ಅಥವಾ

ಒಟ್ಟು 11 ಕಡೆಗಳಲ್ಲಿ , 10 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಮ್ಮ ತಾವರಿಯರು ಹೇಳಿದಡೂ ಕೇಳರು. ಆರರ ಹೊಲಬ ಏನೆಂದರಿಯರು. ಎಂಟರ ಕಂಟಕವ ಮುನ್ನರಿಯರು. ಏರಿದ ಬೆಟ್ಟವ ಇಳಿಯಲರಿಯದವರ ಏನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕ್ಷಮೆ ದಮೆ ಶಾಂತಿ ಸೈರಣೆ ಭಕ್ತಿ ಜ್ಞಾನ ವೈರಾಗ್ಯಸಂಪನ್ನರಾದ ವೀರಮಾಹೇಶ್ವರರು, ಜಗದ್ಧಿತಾಥಾವಾಗಿ ಮತ್ರ್ಯಲೋಕದೊಳು ಬಂದು, ನಡೆನಡೆಗೆ ನುಡಿನುಡಿಗೆ ಅಡಿಗಡಿಗೆ ಹೆಜ್ಜೆಹೆಜ್ಜೆಗೆ ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ- ಎಂಬ ಮಂತ್ರಮೂರ್ತಿಗಳಾಗಿ, ಲಿಂಗದ ನೆನಹಿಂದ ಲಿಂಗಾರ್ಪಿತಕ್ಕೆ ಹೋಗಿ, ನಿಂದು ಲಿಂಗಾರ್ಪಿತ ಭಿಕ್ಷಾ ಎಂದಲ್ಲಿ, ಗುರುವಾಜ್ಞೆಯಿಂದ ಬಂದ ಭಿಕ್ಷ ಅಮೃತಾನ್ನವೆಂದು ಕೈಕೊಂಡು ಭೋಜ್ಯ ಭೋಜ್ಯಗೆ ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಎಂಬ ನುಡಿಯಿಂದ ಸೇವಿಸಿ, ನಿತ್ಯತೃಪ್ತರಾಗಿ, ಸುಳುಹು ಪಾವನರಾಗಿ ಚರಿಸುವ ಮಹಾಮಹಿಮ ಶರಣರ ನಡೆ ಪುರುಷ, ನುಡಿ ಪುರುಷ, ಮುಟ್ಟಿದ್ದು, ನೋಡಿ ಸೋಂಕಿದ್ದೆಲ್ಲಾ ಪಾವನ, ಹಾದ ಜಲವೆಲ್ಲ ಪುಣ್ಯತೀರ್ಥ, ಏರಿದ ಬೆಟ್ಟವೆಲ್ಲ ಶ್ರೀಪರ್ವತಂಗಳಾದವು. ಇಂತಪ್ಪ ನಿರಾಳ ನಿಜೈಕ್ಯ ನಿರಾಮಯ ನಿರ್ದೇಹಿಗಳಾದ ಶರಣರ ಅರೆಪಾದ ಧೂಮ್ರ ಮಲಿನವಾಗಿರುವಂತೆ ಮಾಡಯ್ಯ. [ಕೇಟಶ್ವರಲಿಂಗದಲ್ಲಿ] ಧನ್ಯ ನಾನಯ್ಯ.
--------------
ಬೊಕ್ಕಸದ ಚಿಕ್ಕಣ್ಣ
ಕೆರೆ ಪೂದೋಟ ಅರವಟ್ಟಿಗೆ ಬಾವಿ ವಿವಾಹ ಮುಂತಾದ ಧರ್ಮಂಗಳ ಕಟ್ಟಿಹೆವೆಂದು ನೇಮದಿಂದ ತಿರುಗುವ ಶೀಲ ಅದಾರಿಗೆ ಯೋಗ್ಯ? ಸರಿಹುದುಗಿನ ಸೂಳೆ ಸೀರೆಯನುಟ್ಟಂತೆ ಅದಾರಿಗೆ ಸುಖದುಃಖವೆಂಬುದ ನೀನೆ ಅರಿ. ಸರಿ ಹುದುಗಿನ ಧರ್ಮವುಂಟೆ? ಅರಿಕೆಯ ಒಡವೆಯ ಊರೆಲ್ಲಕ್ಕೆ ತಂದಿಕ್ಕಿ, ನಾ ಮಾಡಿದೆನೆಂದಡೆ ಇದಾರು ಮೆಚ್ಚುವರು? ಆ ಮಾಟವನಾರಯ್ಯಲಿಲ್ಲ, ಅದು ಸ್ವಕಾರ್ಯಕ್ಕೆ ಏರಿದ ಪಥ. ಇಂತೀ ವ್ರತ ನೇಮ ಶೀಲವನರಿಯಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಧರ್ಮಜ್ಞನಾಗಿ ವ್ರತವನಂಗೀಕರಿಸಬೇಕು.
--------------
ಅಕ್ಕಮ್ಮ
ಅದಿರಿನ ತಲೆ, ಬಿದಿರಿದ ಬಾಯಿ, ಕಾಡಿನ ಹಕ್ಕೆ, ಓಡಿನ ಊಟಿ ಹತ್ತಿದ ಹೊಟ್ಟೆ, ಬತ್ತಿದ ಗಲ್ಲ, ಊರಿದ ಚರಣ, ಏರಿದ ಭಾಷೆ. ಇದು ಶರಣಂಗಲ್ಲದೆ ನಡುವಣ ಪುಕ್ಕಟವಾದವರಿಗೆಲ್ಲಿಯದೊ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆತ್ಮನು ಘಟದಲ್ಲಿದ್ದ ಸೂತ್ರವ ಯೋಗಿಗಳು ಭೇದಿಸಿ ಕಂಡು ಧ್ಯಾನ ಧಾರಣ ಸಮಾಧಿಯಿಂದ ಆತ್ಮನ ಕಟ್ಟುವಡೆದನೆಂದು ನುಡಿದ ದಿಟ್ಟರ ನೋಡಾ. ಆತ್ಮ ಕಟ್ಟುವಡೆದ ಮತ್ತೆ ನಿಧಾನಿಸುವುದೇನು ಧಾರಣದಲ್ಲಿ? ಎಡೆ ತಾಕುವದೇನು ಸಮಾಧಿಯಲ್ಲಿ? ಸಮಾಧಾನದಿಂದ ಸಮಾಧಿಯಲ್ಲಿಪ್ಪುದೇನು ಎಂಬುದ ತಾನರಿತಲ್ಲಿ ಯೋನಿಯ ಯೋಗವೆನಲೇತಕ್ಕೆ? ಈಡಾ ಪಿಂಗಳವೆಂಬ ಎರಡು ದಾರಿಯಲ್ಲಿ ಸುಷುಮ್ನಾನಾಳಕ್ಕೆ ಏರಿದ ಮತ್ತೆ ಆತ್ಮನು ಮತ್ತೆ ಮತ್ತೆ ನಾಡಿನಾಡಿಗಳಲ್ಲಿ ದ್ವಾರದ್ವಾರಂಗಳಲ್ಲಿ ಭೇದಿಸಿ ವೇದಿಸಲೇತಕ್ಕೆ? ಬೀಜದ ತಿರುಳು ಸತ್ತ ಮತ್ತೆ ಎಯ್ದೆ ನೀರಹೊಯ್ದಡೆ ಸಾಗಿಸಿ ಬೆಳೆದುದುಂಟೆ? ಆತ್ಮಯೋಗಿಯಾದಲ್ಲಿ ನೇತ್ರ ಶ್ರೋತ್ರ ಘ್ರಾಣ ತ್ವಕ್ಕು ಜಿಹ್ವೆ ಎಂದಿನ ನಿಹಿತದಂತೆ ಆಡಬಹುದೆ? ಅದು ಯೋಗವಲ್ಲ, ಇವ ಕಲಿತೆಹೆನೆಂಬ ಬಲು ರೋಗವಲ್ಲದೆ, ಇದು ಮೀಸಲುಗವಿತೆ, ಇದು ಘಾತಕರುಗಳಿಗೆ ಅಸಾಧ್ಯ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಶಿವಯೋಗಿ ಸುಳಿದ ಸುಳುಹು ಜಗತ್ಪಾವನ. ಮೆಟ್ಟಿದ ಧರೆಯೆಲ್ಲ ಪವಿತ್ರ. ನಿಮಿಷವಿರ್ದಾಸ್ಥಲವೆಲ್ಲ ಅವಿಮುಕ್ತಿಕ್ಷೇತ್ರ. ಹೊಕ್ಕ ಜಲವೆಲ್ಲ ಪುಣ್ಯತೀರ್ಥಂಗಳು. ಏರಿದ ಬೆಟ್ಟವೆಲ್ಲ ಶ್ರೀ ಪರ್ವತ. ಕೃಪೆಯಿಂದ ನೋಡಿದ ಜನರೆಲ್ಲ ಸಾಲೋಕ್ಯರು. ಒಡೆನೆ ಸಂಭಾಷಣೆಯ ಮಾಡಿದವರೆಲ್ಲ ಸದ್ಯೋನ್ಮುಕ್ತರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಸುಳುಹಿನ ಘನತೆಯನುಪಮಿಸಬಾರದು.
--------------
ಸ್ವತಂತ್ರ ಸಿದ್ಧಲಿಂಗ
ಭೂಮಿಯ ಮಧ್ಯದಲ್ಲಿ ಒಬ್ಬ ಗಾಣಿಗ ಸ್ಥಾಣುವ ನೆಟ್ಟು, ಮೊದಲೊಂದು ಬಾಯಿಮೂರು, ಕೊಂತವಾರು, ಎಂಟೆತ್ತು, ನೊಗ ಹದಿನಾರು, ಕೊರಳಕಣ್ಣಿ ನೂರೊಂದು. ಇಂತಿವ ಕೂಡಿ ಹೊಡೆಯಲಾಗಿ, ಒರಳ ಬಾಯಿಗೆ ಏರಿದ ಹಲಗೆಗೆ ಮೇಲೆ ಏತದ ಸೂತ್ರಕ್ಕೆ ಒಂದೆ, ಇದ ಹೇಳು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಗುರು ಏರಿದ ಮಂಚವನೇರಿದನಾದಡೆ, ಕಾಲ್ಗಳು ಹರಿದು ಹೋಗಲಿ ದೇವಾ. ಗುರು ಹೊದ್ದ ವಸ್ತ್ರವ ಹೊದ್ದೆನಾದಡೆ, ಚರ್ಮವು ಸುಲಿದು ಹೋಗಲಿ ದೇವಾ. ಗುರು ಮುಟ್ಟಿದ ಪದಾರ್ಥವ ಮುಟ್ಟಿದೆನಾದಡೆ, ಪುಳುಗೊಂಡವ ಮಾಡ ಕಪಿಲಸಿದ್ಧಮಲ್ಲಿಕಾರ್ಜುನದೇವ.
--------------
ಸಿದ್ಧರಾಮೇಶ್ವರ
ಗುರುಸ್ಥಲವಾರು, ಲಿಂಗಸ್ಥಲ ಮೂರು, ಜಂಗಮಸ್ಥಲ ಒಂದೆಯೆಂದಲ್ಲಿ ಓಂಕಾರ ಬಿಂದು ಸಹಿತಾದಂತೆ. ಆರೋಹ ಅವರೋಹವಾಗಿ ನಿಂದು, ಏರಿದ ವಿಷ ಇಳಿದು ಸೋರುವಂತೆ. ಅದಾರ ಗುಣವೆಂದು ಪ್ರಣವದ ಬೇರನರಿತಲ್ಲಿ, ಸರ್ವಸ್ಥಲ ಜಾರಿ ಮೀರಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಏರಿದ ವಾಜಿ ಓಹೋ ಎಂದು ಕರೆದೋರಿದಲ್ಲಿ ನಿಂದಿತ್ತು ವಾಹನ ವಾಹಕನ ಹೃದಯವನರಿತು. ವಸ್ತುವ ಮುಟ್ಟಿ ಆಡುವ ಚಿತ್ತ ನಿಜವಸ್ತುವಿನ ಗೊತ್ತನರಿಯದೆ ತನ್ನ ಇಚ್ಛೆಯಲ್ಲಿ ಹರಿದಾಡುತ್ತಿದೆ ನೋಡಾ! ಇದಕ್ಕೆ ಒಂದು ಕಟ್ಟಣೆಯ ಗೊತ್ತ ಲಕ್ಷಿಸಿ ಕಟ್ಟುವಡೆವಂತೆ ಮಾಡು ಗೋಪತಿನಾಥ ವಿಶ್ವೇಶ್ವರಲಿಂಗ.
--------------
ತುರುಗಾಹಿ ರಾಮಣ್ಣ
ಊರೆಲ್ಲಾ ಏರಿದ ಹರಗುಲವ, ನೀರಿನಲ್ಲಿ ದಾರಿಯ ಕೊಂಡು ಹೋಹವನ ಆರೈಕೆಯಲ್ಲದೆ ಏರಿದವರೆಲ್ಲಕ್ಕೂ ಆರೈಕೆವುಂಟೆ ? ಹೇಳುವಾತನ ವಿರಕ್ತಿ, ಕೇಳುವಾತನ ಸದ್ಭಕ್ತಿ ಉಭಯದ ನೆಲೆಯ ಆರಿಂದ ಅರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->