ಅಥವಾ

ಒಟ್ಟು 59 ಕಡೆಗಳಲ್ಲಿ , 21 ವಚನಕಾರರು , 40 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ ಎಂಬರು, ಅದು ಹುಸಿ, ನಿಲ್ಲು. ಇಹದಲ್ಲಿ ದುಃಖಿ, ಪರದಲ್ಲಿ ಪ್ರಕೃತಿಯೆಂದೆ. ಇಂತೀ ಇಹಪರವೆಂಬೆರಡು. ಲಕ್ಷ್ಮಿಯ ಮನೆಯ ತೊತ್ತಿನ ತೊತ್ತಾದವರಿಗೆ ಇನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಾವು ಭಕ್ತರೆಂದು ಪುರಾತರ ವಚನವ ಕೇಳಿ, ಆಹಾ ಇನ್ನು ಸರಿಯುಂಟೆಯೆಂದು ಕೈವಾರಿಸುವರು ನೋಡಾ. ಆ ಪುರಾತರ ವಚನವನೊತ್ತಿ ಹೇಳಹೋದಡೆ, ನಮಗೆ ಅಳವಡುವುದೆ ಗೃಹಸ್ಥರಿಗೆ ಎಂಬರು. ಕೇಳಿ ಕೇಳಿ ಸತ್ಯವ ನಂಬದ ಮೂಳರನೇನೆಂಬೆನಯ್ಯಾ, ಕಲಿದೇವಯ್ಯ?
--------------
ಮಡಿವಾಳ ಮಾಚಿದೇವ
ಕಾಳು ದೇಹದೊಳಗೊಂದು ಕೀಳು ಜೀವ ಹುಟ್ಟಿತ್ತಾಗಿ ಅಪ್ಯಾಯನವಡಗದು, ಸಂದೇಹ ಹಿಂಗದು ಇದೇನೊ ಇದೇನೋ! ಹಂದೆಗಳ ಮುಂದೆ ಬಂದು ಕಾಡುತಲಿದ್ದುದೆ ಇದೇನೊ ಇದೇನೋ! ಕಾಲಾಳು ಮೇಲಾಳುಗಳು ಬೇಳುವೆಗೊಳಗಾದರು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬರು.
--------------
ಘಟ್ಟಿವಾಳಯ್ಯ
ಕೈಲಾಸ ಮರ್ತ್ಯಲೋಕ ಎಂಬರು. ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ ? ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ. ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು. ಕೈಲಾಸದವರೆ ದೇವರ್ಕಳೆಂಬರು; ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು. ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು. ಇದ ಕಂಡು ನಮ್ಮ ಶರಣರು ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ, ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು, ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಸತಿಯ ಗುಣವ ಪತಿ ನೋಡಬೇಕಲ್ಲದೆ ಪತಿಯ ಗುಣವ ಸತಿ ನೋಡಬಹುದೆ ಎಂಬರು. ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ? ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ? ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ ಭಂಗವಾರಿಗೆಂಬುದ ತಿಳಿದಲ್ಲಿಯೆ ಕಾಲಾಂತಕ ಬ್ಥೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.
--------------
ಡಕ್ಕೆಯ ಬೊಮ್ಮಣ್ಣ
ದೊಡ್ಡ ದೊಡ್ಡ ಶೆಟ್ಟಿಗಳ ಕಂಡು ಅಡ್ಡಗಟ್ಟಿ ಹೋಗಿ, ಶರಣಾರ್ಥಿ ಎಂಬ ಎಡ್ಡುಗಳ್ಳತನಕ್ಕೆ ತಮ್ಮ ಮಠಕ್ಕೆ ಬನ್ನಿ ಹಿರಿಯರೇ ಎಂಬರು. ಹೋಗಿ ಶರಣಾರ್ಥಿ ಭಕ್ತನೆಂದೊಡೆ ಕೇಳದ ಹಾಗೆ ಅಡ್ಡ ಮೋರೆಯನಿಕ್ಕಿಕೊಂಡು ಸುಮ್ಮನೆ ಹೋಗುವ ಹೆಡ್ಡ ಮೂಳರಿಗೆ ದುಡ್ಡೇ ಪ್ರಾಣವಾಯಿತ್ತು. ದುಡ್ಡಿಸ್ತರ ಕುರುಹನರಿಯದೆ ಮೊಳಪಾದದ ಮೇಲೆ ಹೊಡಹೊಡಕೊಂಡು ನಗುತಿರ್ದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕುದುರೆ- ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು, ಬಡಭಕ್ತರು ಬಂದಡೆ `ಎಡೆುಲ್ಲ, ಅತ್ತ ಸನ್ನಿ' ಎಂಬರು. ಎನ್ನೊಡೆಯ ಕೂಡಲಸಂಗಯ್ಯನವರ ತಡಗೆಡಹಿ ಮೂಗ ಕೊಯ್ಯದೆ ಮಾಬನೆ 414
--------------
ಬಸವಣ್ಣ
ತಮ್ಮಿಚ್ಛೆಗೆ ಬಂದ ಪದಾರ್ಥ ಲಿಂಗದಿಚ್ಛೆ ಎಂಬರು; ತಮ್ಮಿಚ್ಛೆಗೆ ಬರದ ಪದಾರ್ಥ ಲಿಂಗದಿಚ್ಛೆ ಇಲ್ಲವೆಂಬರು. ಹೋದ ವಾಕ್ಕು ಶಿವಾಜ್ಞೆ ಎಂಬರು. ಇದ್ದ ಮಾತು ತನ್ನಾಜ್ಞೆ ಎಂಬರು, ಅದೆಂತಯ್ಯಾ? ಇಚ್ಛೆಗೆ ಒಳಗಾಗುವನಲ್ಲಯ್ಯಾ ಲಿಂಗವು. `ಶಿವೋ ದಾತಾ ಶಿವೋ ಭೋಕ್ತಾ' ಎಂಬುದ ತಿಳಿದು, ಲಿಂಗಮುಖಂದ ಬಂದ ಪದಾರ್ಥವ ಕೈಕೊಂಬಡೆ, ಅಚ್ಚ ಲಿಂಗೈಕ್ಯನೆಂಬೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ. ಅದೆಂತೆಂದಡೆ: ಈ ಲೋಕದೊಳಗೆ ಗುರುವೆಂಬಾತನು ಭಕ್ತರಿಗೆ ದೀಕ್ಷೆಯ ಮಾಡಿ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದೆವೆಂಬರು. ಜಂಗಮಲಿಂಗಿಗಳಿಗೆ ಚರಂತಿಹಿರಿಯರು ಗುರುವೆಂಬಾತನು ಉಭಯರು ಕೂಡಿ, ಅಯ್ಯತನ ಮಾಡಿದೆವು ಎಂಬರು. ಅವರೇನು ಪೂರ್ವದಲ್ಲಿ ಕಪ್ಪಾಗಿದ್ದರೆ ? ಈಗೇನು ಕೆಂಪಗಾದರೆ ? ಅವರೇನು ಪೂರ್ವದಲ್ಲಿ ಬಿಳುಪಾಗಿದ್ದರೆ ? ಈಗೇನು ಕಪ್ಪಾದರೆ ? ಎಲಾ ದಡ್ಡಪ್ರಾಣಿಗಳಿರಾ, ಇದೇನು ವೀರಶೈವಮಾರ್ಗವಲ್ಲ; ಇದು ಶೈವಮಾರ್ಗ. ಇನ್ನು ವೀರಶೈವಮಾರ್ಗದಾಚಾರವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆರೂರವರ ಉಲುಹ ಮಾಣಿಸಿ, ಮೂರೂರವರ ಮೂಲಿಗೆ ಹಾಕಿ, ಬೇರೊಂದೂರವರ ತೋರಬಲ್ಲರೆ ವೀರಶೈವರೆಂಬೆ. ಆರು ಮಂದಿಯನಟ್ಟಿ, ಮೂರು ಮಂದಿಯ ಕುಟ್ಟಿ, ಬಟ್ಟಬಯಲಿನ ಘಟ್ಟಿಯ ತೋರಬಲ್ಲರೆ ವೀರಶೈವರೆಂಬೆ. ಆರು ಬಟ್ಟೆಯನೇ ಮೆಟ್ಟಿ, ಮೂರು ಬಟ್ಟೆಯನೇ ದಾಂಟಿ, ಮೇಲುಬಟ್ಟೆಯಲ್ಲಿ ನಿಂದು ನಿಟಿಲಲೋಚನನ ತೋರಬಲ್ಲರೆ ವೀರಶೈವರೆಂಬೆ. ಆರು ಬಾಗಿಲ ಹಾಕಿ, ಮೂರು ಬಾಗಿಲ ಮುಚ್ಚಿ, ಇನ್ನೊಂದು ಕದವ ತೆಗೆದು ತೋರಬಲ್ಲರೆ ವೀರಶೈವರೆಂಬೆ. ಇಂತೀ ಕ್ರಮವನರಿದು ದೀಕ್ಷೆಯ ಮಾಡಬಲ್ಲರೆ ಗುರುವೆಂಬೆ, ಇಲ್ಲದಿದ್ದರೆ ನರಗುರಿಗಳೆಂಬೆ. ಈ ಭೇದವ ತಿಳಿದು ಅಯ್ಯತನ ಮಾಡಬಲ್ಲರೆ ಚರಮೂರ್ತಿಗಳೆಂಬೆ. ಇಲ್ಲದಿದ್ದರೆ ಮತಿಭ್ರಷ್ಟ ಮರುಳಮಾನವರೆಂಬೆ. ಇಂತೀ ವಿಚಾರವನು ಅರಿಯದೆ ದೀಕ್ಷೆಯ ಮಾಡಬೇಕೆಂಬವರ, ಇಂತೀ ಭೇದವ ತಿಳಿಯದೆ ದೀಕ್ಷೆ ಪಡೆಯಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಅಘೋರನರಕದಲ್ಲಿಕ್ಕೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು. ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು. ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ, ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರು ಗುರು ಎಂದು ಪೂಜೆಯ ಮಾಡುವರು. ಮತ್ತೆಯಾ ಗುರುವ ನರನೆಂದೆಂಬರು, ಅವರು ಗುರುದ್ರೋಹಿಗಳು. ಲಿಂಗ ಲಿಂಗವೆಂದು ಪೂಜೆಯ ಮಾಡುವರು, ಆ ಲಿಂಗವ ಶಿಲೆ ಎಂಬರು, ಅವರು ಲಿಂಗದ್ರೋಹಿಗಳು. ಜಂಗಮ ಜಂಗಮವೆಂದು ಪೂಜೆಯ ಮಾಡುವರು, ಆ ಜಂಗಮವ ಜಗದ ಹಂಗಿಗರೆಂಬರು, ಅವರು ಜಂಗಮದ್ರೋಹಿಗಳು. ಈ ಮೂರು ಕರ್ತರೆಂದು ಅರಿಯದವಂಗೆ ಕುಂಭೀಪಾಕ ನಾಯಕನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು. ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ? ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ, ಇತ್ತ ಬನ್ನಿ ಎಂಬರು. ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ, ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ, ಬಸವಪ್ರಿಯ ಕೂಡಲಚೆನ್ನಬಸಣ್ಣಾ .
--------------
ಹಡಪದ ಅಪ್ಪಣ್ಣ
ಆದಿ-ಅನಾದಿ, ಸಾಕಾರ-ನಿರಾಕಾರ ಎಂಬುವೇನುವಿಲ್ಲದ ವಾಗತೀತವಾದ ನಿರ್ನಾಮವಸ್ತು ತಾನೆ ! ತನ್ನ ಲೀಲಾವಿಲಾಸದಿಂದಾದ ಪ್ರಭಾವದ ಸ್ಫುರಣವೆ ಮಹಾಪ್ರಕಾಶ. ಆ ಮಹಾಪ್ರಕಾಶದ ಆವರಣವೆ ನಿಜಾತ್ಮನು. ಆ ನಿಜಾತ್ಮನೆ ತನ್ನಿಂದಾದ ಸಮಸ್ತವಸ್ತುಗಳೆನಿಪ ತತ್ವಂಗಳಿಗೆ ತಾನೇ ಕಾರಣವಾದ. ಇದನರಿಯದೆ ಆತ್ಮಂಗೆ ಅನಾದಿಮಲತನುತ್ವ ಪಾಶಬಂಧ ಉಂಟೆಂಬರು, ಅದು ಹುಸಿ. ಆ ಆತ್ಮನು ತನ್ನಿಂದ ಪ್ರವರ್ತಿಸುವ ಮಹದಾದಿ ತತ್ತ್ವಂಗಳಿಗೆ ತಾನೇ ಮೂಲಾಧಾರವಾದ ಕಾರಣ ಮೂಲಪ್ರಕೃತಿಸ್ವರೂಪವೆನಿಸಿಕೊಂಬನು. ಆ ನಿಜಾತ್ಮನಲ್ಲಿ ಅನಾದಿಮಲಪಾಶಂಗಳು ಸತ್ಯವಲ್ಲ. ಇದು ಕಾರಣ ಆ ಆತ್ಮನು ಮೇಲಣ ಘನಲಿಂಗವಾದುದು ತಾನೆ, ಲಯಿಸುವುದಕ್ಕೂ ಗಮಿಸುವುದಕ್ಕೂ ತಾನೆ. ತಾನಾ ಕಾರಣನಾದನಾಗಿ ಪ್ರತಿಪದಾರ್ಥವಿಲ್ಲ. ಅದೆಂತೆಂದಡೆ: ಪರಾತ್ಪರತರವಪ್ಪ ಪರಬ್ರಹ್ಮಕ್ಕೆ ಬೆಚ್ಚಿ ಬೇರಾಗದ ಕಾರಣ. ಅದು ದೀಪ ದೀಪದ ಪ್ರಭೆಯಂತೆ, ರತ್ನ ರತ್ನದ ಕಾಂತಿಯಂತೆ ಆತ್ಮಲಿಂಗೈಕ್ಯ. ಇಂತೀ ಸಹಜಸೃಷ್ಟಿಯನರಿಯದೆ ``ಅನಾದಿ ಆತ್ಮಂಗೆ ಪಾಶಂಗಳುಂಟು, ಆತ್ಮ ಪಶು ಪಾಶ ಮಾಯೆ ಪತಿ ಶಿವ`` ಎಂಬರು ! ಇಂತೀ ತೆರದಲ್ಲಿ ತ್ರಿಪಾದರ್ಥಗಳ ಹೇಳುವರು ! ಅದು ಹುಸಿ. ಸೃಷ್ಟಿ ಮೊದಲು ಐಕ್ಯ ಕಡೆಯಾಗಿ ಅಭೇದವಲ್ಲದೆ ಭೇದವಿಲ್ಲ. ಇನ್ನು ಅದ್ವೈತಮತದಲ್ಲಿ ವೇದಾಂತಿಯೆಂಬಾತ ನಿಜ ಸೃಷ್ಟಿಯರಿಯ. ಅದೆಂತೆಂದಡೆ: `ಶಕ್ತ್ಯಧೀನಂ ಪ್ರಪಂಚಶ್ಚ' ಎಂಬ ಶ್ರುತಿಯನರಿದು ! ಆ ಶಕ್ತಿಯ ಆಧಾರದಲ್ಲಿ ತೋರುವ ತತ್ತ್ವಂಗಳ ಪ್ರವರ್ತನೆ ವಿಶ್ವವೆನಿಸುವದು. ಅದನರಿಯದೆ ವೇದಾಂತಿ ದಗ್ದೈಶ್ಯವೆಂಬ, ದೃಕ್ಕೆ ವಸ್ತುವೆನಿಪಾತ್ಮನೆಂಬ, ದೃಶ್ಯವೆ ಮಾಯೆಯೆಂಬ ! ಅದು ಹುಸಿ; ಆ ಶಕ್ತಿಯ ಆಧಾರದಲ್ಲಿ ತೋರುವ ವಿಶ್ವಪ್ರಪಂಚವು. ಆ ಪ್ರಪಂಚದ ಮಧ್ಯದಲ್ಲಿ ತೋರುವ ಶಕ್ತಿಯ ಕ್ರಮವೆಂತೆಂದಡೆ: ಜಲಮಧ್ಯದಲ್ಲಿ ತೋರುವ ಇನಬಿಂಬದಂತೆ ಬಿಂಬಿಸುವುದಾಗಿ ! ಆ ಬಿಂಬವೇ ಜೀವನು, ಆ ಜೀವನೆ ದೃಕ್ಕು, ಅವನ ಕೈಯಲ್ಲಿ ಕಾಣಿಸಿಕೊಂಬ ವಿಷಯವೆ ಮಾಯೆ. ಈ ಎರಡರ ವ್ಯವಹಾರ ಆ ಶಕ್ತಿಗೆ ಇಲ್ಲವಾಗಿ, ದೃಕ್ಕುದೃಶ್ಯವೆಂಬ ವೇದಾಂತಿಯ ಮತವಂತಿರಲಿ. ಇಂತೀ ದ್ವೈತಾದ್ವೈತದಲ್ಲಿ ಪ್ರವರ್ತಿಸರು ಶಿವಶರಣರು. ಈ ದ್ವೈತಾದ್ವೈತದಲ್ಲಿ ಪ್ರವರ್ತಿಸುವ ಪ್ರವರ್ತನಕ್ಕೆ ತಾವೆ ಕಾರಣವೆನಿಪ್ಪರು. ಇಂತೀ ಕಾರಣವೆನಿಸಿರ್ಪ ಶರಣರ ನಿಲವೆಂತುಂಟೆಂದಡೆ: ಸಕಲವಿಶ್ವವೆ ಸತಿಯರೆನಿಸಿ ತಾನು ತನ್ನ ನಿಜಕ್ಕೆ ಅಂಗನಾಗಿ, ಆ ನಿಜವೆ ಆತ್ಮಂಗೆ ಅಂಗವಾಗಿ ನಿಂದ ನಿಲವೆ ಪರವಸ್ತುವಿನ ಪ್ರಭಾವ. ಆ ಪ್ರಭಾವಾದ ಶರಣನ ನಿಲುವೆ ಉರಿಲಿಂಗದೇವನೆಂಬ ಗಂಡನಾಗಿ ಬಂಧ ತೆಗೆದ.
--------------
ಉರಿಲಿಂಗದೇವ
ಪದವು ಪದಾರ್ಥವು ಎಂಬರು, ಪದವಾವುದೆಂದರಿಯರು, ಪದಾರ್ಥವಾವುದೆಂದರಿಯರು. ಪದವೇ ಲಿಂಗ, ಪದಾರ್ಥವೇ ಭಕ್ತ. ಇದನರಿದು ಪದಾರ್ಥವ ತಂದು ಲಿಂಗಾರ್ಪಿತವ ಮಾಡಬಲ್ಲರೆ ಕೂಡಿಕೊಂಡಿಪ್ಪ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಶರಣ ಸತಿ, ಲಿಂಗ ಪತಿ ಎಂಬರು. ಶರಣ ಹೆಣ್ಣಾದ ಪರಿಯಿನ್ನೆಂತು ? ಲಿಂಗ ಗಂಡಾದ ಪರಿಯಿನ್ನೆಂತು ? ನೀರು ನೀರು ಕೂಡಿ ಬೆರೆದಲ್ಲಿ, ಭೇದಿಸಿ ಬೇರೆ ಮಾಡಬಹುದೆ ? ಗಂಡು ಹೆಣ್ಣು ಯೋಗವಾದಲ್ಲಿ ಆತುರ ಹಿಂಗೆ ಘಟ ಬೇರಾಯಿತ್ತು. ಇದು ಕಾರಣ ಶರಣ ಸತಿ, ಲಿಂಗ ಪತಿ ಎಂಬ ಮಾತು ಮೊದಲಿಂಗೆ ಮೋಸ, ಲಾಭಕ್ಕಧೀನವುಂಟೆರಿ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->