ಅಥವಾ

ಒಟ್ಟು 56 ಕಡೆಗಳಲ್ಲಿ , 21 ವಚನಕಾರರು , 53 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯಲಿಂಗಾರ್ಚನೆಯ ಮಾಡದೆ ಒಡಲ ಹೊರೆವನೆ ಹೊಲೆಯ. ಹತ್ತು ನುಡಿದಡೇ[ನು] ಒಂದೂ ನಿಜವಿಲ್ಲದವನೆ ಹೊಲೆಯ. ಅರ್ಥದಾಸೆಗೆ ಪ್ರಾಣವ ಹತವ ಮಾಡುವನೆ ಹೊಲೆಯ. ಸತ್ಯ ಸದ್ಗುಣ ನಿತ್ಯಾಚಾರ ಧರ್ಮವಿಲ್ಲವೆಂಬವನೆ ಹೊಲೆಯ. ಭಕ್ತಿ ಮುಕ್ತಿಯ ಪಥವ ಹುಸಿಯೆಂಬವನೆ ಹೊಲೆಯ. ನಿತ್ಯ ಗುರುಲಿಂಗಜಂಗಮ ಪಾದತೀರ್ಥ ಪ್ರಸಾದವಿಲ್ಲವೆಂಬವನೆ ಹೊಲೆಯ. ಮತ್ತೆ ಪಶುಘಾತಕವ ಮಾಡುವನೆ ಹೊಲೆಯ. ಇಂತೀ ಏಳುಹೊಲೆಯ ಹಿಂಗಿಸದೆ, ತನ್ನ ಕುಲದ ಹೆಮ್ಮೆಯ ಮೆರೆವ ಕುನ್ನಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಆಕಾಶದ ನೀರಿಂಗೆ, ಮತ್ತೇತರಲ್ಲಿಯೂ ತಿಳಿದಿಹೆನೆಂಬ ಸೂತಕವುಂಟೆ ? ಪೃಥ್ವಿಯ ಸಂಗವ ಕೂಡಿದ ಅಪ್ಪುವಿಂಗಲ್ಲದೆ ನಿಶ್ಚಯದ ಸುಜಲಕ್ಕುಂಟೆ ? ಕರ್ಮದ ಕಪಟ, ನಿಶ್ಚಯವಾದ ನಿಜತತ್ವಭಾವಿಗೆ ಮೇಲೊಂದು ಹತ್ತುವ ಹಾವಸೆ ಒಂದೂ ಇಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ನಾನೇಕೆ ಬಂದೆ ಸುಖವ ಬಿಟ್ಟು ? ಬಂದುದಕ್ಕೆ ಒಂದೂ ಆದುದಿಲ್ಲ. ಸಂಸಾರದಲ್ಲಿ ಸುಖಿಯಲ್ಲ, ಪರಮಾರ್ಥದಲ್ಲಿ ಪರಿಣಾಮಿಯಲ್ಲ. ಸಿಕ್ಕಿದೆ ಅರ್ತಿಗಾರಿಕೆಯೆಂಬ ಭಕ್ತಿಯಲ್ಲಿ. ದಾಸಿಯ ಕೂಸಿನಂತೆ ಒಡವೆಗಾಸೆಮಾಡಿ, ಗಾಸಿಯಾದೆ ಮನೆಯೊಡೆಯನ ಕೈಯಲ್ಲಿ. ಈ ಭಾಷೆ ಇನ್ನೇಸು ಕಾಲ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಕಾಯವೆನ್ನ ಕಲ್ಪಿತವೆನ್ನ, ಅರಿವೆನ್ನ ಮರಹೆನ್ನ; ಮಾಯಿಕ ನಿರ್ಮಾಯಿಕವೆನ್ನ; ದೇವರೆನ್ನ ಭಕ್ತರೆನ್ನ ಬಯಲೆನ್ನ. ಮುಂದೆ ಊಹಿಸುವುದಕ್ಕೆ ಒಡಲಿಲ್ಲವಾಗಿ ನಿಂದ ನಿಲವು ತಾನೆ, ನಿರಾಳ. ಚಿಕ್ಕಯ್ಯಪ್ರಿಯ ಸಿದ್ಧಲಿಂಗಾ, ಮುಂದೆ ಒಂದೂ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಆರಾರು ಸಕಲಸನ್ನಿಹಿತರರಿತಕ್ಕಗೋಚರ ಪರಶಿವಲಿಂಗವನು, ಆರೈದು ಅಂಗಪ್ರಾಣಾತ್ಮ ಸಂಗಸಮರಸಾನಂದ ಶರಣಂಗೆ ಒಂದೂ ಆಶ್ಚರ್ಯ ತೋರದು, ಅದೇನು ಕಾರಣವೆಂದೊಡೆ, ತಾನೆ ಹರಿ ವಿದ್ಥಿ ಸುರಾದಿ ಮನುಮುನಿ ಸಕಲಕ್ಕೂ ಆಶ್ಚರ್ಯವಾದ ಕಾರಣ. ಅಂತಪ್ಪ ಶರಣನೇ ಶಿವನಲ್ಲದೆ ಬೇರಿಲ್ಲ ಕಾಣಾ. ಅದಲ್ಲದೆ ಮತ್ತೆ ಗಿರಿಗೋಪುರ ಗಂವರ ಶರದ್ಥಿತಾಣ ಸ್ಥಾವರಕ್ಷೇತ್ರ ನರಕುಶಲ ಕುಟಿಲ ಭೂತಾದಿ ಕಿಂಚಿತಕ್ಕಾಶ್ಚರ್ಯವೆಂಬ ಬಾಲಮರುಳ ಅಜ್ಞಾನಿಗಳಿಗೆ ಲಿಂಗಶರಣರೆಂಬ ನಾಮ ಬಹು ಭಾರ ಕಾಣಾ ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಿದ್ಯೆ ಅವಿದ್ಯೆಯಾದಲ್ಲಿ, ಆ ಅರಿವ ಹೊದ್ದುವ ಬಂಧವಾವುದು ? ಕ್ಷುದ್ರ ಇಂದ್ರಿಯಂಗಳೆಂಬ ಸಂದುಸಂಶಯವಾವುದು ? ಅದು ಒಡೆದ ಕುಂಭದ ನೀರಿನ ನೆಳಲಿನಂತೆ, ಅದು ಕುಂಭವ ಹಿಂಗಲಿಕೆ, ಆ ಬಿಂಬ ಅಲ್ಲಿಯೆ ಅಡಗಿತ್ತು, ಮತ್ತೆ ಕುಂಭವ ನೋಡಲಿಕ್ಕೆ ಒಂದೂ ಇಲ್ಲ. ಆ ಅಂಗ ಲಕ್ಷದ ಕುಂಭದಲ್ಲಿ, ಇಂಗಿಹೋದ ಆತ್ಮಂಗೆ ಬಂಧಮೋಕ್ಷಕರ್ಮಂಗಳು, ಒಂದೂ ಇಲ್ಲ, ಕಾಮಧೂಮ ಧೂಳೇಶ್ವರನೆಂಬ ಭಾವಸಂದೇಹ ನಂದಿತ್ತಾಗಿ.
--------------
ಮಾದಾರ ಧೂಳಯ್ಯ
ಆದಿ ಸ್ವಯಂಭುವಿಲ್ಲದ ಮುನ್ನ, ಸಂಗನಿಸ್ಸಂಗವಿಲ್ಲದ ಮುನ್ನ, ನಕ್ಷತ್ರಗ್ರಹಂಗಳಿಲ್ಲದ ಮುನ್ನ, ಯೋಗ ಕರಣಂಗಳಿಲ್ಲದ ಮುನ್ನ, ಖೇಚರ ಭೂಚರರಿಲ್ಲದ ಮುನ್ನ, ಆರಾರೂ ಇಲ್ಲದ ಮುನ್ನ, ಆಕಾಶ ಮಾರುತರಿಲ್ಲದ ಮುನ್ನ, ಅಂಬುಧಿ ಕಮಠರಿಲ್ಲದ ಮುನ್ನ_ ಹರಿಬ್ರಹ್ಮಾದಿಗಳಾರ ನಿಲವಿಲ್ಲದ ಮುನ್ನ ಹಿಮಕರದಿನಕರ ಸುಳುಹಿಲ್ಲದ ಮುನ್ನ_ ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲದ ಮುನ್ನ, ಗುಹೇಶ್ವರನಿರ್ದ ತನ್ನ ತಾನರಿಯದಂತೆ
--------------
ಅಲ್ಲಮಪ್ರಭುದೇವರು
ಶಾಂತ ಸೂಕ್ಷ ್ಮ ಸರ್ವಜೀವ ಮನಃಪ್ರೇರಕ[ಸ್ವ]ನಾಥ ನಿತ್ಯ ಚಿನ್ಮಾತ್ರನಾದ ಶಿವಂಗೆ ಒಂದೂ ಸದೃಶವಿಲ್ಲದೆ ಹೆಸರಿಡಬಾರದಂಥ ಕುರುಹಿಲ್ಲದ, ಮರಹಿಲ್ಲದ, ಬಹಳ ಬ್ರಹ್ಮವೆನಿಸುವ ಶಿವನು ತನ್ನ ಶರಣರ ಸರ್ವಾಂಗಭರಿತನಾಗಿಹನು, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಗುರುವೆಂದು ಪ್ರಮಾಣಿಸಿದಲ್ಲಿ, ಪ್ರತ್ಯುತ್ತರವಿಲ್ಲದೆ ನಿಗರ್ವಿಯಾಗಿರಬೇಕು. ಲಿಂಗವೆಂದು ಪ್ರಮಾಣಿಸಿದಲ್ಲಿ, ಸಂದೇಹವಿಲ್ಲದಿರಬೇಕು. ಜಂಗಮವೆಂದು ಪ್ರಮಾಣಿಸಿದಲ್ಲಿ, ತ್ರಿವಿಧದ ಹಂಗಿಲ್ಲದಿರಬೇಕು. ಇದರಂದ ಒಂದೂ ಇಲ್ಲದೆ ಭಕ್ತರಾದೆವೆಂಬ ಮಿಟ್ಟೆಯ ಭಂಡರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತತ್ವಂಗಳ ಗೊತ್ತ ಗುಟ್ಟೆಂದು ಬಿಡಬಾರದು ಇಷ್ಟಲಿಂಗದ ಪೂಜೆಯ ಆತ್ಮನ ಗೊತ್ತನರಿತೆನೆಂದು ಮರೆಯಲಾಗದು ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಲಾಗದು. ಈ ಗುಣ ಅಂಗವನರಿವನ್ನಕ್ಕ ಒಂದೂ ಇಲ್ಲಾ ಎಂದು ಬಿಡಬಹುದೆ? ನಾನೆಂಬುದ ಇದೇನೆಂದು ಅರಿವನ್ನಕ್ಕ ಶ್ರುತಕ್ಕೆ ದೃಷ್ಟ, ದೃಷ್ಟಕ್ಕೆ ಅನುಮಾನ, ಅನುಮಾನಕ್ಕೆನಿಶ್ಚಯ. ನಿಶ್ಚಯ ನಿಜವಾದಲ್ಲಿ, ಗೋಪತಿನಾಥ ವಿಶ್ವೇಶ್ವರಲಿಂಗನ ಕ್ರಿಯಾನಿರ್ವಾಹ.
--------------
ತುರುಗಾಹಿ ರಾಮಣ್ಣ
ಕ್ರೀವಂತಂಗೆ ಪಡಿಪುಚ್ಚಕ್ಕೆ ಬಂದಾಗವೆ ಆಚಾರಕ್ಕೆ ಭಂಗ. ಪಟುಭಟಂಗೆ ರಣಕ್ಕೆ ಹಂದೆಯಾದಲ್ಲಿಯೆ ಮಾತಿನ ಕೊರತೆ. ವಿರಾಗಿ ರಾಗಿಯಾದಲ್ಲಿಯೆ ಸಮತೆಯೆಂಬುದಕ್ಕೆ ಸಮಾಧಾನವಿಲ್ಲ. ವಿರಕ್ತನಾದಲ್ಲಿ ಸ್ತುತಿನಿಂದ್ಯಾದಿ ಕಂಗಳಲ್ಲಿ, ಅಂಗಭಾವ ನಿಂದಲ್ಲಿಯೆ ವಿರಕ್ತಿಯೆಂಬ ಸಂಗವಿಲ್ಲ. ಇಂತಿವರ ಸಂದನಳಿದಲ್ಲದೆ ಕ್ರೀ ಭಾವ ಜ್ಞಾನ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎಲ್ಲವ ಮೀರಿ ಶೀಲವಂತನಾದಲ್ಲಿ ರೋಗವೆಲ್ಲಿಂದ ಬಂದಿತು ? ಆ ಗುಣ ತನುವಿನಲ್ಲಿಯ ತೊಡಕು ; ರುಜೆ ಪ್ರಾಣವ ಕೊಳ್ಳಲರಿಯದು. ಅಂಗದ ಡಾವರಕ್ಕೆ ಸೈರಿಸಲಾರದೆ, ಮದ್ದ ತಾ ಲಿಂಗಕ್ಕೆ ತೋರಿ, ಜಂಗಮಕ್ಕೆ ಕೊಟ್ಟು, ಜಂಗಮಪ್ರಸಾದವೆಂದು ಲಿಂಗ ಜಂಗಮವ ಹಿಂಗದೆ ಕೊಳ್ಳೆಂದು ಹೇಳುವ ಅನಂಗಿಗಳಿಗೆ ಗುರು ಲಿಂಗ ಜಂಗಮ ಮೂರರಲ್ಲಿ ಒಂದೂ ಇಲ್ಲ ಎಂದೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ತಪ್ಪನೊಪ್ಪಗೊಳ್ಳೆ.
--------------
ಅಕ್ಕಮ್ಮ
ಹೆಣದ ಚಪ್ಪರದ ಮಣಿಮಾಡದ ಮೇಲೆ, ಸುತ್ತಿದವಾರು ಸೀರೆ. ಹೆಣಕ್ಕೆ ಹೊದ್ದಿಸಿದವು ಮೂರು ಸೀರೆ. ಮಣಿಮಾಡದ ಕಂಬಕ್ಕೆ ಸುತ್ತಿದವೆಂಟು, ನಾನಾ ಚಿತ್ರದ ಬಣ್ಣದ ಸೀರೆ. ಒಪ್ಪಿತ್ತು ತುದಿಯಲ್ಲಿ ಹೊಂಗಳಸ. ಆ ಹೊಂಗಸಳದ ತುದಿಯ ಕೊನೆಯ ಮೊನೆಯ ಮೇಲೆ ಬಿಳಿಯ ಗಿಳಿ ಬಂದು ಕುಳಿತಿತ್ತು. ಕಳಶ ಮುರಿಯಿತ್ತು, ಕಂಬ ಮಾಡದ ಹಂಗ ಬಿಟ್ಟಿತ್ತು. ಕಂಬದ ಸೀರೆ ಒಂದೂ ಇಲ್ಲ. ಮಾಡಕ್ಕೆ ಹಾಕಿದ ಮಂಚದ ಕೀಲು ಬಿಟ್ಟವು. ಮಾಡದ ಹೆಣ ಸಂಚರಿಸಿಕೊಂಡು ಮುಂಚಿತ್ತು. ಹೆಣದಾತ್ಮ ಗಿಳಿಯ ಕೊಕ್ಕಿನ ತುದಿಗಂಗವಾಗಿ, ಇದು ಅಗಣಿತವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೂರ್ವಧಾತುವಿನ ಮೋಹ, ಉತ್ತರಧಾತುವಿನ ನಿರ್ಮೋಹ, ಉಭಯದ ಕಕ್ಷೆಯ ತಿಳಿದು ಅರಿದಲ್ಲಿ, ಅರಿದು ಮರೆದಲ್ಲಿ, ಮತ್ತೇತರ ದರಿಸಿನ ? ಇಂತೀ ಗುಣವ ಸಂದೇಹಕ್ಕೆ ಇಕ್ಕಿ, ಬೇರೊಂದರಲ್ಲಿ ನಿಂದು ಕಂಡೆಹೆನೆಂದಡೆ, ಉಭಯಲಿಂಗದಂಗ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಮಶೀಲಸಂಪಾದಕರು ಬಂದಿದ್ದಲ್ಲಿ ತಮ್ಮ ತಮ್ಮನೆಯಲ್ಲಿ ವಿಶೇಷ ದ್ರವ್ಯವ ಸಂಚವಿರಿಸಿ ಇದ್ದುದನಿದ್ದಂತೆ ಎಡೆಮಾಡೆಂದಡೆ ಬದ್ಧಕತನವಲ್ಲದೆ ಆ ವ್ರತ ನಿರ್ಧರವೆ ? ಆ ಹರಶರಣರು ಮನೆಯಲ್ಲಿ ಬಂದಿರೆ ಅವರ ಮಲಗಿಸಿ, ತಾ ತನ್ನ ಸತಿಯ ನೆರೆದಡೆ, ಅವರ ನಿಲಿಸಿ ತಾ ಮತ್ತೊಂದಕ್ಕೆ ಹೋದಡೆ, ಶರಣಸಂಕುಳಕ್ಕೆ ಹೊರಗು, ಅವರಲ್ಲಿ ಮುಯ್ಯಾಂತು ಬೀಳ್ಕೊಂಡು ತನ್ನ ಸಂದೇಹ ಒಂದೂ ಇಲ್ಲದಂತೆ ಉಭಯವ ತಿಳಿದು ಮಾಡುವ ಮಾಟಕ್ಕೆ ಹಿಡಿದ ವ್ರತಕ್ಕೆ ಭಾವಶುದ್ಧವಾಗಿ ಇಪ್ಪುದು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸಂಪಾದನೆ.
--------------
ಅಕ್ಕಮ್ಮ
ಇನ್ನಷ್ಟು ... -->