ಅಥವಾ

ಒಟ್ಟು 44 ಕಡೆಗಳಲ್ಲಿ , 21 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ವಿಶ್ವಾದ್ಥಿಕ ಮಹಾರುದ್ರನುತ್ಪತ್ಯವೆಂತೆಂದಡೆ : ಅನಂತ ಬ್ರಹ್ಮಾಂಡ ಅನಂತ ಕೋಟಿ ಲೋಕಧರನಾದ ಪರಾಪರನಾದ ಮಹಾಸದಾಶಿವನಾದವನು ತನ್ನ ನಿಜಜಾÕನ ಹಿರಿಣ್ಯಗರ್ಭದಲ್ಲಿ ವಿಶ್ವಾದ್ಥಿಕ ಮಹಾರುದ್ರನಂ ನಿರ್ಮಿಸಿ ತನ್ನ ಪಂಚಮುಖದಿಂದ ಪೃಥ್ವಿ ತೇಜ ವಾಯುವಾಕಾಶವೆಂಬ ಮಹಾಭೂತ ಬ್ರಹ್ಮಾಂಡದೊಳು ಚತುರ್ದಶ ಭುವನಂಗಳು, ಸಪ್ತ ಕುಲಪರ್ವತಂಗಳು ಮೊದಲಾದ ಅನಂತ ಗಿರಿ ಗಹ್ವರಂಗಳಂ, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗಬ್ರ್ಥೀಕರಿಸಿಕೊಂಡು ನಿರ್ಮಿಸೆಂದು ಬೆಸನಂ ಕೊಟ್ಟು ಕಳುಹಲು, ಮಹಾಪ್ರಸಾದವೆಂದು ಕೈಕೊಂಡು ಆ ಭೂತಬ್ರಹ್ಮಾಂಡದೊಳು ನಿರ್ಮಿಸಿದನೆಂತೆಂದಡೆ : ಜಲದ ಮೇಲೆ ಕಮಠನ ನಿರ್ಮಿಸಿದ. ಆ ಕಮಠನ ಮೇಲೆ ಮಹಾವಾಸುಗಿಯಂ ನಿರ್ಮಿಸಿದ. ಆ ಮಹಾವಾಸುಗಿಯ ಮೇಲೆ ಅಷ್ಟದಿಗ್ಗಜಂಗಳ ನಿರ್ಮಿಸಿದನು ಆ ವಿಶ್ವಾದ್ಥಿಕ ಮಹಾರುದ್ರನು. ಆ ಅಷ್ಟದಿಗ್ಗಜಂಗಳ ಮೇಲೆ ಸಕಲವಾದ ಜೀವಂಗಳಿಗೂ ಸಕಲವಾದ ಪದಾರ್ಥಂಗಳಿಗೂ ಇಹಂತಾಗಿ ಮಹಾಪೃಥ್ವಿಯಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಮಹಾಮೇರುಪರ್ವತದ ತಾವರೆಯ ನಡುವಣ ಪೀಠಿಕೆಯ ಕ್ರಮದಲ್ಲಿ ನಡೆಯ ಪ್ರಮಾಣು ಹದಿನಾರು ಸಾವಿರದ ಯೋಜನ ಪ್ರಮಾಣು. ಉದ್ದ ಎಂಬತ್ನಾಲ್ಕು ಸಾವಿರ ಯೋಜನದುದ್ದ. ವಿಸ್ತೀರ್ಣ ಮೂವತ್ತೆರಡು ಸಾವಿರಯೋಜನ ಪ್ರಮಾಣು ಉಂಟಾಗಿಹಂತಾಗಿ ಮೇರುತನಕ ಸುತಾಳ ತಾಳ, ಪಂಚಾಶತಕೋಟಿ ಸೋಪಾನಂಗಳುಂಟಾಗಿ ದಿವ್ಯರೂಪಾಗಿ ನಿರ್ಮಿಸಿದನು. ಆ ಮೇರುವಿನ ಪೂರ್ವದೆಸೆಯಲ್ಲಿ ಪದ್ಮರಾಗವು, ಆಗ್ನೆಯಲ್ಲಿ ವಜ್ರ, ದಕ್ಷಿಣದಲ್ಲಿ ಮೌಕ್ತಿಕ, ನೈರುತ್ಯಭಾಗದಲ್ಲಿ ನೀಲ, ಪಶ್ಚಿಮದ ದೆಸೆಯ ವಿಭಾಗದಲ್ಲಿ ವೈಡೂರ್ಯ, ವಾಯುವ್ಯದಲ್ಲಿ ಚಿಂತಾಮಣಿ, ಉತ್ತರದಲ್ಲಿ ರತ್ನಕನಕ, ಈಶಾನ್ಯದಲ್ಲಿ ತಾಮ್ರ, ಮೇರುವಿನ ಮಧ್ಯದಲ್ಲಿ ಪುಷ್ಯರಾಗ ಜಾÕನ ದೃಷ್ಟಿಗಳುಂಟಾಗಿ ಪರಿಪೂರಿತಗಳಿಹಂತಾಗಿ ಗಿರಿಯ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಮೇಲುಳ್ಳ ವೃಕ್ಷಂಗಳೆಲ್ಲ ಕಲ್ಪವೃಕ್ಷಂಗಳು. ಆ ಮೇರುವಿನ ಮೇಲುಳ್ಳ ಮೃಗಂಗಳೆಲ್ಲ ಅಚಾಮಚರಿತ್ರಂಗಳು. ಆ ಮೇರುವಿನ ಮೇಲುಳ್ಳ ಗೋವೆಲ್ಲ ಕಾಮಧೇನುಗಳು. ಅಲ್ಲಿದ್ದ ಮನುಷ್ಯರೆಲ್ಲ ಪರಮಾತ್ಮರು. ಅಲ್ಲಿದ್ದ ಸ್ತ್ರೀಯರೆಲ್ಲ ದೇವಸ್ತ್ರೀಯರು. ಆಹಾರಂಗಳೆಲ್ಲ ಅಮೃತಾಹಾರ, ನೀರೆಲ್ಲ ರಜಸ್ತಳೇಯ ; ಅಲ್ಲಿಯ ಮಣ್ಣೆಲ್ಲ ಕಸ್ತೂರಿ ಕುಂಕುಮಾದಿಗಳೆನಿಸಿಕೊಂಬುದು. ಅಲ್ಲಿಯ ಕಾಷ್ಠಂಗಳೆಲ್ಲ ಸುಗಂಧಂಗಳು. ಆ ಮೇರುವಿನ ದೇವತೆಗಳಿಗೂ ಮುನಿಗಳಿಗೂ ಅನಂತ ಸಿದ್ಧರಿಗೂ ಅನಂತ ಯೋಗಿಗಳಿಗೂ ಜೋಗಿಗಳಿಗೂ ಪುರಂಗಳು ಗೃಹಂಗಳು ಗುಡಿಗಳು ಬಿಲದ್ವಾರಂಗಳುಂಟಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿಗೆ ನಾಲ್ಕು ಬಾಗಿಲು, ಎಂಟು ಸ್ವರ್ಣಕಂಡಿಗಳು, ಹದಿನಾರು ಮಕರತೋರಣಗಳು, ಮೂವತ್ತೆರಡು ಸೋಮವೀದಿಗಳು, ಅರವತ್ನಾಲ್ಕು ಸಂದುಗಳುಂಟಾಗಿ ಸರ್ವಸಂಪೂರ್ಣವಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿನ ಮಧ್ಯದಲ್ಲಿ ಶ್ರೀ ಮಹಾದೇವರಿಗೆ ಶಿವಪುರಮಂ ನಿರ್ಮಿಸಿದನು. ಪಂಚಸಹಸ್ರಯೋಜನ ಚತುಃಚಕ್ರಾಕಾರವಾಗಿ, ನವರತ್ನಖಚಿತವಾಗಿ, ಅಷ್ಟದಳವೇಷ್ಟಿತವಾಗಿ, ಅಷ್ಟಧ್ವಾನಂಗಳುಂಟಾಗಿ, ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ. ಪ್ರಮಥಗಣಂಗಳು, ನಂದಿ, ಮಹಾನಂದಿಕೇಶ್ವರ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖದಲ್ಲಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಬಲದ ದೆಸೆಯಲ್ಲಿ ಬ್ರಹ್ಮಪುರವು ತ್ರಿಕೋಣಾಕಾರವಾಗಿ ಅನಿಲಪ್ರಕಾರವೇಷ್ಟಿತವಾಗಿ, ಅಷ್ಟದ್ವಾರಂಗಳುಂಟಾಗಿ ಐನೂರು ಕೋಟಿ ಕನಕಗೃಹಂಗಳು ಅಸಂಖ್ಯಾತಕೋಟಿ ಮಹಾಋಷಿಗಳು ಒಡ್ಡೋಲಂಗಗೊಟ್ಟು, ನಾಲ್ಕು ವೇದಂಗಳು ಮೂರ್ತಿಬಾಂಧವರಾಗಿ ಸರಸ್ವತಿಸಮೇತವಾಗಿ ಬ್ರಹ್ಮದೇವರು ಪರಮಾನಂದಸುಖದೊಳಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ವಾಮಭಾಗದಲ್ಲಿ ವಿಷ್ಣುವಿಂಗೆ ವೈಕುಂಠವೆಂಬ ಪುರ ಚಕ್ರಾಕಾರವಾಗಿ ಪದ್ಮರಾಗಪ್ರಕಾಶವೇಷ್ಟಿತವಾಗಿ ಅಷ್ಟದ್ವಾರಂಗಳು ಹತ್ತುನೂರುಕೋಟಿ ಕನಕಗೃಹಂಗಳುಂಟಾಗಿ ಅನಂತಕೋಟಿ ಶಂಕ ಚಕ್ರ ಗದಾಹಸ್ತನಾಗಿ ವೇದ ಓಲೈಸಲಾಗಿ ಶ್ರೀಲಕ್ಷ್ಮೀ ಸಮೇತನಾಗಿ ವಿಷ್ಣು ಪರಮಾನಂದಸುಖದಲ್ಲಿಪ್ಪಂತೆ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಪೂರ್ವದೆಸೆಯಲ್ಲಿ ದೇವೇಂದ್ರಂಗೆ ಅಮರಾವತಿಯ ಪುರಮಂ ನಿರ್ಮಿಸಿದನು. ಆಗ್ನೇಯ ದೆಸೆಯಲ್ಲಿ ಅಗ್ನಿದೇವಂಗೆ ತೇಜೋವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ದಕ್ಷಿಣದಿಶಾಭಾಗದಲ್ಲಿ ಯಮದೇವಂಗೆ ಸಿಂಹಾವತಿಯ ಪುರಮಂ ನಿರ್ಮಿಸಿದನು. ನೈಋತ್ಯ ದಿಶಾಭಾಗದಲ್ಲಿ ನೈಋತ್ಯಂಗೆ ಕೃಷ್ಣವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಪಶ್ಚಿಮ ದಿಶಾಭಾಗದಲ್ಲಿ ವರುಣಂಗೆ ಜಂಜನಿತಪುರಮಂ ನಿರ್ಮಿಸಿದನು. ವಾಯುವ್ಯದಲ್ಲಿ ವಾಯುವಿಂಗೆ ಗಂಗಾವತಿಯಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಉತ್ತರದೆಶೆಯಲ್ಲಿ ಕುಬೇರಂಗೆ ಅಳಕಾಪುರಮಂ ನಿರ್ಮಿಸಿದನು. ಈಶಾನ್ಯದಿಶಾಭಾಗದಲ್ಲಿ ಈಶಾನ್ಯದೇವಂಗೆ ಧವಳಾವತಿಪುರಮಂ ಮೊದಲಾಗಿ ಸಮಸ್ತವಾದ ಪುರಗಳಂ ನಿರ್ಮಿಸಿದನು ವಿಶ್ವಾದ್ಥಿಯಕಮಹಾರುದ್ರನು. ಆ ಮಹಾಮೇರುವಿಂಗೆ ವಳಯಾಕೃತವಾಗಿ ಲವಣ ಇಕ್ಷು ಸುರೆ ಘೃತ ದದ್ಥಿ ಕ್ಷೀರ ಶುದ್ಧಜಲಂಗಳೆಂಬ ಸಪ್ತಸಮುದ್ರಂಗಳಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಸಮುದ್ರಂಗಳ ನಡುವೆ ಜಂಬೂದ್ವೀಪ, ಪ್ಲಕ್ಷದ್ವೀಪ, ಶುಕ್ಲದ್ವೀಪ, ಕುಶದ್ವೀಪ, ಶಾಕದ್ವೀಪ, ಶಾಲ್ಮಲೀದ್ವೀಪ, ಪುಷ್ಕರದ್ವೀಪ, ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ದ್ವೀಪಂಗಳಿಗೆ ವಳಯಾಕೃತವಾಗಿ ಮಲಯಜಪರ್ವತ, ನೀಲಪರ್ವತ, ಶ್ವೇತಪರ್ವತ, ಋಕ್ಷಪರ್ವತ, ರಮ್ಯಪರ್ವತ, ಉತ್ತರಕುರುಪರ್ವತ, ಸುಗಂಧಪರ್ವತ, ನಿರಾಕಾರಪರ್ವತ, ಉದಾರಪರ್ವತ, ಮಣಿಶಿಖರಪರ್ವತ, ಅರ್ಧಚಂದ್ರಪರ್ವತ, ಮಧುರಪರ್ವತ, ಮಣಿನಾಗಪರ್ವತ, ಮೈನಾಕಪರ್ವತ, ಉದಯಾದ್ರಿಪರ್ವತ, ತ್ರಿಪುರಾಂತಕಪರ್ವತ, ಶ್ರೀರಾಮಪರ್ವತ, ಮಾಲ್ಯವಂತಪರ್ವತ, ನಿಷಧಪರ್ವತ, ಹೇಮಕೂಟಪರ್ವತ, ನಿರಾಚಲಪರ್ವತ, ಗಂಧಾಚಲಪರ್ವತ, ನೀಲಾಚಲಪರ್ವತ, ಮಂದಾಚಲಪರ್ವತ, ಮೇರುಮಂದಿರಪರ್ವತ, ಶುಬರೀಶ್ವರಪರ್ವತ, ಕುಮುದಉದಯಾದ್ರಿ, ದೇವಕೂಟ, ವಿಂಧ್ಯಾಚಲ, ಪವನಾಚಲ, ಪರಿಯಾಚಲ, ಚಂದ್ರಾಚಲ, ಧಾರಾಚಲ, ಷಡುಲಕ್ಷ್ಮಿಗಿರಿ, ಮಾನಸಾಂತಗಿರಿ, ತಮಂಧಗಿರಿ, ಚಂದ್ರಗಿರಿ, ನಾಗಗಿರಿ, ಲಘುಗಿರಿ, ಮಕರಗಿರಿ, ದ್ರೋಣಗಿರಿ, ಅನಂತವಜ್ರಗಿರಿ, ಕಪಿಲಗಿರಿ, ನೀಲಗಿರಿ, ಪರಗಿರಿ, ತ್ರಿಪುರಗಿರಿ, ಸಿಂಹಗಿರಿ, ಶ್ರೀಕಂಠಗಿರಿ, ಚಕ್ರವಾಳಗಿರಿಪರ್ವತ, ಇಂದ್ರಗಿರಿಪರ್ವತ, ಲೋಕಪರ್ವತಂಗಳು ಮೊದಲಾದ ಪರ್ವತಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇದಕ್ಕೆ ದೇಶಂಗಳಾಗಬೇಕೆಂದು ಪಾಂಚಾಲ, ಬರ್ಬರ, ಮತ್ಸ್ಯ, ಮಗಧ, ಮಲೆಯಾಳ, ತೆಲುಂಗ, ಕಳಿಂಗ, ಕುಕರ, ಕೊಂಕಣ, ತ್ರಿಕರರಾಷ್ಟ್ರ, ಶ್ವಾಸಿನಿ, ಕಂಠರಹಿತ, ಕುತಿಷ್ಟ, ದಶಾರ್ಣ, ಕುರು, ಮುಖಸರ, ಕೌಸಯಿವರ್ಣ, ಆವಂತಿ, ಲಾಳ, ಮಹೇಂದ್ರ, ಪಾಂಡ್ಯ, ಸರ್ವೇಶ್ವರ, ವಿಷ್ಣು, ಶಾಂತಕ, ತುರಾದ್ರ, ಮಗಧಾದ್ರ, ವಿದೇಹ, ಮಗಧ, ದ್ರವಿಳ, ಕಿರಾಂತ, ಕುಂತಳ, ಕಾಮೀರ, ಗಾಂಧಾರ, ಕಾಂಭೋಜ, ಕೀಳುಗುಜ್ಜರ, ಅತಿದೃಷ್ಟ, ನೇಪಾಳ, ಬಂಗಾಳ, ಪುಳಿಂದ್ರ, ಜಾಳೇಂದ್ರ, ಕಲ್ವರ-ಇಂಥಾ ದೇಶಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇನ್ನು ಭೂಮಿಯಿಂದಂ ಮೇಲೆ ಮೇಘಮಂಡಲ ಮೊದಲಾಗಿ ಶಿವಾಂಡ ಚಿದ್ಬ ್ರಹ್ಮಾಂಡ ಕಡೆಯಾಗಿ ಎಲ್ಲಾ ಲೋಕಂಗಳಂ ನಿರ್ಮಿಸಿ, ಸಪ್ತಪಾತಾಳವ ನಿರ್ಮಿಸಿದನದೆಂತೆಂದಡೆ: ಅಲ್ಲಿ ಪೃಥ್ವಿಯ ಕೆಳಗೆ ಶತಕಯೋಜನದಲ್ಲಿ ಅತಳಲೋಕದಲ್ಲಿ ಇಶಿತಮಂಡಲಮಂ ನಿರ್ಮಿಸಿದನು. ಅತಳಲೋಕದಿಂದಂ ಕೆಳಗೆ ಕೋಟಿಯೋಜನದುದ್ದದಲ್ಲಿ ವಿತಳಲೋಕದಲ್ಲಿ ಸ್ವರ್ಣ ನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲು ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಸುತಳತೋಲಕದಲ್ಲಿ ಕೃಷ್ಣನಾಗಮಂಡಲಮಂ ನಿರ್ಮಿಸಿದನು. ಆ ಸುತಳಲೋಕದಿಂದಲು ಕೆಳಗೆ ರಸಾತಳಲೋಕದಲ್ಲಿ ರತ್ನನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ರಸಾತಳಲೋಕದಿಂದಲು ಕೆಳಗೆ ಚತುಃಕೋಟಿ ಯೋಜನದುದ್ದದಲ್ಲಿ ಮಹಾತಳಲೋಕದಿಂದಲು ಕೆಳಗೆ ಶತಕೋಟಿ ಯೋಜನದುದ್ದದಲ್ಲಿ ಪಾತಾಳಲೋಕದಲ್ಲಿ ಅವಿಷ್ಟಕೆ ಆಧಾರವಾಗಿ ಕಮಠನಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಕಮಠನ ಮೇಲೆ ಜಲಂಗಳಂ, ಕಮಲಂಗಳಂ, ಮಹಾಪೃಥ್ವಿಯಂ, ಮೇರುಪರ್ವತ ಸಮಸ್ತದೇವಾಸುರಂಗಳಂ ಮಹಾಪೃಥ್ವಿಯು ಸಮಸ್ತ ಸಪ್ತಸಮುದ್ರಂಗಳಂ, ಸಪ್ತದ್ವೀಪಂಗಳಂ ಮೊದಲಾದ ಲೋಕಾದಿಲೋಕ ಪರ್ವತಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲೂ ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಅತಳ ವಿತಳ ಸುತಳ ರಸಾತಳ ತಳಾತಳ ಮಹಾತಳ ಪಾತಾಳ ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನರ್ಲೋಕ, ತಪರ್ಲೋಕ, ಸತ್ಯರ್ಲೋಕ-ಇಂಥ ಲೋಕಂಗಳೆಂಬ ಹದಿನಾಲ್ಕು ಲೋಕಂಗಳಂ ನಿರ್ಮಿಸಿ ಮತ್ತೆ ಸ್ವರ್ಗ-ಮತ್ರ್ಯ-ಪಾತಾಳಗಳ ವಿವರಿಸಿ ನೋಡಿ ಆ ಲೋಕದವರಿಗೆ ವೇದಶಾಸ್ತ್ರಂಗಳಂ ನಿರ್ಮಿಸಿದನದೆಂತೆಂದಡೆ : ವೇದ ವೇದಾಂಗ, ಮಂತ್ರಶಾಸ್ತ್ರ, ತರ್ಕಶಾಸ್ತ್ರ, ಯೋಗಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ವೈದ್ಯಶಾಸ್ತ್ರ, ನೀತಿಶಾಸ್ತ್ರ, ಧರ್ಮಶಾಸ್ತ್ರ, ಶಕುನಶಾಸ್ತ್ರ, ಶಸ್ತ್ರಶಾಸ್ತ್ರ, ಶಿಲ್ಪಶಾಸ್ತ್ರ, ಜಲಶಾಸ್ತ್ರ, ಸಾಮುದ್ರಿಕಶಾಸ್ತ್ರ, ನೃಪತಿಶಾಸ್ತ್ರ, ಅಂಜನಶಾಸ್ತ್ರ, ರಸವೈದ್ಯಶಾಸ್ತ್ರ, ಬಿಲ್ಲುಶಾಸ್ತ್ರ, ಗೋಪಶಾಸ್ತ್ರ, ಮನುಷ್ಯಶಾಸ್ತ್ರ, ರಥಿಕಶಾಸ್ತ್ರ, ಅಂಗುಲಿಶಾಸ್ತ್ರ, ಶ್ರವಣಶಾಸ್ತ್ರ, ಗಂಧಪಾದ್ಯಶಾಸ್ತ್ರ, ಭುಜಗಶಾಸ್ತ್ರ, ಯೋಗಿಣಿಶಾಸ್ತ್ರ, ಯಕ್ಷಿಣಿಶಾಸ್ತ್ರ, ಶಬ್ದನೀತಿಶಾಸ್ತ್ರ, ಅಲಂಕಾರಶಾಸ್ತ್ರ, ವಿಶ್ವಶಾಸ್ತ್ರ, ಗಂಡಶಾಸ್ತ್ರ, ವ್ಯಾದ್ಥಿಶಾಸ್ತ್ರ, ಯುದ್ಧಶಾಸ್ತ್ರ, ಹಸರಶಾಸ್ತ್ರ, ಶುಂಭನಶಾಸ್ತ್ರ, ಮುಖಶಾಸ್ತ್ರ, ಬಂಧಶಾಸ್ತ್ರ, ಜಲಸ್ತಂಭಶಾಸ್ತ್ರ, ಅಗ್ನಿಶಾಸ್ತ್ರ, ಕರ್ಮಶಾಸ್ತ್ರ, ಪುರಾಣಿಕಶಾಸ್ತ್ರ, ಇಂಗಶಾಸ್ತ್ರ, ವೈದ್ಯಶಾಸ್ತ್ರ, ಇಂದ್ರಜಾಲ, ಮಹೇಂದ್ರಜಾಲ ಶಾಸ್ತ್ರಂಗಳು ಮೊದಲಾದ ಚೌಷಷ್ಠಿ ವಿದ್ಯಂಗಳ ನಿರ್ಮಿಸಿದನು ನೋಡಾ [ಅಪ್ರಮಾಣ] ಕೂಡಲಸಂಗಯ್ಯನ ಶರಣ ವಿಶ್ವಾದ್ಥಿಕಮಹಾರುದ್ರನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹಿಂದಣ ಭವವನೊರಸಿ, ಮುಂದಣ ಜನನಕರ್ಮವ ಸಂಹರಿಸಿ ಮಲ ಮಾಯೆಯ ಶಿಕ್ಷಿಸಿ, ಎನ್ನ ರಕ್ಷಿಸಿದಿರಯ್ಯಾ ಗುರುವೆ. ಕಬ್ಬುನದ ಗಿರಿಯ ಪರುಷರಸ ಸೋಂಕಿದಂತೆ ಸೌರಾಷ್ಟ್ರ ಸೋಮೇಶ್ವರನೆಂಬ ಗುರು ಸೋಂಕಲು ಎನ್ನ ಅವಗುಣಂಗಳರತು ಹೋದವು.
--------------
ಆದಯ್ಯ
ಬೆಳಗಿನೊಳು ಮಹಾಬೆಳಗಿನ ಜ್ಯೋತಿಯ ಕಂಡೆನು, ಶತಕೋಟಿ ಮಿಂಚಿನ ಪ್ರಭೆಯ ಕಂಡೆನು, ಅನಿಲನ ಸಂಗದಲುರಿವ ಕರ್ಪುರದ ಗಿರಿಯ ಕಂಡೆನು. ಕಂಡ ಕಾರಣ, ಎನ್ನ ಪಿಂಡದೊಳಗಿಹ ಸ್ವಯಜ್ಞಾನವೆ ಪರಬ್ರಹ್ಮವೆಂದು ತಿಳಿದು ಸಂತೈಸುತಿದ್ದೆ. ಭೇದದಿಂದೆ ಪರಮಾತ್ಮ ಎನ್ನ ಮತ್ರ್ಯಕ್ಕೆ ಆಜ್ಞೆಯಿಸಿ ಕಳುಹಿ ಅಂಜದಿರೆಂದು ಅಭಯಕೊಟ್ಟು, ತಲೆದಡಹಿ, ನೀನಿದ್ದಲ್ಲಿ ನಾನಿಹೆನೆಂದು ನಿರೂಪಿಸಿ, ಆದಿಪಿಂಡವ ಮಾಡಿ, ಜಗಕ್ಕೆ ನಿರ್ಮಿಸೆ, ಹೇಮಗಲ್ಲ ಹಂಪನೆಂಬ ನಾಮವಿಡಿದು ಬಂದೆ. ಆ ಭೇದವ ಪಿಂಡಜ್ಞಾನದಿಂದಲರಿದು ಆಚರಿಸುತ್ತಿದ್ದೆನು ಎನ್ನಾಳ್ದ Wಪರಮಘೆಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಂಚಮುಖದ ಗಿರಿಯ ಗಹ್ವರದಲ್ಲಿ, ಮುಂಚಿದರೈದುವ ಹುಲಿಗಳ ಕಂಡೆ. ಆ ಹುಲಿಯೊಂದಕ್ಕೆ ಐದು ಬಾಯಿ. ಆ ಬಾಯೊಳಗೆ ಹೊಕ್ಕು ಹುಲಿಯ ಕುಲಗೆಡಿಸಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಬಲ್ಲಡೆ.
--------------
ಮೋಳಿಗೆ ಮಾರಯ್ಯ
ಗಿರಿಯ ತುದಿಯ ಮೇಲೆ ಹಾರುವ ಹಂಸನ ಕಂಡೆನಯ್ಯ. ಆ ಹಂಸನು ಚಂದ್ರಸೂರ್ಯಾದಿಗಳ ಬೆಳಗನೊಳಕೊಂಡು ಪರಿಪೂರ್ಣವಾದ ಲಿಂಗಕ್ಕೆ ಹಾರಿಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶ್ರೀಶೈಲ ಸಿಂಹಾಸನದ ಮೇಲೆ ಕುಳ್ಳಿರ್ದು, ಪುರದ ಬಾಗಿಲೊಳು ಕದಳಿಯ ನಿರ್ಮಿಸಿದರು, ನರರು ಸುರರು ಮುನಿಗಳಿಗೆ ಮರಹೆಂಬ ಕದವನಿಕ್ಕಿ ತರಗೊಳಿಸಿದರು ತ್ರಿವಿಧ ದುರ್ಗಂಗಳ. ಆ ಗಿರಿಯ ಸುತ್ತಲು ಗಾಳಿ ದೆಸೆದೆಸೆಗೆ ಬೀಸುತ್ತಿರೆ, ಕೆರಳಿ ಗಜ ಎಂಟೆಡೆಗೆ ಗಮಿಸುತ್ತಿರಲು ಪರಿವಾರ ತಮ್ಮೊಳಗೆ ಅತಿಮಥನದಿಂ ಕೆರಳೆ ಪುರದ ನಾಲ್ಕು ಕೇರಿಯನೆ ಬಲಿದರು. ಆ ನರನೆಂಬ ಹೆಸರಳಿದು, ಗುರುಮಾರ್ಗದಿಂದ ಮರಹೆಂಬ ಕದವ ಮುರಿದು ಒಳಹೊಕ್ಕು ಪುರದ ಮರ್ಮವನರಿದು, ಭರದಿಂದ ತ್ರಿಸ್ಥಾನವನುರುಹಿ ಪರಿವಾರವನು ವಶಕ್ಕೆ ತಂದು, ಗಿರಿಶಿಖರವನೇರಿ ಪುರವ ಸೂರೆಯಂಗೊಂಡು, ಪುರಕ್ಕೊಡೆಯನಾಗಿ ಪರಿಣಾಮದಿಂದ ಕೂಡಲಚೆನ್ನಸಂಗಯ್ಯನಲ್ಲಿ ಶರಣಾದವಂಗೆ ನಮೋ ನಮೋ ಎಂಬೆ
--------------
ಚನ್ನಬಸವಣ್ಣ
ಕೆಂಡದ ಗಿರಿಯ ಅರಗಿನ ಬಾಣದಲೆಚ್ಚಡೆ ಮರಳಿ ಆ ಬಾಣವನರಸಲುಂಟೆ ? ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ ? ಗುಹೇಶ್ವರನೆಂಬ ಲಿಂಗವನರಿದ ಬಳಿಕ ಮತ್ತೆ ಮರಳಿ ನೆನೆಯಲುಂಟೆ ?
--------------
ಅಲ್ಲಮಪ್ರಭುದೇವರು
ನಿಜಲಿಂಗೈಕ್ಯ ನಿಜಲಿಂಗೈಕ್ಯರೆಂದು ನುಡಿದುಕೊಂಬ ಕಡುಮಂದಮತಿಗಳನೇನೆಂಬೆನಯ್ಯಾ. ಸತ್ವ-ರಜ-ತಮ ಗಿರಿಯ ಗವಿಯ ಹೊಕ್ಕು ಗಬ್ಬುಗೊಂಡು ಗರಳಘಾತದೊಳು ಮುಳುಗಿದ ವಿಹಂಗಗತಿಗಳೆತ್ತಬಲ್ಲರಯ್ಯಾ ನಿಮ್ಮ ಶರಣನ ಲಿಂಗೈಕ್ಯದ ಘನವ ! ಪತಂಗ ಜಲದಲ್ಲಿ ಮುಳುಗಬಾರದು, ಅನಿಮಿಷನು ಅಗ್ನಿಯಲ್ಲಿ ಮುಳುಗಬಾರದು ಗುರುನಿರಂಜನ ಚನ್ನಬಸವಲಿಂಗ ನಿಮ್ಮ ನೀವೇ ಬಲ್ಲಿರಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನೇನಹುದೆಂಬೆ, ಇನ್ನೇನಲ್ಲೆಂಬೆ, ಎಲ್ಲಾಮಯವು ನೀನಾಗಿ? ಹಿರಿದಹ ಗಿರಿಯ ಹತ್ತಿ, ಬಿದಿರೆಲೆಯ ತರಿದ[ವ]ನಂತೆ, ಒಂದ ಬಿಟ್ಟೊಂದ ಹಿಡಿದಡೆ ಅದೆಲ್ಲಿಯ ಚಂದ? ಹಿಂಗುವುದಕ್ಕೆ ಠಾವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಏಕೋದೇವಾಯೆಂದು ಮನೆಮನೆದಪ್ಪದೆ ಗಿರಿಯ ತಡಿಯ ಕಡಲ ಮುಡಿಯ ಜಡೆಯನೆಂಬರು. ಅಯ್ಯಾ, ಎಂದಡಾನು ನಗುತ್ತಲಿರ್ದೆ, ಆ ಆಧಾರದಲ್ಲಿ ರೂಪುಯೆಂಟು ಇಲ್ಲದಂದು ಹೆಸರು ನಿನಗೇನು ಹೇಳಾ? ಕಪಿಲಸಿದ್ಧಮಲ್ಲಿಕಾರ್ಜುನ ನೀನು ಆಮುಖಶೂನ್ಯ ಕಾಣಾ
--------------
ಸಿದ್ಧರಾಮೇಶ್ವರ
ಊರ ಮೇಲೆ ಊರ ಕಂಡೆ, ನೀರ ಮೇಲೆ ನೀರ ಕಂಡೆ. ಮರನ ಮೇಲೆ ಮರನ ಕಂಡೆ, ಗಿರಿಯ ಮೇಲೆ ಗಿರಿಯ ಕಂಡೆ. ಉರಿಯ ಮೇಲೆ ಉರಿಯ ಕಂಡೆ. ಈ ಭಾರವ ತಾಳಲಾರದೆ, ಆ ಉರಿಯೆ ಎದ್ದು ಊರು ಬೆಂದಿತ್ತು, ನೀರು ಬೆಂದಿತ್ತು, ಮರನು ಬೆಂದಿತ್ತು, ಗಿರಿಯು ಬೆಂದಿತ್ತು. ಆ ಉರಿ ಉಳಿಯಿತ್ತು, ಆ ಉರಿಯನೆರದು ಸಿರಿಯ ಸೆಳದು ಪರಮಸುಖಪರಿಣಾಮದೊಳೋಲಾಡುತ್ತ , ನಿಮ್ಮ ಬರವನೆ ಹಾರುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮೇರುಗಿರಿ ಉದಯಗಿರಿ ನೀಲಗಿರಿ ಹೇಮಗಿರಿ ರಜತಗಿರಿ ಇಂತೀ ಗಿರಿಗಳಿಗೆ ಛಳಿಯಾದರೆ ಹೊದ್ದಿಸುವರುಂಟೇನಯ್ಯಾ? ಆ ಗಿರಿಯ ಕೆಳಗೆ ಗಗನವುಂಟು ; ಆ ಗಗನಕ್ಕೆ ಗಬಸಣಿಗೆಯಿಕ್ಕುವರುಂಟೇನಯ್ಯ? ಆ ಗಗನದ ಕೆಳಗೆ ಸಪ್ತಸಮುದ್ರಗಳುಂಟು. ಅವುಗಳ ನೀರುಡುಗಿದರೆ ಆ ನೀರ ಕೂಡಿಸುವರುಂಟೇನಯ್ಯಾ? ಆ ಸಮುದ್ರಂಗಳ ಕೆಳಗೆ ಒಂದು ಮದಸೊಕ್ಕಿದ ಇಲಿ, ಆ ಇಲಿಯ ತಿಂದೆನೆಂದು ಒಂದು ಮಾರ್ಜಲ ಬರಲು, ಆ ಮಾರ್ಜಾಲನು ಆ ಇಲಿಯ ಕಂಡು ನಿಬ್ಬೆರಗಾಯಿತ್ತು. ಆ ಇಲಿಯು ಬಂದು ಆ ಮಾರ್ಜಾಲನ ಕಿವಿಯ ತಿಂಬೋದು. ಆದ ಕಂಡು ಬೆರಗಾದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಸ್ವಾನುಭಾವದ ಬೆಳಗಿನಲ್ಲಿ ಒಂದು ಬೆಕ್ಕು ಹುಟ್ಟಿತ್ತು. ಆ ಬೆಕ್ಕಿನ ತಲೆಯ ಮೇಲೊಂದು ಗಿರಿ ಹುಟ್ಟಿತ್ತು. ಗಿರಿಯ ಮೇಲೆರಡು ರತ್ನ ಹುಟ್ಟಿದವು. ಆ ರತ್ನಂಗಳನರಸಿಕೊಂಡು ಬರಲು, ಅವು ತನ್ನನವಗ್ರಹಿಸಿದವು. ಒಂದು ರತ್ನ ಅಂಗವನವಗ್ರಹಿಸಿತ್ತು, ಮತ್ತೊಂದು ರತ್ನ ಪ್ರಾಣವನವಗ್ರಹಿಸಿತ್ತು. ಆ ರತ್ನಂಗಳ ಪ್ರಭೆ ತಾನಾದ ನಮ್ಮ ಗುಹೇಶ್ವರನ ಶರಣ ಸಿದ್ಧರಾಮಯ್ಯದೇವರ ನಿಲವಿಂಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಧರೆಯ ಮೇಲೆ ಸುಳಿವ ವೇಷಲಾಂಛನಧಾರಿಗಳೆಯ್ದೆ, ಹದಿನೆಂಟು ಜಾತಿಯ ಮನೆಯ ಭಿಕ್ಷವನುಂಡು ಕೆಟ್ಟರು. ಅರೆಯ ಮೇಲಿಪ್ಪ ಅರುಹಿರಿಯರೆಯ್ದೆ ವಾಯುಭಿಕ್ಷವನುಂಡು ಕೆಟ್ಟರು. ಗಿರಿಯ ಮೇಲಿಪ್ಪ ತಪಸ್ವಿಗಳೆಯ್ದೆ ವನಭಿಕ್ಷವನುಂಡು ಕೆಟ್ಟರು. ಅರಿಯದೆ ಇಂದ್ರಿಯಂಗಳ ಕಟ್ಟಿ ಕುರುಹಿನ (ರಾಜ್ಯಕ್ಕೆ ಬಂದು) ನರಕಕ್ಕೆ ಹೋಹವರ ಹಿರಿಯರೆಂದು ಎನಗೆ ತೋರದಿರಾ. ಸರ್ವ ಭ್ರಾಂತಳಿದ ಮಹಂತರನೆನಗೆ ತೋರಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕರ್ಪುರದ ಗಿರಿಯ ಉರಿ ಹಿಡಿದಡೆ ಇದ್ದಿಲುಂಟೆ ? ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ ? ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ, ಮರಳಿ ಬಾಣವನರಸಲುಂಟೆ ? ಗುಹೇಶ್ವರನೆಂಬ ಲಿಂಗವನರಿದು ಮರಳಿ ನೆನೆಯಲುಂಟೆ ?
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->