ಅಥವಾ

ಒಟ್ಟು 15 ಕಡೆಗಳಲ್ಲಿ , 10 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗದ ಮೇಲೊಂದು ಲಿಂಗವು, ಲಿಂಗದ ಮೇಲೊಂದು ಅಂಗವು. ಆವುದು ಘನವೆಂಬೆ ? ಆವುದು ಕಿರಿದೆಂಬೆ ? ತಾಳೋಷ್ಠಸಂಪುಟಕ್ಕೆ ಬಾರದ ಘನ, ಉಭಯಲಿಂಗವಿರಹಿತವಾದ ಶರಣ. ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ಅಂಗವು ಲಿಂಗವೇಧೆಯಾದ ಬಳಿಕ ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ? ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.
--------------
ಆದಯ್ಯ
ಬ್ರಹ್ಮ ವಿಷ್ಣು ರುದ್ರಾದಿಗಳನೊಳಗೊಂಡಿದ್ದಂತಾತನೇ ಈಶ್ವರ. ಈಶ್ವರ ಸದಾಶಿವ ಪರಶಿವನೊಳಕೊಂಡಿದ್ದಂತಾತನೇ ಪರಬ್ರಹ್ಮವು. ನಾದಬಿಂದುಕಲಾತೀತನನೊಳಕೊಂಡಿದ್ದಂತಾತನೇ ಬ್ರಹ್ಮವು ನೋಡಾ. ಆ ಬ್ರಹ್ಮದ ಅಂಗವು ಹೇಗೆಂದಡೆ: ಜಾಗ್ರವು ಅಲ್ಲ, ಸ್ವಪ್ನವು ಅಲ್ಲ, ಸುಷುಪ್ತಿಯೂ ಅಲ್ಲ. ಮರೆದೊರಗಿದ ಹಾಂಗೆ ನಿಷ್ಪತಿಯಾಗಿ ಕೂಡಬಲ್ಲರಿಗೆ ಕೂಡಿತ್ತು ಕೂಡಲರಿಯದವರಿಂಗೆ ದೂರಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೇಮದ ಬಣ್ಣ ರಸವು ಅಗ್ನಿಯ ಸಂಗದಿಂದ ರಸವೊಸರಿ ಸಂಗ ಪರಿಪೂರ್ಣವಾದಲ್ಲಿ, ರಸವೋ ? ಬಣ್ಣವೋ ? ಘಟವೋ? ಎರಕವಿಲ್ಲದೆ ಘಟ್ಟಿಯಾದಂತೆ ಅಂಗವು, ಲಕ್ಷಿಸಿಪ್ಪ ಲಿಂಗವು, ಲಕ್ಷಿಸುತಿಪ್ಪ ಚಿತ್ತವು, ಹೆಪ್ಪುಗೊಂಡಂತೆ ಈ ಗುಣ ಲಿಂಗಾಂಗಿಯ ಶುಭಸೂಚನೆ, ನಿಃಕಳಂಕ ಮಲ್ಲಿಕಾರ್ಜುನ ಲಿಂಗವನೊಡಗೂಡಿದವನಂಗ.
--------------
ಮೋಳಿಗೆ ಮಾರಯ್ಯ
ಲಿಂಗದಲ್ಲಿ ಅಂಗವು ಸವೆದು, ಅಂಗದಲ್ಲಿ ಲಿಂಗವು ಸವೆದು, ಲಿಂಗಾಂಗದಲ್ಲಿ ಸಂಗಸಮನಿಸಿ ಸಮರಸವಾದ ಶರಣನೇ ಲಿಂಗೈಕ್ಯ. ಇಂತಲ್ಲದೆ ಸಂತೆಯ ಸ್ಥಲಕ್ಕೆಡೆಯಾಡುವ ಭ್ರಾಂತುಭವಿಗಳು ಬಂದ ಭಾವದಲ್ಲಡಗುವ ಸುಖವನರಿವರೆ ಗುರುನಿರಂಜನ ಚನ್ನಬಸವಲಿಂಗಾ.?
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಾಣನ ಪೂರ್ವಾಶ್ರಯವಳಿದು ಲಿಂಗ ನೆನಹು ಸಂಬಂಧಿಸಿದ ಪ್ರಾಣಲಿಂಗಿಯ ಅಂಗವು ಹೇಂಗಿಹುದಯ್ಯ ಎಂದರೆ: ಲಿಂಗ ನೆನಹೆ ಹಿಂಚಾಗಿ ಲಿಂಗ ನೆನಹೆ ಮುಂಚಾಗಿಹುದಯ್ಯ. ಅಂಗವಿಷಯಂಗಳೆ ಹಿಂಚಾಗಿ ಲಿಂಗವಿಷಯಂಗಳೆ ಮುಂಚಾಗಿಪ್ಪುದಯ್ಯ. ಆವಾಗಲು ಲಿಂಗಸಹಿತವಾಗಿಯೆ ಇಂದ್ರಿಯಂಗಳ ಭೋಗವ ಭೋಗಿಸುತಿಪ್ಪುದಯ್ಯ. ಭೋಗಿಸುವ ಕ್ರಮವೆಂತುಟಯ್ಯ ಎಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರವೆಂಬ ಮುಖದ್ವಾರಂಗಳಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗವೆಂಬ ಲಿಂಗಸ್ಥಲಂಗಳ ಮೂರ್ತಿಗೊಳಿಸಿ ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಈ ಪದಾರ್ಥಂಗಳ ಲಿಂಗಮುಖಕ್ಕೆ ನಿವೇದಿಸಿ ಆ ಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತಿಪ್ಪಾತನೇ ಪ್ರಾಣಲಿಂಗಿ ಲಿಂಗಪ್ರಾಣಿಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವೆ ಲಿಂಗ, ಲಿಂಗವೆ ಅಂಗವೆಂದೆಂಬರು. ಅಂಗವು ಲಿಂಗವೆ? ಲಿಂಗಕ್ಕೆ ಅಂಗವುಂಟೆ? ಅದು ತಾ ನಾಮ ರೂಪು ಕ್ರೀಯೆ ಇಲ್ಲವಾಗಿ. ಮಾತು ಮನ ನಿಲುಕದ ಲಿಂಗವು ಅಂಗವಪ್ಪುದು ಮಿಥ್ಯ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ವೇದಪಾಠಕ ಶಾಸ್ತ್ರವಿತ್ತು ಪುರಾಣಬಹುಶ್ರುತಿವಂತ ವಾಚಕ ಆಡಂಬರಭೇದಕ ಸಂಸ್ಕೃತ ಪ್ರಾಕೃತ ಅಪಭ್ರಂಶಿಕ ದೇಶಿಕ ಇವು ಮೊದಲಾದ ವಾಚಕ ಚಾರ್ವಾಕ ಮುಖಂಗಳಿಂದ ಹೋರುವ ಮಾಯಾವಾದದ ತೆರದವನಲ್ಲ. ಮೂಲಸಿದ್ಧಿ ರಸಸಿದ್ಧಿ ಅಂಜನಸಿದ್ಧಿ ಅದೃಶ್ಯೀಕರಣ ಕಾಯಸಿದ್ಧಿ ಇಂತೀ ಕುಟಿಲಂಗಳ ತೆರಕ್ಕಗೋಚರ, ಅಪ್ರಮಾಳ, ಅಂಗಲಿಂಗಸಂಬಂಧವಾದ ಶರಣನ ಇರವು ಎಂತೆಂದಡೆ: ಶಬ್ದ ಹತ್ತದ ಅಲೇಖದಂತೆ, ಅನಿಲ ಮುಟ್ಟದ ಕುಂಪಟೆಯಂತೆ, ಶ್ರುತಿ ಮುಟ್ಟದ ಕಡ್ಡಿಯಂತೆ, ಕೈಮುಟ್ಟದ ಗತಿಯಂತೆ, ನೆಯಿ ಮುಟ್ಟದ ದುಗ್ಧದಂತೆ, ಪವನ ಮುಟ್ಟದ ಪರ್ಣದಂತೆ ಭಾವ ಭ್ರಮೆಯೊಳಗಿದ್ದು ಇಲ್ಲದ ಶರಣನ ಇರವು, ಸದಾಶಿವಮೂರ್ತಿಲಿಂಗದ ಅಂಗವು ತಾನೆ.
--------------
ಅರಿವಿನ ಮಾರಿತಂದೆ
ಸರ್ವವ್ರತಸ್ಥರ ನೇಮಸ್ಥಲದ ಕಟ್ಟಳೆ: ಅಂಗವು ವ್ರತ, ಲಿಂಗವು ವ್ರತ, ಭಾವವು ವ್ರತ. ಇಂತೀ ತ್ರಿವಿಧವ್ರತವ ಆರೋಗಿಸಿ ನಡೆವಲ್ಲಿ ಬಾಹ್ಯಕ್ರೀಯಲ್ಲಿ ಲಿಂಗವ ಭಾವಿಸುವಲ್ಲಿ, ದೃಷ್ಟಿ ನಟ್ಟು ನೋಡುವಲ್ಲಿ ತನ್ನ ವ್ರತದಾಳಿ ಮಿಶ್ರವಿಲ್ಲದೆಯಿಪ್ಪುದು ಏಲೇಶ್ವರಲಿಂಗದ ವ್ರತದಂಗದ ಭಾವ.
--------------
ಏಲೇಶ್ವರ ಕೇತಯ್ಯ
ಅಂಗವು ಲಿಂಗದಲ್ಲಿ ಸಂಬಂಧವಾದವರ ಲಿಂಗವೆಂದೇ ಕಾಂಬುದು, `ಕೀಟೋ[s]ಪಿ ಭ್ರಮರಾಯತೇ ಎಂಬ ನ್ಯಾಯದಂತೆ. ಅಂಗವು ಲಿಂಗ ಸೋಂಕಿ ಲಿಂಗವಾಯಿತ್ತಾಗಿ ಲಿಂಗವೆಂದೇ ಕಾಂಬುದು ಅಂಗೇಂದ್ರಿಯಂಗಳೆಂಬುವಿಲ್ಲ, ಅವೆಲ್ಲವೂ ಲಿಂಗೇಂದ್ರಿಯಂಗಳಾದ ಕಾರಣ, ಲಿಂಗವೆಂದೇ ಕಾಂಬುದು. ಸರ್ಪದಷ್ಟಸ್ಯ ಯದ್ದೇಹಂ ತದ್ದೇಹಂ ವಿಷದೇಹವತ್ ಲಿಂಗದಷ್ಟಸ್ಯ ಯದ್ದೇಹಂ ತದ್ದೇಹಂ ಲಿಂಗದೇಹವತ್ ಎಂದುದಾಗಿ ಸರ್ವಾಂಗಲಿಂಗಿ ಕೂಡಲಚೆನ್ನಸಂಗಾ ನಿಮ್ಮ ಶರಣ !
--------------
ಚನ್ನಬಸವಣ್ಣ
ಲೋಕಾಧಿ ಲೋಕಂಗಳೇನುಯೇನೂ ಇಲ್ಲದಂದು `ಏಕಮೇವಾದ್ವಿತೀಯಂ ಪರಬ್ರಹ್ಮ' ತಾನೊಂದೆ ನೋಡಾ. ಅದು ತನ್ನನು ನೆನೆಯದೆ, ಇದಿರನು ನೆನೆಯದೆ ನೆನಹು ನಿಷ್ಪತ್ತಿಯಾಗಿದ್ದಿತು ನೋಡ. ಆ ನೆನಹಿಲ್ಲದ ಘನವಸ್ತು ನೆನೆದ ನೆನಹೆ ಸಾವಯವಾಗಿ ಚಿತ್ತೆನಿಸಿಕೊಂಡಿತ್ತು. ಆ ಚಿತ್ತೇ, ಸತ್ತು, ಚಿತ್ತು, ಆನಂದ, ನಿತ್ಯ, ಪರಿಪೂರ್ಣ ಎಂಬ ಐದಂಗವನಂಗೀಕರಿಸಿ, ನಿಃಕಲ ಶಿವತತ್ವವೆನಿಸಿತ್ತು ನೋಡ. ಆ ನಿಃಕಲ ಶಿವತತ್ವ ತಾನೊಂದೆ, ತನ್ನ ಶಕ್ತಿಯ ಚಲನೆಮಾತ್ರದಿಂದ ಒಂದೆರಡಾಯಿತ್ತು ನೋಡ. ಅದರೊಳಗೆ ಒಂದು ಲಿಂಗಸ್ಥಲ, ಮತ್ತೊಂದು ಅಂಗಸ್ಥಲ. ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕನೆಂದು, ವರ್ತಿಸುತ್ತಿಹುದು ನೋಡ. ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು. ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು, ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು. ಶಕ್ತಿಯೆ ನಿವೃತ್ತಿಯೆನಿಸಿತ್ತು. ಶಕ್ತಿ ಭಕ್ತಿಯೆಂದೆರಡು ಪ್ರಕಾರವಾಯಿತ್ತು ಶಿವನ ಶಕ್ತಿ. ಲಿಂಗವಾರು ತೆರನಾಯಿತ್ತು; ಅಂಗವಾರು ತೆರನಾಯಿತ್ತು. ಶಕ್ತಿಯಾರು ತೆರನಾಯಿತ್ತು; ಭಕ್ತಿಯಾರು ತೆರನಾಯಿತ್ತು. ಅದು ಹೇಂಗೆಂದಡೆ; ಮೊದಲಲ್ಲಿ ಲಿಂಗ ಮೂರು ತೆರನಾಯಿತ್ತು. ಅದು ಹೇಂಗೆಂದಡೆ : ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು, ಮೂರು ತೆರನಾಯಿತ್ತು. ಆ ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗವೆಂಬ ಲಿಂಗತ್ರಯವು ಒಂದೊಂದು ಲಿಂಗವೆರಡೆರಡಾಗಿ ಆರು ತೆರನಾಯಿತ್ತು. ಅದು ಹೇಂಗೆಂದಡೆ : ಭಾವಲಿಂಗವು ಮಹಾಲಿಂಗವೆಂದು, ಪ್ರಸಾದಲಿಂಗವೆಂದು ಎರಡು ತೆರನಾಯಿತ್ತು. ಪ್ರಾಣಲಿಂಗವು ಜಂಗಮಲಿಂಗವೆಂದು, ಶಿವಲಿಂಗವೆಂದು ಎರಡು ತೆರನಾಯಿತ್ತು. ಇಷ್ಟಲಿಂಗವು ಗುರುಲಿಂಗವೆಂದು, ಆಚಾರಲಿಂಗವೆಂದು ಎರಡು ತೆರನಾಯಿತ್ತು. ಹೀಂಗೆ ಒಬ್ಬ ಶಿವನು ಆರು ತೆರನಾದನು. ಶಾಂತ್ಯತೀತೋತ್ತರೆಯೆಂಬ ಕಲಾಪರಿಯಾಯವನುಳ್ಳ ಚಿಚ್ಛಕ್ತಿ, ಶಾಂತ್ಯತೀತೆಯೆಂಬ ಕಲಾಪರಿಯಾಯವನುಳ್ಳ ಪರಾಶಕ್ತಿ, ಶಾಂತಿಯೆಂಬ ಕಲಾಪರಿಯಾಯವನುಳ್ಳ ಆದಿಶಕ್ತಿ, ವಿದ್ಯಾಕಲಾಪರಿಯಾಯವನುಳ್ಳ ಇಚ್ಛಾಶಕ್ತಿ, ಪ್ರತಿಷಾ*ಕಲಾಪರಿಯಾಯವನುಳ್ಳ ಕ್ರಿಯಾಶಕ್ತಿ. ನಿವೃತ್ತಿ ಕಲಾಪರಿಯಾಯವನುಳ್ಳ ಜ್ಞಾನಶಕ್ತಿ, ಹೀಂಗೆ ಒಂದೇ ಶಿವಶಕ್ತಿ ಆರು ತೆರನಾಗಿ, ಷಟ್‍ಪ್ರಕಾರವಹಂಥಾ ಲಿಂಗಕ್ಕೆ ಅಂಗರೂಪಾಯಿತ್ತು. ಇದು ಲಿಂಗಷಟ್‍ಸ್ಥಲ. ಇನ್ನು ಒಂದು ಅಂಗ ಮೂರು ತೆರನಾಯಿತ್ತು. ಅದು ಹೇಂಗೆಂದಡೆ: ಯೋಗಾಂಗ, ಭೋಗಾಂಗ, ತ್ಯಾಗಾಂಗವೆಂದು ಮೂರು ಪ್ರಕಾರವಾಯಿತ್ತು. ಈ ತ್ರಯಾಂಗ ಒಂದೊಂದು ಎರಡೆರಡಾಗಿ, ಆರು ತೆರನಾಯಿತ್ತು. ಅದು ಹೇಂಗೆಂದೆಡೆ: ಯೋಗಾಂಗವೆ ಐಕ್ಯನೆಂದು, ಶರಣನೆಂದು ಎರಡು ತೆರನಾಯಿತ್ತು. ಭೋಗಾಂಗವೆ ಪ್ರಾಣಲಿಂಗಿಯೆಂದು, ಪ್ರಸಾದಿಯೆಂದು ಎರಡು ತೆರನಾಯಿತ್ತು. ತ್ಯಾಗಾಂಗವೆ ಮಾಹೇಶ್ವರನೆಂದು, ಭಕ್ತನೆಂದು ಎರಡು ತೆರನಾಯಿತ್ತು. ಹೀಂಗೆ ಒಬ್ಬ ಶಿವಶರಣನು ಆರು ತೆರನಾದನು. ಸಮರಸಭಕ್ತಿ, ಆನಂದಭಕ್ತಿ, ಅನುಭಾವಭಕ್ತಿ, ಅವಧಾನಭಕ್ತಿ, ನೈಷ್ಟಿಕಾಭಕ್ತಿ, ಸದ್ಭಕ್ತಿ ಎಂದು ಮಹಾಘನ ಅನುಪಮಭಕ್ತಿ ತಾನೆ ಆರು ತೆರನಾಗಿ, ಷಟ್‍ಪ್ರಕಾರವಹಂಥ ಶರಣಂಗೆ ಅಂಗರೂಪವಾಯಿತ್ತು. ಇದು ಅಂಗಷಟ್‍ಸ್ಥಲ. ಇನ್ನು ಕ್ರಿಯಾಶಕ್ತಿಯಿಂದ ನಿವೃತ್ತಿಕಲೆ- ಆ ನಿವೃತ್ತಿಯ ಕಲೆಯ ಸಂಕಲ್ಪಮಾತ್ರದಿಂದ ಮಾಯಾಶಕ್ತಿ ಹುಟ್ಟಿದಳು. ಆ ಮಾಯಾಶಕ್ತಿಯಿಂದ ಸಮಸ್ತ ಜಗತ್ತಿನ ಉತ್ಪತ್ತಿ. ಅಂಗವೆಂದಡೆ ಶರಣ:ಲಿಂಗವೆಂದಡೆ ಶಿವ. ಆ ಶರಣಂಗೆ ಆ ಲಿಂಗವು ಆವಾಗಲೂ ಪ್ರಾಣವು ಆ ಲಿಂಗಕ್ಕೆ ಆ ಶರಣನಾವಾಗಲೂ ಅಂಗವು. ಈ ಶರಣ ಲಿಂಗವೆರಡಕ್ಕೂ ಬೀಜವೃಕ್ಷನ್ಯಾಯದ ಹಾಂಗಲ್ಲದೆ, ಭಿನ್ನವಿಲ್ಲ. ಇದು ಕಾರಣ, ಅನಾದಿಯಿಂದವು ಶರಣನೆಂದಡೆ ಲಿಂಗ, ಲಿಂಗವೆಂದೆಡೆ ಶರಣ, ಈ ಶರಣ ಲಿಂಗವೆರಡಕ್ಕೂ ಭೇದವಿಲ್ಲವೆಂಬುದನು ಸ್ವಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ, ಆಗಮಯುಕ್ತಿಯಿಂದ ಅರಿದುದು ಅರುಹಲ್ಲ. ಅದೇನು ಕಾರಣವೆಂದಡೆ; ಶಾಸ್ತ್ರಜ್ಞಾನದಿಂದ ಸಂಕಲ್ಪ ಹಿಂಗದಾಗಿ. ಈ ಷಟ್‍ಸ್ಥಲಮಾರ್ಗವು ದ್ವೆ ೈತಾದ್ವೆ ೈತದ ಪರಿವರ್ತನೆಯಲ್ಲ. ಅದೇನು ಕಾರಣವೆಂದಡೆ; ಇದು ಶಿವಾದ್ವೆ ೈತಮಾರ್ಗವಾದ ಕಾರಣ. ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ ಬೊಮ್ಮ, ಪರಬೊಮ್ಮನೆಂದು ಬೇರುಂಟೆ ತಾನಲ್ಲದೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶರಣನ ಅಂಗವು ಎಂತಿಪ್ಪುದೆಂದರೆ, ವಾರಿಕಲ್ಲು ನೀರೊಳಗೆ ಬಿದ್ದಂತೆ, ಸಾರ ಬಲಿದು, ಶರಧಿಯ ಕೂಡಿದಂತೆ, ಅರಗಿನ ಬೊಂಬೆಗೆ ಉರಿಯ ಸರವ ಮಾಡಿದಂತೆ, ಪರಿಮಳವ ಕೂಡಿದ ವಾಯುವಿನಂತೆ, ಆಡಂಬರವ ಮಾಡಿ ತೋರಿದ ಆಕಾಶದಂತೆ, ಇದೀಗ ಶರಣರಂಗ. ಇದರಂದವ ತಿಳಿದರೆ ಐಕ್ಯ. ಇದರೊಳು ನಿಶ್ಚಿಂತನಾದರೆ ನಿರವಯವು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಆಚಾರವೆಂಬ ಭಕ್ತ ಘಟವಾಗಿ, ಅರಿವೆಂಬ ಮೂರ್ತಿಜಂಗಮ ಪ್ರಾಣವಾಗಿ, ಉಭಯವು ಕೂಡಿ ಕಾಯಜೀವನಾಗಿ ನಡೆವಂತೆ, ಆಚಾರಕ್ಕೊಡಲಾಗಿ, ಅರಿವಿಂಗೆ ಆಶ್‍ಯವಾಗಿ, ಈ ಉಭಯಗೂಡಿಪ್ಪ ಅಂಗವು ಸದಾಶಿವಮೂರ್ತಿಲಿಂಗವು ತಾನಾಗಿ.
--------------
ಅರಿವಿನ ಮಾರಿತಂದೆ
-->