ಅಥವಾ

ಒಟ್ಟು 19 ಕಡೆಗಳಲ್ಲಿ , 9 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಂದು ನಾದವ ನುಂಗಿತ್ತೆಂಬರು, ನಾದ ಬಿಂದುವ ನುಂಗಿತ್ತೆಂಬರು. ಕಳೆ ಬಿಂದುವ ನುಂಗಿತ್ತೆಂಬರು, ಬಿಂದು ಕಳೆಯ ನುಂಗಿತ್ತೆಂಬರು. ಈ ಮೂರರ ಅಂದವ ಅತೀತ ತಿಂದಿತ್ತು, ತಿಂದವನ ತಿಂದ ಅಂದವ ನೋಡಾ. ಇದಕ್ಕೊಂದೂ ಇಲ್ಲಾ ಎಂದೆ, ಸಂದನಳಿದ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಗೆಯ ತಿಂದವ ಕಮ್ಮಾರ, ಎಮ್ಮೆಯ ತಿಂದವ ಸಮಗಾರ, ಹಸುವ ತಿಂದವ ಪಶುಪತಿಯ ಶರಣ; ಇವರ ಮೂವರ ತಿಂದ ಅಂದವ ನೋಡಾ! ಇದರ ಸಂಗವಾರಿಗೂ ಅರಿದು, ನಿಸ್ಸಂಗ ನಿರ್ಲೇಪ ನಾರಾಯಣಪ್ರಿಯ ರಾಮನಾಥ.
--------------
ಗುಪ್ತ ಮಂಚಣ್ಣ
ಹಿಂಡುಗಟ್ಟಿಯ ಕಟ್ಟುವವನ ಅಂಡಿನ ಕೂದಲಿನಲ್ಲಿ , ಮೂರುಸಂದು ಹುಟ್ಚಿದವು. ಮೂರು ಸಂದಿನಿಂದ ಬಂದ ಸಂದೇಹವೆಲ್ಲವು ಜಗದಲ್ಲಿ ಹೊಂದುತ್ತಿದೆ. ಆ ಹೊಂದುವ ಅಂದವ ಹೇಳು, ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಮಹಾಂಧಕಾರದಲ್ಲಿ ಸಂದಿಲ್ಲದೆ, ಹೊಂದಿ ಹೊಂದಿ ಬಾಹಾಗ, ಬಂದುದ ಬಲ್ಲೆಯಾ ? ಈಗ ಮಾಡುವ ಮಾಟದ ಅಂದವ ಬಲ್ಲೆಯಾ ? ನಿಸ್ಸಂಗವ ಮಾಡುವ ಲಿಂಗದ ಪುಂಗವ ಬಲ್ಲೆಯಾ ? ಇದಕ್ಕೆ ಸಾರಂದಗಾರಿಕೆಯ ಮಾ[ತೇಕೆ?] ಅಂದು ನೀ ಬಂದ ಬೆಂಬಳಿಯ ಕಂಬಳಿಯಲ್ಲದೆ ಲಿಂಗ[ವೆ], ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಅಂದಂದಿನ ಹೊದ್ದಿಗೆಯ ಬಿಂದುಮಾತ್ರದಲಾದ ಅಂದವ ಕೆಡಿಸಲರಿಯದ ಅಂಧಕರ ನೋಡಾ. ಸಮರಸವಿಲ್ಲದೆ ನೆರಹಿ ಮಾಡಿ, ಭಕ್ತರಾದೆವೆಂಬವರನೇನೆಂಬೆ ಆಚಾರವಂಚಕರ ಎನಗೆ ತೋರದಿರು ಕೂಡಲಸಂಗಮದೇವಾ, ನಿಮ್ಮ ಧರ್ಮ !
--------------
ಬಸವಣ್ಣ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗೋವು ಮೊದಲು ಚತುಃಪಾದಿ ಜೀವಂಗಳು ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ ಬೀಡಿಂಗೆ ಹೋಹಂತೆ, ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ. ಬಂದುದ ಮರೆದ ಬಂಧಜೀವಿಗ ನಾನಾಗಿ ಜೀವಕಾಯದ ಸಂದ ಬಿಡಿಸು. ಬಿಂದು ನಿಲುವ ಅಂದವ ಹೇಳು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕೋಣೆಯೊಳಗಳ ಮಿಂಡ, ನಡುಮನೆಯೊಳಗಳ ಗಂಡ, ಇವರಿಬ್ಬರ ಒಡಗೂಡವಳ ಚಂದವ ನೋಡಾ. ಕೈಯ್ಯಲ್ಲಿ ಕಣ್ಣು ಹುಟ್ಟಿ, ಬಾಯಲ್ಲಿ ಬಸುರು ಹುಟ್ಟಿ, ಮೊಲೆ ತಲೆಯಲ್ಲಿ, ಭಗ ಬೆನ್ನಿನಲ್ಲಿ ಈ ಹಾದರಗಿತ್ತಿಯ ಅಂದವ ಸದಾಶಿವಲಿಂಗವೆ ಬಲ್ಲ.
--------------
ಅರಿವಿನ ಮಾರಿತಂದೆ
ಸಿದ್ಧರಸ ಲೇಸೆಂದಡೆ ತಾನಿದ್ದ ಕುಡಿಕೆ ಹೇಮವಾದುದಿಲ್ಲ, ಲೋಹಕ್ಕಲ್ಲದೆ ವೇಧಿಸೂದಿಲ್ಲ. ವಸ್ತು ಸರ್ವದಲ್ಲಿ ಸಂಪೂರ್ಣವಾಗಿರ್ದಡೇನು, ತನ್ನನರುವರ ಹೃದಯದಲಲ್ಲದೆ ಇರದು. ಸದಾಶಿವಮೂರ್ತಿಲಿಂಗದ ಇರವು, ಇಂದ್ರಿಯವ ಕಟ್ಟಿ ವಸ್ತುವನರಿದಿಹೆನೆಂದಡೆ ಕರೆವ ಹಸುವಲ್ಲ. ಇಂದ್ರಿಯವ ಬಿಟ್ಟು ವಸ್ತುವ ಹಿಡಿದಿಹೆನೆಂದಡೆ ಬಿಡಾಡಿಯಲ್ಲ. ವಸ್ತುವನರಿವುದಕ್ಕೆ ಎರಡಳಿದು ಒಂದುಳಿಯಬೇಕು. ಆ ಸಂದಿನ ಬೆಸುಗೆಯಲ್ಲಿ ಸಂದಿರುತಿಪ್ಪವರ ಅಂದವ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೆನೆಯ ತೆಗೆದು ಹಾಲನೆರೆವವಳ ವಿನಯ ತಲೆಯನೊಡೆದು ಲಾಲನೆಯ ಮಾಡುವಳಂತೆ, ವಂದಿಸಿ ನಿಂದಿಸುವನ ಭಕ್ತಿ ಕೈನೆರವಿಂಗೆ ಹೋಗಿ ತಮ್ಮವರಳಿದ ಅಂದವ ನೆನೆದು ಅಳುವರಂತೆ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇಂದ್ರಿಯಂಗಳ ಕಟ್ಟಿ ವಸ್ತುವನರಿಯದೆಹೆನೆಂದಡೆ, ಕರೆವ ಹಸುವಲ್ಲ. ಇಂದ್ರಿಯಂಗಳ ಬಿಟ್ಟು ವಸ್ತುವನರಿದೆಹೆನೆಂದಡೆ, ಬಿಡಾಡಿಯಲ್ಲ. ವಸ್ತುವನರಿವುದಕ್ಕೆ ಎರಡಳಿದು ಒಂದುಳಿಯಬೇಕು, ಆ ಸಂಧಿಯ ಬೆಸುಗೆಯಲ್ಲಿ ನಿಂದಿರ್ಪವನ ಅಂದವ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜೇನುತುಪ್ಪವ ಹೊತ್ತು ಮಾರುವವಳ ಮಡಕೆಯ ಮೇಲೆ ಮೂರು ತುಂಬಿ ಕುಳಿತೈಧಾವೆ. ಒಂದು ತುಂಬಿ ಇದ್ದಿತ್ತು, ಒಂದು ತುಂಬಿ ಹಾರಿತ್ತು, ಒಂದು ತುಂಬಿ ಸತ್ತಿತ್ತು. ಮೂರು ತುಂಬಿ ಅಂದವ ಕಂಡುದಿಲ್ಲ. ಮಡಕೆ ಒಡೆಯಿತ್ತು, ತುಪ್ಪವೊಕ್ಕಿತ್ತು, ಹೊತ್ತವ[ಳು] ಸತ್ತ[ಳು]. ಇದೇನು ಕೃತ್ರಿಮವೆಂದು ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಅವರಪ್ಪನ ಮಗಳ ಗಂಡನ ತಂದೆಯ ತಾಯ ತಂದವರ ಗಂಡನ ಹೆಂಡತಿಯ ಹೆತ್ತವಳ ಮಕ್ಕಳ ಮೂರಿ ತಲೆಗಡಿದವರ ಅಂದಿನ ನಂಟ ಬಂದ ನಾನು. ನೀಂ ಪಂದಿಯೊಳಗಿರ್ದ ಅಂದವ ತೋರಾ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಒಂದೊಂದು ಪರಿಯ ಬೊಂಬೆಗಳು ಬಂದು ಬಂದಾಡಲ್ಕೆ ಕಂಡು ಕಂಡು ನೊಂದೆನಯ್ಯಾ. ಅದರ ದಂದ ಹೊದ್ದಿಹಿದೆಂದು, ಒಬ್ಬಳು ಹೆಂಗೂಸಿಗೆ ಗಂಡರು ನಾಲ್ವರು. ಆಕೆ ಗರ್ಭಿಣಿಯಾಗದ ಮುನ್ನವೆ ಪ್ರಸೂತೆಯಾದಳು ನೋಡಾ. ಗಂಭೀರಸ್ಥಳಕ್ಕೆ ನೀವು ಹೋದಿರಾದಡೆ, ಬಂಜೆಯ ಮಕ್ಕಳು ಮೂವರೈದಾರೆ. ಆರು ಗೃಹಂಗಳಂ ಕಟ್ಟಿಕೊಂಡು ಮೂವತ್ತಾರನೆಯ ಮಂಟಪದಲ್ಲಿ ಪರಮಸೀಮೆಯಂ ಮೀರಿದ ಅವರ ಹಿಂದು ಮುಂದರಿತು ಅವು ಪಡುವ ನಿಗ್ರಹಂಗಳಂ ಕಂಡು, ಈ ಮಂದಮತಿಗಯಪ್ಪ ಬೊಂಬೆಗಳ ಹಿಂದು ಮುಂದ ನಾಶವಂ ಮಾಡಿ, ತಂದೆ ನಿಮ್ಮ ಅಂದವ ತೋರಯ್ಯಾ ಕಪಿಲಸಿದ್ಧ ಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕುದುರೆಗೆ ಹುಲ್ಲ ಹಾಕಲಾಗಿ ಹುಲ್ಲು ಕುದುರೆಯ ತಿಂದಿತ್ತು. ಬಂದ ಗೋವ ಕುದುರೆಯ ನೋಡಿ ಅದರಂಗದ ಕಾಲು ಇರಲಾಗಿ, ತಿಂದವರಾರೊ ಎಂಬುದಕ್ಕೆ ಮೊದಲೆ ತಿಂದಿತ್ತು. ಆ ಕಾಲು ನಿಂದ ಗೋವನ ಈ ಮೂವರ ಅಂದವ ತಿಳಿಯೊ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇನ್ನಷ್ಟು ... -->