ಅಥವಾ

ಒಟ್ಟು 38 ಕಡೆಗಳಲ್ಲಿ , 23 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೃಥ್ವಿಯಲ್ಲಿ ಗಂಧವಿಹುದು, ಅಪ್ಪುವಿನಲ್ಲಿ ರಸವಿಹುದು, ತೇಜದಲ್ಲಿ ರೂಪವಿಹುದು, ವಾಯುವಿನಲ್ಲಿ ಸ್ಪರ್ಶವಿಹುದು, ಆಕಾಶದಲ್ಲಿ ಶಬ್ದವಿಹುದು, ತೃಪ್ತಿಯಲ್ಲಿ ಆತ್ಮನೆಂಬ ಮಹಾಭೂತಾಶ್ರಯವಾಗಿಹುದು ನೋಡಾ. ಇದಕ್ಕೆ ಶಿವಪ್ರಕಾಶಾಗಮೇ : ``ಸುಗಂಧಃ ಪೃಥ್ವೀಮಾಶ್ರಿತ್ಯ ಸುರಸೋ ಜಲಮಾಶ್ರಿತಾಃ | ರೂಪ ತೇಜ ಆಶ್ರಿತ್ಯ ಸ್ಪರ್ಶನಂ ವಾಯುಮಾಶ್ರಿತಂ || ಶಬ್ದಮಾಕಾಶಮಾಶ್ರಿತ್ಯ ಆತ್ಮಾ ಚ ತೃಪ್ತಿ ಆಶ್ರಯಾಃ | ಇತಿ ಷಡಿಂದ್ರಿಯಂ ದೇವಿ ಸ್ಥಾನೇ ಸ್ಥಾನೇ ಸಮಾಚರೇತ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಿಂಹ ಮದಕರಿಯ ಮೇಲೆ ಹಾರುವುದಲ್ಲದೆ, ಮದಮಹಿಷಿಯ ಮೇಲೆ ಹಾರುವುದೆ ಅಯ್ಯಾ? ಪಕ್ಷಿ ಆಕಾಶದಲ್ಲಿ ಹಾರುವುದಲ್ಲದೆ, ಪಂಜರದಲ್ಲಿ ಹಾರದು ನೋಡಯ್ಯಾ. ನಮ್ಮ ಕಪಿಲಸಿದ್ಧಮಲ್ಲೇಶನನರಿವವರು ಜಾÐನದ ಮೇಲೆ ಹಾರುವರಲ್ಲದೆ ಅಜಾÐನದಲ್ಲಿ ಹಾರರು.
--------------
ಸಿದ್ಧರಾಮೇಶ್ವರ
ಆ ಮಹಾಸದಾಶಿವ ತತ್ವದ ಪಂಚಮುಖದಲ್ಲಿ ಉತ್ಪತ್ಯವಾದ ಪಂಚಮಹಾಭೂತಬ್ರಹ್ಮಾಂಡಕಪಾಲದೊಳು ಪಂಚಭೂತ ಬ್ರಹ್ಮಾಂಡಕಪಾಲ ಉತ್ಪತ್ಯವದೆಂತೆಂದೊಡೆ : ಆ ಮಹಾಶಿವತತ್ವದ ನಿರ್ಭಾವ ಮುಖದಲ್ಲಿ ಆತ್ಮನುತ್ಪತ್ಯವಾದನು. ಆ ಆತ್ಮನಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಆಕಾಶದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ವಾಯುವಿನಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಅಗ್ನಿಯಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಅಪ್ಪುವಿನಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಇದಕ್ಕೆ ಈಶ್ವರ ಉವಾಚ : ``ಆತ್ಮನ್ಯಾಕಾಶಸಂಭೂತಿರಾಕಾಶಾದ್ವಾಯು ಸಂಭವಃ | ವಾಯೋರಗ್ನಿಃ ಸಮುತ್ಪತ್ತಿರಗ್ನೇರಾಪ ಉದಾಹೃತಂ | ಅಪ್ ಪೃಥ್ವೀಚ ಸಂಭೂತಿರ್ಲಕ್ಷಣೈಕಪ್ರಭಾವತಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಧರೆಯ ಮೇಲೆ ಬಿದ್ದ ಬೀಜ, ಧರೆಯಲ್ಲಿಯೆ ಅಳಿದು, ಆಕಾಶದಲ್ಲಿ ಫಲವಾಯಿತ್ತು. ಆ ಫಲವ ಬಯಲ ಕಣದಲ್ಲಿ ಒಕ್ಕಿ, ಮನದ ಹಗಹದಲ್ಲಿ ತುಂಬಿ, ಬಾಯ ಹಗಹದಲ್ಲಿ ತೆಗೆದು, ಕಣ್ಣಿನ ಕೊಳಗದಲ್ಲಿ ಅಳೆವುತ್ತಿರಲಾಗಿ, ಖಂಡುಗವೆಂಬುದಕ್ಕೆ ಮೊದಲೆ ಕೊರಳಡಗಿತ್ತು. ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನರಿಕೆಯಾಗಿ.
--------------
ಹೊಡೆಹುಲ್ಲ ಬಂಕಣ್ಣ
ಪಶು ಪಾಶ ಮಲ ಮಾಯಾಕರ್ಮಂಗಳು ನಿತ್ಯವೆಂಬೆ. ನಿತ್ಯವಾದಡೆ, `ಪಶುಪಾಶವಿನಿರ್ಮುಕ್ತಃ ಪರಮಾತ್ಮಾ ಸದಾಶಿವಃ ಎಂದುದಾಗಿ ಇದಂ ಮಲತ್ರಯದೋಷಂ ಗುರುಣೈವ ವಿಮೋಚನಂ' ಎಂದುದಾಗಿ, ಪಶು ಪಾಶ ಮಲ ಮಾಯಾಕರ್ಮಂಗಳು ಗುರೂಪದೇಶದಿಂದಲೂ ಶಿವಪ್ರಸಾದತ್ವದಿಂದಲೂ ಕೆಡುತ್ತಿರ್ದಾವು. ಪಶು ಪಾಶ ಮಲ ಮಾಯಾ ಕರ್ಮಂಗಳು ಶಿವಯೋಗಿಗಳ ಮಧ್ಯದಲ್ಲಿಯೂ ಕೆಡುತ್ತಿರ್ದಾವು; ಕೆಡುತ್ತಿರ್ದಂಥ ಅನಿತ್ಯವಾದ ವಸ್ತುವ, ಅಭ್ರಚ್ಛಾಯವ ನಿತ್ಯವೆನ್ನಬಹುದೇ? ನಿತ್ಯವೆಂಬೆಯಾದಡೆ, ಮಲಮಾಯಾಕರ್ಮಂಗಳು ಎಂದೂ ತೊಲಗುವುದಿಲ್ಲ ಎನ್ನು. ಮಲಮಾಯಾಕರ್ಮಂಗಳು ಎಂದೂ ತೊಲಗುವುದಿಲ್ಲ ಎಂಬಾಗವೇ ಮುಕ್ತಿಯಿಲ್ಲಯೆನ್ನು. ಮುಕ್ತಿಯುಂಟಾದಡೆ, ಮಲಮಾಯಾಕರ್ಮಂಗಳು ನಿತ್ಯವೆಂಬುದು ಅಬದ್ಧ. ಅವು ನಿತ್ಯವಾದಾಗವೆ, ಉತ್ಪತ್ತಿ ಸ್ಥಿತಿ ಪ್ರಳಯಂಗಳಿಲ್ಲಾಯೆನ್ನು. ಉತ್ಪತ್ತಿ ಸ್ಥಿತಿ ಪ್ರಳಯಂಗಳುಂಟಾದಲ್ಲಿ, ನಿತ್ಯವೆನಲಿಲ್ಲ. ಪೃಥ್ವಿಯ ಲಯ ಅಪ್ಪುವಿನಲ್ಲಿ, ಅಪ್ಪುವಿನ ಲಯ ಅಗ್ನಿಯಲ್ಲಿ, ಅಗ್ನಿಯ ಲಯ ವಾಯುವಿನಲ್ಲಿ, ವಾಯುವಿನ ಲಯ ಆಕಾಶದಲ್ಲಿ, ಆಕಾಶದ ಲಯ ಆತ್ಮನಲ್ಲಿ, ಆತ್ಮನ ಲಯ ಮಹಾಲಿಂಗದಲ್ಲಿ. ಇಂತಿವೆಲ್ಲವೂ ಮಹಾಲಿಂಗದಲ್ಲಿಯೇ ಹುಟ್ಟಿ, ಮಹಾಲಿಂಗದಲ್ಲಿಯೇ ಲಯವಾಗುವಲ್ಲಿಯೆ ಪಿಂಡಾಂಡವೆಲ್ಲವೂ ಲಯ. ಸಮಸ್ತ ತತ್ವಂಗಳೆಲ್ಲವೂ ಲಯ. ಈ ಲಯ ಗಮಂಗಳಿಗೆ ಆಸ್ಪದವಾದ ಶಿವತತ್ವವೊಂದೇ ನಿತ್ಯವಲ್ಲದೆ, ಉಳಿದವೆಲ್ಲವೊ ನಿತ್ಯವೆಂಬುದು ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿಪುರುಷನ ಮನವು ಮಹವನಕ್ಕಾಡೆ, ಮತ್ತಲ್ಲಿಯೆ ಆನಂದದಿಂದ ಆ ನಿರವಯವು ಬೆಸಲಾಯಿತ್ತು. ಧರೆ, ಅಂಬರ, ವಾರುಧಿ ಸಹಿತ, ಜಾರೆಯೆಂದಡೆ ಜಗದಲ್ಲಿ ನಿಂದವು Zõ್ಞರಾಸಿಲಕ್ಷ ಜೀವಜಾಲಗಳು. ಹೋರೆಯೆಂದಡೆ ಆಕಾಶದಲ್ಲಿ ನಿಂದರು ಗರುಡಗಂಧರ್ವಸಿದ್ಧ ವಿದ್ಯಾಧರದೇವರ್ಕಳು- ಮೊದಲಾದ ದೇವಸಮೂಹಂಗಳೆಲ್ಲ ಕೂಡಲಸಂಗಮದೇವಾ, ನೀವು ಮನದಲ್ಲಿ ಸಂಕಲ್ಪಿಸಿ ಆಗೆಂದಡೆ ಆದವು.
--------------
ಬಸವಣ್ಣ
ಇನ್ನು ಷಡ್ವಿಧಲಿಂಗ ಅದೆಂತೆಂದಡೆ : ಪೃಥ್ವಿಯಲ್ಲಿ ಆಚಾರಲಿಂಗವಿಹುದು, ಅಪ್ಪುವಿನಲ್ಲಿ ಗುರುಲಿಂಗವಿಹುದು ; ತೇಜದಲ್ಲಿ ಶಿವಲಿಂಗವಿಹುದು, ವಾಯುವಿನಲ್ಲಿ ಜಂಗಮಲಿಂಗವಿಹುದು, ಆಕಾಶದಲ್ಲಿ ಪ್ರಸಾದಲಿಂಗವಿಹುದು, ಆತ್ಮನಲ್ಲಿ ಮಹಾಲಿಂಗವಿಹುದು ನೋಡಾ, ಶಿವಲಿಂಗ ಸೂತ್ರೇ ಸಾಕ್ಷಿ- ``ಆಚಾರಂ ಪಥ್ವೀಭೂತೇ ಚ ಆಪಶ್ಚ ಗುರುಲಿಂಗಯೋಃ | ತೇಜಂ ಚ ಶಿವಲಿಂಗಂ ಚ ವಾಯೌಚ ಚರಲಿಂಗಕಂ || ಪ್ರಸಾದಲಿಂಗೇತ್ವಾಕಾಶಂ ಆತ್ಮಾ ಚ ಮಹಾಮೇವ ಚ | ಇತಿ ಲಿಂಗಸ್ಥಲಂ ಜ್ಞಾತ್ವಾ ದುರ್ಲಭಂ ಚ ವರಾನನೇ ||'' ಎಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶಿವಶಿವಾ, ಈ ಮರುಳಮಾನವರ ಮರುಳತನವ ನಾನೇನೆಂಬೆನಯ್ಯಾ. ಹೊನ್ನು ತನ್ನದೆಂಬರು, ಹೊನ್ನು ರುದ್ರನದು. ಹೆಣ್ಣು ತನ್ನದೆಂಬರು, ಹೆಣ್ಣು ವಿಷ್ಣುವಿನದು. ಮಣ್ಣು ತನ್ನದೆಂಬರು, ಮಣ್ಣು ಬ್ರಹ್ಮನದು. ಇಂತೀ ತ್ರಿವಿಧವು ನಿಮ್ಮವೆಂಬಿರಿ- ನಿಮ್ಮವು ಅಲ್ಲ ಕಾಣಿರೋ ಎಲಾ ದಡ್ಡ ಪ್ರಾಣಿಗಳಿರಾ. ಇದಕ್ಕೆ ದೃಷ್ಟಾಂತ: ಗಗನದಲ್ಲಿ ಚಂದ್ರೋದಯವಾಗಲು ಭೂಮಂಡಲದಲ್ಲಿ ಕ್ಷೀರಸಮುದ್ರ ಹೆಚ್ಚುವದು. ಹೆಚ್ಚಿದರೇನು ? ಆ ಚಂದ್ರನ ವ್ಯಾಳ್ಯಕ್ಕೆ ಸಮುದ್ರವಿಲ್ಲ; ಸಮುದ್ರದ ವ್ಯಾಳ್ಯಕ್ಕೆ ಚಂದ್ರನಿಲ್ಲ. ಮತ್ತೆ ಆಕಾಶದಲ್ಲಿ ಮೋಡ ಬಂದು ಸುಳಿಗಾಳಿ ಬೀಸಲು ಗಿರಿಯೊಳಗಿರ್ದ ನವಿಲು ತನ್ನ ಪಕ್ಕವ ಬಿಚ್ಚಿ ಹರುಷಾನಂದದಲ್ಲಿ ಆಡುವದು ; ಪ್ರೇಮದಿಂದಲಿ ಕುಣಿಯವದು. ಕುಣಿದರೇನು ? ಚಂಡವಾಯುವಿನಿಂದ ಆಕಾಶದೊಳಗಣ ಕಾರಮುಗಿಲು ಹಾರಿಹೋಹಾಗ ನವಿಲು ಅಡ್ಡಬಂದಿತ್ತೆ ? ಇಲ್ಲ. ಗಿರಿಯೊಳಗಣ ಮಯೂರನನ್ನು ವ್ಯಾಧನು ಬಂದು ಬಲಿಹಾಕಿ ಕೊಲ್ಲುವಾಗ ಆ ಮೋಡ ಅಡ್ಡಬಂದಿತ್ತೆ ? ಇಲ್ಲ. ಇದರ ಹಾಂಗೆ, ನಿಮಗೆ ಬಾಲಪ್ರಾಯದಲ್ಲಿ ಮಾತಾಪಿತರ ಮೋಹ ಯೌವ್ವನಪ್ರಾಯದಲ್ಲಿ ಸ್ತ್ರೀ, ಪುತ್ರಮೋಹ. ಮಧ್ಯಪ್ರಾಯದಲ್ಲಿ ಧನಧಾನ್ಯದ ಮೋಹ. ಈ ಪರಿಯಲ್ಲಿ ಸಕಲವು ನೀವು ಇರುವ ಪರ್ಯಂತರದಲ್ಲಿ ಮಾಯಾ ಮಮಕಾರವಲ್ಲದೆ ಅಳಲಿ ಬಳಲಿ, ಕುಸಿದು ಕುಗ್ಗಿ ಮುಪ್ಪುವರಿದು, ಮರಣಕಾಲಕ್ಕೆ ಯಮದೂತರು ಬಂದು ಹಿಂಡಿ ಹಿಪ್ಪಿಯ ಮಾಡಿ ಒಯ್ಯುವಾಗ, ಮೂವರೊಳಗೆ ಒಬ್ಬರು ಅಡ್ಡಬಂದರೆ ? ಬಂದುದಿಲ್ಲ. ಅವರ ಸಂಕಟಕ್ಕೆ ನೀವಿಲ್ಲ, ನಿಮ್ಮ ಸಂಕಟಕ್ಕೆ ಅವರಿಲ್ಲ. ನಿನ್ನ ಪುಣ್ಯಪಾಪಕ್ಕೆ ಅವರಿಲ್ಲ, ಅವರ ಪುಣ್ಯಪಾಪಕ್ಕೆ ನೀನಿಲ್ಲ. ನಿನ್ನ ಸುಖದುಃಖಕ್ಕೆ ಅವರಿಲ್ಲ, ಅವರ ಸುಖದುಃಖಕ್ಕೆ ನೀನಿಲ್ಲ. ನಿನಗವರಿಲ್ಲ, ಅವರಿಗೆ ನೀನಿಲ್ಲ. ಇಂತಿದನು ಕಂಡು ಕೇಳಿ ಮತ್ತಂ ಹಿತ್ತಲಕ್ಕೆ ಹಳೆಯೆಮ್ಮಿ ಮನಸೋತ ಹಾಗೆ, ಹಾಳಕೇರಿಗೆ ಹಂದಿ ಜಪ ಇಟ್ಟ ಹಾಗೆ, ಹಡಕಿಗೆ ಶ್ವಾನ ಮೆಚ್ಚಿದ ಹಾಗೆ, ಮತ್ತಂ, ಮಾನವರೊಳಗೆ ಹಂದಿ, ನಾಯಿ, ಹಳೆಯೆಮ್ಮಿಯೆಂದರೆ- ಜೀವನಬುದ್ಭಿಯುಳ್ಳವನೇ ಹಂದಿ. ಕರಣಬುದ್ಧಿಯುಳ್ಳವನೇ ನಾಯಿ. ಮಾಯಾಪ್ರಕೃತಿಯುಳ್ಳವನೇ ಹಳೆಯೆಮ್ಮಿ. ಇವಕ್ಕೆ ಮೂರು ಮಲವಾವೆಂದಡೆ: ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯವನು, ಕಚ್ಚಿ ಮೆಚ್ಚಿ ಮರುಳಾಗಿ ಬಿಡಲಾರದೆ ಕಂಡು ಕೇಳಿ ಮೋಹಿಸಿ, ಇದನು ಬಿಟ್ಟು ವೈರಾಗ್ಯಹೊಂದಿದರೆ ಮೋಕ್ಷವಿಲ್ಲೆಂದು ಪ್ರಪಂಚವಿಡಿದು ಪಾರಮಾರ್ಥ ಸಾಧಿಸಬೇಕೆಂದು ಹೇಳುವವರ, ಹೀಂಗೆ ಮಾಡಬೇಕೆಂಬುವರ ಬುದ್ಧಿಯೆಂತಾಯಿತಯ್ಯಾ ಎಂದಡೆ: ಗಿಳಿ ಓದಬಲ್ಲುದು; ಬಲ್ಲರೇನು ತನ್ನ ಮಲವ ತಾನು ತಿಂದ ಹಾಗೆ. ವಿಹಂಗ ಹನ್ನೆರಡುಯೋಜನದಮೇಲೆ ಅಮೃತಫಲವಿಪ್ಪುದ ಬಲ್ಲದು. ಬಲ್ಲರೇನು, ಅದು ಬಾಯಿಲಿ ತಿಂದು ಬಾಯಿಲೆ ಕಾರುವದು. ಹಾಂಗೆ ಈ ಮಾನವರು ತ್ರಿವಿಧಮಲಸಮಾನವೆಂಬುದ ಬಲ್ಲರು, ಬಲ್ಲರೇನು ? ಬಿಡಲಾರರು. ಇಂತೀ ಪರಿಪರಿಯಲ್ಲಿ ಕೇಳಿ ಕೇಳಿ ಕಂಡು ಬಿಡಲಾರದೆ ಇದ್ದರೆ ಇಂಥ ಹೊಲೆಸೂಳೆಯ ಮಕ್ಕಳ ಶರೀರವ ಖಡ್ಗದಿಂದ ಕಡಿದು ಕರಗಸದಿಂದ ಕೊರೆದು ಛಿದ್ರಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿಗಳಿಗೆ ಹಾಕಿದರೆ ಎನ್ನ ಸಿಟ್ಟು ಮಾಣದು. ಕಡೆಯಲ್ಲಿ ಚಂದ್ರಸೂರ್ಯರು ಇರುವ ಪರ್ಯಂತರ ಮಹಾ ಅಘೋರ ನರಕದಲ್ಲಿ ಕಲ್ಪಕಲ್ಪಾಂತರದಲ್ಲಿ ಹಾಕದೆ ಬಿಡನೆಂದಾತನು ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಕಾಶದಲ್ಲಿ ತೋರುವ ಮೋಡದ ಮುಗಿಲಿನಂತೆ, ಶಶಾಂಕನ ಕಾಬ ಅಂಬುಧಿಯಂತೆ, ವಿಷಧರನ ಕಾಬ ವಿಷಜದಂತೆ ಹೆಚ್ಚುಗೆಯಾಗಿ ಆತ್ಮಭೇದದಲ್ಲಿ ಕುರುಹಿಟ್ಟುದ ಕಂಡು ಮನವುಣ್ಮಿ ತನುಕರಗಿ ನಿಶ್ಚಯ ನಿಜತತ್ತ್ವದಲ್ಲಿ ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಆಕಾಶದಲ್ಲಿ ಪಂಚಮಹಾನಾದಂಗಳುಂಟು, ಆ ಪಂಚಮಹಾನಾದಂಗಳೇ ಪಂಚಮಹಾವೇದಂಗಳು ಕಂಡಿರೇ. ಇಂತೀ ವೇದ-ನಾದಂಗಳ ಭೇದಿಸಬಲ್ಲಡೆ ಸೌರಾಷ್ಟ್ರ ಸೋಮೇಶ್ವರಲಿಂಗವೆಂಬೆನು.
--------------
ಆದಯ್ಯ
ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ ? ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು. ಮುಂದಣ ಹೆಜ್ಜೆಯಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು. ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು._ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ ?
--------------
ಅಲ್ಲಮಪ್ರಭುದೇವರು
ಪೃಥ್ವಿಯಲ್ಲಿ ಜನನವೂ, ಆಕಾಶದಲ್ಲಿ ಮರಣವೂ, ಧರೆಯಲ್ಲಿ ಸಂತೋಷವೂ, ಗಗನದಲ್ಲಿ ದುಃಖವೂ, ಇಳೆಯಲ್ಲಿ ಅಹಂಕಾರವೂ, ಬಯಲಲ್ಲಿ ಜ್ಞಾನವೂ, ಬಯಲಲ್ಲಿ ಧರ್ಮವೂ, ಧರಣಿಯಲ್ಲಿ ಕರ್ಮವೂ, ಆಕಾಶದಲ್ಲಿ ಭಕ್ತಿಯೂ, ಧರಣಿಯಲ್ಲಿ ಶಕ್ತಿಯೂ, ಭೂಮಿಯಲ್ಲಿ ಜಾಗ್ರವೂ, ಆಕಾಶದಲ್ಲಿ ಸುಷುಪ್ತಿಯೂ, ಅಲ್ಲಿ ನೀನೂ ಇಲ್ಲಿ ನಾನೂ ಇರಲಾಗಿ, ನೀನೆಂತು ನನಗೊಲಿದೆ ? ನಾನೆಂತು ನಿನ್ನ ಕೂಡುವೆ ? ಬಯಲಲ್ಲಿರ್ಪ ಗುಣಗಳಂ ನಾನು ಕೊಂಡು, ಪೃಥ್ವಿಯಲ್ಲಿರ್ಪ ಗುಣಂಗಳಂ ನಿನಗೆ ಕೊಟ್ಟು, ಅಲ್ಲಿ ಬಂದ ನಿರ್ವಾಣಸುಖಲಾಭವನ್ನು ಪಡೆದರೆ ನೀನು ಮೆಚ್ಚುವೆ ನಾನು ಬದುಕುವೆ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಹೊರಗೊಳಗೆ ನಾನು ನೀನಾದ ಬಳಿಕ ಪೃಥ್ವಿಯಲ್ಲಿ ಭಾವಶುದ್ಧವಾಯಿತ್ತು, ಅಪ್ಪುವಿನಲ್ಲಿ ಮನಶುದ್ಧವಾಯಿತ್ತು, ಅಗ್ನಿಯಲ್ಲಿ ಚಿತ್ತಶುದ್ಧವಾಯಿತ್ತು, ವಾಯುವಿನಲ್ಲಿ ಪ್ರಾಣಶುದ್ಧವಾಯಿತ್ತು, ಆಕಾಶದಲ್ಲಿ ಜ್ಞಾನಶುದ್ಧವಾಯಿತ್ತು, ಆತ್ಮನಲ್ಲಿ ಅರಿವು ಶುದ್ಧವಾಯಿತ್ತು. ಇದು ಕಾರಣ ಶುದ್ಧಸಿದ್ಧಪ್ರಸಿದ್ಧ ಪ್ರಭುವಿನಲ್ಲಿ ಭಕ್ತಿ ಶುದ್ಧವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಕಾಶದಲ್ಲಿ ತೋರಿದ ಇಂದ್ರಧನು ಅಡಗುವುದಕ್ಕೆ ಆಕಾಶವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಗಾಳಿಯಲ್ಲಿ ತೋರಿದ ಸುಳಿಗಾಳಿ ಅಡಗುವುದಕ್ಕೆ ಆ ಗಾಳಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಅಗ್ನಿಯಿಂದ ತೋರಿದ ಕಿಡಿಗಳು ಅಡಗುವುದಕ್ಕೆ ಆ ಅಗ್ನಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಸಮುದ್ರದಲ್ಲಿ ತೋರಿದ ನೊರೆತೆರೆ ತುಂತುರ್ವನಿ ಅಡಗುವುದಕ್ಕೆ ಆ ಸಮುದ್ರವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಆದಿ ಅನಾದಿಯಿಂದತ್ತತ್ತಲಾದ ಮಹಾಘನವಸ್ತುವಿನಲ್ಲಿ ರೂಪಿಸಿ ತೋರಿದ ನಿಜೈಕ್ಯನಡಗುವುದಕ್ಕೆ ಆ ಪರವಸ್ತುವೆ ಆಶ್ರಯವಲ್ಲದೆ, ಬೇರೆ ಆಶ್ರಯವುಂಟೆ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಂಡೆ, ಆಕಾಶದಲ್ಲಿ ಒಂದು ಉಡುಪತಿಯ. ಅದು ಅರ್ಧ ನಿಜರೂಪು, ಅರ್ಧ ತಮರೂಪು. ಅದು ಜಗಕ್ಕೆ ಉಡುಪತಿ, ಎನಗದು ಸಮಧಿಪತಿ. ಅದರ ತೊಡಿಗೆಯ ಗಡಣ ಉಭಯಮಾರ್ಗ. ಅದರಸುವಿನ ಉಡುವ ಗಡಣವನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಇನ್ನಷ್ಟು ... -->