ಅಥವಾ

ಒಟ್ಟು 45 ಕಡೆಗಳಲ್ಲಿ , 18 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರುಠಾವಿನ ಬೆಂಕಿ ಮುಂದುವರಿದುರಿವ ಅರಣ್ಯದೊಳಗೊಬ್ಬ ಸೂಳೆ ಆರಾರ ಉಳ್ಳವರನೊತ್ತೆಯ ಕೊಳ್ಳುತ್ತ ತನ್ನ ಸುಖವ ತೋರುತ್ತ ನಗಿಸುತ್ತ, ದುಃಖವನುಣಿಸುತ್ತಲಳಿಸುತ್ತ ಬಗೆ ಬಗೆ ಬಣ್ಣತೆಯ ತೊಡಿಸಿ, ಕುಣಿಸುವ ಕುವರಿಯ ಕಾಲದೊಡರಿನೊಳಿರ್ದು ಹಿರಿಯರೆನಿಸಿಕೊಂಬ ಕುರಿಮಾನವರ ನೋಡಿ ಮರುಗುತಿರ್ದೆನು ಕಾಣಾ ನಿರಂಜನ ಚನ್ನಬಸಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಯಲೇ ಅಂಗವಾದ ಶರಣಂಗೆ ನಿರ್ವಯಲೇ ಲಿಂಗವಾಗಿ ತೋರುತಿಪ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ಆರು ಮೂರ್ತಿಗಳು ಆರಾರ ಲಿಂಗಾರ್ಚನೆಯ ಮಾಡುತಿಪ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೇರೊಂದು ಸ್ಥಾನದಲ್ಲಿ ಒಬ್ಬ ಸತಿಯಳು ನಿಂದು, ಮೂವರ ನುಂಗಿ, ಜೋಗುಳವ ಪಾಡುತಿಪ್ಪಳು ನೋಡು. ಆಕೆಯ ಬಸುರಲ್ಲಿ ಆರುಮಂದಿ ಮಕ್ಕಳು ಹುಟ್ಟಿ ಆರಾರ ಲಿಂಗಾರ್ಚನೆಯ ಮಾಡಿ ಪರಿಪೂರ್ಣಲಿಂಗದೊಳು ಕೂಡಿ, ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಅರಿವಿಂಗೆ ಅರಿವಾಗಿ, ತೆರಹಿಲ್ಲದಿರ್ದ ಘನವ, ಒಮ್ಮೆ ಆಹ್ವಾನಿಸಿ ನೆನೆದು, ಒಮ್ಮೆ ವಿಸರ್ಜಿಸಿ ಬಿಟ್ಟಿಹೆನೆಂದಡೆ ತನ್ನಳವೇ? ಪರಿಪೂರ್ಣ ಪರಶಿವನು, ಆರಾರ ಭಾವಕಲ್ಪನೆ ಹೇಗೆ ಹೇಗೆತೋರಿತೆಂದಡೆ ತೋರಿದಂತೆ, ಖಂಡಿತನಹನೇ ಆಗಲರಿಯನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಅಸ್ಥಿ ಮಾಂಸ ಶುಕ್ಲ ಶೋಣಿತವುಳ್ಳನ್ನಕ್ಕ ಆರಿಗೂ ಅದಿವ್ಯಾದ್ಥಿಯ ತಾಪತ್ರಯದ ತನುತ್ರಯದ ಕೂಟಸ್ಥ ಬಿಡದು. ರೋಗವನರಿದು ವೈದ್ಯವ ಮಾಡಿಹೆನೆಂದಡೆ, ತನು ಪ್ರಮಾಣು, ಪೈತ್ಯಪ್ರಮಾಣು, ವಾತಪ್ರಮಾಣು, ಶ್ಲೇಷ್ಮಪ್ರಮಾಣು, ಆತ್ಮತತ್ವಪ್ರಮಾಣು, ಚಂದ್ರ ಸೂರ್ಯ ಬಿಂದು ಪ್ರಮಾಣು, ಮಿಕ್ಕಾದ ಸರ್ವಾಂಗ ಪ್ರಮಾಣ ಹೇಳಿಹೆನೆಂದಡೆ, ಮರೀಚಿಕಾಜಲದಂತೆ, ಸುರಚಾಪದಂತೆ, ಆಕಾಶದ ಪರಿಬಣ್ಣದಂತೆ, ಇಂತೀ ಶರೀರದ ತೆರ. ಅಲ್ಪಾಂತರ ತಿರುಗುವನ್ನಕ್ಕರ ಶರೀರ ಸಿಕ್ಕುಹುದಲ್ಲದೆ, ಮತ್ತೆಯೂ ಆತ್ಮನ ಕಟ್ಟಿಕೊಂಡಿಹೆನೆಂದಡೆ ಸತ್ವವುಂಟೆ ? ವ್ಯಾದ್ಥಿಯಲ್ಲಿ ಹೊಂದುವ ತೆರನಾದಡೆ, ಬ್ರಹ್ಮಂಗೆ ಸೃಷ್ಟಿಯಿಲ್ಲ, ವಿಷ್ಣುವಿಂಗೆ ಸ್ಥಿತಿ ಇಲ್ಲ, ರುದ್ರಂಗೆ ಲಯವಿಲ್ಲ. ಇಂತೀ ಕರ್ಮಕಾಂಡದಲ್ಲಿ ಪ್ರಾಪ್ತಿ, ವರ್ಮಕಾಂಡದಲ್ಲಿ ಸರ್ವ, ಜ್ಞಾನಕಾಂಡದಲ್ಲಿ ತ್ರಿವಿಧವಳಿದ ಮಹದೊಡಗೂಟ. ಇಂತೀ ಜಗದಲ್ಲಿ ಒಂದನಹುದು, ಒಂದನಲ್ಲಾ ಎಂದಡೆ, ಅಮೃತಕ್ಕೂ ಸುರಾಪಾನಕ್ಕೂ ಸರಿಯೆಂದು ಮಾರುವನ ತೆರದಂತೆ, ಆರಾರ ತೆರನನು ನೋಡಿ ಸುಖಿಯಾಗಿ, ತನ್ನನರಿವರಲ್ಲಿ ಮನಮುಕ್ತವಾಗಿ ಉಭಯವಳಿದು ಒಡಗೂಡಬೇಕು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಕಳುಹಿದಂತೆ ಮಾಡಿ, ಭಕ್ತಿಗೆ ಖೋಡಿ ಇಲ್ಲದೆ ಸತ್ಯವನೊಡಗೂಡಬೇಕು.
--------------
ವೈದ್ಯ ಸಂಗಣ್ಣ
ಆರಾರ ಸಂಗವೇನೇನ ಮಾಡದಯ್ಯಾ ಕೀಡೆ ಕೊಂಡಲಿಗನಾಗದೆ ಅಯ್ಯಾ ಚಂದನದ ಸನ್ನಿಧಿಯಲ್ಲಿ ಪರಿಮಳ ತಾಗಿ ಬೇವು, ಬೊಬ್ಬುಲಿ, ತರಿಯ ಗಂಧಂಗಳಾಗವೆ ನಮ್ಮ ಕೂಡಲಸಂಗನ ಶರಣರ ಸನ್ನಿಧಿುಂದ ಕರ್ಮ ನಿರ್ಮಳವಾಗದಿಹುದೆ 141
--------------
ಬಸವಣ್ಣ
ಆರು ಚಕ್ರಂಗಳಲ್ಲಿ ಆರು ಮೂರ್ತಿಗಳು ಆರಾರ ಲಿಂಗಾರ್ಚನೆಯ ಮಾಡಿ, ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ನಿಶ್ಚಿಂತ ನಿರಾಕುಳ ನಿರ್ಭರಿತನಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರಾರ ನೇಮಕ್ಕೆ ಸಂದಿತ್ತು, ಇಚ್ಛಾಭೋಜನಕ್ಕೆ ಕೃತ್ಯವಾಯಿತ್ತು. ಮನಘನದೊದಗ ಕಂಡೆಯಾ ಸಂಗನಬಸವಣ್ಣಾ, ಗುಹೇಶ್ವರಲಿಂಗಕ್ಕೆ ಆಶ್ಚರ್ಯವಾಯಿತ್ತು.
--------------
ಅಲ್ಲಮಪ್ರಭುದೇವರು
ಜೀವನೆಂಬ ಅಳತದ ಕೋಲಿನಲ್ಲಿ ಭಾವಜ್ಞ ನಾನಾದೆನೆಂಬವರೆಲ್ಲರೂ ಅಳತಕ್ಕೆ ಸಂದು ಹೊರಳಿ ಮರಳುತೈದಾರೆ. ಸರ್ವಸಂಗ ಪರಿತ್ಯಾಗವ ಮಾಡಿದೆನೆಂಬ ಅರುಹಿರಿಯರೆಲ್ಲರೂ ತಥ್ಯಮಿಥ್ಯವೆಂಬ ಕೋಲಿನಲ್ಲಿ ಅಳತೆಗೊಳಗಾಗುತೈದಾರೆ. ಹಿಂದಕೊಂದು ಕುರುಹಿಲ್ಲ, ಮುಂದಕೊಂದು ಲಕ್ಷ ್ಯವಿಲ್ಲಾ ಎಂದು ಹಿಂಗಿ ನುಡಿದು, ನಾವು ನಿರಂಗಿಗಳೆಂದು ಅಂಗವ ಹೊತ್ತು ತಿರುಗಾಡುವರೆಲ್ಲರು ಬಂಧ ಮೋಕ್ಷ ಕರ್ಮಂಗಳಿಂದ ಅಂಗಳ ಬಾಗಿಲ ವಾಸಂಗಳಲ್ಲಿ ಬಾ ಹೋಗೆನಿಸಿಕೊಂಬ ನಿಂದೆಯ ಕೋಲಿನಲ್ಲಿ ಅಳತಕ್ಕೊಳಗಾಹರೆಲ್ಲರು ಸರ್ವಾಂಗಲಿಂಗಿಗಳಪ್ಪರೆ? ಇದರಂದವ ತಿಳಿದು ಆರಾರ ಇರವು ಅವರಿರವಿನಂತೆ. ತಾವಾಗಿ ಅರಿದವರಲ್ಲಿ ಅರುಹಿಸಿಕೊಂಬನ್ನಕ್ಕ ಅವರೊಡಗೂಡಿ ಅವರು ತನ್ನನರಿದ ಮತ್ತೆ ಆ ಅರಿಕೆಯ ತೆರ ತಾನೆಂಬುದನೆ ಪ್ರಮಾಣಿಸಿ ಪಕ್ಷವಾಹನ್ನಕ್ಕ ತೊಟ್ಟಿನೊಳಗಿಪ್ಪ ಫಲದ ತೆರನಂತೆ ಈ ದೃಷ್ಟ ತನ್ನಷ್ಟವಹನ್ನಕ್ಕ ತನ್ನ ಕಣ್ಣಿನಿಂದ ಕನ್ನಡಿಯ ನೋಡಿ ತನ್ನ ತಾನೆ ಅರಿವುದು ಕಣ್ಣೋ ಕನ್ನಡಿಯೋ? ಕನ್ನಡಿಯೆಂದಡೆ ಅಂಧಕಂಗೆ ಪ್ರತಿರೂಪಿಲ್ಲ. ಇದು ಕಾರಣದಲ್ಲಿ ಅವರರಿವ ತಾನರಿದು ತನ್ನರಿವ ಅವರರಿದು ಉಭಯದರಿವು ಒಡಗೂಡುವನ್ನಕ್ಕ ಹಿಂದಣ ಕುರುಹು ಮುಂದಣ ಲಕ್ಷ ್ಯವ ವಿಚಾರಿಸಿ ಮರೆಯಬೇಕು ಧಾರೇಶ್ವರಲಿಂಗನ ಕೂಡಬಲ್ಲಡೆ.
--------------
ಕಾಮಾಟದ ಭೀಮಣ್ಣ
ಕೂಗುವ ಕೋಗಿಲೆಯ ಒಡಲಲ್ಲಿ ಇಪ್ಪತ್ತೈದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೊಬ್ಬ ಪೂಜಕ ನಿಂದು ಆರಾರ ಲಿಂಗಾರ್ಚನೆಯ ಮಾಡಿ ನಿರ್ವಿಕಾರನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೈಲ ಬ್ರಹ್ಮವು ತನ್ನ ಬೈಲಿನೊಳಗೆ ತಾನೆ ಬೈಲುರೂಪವಾಗಿ ಬೈಲಾದುದು ತಾನೆ | ಪಲ್ಲ | ಜಾರನೋರ್ವಗೆ ಸುತರು ನೂರೆಂಟು ಹುಟ್ಟಿಹರು ಚೋರತನಕ್ಕೆ ಬಿದ್ದು ಹೋರುವ ತಾನೆ ಚೋರತನಕೆ ಬಿದ್ದು ಹೋರುವ ಮಕ್ಕಳ ಜಾರ ತಾ ಕೊಂದು ಅಳಿವನು ತಾನೆ. | 1 | ಪುಂಡಪುಂಡರು ಕೂಡಿ ದಂಡೆತ್ತಿ ಬರುವರು ಕಂಡಕಂಡ್ಹಂಗೆ ಕಡಿದಾಡಿ ತಾನೆ. ಕಂಡಕಂಡ್ಹಂಗೆ ಕಡಿದಾಡಿ ಆ ದಂಡು ಬಂಡಾಟವಾಗಿ ಹೋಗುದು ತಾನೆ. | 2 | ಇರವಿಯ ದಂಡೆದ್ದು ಧರೆಯೆಲ್ಲ ಮುತ್ತುವುದು ನರರಿರುವುದಕ್ಕೆ ನೆಲೆಯಿಲ್ಲ ತಾನೆ. ನರರಿರುವುದಕ್ಕೆ ನೆಲೆಯಿಲ್ಲದಂತಾಗಿ ಧರೆ ಉರಿದಿರಿವಿ ಅಳಿವುದು ತಾನೆ. | 3 | ಇದ್ದ ದೈವಗಳೆಲ್ಲ ಬಿದ್ದುರುಳಿ ಹೋದಾವು ಸುದ್ದಿ ಕೇಳೋರ್ವ ಬರುವನು ತಾನೆ ಸುದ್ದಿ ಕೇಳೋರ್ವ ಬಂದು ತಾ ಮಾಡಿದ ಬುದ್ಧಿಂದ ಸೀಮಾ ನೇಮವು ತಾನೆ. | 4 | ಮಾಡಿದ ನೇಮ ಸೀಮಾ ಮಾಡಿದಂತಿರದೆ ತಾ ಕೂಡೋದು ಜಾತಿಸಂಕರ ತಾನೆ ಕೂಡೋದು ಜಾತಿಸಂಕರವಾಗಲು ರೂಢಿಯೊಳಗೆ ಮಹಾಶ್ಚರ್ಯವು ತಾನೆ. | 5 | ಹಿಂದೆ ಬಸವರಾಜ ಬಂದು ತೋರಿದ ಮಹತ್ವಕ್ಕೆ ಅಂದೇ ಆಯಿತು ವಿಘ್ನ ಪ್ರಮಥರಿಗೆ ತಾನೆ ಅಂದಾದ ವಿಘ್ನಕ್ಕೆ ಪ್ರಮಥರು ತಾವೆಲ್ಲಾ ಮುಂದಾಗುವದು ಸೂಚಿಸಿದರು ತಾನೆ. | 6 | ಮುಂದಾದುದು ತಾನೆ ಮುಂದೇನಾಗುವದು ಅದ ರಂದವ ಅರಿಯದೆ ಉಳುವಿಟ್ಟರು ತಾನೆ ಅಂದವರಿಯದೆ ತಾವು ಉಳುವಿಟ್ಟು ಹೋದ ಕಾರಣ ಬಂದುಹೋಗುವದು ಭವವುಂಟು ತಾನೆ. | 7 | ಚನ್ನಣ್ಣ ಬರುವದು ಬಿನ್ನಣ ಮುಂದುಂಟು ಚನ್ನಣ್ಣನಿಂದೇನಾಗುವದು ತಾನೆ ಚನ್ನಣ್ಣನಿಂದೇನಾಗದಿರಲು ಆಗ ತನ್ನ ತಾ ತಿಳಿದು ನಿಜವಹ ತಾನೆ | 8 | ಆರು ಕೂಡಿಸಿದರೆ ಕೂಡದು ಆರು ಅಗಲಿಸಿದರೆ ಅಗಲದು ಆರಿಗೆ ಆರಾಗಿ ಮೀರುವದು ತಾನೆ ಆರಿಗೆ ಆರಾಗಿ ಮೀರುವ ಮಾತಿಗೆ ಘೋರಾಟವಾಯಿತು ಬಹುಜನ್ಮ ತಾನೆ | 9 | ಒಂದೊಂದು ಜೀವದಿಂದೆ ಮುಂದೊಮ್ಮೆ ಸರ್ವಜೀವವು ಹೊಂದಿ ಹೋಗುವದು ಲಯವಾಗಿ ತಾನೆ ಹೊಂದಿ ಹೋಗುವದು ಲಯವಾಗಿ ಅದರೊಳ್ ಬಂದುಳಿದು ಹಲವಾಗುವದು ತಾನೆ | 10 | ನಿಷೆ* ನೆಲೆಗೊಳಿಸಿ ನಿಷೆ*ಯೊಳ್ ಅಳಿವರು ನಿಷೆ* ಉಳ್ಳವರು ನಿಜವಲ್ಲ ತಾನೆ ನಿಷೆ*ಯುಳ್ಳವರು ನಿಜವಲ್ಲ ಇದರಂತೆ ದುಷ್ಟರು ದುಷ್ಟರೊಳ್ ಅಳಿವರು ತಾನೆ | 11 | ಅಳಿದದ್ದು ಅಳಿವುದು ಉಳಿದದ್ದು ಉಳಿವುದು ಇಳೆಯು ನೀರೊಳ್ ಕರಗುವದು ತಾನೆ ಇಳೆಯು ನೀರೊಳು ಕರಗಿದ ಕಾಲಕ್ಕೆ ಬಲವಂತನೊಬ್ಬನು ಬರುವನು ತಾನೆ | 12 | ಬಲವಂತ ಬಂದಾಗ ನೆಲಜಲ ನೆಲಮಾಡಲು ಹಲವುಕಾಲ ಮತ್ತಾಗುವದು ತಾನೆ ಹಲವುಕಾಲ ಮತ್ತಾಗುವದು ಈ ಪರಿ ನೆಲೆಯೊಳಳಿವು ಸಾಕಾರಕ್ಕೆ ತಾನೆ | 13 | ಆರಾರ ವ್ಯಾಳ್ಯಕ್ಕೆ ಮೀರುವದು ಈ ಭೂಮಿ ನೀರೊಳು ಕೂಡಿ ನೀರಾಗುವದು ತಾನೆ ನೀರೊಳು ಕೂಡಿ ನೀರಾಗಿರಲು ಆ ನೀರು ನೀರರ್ತು ಅಗ್ನಿ ಆಗುವದು ತಾನೆ | 14 | ಅನಲಾನ ಉರಿನುಂಗಿ ಅನಿಲಾನ ಒಳಕೊಂಡು ಅನುವಾಯಿತು ಆಕಾಶ ಆತ್ಮನೊಳು ತಾನೆ ಅನುವಾಯಿತು ಆತ್ಮನೊಳು ಆಕಾಶ ಆ ಆತ್ಮ ಚಿನುಮಯನೊಳಗೆ ತನುಮಯ ತಾನೆ | 15 | ಲೀಲವನುಳಿದು ತಾ ಲೀಲವಾಗಲು ಮಹಾಂತ ಮೂಲೋಕವೆಲ್ಲಾ ಸಾಲೋಕ್ಯ ತಾನೆ ಮೂಲೋಕವೆಲ್ಲಾ ಸಾಲೋಕ್ಯವೆಲ್ಲುಂಟು ಲೀಲ ಮೇಲಾಗಿ ತಾನಹನು ತಾನೆ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆರಾರ ಭಾವಕ್ಕೆ ಒಳಗಾದ ವಸ್ತು, ಆರಾರ ಭ್ರಮೆಗೆ ಹೊರಗಾದ ವಸ್ತು, ಆರಾರ ಆಚಾರಕ್ಕೆ ಒಳಗಾದ ವಸ್ತು, ಆರಾರ ಅನಾಚಾರಕ್ಕೆ ಹೊರಗಾದ ವಸ್ತು, ಆಚಾರ ಶ್ರದ್ಧೆ ಇದ್ದಲ್ಲಿ ನೀನೆಂಬೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ಆ ಗುಣ ಇಲ್ಲದಿರ್ದಡೆ ನೀನು ಎನ್ನವನಲ್ಲಾ ಎಂಬೆ.
--------------
ಅಕ್ಕಮ್ಮ
ಆವಾವ ವಾದ್ಯ ಘಟಭೇದಂಗಳಲ್ಲಿಯೂ ಭಾವಶುದ್ಧವಾಗಿಪ್ಪುದು ನಾದ. ಆರಾರ ವಿಶ್ವಾಸದ ಭಾವದಲ್ಲಿಯೂ ದೈವಶುದ್ಧವಾಗಿಪ್ಪುದು ವಸ್ತು. ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ತನ್ಮಯವಾಗಿ, ವರುಣನ ಕಿರಣದಂತೆ, ತನಗೆ ಮರೆಯಾದಲ್ಲಿ ನಿಂದು, ಮರೆಗೆ ಹೊರಗಾದಲ್ಲಿ ತನ್ನಿರವು ಎಲ್ಲಾ ಎಡೆಯಲ್ಲಿ ಪರಿಪೂರ್ಣವಾದಂತೆ. ನೆನೆವರ ಮನದ ಕೊನೆಯಲ್ಲಿ, ಮರೆದವರ ಮರೆಯಲ್ಲಿ, ಎಡೆದೆರಪಿಲ್ಲದ ವಸ್ತು ನೀನೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಆಜ್ಞಾಸಿದ್ಧನನರ್ಚಿಸೇನೆಂದರೆ ಎಂತರ್ಚಿಸಲಹುದಯ್ಯ? ಐವೆರಡನತಿಗಳೆದಲ್ಲದೆ, ಮೂರಾರ ಜರಿದಲ್ಲದೆ, ಏಳೆಂಟನತಿಗಳೆದಲ್ಲದೆ, ಆರಾರ ಮೀರಿದಲ್ಲದೆ, ಎಂತರ್ಚಿಸಲಹುದಯ್ಯ? ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಆನಂದವನೆಯ್ದಿದ ಆಜ್ಞಾಸಿದ್ಧರಿಗಲ್ಲದೆ ಎಂತರ್ಚಿಸಲಹುದಯ್ಯಾ?
--------------
ಸಿದ್ಧರಾಮೇಶ್ವರ
ಖ್ಯಾತಿಲಾಭಕ್ಕೆ ಮಾಡೂದು ಎಂಬುದನರಿದು ಭೂತಹಿತ ದಯದಾಕ್ಷಿಣ್ಯಕ್ಕೆ ಇಕ್ಕುವಾತನೆಂಬುದನರಿದು ಮಹಿಮಾಸ್ಪದರಿಂದ ವೀರವೈರಾಗ್ಯಂಗಳಿಂದ ಇಕ್ಕುವಾತನೆಂಬುದನರಿದು ಮಾಡಿಕೊಂಡ ಕೃತ್ಯಕ್ಕೆ ಬಿಟ್ಟಡೆ ನುಡಿದಹರೆಂದು ಗುತ್ತಗೆಯಲ್ಲಿ ಇಕ್ಕುವಾತನೆಂಬುದನರಿದು ಅರ್ತಿ ತಪ್ಪದೆ ಬಾಹ್ಯದ ಭಕ್ತಿ ತಪ್ಪದೆ ಅರ್ಚನೆ ಪೂಜನೆಗಳಲ್ಲಿ ನಿತ್ಯನೇಮ ತಪ್ಪದೆ ಸುಚಿತ್ತ ಧರ್ಮದಲ್ಲಿ ಮಾಡುವವನರಿದು ಇಂತೀ ವರ್ಮಧರ್ಮಂಗಳಲ್ಲಿ ಅರಿದು ಸುಮ್ಮಾನದ ಸುಖತರದಲ್ಲಿ ಮಾಡುವ ವರ್ಮಿಗನನರಿದು ಆರಾರ ಭಾವದ ಕಲೆಯನರಿದು, ಗುಣವೆಂದು ಸಂಪಾದಿಸದೆ ಅವಗುಣವೆಂದು ಭಾವದಲ್ಲಿ ಕಲೆಗೆ ನೋವ ತಾರದೆ ಇಂತೀ ಸರ್ವಗುಣ ಸಂಪನ್ನನಾಗಿ ಪೂಜಿಸಿಕೊಂಬ ಗುರುವಿಂಗೆ ಚರಿಸುವ ಜಂಗಮಕ್ಕೆ ಉಪಾಧಿ ನಷ್ಟವಾದ ವಿರಕ್ತಂಗೆ ಕೂಗಿಂದಿತ್ತ ನಮೋ ಎಂದು ಬದುಕಿದೆ ಮಹಾಮಹಿಮ ಮಾರೇಶ್ವರಾ.
--------------
ಕೂಗಿನ ಮಾರಯ್ಯ
ಇನ್ನಷ್ಟು ... -->