ಅಥವಾ

ಒಟ್ಟು 56 ಕಡೆಗಳಲ್ಲಿ , 20 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿದೆಹೆನೆಂಬನ್ನಬರ ಅಸಗೆ ನೀರಡಿಸಿ ಸತ್ತಂತಾಯಿತ್ತು. ಕಟ್ಟೋಗರವ ಹೊತ್ತು ಉಂಡೆಹೆ ಉಂಡೆಹೆನೆಂದು ಆಪ್ಯಾಯನವಡಸಿ ಸತ್ತಂತಾಯಿತ್ತು. ಅರಿದೆಹೆನೆಂದು ಕೇಳಿಹೇಳಿಹೆನೆಂಬನ್ನಬರ ಆತನು ಶಿಲೆಯ ರೇಖೆಯೆ ? ಬಯಲ ಬ್ರಹ್ಮವೆ ? ತಾನಳಿವುದಕ್ಕೆ ಮುನ್ನವೆ ಅರಿದು ಕೂಡಬೇಕೆಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಒಂದು ಪದದೊಳಗೆ ಎರಡೆಂಬತ್ತೆಂಟುಕೋಟಿ ಪದ ಹುಟ್ಟಿದವು ನೋಡಾ. ಆ ಎರಡೆಂಬತ್ತೆಂಟು ಕೋಟಿ ಪದದೊಳಗೆ ಅನೇಕ ಕಾಲುಗಳು ಹುಟ್ಟಿದವು ನೋಡಾ. ಆ ಅನೇಕ ಕಾಲುಗಳ ಮುರಿದು, ಎರಡೆಂಬತ್ತುಕೋಟಿ ಪದಗಳನಳಿದು, ಒಂದೆ ಪದದಲಿ ನಿಲಬಲ್ಲರೆ ಆತನು ಪರಶಿವ ಪದಸ್ಥನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಚಾರ ಪ್ರಾಣವಾದ ಬಳಿಕ ಅನಾಹತವಿದೆಂದರಿಯಬೇಕು. ಅನಾಹತವಿದೆಂದರಿದ ಬಳಿಕ ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿಯಬೇಕು. ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿದ ಬಳಿಕ ಸರ್ವವೂ ತಾನೆಯಾಗಿರಬೇಕು. ಸರ್ವವೂ ತಾನೆಯಾದ ಬಳಿಕ ಅಪ್ಪುದೊಂದರಿದುಂಟೆ? ಕಪಿಲಸಿದ್ಧಮಲ್ಲಿಕಾರ್ಜುನ ಆತನು ಸ್ವಾತಂತ್ರನಲ್ಲದೆ.
--------------
ಸಿದ್ಧರಾಮೇಶ್ವರ
ಪೃಥ್ವಿ ಅಂಗ, ಚಿತ್ತ ಹಸ್ತ, ನಾಸಿಕ ಮುಖ, ಗಂಧ ಪದಾರ್ಥ, ಆಚಾರಲಿಂಗಕರ್ಪಿತ ಭಕ್ತ. ಅಪ್ಪು ಅಂಗ, ಬುದ್ದಿ ಹಸ್ತ, ಜಿಹ್ವೆ ಮುಖ, ರುಚಿ ಪದಾರ್ಥ, ಗುರುಲಿಂಗಕರ್ಪಿತ ಮಹೇಶ್ವರ. ಅನಿಲ ಅಂಗ, ನಿರಹಂಕಾರ ಹಸ್ತ, ನೇತ್ರ ಮುಖ, ರೂಪು ಪದಾರ್ಥ, ಶಿವಲಿಂಗಕರ್ಪಿತ ಪ್ರಸಾದಿ. ಪವನ ಅಂಗ, ಮನ ಹಸ್ತ, ತ್ವಕ್ಕು ಮುಖ, ಸ್ಪರ್ಶ ಪದಾರ್ಥ, ಜಂಗಮಲಿಂಗಕರ್ಪಿತ ಪ್ರಾಣಲಿಂಗಿ. ವ್ಯೋಮ ಅಂಗ, ಜ್ಞಾನ ಹಸ್ತ, ಶ್ರೋತ್ರ ಮುಖ, ಶಬ್ದ ಪದಾರ್ಥ, ಪ್ರಸಾದಲಿಂಗಕರ್ಪಿತ ಶರಣ. ಹೃದಯ ಅಂಗ, ಭಾವ ಹಸ್ತ, ಅರ್ಥ ಮುಖ, ಪರಿಣಾಮ ಪದಾರ್ಥ, ಮಹಾಲಿಂಗಕರ್ಪಿತ ಐಕ್ಯ. ಇಂತೀ ಷಟ್‍ಸ್ಥಲವಳವಟ್ಟಾತನು ಪರಶಕ್ತಿಸ್ವರೂಪನು, ಆತನು ನಿಜಶಿವಯೋಗಸಂಪನ್ನನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮಾಹೇಶ್ವರನಾದಾತ ಮರಣಕ್ಕೊಳಗಾಗ, ಕರಣೇಂದ್ರಿಯಂಗಳಿಗೆ ಎಡೆಗುಡ. ಕಾಲ ಕಲ್ಪಿತನಲ್ಲ, ಕರ್ಮಕ್ಕೆ ವಿರಹಿತ. ಆತನು ತನು ಸಾಕ್ಷಾತ್ ಶಿವನ ತನು. ಆತ ನಿತ್ಯ ಕೇವಲ ಮುಕ್ತ, ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಮಾಹೇಶ್ವರನು.
--------------
ಸಿದ್ಧರಾಮೇಶ್ವರ
ಭಕ್ತಿಯುಳ್ಳವಂಗೆ ನಿಷ್ಠುರದ ಮಾತೇಕೆಂಬರು ನಾಲ್ಕರ ಮುಕ್ತಿಯ ಭಕ್ತರು. ನಿಷ್ಠೆವಂತರಿಗೆ ಇದೇ ಭಕ್ತಿ, ಅನಿತ್ಯವನರಿದ ನಿಶ್ಚಟಂಗೆ ಮಿಥ್ಯವನಾರಾದಡೂ ನುಡಿಯಲಿ, ಸತ್ಯವಿದ್ದ ಮತ್ತೆ. ಕಲ್ಲಿನ ಮನೆಯಲ್ಲಿದ್ದವಂಗೆ ದಳ್ಳುರಿ ಬಿದ್ದಡೇನು ? ಇವರೆಲ್ಲರ ಬಲ್ಲತನಕ್ಕಂಜಿ ನಾನೊಳ್ಳಿಹನೆಂದಡೆ, ಆತನು ಎಲ್ಲಿಗೆ ಯೋಗ್ಯ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಹಸಿವು ತೃಷೆ ವಿಷಯ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾದಿಯಾದ ತನುಗುಣಂಗಳು ದೇವ ದಾನವ ಮಾನವರಂತೆ ಆದಡೆ, ಲಿಂಗವಂತನೆಂಬ ಪರಿಯೆಂತಯ್ಯಾ? ತನುಗುಣಂಗಳು ಭೂತದೇಹಿಗಳಂತಾದಡೆ ಲಿಂಗದೇಹಿಕನೆಂಬ ಪರಿಯೆಂತಯ್ಯಾ? ಲಿಂಗಚಿಹ್ನವಿಲ್ಲದಡೆ ಲಿಂಗದೇಹಿಯೆಂಬ ಪರಿಯೆಂತಯ್ಯಾ? ಹಸಿವು ತೃಷೆ ವಿಷಯ ವ್ಯಸನವಡಗಿದಡೆ ಲಿಂಗಚಿಹ್ನೆ. ಕ್ರೋಧ ಲೋಭ ಮೋಹ ಮದ ಮತ್ಸರ ಇವಾದಿಯಾದ ದೇಹಗುಣಂಗಳಳಿದಡೆ ಲಿಂಗಚಿಹ್ನೆ. ದೇಹಗುಣಭರಿತನಾಗಿ ಲಿಂಗದೇಹಿ ಎಂದಡೆ, ಲಿಂಗವಂತರು ನಗುವರಯ್ಯಾ. ಅಂಗಗುಣವಳಿದು ಗುರುಲಿಂಗಜಂಗಮದಲ್ಲಿ ತನು ಮನ ಧನ ಲೀಯವಾದಡೆ ಆತನು ಸರ್ವಾಂಗಲಿಂಗಿಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇದು ಕಾರಣ, ಸರ್ವಾಂಗೋದ್ಧೂಳನವೆ ಅದ್ಥಿಕ ನೋಡಾ. ಆತನ ರೋಮರೋಮಂಗಳೆಲ್ಲವು ಲಿಂಗಮಯ ನೋಡಾ. ಆತನು ಪವಿತ್ರಕಾಯನು ನೋಡಾ. ಆತನು ಸ್ವಯಂಜ್ಯೋತಿಸ್ವರೂಪನು ನೋಡಾ. ಆತನು ಶುದ್ಧ ನಿರ್ಮಲನು ನೋಡಾ. ಆ ಪರಶಿವಸ್ವರೂಪಂಗೆ ನಮೋನಮೋ ಎಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದಯ ಮಧ್ಯಾಹ್ನ ಅಸ್ತಮಾನವೆಂಬ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬರು. ಉದಯವಾವುದು ? ಮಧ್ಯಾಹ್ನವಾವುದು ? ಅಸ್ತಮಾನವಾವುದು ? ಬಲ್ಲವರು ನೀವು ಹೇಳಿರೆ. ಕಾಯದ ಉದಯವೊ ? ಕಾಯದ ಮಧ್ಯಾಹ್ನವೊ ? ಕಾಯದ ಅಸ್ತಮಾನವೊ ? ಕಾಯದ ಉದಯ ಬಲ್ಲಾತ ಕರ್ಮಿ, ಕಾಯದ ಮಧ್ಯಾಹ್ನವ ಬಲ್ಲತ ಪ್ರಪಂಚಿ, ಕಾಯದ ಅಸ್ತಮಾನವ ಬಲ್ಲಾತ ವಿರಕ್ತ. ಜೀವದ ಉದಯವೊ ? ಜೀವದ ಮಧ್ಯಾಹ್ನವೊ ? ಜೀವದ ಅಸ್ತಮಾನವೊ ? ಜೀವದ ಉದಯವ ಬಲ್ಲಾತ ಜ್ಞಾನಿ, ಜೀವದ ಮಧ್ಯಾಹ್ನವ ಬಲ್ಲಾತ ಜಾತಿಸ್ಮರ, ಜೀವದ ಅಸ್ತಮಾನ ಬಲ್ಲಾತ ಜೀವನ್ಮುಕ್ತ ಲಿಂಗದ ಉದಯ, ಲಿಂಗದ ಮಧ್ಯಾಹ್ನ, ಲಿಂಗದ ಅಸ್ತಮಾನ- ಇಂತೀ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬಲ್ಲಡೆ ಕೂಡಲಚೆನ್ನಸಂಗಮದೇವರಲ್ಲಿ ಆತನು ಅನವರತ ಲಿಂಗಾರ್ಚನಾಪರನು.
--------------
ಚನ್ನಬಸವಣ್ಣ
ಶಿವಜ್ಞಾನೋದಯವಾದ ಭಕ್ತನ ಪೂರ್ವಾಶ್ರಯವಳಿದು ಭಕ್ತನಾಗಬೇಕೆಂಬಿರಿ. ಭವಿಗೆ ಪೂರ್ವಾಶ್ರಯವಲ್ಲದೆ ಭಕ್ತಂಗೆ ಪೂರ್ವಾಶ್ರಯವುಂಟೆ? ಇಲ್ಲವಾಗಿ. ``ಅಜ್ಞಾನಂ ಪೂರ್ವಮಿತ್ಯಾಕಹುರ್ಭವೋSನಾದಿಸ್ಥಲಾಶ್ರಯಃ| ಸರ್ವಂ ನಿರಸಿತವ್ಯಂ ಚ ಪ್ರಯತ್ನೇನ ವಿಪಶ್ಚಿತಾ' ಎಂದುದಾಗಿ, ಮಲ ಮಾಯಾ ಸಂಸಾರದಲ್ಲಿ ಮರಳಿ ಮರಳಿ ಬಪ್ಪಾತನೆ ಭವಿ. ಸಂಸಾರವಳಿದು, ನಿಜವುಳಿದು ಗುರು ಲಿಂಗ ಜಂಗಮಕ್ಕೆ ಮಾಡುವ ಭಕ್ತಂಗೆ ಭವವಿಲ್ಲ. ಆತನು ಜೀವನ್ಮುಕನಾಗಿಹನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಪರುಷ ಸೋಂಕಲು ಅವಲೋಕದ ಗುಣ ಕೆಟ್ಟು ಚಿನ್ನವಾಗದಿಹುದೆ? ಹಲವು ತೃಣಂಗಳೆಲ್ಲವು ಅಗ್ನಿಯ ಮುಟ್ಟಲು ಭಸ್ಮವಾಗದಿಹವೆ? ಹಳ್ಳಕೊಳ್ಳದ ನೀರೆಲ್ಲಾ ಬಂದು ಅಂಬುಧಿಯನೆಯ್ದಿ ಅಂಬುಧಿಯಪ್ಪುದು ತಪ್ಪದು ನೋಡಾ. ಹಲವು ವರ್ಣದ ಪದಾರ್ಥವನೆಲ್ಲವ ತಂದು ಶಿವಲಿಂಗಾರ್ಪಣವ ಮಾಡಲು ಆ ಪದಾರ್ಥದ ಪೂರ್ವಾಶ್ರಯವಳಿದು ಪ್ರಸಾದವಪ್ಪುದು ತಪ್ಪದು ನೋಡಾ. ಆ ಪ್ರಸಾದವ ಕೊಂಬ ಪ್ರಸಾದಿ ಪವಿತ್ರಕಾಯನು ನೋಡಾ. ಆತನು ಶುದ್ಧ ನಿರ್ಮಲನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಡೆಯರು ಭಕ್ತರು ತಾವೆಂದು ಅಡಿಮೆಟ್ಟಿ ಹೋಹಲ್ಲಿ ತಡೆಯಿತು ಶಕುನವೆಂದುಳಿದಡೆ, ಕಾಗೆ ವಿಹಂಗ ಮಾರ್ಜಾಲ ಮರವಕ್ಕಿ ಗರ್ದಭ ಶಶಕ ಶಂಕೆಗಳು ಮುಂತಾದ ಸಂಕಲ್ಪಕ್ಕೊಳಗಾದಲ್ಲಿ ವ್ರತಕ್ಕೆ ಭಂಗ, ಆಚಾರಕ್ಕೆ ದೂರ. ಅದೆಂತೆಂದಡೆ: ಅಂಗಕ್ಕೆ ಆಚಾರವ ಸಂಬಂಧಿಸಿ, ಮನಕ್ಕೆ ಅರಿವು-ಅರಿವಿಂಗೆ ವ್ರತವ ಮಾಡಿದಲ್ಲಿ, ಬೇರೊಂದು ಪರಿಹರಿಸುವ ನಿಮಿತ್ತವುಂಟೇರಿ ಇಂತೀ ಸತ್ಕ್ರಿಯಾವಂತಗೆ ಕಷ್ಟಜೀವದ ಲಕ್ಷದಲ್ಲಿ ಚಿತ್ತ ಮೆಚ್ಚಿಹನ್ನಕ್ಕ ಆತನು ಆಚಾರಭ್ರಷ್ಟ, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಬೆಳಕಿನ ಕಳೆಯಲ್ಲಿ. ನಾಗವಾಯುವ ನಿಲಿಸಿದರು ಸುಚಿತ್ತ ಸುಬುದ್ಧಿ ಸುಗೋಷಿ*ಯ ಸುಜ್ಞಾನದ ಬೆಳಗಿನ ಕಳೆಯೊಡನೆ ಸುಳಿದಾಡುವ ಮಹಾಲಿಂಗವಂತರ ಅನುಭಾವದಲ್ಲಿ. ಕೂರ್ಮವಾಯುವ ನಿಲಿಸಿದರು, ಶಿವಶ್ರುತಿ ಶಿವಮಂತ್ರ ಷಡಕ್ಷರಿ ಬೀಜಂಗಳ ಜಪಿಸುವಲ್ಲಿ. ಕೃಕರ ವಾಯುವ ನಿಲಿಸಿದರು ಚತುರ್ವಿಧ ಪುರುಷಾರ್ಥಂಗಳ ಕಳೆದು ಷಡ್ವಿಧ ದಾಸೋಹ ಭಕ್ತರತಿಯಾನಂದ ಸೂಕ್ಷ್ಮಸಂಬಂಧದ ಕೂಟದಲ್ಲಿ ತೆರಹಿಲ್ಲದ ತನ್ನ ತಾನರಿವಲ್ಲಿ. ದೇವದತ್ತವಾಯುವ ನಿಲಿಸಿದರು ಶಿವಲಿಂಗವೆ ಲಿಂಗ ಶಿವಭಕ್ತರೆ ಕುಲಜರು, ಶಿವಾಗಮವೆ ಆಗಮ, ಶಿವಾಚಾರವೆ ಆಚಾರವೆಂಬ ಏಕೋಭಾವದ ನಿಷೆ*ಯಿಂದ ಭಾಷೆಯ ನುಡಿದು ದೃಢವಿಡಿದು ಅನ್ಯವ ಜರಿವಲ್ಲಿ. ಧನಂಜಯ ವಾಯುವ ನಿಲಿಸಿದರು, ಅನಂತ ಪರಿಯಲ್ಲಿ ಧಾವತಿಗೊಂಡು ಕಾಯಕ್ಲೇಶದಿಂದ ತನು ಮನ ಬಳಲಿ ಗಳಿಸಿದಂತಹ ಧನವ ಅನರ್ಥವ ಮಾಡಿ ಕೆಡಿಸದೆ, ಲಿಂಗಾರ್ಚನೆಯ ಮಾಡಿ ಗುರುಲಿಂಗಜಂಗಮವೆಂಬ ತ್ರಿವಿಧ ದಾಸೋಹದ ಪರಿಣಾಮದಲ್ಲಿ, ಈ ದಶವಾಯುಗಳ ಪ್ರಯತ್ನಕ್ಕೆ ಧ್ಯಾನ ಗಮನ ಸಂಗ ಸುಬುದ್ಧಿ ನಿರ್ಗುಣ ತಮಂಧ ಕೋಪ ಚಿಂತೆ ಎಂಬಿವನರಿದು, ದುಶ್ಚಿತ್ತವ ಮುರಿದು, ಅಹಂಕಾರವಳಿದು, ದಶವಾಯುಗಳ ದಶಸ್ಥಾನದಲ್ಲಿ ನಿಲಿಸಿ ಭಕ್ತರಾಗಬೇಕು ಕಾಣಿರೆ, ಎಲೆ ಅಣ್ಣಗಳಿರಾ ! ಅಲ್ಲಲ್ಲಿ ಇವರ ಓತು, ಭರವ ಕೆಡಿಸಿ ತಗ್ಗಲೊತ್ತಿ, ಮೇಲೆ ತಲೆಯೆತ್ತಲೀಯದೆ ದಶವಾಯುಗಳ ದಶಸ್ಥಾನದಲ್ಲಿ [ನಿಲಿಸಿ] ದಶಾವಸ್ಥೆಯಿಂದ ಲಿಂಗವನೊಲಿಸಿದ ಮಹಾಮಹಿಮನ ಮಸ್ತಕವೆ ಶ್ರೀಪರ್ವತ, ಲಲಾಟವೆ ಕೇತಾರವೆನಿಸುವುದು. ಆತನ ಹೃದಯದಲ್ಲಿ ಅಷ್ಟಷಷ್ಟಿ ತೀರ್ಥಂಗಳಿಪ್ಪವು. ಆತನ ಶ್ರೀಪಾದ ವಾರಣಾಸಿ ಅವಿಮುಕ್ತಕ್ಷೇತ್ರದಿಂದ ವಿಶೇಷ. ಆತನ ಪಾದಾಂಗುಷ*ಕ್ಕೆ ಸಮಸ್ತ ತೀರ್ಥಕ್ಷೇತ್ರ ಸಪ್ತಸಮುದ್ರಂಗಳ ತಿರುಗಿ ಮಿಂದ ಒಂದು ಕೋಟಿ ಫಲ ಸರಿಯಲ್ಲ. ಆತನು ಸತ್ಯವೆಂಬ ವೃಕ್ಷವನೇರಿ, ನಿಷೆ*ಯೆಂಬ ಕೊನೆಯ ಹಿಡಿದು ಪರಬ್ರಹ್ಮವೆಂಬ ಫಲವ ಸುವಿವೇಕದಿಂದ ಸವಿದು ಸುಖಿಯಾಗಿರ್ಪನಾಗಿ, ಆತನು ಪುಣ್ಯಪಾಪವೆಂಬೆರಡರ ಸುಖದುಃಖದವನಲ್ಲ; ಗತಿ ಅವಗತಿಯೆಂಬೆರಡರ ಮತಿಗೇಡಿಯಲ್ಲ; ಧರ್ಮ ಕರ್ಮವೆಂಬೆರಡರ ಭ್ರಮೆಯವನಲ್ಲ; ಆತನ ನಿಲವು ಪುಷ್ಪ ನುಂಗಿದ ಪರಿಮಳದಂತೆ, ಆಲಿಕಲ್ಲು ನುಂಗಿದ ಅಪ್ಪುವಿನಂತೆ, ಅಗ್ನಿ ಆಹುತಿಗೊಂಡ ಘೃತದಂತೆ, ಕಬ್ಬುನವುಂಡ ನೀರಿನಂತೆ, ಉರಿಯುಂಡ ಕರ್ಪುರದಂತೆ ! ಆತಂಗೆ ತೋರಲೊಂದು ಪ್ರತಿಯಿಲ್ಲ, ಎಣೆಯಿಲ್ಲ. ಆತ ನಿತ್ಯ ನಿರಂಜನ ಚಿನ್ಮಯ ಚಿದ್ರೂಪ ನಿಶ್ಚಿಂತ ನಿರಾಳನಯ್ಯಾ. ಕೂಡಲಚೆನ್ನಸಂಗಮದೇವಾ, ನಿಮ್ಮ ಪ್ರಾಣಲಿಂಗ ಸಂಬಂಧಿಯ ನಿಲವು ಮಹವ ನುಂಗಿದ ಬಯಲೊ !
--------------
ಮಾರುಡಿಗೆಯ ನಾಚಯ್ಯ
ಕಕ್ಷೆ ಕರಸ್ಥಲ ಉತ್ತಮಾಂಗ ಉರಸೆಜ್ಜೆ ಅಂಗಸೋಂಕು ಅಮಳೋಕ್ಯವೆಂಬುದ ನಾನು ಮನದಲ್ಲಿ ಅರಿಯದಂದು, ಭಾವ ನಿರ್ಭಾವವೆಂಬುದನರಿದು ಆಯತ ಸ್ವಾಯತವ ಮಾಡಲ್ಕೆ ಬಂದ ಪದಾರ್ಥವು ಲಿಂಗಮುಖದಲ್ಲಿ ಅರ್ಪಿತವಾಗದೆಂದು, ಜಂಗಮಮುಖದಲ್ಲಿ ಬಂದ ಪದಾರ್ಥವಲ್ಲದೆ ಅರ್ಪಿತವಾಗದೆಂದು, ಆ ಜಂಗಮವನೆನ್ನ ಮನದಲ್ಲಿ ನೆನೆದುಕೊಂಡು ಆ ಜಂಗಮದಾಸೋಹಕ್ಕೆ ಎನ್ನ ಮನವು ವೇದ್ಯವಾದಲ್ಲಿ ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದರಿದಲ್ಲಿ, ಲಿಂಗವೂ ಹುಸಿ, ಜಂಗಮವೂ ಹುಸಿಯೆಂದು ಪರವಾದಿ ಬಿಜ್ಜಳನು ಸಂ[ವಾ]ದಿಸುವಲ್ಲಿ, ಅವರನು ಆದಿಗಣೇಶ್ವರನೆಂದರಿಯದೆ ತರ್ಕಿಸುವಲ್ಲಿ, ಅವನೆನ್ನ ಭಕ್ತಿಗೆ ಒರೆಗಲ್ಲಾದಲ್ಲಿ, ಆತನು ಭಕ್ತಿಯ ಪಥವಲ್ಲೆಂಬುದ, ನಾನಹುದೆಂಬುದ - ಈ ಎರಡನೂ ನೀನು ಸೂತ್ರಧಾರಿಯಾಗಿ ಆಡಿಸುವಲ್ಲಿ, ಶಿವಭಕ್ತಿಯ ಮುಖ ಮುಸುಕು ತೆಗೆವಲ್ಲಿ, ಮೂವತ್ತಾರು ಕೊಂಡೆಯವ ಪರಿಹರಿಸಿ ಎಂಬತ್ತೆಂಟು ಪವಾಡವ ಮೆರೆವಲ್ಲಿ, ಮುನ್ನೂರರುವತ್ತು ಸತ್ತ ಪ್ರಾಣವನೆತ್ತುವಲ್ಲಿ ಅಂದು ನೀನೇನಾಗಿರ್ದೆ ಹೇಳಾ, ಕೂಡಲಸಂಗಮದೇವಾ.
--------------
ಬಸವಣ್ಣ
ಅಕುಲಜ ಅಧಮ ಮೂರ್ಖನಾದಡಾಗಲಿ ಮುಕ್ಕಣ್ಣ ಹರನ ಭಕ್ತಿಯ ಹಿಡಿದಾತನು ಸಿಕ್ಕಬಲ್ಲನೇ ಯಮನಬಾಧೆಗೆ ? ಆತನು ದೇವ ದಾನವ ಮಾನವರೊಳಗೆ ಪೂಜ್ಯನು ನೋಡಾ ! ಅದೆಂತೆಂದೊಡೆ :ಶಿವಧರ್ಮೇ- ``ಅಂತ್ಯಜೋ ವಾಧಮೋ ವಾಪಿ ಮೂರ್ಖೋ ವಾ ಪಂಡಿತೋಪಿ ವಾ | ಶಿವಭಾವಂ ಪ್ರಪನ್ನಶ್ಚೇತ್ ಪೂಜ್ಯಸ್ಸರ್ವೈ ಸ್ಸುರಾಸುರೈಃ ||'' ಎಂದುದಾಗಿ, ಶಿವಭಕ್ತನೇ ಶ್ರೇಷ*ನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->