ಅಥವಾ

ಒಟ್ಟು 146 ಕಡೆಗಳಲ್ಲಿ , 40 ವಚನಕಾರರು , 104 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾತ್ಮನದೊಂದು ಅರಸುತನದ ಅನ್ಯಾಯವ ಕೇಳಯ್ಯ ಗುರುವೆ. ಪಂಚಭಕ್ಷ ್ಯ ಪರಮಾಮೃತವ ಸದಾ ದಣಿಯಲುಂಡು ಒಂದು ದಿನ ಸವಿಯೂಟ ತಪ್ಪಿದರೆ ಹಲವ ಹಂಬಲಿಸಿ ಹಲುಗಿರಿದು, ಎನ್ನ ಕೊಂದು ಕೂಗುತ್ತಿದೆ ನೋಡಾ. ಶ್ವಪಚನನುತ್ತಮನ ಕೂಡೆ ಸಂಕಲೆಯನಿಕ್ಕುವರೆ ಅಯ್ಯ?. ಕಲಸಿ ಕಲಸಿ ಕೈಬೆರಲು ಮೊಂಡಾದವು. ಅಗಿದಗಿದು ಹಲ್ಲುಚಪ್ಪಟನಾದವು. ಉಂಡುಂಡು ಬಾಯಿ ಜಡ್ಡಾಯಿತು. ಹೇತು ಹೇತು ಮುಕುಳಿ ಮುರುಟುಗಟ್ಟಿತ್ತು. ಸ್ತ್ರೀಯರ ಕೂಡಿಕೂಡಿ ಶಿಶ್ನ ಸವೆದು ಹೋಯಿತ್ತು. ತನುಹಳದಾಗಿ ಅಲ್ಲಲ್ಲಿಗೆ ಕಣ್ಣು ಪಟ್ಟಿತ್ತು. ಮನ ಹೊಸದಾಗಿ ಹನ್ನೆರಡುವರ್ಷದ ರಾಜಕುಮಾರನಾದೆನು. ಇನ್ನೇವೆನಿನ್ನೇವೆನಯ್ಯ ಎನ್ನ ಕೇಡಿಂಗೆ ಕಡೆಯಿಲ್ಲ. ಕಾಯವಿಕಾರವೆಂಬ ಕತ್ತಲೆ ಕವಿಯಿತು. ಮನೋವಿಕಾರವೆಂಬ ಮಾಯೆ ಸೆರೆವಿಡಿದಳು. ಇಂದ್ರಿಯವಿಕಾರವೆಂಬ ಹುಚ್ಚುನಾಯಿಗಳು ಕಚ್ಚಿ ಕಚ್ಚಿ ಒದರುತ್ತಿವೆ. ಕಾಮ ವಿಕಾರವೆಂಬ ಕಾಳರಕ್ಕಸಿ ಅಗಿದಗಿದು ನುಂಗುತಿಹಳು. ಕಾಯಾಲಾಗದೆ ದೇವ?. ಸಾವನ್ನಬರ ಸರಸವುಂಟೆ ಲಿಂಗಯ್ಯ?. ಅನ್ಯಸಮಯದ ಗುಮ್ಮಟನ ಕೈವಿಡಿದೆತ್ತಿಕೊಂಡೆ. ನಿನ್ನ ಸಮಯದ ಶಿಶು ಬಾವಿಯಲ್ಲಿ ಬೀಳ್ವುದ ನೋಡುತ್ತಿಪ್ಪರೆ ಕರುಣಿ?. ಮುಕ್ತಿಗಿದೇ ಪಯಣವೋ ತಂದೆ?. ನೀನಿಕ್ಕಿದ ಮಾಯಾಸೂತ್ರಮಂ ಹರಿದು, ದಶೇಂದ್ರಿಯಂಗಳ ಗುಣವ ನಿವೃತ್ತಿಯಂ ಮಾಡಿ, ಅಂಗಭೋಗ-ಆತ್ಮಭೋಗಂಗಳನಡಗಿಸಿ, ಲಿಂಗದೊಳು ಮನವ ನೆಲೆಗೊಳಿಸಿ, ಎನ್ನ ಪಟದೊಳಗಣ ಚಿತ್ರದಂತೆ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮಾಡುವಲ್ಲಿ ಎನ್ನ ನಾನರಿದು ಮಾಡಿದೆನಾದಡೆ, ನೀಡುವಲ್ಲಿ ಎನ್ನ ನಾನರಿದು ನೀಡಿದೆನಾದಡೆ, ನೀಡುವಲ್ಲಿ ರುಚಿಗೆ ಮನವೆಳೆಸಿ ಹಾರೈಸಿದೆನಾದಡೆ, ನಿಮಗಂದೆ ದ್ರೋಹವಯ್ಯಾ. ಮಾಡುವಲ್ಲಿ ನೀಡುವಲ್ಲಿ ಕೂಡೆ ಶುದ್ಧನಲ್ಲದಿರ್ದಡೆ, ನೀನಂದೆ ಮೂಗ ಕೊಯಿ ಕೂಡಲಸಂಗಮದೇವಾ.
--------------
ಬಸವಣ್ಣ
ಇಂದುಧರ ನಿಂದ ನಿಲುಗಡೆಯ ಕಂಡು ಮಂದದೈತ್ಯರು ತಮ್ಮ ತಮ್ಮ ಸತ್ವದಿಂದ ಹೊರವಂಟು ಶಿವಗಣರ ಶಿವಾಚಾರರ ಶಿವನಿಷ್ಠೆಯುಳ್ಳವರ ಕೂಡೆ ಕೆಣಕಿ ನಿಲುಗಡೆಯ ಕಾಣದೆ ಮಂದದೈತ್ಯರು ತಮ್ಮ ತಮ್ಮ ಸತ್ವದಿಂದ ಹೊರವಂಟು ಸೆಣಸಿ ಮಡಿದರು ಕಾಣಾ ಕುವರ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ, ಅಡಿಗಡಿಗೆ ಗುರುವಿನಾಣೆ ಎಂಬ ವಚನವೆ ಹೊಲ್ಲ ! ಮುಂದೆ ಪಥಕ್ಕೆ ಸಲ್ಲರು. ಆದಿಯಿಂದ ಬಂದ ವಚನವೆಂದು ಶರಣರ ಕೂಡೆ ಸರಸವಾಡಿದಡೆ, ನಗುತಲಿರಿದುಕೊಂಡಡೆ ಅಲಗು ನೆಡದಿಹುದೆ ಕೂಡಲಸಂಗಮದೇವಾ
--------------
ಬಸವಣ್ಣ
ದಿವಾರಾತ್ರಿಯೆಂಬ ಉಭಯ ಕೂಡೆ, ದಿನಲೆಕ್ಕ ಹಾಯಿದು ಕಲ್ಪಿತವನಳಿದಂತೆ, ಲೆಕ್ಕ ಮುಂಚು, ದಿನ ಹಿಂಚಾಗಿ ತನ್ನ ತಪ್ಪನರಿವುದಕ್ಕೆ ಮೊದಲೆ ತಪ್ಪಿರಬೇಕು. ಇದು ನಿಶ್ಚಯ ಬುದ್ಧಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮಾಡಿಸಯ್ಯ ಎನಗೆ ನಿನ್ನವರ ಸಂಗವ, ಮಾಡಿಸಯ್ಯ ಎನಗೆ ನಿನ್ನವರ ಆನಂದವ, ಆಗಿಸಯ್ಯ ನಿನ್ನವರಾದಂತೆ, ನೋಡಯ್ಯ, ನಿನ್ನವರ ಕೂಡೆ ಸಂಗವನು ಮಾಡಿಸಯ್ಯ, ಎನಗೆ ಬಚ್ಚ ಬರಿಯ ಭಕ್ತಿಯನು ಕೊಡಿಸಯ್ಯ. ಎನಗೆ ಪಾದೋದಕ ಪ್ರಸಾದವನೊಚ್ಚತ ಸಲಿಸಯ್ಯ. ನಿನ್ನವರ ಕೂಡಿ ಸಲಿಕೆಗೆ ಇರಿಸಯ್ಯ ನಿನ್ನವರ ಪಾದದ ಕೆಳಗೆ. ನಿತ್ಯನಿತ್ಯನಾಗಿ ಬರಿಸರಯ್ಯ ಎನ್ನ ಭವಭವದಲ್ಲಿ, ಬರಿಸಿ ಬರಿಸಿ ಕಾಲಕಾಮಂಗೆ ಗುರಿ ನಿಗ್ರಹಕ್ಕೆ. ಕಪಿಲಸಿದ್ಧಮಲ್ಲಿಕಾರ್ಜುನಾ, ಇನಿತನು ಇತ್ತು ಕೆಡಿಸಯ್ಯಾ ಎನ್ನ ಭವದ ಹುಟ್ಟ.
--------------
ಸಿದ್ಧರಾಮೇಶ್ವರ
ಉರಿ ಆತ್ಮಸ್ಥಾವರಂಗಳಲ್ಲಿ ನಂದದಿಹನ್ನಕ್ಕ, ನೀರು ಒಂದರಲ್ಲಿಯೆ ಇಂಗದಿಹನ್ನಕ್ಕ, ಲಿಂಗವೆಂಬುದೊಂದು ಪ್ರಮಾಣವುಂಟು ಆ ಪ್ರಮಾಣು ಅಪ್ರಮಾಣಹನ್ನಕ್ಕ, ಭಾವ ಮೂರು, ನಿರ್ಭಾವ ಮೂರು, ಸ್ಥೂಲವಾರು, ತತ್ತ್ವವೈದು, ಇಂತಿವು ಕೂಡೆ, ಅಳೆದು ಮರಳಲಿಕ್ಕೆ ಹಲವು ಸ್ಥಲ ಕುಳ ಬೇರಾಯಿತ್ತು. ಬಂಗಾರವೊಂದು ಹಲವು ತೊಡಿಗೆಯ ಹೊಲಬಾದಂತೆ, ತನ್ನಷ್ಟೇ ತದ್ದøಷ್ಟವುಭಯವ ಕೂಡುವನ್ನಬರ, ನಿಃಕಳಂಕ ಮಲ್ಲಿಕಾರ್ಜುನನೆಂದೆನುತ್ತಿರಬೇಕು.
--------------
ಮೋಳಿಗೆ ಮಾರಯ್ಯ
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ ! ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ! ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ !
--------------
ಅಲ್ಲಮಪ್ರಭುದೇವರು
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ, ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ, ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ ತೂರ್ಯದ ಕ್ರಿಯೆ ವೇಧಿಸಿ ನಿಂದವನ ನಿಲವು ಎಂತುಟೆಂದರೆ: ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ. ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು ದೃಷ್ಟವ ಕಂಡು ಬರ....ಕೇಳಲಾಗಿ, ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು. ಅದೇನು ಕಾರಣವೆಂದರೆ: ಮೊಟ್ಟ ಮೊದಲಲ್ಲಿ ಮೂರು ಭಿನ್ನವ ಕೇಳುವದು ಆ ಮೂರು ಭಿನ್ನಯೆಂತಾದವಯ್ಯಯೆಂದರೆ, ಅದರೊಳಗೈದು ಭಿನ್ನ ಉಂಟು. ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂಧಿಸೂದು. ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು. ನೋಡಿ ನಿಶ್ಚಯವಾದ ಮತ್ತೆ ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ, ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು, ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ ತಮ್ಮ ತ್ಯಾಗದ ಮೈಮರೆದಿರ್ದಾತನ ಎಚ್ಚರ ಮಾಡಿ, ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜರಿ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !
--------------
ಚನ್ನಬಸವಣ್ಣ
ನಡೆವ ಕಾಲದಲ್ಲಿ ನಿಮ್ಮ ಕೂಡೆ ನಡೆವೆನಯ್ಯಾ. ನುಡಿವ ಕಾಲದಲ್ಲಿ ನಿಮ್ಮ ಕೂಡೆ ನುಡಿವೆನಯ್ಯಾ. ಹಿಡಿವ ಕಾಲದಲ್ಲಿ ನಿಮ್ಮ ಕೂಡೆ ಹಿಡಿವೆನಯ್ಯಾ. ಬಿಡುವ ಕಾಲದಲ್ಲಿ ನಿಮ್ಮ ಕೂಡೆ ಬಿಡುವೆನಯ್ಯಾ. ನೋಡುವ ಕಾಲದಲ್ಲಿ ನಿಮ್ಮ ಕೂಡೆ ನೋಡುವೆನಯ್ಯಾ. ಕೇಳುವ ಕಾಲದಲ್ಲಿ ನಿಮ್ಮ ಕೂಡೆ ಕೇಳುವೆನಯ್ಯಾ. ಸೋಂಕುವ ಕಾಲದಲ್ಲಿ ನಿಮ್ಮ ಕೂಡೆ ಸೋಂಕುವೆನಯ್ಯಾ. ವಾಸಿಸುವ ಕಾಲದಲ್ಲಿ ನಿಮ್ಮ ಕೂಡೆ ವಾಸಿಸುವೆನಯ್ಯಾ. ರುಚಿಸುವ ಕಾಲದಲ್ಲಿ ನಿಮ್ಮ ಕೂಡೆ ರುಚಿಸುವೆನಯ್ಯಾ. ನೆನೆವ ಕಾಲದಲ್ಲಿ ನಿಮ್ಮ ಕೂಡೆ ನೆನೆವೆನಯ್ಯಾ. ಮರೆವ ಕಾಲದಲ್ಲಿ ನಿಮ್ಮ ಕೂಡೆ ಮರೆವೆನಯ್ಯಾ. ಅರಿವ ಕಾಲದಲ್ಲಿ ನಿಮ್ಮ ಕೂಡೆ ಅರಿವೆನಯ್ಯಾ. ಇನಮಂಡಲಕಿರಣದಂತೆ ಸಕಲ ತೋರಿಕೆಯ ತೋರುವ ಕಾಲದಲ್ಲಿ ನಿಮ್ಮ ಕೂಡೆ ತೋರುವೆನಾಗಿ, ಅಖಂಡೇಶ್ವರಾ, ನಿಮ್ಮಲ್ಲಿ ಎನಗೆ ಸಹಭೋಜನವು ಸಮನಿಸಿತ್ತು ನೋಡಾ.
--------------
ಷಣ್ಮುಖಸ್ವಾಮಿ
ಹಸಿದಡೆ ಉಣಬಹುದೆ ನಸುಗುನ್ನಿ ತುರುಚಿಯನು ? ಅವಸರಕಿಲ್ಲದ ದೊರೆಗೆ ಅರ್ಥವಿದ್ದಲ್ಲಿ ಫಲವೇನು ? ಸಾಣೆಯ ಮೇಲೆ ಶ್ರೀಗಂಧವ ತೇವರಲ್ಲದೆ ಇಟ್ಟಿಗೆಯ ಮೇಲೆ ತೇಯಬಹುದೆ ? ರಂಭೆಯ ನುಡಿ ಸಿಂಬಿಗೆ ಶೃಂಗಾರವೆ ? ಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನಲ್ಲದೆ ಅಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನೆ ? ಸರೋವರದೊಳಗೊಂದು ಕೋಗಿಲೆ ಸ್ವರಗೆಯ್ಯುತ್ತಿದ್ದಡೆ ಕೊಂಬಿನ ಮೇಲೊಂದು ಕಾಗೆ ಕರ್ರೆನ್ನದೆ ?_ಅಂತೆ ಇದ್ದತ್ತು. ಬರದಲ್ಲಿ ಬರಡ ಕರೆದೆಹೆನೆಂದು, ಕಂದಲ ಕೊಂಡು ಹೋದರೆ, ಕಂದಲೊಡೆದು ಕೈ ಮುರಿದಂತಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮಹಾಲಿಂಗಮೋಹಿತನಾದಡೆ ಲೋಕದ ಮೋಹವ ಮರೆಯಬೇಕು. ಮಹಾಲಿಂಗಭಕ್ತನಾದಡೆ ಪೂರ್ವಭಕ್ತಿಯ ಮಾಡಲಾಗದು. ಮಹಾಲಿಂಗಪೂಜಕನಾದಡೆ, ಅಜ್ಞಾನಿಗಳ ಕೂಡೆ ಸಂಗ-ಸಂಭಾಷಣೆಯ ಮಾಡಲಾಗದು. ಮಹಾಲಿಂಗವೀರನಾದಡೆ ಪ್ರಳಯಾದಿಗಳಿಗಂಜಲಾಗದು. ಮಹಾಲಿಂಗಪ್ರಸಾದಿಯಾದಡೆ ಸಮತೆ ನೆಲೆಗೊಳ್ಳಬೇಕು. ಮಹಾಲಿಂಗಪ್ರಾಣಿಯಾದಡೆ ಮನದ ಕೊನೆಯಲ್ಲಿ ಲಿಂಗದ ನೆನಹು ಹಿಂಗಲಾಗದು. ಇದು ಕಾರಣ -ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಮಹಾಲಿಂಗಭಕ್ತಿ.
--------------
ಚನ್ನಬಸವಣ್ಣ
ಲೋಕಹಿತಾರ್ಥವಾಗಿ, ಪ್ರಾಣಿಗಳೆಲ್ಲ ಕೆಟ್ಟಹರೆಂದು ಶರಣ ಲಿಂಗವಾಗಿ, ಲಿಂಗಭರಿತ ಶರಣನಾಗಿ ಬದುಕಿಸಿದನು ಕೇಳಿರಣ್ಣಾ. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ಶರಣರೂಪಾಗಿ ಬಂದು ಶ್ರೀಮೂರ್ತಿಯ ತೋರಿ ಪಾಪವ ಕಳೆದನು. ಉಪಪಾತಕಕೋಟೀನಾಂ ಬ್ರಹ್ಮಹತ್ಯಶತಾನಿ ಚ ದಹಂತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಾತ್ ಭಕ್ತಜನಂಗಳ ಕೂಡೆ ಸಂಭಾಷಣೆಯ ಮಾಡಿ ಮಹಾಪಾತಕಂಗಳ ಕಳೆದನು. ಮಹಾಪಾತಕಕೋಟಿಘ್ನಃ ಶ್ವಪಚೋ[s]ಪಿ ಲಿಂಗಪೂಜಕಃ ತತ್ಸಂಭಾಷಣಾನ್ಮುಕ್ತಿರ್ಗಣಮುಖ್ಯಗಣೇಶ್ವರಃ ಶ್ರೀಗುರುಮೂರ್ತಿಯ ತೋರಿ ಸಂಭಾಷಣೆಯಂ ಮಾಡಿ ಪಾದೋದಕ ಪ್ರಸಾದವನಿತ್ತು ಸಲಹಿ ರಕ್ಷಿಸಲು ಬಂದನು ಕಾಣಿರಣ್ಣಾ. ಇದನರಿಯದೆ, ಶರಣರು ದ್ರವ್ಯಾರ್ಥಿಗಳಾಗಿ ಬಂದರೆಂಬಿರಿ, ನಾನು ಮಾಡಿದೆನು ಶರಣರು ಮಾಡಿಸಿಕೊಂಡಹರೆಂದೆಂಬಿರಿ, ಉಂಟೆಂದಿರಿ, ಇಲ್ಲೆಂದಿರಿ, ಈ ಪರಿ ಅಜ್ಞಾನದಲ್ಲಿ ಕಂಡು, ನುಡಿದು, ದೋಷಿಗಳಹಿರಿ. ಶರಣರ ಶಿವನೆಂದು ನಂಬಿಮಾಡಲು ಸಿರಿಯಾಳನು ಮಗನ ಕೊಟ್ಟಡೆ ಕೈಲಾಸವ ಕೊಟ್ಟನು. ದಾಸ ವಸ್ತ್ರನಿತ್ತಡೆ ಮಹಾವಸ್ತು ತವನಿದ್ಥಿಯ ಕೊಟ್ಟನು. ಬಲ್ಲಾಳ ವಧುವನಿತ್ತಡೆ, ತನ್ನನೇ ಕೊಟ್ಟನು. ಈ ಪರಿ ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತವನೆ ಕೊಟ್ಟನು. ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ದೇವಸಂಪೂಜ್ಯಮಾನೇಷು ಗಣಮುಖ್ಯೋ ಗಣೇಶ್ವರಃ ಭಕ್ತಿಯಿಂ ನಂಬಿ ಮಾಡಿರೆ, ದುಭಾರ್ವಿಸಿ ಕೆಡಬೇಡ. ಶರಣರೇ ಶಿವನೆಂದು ನಂಬಿ ಮಾಡಿರಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಕೂಡುವುದಯ್ಯಾ.
--------------
ಉರಿಲಿಂಗಪೆದ್ದಿ
ಆಡುವಡೆ ಸದಾಚಾರಿಗಳ ಕೂಡೆ ಆಡುವದು. ನುಡಿವಡೆ ಜಂಗಮಪ್ರೇಮಿಯ ಕೂಡೆ ನುಡಿವುದು. ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವದು. ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾ ರೇಕಣ್ಣಪ್ರಿಯ ನಾಗಿನಾಥ್ಞಿ.
--------------
ಬಹುರೂಪಿ ಚೌಡಯ್ಯ
ಇನ್ನಷ್ಟು ... -->