ಅಥವಾ

ಒಟ್ಟು 23 ಕಡೆಗಳಲ್ಲಿ , 12 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ನಾವು ಗುರು ಲಿಂಗ ಜಂಗಮದ ಪಾದೋದಕ ಪ್ರಸಾದಸಂಬಂದ್ಥಿಗಳೆಂದು ನುಡಿದುಕೊಂಬ ಪಾತಕರ ಮುಖವ ನೋಡಲಾಗದು. ಅದೇಕೆಂದಡೆ, ಪಾದೋದಕವ ಕೊಂಡ ಬಳಿಕ, ಜನನದ ಬೇರ ಕಿತ್ತೊರಸಬೇಕು. ಪ್ರಸಾದವ ಕೊಂಡ ಬಳಿಕ, ಪ್ರಳಯವ ಗೆಲಿಯಬೇಕು. ಇಂತಪ್ಪ ಚಿದ್ರಸ ಪಾದೋದಕ ಚಿತ್‍ಪ್ರಕಾಶ ಪ್ರಸಾದ. ತನ್ನ ಚಿನ್ಮನಸ್ವರೂಪವಾದ ಹೃದಯಮಂದಿರ ಮಧ್ಯದಲ್ಲಿ ನೆಲಸಿರುವ ಸಕೀಲಸಂಬಂಧವ ಚಿದ್ಘನ ಗುರುವಿನ ಮುಖದಿಂದ ಸಂಬಂದ್ಥಿಸಿಕೊಳಲರಿಯದೆ, ಅರ್ಥದಾಸೆಗಾಗಿ ಬಡ್ಡಿಯ ತೆಗೆದುಕೊಂಡು, ಬಡವರ ಬಂಧನಕಿಕ್ಕಿ, ತುಡುಗುವ್ಯಾಪಾರವ ಮಾಡಿ, ಸದಾಚಾರದಿಂದ ಆಚರಿಸಲರಿಯದೆ, ತನುಮನಧನದಲ್ಲಿ ವಂಚನೆಯಿಲ್ಲದ ಭಕ್ತಿಯನರಿಯದೆ, ತೀರ್ಥಪ್ರಸಾದದಲ್ಲಿ ನಂಬುಗೆ ವಿಶ್ವಾಸವಿಲ್ಲದೆ ಕಂಡವರ ಕೈಯೊಡ್ಡಿ ಇಕ್ಕಿಸಿಕೊಂಡು ವಿಶ್ವಾಸವಿಲ್ಲದವಂಗೆ ಅಷ್ಟಾವರಣವೆಂತು ಸಿದ್ಧಿಯಹುದೋ? ಅದೇನು ಕಾರಣವೆಂದಡೆ : ಸಕಲ ವೇದಾಗಮ ಪುರಾಣ ಸಪ್ತಕೋಟಿ ಮಹಾಮಂತ್ರ ಉಪಮಂತ್ರ ಕೋಟ್ಯಾನುಕೋಟಿಗೆ ಮಾತೃಸ್ಥಾನವಾದ ಪಂಚಾಕ್ಷರಿಯ ಮಂತ್ರ ಸಟೆಯಾಯಿತ್ತು. ಅನಂತಕೋಟಿ ಬ್ರಹ್ಮಾಂಡಗಳನೊಳಗೊಂಡಂಥ ಗುರುಕೊಟ್ಟ ಇಷ್ಟಲಿಂಗ ಸಟೆಯಾಯಿತ್ತು. ದೇಗುಲದೊಳಗಣ ಕಲ್ಲು ಕಂಚು ಕಟ್ಟಿಗೆ ಬೆಳ್ಳಿ ತಾಮ್ರ ಬಂಗಾರದ ದೇವರ ಪೂಜಿಸುವ ಪೂಜಾರಿಗಳ ಮಾತು ದಿಟವಾಗಿತ್ತು. ಆದಿ ಅನಾದಿಯಿಂದತ್ತತ್ತಲಾಗಿ ಮೀರಿ ತೋರುವ ಮಾಯಾಕೋಳಾಹಳ ನಿರಂಜನಜಂಗಮದ ಪಾದೋದಕ ಪ್ರಸಾದ ಸಟೆಯಾಯಿತ್ತು. ಕ್ಷೇತ್ರಾದಿಗಳ ತೀರ್ಥಪ್ರಸಾದ ದಿಟವಾಯಿತ್ತು. ಅಂತಪ್ಪ ಅಗಮ್ಯ ಅಗೋಚರವಾದ ಅಷ್ಟಾವರಣ ಇಂಥವರಿಗೆಂತು ಸಾಧ್ಯವಹುದು? ಆಗದೆಂದಾತ ನಮ್ಮ ಶರಣ ಕಲಿದೇವರದೇವ
--------------
ಮಡಿವಾಳ ಮಾಚಿದೇವ
ಆ ಅಖಂಡ ಮಹಾಮೂಲಸ್ವಾಮಿಯ ಸ್ಥಲದ ವಚನವೆಂತೆಂದೊಡೆ : ನಿರಂಜನಾತೀತಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಅನಾದಿಪ್ರಣವ, ಆದಿಪ್ರಣವ ಶಿವಪ್ರಣವ, ಶಕ್ತಿಪ್ರಣವ, ಶಿವಶಕ್ತಿರಹಿತವಾಗಿಹ ಮಹಾಪ್ರಣವ ಮೊದಲಾದ ಅನಂತಕೋಟಿ ಪ್ರಣವಂಗಳಿಲ್ಲದಂದು, ಚಿತ್ಪ್ರಕಾಶ ಚಿದಾಕಾಶ ಮಹದಾಕಾಶ ಮಹಾಕಾಶ ಶಿವಾಕಾಶ ಬಿಂದ್ವಾಕಾಶ ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ ಅನಂತಕೋಟಿ ಮಹಾಪ್ರಣವಾಕಾಶ, ಅತಿಪ್ರಣವಾಕಾಶ ಅತಿಮಹಾತೀತಪ್ರಣವಾಕಾಶಗಳಿಲ್ಲದಂದು, ಆದಿ ಅನಾದಿ ಸಂಗತ ಅನಂತ ಅರ್ಭಕ ತಮಂಧ ತಾರಜ ತಂಡಜ ಬ್ಥಿನ್ನಜ ಬ್ಥಿನ್ನಾಯುಕ್ತ ಅವ್ಯಕ್ತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳೆಂಬ ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಯುಗಂಗಳು ಅತಿಮಹಾಯುಗಂಗಳು, ಅತಿಮಹಾತೀತಮಹಾಯುಗಂಗಳಿಲ್ಲದಂದು, ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿಯು ಇದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾನೇ ಅಖಂಡಬಯಲಾಗಿ, ಆ ಅಖಂಡ ಬೈಲು ಗಟ್ಟಿಗೊಂಡು ಚಿತ್ಪಿಂಡವಾಗಿ, ಚಿತ್‍ಶಕ್ತಿ ಕಾಂತನಾಗಿ ಚಿದ್ವಿಲಾಸವು ಕೂಡಿ, ಚಿದ್ರೂಪವ ತೋರಿ ಚಿನ್ಮಯನೆನಿಸಿ ಚಿತ್ಪ್ರಕಾಶ ನೀನಾದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಚಿದ್ಘನ ಚಿತ್ಪ್ರಕಾಶ ಚಿದಾನಂದ ಲಿಂಗವೆ, ಎನ್ನ ಹೃದಯಕಮಲವ ಬೆಳಗುವ ಪರಂಜ್ಯೋತಿ ಲಿಂಗವೆ, ಎನ್ನ ಕರಸ್ಥಲಕ್ಕನುವಾದ ಲಿಂಗವೆ, ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಯಪ್ಪೆಯಯ್ಯಾ ಧರ್ಮಿ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಪರಾತ್ಪರಬ್ರಹ್ಮ ಪ್ರಭು ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಹರನ ತ್ರಿವಿಧನೇತ್ರದಿಂದುದಯವಾದ ತ್ರಿವಿಧವರ್ಣದ ಬಿಂದುಗಳ ಅನಾದಿಚಿತ್ಪ್ರಭು ಬಸವೇಶ್ವರಸ್ವಾಮಿಗಳು, ಆ ಬಿಂದುಗಳ ತಮ್ಮ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ ಚಿದ್ಬಿಂದು ಚಿನ್ಮಂತ್ರ ಮಣಿಮಾಲಿಕೆಯೆಂದು ತತ್ವಸ್ಥಾನಂಗಳಲ್ಲಿ ಧರಿಸಿ, ಮಹಾಪ್ರಭು ನಿರಂಜನ ಜಂಗಮಕ್ಕೆ ಇಪ್ಪತ್ತೊಂದು ಲಕ್ಷ ಮಣಿಗಳಿಂದ ಶೂನ್ಯಸಿಂಹಾಸನಮಂಟಪವ ರಚಿಸಿ, ಆ ಸಿಂಹಾಸನದ ಮೇಲೆ ಮಹಾಪ್ರಭುನಿರಂಜನಜಂಗಮವ ಮೂರ್ತವ ಮಾಡಿಸಿ, ಮಹಾವೈಭವದಿಂದ ಸಕಲಮಹಾಪ್ರಮಥಗಣಂಗಳಿಗೆ ಆ ಚಿದ್ಬಿಂದುಗಳಮಲದಲ್ಲಿ ಅನಾದಿಗುರು, ಅನಾದಿಪ್ರಣಮವ ಸಂಬಂಧವ ಮಾಡಿ, ಮುಖಂಗಳಲ್ಲಿ ಅನಾದಿಲಿಂಗ ಪಾದೋದಕ ಪ್ರಸಾದವ ಸಂಬಂಧವ ಮಾಡಿ, ನಾಳದಲ್ಲಿ ಅನಾದಿಜಂಗಮ ಚಿತ್ಪ್ರಕಾಶ ಚಿದ್ಭಸಿತವ ಸಂಬಂಧವ ಮಾಡಿ, ಮಹಾ ಸಂತೋಷವೆಂಬ ಹರುಷಾನಂದ ಜಲವುಕ್ಕಿ, ಕಡಗ-ಕಂಠಮಾಲೆ-ಕರ್ಣಾಭರಣ-ಹಾರ-ಹೀರಾವಳಿಗಳ ಮಾಡಿ ಧರಿಸಿ, ಚಿಂತಾಮಣಿಯೆಂದು ಪ್ರಮಥಗಣ, ರುದ್ರಗಣ, ಷೋಡಶಗಣ, ತೇರಸಗಣ, ದಶಗಣ, ಮತ್ರ್ಯಲೋಕದ ಮಹಾಗಣ ಸಮೂಹಕ್ಕೆಲ್ಲ ಒರದು ಬೋಧಿಸಿದರು ನೋಡ. ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಚಿನ್ಮಂತ್ರ ಮಾಲಿಕೆ ಪರಮಚಿಂತಾಮಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕ್ರಿಯಾಶಕ್ತಿಗೆ ಫಟ ಕ್ರೀಪತಿಯಾಗಿ ಇಚ್ಚಾಶಕ್ತಿಗೆ ಆತ್ಮ ಸಂಬಂಧ ಪತಿಯಾಗಿ ಜ್ಞಾನಶಕ್ತಿಗೆ ಚಿದಾದಿತ್ಯ ಚಿತ್ಪ್ರಕಾಶ ಪತಿಯಾಗಿ ಇಂತೀ ತ್ರಿವಿಧ ಶಕ್ತಿಗೆ ಅವರವರ ತದ್ಭಾವಕ್ಕೆ ಭಾವಾಜ್ಞನಾದೆಯಲ್ಲಾ ಭಕ್ತಿ ಕಾರಣವಾಗಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮದುಕೇಶ್ವರನು.
--------------
ದಾಸೋಹದ ಸಂಗಣ್ಣ
ಚಿನ್ಮಯ ಚಿತ್ಪ್ರಕಾಶ ಚಿದಾನಂದ ಲಿಂಗವೆ, ಎನ್ನ ಹೃದಯಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ, ಎನ್ನ ಕರಸ್ಥಲಕ್ಕನುವಾದ ಧರ್ಮಿ, ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಗೊಂಡಿಪ್ಪೆಯಯ್ಯಾ, ಕೂಡಲಸಂಗಮದೇವಯ್ಯಾ.
--------------
ಬಸವಣ್ಣ
ಅನ್ಯವಿಲ್ಲದ ಅರ್ಚನವೆಂತೆಂದಡೆ : ``ನಿಷ್ಕಲಂ ನಿಗಮಾತೀತಂ ನಿಶ್ಶೂನ್ಯಂ ಶೂನ್ಯಮೇವ ಚ | ನಿರಂಜನಂ ನಿರಾಕಾರಂ ಸಾಕಾರಂ ಪರದರ್ಶನಂ || ನೀರೂಪಂ ಸ್ವರೂಪಂ ಚೈವ ನಿರ್ಗುಣಂ ಸಗುಣಂ ತತಃ | ಅದೃಶ್ಯ ದೃಶ್ಯಮಹಾಂತ ಸ್ವಯಂಭೂ ಫ್ರಭುವೇ ನಮಃ || ಮತ್ಕಲಾಂ ಚಿತ್ಕಲಾಂ ಚೈವ ಚಿದ್ರೂಪಂ ಚಿನ್ಮಯಂ ತತಃ | ಚಿತ್‍ಪ್ರಕಾಶಂ ಅಖಂಡೇಶಂ ಇಷ್ಟಲಿಂಗಾಕರಂ ದ್ವಯಂ || ಪಾದ್ಯಮಘ್ರ್ಯಂ ಆಚಮನಂ ಸರ್ವದೇವಸಮಾಹಿತಃ | ತದ್ರೂಪಂ ಸಲಿಲಂ ಸ್ವಾಹಾ ಮದೇವಸ್ನಾನಮಾಚರೇತ್ || ಏಕಮೇವಭವೇನ್ಮಾತ್ರಂ ಏಕಮಾತ್ರಂ ಭವೇನ್ಮನುಃ | ಏಕಮಂತ್ರಂ ಷಡಕ್ಷರಂ ಷಡಕ್ಷರಂ ಷಡಾನನಃ || ಷಡಾನನಃ ಭವೇತ್ತತ್ತ್ವಂ ತತ್ತಾ ್ವತೀತಂ ಅಸಂಖ್ಯಕಂ | ಯಥಾಚಿತ್ತಂ ತಥಾಕಾರಂ ತತ್ಫಲಂ ಸ್ವಶಿವಾರ್ಪಿತಂ ||'' ಇಂತೀ ಪರಿಯಲಿ ಜಲ ಗಂಧ ಪುಷ್ಪ ದೀಪ ಧೂಪ ನೈವೇದ್ಯ ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರ ಸರ್ವವು ತಾ ಮುಂತಾಗಿ ತನ್ನ ನಿಜದಲ್ಲಿ ನಿವೇದಿಸಲದೇ ಸದಾಚಾರ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತಾನೆ ಚಿತ್ಪ್ರಕಾಶ ತಾನೆ ಚಿದಾಕಾಶ ತಾನೆ ಬಿಂದ್ವಾಕಾಶ ನೋಡಾ. ತಾನೆ ಮಹದಾಕಾಶ ತಾನೆ ಪರಾಕಾಶ ನೋಡಾ. ತನ್ನಿಂದಧಿಕವಾಗಿಹ ಪರಶಿವತತ್ವವಿಲ್ಲವಾಗಿ ತಾನೆ ಪರಬ್ರಹ್ಮ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ, ತನ್ನ ತಾನರಿಯದೆ ನಾವು ಏಕಾರತಿ ದ್ವಿಯಾರತಿ [ತ್ರಿಯಾರತಿ] ಚತುರಾರತಿ ಪಂಚಾರತಿ ಷಡಾರತಿ ಸಪ್ತಾರತಿ ಅಷ್ಟಾರತಿ ನವಾರತಿ ದಶಾರತಿ ಕಡ್ಡಿಬತ್ತಿ ಕರ್ಪುರಾರತಿ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸುವ ಇಷ್ಟಲಿಂಗಪೂಜಕರೆಂದು ನುಡಿದುಕೊಂಬ ಬದ್ಧಭವಿ ಶುದ್ಧಶೈವ ಮರುಳುಮಾನವರೆನಗೊಮ್ಮೆ ತೋರದಿರಯ್ಯ. ಅದೇನು ಕಾರಣವೆಂದಡೆ, ತನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಮುಸುಕಿದ ಅಜ್ಞಾನಾಂಧಕಾರದ ಅರುವತ್ತಾರುಕೋಟಿ ಕರಣಂಗಳೆಂಬ ಕಂಚಿನಾರತಿಗಳ ಹಂಚು ಹರಿಗಡಿದು, ಅಷ್ಟತನುಗಳ ಸುಟ್ಟುರುಹಿದ ಬೂದಿಯಿಂದ ಬೆಳಗಿ, ಚಿಜ್ಜಲದಿಂದ ತೊಳೆದು ಕಳೆದುಳಿಯಲರಿಯದೆ, ತನ್ನ ಹೃದಯಮಂದಿರದಲ್ಲಿ ನೆಲಸಿರುವ ಚಿದ್ಘನ ಚಿತ್ಪ್ರಕಾಶ ಚಿನ್ಮಯ ಶ್ರೀಗುರುಲಿಂಗಜಂಗಮಕ್ಕೆ ಮನೋಪ್ರಕೃತಿಯಳಿದ ಉನ್ಮನವೆಂಬ ಏಕಾರತಿ, ಲಿಂಗಾಂಗವೆಂಬುಭಯವಳಿದ ದ್ವಿಯಾರತಿ, ಮಲತ್ರಯಂಗಳಳಿದ ತ್ರಿಯಾರತಿ, ಚತುಃಕರಣಂಗಳಳಿದ ಚತುರಾರತಿ, ಪಂಚಭೂತ ಪಂಚವಾಯು ಪಂಚೇಂದ್ರಿಯ ಪಂಚಕ್ಲೇಶ ಪಂಚಮೂರ್ತಿಗಳ ಫಲಪದಂಗಳ ಕಳೆದುಳಿದ ಪಂಚಾರತಿ, ಷಡ್ವರ್ಗ ಷಡೂರ್ಮೆ ಷಡ್ಭ್ರಮೆ ಷಡ್ಭಾವವಿಕಾರಂಗಳಳಿದ ಷಡಾರತಿ, ಸಪ್ತಧಾತು ಸಪ್ತವ್ಯಸನಂಗಳಳಿದ ಸಪ್ತಾರತಿ, ಅಂತರಂಗದಷ್ಟಮದ ಬಹಿರಂಗದಷ್ಟಮದಂಗಳಳಿದ ಅಷ್ಟಾರತಿ, ನವಗ್ರಹಂಗಳಳಿದ ನವಾರತಿ, ದಶೇಂದ್ರಿಯ ದಶವಾಯುಗಳಳಿದ ದಶಾರತಿ. ಅಹಂಕಾರಗಳಳಿದ ಕಡ್ಡಿಬತ್ತಿ, ತನುತ್ರಯ ಗುಣತ್ರಯ ಅವಸ್ಥಾತ್ರಯ ಮನತ್ರಯ ಆತ್ಮತ್ರಯ ಭಾವತ್ರಯಂಗಳ ಕಳೆದುಳಿದ ಕರ್ಪುರಾರತಿಯ ಬೆಳಗಿ ನಿರ್ವಯಲಪದವನೈದಲರಿಯದೆ, ಬಹಿರಂಗದ ಭಿನ್ನಕ್ರೀ ಭಿನ್ನಜ್ಞಾನ ಭಿನ್ನಭಕ್ತಿ ಮುಂದುಗೊಂಡು, ಗಡ್ಡ ಜಡೆ ಮುಡಿಗಳ ಬಿಟ್ಟುಕೊಂಡು, ಲಾಂಛನವ ಹೊದ್ದುಕೊಂಡು, ಕಾಂಚನಕ್ಕೆ ಕೈಯೊಡ್ಡುತ ಕಂಚಗಾರನಂತೆ ನಾನಾ ಜಿನಸಿನ ಕಂಚ ನೆರಹಿ ಹರವಿಕೊಂಡು, ಪರಮಶಿವಲಿಂಗ ಪೂಜಕರೆಂದು ಬಗಳುವ ಪಂಚಮಹಾಪಾತಕರಿಗೆ ಕಿರಾತರು ಮೆಚ್ಚುವರಲ್ಲದೆ ಪುರಾತರು ಮೆಚ್ಚುವರೆ ? ಬದ್ಧಭವಿಯಾದ ಶೈವರು ಮೆಚ್ಚುವರಲ್ಲದೆ ಶುದ್ಧ ಸುಶೀಲ ನಿರಾಭಾರಿ ವೀರಶೈವರು ಮೆಚ್ಚುವರೆ ? ಅಜ್ಞಾನಿಗಳು ಮೆಚ್ಚುವರಲ್ಲದೆ ನಿವ್ರ್ಯಾಪಾರಿಗಳು ಮೆಚ್ಚರು. ಭಿನ್ನಕ್ರೀಯಸ್ಥರು ಮೆಚ್ಚುವರಲ್ಲದೆ ಅಭಿನ್ನಕ್ರೀಯಸ್ಥರು ಮೆಚ್ಚರು. ಇಂತಪ್ಪ ಲಿಂಗಾಂಗಸಮರಸದ ನಿರ್ಗುಣಪೂಜೆಯನೆಸಗಲರಿಯದ ಭಿನ್ನಜ್ಞಾನ ಭಿನ್ನಪೂಜೆಯನೆಸಗುವ ಮರುಳುಗಳಿಗೆ ಆರು ಮೆಚ್ಚುವರು ? ಹುಚ್ಚು ಮರುಳುಗಳಿರಾ ಸುಮ್ಮನಿರಿಯೆಂದಾತ ನಿಮ್ಮ ಶರಣ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಪ್ರಥಮದಲ್ಲಿ ನಾಮ ರೂಪು ಕ್ರೀ ಏನೂ ಏನೂ ಇಲ್ಲದ ಮಹಾಘನ ಶೂನ್ಯಬ್ರಹ್ಮವು. ಆ ಶೂನ್ಯಬ್ರಹ್ಮದಿಂದ ಶುದ್ಧ ಪ್ರಣವ. ಆ ಶುದ್ಧ ಪ್ರಣವಧಿಂದ ಚಿತ್ತು ಭಾವದಕ್ಷರ. ಆ ಚಿತ್ತು ಭಾವದಕ್ಷರದಿಂದ ಪರಶಕ್ತಿ. ಆ ಪರಾಶಕ್ತಿಯಿಂದ ಅಕ್ಷರತ್ರಯಂಗಳು. ಆ ಅಕ್ಷರತ್ರಯಂಗಳಿಂದ ಓಂಕಾರ. ಆ ಓಂಕಾರವೆ ಬಸವಣ್ಣನು. ಆ ಬಸವಣ್ಣನೆ ಎನ್ನ ವದನಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಮಧ್ಯಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಬಲದ ತೊಡೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ತೊಡೆಗೆ ಯಕಾರಾವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಯತಕ್ಕೆ ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಯತಕ್ಕೆ ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸನ್ನಿಹಿತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರೀಗೆ ಅವಾಚ್ಯ ಸ್ವರೂಪಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಮಹಾಶೂನ್ಯ ಸ್ವರೂಪನಾಗಿ ಬಂದನಯ್ಯ ಬಸವಣ್ಣ. ಎನ್ನ ರುಧಿರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮೇದಸ್ಸಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಸ್ಥಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಗಮಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಭಾವ ಕೊಂದಹೆನೆಂದು ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೊನ್ನು ಹೆಣ್ಣು ಮಣ್ಣೆಂಬ ಸಕಲಾಸೆಯ ಕೊಂದಹೆನೆಂದು ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಂದ್ರಿಯ ವಿಷಯಂಗಳ ಕೊಂದಹೆನೆಂದು ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಾದಕ್ಕೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಳೆಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶ್ವಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ತೈಜಸಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ ಎನ್ನ ಪ್ರಜ್ಞೆಗೆ ತೃಪ್ತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸತ್ವಕ್ಕೆ ಶುದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ರಜಕ್ಕೆ ಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ತಮಕ್ಕೆ ಪ್ರಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನಗೆ ಬಕಾರವೆ ಗುರುವಾಗಿ ಬಂದನಯ್ಯ ಬಸವಣ್ಣ. ಎನಗೆ ಸಕಾರವೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನಗೆ ವಕಾರವೆ ಜಂಗಮವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶಿವ ಕ್ಷೇತ್ರಜ್ಞ ಕರ್ತಾರ ಭಾವ ಚೈತನ್ಯ ಅಂತರ್ಯಾಮಿಯೆಂಬ ಷಡುಮೂರ್ತಿಗಳಿಗೆ ನಕಾರ ಮಃಕಾರ ಶಿಕಾರ ವಾಕಾರ ಯಕಾರ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಸ್ಸಿಂಗೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬ್ರಹ್ಮತತ್ವಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಷ್ಣುತತ್ವಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ರುದ್ರತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಈಶ್ವರತತ್ವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸದಾಶಿವತತ್ವಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಹಾಶ್ರೀಗುರುತತ್ವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೃಥ್ವಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪ್ಪುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಗ್ನಿತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಕಾಶಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆತ್ಮಂಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣವಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪಾನವಾಯುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವ್ಯಾನವಾಯುವಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಉದಾನವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮಾನವಾಯುವಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಪಂಚವಾಯುವಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಧಾರಚಕ್ರಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಧಿಷಾ*ನಚಕ್ರಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಣಿಪೂರಚಕ್ರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅನಾಹತಚಕ್ರಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶುದ್ಧಿಚಕ್ರಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಆಜ್ಞಾಚಕ್ರಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರ್ದಳಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡುದಳಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶದಳಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶದಳಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿದಳಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರಾಕ್ಷರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡಾಕ್ಷರಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದಶಾಕ್ಷರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶಾಕ್ಷರಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಾಕ್ಷರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿಯಾಕ್ಷರಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಮ. ಎನ್ನ ಕೆಂಪುವರ್ಣಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೀಲವರ್ಣಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕುಂಕುಮವರ್ಣಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೀತವರ್ಣಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ವೇತವರ್ಣಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಣಿಕ್ಯವರ್ಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ರಾಗ್ರಾವಸ್ಥೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಪ್ನಾವಸ್ಥೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸುಷುಪ್ತಾವಸ್ಥೆಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತೂರ್ಯಾವಸ್ಥೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅತೀತಾವಸ್ತೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿರಾವಸ್ಥೆಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಂತಃಕರಣಂಗಳಿಗೆ ಚತುರ್ವಿಧ ಬಿಂದು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅರಿಷಡ್ವರ್ಗಂಗಳಿಗೆ ಷಡ್ವಿಧಧಾತು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದಶವಾಯುಗಳಿಗೆ ದಶವಿದ ಕ್ಷೇತ್ರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶೇಂದ್ರಿಯಂಗಳಿಗೆ ದ್ವಾದಶ ವಿಕೃತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಕಲೆಗೆ ಷೋಡಶಕಲಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರ ಮಮಕಾರಗಳಿಗೆ ವಿದ್ಯಾಲಿಂಗವಾಗಿ ಬಂದನಯ್ಯಬಸವಣ್ಣ. ಎನ್ನ ಭಕ್ತಿಸ್ಥಲಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಹೇಶ್ವರಸ್ಥಲಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಸಾದಿಸ್ಥಲಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಲಿಂಗಿಸ್ಥಳಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶರಣಸ್ಥಲಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಐಕ್ಯಸ್ಥಲಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರಿಯಾಶಕ್ತಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಶಕ್ತಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಚ್ಛಾಶಕ್ತಿಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆದಿಶಕ್ತಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪರಶಕ್ತಿಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ಶಕ್ತಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರದ್ಧೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿಷೆ*ಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅವಧಾನಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅನುಭಾವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆನಂದಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮರಸಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶಬ್ದಕ್ಕೆ ಗುರುವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಪರುಶನಕ್ಕೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ರೂಪಿಂಗೆ ಶಿವಲಾಂಛನವಾಗಿ ಬಂದನಯ್ಯ ಬಸವಣ್ಣ. ಎನ್ನ ರಸಕ್ಕೆ ಶಿವಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ಗಂಧಕ್ಕೆ ಶಿವಾನುಭಾವವಾಗಿ ಬಂದನಯ್ಯ ಬಸವಣ್ಣ ಎನ್ನ ನಾಸಿಕಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜಿಹ್ವೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೇತ್ರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಕ್ಕಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರೋತ್ರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೃದಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಕ್ಕಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಣಿಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾದಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಗುಹ್ಯಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಇಂತೀ ಪಂಚೇಂದ್ರಿಯಂಗಳೆ ಪಂಚಮಹಾಯಜ್ಞ. ಆ ಪಂಚಮಹಾಯಜ್ಞದಲ್ಲಿ ಎನ್ನ ಮನ ಹಾರೈಸಿ ಪೂರೈಸಿ ಒಲಿದು ಕೇಳಿತ್ತು ಮುಟ್ಟಿತ್ತು ನೋಡಿತ್ತು ರುಚಿಸಿತ್ತು ವಾಸಿಸಿತ್ತು. ಎನ್ನ ಮಾನಸ ವಾಚಕ ಕಾಯಕ ಕರಣಂಗಳೆಲ್ಲವು ಪಂಚಮಹಾಯಜ್ಞ ಸೋಂಕಿ ಪಂಚಮಹಾಯಜ್ಞವಪ್ಪುದು ತಪ್ಪದು. ಅದೆಂತೆಂದಡೆ- ಮಹಾಜ್ಯೋತಿಯ ಸೋಂಕಿದ ಉತ್ತಮ ಅಧಮ ತೃಣ ಮೊದಲಾದವೆಲ್ಲವು ಮಹಾ ಅಗ್ನಿಯ ಸೋಂಕಿ ಮಹಾ ಅಗ್ನಿಯಪ್ಪುದು ತಪ್ಪದು. ಇಂತಪ್ಪ ಮಹಾಯಜ್ಞವನೊಳಕೊಂಡಿಪ್ಪ ಮೂಲಾಗ್ನಿಯೇ ಬಸವಣ್ಣ. ಆ ಬಸವಣ್ಣನೆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯೇ ಚಿದ್ಬ ್ರಹ್ಮ. ಆ ಚಿದ್ಬ ್ರಹ್ಮವೇ ಬಸವಣ್ಣ. ಆ ಬಸವಣ್ಣನೇ ಎನಗೆ ಅಷ್ಟಾವರಣ ಸ್ವರೂಪನಾದ ಸಚ್ಚಿದಾನಂದ ಬಸವಣ್ಣ. ನಿತ್ಯಪರಿಪೂರ್ಣ ಬಸವಣ್ಣ. ಅಖಂಡಾದ್ವಯ ಬಸವಣ್ಣ. ನಿರಂಜನ ಬಸವಣ್ಣ. ನಿರ್ಮಾಯ ಬಸವಣ್ಣ, ನಿರಾಚರಣ ಬಸವಣ್ಣ. ನಿರ್ಜನಿತ ಬಸವಣ್ಣ. ನಿರ್ಲೇಪ ಬಸವಣ್ಣ. ನಿಃಕಪಟಿ ಬಸವಣ್ಣ. ಅಸಾಧ್ಯ ಸಾಧಕ ಬಸವಣ್ಣ. ಅಭೇದ್ಯ ಭೇದಕ ಬಸವಣ್ಣ. ಚಿತ್ಪ್ರಕಾಶ ಬಸವಣ್ಣ. ಇಂತಪ್ಪ ಬಸವಣ್ಣನ ಅಂಗವೆ ಚಿದಾಕಾಶ. ಆ ಚಿದಾಕಾಶದ ಮಧ್ಯದಲ್ಲಿ ಚಿತ್ಪ್ರಾಣವಾಯು. ಆ ಚಿತ್ಪ್ರಾಣವಾಯುವಿನ ಮಧ್ಯದಲ್ಲಿ ಚಿದಾಗ್ನಿ. ಆ ಚಿದಾಗ್ನಿಯ ಮಧ್ಯದಲ್ಲಿ ಚಿಜ್ಜಲ. ಆ ಚಿಜ್ಜಲದ ಮಧ್ಯದಲ್ಲಿ ಚಿದ್ಭೂಮಿ. ಆ ಚಿದ್ಭೂಮಿಯ ಮಧ್ಯದಲ್ಲಿ ಹೃದಯ. ಆ ಹೃದಯದ ಮಧ್ಯದಲ್ಲಿ ಆಕಾರ ಉಕಾರ ಮಕಾರ ಪ್ರಣಮಪೀಠ. ಆ ಪ್ರಣವಪೀಠದ ಮಧ್ಯದಲ್ಲಿ ಜಂಗಮ ಆ ಜಂಗಮವ ಮಕುಟದಲ್ಲಿ ಶೂನ್ಯಲಿಂಗ. ಆ ಶೂನ್ಯಲಿಂಗದಲ್ಲಿ ಚಿದಂಬರ, ಆ ಚಿದಂಬರರಲ್ಲಿ ಶಿವಶಕ್ತಿ. ಆ ಶಿವಶಕ್ತಿಯಲ್ಲಿ ಪಂಚಶಕ್ತಿ. ಆ ಪಂಚಶಕ್ತಿಯಲ್ಲಿ ಪಂಚನಾದ. ಆ ಪಂಚನಾದದಲ್ಲಿ ಪಂಚಸಾದಾಖ್ಯ. ಆ ಪಂಚಸಾದಾಖ್ಯದಲ್ಲಿ ಈಶ್ವರ. ಆ ಈಶ್ವರನಲ್ಲಿ ಮಾಹೇಶ್ವರ. ಆ ಮಾಹೇಶ್ವರನಲ್ಲಿ ರುದ್ರ. ಆ ರುದ್ರನಲ್ಲಿ ತ್ರಯವಯ ಹಿರಣ್ಯಗರ್ಭ ವಿರಾಟ್‍ಮೂರ್ತಿ. ಇಂತೀ ಎಂಬತ್ತುಮೂರು ಮೂರ್ತಿಗಳೊಳಗೆ ಎಂಬತ್ತೆರಡೆ ಬಸವಣ್ಣನಂಗವೊಂದೆ ಪ್ರಾಣ. ಆ ಪ್ರಾಣ ಚೈತನ್ಯ ಶೂನ್ಯವೆ ಗೋಳಕ ಗೋಮುಖ ವೃತ್ತಾಕಾರವಾಗಿ ಕರಸ್ಥಲದಲ್ಲಿ ಪಿಡಿದು ಆ ಲಿಂಗದ ಆದಿಪ್ರಣಮವೆ ಪೀಠ, ಆಕಾರವೆ ಕಂಠ, ಉಕಾರವೆ ಗೋಮುಖ, ಮಕಾರವೆ ವರ್ತುಳ, ನಾಳ ಬಿಂದು ಮಹಾತೇಜ. ನಾದವೆ ಅಖಂಡಲಿಂಗ. ಇಂತಪ್ಪ ಬಸವಣ್ಣನ ನಿತ್ಯತ್ವವೆ ಲಿಂಗ; ಪೂರ್ಣತ್ವವೆ ಗುರು. ಚಿತ್ಪ್ರಕಾಶವೆ ಜಂಗಮ. ಆನಂದವೆ ಪ್ರಸಾದ, ಚಿದ್ರಸದ ಪ್ರವಾಹವೆ ಪಾದತೀರ್ಥ. ಇಂತಪ್ಪ ಬಸವಣ್ಣ ಅನಂತಕೋಟಿ ಬ್ರಹ್ಮಾಂಡಗಳ ರೋಮಕೂಪದಲ್ಲಿ ಸಂಕಲ್ಪಿಸಿ ಅಲ್ಲಿದ್ದಾತ್ಮಂಗೆ ಸುಜ್ಞಾನ ಕ್ರೀಯನಿತ್ತು ತದ್ ಭೃತ್ಯ ಕರ್ತೃ ತಾನಾಗಿ ಇಷ್ಟಾರ್ಥಸಿದ್ಧಿಯನೀವುತಿಪ್ಪ ಬಸವಣ್ಣನ ಭೃತ್ಯರ ಭೃತ್ಯರ ತದ್‍ಭೃತ್ಯನಾಗಿರಿಸಿ ಬಸವಣ್ಣನ ಪಡುಗ ಪಾದರಕ್ಷೆಯ ಹಿಡಿವ ಭಾಗ್ಯವಯೆನಗೀವುದಯ್ಯ, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಬಸವಣ್ಣನ ಅರುಹಿಕೊಟ್ಟ ಸಿದ್ಧೇಶ್ವರನ ಶ್ರೀಪಾದಪದ್ಮದಲ್ಲಿ ಭೃಂಗನಾಗಿರ್ದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಪ್ರಾಣವ ಹಿಂಗಿ ಅಂಗಸುಖಿಸಲು ಪರಿಯಾವುದಯ್ಯಾ ? ಚಿತ್ಪ್ರಾಣನಾಥನೆಂಬಾ ಚಿತ್ಪ್ರಕಾಶ ಜಂಗಮಲಿಂಗವನುಳಿದು, ಸತ್ಕ್ರಿಯಾಚಾರಸಂಬಂಧಿಗಳೆಂದರೆ ಸತ್ಯವಪ್ಪುದೇ ? ಹುಸಿ ದುರ್ವಾಸನೆಯಾಗಿ ಹೋಗುವದು. ನಾನಿಂತಲ್ಲ ನಿತ್ಯವಾಗಿರ್ದೆ ನಿನ್ನಂಗವಿಡಿದು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿನ್ಮಯ ಚಿದ್ರೂಪ ಚಿತ್ಪ್ರಕಾಶ ಚಿದಾನಂದ ಚಿದ್ಘನ ಚಿತ್ಪ್ರಣಮ ಚಿದ್ಘನಾತ್ಮ ಚಿದ್ಘನಲಿಂಗ ಚಿದ್ಗುರು ಚಿದ್‍ಪರಶಿವ ಚಿದ್‍ಪರಬ್ರಹ್ಮ ಚಿದಾತ್ಮಸಂಜೀವ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಕಲ ನಿಃಕಲಗಳು ಇಲ್ಲದಂದು, ಪರಾಪರಗಳಿಲ್ಲದಂದು, ಇವೇನೇನೂ ಇಲ್ಲದಂದು ಅತ್ತತ್ತಲೇ. ಅಪರಂಪರ ಮಹಾಮಹಿಮ ನಿಷ್ಕಲಶಿವತತ್ವ ತಾನೊಂದೆ ನೋಡಾ. ಆ ನಿಷ್ಕಲಶಿವತತ್ವದಿಂದ ಜ್ಞಾನಚಿತ್ತು ಉದಯಿಸಿತ್ತು ನೋಡಾ. ಆ ಜ್ಞಾನಚಿತ್ತುವಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆ ಚಿತ್ಪ್ರಕಾಶ ಚಿಚ್ಫಕ್ತಿಯೆ ಆದಿಯಾಗಿ ಓಂಕಾರವೆಂಬ ಪ್ರಣವವಾಯಿತ್ತು ನೋಡಾ. ಆ ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರವೆಂದು ಮೂರು ತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಅಕಾರವೆ ನಕಾರ ಮಕಾರವೆಂದು ಎರಡುತೆರನಾಯಿತ್ತು. ಉಕಾರವೆ ಶಿಕಾರ ವಕಾರವೆಂದು ಎರಡುತೆರನಾಯಿತ್ತು. ಮಕಾರವೆ ಯಕಾರ ಓಂಕಾರವೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ನಾದ ಬಿಂದು ಕಳೆಯೆಂದು ಮೂರುತೆರನಾಯಿತ್ತು. ಅದು ಹೇಗೆಂದಡೆ : ನಾದವೇ ಕರ್ಮಸಾದಾಖ್ಯ, ಕರ್ತೃಸಾದಾಖ್ಯವೆಂದು ಎರಡುತೆರನಾಯಿತ್ತು. ಬಿಂದುವೇ ಮೂರ್ತಿಸಾದಾಖ್ಯ ಅಮೂರ್ತಿಸಾದಾಖ್ಯವೆಂದು ಎರಡುತೆರನಾಯಿತ್ತು. ಕಳೆಯೇ ಶಿವಸಾದಾಖ್ಯ ಮಹಾಸಾದಾಖ್ಯವೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಗುರು-ಲಿಂಗ-ಜಂಗಮವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಗುರುವೇ ಭಕ್ತ-ಮಹೇಶ್ವರನೆಂದು ಎರಡುತೆರನಾಯಿತ್ತು. ಲಿಂಗವೇ ಪ್ರಸಾದಿ-ಪ್ರಾಣಲಿಂಗಿಯೆಂದು ಎರಡುತೆರನಾಯಿತ್ತು. ಜಂಗಮವೇ ಶರಣ-ಐಕ್ಯನೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಇಷ್ಟ ಪ್ರಾಣ ಭಾವವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಇಷ್ಟಲಿಂಗವೇ ಆಚಾರಲಿಂಗ-ಗುರುಲಿಂಗವೆಂದು ಎರಡುತೆರನಾಯಿತ್ತು. ಪ್ರಾಣಲಿಂಗವೇ ಶಿವಲಿಂಗ-ಜಂಗಮಲಿಂಗವೆಂದು ಎರಡುತೆರನಾಯಿತ್ತು. ಭಾವಲಿಂಗವೇ ಪ್ರಸಾದಲಿಂಗ-ಮಹಾಲಿಂಗವೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಧ್ಯಾನ-ಧಾರಣ-ಸಮಾಧಿಯೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಧ್ಯಾನವೇ ಕ್ರಿಯಾಶಕ್ತಿ-ಜ್ಞಾನಶಕ್ತಿಯೆಂದು ಎರಡುತೆರನಾಯಿತ್ತು. ಧಾರಣವೇ ಇಚ್ಫಾಶಕ್ತಿ-ಆದಿಶಕ್ತಿಯೆಂದು ಎರಡುತೆರನಾಯಿತ್ತು. ಸಮಾಧಿಯೆ ಪರಾಶಕ್ತಿ-ಚಿತ್‍ಶಕ್ತಿಯೆಂದು ಎರಡುತೆರನಾಯಿತ್ತು. ಸ್ಥೂಲ-ಸೂಕ್ಷ್ಮ-ಕಾರಣವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದೂ ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಸ್ಥೂಲವೇ ಸದ್ಭಕ್ತಿ-ನೈಷಿ*ಕಭಕ್ತಿ ಎಂದು ಎರಡುತೆರನಾಯಿತ್ತು. ಸೂಕ್ಷ್ಮವೇ ಸಾವಧಾನಭಕ್ತಿ-ಅನುಭಾವಭಕ್ತಿಯೆಂದು ಎರಡುತೆರನಾಯಿತ್ತು. ಕಾರಣವೇ ಅನುಪಮಭಕ್ತಿ-ಸಮರಸಭಕ್ತಿಯೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಜಾಗ್ರ-ಸ್ವಪ್ನ-ಸುಷುಪ್ತಿಯೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಜಾಗ್ರವೇ ನಿವೃತ್ತಿಕಲೆ-ಪ್ರತಿಷಾ*ಕಲೆಯೆಂದು ಎರಡುತೆರನಾಯಿತ್ತು. ಸ್ವಪ್ನವೇ ವಿದ್ಯಾಕಲೆ-ಶಾಂತಿಕಲೆಯೆಂದು ಎರಡುತೆರನಾಯಿತ್ತು. ಸುಷುಪ್ತಿಯೇ ಶಾಂತ್ಯತೀತಕಲೆ-ಶಾಂತ್ಯಾತೀತೋತ್ತರಕಲೆಯೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಸಕಲ ತತ್ವಂಗಳನಂಗೀಕರಿಸಿಕೊಂಡು ಅಖಂಡಪರಿಪೂರ್ಣಗೋಳಕಾಕಾರ ತೇಜೋಮಯವಪ್ಪುದು ಮಹಾಲಿಂಗ ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎನ್ನ ಉನ್ಮನಿಯ ತತ್ವದ ಮೇಲೆ ತಳತಳನೆ ಹೊಳೆವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿತ್ಪರಮಲಿಂಗವನು ಮೆಲ್ಲ ಮೆಲ್ಲನೆ ಎನ್ನ ಭಾವಸ್ಥಲದಲ್ಲಿತಂದು ಇಂಬಿಟ್ಟನಯ್ಯ ಶ್ರೀಗುರು. ಎನ್ನ ಭಾವಸ್ಥಲದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿತ್ಕಲಾಲಿಂಗವನು ಎನ್ನ ಆತ್ಮಸ್ಥಲದಲ್ಲಿ ಮೆಲ್ಲನೆ ತಂದು ನ್ಯಸ್ತವ ಮಾಡಿದನಯ್ಯ ಶ್ರೀಗುರು. ಎನ್ನ ಆತ್ಮಸ್ಥಲದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿದಾನಂದಲಿಂಗವನು ಮೆಲ್ಲಮೆಲ್ಲನೆ ಎನ್ನ ಆಕಾಶತತ್ವದಲ್ಲಿ ಸ್ಥಾಪ್ಯವ ಮಾಡಿದನಯ್ಯ ಶ್ರೀಗುರು. ಎನ್ನ ಆಕಾಶತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿನ್ಮಯಲಿಂಗವನು ಮೆಲ್ಲಮೆಲ್ಲನೆ ಎನ್ನ ವಾಯುತತ್ವದಲ್ಲಿ ನ್ಯಸ್ತವ ಮಾಡಿದನಯ್ಯ ಶ್ರೀಗುರು. ಎನ್ನ ವಾಯುತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿನ್ಮೂರ್ತಿಲಿಂಗವನು ಮೆಲ್ಲಮೆಲ್ಲನೆ ಎನ್ನ ಅಗ್ನಿತತ್ವದಲ್ಲಿ ಅನುಗೊಳಿಸಿದನಯ್ಯ ಶ್ರೀಗುರು. ಎನ್ನ ಅಗ್ನಿತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿಲ್ಲಿಂಗವನು ಮೆಲ್ಲಮೆಲ್ಲನೆ ಎನ್ನ ಅಪ್ಪುತತ್ವದಲ್ಲಿ ನೆಲೆಗೊಳಿಸಿದನಯ್ಯ ಶ್ರೀಗುರು. ಎನ್ನ ಅಪ್ಪುತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿದ್ರೂಪಲಿಂಗವನು ಮೆಲ್ಲಮೆಲ್ಲನೆ ಎನ್ನ ಪೃಥ್ವಿತತ್ವದಲ್ಲಿ ಹುದುಗೊಳಿಸಿದನಯ್ಯ ಶ್ರೀಗುರು. ಎನ್ನ ಪೃಥ್ವಿತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿದದ್ವಯಲಿಂಗವನು ಎನ್ನ ಭಾವ ಮನ ದೃಕ್ಕಿಗೆ ಕರತಳಾಮಳಕವಾಗಿ ಎನ್ನ ಕರಸ್ಥಲದಲ್ಲಿ ಮೂರ್ತಗೊಳಿಸಿದನಯ್ಯ ಶ್ರೀಗುರು. ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡ ಇಷ್ಟಬ್ರಹ್ಮವೆ ಬಸವಣ್ಣನೆನಗೆ. ಆ ಬಸವಣ್ಣನೆ ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಸ್ವಾಧಿಷಾ*ನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಿಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಸ್ಥೂಲಾಂಗದಲ್ಲಿ ಇಷ್ಟಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಸೂಕ್ಷಾ ್ಮಂಗದಲ್ಲಿ ಪ್ರಾಣಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಕಾರಣಾಂಗದಲ್ಲಿ ಭಾವಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ನಾಸಿಕದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ದೃಕ್ಕಿನಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಪೃಥ್ವಿಸಂಬಂಧವಾದ ಅಷ್ಟಾದಶ ಪದಾರ್ಥಂಗಳ ಕೈಕೊಂಡು ಆಚಾರಲಿಂಗವಾಗಿ ಎನ್ನ ಭಕ್ತಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಅಪ್ಪುಸಂಬಂಧವಾದ ಅಷ್ಟಾದಶ ಪದಾರ್ಥಂಗಳ ಕೈಕೊಂಡು ಗುರುಲಿಂಗವಾಗಿ ಎನ್ನ ಮಾಹೇಶ್ವರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಅಗ್ನಿಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಶಿವಲಿಂಗವಾಗಿ ಎನ್ನ ಪ್ರಸಾದಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ವಾಯುಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಜಂಗಮಲಿಂಗವಾಗಿ ಎನ್ನ ಪ್ರಾಣಲಿಂಗಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಆಕಾಶಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಪ್ರಸಾದಲಿಂಗವಾಗಿ ಎನ್ನ ಶರಣಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಆತ್ಮ ಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಮಹಾಲಿಂಗವಾಗಿ ಎನ್ನ ಐಕ್ಯದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ನಾನಾವಿಧ ಪ್ರಕಾರವನೊಳಕೊಂಡು ಬಸವಣ್ಣನೆ ಇಷ್ಟಬ್ರಹ್ಮವನೆಗೆ. ಆ ಇಷ್ಟಬ್ರಹ್ಮವೆ ಎನ್ನ ಅಂಗ ಮನ ಪ್ರಾಣ ಇಂದ್ರಿಯ ಸಕಲ ಕರಣಂಗಳ ಕೊನೆಯ ಮೊನೆಯ ಮೇಲೆ ತಳತಳನೆ ಬೆಳಗುತ್ತಿಪ್ಪ ಭೇದವನು ಸಿದ್ಧೇಶ್ವರನೆನಗೆ ಅರುಹಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಉರಿಯುಂಡ ಕರ್ಪೂರದಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಇನ್ನಷ್ಟು ... -->