ಅಥವಾ

ಒಟ್ಟು 83 ಕಡೆಗಳಲ್ಲಿ , 28 ವಚನಕಾರರು , 65 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾವ ತ್ರಿಗುಣಭೇದದಲ್ಲಿವಿಶ್ವಾಸವ ಮಾಡಿದಡೂ ಭಾವಶುದ್ಧವಾಗಿರಬೇಕು. ಯೋಗಿಯಾದಲ್ಲಿ ದೇಹಧರ್ಮವ ಮರೆದು, ಭೋಗಿಯಾದಲ್ಲಿ ಸಂಚಿತವ ಮರೆದು, ತ್ಯಾಗಿಯಾದಲ್ಲಿ ನೆನಹು ಹಿಂಚು ಕೊಡುವುದು ಮುಂಚಾಗಿರಬೇಕು. ಇಂತೀ ಯೋಗಿ ಭೋಗಿ ತ್ಯಾಗಿ, ಇಂತೀ ತ್ರಿವಿಧವನೊಳಕೊಂಡು ವಿರಕ್ತನಾದಲ್ಲಿ ಆತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ ನೀವು ಅರ್ಪಿಸಿದ ಪರಿಯೆಂತು ? ಪ್ರಸಾದವ ಕೊಂಡ ಪರಿಯೆಂತು ಹೇಳಿರೆ ? ರೂಪಾರ್ಪಿತವಾಯಿತ್ತು ನೇತ್ರದಿಂದ, ಮೃದು, ಕಠಿಣ, ಶೀತೋಷ್ಣಂಗಳು ಅರ್ಪಿತವಾದವು ಸ್ಪರ್ಶನದಿಂದ. ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ ರೂಪು ಸ್ಪರ್ಶನವೆಂಬೆರಡೆ ವಿಷಯಂಗಳರ್ಪಿತವಾದವು. ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ. ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ, ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ ? ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ ? ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ. ಪಂಚೇಂದ್ರಿಯಂಗಳಿಂದವೂ, ಶಿವಲಿಂಗಪಂಚೇಂದ್ರಿಯ ಮುಖಕ್ಕೆ ಪಂಚವಿಷಯಂಗಳನೂ ಅರ್ಪಿಸಬೇಕು. ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ. ಅಲ್ಲದಿರ್ದಡೆ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯೆ ಅಲ್ಲ. ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ. ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ. ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.
--------------
ಉರಿಲಿಂಗಪೆದ್ದಿ
ಇಷ್ಟಲಿಂಗದ ಕೂಟ, ಪ್ರಾಣಲಿಂಗದ ಸಂಗ, ಭಾವಲಿಂಗದ ಸಮರಸವ ಬಲ್ಲವರಾರೊ ಅವರನೆನ್ನ ಸದ್ಗುರು ಅನುಮಿಷೇಶ್ವರನೆಂಬೆ. ಆ ನಿಜಶಿವಯೋಗವ ಮರೆಯದವರಿಗೆ ಅಣಿಮಾದಿ ಅಷ್ಟೈಶ್ವರ್ಯದೊಡನೆ ಕೂಡಿದ ಸಕಲ ಲಕ್ಷಣ ಸಂಪನ್ನರು ಸರಿಯಲ್ಲ. 66 ಸಿದ್ಧಿಗಳೊಡನೆ ಕೂಡಿದ ಸಿದ್ಧ ಪುರುಷರೂ ಸರಿಯಲ್ಲ. ಲಾವಣ್ಯದೊಡನೆ ಕೂಡಿದ ಜಯಂತ ಮನ್ಮಥ ವಸಂತರೂ ಸರಿಯಲ್ಲ. ಕಲ್ಪವೃಕ್ಷ ಕಾಮಧೇನು ಚಿಂತಾಮಣಿ ಭದ್ರಪೀಠ ಮೊದಲಾದ ಮಹದೈಶ್ವರ್ಯವುಳ್ಳ ದೇವೇಂದ್ರನೂ ಸರಿಯಲ್ಲ. ದೇವೇಂದ್ರನ ಮೇಲೆ ಕೋಟ್ಯನುಕೋಟಿ ಮೊದಲಾದ ಹರಿ ವಿರಿಂಚ್ಯಾದಿಗಳ ಸಂಪದವೂ ಸರಿಯಲ್ಲ. ಶ್ರುತಿ ವಿದ್ಯದೊಡನೆ ಕೂಡಿದ ವ್ಯಾಸ ದಕ್ಷಾದಿಗಳೂ ಸರಿಯಲ್ಲ. ಸಪ್ತಕೋಟಿ ಮಹಾಮಂತ್ರಂಗಳ ಬಲ್ಲಂತಹ ಮಹಾಮುನಿಗಳೂ ಸರಿಯಲ್ಲ. ಮಹಾರಾಜಯೋಗದೊಡನೆ ಕೂಡಿದ ಮನುಮಾಂಧಾತರೂ ಸರಿಯಲ್ಲ. ಮಹಾಲಿಂಗದೊಡನೆ ಕೂಡಿದ ಶಾಂಭವಯೋಗಕ್ಕೆ ಆವಾವ ಪದವೂ ಸರಿಯಲ್ಲ. ಈ ಶಾಂಭವಯೋಗವಾರಲ್ಲಿ ಸ್ಥಾವರವಾಗಿದ್ದಿತ್ತು, ಅವರಲ್ಲಿ ಸರ್ವಲಕ್ಷಣಂಗಳು, ಸರ್ವ ವಿಚಿತ್ರಂಗಳು, ಸರ್ವ ಸುಖಂಗಳು ಸರ್ವ ಭಕ್ಷ್ಯಂಗಳು, ಸರ್ವೈಶ್ವರ್ಯಂಗಳು ಸರ್ವ ಪದಂಗಳು ಸರ್ವ ಸಿದ್ಧಿಗಳು ಸರ್ವ ಕ್ರಮಂಗಳು ಸರ್ವ ಕರ್ತೃತ್ವಮುಂಟು. ಪ್ರಕೃತಿಯೋಗವಂ ಮಾಡುವ ನರಸುರಾಸುರರು ಮೂಲಪ್ರಕೃತಿಯೋಗವ ಮಾಡುವ ಮನು ಮಾಂಧಾತರು ತೃಣ ಮಾತ್ರವು. ನಿತ್ಯನಿಜಶಿವಸ್ವರೂಪವಾದ ಶಾಂಭವ ಯೋಗಿಗಳಿಗೆ ಸರ್ವಯೋಗಂಗಳು ತೃಣಮಾತ್ರವು_ಗುಹೇಶ್ವರಲಿಂಗವನರಿದರಾಗಿ.
--------------
ಅಲ್ಲಮಪ್ರಭುದೇವರು
ಆವಾವ ದೆಸೆಗೆ ಬಾಯ ಬಿಟ್ಟು ಅರಸಿ ಕಾಣದೆ ಕಂಗೆಡ್ಕ್ತುದ್ದೆನಯ್ಯಾ. ದೇವಾ, ಈ ಬಾಯ ಬಿಡುವುದ ಮಾಣಿಸಿ, ಎನಗೆ ಪರಮಪ್ರಸಾದವ ಕರುಣಿಸಿ ರಕ್ಷಿಸಯ್ಯಾ; ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಧರ್ಮವಯ್ಯಾ.
--------------
ಸಿದ್ಧರಾಮೇಶ್ವರ
ದೇವನೊಬ್ಬನೆ ಜಗವ ಕಾವಾತ, ಕೊಲುವಾತ. ದೇವರು ಮುನಿದಡೆ ಮರಳಿ ಕಾವವರುಂಟೆ? ಈ ಸಾವಿಗೊಳಗಾಗಿ ಹೋಹ ಸಮಸ್ತದೈವಂಗಳು, ಮಹಾದೇವನ ಸರಿಯೆಂದು ಆರಾದ್ಥಿಸಿ, ಅಚಲಿತಪದವಿಯ ಬೇಡುವ ಈರೇಳುಜಾತಿಗಳಿಗೆ, ಆವಾವ ಕಾಲದಲ್ಲಿ ನರಕ ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗುರುಪ್ರಸಾದವ ಕೊಂಡು ಎನ್ನ ತನು ಶುದ್ಧಪ್ರಸಾದವಾಯಿತ್ತು. ಲಿಂಗಪ್ರಸಾದವ ಕೊಂಡು ಎನ್ನ ಮನ ಸಿದ್ಧಪ್ರಸಾದವಾಯಿತ್ತು. ಜಂಗಮಪ್ರಸಾದವ ಕೊಂಡು ಎನ್ನ ಪ್ರಾಣವು ಪ್ರಸಿದ್ಧಪ್ರಸಾದವಾಯಿತ್ತು. ಇಂತೀ ತ್ರಿವಿಧಪ್ರಸಾದವ ಕೊಂಡು ಎನ್ನ ಭವ ನಾಸ್ತಿಯಾಗಿತ್ತಾಗಿ, ಅಖಂಡೇಶ್ವರಾ, ಇನ್ನೆನಗೆ ಆವಾವ ಭಯವಿಲ್ಲವಯ್ಯ.
--------------
ಷಣ್ಮುಖಸ್ವಾಮಿ
ಕ್ರೀಗುಣ ಶುದ್ಧವಾದಲ್ಲಿ ಭಾವಗುಣ ಶುದ್ಧ. ಆ ಸದ್ಭಾವದ ದೆಸೆಯಿಂದ ವಿಮಲಜ್ಞಾನ. ಆ ಸುಜ್ಞಾನ ಸೂತ್ರವಾಗಿ ತ್ರಿವಿಧಭೇದವಾಯಿತ್ತು. ಆ ತ್ರಿವಿಧದ ಸೂತ್ರದಿಂದ ಷಡುಸ್ಥಲವಾಯಿತ್ತು. ಆ ಷಡುಸ್ಥಲದ ಭಾವಂಗಳೆ ಬ್ಥಿನ್ನಭಾವವಾಗಿ ನಾನಾ ಸ್ಥಲಭೇದ ವ್ರತವಾಯಿತ್ತು. ಆ ವ್ರತದ ಲಕ್ಷಣವನರಿತು ಆವಾವ ಕ್ರೀಯಲ್ಲಿ ಆವಾವ ಭಾವಶುದ್ಧವಾಗಿ, ಕೃತ್ಯಕ್ಕೆ ಕಟ್ಟಳೆಯಾಗಿ, ನೇಮಕ್ಕೆ ನಿಶ್ಚಯವಾಗಿ ವ್ರತದಾಳಿಯ ತಪ್ಪದಿಪ್ಪ ಭಕ್ತನಲ್ಲಿ ಏಲೇಶ್ವರಲಿಂಗವು ನಿಶ್ಚಯವಾಗಿಪ್ಪನು.
--------------
ಏಲೇಶ್ವರ ಕೇತಯ್ಯ
ಆವಾವ ಪರಿಯಲ್ಲಿ ಆವಾವ ಭಾವದಲ್ಲಿ ಗುರುಲಿಂಗಜಂಗಮಕ್ಕೆ ದಾಸೋಹವ ಮಾಡಿಹೆನೆಂಬ, ಕೂಡಿಹೆನೆಂಬ ಸದ್ಭಕ್ತರ ಬಾಗಿಲ ತೋರಿ ಬದುಕಿಸಯ್ಯಾ. ಎಲ್ಲವನೊಪ್ಪಿ `ಲಿಂಗಜಂಗಮವೆನ್ನ ಪ್ರಾಣೇಶ್ವರ' ಎಂಬ ಮಹಾಪುರಾತನರ ಪಾದರಕ್ಷೆಯ ಹೊತ್ತಿರಿಸೆನ್ನನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆವಾವ ಲೋಕದಲ್ಲಿರ್ದರೂ, ಆವಾವ ಪ್ರಕಾರದಲ್ಲಿ ಅವರವರಿಗೆ ತಕ್ಕ ಸಂಸಾರ ಬಿಡದು. ಹಿರಿದಿಂಗೆ ಹಿರಿದಾಗಿ, ಕಿರಿದಿಂಗೆ ಕಿರಿದಾಗಿ, ಕಾಡಿತ್ತು ಮಾಯೆ. ಘಟಸಂಸಾರಿಗಳಿಗೆಲ್ಲ ಘಟಭಾರವ ಹೊರಿಸಿ ಕಾಡಿತ್ತು ಮಾಯೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಮಾಯೆಯ ಬಲುಹಿಂಗೆ ನಾನು ಬೆರಗಾದೆನು.
--------------
ಸ್ವತಂತ್ರ ಸಿದ್ಧಲಿಂಗ
ಆವಾವ ಭಾವದಲ್ಲಿ ಶಿವನ ನಂಬಿದ ಶರಣರು ಎಂತಿದ್ದಡೇನಯ್ಯಾ ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು ಎಂತಿದ್ದಡೇನಯ್ಯಾ ಸುಚರಿತ್ರರು ಎಂತಿದ್ದಡೇನಯ್ಯಾ ಅವಲೋಹವ ಕಳೆವ ಪರುಷ ಎಂತಿದ್ದಡೇನಯ್ಯಾ ಕೂಡಲಸಂಗನ ಶರಣರು ರಸದ ವಾರುಧಿಗಳು ಎಂತಿದ್ದಡೇನಯ್ಯಾ
--------------
ಬಸವಣ್ಣ
ಆವಾವ ಜಾತಿ ಯೋನಿಗಳಲ್ಲಿ ಹುಟ್ಟಿದ ಪ್ರಾಣಿಗಳು ಆ ಜಾತಿಯಂತಹವಲ್ಲದೆ ಮತ್ತೊಂದು ಜಾತಿಯಹವೆ ಹೇಳಾ. ``ಯಥಾ ಬೀಜಸ್ತಥಾ ವೃಕ್ಷಃ' ಎಂಬ ನ್ಯಾಯದಂತೆ, ಲಿಂಗದಿಂದೊಗೆದ ಶರಣ ಲಿಂಗವಹನಲ್ಲದೆ, ಮಾನವನಾಗಲರಿಯನೆಂಬುದಕ್ಕೆ ಗುರುವಚನವೇ ಪ್ರಮಾಣು. ಇಂತಿದನರಿಯದೆ, ನಾನು ಮಾನವನು ದೇಹಿ ಸಂಸಾರಬದ್ಧನು ಎಂಬವಂಗೆ, ಎಂದೆಂದು ಮುಕ್ತಿಯಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಮಾನವನಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಹೆಡಗೆಹಾರ ಮೊರಹಾರ ಗೆರಸಿಹಾರ ಮಡಕೆಹಾರ ದೆಸೆದೆಸೆಯಲ್ಲಿ ತಂದು ನೀಡುತ್ತಿರಲು, ಹೊಸಪರಿಯ ಆರೋಗಣೆಯನವಧರಿಸುತ್ತಿರ್ದನು. ಆವಾವ ದೆಸೆಯಲ್ಲಿ ತಂದು ನೀಡುತ್ತಿರ್ದಡೆ, ಆ ದೆಸೆದೆಸೆಗಳೆಲ್ಲಾ ಬಾಯಾಗಿ ಕೊಳುತಿರ್ದನು ! ಎತ್ತ ನೋಡಿದಡೆ ಅತ್ತತ್ತ ಮುಖ. ಅಗೆಯ ಹೊಯಿದಂತೆ ತೆರಹಿಲ್ಲ. ಒಂದು ನಿಮಿಷ ಎಡಹಿದಡೆ, ಅಕ್ಕಿಗಚ್ಚು ನುಚ್ಚು ತವುಡು ಮೊದಲಾಗಿ ಹೆಚ್ಚಿದವು ನಿಮಿಷದೊಳು. ಭಕ್ತಿಬಂಧುಗಳೆಲ್ಲಾ ತಮ್ಮ ತಮ್ಮ ಮಠದಲಾದ ಸಯಿದಾನವ ತಂದು, ಸಾರಗಟ್ಟಿ ನೀಡುತ್ತಿರ್ದಡೆ, ಅದ್ಭುತದಾರೋಗಣೆಯ ಕಂಡು, ಹರಿಹರಿದು ಪಾಕಯತ್ನವ ಮಾಡಿ ಎನ್ನುತ್ತ ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಸಂತೋಷದೊಳೋಲಾಡುತ್ತಿರ್ದನು ಎನ್ನ ಪರಮಗುರು ಬಸವಣ್ಣನು.
--------------
ಸಂಗಮೇಶ್ವರದ ಅಪ್ಪಣ್ಣ
ಆವಾವ ಪರಿಯಲ್ಲಿ ಭಾವಿಸುತ್ತಿಹ ಕರಣದ ವ್ಯಾಕುಲವಡಗಿ ಮನವು ಏಕಾಂತವಾಗಿ ನಿಂದ ಯೋಗಿ, ಜ್ಞಾನಸತಿಯ ಸಂಗದಲ್ಲಿರಲು ಆತಂಗೆ ಸರ್ವಲೋಕವು ಆ ಲೋಕದ ಭೋಗಂಗಳೆಲ್ಲಾ ತಡೆದಿಹವಾಗಿ ಆ ಯೋಗಿ ತನಗೆ ಪ್ರಿಯಳಾದ ಚಿತ್ಕಾಂತೆಯನು, ತನ್ನನು ಕಾಣದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ತಾನು ತಾನಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಆವಾವ ಭಾವದಲ್ಲಿ ಮಾಡಿ ಕೂಡಿಹೆನೆಂಬವರ ಬಾಗಿಲ ತೋರಯ್ಯಾ. ತನುವನೊಪ್ಪಿಸಿದವರ, ಮನವನೊಪ್ಪಿಸಿದವರ, ಧನವನೊಪ್ಪಿಸಿದವರ ಬಾಗಿಲ ತೋರಯ್ಯಾ. ಇವೆಲ್ಲವನೊಪ್ಪಿಸಿ ಜಂಗಮವೆನ್ನವರೆನ್ನವರೆಂಬವರ ಕೆರಹ ಹೊತ್ತಿರಿಸೆನ್ನನು, ಕೂಡಲಸಂಗಮದೇವಾ. 363
--------------
ಬಸವಣ್ಣ
ಶ್ರೀಗುರು ಮಾಡಿದ ಗುರುತ್ವ ಉಪಮಾತೀತವು. ನೇತ್ರದಲ್ಲಿ ತನ್ನ ರೂಪು ತುಂಬಿ ನೇತ್ರವ ಗುರು ಮಾಡಿದನು. ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿ ಶ್ರೋತ್ರವ ಗುರು ಮಾಡಿದನು. ಘ್ರಾಣದಲ್ಲಿ ಮಹಾಗಂಧವ ತುಂಬಿ ಘ್ರಾಣವ ಗುರು ಮಾಡಿದನು. ಜಿಹ್ವೆಯಲ್ಲಿ ಕರುಣಪ್ರಸಾದವ ತುಂಬಿ ಜಿಹ್ವೆಯ ಗುರು ಮಾಡಿದನು. ಕಾಯವ ಮಹಾಕಾಯವೆನಿಸಿ, ಪ್ರಸಾದಕಾಯವೆನಿಸಿ, ಕಾಯವ ಗುರು ಮಾಡಿದನು. ಪ್ರಾಣವನೂ ಲಿಂಗಪ್ರಾಣಸಂಬಂಧವ ಮಾಡಿ ಪ್ರಾಣವ ಗುರು ಮಾಡಿದನು. ಇಂತು ಅಂತರಂಗ ಬಹಿರಂಗವನು ಗುರು ಮಾಡಿದನು. ಸರ್ವಾಂಗವನು ಗುರುವ ಮಾಡಿದ ಗುರುವಿಂಗೆ ನಾನಿನ್ನೇನ ಮಾಡುವೆನಯ್ಯಾ? ಗುರುಪೂಜೆಗನುವಾದ ದ್ರವ್ಯಂಗಳನೂ, ಆವಾವ ಪದಾರ್ಥಂಗಳನೂ ಆವಾವ ಪುಷ್ಪಫಲಾದಿಗಳನೂ ವಿಚಾರಿಸಿ ನೋಡಿದಡೆ ಆವುವು ಗುರುತ್ವವಿಲ್ಲ. ಸರ್ವದ್ರವ್ಯಮೂಲವೂ ಸರ್ವಪದಾರ್ಥಮೂಲವೂ ಸರ್ವರಸಪುಷ್ಪಫಲಾದಿಗಳಿಗೆ ಎಲ್ಲದಕ್ಕೂ ಮೂಲಿಗ ಮನವು ಗುರುತ್ವವನ್ನುಳ್ಳದ್ದು. ತನ್ನ ಮನೋವಾಕ್‍ಸಹಿತ ಕಾಯವನೂ ಸದ್ಗುರುವಿಂಗಿತ್ತು ಶ್ರೀಗುರು ದರ್ಶನ ಸ್ಪರ್ಶನ ಮಾಡಿ ಸುಖಿಯಪ್ಪೆ ನಾನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->