ಅಥವಾ

ಒಟ್ಟು 146 ಕಡೆಗಳಲ್ಲಿ , 43 ವಚನಕಾರರು , 130 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಂಡುವ ಹೇಳಿಹೆನೆ ? ಸಮಯಕ್ಕೆ ದೂರ, ಎನ್ನ ಇರವನರಿಯರು. ಲೆಂಡನೆಂಬರು, ಸುಮ್ಮನಿದ್ದೇನೆ. ಇವರೆನ್ನ ಆರೈದು ಕಂಡುದ ನುಡಿವರು. ಎನ್ನ ಮುಟ್ಟಿದವರ ಎನ್ನಂತೆ ಮಾಡಿಕೊಂಬೆ. ಎನ್ನ ಅರಿಯದವರ ಹಾದಿಯ ಹೋಗೆ. ಎನ್ನನರಿತ ಜಂಗಮದ ಸಂಗವ ಮಾಡುವೆ. ಜಗದ ಸಂಗವನೊಲ್ಲೆ, ನಿಗಮಾಗಮಶಾಸ್ತ್ರವನೊಲ್ಲೆ. ಅವೆಲ್ಲವು ಸ್ಥಲ ನೆಲೆ ಇಟ್ಟು ಹೇಳುವವು. ಎಮ್ಮ ಶರಣರು ನುಡಿದ ಶಾಸ್ತ್ರಕ್ಕೆ ಸ್ಥಲ ನೆಲೆ ಇಲ್ಲ. ಇಂತಿವೆಲ್ಲವ ಬಲ್ಲೆನಾಗಿ, ಎನ್ನಂಗಕ್ಕೆ ಪ್ರಾಣಕ್ಕೆ ಭವವಿಲ್ಲ, ಬಂಧನವಿಲ್ಲ. ಅದೇಕೆಂದರೆ:ಲಿಂಗವೆಂದ ಕಾರಣ, ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆಯತದಲ್ಲಿ ಅಂಗಭೋಗಿಯಾಗಿರಬೇಕು. ಸ್ವಾಯತದಲ್ಲಿ ಸನ್ನಹಿತನಾಗಿರಬೇಕು. ಸನ್ನಹಿತದಲ್ಲಿ ಸದಾಚಾರಿಯಾಗಿರಬೇಕು. ಇಂತೀ ತ್ರಿವಿಧದಲ್ಲಿ ಏಕವಾಗಿರಬಲ್ಲಡೆ, ಅದು ವರ್ಮ, ಅದು ಸಂಬಂಧ, ಅದು ನಿಯತಾಚಾರವೆಂದೆಂಬೆನು. ಅದಲ್ಲದೆ ಲಿಂಗವ ಮರೆದು, ಅಂಗ[ವ]ಭೋಗಿಸಿ, ಅಂಗಸಂಗದಲ್ಲಿರ್ದು, ಅಂಗವೆ ಪ್ರಾಣವಾಗಿಹರಿಗೆಲ್ಲರಿಗೆಯೂ ಲಿಂಗದ ಶುದ್ಧಿ ನಿಮಗೇಕೆ ಕೇಳಿರಣ್ಣಾ. ಲಿಂಗವಂತನು ಅಂಗಸೂತಕಿಯಲ್ಲ. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನದ ಮೇಲೆ ಲಿಂಗದ ಪ್ರಾಣವ ತನ್ನಲ್ಲಿ ಕೂಡಿಕೊಂಡು, ತನ್ನ ಪ್ರಾಣವ ಲಿಂಗದಲ್ಲಿ ಕೂಡಿಕೊಂಡು, ಏಕಪ್ರಾಣವ ಮಾಡಿಕೊಂಡಿಪ್ಪ ಶರಣನ ಜ್ಯೋತಿರ್ಮಯನೆಂಬೆನು, ಜಗದ ಕರ್ತನೆಂಬೆನು, ಜಗದಾರಾಧ್ಯನೆಂದೆಂಬೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಸಂಗಿಯ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಇಡುವ ಕೊಡುವ ಬಿಡುವ ಕಟ್ಟುವ ಗೊಡವೆಗಾರನಯ್ಯಾ; ಶರಣನು ಗಾಳಿಯ ಮರೆಯ ಜ್ಯೋತಿಯಂತೆ, ಸುಖಸೂಸದೆ ಇಪ್ಪನು. ತನ್ನರಿವು ಮರವೆಗಳೆಲ್ಲಾ ಪ್ರಾಣಲಿಂಗಾಧೀನವಲ್ಲದೆ, ಮತ್ತೊಂದನರಿಯನು. ಆಸರುವನಲ್ಲ ಬೇಸರುವನಲ್ಲ; ಜಗದ ಕಳಕಳಕ್ಕೆ ಎದ್ದು ಹರಿದಾಡುವನಲ್ಲ. ಸುಖಮುದ್ರಿತನು ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಕಾಳಕೂಟದ ತತ್ತಿಯಲ್ಲಿ ಒಂದು ಕೋಳಿ ಹುಟ್ಟಿತ್ತು. ಹಾರುವುದಕ್ಕೆ ಗರಿಯಿಲ್ಲ, ಓಡುವುದಕ್ಕೆ ಕಾಲಿಲ್ಲ. ನೋಡುವುದಕ್ಕೆ ಕಣ್ಣಿಲ್ಲ, ಕೂಗುವ ಬಾಯಿ ಒಂದೆ ಅದೆ. ಅದು ಕೂಗುವಾಗ ಜಾವವಳಿದು, ದಿನ ಸತ್ತು, ಮಾಸ ತುಂಬುವದನರಿತಲ್ಲದೆ ದಿನ ನಾಶವೆಂದು ಕೂಗುತ್ತದೆ. ಕೂಗಿನ ದನಿಯ ಕೇಳಿ ಬೆಳಗಾಯಿತ್ತು, ಜಗದ ಸುಂಕದೊಡೆಯ ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಅಂಗವರಿತು ನಿಂದವಂಗೆ ಜಗದ ಹಂಗಿನಲ್ಲಿ ಸಿಕ್ಕಿ ಜಂಗುಳಿಗಳ ಕೂಡದೆ ಲಿಂಗವೇ ಅಂಗವಾಗಿ ನಿಂದುದು ಕಪಿಲಸಿದ್ಧಮಲ್ಲಿಕಾರ್ಜುನಂಗವು ತಾನಾದುದ
--------------
ಸಿದ್ಧರಾಮೇಶ್ವರ
ಮಾತಿನ ಗೂಢವ ನುಡಿದಡೆ, ನೀತಿವಂತರು ಅರಿಯರು. ಜ್ಞಾತೃಜ್ಞೇಯ ಭಾವವ ನುಡಿದಡೆ, ಪ್ರಖ್ಯಾತ ಆಗಮಯುಕ್ತಿ ಅವರರಿಯರು. ಇಂತಿವ ಹೇಳಿದಡೆ ಜಗದ ತೊಡಕು, ಉಳಿದಡೆ ಚಿತ್ತಕ್ಕೆ ವಿರೋಧ. ಇದರಚ್ಚುಗ ಬೇಡ, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಎಂಜಲಮಾತ ನುಡಿವುತ್ತಿಪ್ಪ ಜಗದ ಜಂಗುಳದೊಳಗಿದಡೆ ಶೀಲವಂತನೆ ? ಬ್ಥಿನ್ನರುಚಿಗಳಿಗೆರಗಿ, ಕಾಮನ ಬೆಂಬಳಿವರಿದು, ಮಕರಶೃಂಗಾರವ ಮಾಡಿದಡೆ ಮಹಂತನೆ ? ಲಿಂಗಶೃಂಗಾರವ ಮಾಡಿ, ಅಂಗನೆಯರ ಸಂಗವ ತೊರೆದಡೆ, ಶೀಲವಂತನೆಂಬೆನು. ಲೋಕದ ನಚ್ಚು ಮಚ್ಚು ಬಿಟ್ಟು, ಮನ ನಿಶ್ಚಿಂತವಾದಡೆ, ಮಚ್ಚುವನಯ್ಯಾ, ಎಮ್ಮ ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಸತಿಯ ಸಂಗವತಿಸುಖವೆಂದರಿದಡೇನು ? ಗಣಸಾಕ್ಷಿಯಾಗಿ ವಿವಾಹವಾಗದನ್ನಕ್ಕರ ? ಕಣ್ಣು ಕಾಂಬುದೆಂದಡೆ, ಕತ್ತಲೆಯಲ್ಲಿ ಕಾಂಬುದೆ ದೀಪವಿಲ್ಲದನ್ನಕ್ಕರ ? ಸೂರ್ಯನ ಪ್ರಕಾಶದಿಂದ ಕಂಡು ತಾನೆ, ಕಂಡೆನೆಂಬ ಜಗದ ನಾಣ್ಣುಡಿಯಂತಾಯಿತ್ತು. ಅಂಗವ ಬಿಟ್ಟು ಆತ್ಮನುಂಟೆ ? ಶಕ್ತಿಯ ಬಿಟ್ಟು ಶಿವನುಂಟೆ ? ಇದು ಕಾರಣ_ಸ್ಥೂಲ ಸೂಕ್ಷ್ಮಕಾರಣ ತನುತ್ರಯವಿರಲು, ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗಸಂಬಂಧ ಬೇಡವೆಂದಡೆ ಅಸಂಖ್ಯಾತ ಪ್ರಮಥಗಣಂಗಳೊಪ್ಪುವರೆ ? ಕೂಡಲಚೆನ್ನಸಂಗಯ್ಯನಲ್ಲಿ ಇಷ್ಟಲಿಂಗಸಂಬಂಧವಿಲ್ಲದವರ ಮುಖವ ನೋಡಲಾಗದು ಪ್ರಭುವೆ.
--------------
ಚನ್ನಬಸವಣ್ಣ
ಜಗದಗಲದಲ್ಲಿ ಹಬ್ಬಿದ ಬಲೆ, ಯುಗಜುಗಕ್ಕೆ ತೆಗೆಯದು ನೋಡಾ ! [ಅದು] ಬಗೆಯಲ್ಲಿ ಭ್ರಮೆಗೊಳ್ಳದು;_ತನ್ನ ಇರವಿನ ಪರಿ ಇಂತುಟಾಗಿ ! ಜಗದ ಪ್ರಾಣಿಗಳುಲಿದುಲಿದು ಮರಳಿ ಮತ್ತಲ್ಲಿಯೆ ಬೀಳಲು; ಬಲೆಯ ನೇಣು ಬಗ್ಗುರಿಯ ಕೈಯಲಿರಲು,_ ಬಲೆಯ ನೇಣ ಕಣ್ಣಿ ಕಳಚಿ, ಲಿಂಗಕ್ಕೆ ಪ್ರಾಣ ಶರಣೆನ್ನುತ್ತವೆ ನಿಂದು, ಒಡಲುಪಾಧಿಯನರಿಯದೆ ಬೆಳಗಿನಲ್ಲಿ ನಿಂದು, ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು, ಮನೋಮಧ್ಯದಲ್ಲಿ ನಿಲಿಸಿ ನೆನೆವುತ್ತಿರ್ದು ಸುಖಿಯಾದ; ಪ್ರಾಣನಾಥನ ಕಾಯ ಶೂನ್ಯಲಿಂಗಕ್ಕೆ, ಪ್ರಾಣಶೂನ್ಯಶರಣ. ಗುಹೇಶ್ವರಲಿಂಗವ ಬೆರಸಿ ಬೇರಿಲ್ಲ.
--------------
ಅಲ್ಲಮಪ್ರಭುದೇವರು
ಚಂದ್ರೋದಯಕ್ಕೆ ಅಂಬುದ್ಥಿ ಹೆಚ್ಚುವುದಯ್ಯಾ, ಚಂದ್ರ ಕುಂದೆ, ಕುಂದುವುದಯ್ಯಾ. ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾ ಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ, ಅಯ್ಯಾ ? ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ, ಜಗದ ನಂಟ ನೀನೆ, ಅಯ್ಯಾ, ಕೂಡಲಸಂಗಮದೇವಯ್ಯಾ !
--------------
ಬಸವಣ್ಣ
ಜಗವನಾಡಿಸುವನು, ಜಗವನೇಡಿಸುವನು. ಜಗದ ನಟನಾಟಕನ ಪರಿಯ ನೋಡಯ್ಯಾ! ಜಗವ ರಂಜಿಸುವನು, ಜಗವ ಭುಜಿಸುವನು. ಜಗದೊಳಗಿಪ್ಪನು, ಜಗದ ಹೊರಗಿಪ್ಪನು. ಜಗಕೆ ತೋರಿಯೂ ತೋರದಂತಿಪ್ಪನು. ದರ್ಪಣದೊಳಗಣ ಪ್ರತಿಬಿಂಬದಂತಿಪ್ಪನು. ಉದಕ-ಪದ್ಮಪತ್ರದಂತಿಪ್ಪನು. ನಿಜಗುರುವೆ, ಸ್ವತಂತ್ರ ಕಪಿಲಸಿದ್ಧಮಲ್ಲೇಶ್ವರನೆ, ನೋಟ ತೀರಲೊಡನೆ ಜಗದಾಟ ತೀರಿತು.
--------------
ಸಿದ್ಧರಾಮೇಶ್ವರ
ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು. ಬೇಡದೆ ಕಾಡದೆ ಚಿತ್ತದಲ್ಲಿ ಆಸೆಯ ಕಲೆದೋರದೆ, ಹೊತ್ತ ಘಟಕ್ಕೆ ತುತ್ತು, ಶೀತಕ್ಕೆ ಅಂಬರ ನಿರ್ಜಾತನ ಒಲುಮೆ ಎಲ್ಲಿದ್ದರೂ ತಪ್ಪದೆಂದು ವಿಶ್ವಾಸವುಳ್ಳ ಶರಣಂಗೆ ಅವ ತೊಟ್ಟಿದ್ದುದು ಅದೇತರ ಕಾಯ? ದಗ್ಧಪಟ ನ್ಯಾಯ! ನಾರಾಯಣಪ್ರಿಯ ರಾಮನಾಥನಲ್ಲಿ ಕಳೆದುಳಿದಶರಣಂಗೆ!
--------------
ಗುಪ್ತ ಮಂಚಣ್ಣ
ಜಗದ ಮಧ್ಯದಲ್ಲಿ ಶರಣ ಜನಿಸಿದಡೇನು ಆ ಜಗದ ಸ್ವರೂಪನೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಕೋಗಿಲೆಯ ತತ್ತಿಯನೊಡೆದು ಕಾಗೆ ಮರಿಯಮಾಡಿ ಸಲಹಿದಡೇನು ಅದು ತನ್ನ ಕೋಗಿಲೆಯ ಹಿಂಡ ಕೂಡುವುದಲ್ಲದೆ ಮರಳಿ ಕಾಗೆಯ ಹಿಂಡ ಬೆರೆವುದೆ ಹೇಳಾ ? ಲೋಕದ ಮಧ್ಯದಲ್ಲಿ ಅನಾದಿಶರಣನು ಲೋಕೋಪಕಾರಕ್ಕಾಗಿ ಜನಿಸಿದಡೇನು ತನ್ನ ಮುನ್ನಿನ ಶಿವತತ್ವವನೆ ಬೆರೆವನಲ್ಲದೆ ಮರಳಿ ಲೋಕವ ಬೆರೆಯನು ನೋಡಾ, ನಿಮ್ಮನರಿದ ಶಿವಜ್ಞಾನಿಶರಣನು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗೋಳಕಾಕಾರ ಗೋರಕ್ಷನೆಂಬ ಪಟ್ಟಣದಲ್ಲಿ, ಗೋಮಯವೆಂಬ ಪರಶಕ್ತಿ ಅಪರ ಪ್ರಸೂತಕವಾಗಲಾಗಿ, ಅದರಂಡದಲ್ಲಿ ಆಡು ಹುಟ್ಟಿತ್ತು. ಆಡಿನ ಅಂಡದಲ್ಲಿ ಕೋಡಗ ಹುಟ್ಟಿತ್ತು. ಕೋಡಗದ ಕುಂಡಿಯಲ್ಲಿ ಸಿರಿಯಕ್ಕ ಹುಟ್ಟಿದಳು. ಸಿರಿಯಕ್ಕನ ಆತುರಿಯದಲ್ಲಿ ಮೂದೇವಿ ಉರಿಯಕ್ಕ ಹುಟ್ಟಿದಳು. ಉರಿಯಕ್ಕನ ಉರವಣೆಯಲ್ಲಿ ಜಗ ಹುಟ್ಟಿ, ಜಗದ ಸಿರಿಯಲ್ಲಿ ಹೋದರು ಹಿರಿಯರೆಲ್ಲರು, ಬಂಕೇಶ್ವರಲಿಂಗವನರಿಯದೆ.
--------------
ಸುಂಕದ ಬಂಕಣ್ಣ
ಇನ್ನಷ್ಟು ... -->