ಅಥವಾ

ಒಟ್ಟು 122 ಕಡೆಗಳಲ್ಲಿ , 37 ವಚನಕಾರರು , 109 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮನ ಡಾಗು ಬೆನ್ನಮೇಲೆ, ವಿಷ್ಣುವಿನ ಡಾಗು ಕೈಯ ಮೇಲೆ. ರುದ್ರನ ಡಾಗು ತಲೆಯ ಮೇಲೆ. ಇಂತೀ ಡಾಗಿನ ಪಶುಗಳಿಗೇಕೆ ಅನಾಗತನ ಸುದ್ದಿ ? ಇದು ನಿಮಗೆ ಸಾ[ದ್ಥಿ]ಸದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಾ, ಕಾಲತೊಳೆದುಕೊಂಡು ಬಂದರೆ ಕಣ್ಣಮುಂದೆ ನಿಂದೆ. ಕೈಯ ತೊಳೆದುಕೊಂಡು ಬಂದರೆ ಮನದ ಮುಂದೆ ನಿಂದೆ. ತಲೆಯ ತೊಳೆದುಕೊಂಡು ಬಂದರೆ ಭಾವದ ಮುಂದೆ ನಿಂದೆ. ಸಂದು ಸಂಶಯ ಕುಂದು ಕಲೆಯ ಕಳೆದುಳಿದು ಬಂದರೆ ಸರ್ವಾಂಗಸನ್ನಿಹಿತನಾಗಿ ನಿಂದೆ. ಬಂದ ಬರವು ಚಂದವಾಗಿ ನಿಂದರೆ ಅಂದಂದಿಗೆ ಅವಧರಿಸು ಮುಂದುವರಿವೆನು ಮುದದಿಂದೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು ಪುರದ ಜನರು ಭೀತಿಗೊಂಡು ನೋಡುವ ಸಮಯದಲ್ಲಿ ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು, ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಡಿ[ಯೆ] ಕುಳ್ಳಿರಿಸಿದಲ್ಲಿ, ಕತ್ತಿಯನೆತ್ತಿ ಹೊಡೆ[ಯೆ] ಹೊಡೆ[ಯೆ] ಬದುಕಿದವರುಂಟು, ತಲೆಯ ಕಡಲ ನಡುವೆ ಹಡಗೊ[ಡೆ]ದು ಹಲಗೆಯ ಹಿಡಿದು ತಡಿಗೆ ಸೇರಿ ಬದುಕಿದವರುಂಟು, ತಲೆಯ ಎನ್ನೊಡೆಯ ಕೂಡಲಸಂಗಮದೇವ ಬರೆದ ಬರಹವ ತೊಡೆಯಬಲ್ಲರೆ ಹರಿ ಸುರ ಬ್ರಹ್ಮಾದಿಗಳು.
--------------
ಬಸವಣ್ಣ
ಪಂಚಮುಖದ ಸರ್ಪನ ತಲೆಯ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯದ ಪ್ರಭೆಯಲ್ಲಿ ನಾನು ನೀನೆಂಬುದ ಮರೆದು ಸ್ವಾನುಭಾವ ಸಿದ್ಧಾಂತವನಳವಟ್ಟು ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆಯನಾಳುವ ಪರವಾದಿ ಬಿಜ್ಜಳನು ಮಡಿವಾಳಯ್ಯಗಳು ಕರೆಯಕಳುಹಿದರೆ ಬಾರದಿರಲು ಪಟ್ಟದಾನೆಯ ಮೇಲೆ ಪರಿಪರಿಬಣ್ಣ ಸಣ್ಣವಸ್ತ್ರವ ಹೇರಿಸಿ ಶರದ್ಥಿಯ ಮುಂದೆ ನೀ ನೂಕಿ ಬಾಯೆಂದು ಕಳುಹಲು, ಬರುವ ಪಟ್ಟದಾನೆಯ ಕಂಡು ಕಂಗೆಡದೆ ಕಡೆಗೋಡದೆ ತಟ್ಟನೆ ಸೀಳಿ ನಿಟ್ಟೆಲುವ ಮುರಿದು ಹೊದಕೆಯ ಮುರಿಗಿ ಮಾಡಿ ತಲೆಯ ಹರಿಯಲಿಟ್ಟು ದುಕೂಲವ ಸುಟ್ಟು ಪರಿಚಾರರ ನೆರೆಯಟ್ಟಿ ತಲೆಗಳ ಕುಟ್ಟುವದ ಕೇಳಿ ಕಂಗೆಟ್ಟು ಕಾಲಿಗೆರಗಲು ಕರುಣವ ಪಡೆದ ನಿಷ್ಠೆಯ ವೀರಮಡಿವಾಳಯ್ಯಗಳಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಅರ್ಥಪ್ರಾಣವ ಕೊಟ್ಟಲ್ಲಿ, ಅಪಮಾನಕ್ಕೆ ಮುಚ್ಚಳನಿಕ್ಕುವ ಲೆಂಕನುಂಟೆ ಅಯ್ಯಾ ? ತಲೆಯ ಮಾರಿದವಂಗೆ ಕಣ್ಣು ಹೊರಗಾದುದುಂಟೆ ? ಭಕ್ತನಾದಲ್ಲಿ ಸತ್ಯ ಬೇಕಾದಡೆ, ಅರ್ಥ ಪ್ರಾಣ ಅಪಮಾನಕ್ಕೆ ಹೊರಗಾಗಬೇಕು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಗಗನ ಮಂಡಲದಲ್ಲಿ ಹುಟ್ಟಿದ ಶಶಿಕಳೆ ಭೂಮಂಡಲದಲ್ಲಿ ಉದಯವಾದುದ ಕಂಡೆನಯ್ಯ. ಭೂಮಂಡಲದಲುದಯವಾದ ಶಶಿಕಳೆ, ತ್ರೆ ೈಜಗವ ನುಂಗಿತ್ತು ನೋಡ. ನಾರಿಯರ ತಲೆಯ ಮೆಟ್ಟಿ, ಮೇರುವೆಯ ಹೊಕ್ಕಿತ್ತು ನೋಡಾ. ಮೇರುಗಿರಿಯ ಪರ್ವತದಲ್ಲಿಪ್ಪಾತನನೆಯ್ದೆ ನುಂಗಿತ್ತು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶೂಲದ ಮೇಲಣ ತಲೆಯ ವೈಭೋಗವನಾರು ಬಯಸಿದಡೆಲ್ಲಿಯದು ? ಉಂಬಡೆ ಒಡಲಿಲ್ಲ ಲಿಂಗಾರ್ಚನೆಯಿಲ್ಲ, ಅಂಗಭೋಗಕ್ಕೆ ಕರಚರಣಂಗಳಿಲ್ಲ. ಅಂಗವಿಲ್ಲೆಂಬ ಮಾತು ನಿಮಗೇಕೆ ? ಸುಡು, ಭಂಗ. ಲಿಂಗ ನಿರಾಳ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಪಂಚಾಶತ್‍ಕೋಟಿ ಭೂಮಂಡಲವನು, ಒಂದು ತಲೆಯಿಲ್ಲದ ಮುಂಡ ನುಂಗಿತ್ತ ಕಂಡೆನು. ತಲೆಯಿಲ್ಲದೆ ಕಂಡು ಬೆರಗಾದೆನು ನವಖಂಡ ಮಂಡಲ ಭಿನ್ನವಾದಂದು_ ಆ ತಲೆಯ ಕಂಡವರುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ ಹಿರಿಯರು ನೀವು ಕೇಳಿರೊ, ನಿಮ್ಮ ದಾರಿ ಡೊಂಕು ಬಹಳ, ಹೊತ್ತುಳ್ಳಲ್ಲಿ ಹೋಗುವ ಪರಿಯಿನ್ನೆಂತೊ ? ಕೋಣನ ಉರುಹಿ, ಕೊಂಬು ಕಿತ್ತೊಗೆದು, ಸತ್ತಿಗೆಯ ಸುಟ್ಟು, ಹಾರುವನ ತಲೆಯ ಬೋಳಿಸಿ, ಊರ ದೇವತೆಯ ಕಡಿದು ನಿಂತುನೋಡಲು ನೆಲ ಒಣಗಿ, ಬಿಳಿಯ ದಾರಿ ಕಾಣಬಹುದು. ಮೆಲ್ಲಮೆಲ್ಲನೆ ದಾರಿಯ ಬಿಡದೆ ನಡೆದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಎರಡನೆಯವತಾರವೊಪ್ಪಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ವನದ ಬಾಳೆಯ ಗೊನೆಯ ಹೊಯಿದ ಕಳ್ಳನ ಅಡಿವಜ್ಜೆಯಲ್ಲಿ ಹೋಗಿ, ಹೆಡಗುಡಿಯ ಕಟ್ಟಿ, ಬಾದ್ಥಿಸಿ, ಗೊನೆಯ ತೋರೆಂದಡೆ, ಗೊನೆ ಮನೆಯೊಳಗದೆಯೆಂದ. ಮನೆಯಾಕೆಯ ಕೇಳಿದಡೆ, ಗೊನೆಯ ನಾ ತಿಂದೆ, ಕಳ್ಳನ ತಲೆಯ ಕುಟ್ಟಿ, ಎನ್ನದು ಕೊಯಿದುಕೊಳ್ಳಿಯೆಂದಳು, ಅರ್ಕೇಶ್ವರಲಿಂಗವ ಬಲ್ಲಡೆ.
--------------
ಮಧುವಯ್ಯ
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ. ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ. ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ. ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ. ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ ? ಚೆನ್ನಮಲ್ಲಿಕಾರ್ಜುನ, ಕಾಮನಕೊಂದು ಮನಸಿಜನಾಗುಳುಹಿದಡೆ ಮನಸಿಜನ ತಲೆಯ ಬರಹವ ತೊಡೆದೆನು.
--------------
ಅಕ್ಕಮಹಾದೇವಿ
ಕೆಲ ಜೀವದ ಒಲವು ತಲೆಯ ಕಡಿದು ಬೇರೆ ಮಾಡಿದಲ್ಲಿ ಆಡುತ್ತದೆ ಅಂಗ; ಮತ್ತೆ ನರಜೀವದ ಒಲವು ರುಜೆಯಡಸಿ ಪ್ರಾಣ ಬಿಟ್ಟಾಗ ಅಡಿ ಕರವಾದದ ಪರಿಯ ನೋಡಾ! ಘಟ ಜೀವವೊಂದೆಂಬರು ಅಸು ಬೇರಾಗಿದೆ. ಇದರ ಹುಸಿ ಕವಲ ಹೇಳಾ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹಾರುವ ಹಕ್ಕಿಯ ತಲೆಯ, ಕುಳಿತಿದ ಗೂಗೆ ನುಂಗಿತ್ತು, ಕುಳಿತಿದ ಗೂಗೆಯ ಕಣ್ಣ, ಕಾಗೆಯ ಮರಿ ಕುಡುಕಿತ್ತು. ಕಾಗೆಯ ಮರಿಯ, ಕೋಗಿಲ ಕಂಡು, ಅದ ಬೇಡಾ ಎಂದಡೆ, ಗಿಳಿ ಹಾಗಹುದೆಂದು ಹಾರಿ ಹೋಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು ಘಟಪಂಜರವನೊಲ್ಲದೆ.
--------------
ಸಗರದ ಬೊಮ್ಮಣ್ಣ
ಇನ್ನಷ್ಟು ... -->