ಅಥವಾ

ಒಟ್ಟು 11 ಕಡೆಗಳಲ್ಲಿ , 11 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಂಗಮದ ಮುಂದಿಟ್ಟು ಕೊಟ್ಟು ಕೊಂಡೆಹೆನೆಂಬ ಸರ್ವಸಮಯಾಚಾರ ಸಂಪತ್ತಿನಿರವು: ಮಜ್ಜನ ಭೋಜನ ಅಂದಳ ಛತ್ರ ಚಾಮರ ಕರಿ ತುರಗ ದರ್ಪಣ ಹಲುಕಡ್ಡಿ ನಖಚಣ ಪರಿಮಳ ಗಂಧ ಮೆಟ್ಟಡಿ ತಾಂಬೂಲ ರತ್ನಾಭರಣ ಮೆತ್ತೆ ಶಯನ ಸ್ತ್ರೀಸಂಸರ್ಗ ಒಡೆಯಂಗೆ ಆಯಿತ್ತೆಂಬುದ ಕೇಳಿ, ಆ ಒಡೆಯನ ವಾಚಾಪ್ರಸಾದದಿಂದ ಮಹಾಪ್ರಸಾದವೆಂದು ತನ್ನ ಸ್ವಸ್ತ್ರೀಗೆ ಕೂಟಸ್ಥನಾಗಬೇಕು. ಇಂತೀ ಭಾವ ಸರ್ವಸಮಯಾಚಾರ. ಈ ವರ್ತಕದಂಗ ನಿಂದಾತನ ಸಂಗ, ಏಲೇಶ್ವರದಂಗ ಉಮೇಶ್ವರಲಿಂಗವು ಆ ಭಕ್ತನಂಗ.
--------------
ಏಲೇಶ್ವರ ಕೇತಯ್ಯ
ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ ಕಟ್ಟಳೆಯ ವರುಷಕ್ಕೆ ತಪ್ಪದೆ ಅಂಗವಸ್ತ್ರವೆಂದು ಲಿಂಗವಸ್ತ್ರವೆಂದು ಕನಕ ಪರಿಮಳವೆಂದು ಅಂದಣ ಛತ್ರ ಚಾಮರ ಕರಿ ತುರಗಂಗಳೆಂದು ಇವು ಬಂದುದಿಲ್ಲ ಎಂದು ಸಂದಣಿ ಲಂದಣಗಾರರ ಕೈಯಲ್ಲಿಹೇಳಿಸಿ ಅವು ಬಾರದಿರೆ ತಾ ಸಂದ್ಥಿಸಿ ಸೂಚಿಸುವ ಲಿಂಗ ಲಿಂಗಮಾರಿಗೆ ಗುರುಸ್ಥಲ ಎಂದಿಗೂ ಇಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 39 ||
--------------
ದಾಸೋಹದ ಸಂಗಣ್ಣ
ಅಯ್ಯಾ, ಹಲವು ದೇಶಕೋಶಗಳು, ಹಲವು ತೀರ್ಥಕ್ಷೇತ್ರಂಗಳು, ಹಲವು ಸ್ತ್ರೀಯರ ಅಂದಚಂದಗಳು, ಹಲವು ತೇರು ಜಾತ್ರೆಗಳು, ಹಲವು ಆಟಪಾಟಗಳು, ಹಲವು ಅರಿವೆ ಆಭರಣಗಳು, ಹಲವು ಆನೆ ಕುದುರೆ ಅಂದಳಗಳು, ಹಲವು ಚಿತ್ರವಿಚಿತ್ರ ಛತ್ರ ಚಾಮರಗಳು, ಹಲವು ಹಣ್ಣು ಫಲಾದಿಗಳು, ಹಲವು ಪತ್ರೆ ಪುಷ್ಪಂಗಳು, ಹಲವು ಮೆಟ್ಟುವ ಚರವಾಹನ ಮೊದಲಾಗಿ ನೋಡಿದಾಕ್ಷಣವೇ ದೀಪಕ್ಕೆ ಪತಂಗ ಎರಗುವಂತೆ, ಹಲವು ಪ್ರಾಣಿಗಳಿಗೆ ತಿಗಳ ಎರಗುವಂತೆ, ಮೀನಿಗೆ ಗುಂಡುಮುಳುಗನಪಕ್ಷಿ ಎರಗುವಂತೆ, ಹಲವ ಹಂಬಲಿಸಿ, ಕಂಡುದ ಬಿಡದ ಮುಂಡೆ ಪಿಶಾಚಿಯಂತೆ, ಜನ್ಮಾಂತರವೆತ್ತಿ ತೊಳಲಿತಯ್ಯ ಎನ್ನ ನೇತ್ರೇಂದ್ರಿಯವು. ಇಂಥ ಕರ್ಮಜಡ ಜೀವರ ಸಂಗದಿಂದ ಕೆಟ್ಟೆ ಕೆಟ್ಟೆ. ಶಿವಧೊ ಶಿವಧೊ ಎಂದು ಮೊರೆಯಿಟ್ಟೆನಯ್ಯ. ದೇವ ನಿಮ್ಮ ಕೃಪಾದೃಷ್ಟಿಯಿಂದ ನೋಡಿ ನಿಮ್ಮ ಸದ್ಭಕ್ತೆ ಶಿವಶರಣೆ ಅಕ್ಕನೀಲಾಂಬಿಕೆ ತಾಯಿಗಳ ತೊತ್ತಿನ ತೊತ್ತು ಸೇವೆಯ ಮಾಡುವ ಗೌಡಿಯ ಚರಣವ ಏಕಚಿತ್ತದಿಂದ ನೋಡಿ ಸುಖಿಸುವಂತೆ ಮಾಡಯ್ಯ. ಎನ್ನಾಳ್ದ ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ತನುಶೀಲವಂತರುಂಟು, ಧನಶೀಲವಂತರುಂಟು, ಧರೆಶೀಲವಂತರುಂಟು, ಕನಕ ವನಿತೆಶೀಲವಂತರುಂಟು. ಕೆಯಿ ತೋಟ ಹಿಂದೆಸೆ ಮುಂದೆಸೆ ನಿಳಯಶೀಲವಂತರುಂಟು. ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ರಸದ್ರವ್ಯ ಪಶು ಪಾಷಾಣ ವಸ್ತ್ರ ಪರಿಮಳ ಛತ್ರ ಚಾಮರ ಅಂದಳ ಕರಿ ತುರಗಂಗಳು ಮುಂತಾದವೆಲ್ಲಕ್ಕೂ ಶೀಲವಂತರುಂಟು. ಅನುಸರಣೆಯ ಕಂಡಲ್ಲಿ, ಆಚಾರ ತಪ್ಪಿದಲ್ಲಿ, ಲಿಂಗ ಬಾಹ್ಯವಾದಲ್ಲಿ, ಆಗವೆ ಅಂಗವ ಬಿಟ್ಟು ಲಿಂಗದೊಡಗೂಡುವ ಶೀಲವಂತರಂಗವ ಕಾಣೆ. ಎನ್ನ ಕ್ರೀ ಭಂಗವಹುದಕ್ಕೆ ಮುನ್ನವೆ ನಿರಂಗವ ಹೇಳಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
--------------
ಅಕ್ಕಮ್ಮ
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅನಂತರದಲ್ಲಿ ದಾಂತ್ಯಾದಿ ಸಾಧನಸಂಪನ್ನಾಗಿ, ಶ್ರೀಗುರುವಿಂ ಶಾಸನೀಯ ನಪ್ಪುದರಿಂ ಶಿಷ್ಯನಾದಾತ್ಮನು ಶುಭಕಾಲದೇಶಾದಿಗಳಂ ಪರೀಕ್ಷಿಸಿ ಬಳಿಕಾ ಚಾರ್ಯ ಸಂಪ್ರದಾಯಸಿದ್ಧನಾದ ಸಕಲಸದ್ಗುಣಸಹಿತನಾದ ಶ್ರೀಗುರುವನೆಯಿ, ಮತ್ತಮಾ ಗುರುವಿನನುಮತದಿಂ ಶಿವಪೂಜಾ ಪಾರಾಯಣರಾದ ಕೀರ್ತಿಮಯ ರಾದ ನಾಲ್ವರು ಋತ್ವಿಕ್ಕುಗಳಂ ಸ್ನಾನಧವಲಾಂಬರ ಆಭರಣ ಪುಷ್ಪಾದಿ ಗಳಿಂದಲಂ ಕರಿಸಿ, ಬಳಿಕಾ ಶ್ರೀಗುರುವಿನಾಜ್ಞೆಯಿಂ ತಾನಾ ರಾತ್ರೆಯಲ್ಲಿ, ಕ್ಷೀರಾಹಾರಿಯಾಗಿರ್ದು, ಮೇಲೆ ಪ್ರಭಾತಸಮಯದಲ್ಲಿ ದಂತಧಾವನಂಗೆಯ್ದು, ಮಂಗಲಸ್ನಾನಂ ಮಾಡಿ ಧವಲಾಂಬರವನುಟ್ಟು ಪೊದೆದು, ಭಸಿತೋದ್ಧೂಳನಂ ರಚಿಸಿ, ತ್ರಿಪುಂಡ್ರ ಧಾರಣಮಂ ವಿಸ್ತರಿಸಿ, ರುದ್ರಾಕ್ಷಮಾಲೆಗಳಂ ಧರಿಸಿ, ಸುವರ್ಣಾಭರಣಾದಿಗಳಿಂ ಸಿಂಗರಂಬಡೆದು, ಬಳಿಕಾಚಾರ್ಯನ ಸವಿೂಪಕ್ಕೆ ಬಂದು, ಭಯಭಕ್ತಿಯಿಂದಷ್ಟಮಂತ್ರಪೂರ್ವಕದಿಂ ವಿನಯವಿನಮಿತನಾಗಿ ಸುವರ್ಣ ಪುಷ್ಪಾದಿಗಳಿಂ ವಿತ್ತಾನುಸಾರಮಾಗಿ ಗುರುಪೂಜನಂಗೆಯ್ದು ಮರಳಿ ಗಂಧ ಪುಷ್ಪಾದಿಗಳಿಂ ಋತ್ವಿಕ್ಕುಗಳಂ ಭಜಿಸಿ, ಮೇಲೆ ಶ್ರೀಗುರು ಮುಖ್ಯಸಕಲಮಾಹೇಶ್ವರರಂ ವಂದಿಸಿ ವಿಭೂತಿ ವೀಳೆಯಂಗಳಂ ಸಮರ್ಪಿಸಿ, ಬಳಿಕ ಖನನ ದಹನ ಶೋಧನ ಸಂಪ್ರೋಕ್ಷಣ ಮರ್ದನ ಲೇಪನವೆಂಬ ಷಟ್ಕಮರ್ಂಗಳಿಂ ಸಾರಣೆ ಕಾರಣೆ ತಳಿರತೋರಣ ಕುಸುಮತೋರಣ ಸರವಿಸರ ಪಳವಳಿಗೆ ಧೂಪ ಧೂಮ್ನಾದಿಗಳಿಂ ಪರಿಶೋಭೆವಡೆದು, ಮನೋಹರಮಾದ ದೀಕ್ಷಾಮಂಟಪದಲ್ಲಿ ಗೋಚರ್ಮ ಮಾತೃಭೂಮಿಯಂ ಚೌಕಮಾಗಿ, ಗೋರೋಜನ ಗೋಮಯ ಗೋಮೂತ್ರ ಗೋದಧಿ ಘೃತ ಗೋಕ್ಷೀರಯೆಂಬ ಷಟ್ಸಮ್ಮಾರ್ಜನಂಗೆಯು, ಬಳಿಕಾ ಚೌಕಮಧ್ಯದಲ್ಲಿ ಪ್ರವಾಳ ಮೌಕ್ತಿಕ ಶುಭ್ರ ಪಾಷಾಣ ಸುವ್ಯರ್ಣ ಶ್ವೇತಾಭ್ರಕ ತಂಡುಲಾದಿಗಳ ಚೂರ್ಣಂಗಳಿಂದ ಷ್ಟದಳಕಮಲಮಂ ರಚಿಸಿ, ಮತ್ತದರಾ ವಿವರ:ಶಂಖ ಚಕ್ರ ಶೂಲ ಡಮರುಗ ಪರಶು ಘಂಟೆ ಛತ್ರ ಚಾಮರಮೃಷಭ ಚರಣಾದಿ ವಿಚಿತ್ರವರ್ಣಕಮಂ ತುಂಬುತ್ತದರ ಮೇಲೆ ಎಳ್ಳು ಜೀರಿಗೆ ಗೋದುವೆ ಅಕ್ಕಿ ಉದ್ದುಗಳೆಂಬ ಪಂಚಧಾನ್ಯವನಾದರೂ ಕೇವಲ ತಂಡುಲವನಾದರೂ ಮೂವತ್ತೆರಡಂಗುಲ ಪ್ರಮಾಣಿನ ಚತುರಸ್ರಮಾಗಿ ಹರಹುತ್ತದರ ಮೇಲೆ ತೀರ್ಥಾಂಬುಪೂರ್ಣ ಮಾದ ಸುವರ್ಣಾದಿ ನವೀನ ಪಂಚಕಳಶಂಗಳಂ ಪೂರ್ವದಕ್ಷಿಣ ಪಶ್ಚಿಮ ಉತ್ತರ ಮಧ್ಯ ಕ್ರಮದಿಂದಾಚಾರ್ಯನೆ ಸ್ಥಾಪಿಸುತ್ತಾ, ಕಳಶಂಗಳಂ ಬೇರೆ ಬೇರೆ ನೂತನ ವಸ್ತ್ರಂಗಳಿಂ ಸುತ್ತಿ, ನವಪಂಚತಂತುಗಳಿಂ ಪರಿವೇಷ್ಟಿಸಿ ಸುವರ್ಣಾದಿನಗಳನವ ರೊಳಿರಿಸಿ, ಬಳಿಕ್ಕಾಮ್ರಪಲ್ಲವ ದೂರ್ವಾಂಕುರ ಪೂಗ ಕುಸುಮ ನಾಗವಳಿ... (ಇಲ್ಲಿ ಒಂದು ಗರಿ ಕಳೆದುಹೋಗಿದೆ).
--------------
ಶಾಂತವೀರೇಶ್ವರ
ಎನ್ನ ಪ್ರಾಣ ಮನ ಬುದ್ಧಿ ಚಿತ್ತಂಗಳು ನಿಮ್ಮ ತೊತ್ತಿರಯ್ಯಾ. ಸತ್ವ ರಜ ತಮಂಗಳು ನಿಮ್ಮ ಭೃತ್ಯರಯ್ಯಾ. ಅಂತಃಕರಣ ಚತುಷ್ಟಯಂಗಳು ನಿಮ್ಮ ಮಂತ್ರಿಗಳಯ್ಯಾ. ಪಂಚೇಂದ್ರಿಯಂಗಳು ನಿಮ್ಮ ಪಡಿಹಾರರಯ್ಯಾ. ಅರಿಷಡ್ವರ್ಗಂಗಳು ನಿಮ್ಮ ಲೆಂಕರಯ್ಯಾ. ಸಪ್ತಧಾತುಗಳು ನಿಮ್ಮ ಬಾಣಸಿಗರಯ್ಯಾ. ಅಷ್ಟಮದಂಗಳು ನಿಮ್ಮ ಭಂಡಾರಿಗಳಯ್ಯಾ. ನವರಸಂಗಳು ನಿಮ್ಮ ಭಂಡಾರಿಗಳಯ್ಯಾ. ದಶವಾಯಗಳು ನಿಮ್ಮ ಛತ್ರ ಚಾಮರ ಸೀಗುರಿಗಳಯ್ಯಾ. ಷೋಡಶಕಳೆಗಳು ನಿಮ್ಮ ರಾಣಿವಾಸವಯ್ಯಾ. ಶಂಭು ಸೋಮನಾಥಲಿಂಗ, ನಿಮಗೆನ್ನ ಕಾಯ ಮುಂತಾಗಿ ಬಾಹತ್ತರ ಡಿಂಗರಿಗರಯ್ಯಾ!
--------------
ಜೋದರ ಮಾಯಣ್ಣ
ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ ಕಟ್ಟಳೆಯ ವರುಷಕ್ಕೆ ತಪ್ಪದೆ ಅಂಗವಸ್ತ್ರವೆಂದು ಲಿಂಗವಸ್ತ್ರವೆಂದು ಕನಕ ಪರಿಮಳವೆಂದು ಅಂದಣ ಛತ್ರ ಚಾಮರ ಕರಿ ತುರಗಂಗಳೆಂದು ಇವು ಬಂದುದಿಲ್ಲ ಎಂದು ಸಂದಣಿ ಲಂದಣಗಾರರ ಕೈಯಲ್ಲಿಹೇಳಿಸಿ ಅವು ಬಾರದಿರೆ ತಾ ಸಂಧಿಸಿ ಸೂಚಿಸುವ ಲಿಂಗ ಲಿಂಗಮಾರಿಗೆ ಗುರುಸ್ಥಲ ಎಂದಿಗೂ ಇಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ತುರುಗಾಹಿ ರಾಮಣ್ಣ
ಈಶಲಾಂಛನವ ತೊಟ್ಟು ಮನ್ಮಥವೇಷಲಾಂಛನವ ತೊಡಲೇತಕ್ಕೆ ? ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ ? ಅಂದಳ ಛತ್ರ, ಆಭರಣ, ಕರಿತುರಗಂಗಳ ಗೊಂದಣವೇತಕ್ಕೆ ? ಅದು ಘನಲಿಂಗದ ಮೆಚ್ಚಲ್ಲ, ಎಂದನಂಬಿಗ ಚೌಡಯ್ಯ
--------------
ಅಂಬಿಗರ ಚೌಡಯ್ಯ
ಬ್ರಹ್ಮ ನಿಮ್ಮ ಶ್ರೀಚರಣವನೊತ್ತುವ, ವಿಷ್ಣು ನಿಮ್ಮ ಶ್ರೀಹಸ್ತವನೊತ್ತುವ. ದೇವರಾಜ ನಿಮಗೆ ಸತ್ತಿಗೆಯ ಹಿಡವ, ವಾಯು ಬಂದು ನಿಮ್ಮ ರಾಜಾಂಗಣವನುಡುಗುವ. ಉಳಿದಾದ ದೇವರ್ಕಳೆಲ್ಲ ನಿಮಗೆ ಜಯ ಜೀಯ ಹಸಾದವೆನುತ್ತಿಹರು. ಮಹಾದೇವ, ಮಹಾಮಹಿಮರೆನಿಸಿಕೊಂಬವರೆಲ್ಲ ನಿಮ್ಮ ಸೇವಕರು. ಅದೆಂತೆಂದಡೆ : ಮಮರ್ದ ಚರಣೌ ಬ್ರಹ್ಮಾ ವಿಷ್ಣು ಃ ಪಾಣಿ ಸಮಾಹಿತಃ | ಛತ್ರಂ ಧಾರಯತೇ ಚೇಂದ್ರೋ ವಾಯುರ್ಮಾರ್ಗಂ ವಿಶೋಧಯೇತ್ | ಅನ್ಯೇ ತು ದೇವತಾಃ ಸರ್ವ ಜಯ ಜೀಯ ಇತ್ಯಭ್ರುವನ್ || ಇಂತೆಂಬ ವಚನವಿಡಿದು, ನಿಮಗೆ ಸರಿಯೆಂಬವಂದಿರ ತಲೆಯ ಮೆಟ್ಟಿ ನಡೆವೆ. ಮಹಾಮಹಿಮ ಸೊಡ್ಡಳ, ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದನು.
--------------
ಸೊಡ್ಡಳ ಬಾಚರಸ
ದುಕೂಲ ಮುಂತಾದ ವಸ್ತ್ರಂಗಳಲ್ಲಿ, ಹೇಮ ಮುಂತಾದ ಆಭರಣಂಗಳಲ್ಲಿ, ಮೌಕ್ತಿಕ ರತ್ನ ಮುಂತಾದ ಪಾಷಾಣಂಗಳಲ್ಲಿ, ಚಂದನ ಗಂಧ ಮುಂತಾದ ಸುವಾಸನೆಯಲ್ಲಿ, ಅಂದಳ ಛತ್ರ ಚಾಮರ ಕರಿ ತುರಗಂಗಳು ಮುಂತಾದ ತಾನು ಸೋಂಕುವ ವೈಭವ ಮುಂತಾದ ಸಕಲಸುಖಂಗಳು ಲಿಂಗಕ್ಕೆಂದು ಕಲ್ಪಿಸಿ, ಅಂಗೀಕರಿಸುವವನಿರವು ವಾರಿಶಿಲೆ ನೋಡನೋಡಲಿಕ್ಕೆ ನೀರಾದ ತೆರದಂತೆ, ಅಂಬರದ ವರ್ಣ ನಾನಾ ಚಿತ್ರದಲ್ಲಿ ಸಂಭ್ರಮಿಸಿ ಕಂಗಳು ಮುಚ್ಚಿ ತೆರೆವುದಕ್ಕೆ ಮುನ್ನವೆ ಅದರಂದದ ಕಳೆ ಅಳಿದಂತಿರಬೇಕು. ಇದು ಲಿಂಗಭೋಗೋಪಭೋಗಿಯ ಸಂಗದ ಸುಖ, ನಿರಂಗದ ನಿಶ್ಚಯ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗದಲ್ಲಿ ವಿರಳವಿಲ್ಲದ ಪರಮಸುಖ.
--------------
ಮೋಳಿಗೆ ಮಹಾದೇವಿ
-->