಭಾವಭ್ರಮೆಗೆ ಹೊರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಧಕಂಗೆ ಜೀವವಿದ್ದಡೆ ಕಣ್ಣಿದ್ದಂತೆ ಕಂಡು ನಡೆಯಬಲ್ಲನೆ ? ನೀ ಸತಿಯಾಗಿ ನಾ ಪತಿಯಾಗಿ ಉಭಯ ಪ್ರಾಣ ಏಕರೂಪಾಗಿ ಎನ್ನಂಗದ ಅಂಗನೆ ಅಮರೇಶ್ವರಲಿಂಗವ ತೋರಾ.
--------------
ಆಯ್ದಕ್ಕಿ ಮಾರಯ್ಯ
ಶಿಶು ತಾಯ ಮರೆವುದೆ ಅಯ್ಯ? ಪಶು ಕರುವ ಮರೆವುದೆ ಅಯ್ಯ? ಅಂಗನೆ ರಮಣನ ಮರೆವಳೆ ಅಯ್ಯ? ಲಿಂಗಸಾವಧಾನಿಯಾದಾತ ಲಿಂಗದ ನೆನಹ ಮರೆವನೆ ಅಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಲುಕುಮಲುಕಿನ ಅರಮನೆಯಲ್ಲಿ ಮೂರುಮುಖದ ಅಂಗನೆ ಇರ್ಪಳು. ಆ ಅಂಗನೆಯ ಮೂರುಮುಖದಲ್ಲಿ ಮೂರುರಾಜ್ಯಕ್ಕೆ ಒಡೆಯರಾದ ರಾಜರು ಇರ್ಪರು. ಆ ಅಂಗನೆಯ ಕಾಲೊಳಗೆ ಕೆಲಬರು ಎಡೆಯಾಡುತ್ತಿರ್ಪರು. ಆ ಅಂಗನೆಯ ಉದರದಲ್ಲಿ ಉರಿ ಉದ್ಭವಿಸಲು ಅಂಗನೆಯಳಿದು ಮುಖವಿಕಾರವಾಗಿ, ತ್ರಿಪುರ ಸುಟ್ಟು, ಅರಸು ಮಡಿದು, ಕಾಲು ಮುರಿದು, ಮನೆ ನಷ್ಟವಾದಲ್ಲದೆ ತನ್ನ ತಾನರಿಯಬಾರದು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೆಣ್ಣು ಗಂಡು ಕೂಡಿ ರಚಿಸಿದ ಬಣ್ಣದ ಕೊತ್ತಳದೊಳು ಮನೆಮಾಡಿಕೊಂಡಿರ್ಪ ದುರ್ಗಿಯ ಕಂಡೆನಿಂದು. ಆಕೆಯ ಮುಖ ಮೂರು, ಕಣ್ಣಾರು, ಬಾಯಿ ಮೂರು, ನಾಸಿಕ ಮೂರು, ನಾಲಗೆ ಮೂರು, ಮೊಲೆ ಏಳು, ಅಂಗವೆರಡು, ಶೃಂಗಾರ ನಾಲ್ಕು, ಬಯಕೆ ಎಂಟು, ಬಾಳ್ವೆ ಎರಡು, ದುಃಖವೈದು. ದುರಿತ ನೂರಿಪ್ಪತ್ತರ ದುಮ್ಮಾನದಲ್ಲಿ ಮಾಯದ ರಕ್ಷಿಯ ಮುಂದಿಟ್ಟುಕೊಂಡು, ಛಾಯದ ಕೊಳಗದಲಳೆವುತ್ತಲಳೆವುತ್ತ ಮುಡಿ ಮಾಸಿತೆಂದು ಮಾನುನಿ ಮರುಗಿ, ರಾಸಿಗೆ ಕಾಲ ಮಾಡಿ, ಮಾನಕೆ ತಲೆಯನಿಟ್ಟು, ರೋಷದಿಂದ ಶೋಕಂಗೈವುತ್ತಿಪ್ಪ ಅಂಗನೆ, ಮುಖ ಮೂರ ತಿರುವೆ, ಮೂರುಲೋಕವದರಿದ್ದ ಕಂಡೆ. ಕಣ್ಣಾರಲ್ಲಿ ಉರಿವುತ್ತಿಪ್ಪ ಅಗ್ನಿ ಲೋಕವ ಸುತ್ತುವುದ ಕಂಡೆನು. ಬಾಯಿ ಮೂರು ತೆರೆಯೆ ಎಣೆಯಿಲ್ಲದ ತಾರೆಯ ಕಂಡೆನು. ಏಳು ಮೊಲೆಯೊಳಗಣ ವಿಷ ಹೊರಹಬ್ಬಿ ಹರಿವುದ ಕಂಡೆನು. ಅಂಗವೆರಡು ಅಲೆದಾಡುವುದ ಕಂಡೆನು. ಶೃಂಗಾರವು ನಾಲ್ಕು ದಿಕ್ಕಿಗೆ ಬೆಳಗುವುದ ಕಂಡೆನು. ಬಯಕೆ ಎಂಟು ಬ್ರಹ್ಮಾಂಡವ ಕೊಂಡು ಮುಣುಗುವುದ ಕಂಡೆನು. ದುಃಖವೈದು ಮೊರೆಯಿಡುವುದ ಕಂಡೆನು. ದುರಿತ ನೂರಿಪ್ಪತ್ತು ಧೂಳಿಗೊಟ್ಟಿಯ ಕೊಂಬುದ ಕಂಡೆ, ಕೋಟೆಯ ಅರಸು ಬೆನ್ನೂರಿಲಿ ನಿಂದು ತಾಪಸಬಡುತಿರ್ದ, ಮಾಯದುರಿತಕಂಜಿ. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->