ಅಥವಾ

ಒಟ್ಟು 45 ಕಡೆಗಳಲ್ಲಿ , 25 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರುಸ್ಥಲದಲ್ಲಿ ಅರಿತಿಹೆನೆಂದು ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ ! ಅಂಗದ ಮೇಲೆ ಲಿಂಗಸಂಬಂಧಿಯಾದಡೇನಯ್ಯ, ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ ! ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು ! ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ ! ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಲಿನಲ್ಲಿ ನಡೆವುದು, ಕೈಯಲ್ಲಿ ಮುಟ್ಟುವುದು, ಕಣ್ಣಿನಲ್ಲಿ ನೋಡುವುದು, ಕಿವಿಯಲ್ಲಿ ಕೇಳುವುದು, ಮೂಗಿನಲ್ಲಿ ವಾಸಿಸುವುದು. ಬಾಯಲ್ಲಿ ಉಂಬ ಭೇದದಿಂದ ಅಯಿದರಾಟಿ, ಆರರ ಕೂಟ, ಏಳರ ಬೇಟ, ಎಂಟರ ಮದ, ಹದಿನಾರರ ಕಳೆ. ಇಂತಿವೆಲ್ಲವು ಮೂರ ಮರೆದಲ್ಲಿ ನಿಂದವು. ಮೂರನರಿದಲ್ಲಿ ಸಂದವು. ಇಂತಿವು ಉಳ್ಳನ್ನಕ್ಕ ಪೂಜಿಸಬೇಕು. ನಾ ನೀನೆಂಬನ್ನಕ್ಕ ಅರ್ಪಿಸಬೇಕು. ಅದಳಿಯೆ ಮತ್ತೇನೂ ಎನಲಿಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬದಕ್ಕೆ ಎಡೆಯಿಲ್ಲ.
--------------
ಶಿವಲೆಂಕ ಮಂಚಣ್ಣ
ಕೈ[ಯ]ಮರೆದು ಕಾದುವ ಕಾಳಗವದೇನೋ? ಮೈಮರೆದು ಮಾಡುವ ಮಾಟವದೇನೋ? ಬಾಯಿ ಮರೆದು ಉಂಬ ಊಟವದೇನೋ? ಸನ್ಮಾನ ಸಾವಧಾನ ಸನ್ನಹಿತವಿಲ್ಲದ ಲಿಂಗಸಂಧಾನ ಜನ್ಮದ ಮೃತ್ಯು ನೋಡಾ. ಎಚ್ಚರಿಕೆಯಿಲ್ಲದ ಅರ್ಪಿತ ವಿಕಾರ ನೋಡಾ. ಸಂಕಲ್ಪ ವಿಕಲ್ಪವಿಲ್ಲದೆ ಮನ ಲಿಂಗಸಾಹಿತ್ಯವಾದರೆ ಅರ್ಪಿತ; ಅದು ಪ್ರಸಾದ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಮಯಾಚಾರವೆಂದು ನೇಮಕ್ಕೆ ಹೊತ್ತು ಮಾಡುತಿರ್ಪ ಸದ್ಭಕ್ತರು, ಎನಗೆ ಹೇಳಿರಯ್ಯಾ, ಅರ್ಥಕೋ, ಪ್ರಾಣಕ್ಕೋ, ಅಪಮಾನಕ್ಕೋ? ಅಂತಲ್ಲದೆ, ಉಂಬ ಓಗರಕ್ಕೋ, ಸಂತತ ಸಮಯೋಚಿತವನರಿವುದಕ್ಕೋ? ಈ ಸಂಚಿತನವರಿಯದೆ ಮುಂಚಿತ್ತಾಗಿ ಉಂಬ, ಅಶನಕ್ಕೆ ಕೈಯ ನೀಡಿ, ತಾ ಹಿಂಚಾಗಿ ಉಂಬ ಪ್ರಸಾದಿಯ ನೋಡಾ. ಆಯತವೆಂದರಿಯದೆ, ಸ್ವಾಯತವೆಂದರಿಯದೆ, ಸನ್ನಹಿತಪ್ರಸಾದವೆಂದರಿಯದೆ, ಹಮ್ಮುಬಿಮ್ಮಿಗೆ ಹೋರುವ ಉನ್ಮತ್ತರನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಬ್ಬರು ನಾವು ಒಂದೆಡೆಯನುಂಡೆವು. ಉಂಬ ಊಟದಲ್ಲಿ ತೃಪ್ತಿಯ ತಳದು ತನು ಸೋಜಿಗವಾಯಿತ್ತಯ್ಯ. ಮನ ಮಗ್ನವನೈದಿ ಮಹಾಲಿಂಗದತ್ತ ಶುದ್ಭಿ ನಿಃಶುದ್ಧಿಯಾಯಿತ್ತಯ್ಯ. ಅಡಗಿದೆನಡಗಿದೆನತ್ತತ್ತಲೆ ನಾನು. ಉಡುಗಿದೆನೀ ಕಾಯವ. ಉಭಯದ ಸಂಗವ ಹರಿದು ಉಲುಹಡಗಿದ ವೃಕ್ಷವಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಕರದಲ್ಲಿ ಲಿಂಗವ ಪಿಡಿದುಕೊಂಡು, ಕಣ್ಣುಮುಚ್ಚಿ ಸರಜಪಮಾಲೆಯ ಬೆರಳಿಂದ ಎಳೆದೆಳೆದು ಎಣಿಸುತ್ತ, ಗುರುಮೂರ್ತಿಯ ಧ್ಯಾನಿಸುತ್ತ ಕಂಡೆನೆಂಬುತ್ತ ಇರುವರೆ ಮೂಳರಿರಾ ? ನಿಮಗೆಲ್ಲಿಯದೊ ಗುರುಧ್ಯಾನ ? ವರ ಪರವಸ್ತುವಿಂಗೆ ಸರಿ ಎನಿಸಿಕೊಂಬ ಗುರುಸ್ವಾಮಿ ನಿಮ್ಮ ನೆರೆಹೊರೆಯ ಸರಿಸಮೀಪ ಗ್ರಾಮದಲ್ಲಿರಲು ಅವರನ್ನು ಲೆಕ್ಕಿಸದೆ, ಉದಾಸೀನವ ಮಾಡಿ ಕಂಡು ನಿನ್ನ ಉಂಬ ಉಡುವ ಸಿರಿ ಸಂಪತ್ತಿನೊಳು ಅವರನು ಸತ್ಕರಿಸದೆ, ಕರದಲ್ಲಿ ನೋಡಿ ಕಂಡಿಹೆನೆಂದು ಶಿರವಂ ಬಿಗಿದು, ಕಣ್ಣನೆ ತೆರೆಯದೆ, ಸ್ವರದಲಾಗ ಪಿಟಿಪಿಟಿ ಎನ್ನುತ್ತ ಅರಿದೆವೆಂಬ ಅರಿವಿಂಗೆ ಶಿರದೂಗಿ ಬೆರಗಾಗಿ ನಗುತಿರ್ದ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವಿಷ ಕೊಲುವಲ್ಲಿ, ಹಾವೇನ ಮಾಡುವುದು ? ಉಂಬ ಅಶನ ನಂಜಾಗಿಹಲ್ಲಿ, ಇಕ್ಕಿದವಳಿಗೆ ಅಂಜಿಕೆಯುಂಟೆ ? ತನ್ನ ಇಂದ್ರಿಯ ತನ್ನ ತಿಂಬಲ್ಲಿ, ವಸ್ತುವಿನ ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾಯೆಂದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು.
--------------
ಸಗರದ ಬೊಮ್ಮಣ್ಣ
ನಾಡೆಲ್ಲರೂ ನೆರೆದು ಕೂಡಿ ಮಾಡುವ ಗುಣಸಮೂಹ ಬೇಡ. ಪಶುವ ನೆಚ್ಚು ಕೂಡಿ ಹಸಿಗೆಗೆ ಬಂದಂತೆ. ಉಂಬ ಊಣೆಯಕ್ಕೆ ನೆರೆದು, ಭಕ್ತಿಯ ಊಣೆಯಕ್ಕೆ ಹಿಂದುಮುಂದಾದ ಸಂದಣಿಯ ಚೋರರಿಗೇಕೆ, ವ್ರತ ನೇಮ ನಿತ್ಯ? ಇವರಂಗಕ್ಕೆ ಸಂಗವಾದ ಬಂಕೇಶ್ವರಲಿಂಗ.
--------------
ಸುಂಕದ ಬಂಕಣ್ಣ
ಒಡೆಯರು ದೇವರಿಗೆ ಕೊಟ್ಟಲ್ಲದೆ, ಕೊಳ್ಳೆನೆಂಬ ಮೃಡನ ಭಕ್ತರ ನೋಡಾ. ಒಡೆಯರಿಗೊಂದು ಪರಿ, ತನಗೊಂದು ಪರಿ ಮಾಡುವ ಸಡಗರವ ನೋಡಾ. ಒಡೆಯಂಗೆ ಭೆಟ್ಟಿ, ಮನೆಯೊಡಯಂಗೆ ತುಪ್ಪ ಕಟ್ಟು ಮೊಸರು ಮೃಷ್ಟಾನ್ನ. ಒಡೆಯರಿಗೆ ಕುರುಹ ತೋರಿ, ತಾ ಹಿರಿದಾಗಿ ಉಂಬ ಕಡುಗಲಿಯ ನೋಡಾ. ಇವರಡಿಯಲ್ಲಿ ಬಂದಡೆ, ಇವರನೊಡಗೂಡಿ ನುಡಿದೆನಾದಡೆ, ಜೇನಗಡಿಗೆಯಲ್ಲಿ ಬಿದ್ದ ಗುದಿಮಕ್ಷಿಕನಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಬಲಿ ಅಲೆಯಾಗಿ, ತುಂಬೆಯ ಮೇಲೋಗರವಾಗಿ, ಉಂಬ ಸದುಭಕ್ತನ ಮನೆಯಾಗಿ, ಲೋಕದ ಡಂಭಕರ ಮನೆ ಬೇಡ, ರಾಮನಾಥ
--------------
ಜೇಡರ ದಾಸಿಮಯ್ಯ
ಪಟ್ಟವ ಕಟ್ಟಿದ ಮೇಲೆ ಲಕ್ಷಣವನರಸಲುಂಟೇನಯ್ಯಾ ? ಕೊಡುಂಡು ಜಾತಿಭೇದವನರಸಲುಂಟೇನಯ್ಯಾ ? ಅನ್ಯಭವಿಗೆ ಲಿಂಗುಪದೇಶವ ಕೊಟ್ಚು, ಅವನಲ್ಲುಣಬಾರದೆಂದು ಕುಲಕಂಜಿ, ಒಣ ಪಡಿಯ ತಂದು, ಬೆರಸಿ ಪಾಕವ ಮಾಡಿ ಉಂಬ ಅಜ್ಞಾನಿ ಗುರು ನೀ ಕೇಳಾ. ನಿನ್ನ ಚಿತ್ಕಳಾಪರಬ್ರಹ್ಮಲಿಂಗವನವರಿಗೆ ಕುಡುವಾಗ `ಅವರು ಮಾಡಿದ ದೋಷ ಎನ್ನನಂಡಲೆವವು ಕೊಡಲಮ್ಮೆ' ಎಂಬ ಭಾವ ನಿನ್ನಲ್ಲರಿಯದೆ, ಕಾಂಚಾಣ ಕಪ್ಪಡದಾಸೆಗೆ ದೀಕ್ಷವ ಮಾಡಿ, ಹಿಂದೆ ಉಣಬಾರದೆಂಬ ಶೀಲವ ಹಿಡಿದರೆ, ಮುಂದೆ ಯಮದಂಡನೆ ಬರುವುದನರಿಯಾ ? ಇಂತೀ ಅಜ್ಞಾನಿಗಳ ಗುರು ಶಿಷ್ಯ ಸಂಬಂಧಕ್ಕೆ ಎಂತು ಮೆಚ್ಚುವನಯ್ಯಾ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಾಸುಹೊಕ್ಕಿನಠಾವ ದಾಸಯ್ಯ ಬಲ್ಲ. ಉಂಬ ಉಡುವ (ಊಡುವ ?) ಠಾವ ಸಿರಿಯಾಳ ಬಲ್ಲ. ಕೊಂಬ ಕೊಡುವ ಠಾವ ಬಲ್ಲಾಳ ಬಲ್ಲ. ಲಿಂಗ ಜಂಗಮದ ಠಾವ ಬಸವಣ್ಣ ಬಲ್ಲ. ರುಚಿಯಠಾವ ಬಂಕಯ್ಯ ಬಲ್ಲ. ನಮ್ಮ ಗುಹೇಶ್ವರನ ನಿಲವ, ಸೊನ್ನಲಿಗೆಯ ಸಿದ್ಧರಾಮಯ್ಯನೆ ಬಲ್ಲ
--------------
ಅಲ್ಲಮಪ್ರಭುದೇವರು
ನೆರೆದರೆ ಗಣಂಗಳು! ಹರದಡೆ ಕಂಚುಗಾರರು! ಲಿಂಗವ ಮಾರಿ ಉಂಬ ಭಂಗಾರರು! ತಮ್ಮ ತಳಿಗೆಯ ಕೊಂಡು ಹೋಗಿ ಅನ್ಯರ ಮನೆಯಲುಂಬ ಕುನ್ನಿಗಳನೇನೆಂಬೆ?ರಾಮನಾಥ.
--------------
ಜೇಡರ ದಾಸಿಮಯ್ಯ
ಪರರ ಕಾಡಿ ಬೇಡಿ ಮಾಡೆಹೆನೆಂಬ ಮೋಡಿ ಏತಕ್ಕೆ ? ಕಾಡ ಸೊಪ್ಪಾದಡೇನು, ಬೇಡದೆ ಉಂಬ ಆರೂಢಂಗೆ ಮೂರಡಿಗೊಮ್ಮೆ ನಮೋ ನಮೋ ಎಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಂದೆಯ ಮಗ ಕರೆದು, ಮಗನ ತಂದೆ ಕರೆದು, ಭಾವನ ಮೈದುನ ಕರೆದು, ಮೈದುನನ ಭಾವ ಕರೆದು, ತಮ್ಮ ಬಂಧುಗಳ ಜಂಗಮವೆಂದು ಕೂಡಿಕೊಂಡು ಉಂಬ ಜಗಭಂಡರ ನೇಮ ಸುಸಂಗವಲ್ಲ, ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
ಇನ್ನಷ್ಟು ... -->