ಅಥವಾ

ಒಟ್ಟು 19 ಕಡೆಗಳಲ್ಲಿ , 9 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರವೆಂಬುದು ಕೂರಲಗು, ತಪ್ಪಿ ಬಂದಡೆ ಪ್ರಾಣವ ತಗಲುವುದು. ಅದು ಕಾರಣ, ಅರಿದರಿದು ಆಚರಿಸಬೇಕು. ಆಚಾರವಿಚಾರ ಉಭಯದ ವಿಚಾರವ ನೋಡದೆ, ಶಿವದೀಕ್ಷೆಯ ಮಾಡಲಾಗದು. ಅದೆಂತೆಂದಡೆ : ಪರರ ಹೆಣ್ಣಿಗೆ ಕಣ್ಣಿಡದಿಹುದೆ ಒಂದನೆಯ ಆಚಾರ. ಪರರ ದ್ರವ್ಯವ ಅಪಹಾರ ಮಾಡದಿಹುದೆ ಎರಡನೆ ಆಚಾರ. ಸುಳ್ಳಾಡದಿರವುದೆ ಮೂರನೆಯ ಆಚಾರ. ವಿಶ್ವಾಸಘಾತವ ಮಾಡದಿಹುದೆ ನಾಲ್ಕನೆಯ ಆಚಾರ. ಪ್ರಾಣಹಿಂಸೆಯ ಮಾಡದಿಹುದೆ ಐದನೆಯ ಆಚಾರ. ಸಕಲ ಶಿವಶರಣರ್ಗೆ ಸಂತೋಷವಂ ಪುಟ್ಟಿಸುವುದೆ ಆರನೆಯ ಆಚಾರ. ಸ್ವೀಕರಿಸಿದ ನೇಮವ ಪ್ರಾಣಾಂತ್ಯವಾಗಿ ಬಿಡೆನೆಂಬುವ ಏಳನೆಯ ಆಚಾರ. ಷಟ್ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತವೆ ಎಂಟನೆ ಆಚಾರ. ಕೆಟ್ಟಜನರ ಸಹವಾಸ ಮಾಡದಿಹುದೆ ಒಂಬತ್ತನೆಯ ಆಚಾರ. ಸಜ್ಜನ ಸಂಗತಿಯ ಬಿಡದಿಹುದೆ ಹತ್ತನೆಯ ಆಚಾರ ಅನ್ಯದೇವತಾಭಜನೆಗೆ ವಿಮುಖನಾಗುವುದೆ ಹನ್ನೊಂದನೆಯ ಆಚಾರ. ಶಿವನೇ ಸರ್ವದೇವಶಿಖಾಮಣಿಯೆಂದು ಮನದಲ್ಲಿ ಅಚ್ಚೊತ್ತಿಪ್ಪುದೆ ಹನ್ನೆರಡನೆಯ ಆಚಾರ. ಶಿವನಿಗೆ ಶಿವಗಣಂಗಳಿಗೆ ಭೇದವ ಮಾಡದಿಹುದೆ ಹದಿಮೂರನೆಯ ಆಚಾರ. ಸಕಲ ಜೀವಿಗಳಿಗೆ ಹಿತವ ಬಯಸುವುದೆ ಹದಿನಾಲ್ಕನೆಯ ಆಚಾರ. ಸರ್ವರಿಗೆ ಹಿತವ ಮಾಡುವುದೆ ಹದಿನೈದನೆಯ ಆಚಾರ. ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಾಡುವುದೆ ಹದಿನಾರನೆಯ ಆಚಾರ. ಸರ್ವಾವಯವವ ಸ್ವಚ್ಛ ಪ್ರಕ್ಷಾಳಿಸುವುದೆ ಹದಿನೇಳನೆಯ ಆಚಾರ ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಾಡದಿಹುದೆ ಹದಿನೆಂಟನೆಯ ಆಚಾರ. ಪ್ರಣವಮುದ್ರೆ ಇಲ್ಲದ ವಸ್ತ್ರ ಹೊದೆಯದಿಹುದೆ ಹತ್ತೊಂಬತ್ತನೆಯ ಆಚಾರ. ಹುಟ್ಟಿದ ಶಿಶುವಿಗೆ ಲಿಂಗಾಧಾರಣ ಮಾಡದೆ, ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೆ ಇಪ್ಪತ್ತನೆಯ ಆಚಾರ. ಆಡಿದ ಭಾಷೆಯ ಕಡೆಪೂರೈಸುವುದೆ ಇಪ್ಪತ್ತೊಂದನೆಯ ಆಚಾರ. ಸತ್ಯವ ನುಡಿದು ತಪ್ಪದಿಹುದೆ ಇಪ್ಪತ್ತೆರಡನೆಯ ಆಚಾರ. ತುರುಗಳ ಕಟ್ಟಿ ರಕ್ಷಿಸುವುದೆ ಇಪ್ಪತ್ತುಮೂರನೆಯ ಆಚಾರ. ತುರುಗಳಿಗೆ ಲಿಂಗಮುದ್ರೆಯಿಕ್ಕಿ ಹಾಲು ಕರೆವುದು ಇಪ್ಪತ್ತುನಾಲ್ಕನೆಯ ಆಚಾರ. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಾಡುವುದೆ ಇಪ್ಪತ್ತೈದನೆಯ ಆಚಾರ. ಆ ಭಸ್ಮದ ರಾಶಿಯ ಪಾದೋದಕದೊಡನೆ ಉಂಡಿಯ ಕಟ್ಟುವುದೆ ಇಪ್ಪತ್ತಾರನೆಯ ಆಚಾರ. ವಿಧಿಯರಿತು ಸ್ಥಾನವರಿತು ರುದ್ರಾಕ್ಷಿಗ? ಧರಿಸುವುದೆ ಇಪ್ಪತ್ತೇಳನೆಯ ಆಚಾರ. ಶಿವಾನುಭವವ ಶಾಸ್ತ್ರವ ವಿಚಾರಿಸುವುದೆ ಇಪ್ಪತ್ತೆಂಟನೆಯ ಆಚಾರ. ಮನವ ನೋಯಿಸಿ ಮಾತನಾಡದಿಹುದೆ ಇಪ್ಪತ್ತೊಂಬತ್ತನೆಯ ಆಚಾರ. ಲಿಂಗದ ಕಲೆಯರಿತು ಲಿಂಗವ ಪೂಜಿಸುವುದೆ ಮೂವತ್ತನೆಯ ಆಚಾರ. ಗುರುಮುಖದಿಂದ `ತಾನಾರು' ತನ್ನ ನಿಜವೇನೆಂದು ಬೆಸಗೊಳ್ಳವುದೆ ಮೂವತ್ತೊಂದನೆಯ ಆಚಾರ. ಷಡ್ವರ್ಗಂಗಳ ಮೆಟ್ಟಿ ಷಟ್ಸ್ಥಲವನಿಂಬುಗೊಂಡುದೆ ಮೂವತ್ತೆರಡನೆಯ ಆಚಾರ. ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಂಡುದೆ ಮೂವತ್ತುಮೂರನೆಯ ಆಚಾರ. ಲಿಂಗದಲ್ಲಿ ಶಿಲೆಯ ಭಾವವನರಸದಿಹುದೆ ಮೂವತ್ತುನಾಲ್ಕನೆಯ ಆಚಾರ. ಜಂಗಮದಲ್ಲಿ ಕುಲವನರಸದಿಹುದೆ ಮೂವತ್ತೈದನೆಯ ಆಚಾರ. ವಿಭೂತಿಯ ಮಾಣ್ಬದಿಹುದೆ ಮೂವತ್ತಾರನೆಯ ಆಚಾರ. ರುದ್ರಾಕ್ಷಿಯ ಶುದ್ಧವ ಮಾಡಿ ಮಣಿಗಳ ಅರಸುವುದೆ ಮೂವತ್ತೇಳನೆಯ ಆಚಾರ. ಪಾದೋದಕದಲ್ಲಿ ಉಚ್ಛಿಷ್ಟವಳಿದುದೆ ಮೂವತ್ತೆಂಟನೆಯ ಆಚಾರ. ಪ್ರಸಾದದಲ್ಲಿ ರುಚಿಯ ನೋಡದಿಹುದೆ ಮೂವತ್ತೊಂಬತ್ತನೆಯ ಆಚಾರ. ಮಂತ್ರದಲ್ಲಿ ಕುತ್ಸಿತಕಲ್ಪನೆಯ ಮಾಡದಿಹುದೆ ನಾಲ್ವತ್ತೆಳನೆಯ ಆಚಾರ. ಲಿಂಗಾರ್ಚನವಿರಹಿತ ಭೋಜನ ಮಾಡದಿಹುದೆ ನಾಲ್ವತ್ತೊಂದನೆಯ ಆಚಾರ. ಐಕ್ಯರ ಸಮಾಧಿಗೊಳಿಸಿ ತಾನು ಲಿಂಗಪೂಜೆಯ ಮಾಡುವುದೆ ನಾಲ್ವತ್ತೆರಡನೆಯ ಆಚಾರ. ಲಿಂಗದ್ರೋಹವ ಕೇಳಿ ತಾನು ಪ್ರಾಣಬಿಡುವುದೆ ನಾಲ್ವತ್ತುಮೂರನೆಯ ಆಚಾರ. ಜಂಗಮದ್ರೋಹವ ಕೇಳಿ ತಾನು ಐಕ್ಯನಾಗುವುದೆ ನಾಲ್ವತ್ತುನಾಲ್ಕನೆಯ ಆಚಾರ. ಲಿಂಗದ್ರೋಹವ ಮಾಡಿದವನ ಪ್ರಾಣವ ಭೇದಿಸುವುದೆ ನಾಲ್ವತ್ತೈದನೆಯ ಆಚಾರ. ಜಂಗಮದ್ರೋಹವ ಮಾಡಿದವನ ಶಿರವನೀಡಾಡುವುದೆ ನಾಲ್ವತ್ತಾರನೆಯ ಆಚಾರ. ಅಷ್ಟಾವರಣಸಂಗವ ಮಾಡುವ ಭೇದವ ತಿಳಿವುದೆ ನಾಲ್ವತ್ತೇ?ನೆಯ ಆಚಾರ. ತಾನಾರು ಲಿಂಗವಾರು ಎಂಬ ಭೇದವು ತಿಲಮಾತ್ರ ಇಲ್ಲದಿರುವುದೆ ನಾಲ್ವತ್ತೆಂಟನೆಯ ಆಚಾರ. ತನ್ನ ನಿಜವಿಚಾರವ ತಾ ಮರೆಯದೆ ಷಟ್ಸ್ಥಲದವರಿಗೆ ಅರುಹಿ ತನ್ನಂತೆ ಮಾಡುವುದೆ ನಾಲ್ವತ್ತೊಂಬತ್ತನೆಯ ಆಚಾರ. ಇಂತಿಷ್ಟು ಆಚಾರಂಗಳ ಕಡೆಮುಟ್ಟಿಸುವುದೆ, ಕೂಡಲಚೆನ್ನಸಂಗಮದೇವರಲ್ಲಿ ಐವತ್ತನೆಯ ಆಚಾರ ನೋಡಾ ಸಿದ್ದರಾಮಯ್ಯಾ.
--------------
ಚನ್ನಬಸವಣ್ಣ
ಭಕ್ತನೆದ್ದು ಭವಿಯ ಮುಖವ ಕಂಡರೆ, gõ್ಞರವ ನರಕವೆಂಬರು. ಭಕ್ತನಾವನು ? ಭವಿಯಾವನು ? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು, `ನಾನು ಭವಿಯ ಮೋರೆಯ ಕಾಣಬಾರದು, ಎಂದು ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಒಂದನೆಯ ಗಾಳಕ್ಕೆ ಬ್ರಹ್ಮನ ಕೆಡವಿದೆ. ಎರಡನೆಯ ಗಾಳಕ್ಕೆ ವಿಷ್ಣುವಿನ ಕೆಡವಿದೆ. ಮೂರನೆಯ ಗಾಳಕ್ಕೆ ರುದ್ರನ ಕೆಡವಿದೆ. ಮಿಕ್ಕಾದ ಗಾಳದಿಂ ಹಲವು ದೇವತೆಗಳ ಕೆಡವಿದೆ. ಒಂದು ಗಾಳದಿಂದ ನಾ ಸತ್ತು ಕಾಯಕವ ಮಾಡುತ್ತಿರ್ಪೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶೀಲಶೀಲವೆಂಬ ಅಣ್ಣಗಳು ನೀವು ಕೇಳಿರೊ: ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧಭವಿಯ ತಮ್ಮ ಎದೆಯೊಳಗೆ ಇಂಬಿಟ್ಟುಕೊಂಡು ಅಂಗದ ಮೇಲೆ ಅವರಿಗೆ ಲಿಂಗವುಂಟೊ ? ಇಲ್ಲವೊ ? ಎಂಬ ಜಗಭಂಡರು ನೀವು ಕೇಳಿರೊ: ಅಚ್ಚಪ್ರಸಾದಿ ನಿಚ್ಚಪ್ರಸಾದಿ ! ಜಲವನೆ ಹೊಕ್ಕು ಕನ್ನವನಿಕ್ಕಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವ ಹಗಲುಗಳ್ಳರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ತಾಯಿಯಲ್ಲಿ ಬಯಸಿ ತಂದ ತಲೆಯ ಕೈಯೊಳಿಟ್ಟು ಕಾಣದಿರ್ದೊಡೆ ಸವಿಸುಖ ತಪ್ಪಿತ್ತು. ಮಣ್ಣೊಳಗೆ ಮುಚ್ಚಿದರೆ ಒಂದನೆಯ ಸುಖ ತಪ್ಪಿತ್ತು. ಜಲದೊಳಗೆ ಮುಚ್ಚಿದರೆ ಎರಡನೆಯ ಸುಖ ತಪ್ಪಿತ್ತು. ಕಿಚ್ಚಿನೊಳಗೆ ಮುಚ್ಚಿದರೆ ಮೂರನೆಯ ಸುಖ ತಪ್ಪಿತ್ತು. ಗಾಳಿಯೊಳಗೆ ಮುಸುಕಲಿಟ್ಟರೆ ನಾಲ್ಕನೆಯ ಸುಖ ತಪ್ಪಿತ್ತು. ಅಂಬರದೊಳಗಡಗಿಸಿದರೆ ಐದನೆಯ ಸುಖ ತಪ್ಪತ್ತು. ಕರ್ತಾರನಲ್ಲಿಟ್ಟು ಕಾಣಿಸದಿರ್ದಡೆ ಆರನೆಯ ಸುಖ ತಪ್ಪಿತ್ತು. ಈ ಸುಖವನರಿಯದೆ ಮತ್ತೆ ಮತ್ತೆ ಮಾಡಿಕೊಂಡರೇನು ಅತ್ತತ್ತಲರಿಯದೆ ವ್ಯರ್ಥವಾಯಿತ್ತು ಗುರುನಿರಂಜನ ಚನ್ನಬಸವಲಿಂಗವು ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿ, ಅನಾದಿ, ಅನಾಗತ, ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಬಿಂದುಜ, ಭಿನ್ನಾಯುಕ್ತ, ಅವ್ಯಕ್ತ, ಆಮದಾಯುಕ್ತ, ಮಣಿರಣ, ಮಾನ್ಯರಣ, ವಿಶ್ವರಣ, ವಿಶ್ವವಸು, ಅಲಂಕೃತ, ಕೃತಯುಗ, ತ್ರೇತಾಯುಗ, ದ್ವಾಪರ[ಯುಗ], ಕಲಿಯುಗ- ಇಂತೀ ಇಪ್ಪತ್ತೊಂದು ಯುಗಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಪ್ರಥಮ ಯುಗದಲ್ಲಿ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶಂಗಳಿಲ್ಲದಂದು ಆರೂ ಆರೂ ಇಲ್ಲದಂದು, ನಾಮವಿಲ್ಲದಂದು, ಅಂದು ನಿಃಶೂನ್ಯವಾಗಿದ್ದ ಕಾಣ ನಮ್ಮ ಬಸವಣ್ಣ. ಅಂದು ನಿಮ್ಮ ನಾಭಿಕಮಲದಲ್ಲಿ ಜಲಪ್ರಳಯ ಪುಟ್ಟಿತ್ತು. ಆ ಜಲಪ್ರಳಯದಲ್ಲಿ ಒಂದುಗುಳ್ಳೆ ಲಿಂಗಾಕಾರವಾಗಿ ಪುಟ್ಟಿತ್ತು. ಆ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣನು. ಇಪ್ಪತ್ತನೆಯ ಯುಗದಲ್ಲಿ ಓಂಕಾರವೆಂಬ ಮೇವ ಮೇದು, ಮೆಲುಕಿರಿದು, ಪರಮಾರ್ಥವೆಂಬ ಹೆಂಡಿಯನ್ನಿಕ್ಕಿ ನೊಸಲ ಕಣ್ಣತೆರೆದು ನೋಡಲಾಗಿ ಆ ಹೆಂಡಿ ಭಸ್ಮವಾಯಿತ್ತು. ಆ ಭಸ್ಮವನೆ ತೆಗೆದು ತಳಿಯಲಾಗಿ ಭೂಮಂಡಲ ಹೆಪ್ಪಾಯಿತ್ತು ಹೆಪ್ಪಾಗಲಿಕ್ಕಾಗಿ ತೊಡೆಯ ಮೇಲಿದ್ದ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣ. ಹತ್ತೊಂಬತ್ತನೆಯ ಯುಗದಲ್ಲಿ ಏಕಪಾದದ ಮಾಹೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿನೆಂಟನೆಯ ಯುಗದಲ್ಲಿ ಕತ್ತಲೆಯ ಕಾಳೋದರನೆಂಬ ರುದ್ರನ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನೇಳನೆಯ ಯುಗದಲ್ಲಿ ವೇದಪುರಾಣಾಗಮಶಾಸ್ತ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನಾರನೆಯ ಯುಗದಲ್ಲಿ....... ಹದಿನೈದನೆಯ ಯುಗದಲ್ಲಿ ಅಮೃತಮಥನವ ಮಾಡಿದಾತ ನಮ್ಮ ಬಸವಣ್ಣ. ಹದಿನಾಲ್ಕನೆಯ ಯುಗದಲ್ಲಿ ತೆತ್ತೀಸಕೋಟಿ ದೇವರ್ಕಳ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿಮೂರನೆಯ ಯುಗದಲ್ಲಿ ಸೌರಾಷ್ಟ್ರ ಸೋಮೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೆರಡನೆಯ ಯುಗದಲ್ಲಿ ಪಾರ್ವತಿಪರಮೇಶ್ವರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೊಂದನೆಯ ಯುಗದಲ್ಲಿ ಏಕಾದಶ ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹತ್ತನೆಯ ಯುಗದಲ್ಲಿ ದಶವಿಷ್ಣುಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂಬತ್ತನೆಯ ಯುಗದಲ್ಲಿ ನವಬ್ರಹ್ಮರ ನಿರ್ಮಿಸಿದಾತ ನಮ್ಮ ಬಸವಣ್ಣ. ಎಂಟನೆಯ ಯುಗದಲ್ಲಿ ಅಷ್ಟದಿಕ್ಪಾಲರ ನಿರ್ಮಿಸಿದಾತ ನಮ್ಮ ಬಸವಣ್ಣ. ಏಳನೆಯ ಯುಗದಲ್ಲಿ ಸಪ್ತ ಸಮುದ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಆರನೆಯ ಯುಗದಲ್ಲಿ ಷಣ್ಮುಖದೇವರ ನಿರ್ಮಿಸಿದಾತ ನಮ್ಮ ಬಸವಣ್ಣ. ಐದನೆಯ ಯುಗದಲ್ಲಿ ಪಂಚಮುಖದೀಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ನಾಲ್ಕನೆಯ ಯುಗದಲ್ಲಿ ಚತುರ್ಮುಖದ ಬ್ರಹ್ಮನ ನಿರ್ಮಿಸಿದಾತ ನಮ್ಮ ಬಸವಣ್ಣ. ಮೂರನೆಯ ಯುಗದಲ್ಲಿ ಬ್ರಹ್ಮ, ವಿಷ್ಣು, ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಎರಡನೆಯ ಯುಗದಲ್ಲಿ ಸಂಗಯ್ಯನ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂದನೆಯ ಯುಗದಲ್ಲಿ ಪ್ರಭುವೆಂಬ ಜಂಗಮವ ನಿರ್ಮಿಸಿದಾತ ನಮ್ಮ ಬಸವಣ್ಣ. ಇಂತೀ ಇಪ್ಪತ್ತೊಂದು ಯುಗಂಗಳಲ್ಲಿ ಬಸವಣ್ಣನು ತಮ್ಮ ಕರಕಮಲವೆಂಬ ಗರ್ಭದಲ್ಲಿ ಜನಿಸಿದನೆಂದು. ಕಕ್ಕಯ್ಯಗಳು ತಮ್ಮ ಮೋಹದ ಮಗನೆಂದು ಒಕ್ಕುದನಿಕ್ಕಿ ಸಲಹಿದರು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವಿನಲ್ಲಿ ಕುಲ ವಿದ್ಯೆ ಗುಣ ಅವಗುಣವ ನೋಡುವವ ಒಂದನೆಯ ಪಾತಕ. ತೀರ್ಥಲಿಂಗದ ನಿಜನಿಲುಕಡೆ ನಿತ್ಯ ಅನಿತ್ಯವ ನೋಡುವವ ಎರಡನೆಯ ಪಾತಕ. ತೀರ್ಥದಲ್ಲಿ ತಿಳಿ ಕಲಕ ನೋಡುವವ ಮೂರನೆಯ ಪಾತಕ. ಪ್ರಸಾದದಲ್ಲಿ ರುಚಿಯರುಚಿಯ ನೋಡುವವ ನಾಲ್ಕನೆಯ ಪಾತಕ. ಜಂಗಮದಲ್ಲಿ ಜಾತಿ -ಅಜಾತಿಯ ನೋಡುವವ ಪಂಚಮಹಾಪಾತಕರುಗಳು ಕುಂಭೀಮಯ ನರಕದಲ್ಲಿ ಕುಲಕೋಟಿ ಬೀಳುವರು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ತನುವಿಲ್ಲದ ಘನಕ್ಕೆ ತನುಸಂಬಂಧಿಸಿದರೆ ಒಂದನೆಯ ಪಾತಕ. ಮನವಿಲ್ಲದ ಘನಕ್ಕೆ ಮನವ ಸಂಬಂಧಿಸಿದರೆ ಎರಡನೆಯ ಪಾತಕ. ಧನವಿಲ್ಲದ ಘನಕ್ಕೆ ಧನವ ಸಂಬಂಧಿಸಿದರೆ ಮೂರನೆಯ ಪಾತಕ. ಭಾವವಿಲ್ಲದ ಘನಕ್ಕೆ ಭಾವ ಸಂಬಂಧಿಸಿದರೆ ನಾಲ್ಕನೆಯ ಪಾತಕ. ತಾನಿಲ್ಲದ ಘನಕ್ಕೆ ತನ್ನ ಸಂಬಂಧಿಸಿದರೆ ಐದನೆಯ ಪಾತಕ. ಇಂತು ಪಂಚವಿಧವನರಿಯದೆ ಪಂಚಬ್ರಹ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಡಗಿರ್ದ ನಿಜಕ್ಕೆ ಗಜಬಜೆಯಗಲಸಿದರೆ ಪಂಚಮಹಾಪಾತಕದೊಳಗಾಗುವರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿದ್ಘನದ ಒಂದನೆಯ ಮೂರ್ತಿ ರುದ್ರನ ಅವತಾರ. ಆ ಚಿದ್ಘನದ ಎರಡನೆಯ ಮೂರ್ತಿ ವಿಷ್ಣುಭಾವ. ಆ ಚಿದ್ಘನದ ಮೂರನೆಯ ಮೂರ್ತಿ ಬ್ರಹ್ಮಭಾವ. ಇವು ಮೂರು ಕೂಡಿ ಜಗವನಳಿದು ನಿಂದಲ್ಲಿ ಈಶ್ವರಭಾವ. ಈಶ್ವರ ವೇಷವಡಗಿ ನಿಂದಲ್ಲಿ ಸದಾಶಿವಭಾವ. ಸದಾಶಿವಮೂರ್ತಿ ಸನ್ನದ್ಧವಾದಲ್ಲಿ ಪರಶಿವತತ್ವ, ತತ್ವ ನಿಶ್ಚಯವಾದಲ್ಲಿ ಬಂಕೇಶ್ವರಲಿಂಗನ ಕೂಟ.
--------------
ಸುಂಕದ ಬಂಕಣ್ಣ
ತಾ ಭಕ್ತನಾಗಿ ಭವಿಯ ನಿರೀಕ್ಷಣೆಯ ಮಾಡಿದರೆ ಒಂದನೆಯ ಪಾತಕ. ಕೊಡುಕೊಳ್ಳುವ ವ್ಯವಹಾರ ಮಾಡಿದರೆ ಎರಡನೆಯ ಪಾತಕ. ತಂದೆ, ಮಗ, ಸಹೋದರ, ನೆಂಟನೆಂದು ನಡೆದರೆ ಮೂರನೆಯ ಪಾತಕ. ಶಿವಪ್ರಸಂಗವ ಮಾಡಿದರೆ ನಾಲ್ಕನೆಯ ಪಾತಕ. ಸಂಗಸಮರಸವ ಮಾಡಿದರೆ ಐದನೆಯ ಪಾತಕ. ಇಂತು ಪಂಚಮಹಾಪಾತಕರಿಗೆ ಭಕ್ತನೆಂದರೆ ಭವತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಂದನೆಯ ಬಾಗಿಲಲ್ಲಿ ನೇಹವಿಪ್ಪುದು, ಎರಡನೆಯ ಬಾಗಿಲಲ್ಲಿ ಗುಣವಿಪ್ಪುದು, ಮೂರನೆಯ ಬಾಗಿಲಲ್ಲಿ ಧ್ಯಾನವಿಪ್ಪುದು, ನಾಲ್ಕನೆಯ ಬಾಗಿಲಲ್ಲಿ ಯೋಗವಿಪ್ಪುದು, ಐದನೆಯ ಬಾಗಿಲಲ್ಲಿ ಪಂಚೇಂದ್ರಿಯ ಗುಣವಿಪ್ಪುದು, ಆರನೆಯ ಬಾಗಿಲಲ್ಲಿ ಷಡುಸ್ಥಲಂಗಳಿಪ್ಪವು, ಏಳನೆಯ ಬಾಗಿಲಲ್ಲಿ ಸಪ್ತವ್ಯಸನಂಗಳಿಪ್ಪವು, ಎಂಟನೆಯ ಬಾಗಿಲಲ್ಲಿ ಅಷ್ಟಮದಂಗಳಿಪ್ಪವು ಒಂಬತ್ತನೆಯ ಬಾಗಿಲಲ್ಲಿ ನಾದಬಿಂದುಗಳಿಪ್ಪವು, ಹತ್ತನೆಯ ಬಾಗಿಲಲ್ಲಿ ಸುಜ್ಞಾನವಿಪ್ಪುದು, ಇಂತೀ ಒಂಬತ್ತು ಬಾಗಿಲಂ ಕಳೆದು ದಶಮಬಾಗಿಲಂ ತೆಗೆದು ಹೊಕ್ಕು ಮಹಾಸುಖಿಯಾಗಿದ್ದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಬಳಿಕ್ಕಂ, ಶಿವಾಸ್ತ್ರಮಂತ್ರಂ, ಕ್ಷುರಿಕಾಸ್ತ್ರಮಂತ್ರಂ ಪಾಶುಪತಾಸ್ತ್ರಮಂತ್ರಂ, ವ್ಯೋಮಾಸ್ತ್ರಮಂತ್ರಂ ಅಘೋರಾಸ್ತ್ರಮಂತ್ರಂ ಇಂತಿವು ಪಂಚಾಸ್ತ್ರಮಂತ್ರಂಗಳಿವಕ್ಕೆ ವಿವರಂ- ಒಂದನೆಯ ಶಿವಾಸ್ತ್ರಮಂತ್ರವೆ ಷಡಕ್ಷರಮೆನಿಕುಂ. ಎರಡನೆಯ ಕ್ಷುರಿಕಾಸ್ತ್ರಮಂತ್ರವೆ ಅಷ್ಟಾಕ್ಷರಮೆನಿಕುಂ. ಮೂರನೆಯ ಪಾಶುಪತಾಸ್ತ್ರಮಂತ್ರವೆ ಪಂಚಾಕ್ಷರಮೆನಿಕುಂ. ನಾಲ್ಕನೆಯ ವ್ಯೋಮಾಸ್ತ್ರವೆ ದಶಾಕ್ಷರಮೆನಿಕುಂ. ಐದನೆಯ ಘೋರಾಸ್ತ್ರವೆ ಚತ್ವಾರಿಂಶದ್ಗಣನೆಯೆನಿಕುಮೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಗುರುವಿನಲ್ಲಿ ಗುಣವನರಸಿದಡೆ ಒಂದನೆಯ ಪಾತಕ. ಲಿಂಗದಲ್ಲಿ ಶಿಲೆಯನರಸಿದಡೆ ಎರಡನೆಯ ಪಾತಕ. ಜಂಗಮದಲ್ಲಿ ಕುಲವನರಸಿದಡೆ ಮೂರನೆಯ ಪಾತಕ. ಪಾದೋದಕದಲ್ಲಿ ಸೂತಕವನರಸಿದಡೆ ನಾಲ್ಕನೆಯ ಪಾತಕ. ಪ್ರಸಾದದಲ್ಲಿ ರುಚಿಯನರಸಿದಡೆ ಐದನೆಯ ಪಾತಕ. ಇಂತೀ ಪಂಚಮಹಾಪಾತಕರ ಎನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶೀಲ ಶೀಲವೆಂತೆಂಬಿರಯ್ಯಾ, ಶೀಲದ ನೆಲೆಯ ಬಲ್ಲರೆ ಹೇಳಿರೊ, ಅರಿಯದಿರ್ದಡೆ ಕೇಳಿರೊ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ, ಆಮಿಷ ಏಳನೆಯ ಭವಿ. ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು, ಲಿಂಗವಿಲ್ಲದವರ ಭವಿ ಭವಿ ಎಂಬರು. ತಮ್ಮಂತರಂಗದಲ್ಲಿರ್ದ ಲಿಂಗಾಂಗದ ಸುದ್ದಿಯನರಿದೆ, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿಗಳೆಂದು ಜಲಕ್ಕೆ ಕನ್ನವನಿಕ್ಕಿ, ಉದಕವ ತಂದು, ಲಿಂಗಕ್ಕೆ ಮಜ್ಜನಕ್ಕೆರೆವ ಪಗಲುಗಳ್ಳರಿಗೆ ಮೆಚ್ಚುವನೇ, ನಿಃಕಳಂಕ ಮಲ್ಲಿಕಾರ್ಜುನ ?
--------------
ಮೋಳಿಗೆ ಮಾರಯ್ಯ
ಸ್ವರ್ಗಕ್ಕೆ ಏಳು ಸೋಪಾನವಿರ್ಪುದನು ಆರೂ ಅರಿಯರಲ್ಲ ! ಅದು ಹೇಗೆಂದೊಡೆ : ಜಂಗಮವ ಕಾಣುತ್ತ ಸದ್‍ಭಕ್ತನು ಕುಳಿತಾಸನವ ಬಿಟ್ಟು ಇದಿರೆದ್ದು ನಡೆವುದೇ ಒಂದನೆಯ ಸೋಪಾನ. ಮನಕರಗಿ ತನು ಉಬ್ಬಿ ಕಂಗಳಲ್ಲಿ ಪರಿಣಾಮಜಲವುಕ್ಕಿ ಅವರ ಚರಣಕಮಲದ ಮೇಲೆ ಸುರಿವಂತೆ ಸಾಷ್ಟಾಂಗದಿಂದೆ ನಮಸ್ಕರಿಸುವುದೇ ಎರಡನೆಯ ಸೋಪಾನ. ಆ ಜಂಗಮವ ತನ್ನ ಮಠಕ್ಕೆ ಬಿಜಯಂಗೈಸಿ ಉನ್ನತಾಸನದ ಗದ್ದುಗೆಯ ಮೇಲೆ ಕುಳ್ಳಿರಿಸಿ ಪಾದಪ್ರಕ್ಷಾಲನವ ಮಾಡುವುದೇ ಮೂರನೆಯ ಸೋಪಾನ. ಆ ಜಂಗಮದೇವರ ಅಷ್ಟವಿಧಾರ್ಚನೆ - ಷೋಡಶೋಪಚಾರಗಳಿಂದರ್ಚಿಸಿ, ಪಾದಿತೀರ್ಥವ ಕೊಂಬುವುದೇ ನಾಲ್ಕನೆಯ ಸೋಪಾನ. ಆ ಜಂಗಮಕ್ಕೆ ಮೃಷ್ಟಾನ್ನಪಾನಂಗಳಿಂದೆ ತೃಪ್ತಿಪಡಿಸುವುದೇ ಐದನೆಯ ಸೋಪಾನ. ಆ ಜಂಗಮದ ಒಕ್ಕುಮಿಕ್ಕಪ್ರಸಾದವ ಕೊಂಬುವುದೇ ಆರನೆಯ ಸೋಪಾನ. ಆ ಜಂಗಮದಲ್ಲಿ ಅನುಭಾವವ ಬೆಸಗೊಂಬುವುದೇ ಏಳನೆಯ ಸೋಪಾನ. ಇಂತೀ ಸಪ್ತಸೋಪಾನಂಗಳ ಬಲ್ಲ ಸದ್ಭಕ್ತಂಗೆ ಕೈಲಾಸ ಕರತಾಳಮಳಕವಲ್ಲದೆ ತನುವ ಸವೆಸದೆ, ಮನವ ದಂಡಿಸದೆ, ಧನವ ಸಮರ್ಪಿಸದೆ, ಮಿಥ್ಯಾಸಂಸಾರದಲ್ಲಿ ಸಿಲ್ಕಿ ಹೊತ್ತುಗಳೆದು ಹೊಡೆದಾಡಿ ಸತ್ತು ಹೋಗುವ ವ್ಯರ್ಥಜೀವಿಗಳಿಗೆ ಇನ್ನೆತ್ತಣ ಕೈಲಾಸವಯ್ಯ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->