ಅಥವಾ

ಒಟ್ಟು 191 ಕಡೆಗಳಲ್ಲಿ , 48 ವಚನಕಾರರು , 170 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವಂಚನೆಯೆ ಅನ್ಯಲಿಂಗಾರ್ಚನೆ. ಅದು ನಿಜವಲ್ಲ ನಿಜವಲ್ಲ, ಕೂಡಲಸಂಗಮದೇವನು ಮನದಂತರ್ಯಾಮಿ ತಾನಾಗಿ.
--------------
ಬಸವಣ್ಣ
ತಾಮಸ ಸಂಬಂಧ ಕನಿಷ್ಠಂಗೆ ಹುಸಿ ಜಾಗ್ರದಿಟದಂತೆ ತೋರುಗು. ರಾಜನ ಸಂಬಂಧ ಮಧ್ಯಮಂಗೆ ಹುಸಿ ತೂರ್ಯ ದಿಟದಂತೆ ತೋರುಗು. ಸಾತ್ವಿಕ ಸಂಬಂಧ ಉತ್ತಮಂಗೆ ದಿಟ ತಾನೆ ತಾನಾಗಿ ನಿಜ ನಿತ್ಯವಾಗಿರ್ದುದು, ಸಂದೇಹವಿಲ್ಲ. ಇದು ಸಚ್ಚಿದಾನಂದ ನಿತ್ಯ ಪರಿಪೂರ್ಣ ತೂರ್ಯಾತೀತವಪ್ಪ ತತ್ತ್ವ ಇಂತುಂಟೆಂದು ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಗಾಳಿ ಗಂಧವನಪ್ಪಿದಂತೆ, ಬಯಲು ಬಯಲನಪ್ಪಿದಂತೆ, ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ, ಶರಣ ಲಿಂಗವನಪ್ಪಿ, ಮಹಾಲಿಂಗವೇ ತಾನು ತಾನಾಗಿ, ನಿರ್ವಯಲಾದನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಮಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಶಿಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ವಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಯಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಇಂತು ಪಂಚಾಕ್ಷರದ ನೆಲೆಯ ಮೇಲೆ ಓಂಕಾರವ ನೋಡಲು ಗುರುನಿರಂಜನ ಚನ್ನಬಸವಲಿಂಗಾ ತಾನಾಗಿ ಕಾಣಿಸಿಕೊಳ್ಳುತಿರ್ದ ಶರಣನು.
--------------
ದೇಶಿಕೇಂದ್ರ ಸಂಗನಬಸವಯ್ಯ
ದುಃಖ ಹೊಯಿತ್ತು ತನ್ನಲ್ಲಿ ತಾನಿಲ್ಲದೇ. ಸುಖ ನಿಂದುದು ತನ್ನಲ್ಲಿ ತಾನು ನಿಜವಾಗಿ, ಭ್ರಾಂತುದೋರದೆ, ಸಕಳೇಶ್ವರದೇವಾ ತಾನಾಗಿ ನಿಂದವಂಗೆ.
--------------
ಸಕಳೇಶ ಮಾದರಸ
ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು, ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ, ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ. ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ, ಮೆಚ್ಚುವರೆ ಪ್ರಾಣಲಿಂಗಿಸಂಬಂದ್ಥಿಗಳು. ಉಂಡವನು ಉಂಡಂತೆ ತೇಗುವ ಸಂದಳಿದು, ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ, ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ, ಭಾವನೆಗೆ ಬಂದವರಾರೆಂದು ವಿಚಾರಿಸಿ, ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ, ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ.
--------------
ಮೋಳಿಗೆ ಮಾರಯ್ಯ
ನುಡಿವನಯ್ಯಾ ಶರಣನು ತನ್ನಡಿಗೆರಗಿ ನಿಂದ ನಿರ್ಮಲರಿಗೊಲಿದು. ನುಡಿವನಯ್ಯಾ ಶರಣನು ಭಕ್ತಿತ್ರಯದ ಯುಕ್ತರ ಕೂಡಿ. ನುಡಿವನಯ್ಯಾ ಶರಣನು ಮಹಾನುಭಾವರ ಪ್ರಸಂಗಕ್ಕೆ ಅಭಿನ್ನಮುಖದಿಂದೆ. ನುಡಿವನಯ್ಯಾ ಶರಣನು ಗುರುನಿರಂಜನ ಚನ್ನಬಸವಲಿಂಗ ತಾನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೋಣನೊಂದು ಕುದುರೆಯ ನುಂಗಿತ್ತು. ಇರುಹೆ ಒಂದಾನೆಯ ನುಂಗಿತ್ತು. ಬಲ್ಲುಕನನಲ್ಲವೆನಿಸಿತ್ತು, [ಕ]ಟ್ಟಿದ ಪಕ್ಷಿ ನೆರೆ ಪಾರಿತ್ತು ಗಗನಕ್ಕೆ. ಚಿದಾಕಾಶವೆ ತಾನಾಗಿ, ಬಿಂದ್ವಾಕಾಶವನೊಡೆಯಿತ್ತು. ದೃಷ್ಟಾಕಾಶವ ನಷ್ಟಂಗೈಯಿತ್ತು, ಬ್ಥಿನ್ನಾಕಾಶವನೊಡಗೂಡಿತ್ತು, ಮಹದಾಕಾಶವನೊಳಕೊಂಡಿತ್ತು. ಸೌರಾಷ್ಟ್ರ ಸೋಮೇಶ್ವರನೆಂಬ ನಿಜದಾಕಾಶದಲ್ಲಿ ನಿಂದು ನಾಮರೂಪು ನಷ್ಟವಾಯಿತ್ತು.
--------------
ಆದಯ್ಯ
ಅತಿಶಯವನತಿಗಳೆದು ನಿರತಿಶಯ ಸುಖದೊಳಗೆ ಪರಮಸುಖಿಯಾಗಿಪ್ಪವರಾರು ಹೇಳಾ ? ನಿಜದ ನಿರ್ಣಯವನರಿದು ಭಜನೆ ಭಾವನೆಯಳಿದು ತ್ರಿಜಗಪತಿಯಾಗಿಪ್ಪವರಾರು ಹೇಳಾ ? ಕೋಡಗದ ಮನದೊಳಗೆ ಮನವಿರಹಿತನಾಗಿ ಗಮನಗೆಡದಿಪ್ಪರಿನ್ನಾರು ಹೇಳಾ ? ಹಗೆಯಲ್ಲಿ ಹೊಕ್ಕು ಹಗೆಯಳಿದು ಸುಖಿಯಾಗಿ ತನಗೆ ತಾ ಕೆಳೆಯಾಗಿಪ್ಪರಾರು ಹೇಳಾ ? ಒಳಹೊರಗೆ ಸರ್ವಾಂಗ ಲಿಂಗವೆ ತಾನಾಗಿ ಇರಬಲ್ಲ ಪರಮಾರ್ಥರಾರು ಹೇಳಾ ? ಕಲಿದೇವಾ, ನಿಮ್ಮ ಶರಣ ಚೆನ್ನಬಸವಣ್ಣನ ನಿಲವನರಿದು, ಶರಣೆಂದು ನಾನು ಸುಖಿಯಾದೆನು.
--------------
ಮಡಿವಾಳ ಮಾಚಿದೇವ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾದ್ಥಿ ಎಂದು ಈಯೆಂಟು ಅಷ್ಟಾಂಗಯೋಗಂಗಳು. ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು ಎರಡು ಪ್ರಕಾರವಾಗಿಹವು. ಯಮಾದಿ ಪಂಚಕವೈದು ಪೂರ್ವಯೋಗ; ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗ. ಇವಕ್ಕೆ ವಿವರ: ಇನ್ನು ಯಮಯೋಗ ಅದಕ್ಕೆ ವಿವರ: ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ ಇಂತಿವೈದನು ಬಿಟ್ಟು ಲಿಂಗಪೂಜೆಯ ಮಾಡುವುದೀಗ ಯಮಯೋಗ. ಇನ್ನು ನಿಯಮಯೋಗ- ಅದಕ್ಕೆ ವಿವರ: ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ ಆಗಮಧರ್ಮಂಗಳಲ್ಲಿ ನಡೆವವನು. ಶಿವನಿಂದೆಯ ಕೇಳದಿಹನು. ಇಂದ್ರಿಯಂಗಳ ನಿಗ್ರಹವ ಮಾಡುವವನು. ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು. ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಬ್ಥೀತನಾಗಿಹನು. ಇದು ನಿಯಮಯೋಗ. ಇನ್ನು ಆಸನಯೋಗ- ಅದಕ್ಕೆ ವಿವರ: ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ, ಪರ್ಯಂಕಾಸನ ಈ ಐದು ಆಸನಯೋಗಂಗಳಲ್ಲಿ ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ. ಇನ್ನು ಪ್ರಾಣಾಯಾಮ- ಅದಕ್ಕೆ ವಿವರ: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು. ಇವಕ್ಕೆ ವಿವರ: ಪ್ರಾಣವಾಯು ಇಂದ್ರ ನೀಲವರ್ಣ. ಹೃದಯಸ್ಥಾನದಲ್ಲಿರ್ದ ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು ಅನ್ನ ಜೀರ್ಣೀಕರಣವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ. ಗುಧಸ್ಥಾನದಲ್ಲಿರ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಆಧೋದ್ವಾರಮಂ ಬಲಿದು ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷಿರವರ್ಣ. ಸರ್ವಸಂದಿಗಳಲ್ಲಿರ್ದು ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯ ಎಳೆಮಿಂಚಿನವರ್ಣ. ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ ಛರ್ದಿ ನಿರೋಧನಂಗಳಂ ಮಾಡಿ ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು. ಸಮಾನವಾಯು ನೀಲವರ್ಣ. ನಾಬ್ಥಿಸ್ಥಾನದಲ್ಲಿರ್ದು ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ ಅನ್ನರಸವನು ಎಲ್ಲಾ[ಲೋ] ಮನಾಳಂಗಳಿಗೆ ಹಂಚಿಕ್ಕುವುದು. ಈ ಐದು ಪ್ರಾಣಪಂಚಕ. ಇನ್ನು ನಾಗವಾಯು ಪೀತವರ್ಣ. [ಲೋ] ಮನಾಳಂಗಳಲ್ಲಿರ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂಮವಾಯುವ ಶ್ವೇತವರ್ಣ. ಉದರ ಲಲಾಟದಲ್ಲಿರ್ದು ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ. ನಾಸಿಕಾಗ್ರದಲ್ಲಿರ್ದು ಕ್ಷುಧಾದಿ ಧರ್ಮಂಗಳಂ ನೆಗಳೆ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ. ಗುಹ್ಯ[ಕಟಿ] ಸ್ಥಾನದಲ್ಲಿರ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು. ಧನಂಜಯವಾಯು ನೀಲವರ್ಣ. ಬ್ರಹ್ಮರಂಧ್ರದಲ್ಲಿರ್ದು ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ ಮರಣಗಾಲಕ್ಕೆ ನಿರ್ಘೋಷಮಪ್ಪುದು. ಈ ಪ್ರಕಾರದಲ್ಲಿ ಮೂಲವಾಯುವೊಂದೇ ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು. ಆ ಪವನದೊಡನೆ ಪ್ರಾಣ ಕೂಡಿ ಪ್ರಾಣದೊಡನೆ ಪವನ ಕೂಡಿ ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳಮೇಲೆ ಸುಳಿದು ನವನಾಳಂಗಳೊಳಗೆ ಚರಿಸುತ್ತಿಹುದು. ಅಷ್ಟದಳಂಗಳೇ ಆಶ್ರಯವಾಗಿ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ ಅಲ್ಲಿಂದ ನಾಸಿಕಾಗ್ರದಲ್ಲಿ ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು; ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು. ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು. ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ ರೇಚಕ ಪೂರಕಂಗಳ ಭೇದವನರಿದು ಮನ ಪವನಂಗಳ ಮೇಲೆ ಲಿಂಗವ ಸಂಬಂದ್ಥಿಸಿ ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ ಲಿಂಗ ಸ್ವರೂಪವ ಮಾಡಿ ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ. ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ: ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು, ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ. ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ ಜೀವಂಗೆ ಭವ ಭವದ ಬಂಧನವನೊಡಗೂಡಿ ಆಯಸಂ ಬಡುತ್ತಿಪ್ಪರಜ್ಞ್ಞಾನ ಕರ್ಮಿಗಳು; ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು. ಅದರಿಂದಲಾಹಾರಮಂ ಕ್ರಮ ಕ್ರಮದಿಂದ ಉದರಕ್ಕೆ ಹವಣಿಸುತ್ತ ಬಹುದು. ಗುರು ಕೃಪೆಯಿಂದ ಈ ಪ್ರಕಾರದಲ್ಲಿ ಸರ್ವೇಂದ್ರಿಯಂಗಳನು ಲಿಂಗಮುಖದಿಂದ ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ. ಈ ಐದು ಪೂರ್ವಯೋಗಂಗಳು. ಇನ್ನು ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗಂಗಳು. ಇನ್ನು ಧ್ಯಾನಯೋಗ- ಅದಕ್ಕೆ ವಿವರ: ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ ಶಿವಲಿಂಗ ಸ್ವರೂಪವ ಮಾಡಿ ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ ಆ ಕರಸ್ಥಲದಲ್ಲಿದ್ದ ಶಿವಲಿಂಗವೇ ಪರಮಾರ್ಥಚಿಹ್ನವೆಂದರಿದು ಆ ಲಿಂಗವನೇ ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ ಆ ಶಿವಲಿಂಗಮೂರ್ತಿಯನೆ ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ. ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ. ಆ ಸತ್ಕಿ ್ರಯಾ ಜ್ಞಾನಯೋಗದಿಂದ ಪ್ರಾಣಂಗೆ ಶಿವಕಳೆಯ ಸಂಬಂದ್ಥಿಸಿ ಇಷ್ಟ, ಪ್ರಾಣ, ಭಾವವೆಂಬ ಲಿಂಗತ್ರಯವನು ಏಕಾಕಾರವ ಮಾಡಿ ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ ಮಹಾಲಿಂಗದೊಳಗೆ ಸಂಯೋಗವಾಗಿ ಬ್ಥಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾದ್ಥಿಯೋಗ. ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ. ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು- ಅವಾವವೆಂದಡೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ ಈ ಐದು ಕರ್ಮಯೋಗಂಗಳು. ಅವರು ಲಕ್ಷಿಸುವಂಥಾ ವಸ್ತುಗಳು ಉತ್ತರಯೋಗವಾಗಿ ಮೂರು ತೆರ. ಅವಾವವೆಂದಡೆ: ನಾದಲಕ್ಷ ್ಯ, ಬಿಂದುಲಕ್ಷ ್ಯ, ಕಲಾಲಕ್ಷ ್ಯವೆಂದು ಮೂರು ತೆರ. ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು. ಬಿಂದುವೇ ಆಕಾರ, ಉಕಾರ, ಮಕಾರ, ಈ ಮೂರು ಶುದ್ಧಬಿಂದು ಸಂಬಂಧವೆಂದೂ. ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ ಲಕ್ಷಿಸುವರು. ಕಲೆಯೇ ಚಂದ್ರನ ಕಲೆಯ ಹಾಂಗೆ, ಸೂರ್ಯನ ಕಿರಣಂಗಳ ಹಾಂಗೆ, ಮಿಂಚುಗಳ ಪ್ರಕಾಶದ ಹಾಂಗೆ, ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ, ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷ ್ಯ. ಈ ಎಂಟು ಇತರ ಮತದವರು ಮಾಡುವ ಯೋಗಂಗಳು. ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು. ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ. ಅದುಕಾರಣ ಇವ ಮುಟ್ಟಲಾಗದು. ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ: ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ ಭಾವ, ಮನ, ಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದನಾಗಿ ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ, ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ, ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ, ಒಂದೇ ವಸ್ತು ತನು, ಮನ, ಭಾವಂಗಳಲ್ಲಿ ಇಷ್ಟ, ಪ್ರಾಣ, ಭಾವವಾದ ಭೇದವನರಿದು ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ ಲಿಂಗವೇ ತಾನು ತಾನಾಗಿ ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತತ್ವಮಸಿಯೊಳಗೆ ನಿತ್ಯ ಹೊಕ್ಕಿಪ್ಪುದನು ಮತ್ತೆ ಶೂನ್ಯಾಂಗರಿಗೆ ಅರಿಯಲಹುದೆ? ಕಡಲ ಒಳಗಿಹ ಕಿಚ್ಚು ಕಡಲ ಸುಡದಿಹ ಭೇದ ಒಡಗೂಡಿದಾ ಭೇದ, ಶರಣರಿಗಾ ಕಡಲ ದಾಂಟಿಯೆ ನಿಂದು ತಡಿಯೊಳಗೆ ತಾ ಮಿಂದು ಒಡಗೂಡಿದನು ಶುದ್ಧಧವಳಾಂಗನ ಹಲವು ಚಿತ್ತವು ಬಿಟ್ಟು ಗುರುವಿನ ಅನುಮತ ಅನುಮಿಷಂಗದ ಭೇದವರಿದು ತನುತ್ರಯದ ಮಲತ್ರಯದ ಅನುಭೇದವನು ಸುಟ್ಟು, ತನುಜ್ಞಾನಿ ಸಂಬಂದ್ಥಿಲಿಂಗ ಮೂರರೊಳಗೆ ಅಂಗಸುಖವನೆ ಬಿಟ್ಟು ಲಿಂಗಸುಖಿ ತಾನಾಗಿ ಮಂಗಳಾಂಗನಾ ಕಪಿಲಸಿದ್ಧಮಲ್ಲೇಶ್ವರ.
--------------
ಸಿದ್ಧರಾಮೇಶ್ವರ
ಹಿಡಿದ ವ್ರತವ ಬಿಡುವವನಲ್ಲ, ಲಿಂಗವಲ್ಲದನ್ಯವನೊಲ್ಲ, ಅನ್ಯದೈವಕ್ಕೆರಗ, ಮತ್ರ್ಯದ ಮನುಜರ ಮನ್ನಿಸ, ಪರಸತಿ ಪರದ್ರವ್ಯವ ಮುಟ್ಟ, ಕೊಟ್ಟಡೆ ಕೈಕೊಳ್ಳ, ಲಿಂಗನಿಷ್ಠಾಭಕ್ತಿಯ ಹಿಂಗ, ಕೊಲಬಾರದ ಅರಿಗಳ ಗೆಲುವ ಕಲಿ ತಾನಾಗಿ ಅದೆಂತೆಂದೊಡೆ: ಪರಸ್ತ್ರಿಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ ಲಿಂಗನಿಷ್ಠಾ ನಿಯುಕ್ತಾತ್ಮಾ ಮಾಹೇಶ್ವರ ಇತಿ ಸ್ಮೃತಃ ಎಂದುದಾಗಿ, ಜೀವಭಾವ ಹಿಂಗಿ, ಶಿವಭಾವದಿಂ ಜೀವಿಸಿಪ್ಪನಯ್ಯಾ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಮಾಹೇಶ್ವರನು.
--------------
ಆದಯ್ಯ
ಪಂಚಮೂರ್ತಿಯನೊಳಕೊಂಡಿರ್ದ ಪ್ರಸಾದಮೂರ್ತಿಯ ಪಂಚವಿಧವ ಗರ್ಭೀಕರಿಸಿಕೊಂಡಿರ್ಪ ಬಯಲಾಂಗನು ತನ್ನಂತರಂಗದ ಅವಿರಳಬೆಳಗೆಂದರಿದು ಮನ ಭಾವ ಕರಣದೊಳಾವರಿಸಿ ನೆರೆದು ನಿತ್ಯ ಪರಮಪರಿಣಾಮಿಯಾಗಿರ್ದ ಗುರುನಿರಂಜನ ಚನ್ನಬಸವಲಿಂಗ ತಾನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯ, ಸತ್ತುಚಿತ್ತಾನಂದ ನಿತ್ಯ ಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪ ಪರಮಾರಾಧ್ಯ ವೀರಶೈವಾಚಾರ ಷಟ್ಸ್ಥಲ ಪ್ರತಿಪಾದಕ ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಅಂಗ-ಮನ-ಭಾವಗಳೆಲ್ಲ ಶುದ್ಧಸಿದ್ಧಪ್ರಸಿದ್ಧಪ್ರಸಾದದ ಸ್ವರೂಪವಾದ ಇಷ್ಟ ಪ್ರಾಣ ಭಾವಲಿಂಗವಾದ ಮೇಲೆ ಭೃಂಗ ಕೀಡಿಯೋಪಾದಿಯಲ್ಲಿ ಗುರುಲಿಂಗಜಂಗಮ ಬೇರೆ, ನಾ ಬೇರೆಂಬ ಬ್ಥಿನ್ನಭೇದವನಳಿದು ಗುರುಮಾರ್ಗಾಚಾರದಲ್ಲಿ ಪ್ರೇಮವುಳ್ಳಾತನಾಗಿ ಜ್ಞಾತೃ-ಜ್ಞಾನ-ಜ್ಞೇಯವೆಂಬ ಅಷ್ಟಾಂಗಯೋಗಭ್ರಮಿತರ ಜಡಕರ್ಮ ಶೈವಮಾರ್ಗದಲ್ಲಿ ಸಾಕ್ಷಾತ್ ಶಿವನೆ ಇಷ್ಟಲಿಂಗಧಾರಕನಾಗಿ, ಗುರುರೂಪ ಧರಿಸಿ, ಶಿವಭಕ್ತಮಾರ್ಗವ ತೋರದೆ ಇಚ್ಛೆಯ ನುಡಿದು, ಉದರವ ಹೊರೆವ ವೇಷವ ಕಂಡು, ಶರಣೆಂದು ಮನ್ನಣೆಯ ಕೊಡದೆ, ಭೂತಸೋಂಕಿದ ಮನುಜನೋಪಾದಿಯಲ್ಲಿ ತನ್ನ ಪವಿತ್ರ ಸ್ವರೂಪ ಪರತತ್ವಮೂರ್ತಿಧ್ಯಾನದಿಂದ ಚಿದ್ಘನಲಿಂಗದೊಳಗೆ ತಾನಾಗಿ, ತನ್ನೊಳಗೆ ಚಿದ್ಘನಲಿಂಗವಾಗಿ, ಸಪ್ತಧಾತು, ಸಪ್ತವ್ಯಸನಂಗಳಲ್ಲಿ ಕೂಡದೆ ಲಿಂಗವೆ ತಾನಾದ ಸ್ವಸ್ವರೂಪು ನಿಲುಕಡೆಯ ಲಿಂಗನಿಷ್ಠದೀಕ್ಷೆ. ಇಂತುಟೆಂದು ಶ್ರೀಗುರುಲಿಂಗಜಂಗಮಸ್ವರೂಪ ನಿಷ್ಕಳಂಕಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯಾ ಎನಗೆ ರುದ್ರಾಕ್ಷಿಯೇ ಪುಣ್ಯದ ಪುಂಜ ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಭಾಗ್ಯದ ನಿದ್ಥಿಯು ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಸತ್ಯದ ಸದನ ನೋಡಾ. ಏಕಭಾಜನಸ್ಥಲ, ಸಹಜಭೋಜನಸ್ಥಲಯೆಂಬ ಎಂಟು ಸ್ಥಲಂಗಳನ್ನು ಶೇಷಾಂಗಸ್ವರೂಪವಾದ ಶರಣ ಮಹದಂಗಸ್ವರೂಪವಾದೈಕ್ಯ ಯೋಗಾಂಗಸ್ಥಲವನೊಳಕೊಂಡು, ಜಂಗಮದಲ್ಲಿ ತಿಳಿದು, ಆ ಜಂಗಮವ ಪರಿಪೂರ್ಣಜ್ಞಾನಾನುಭಾವದಲ್ಲಿ ಕಂಡು, ಆ ಪರಿಪೂರ್ಣಜ್ಞಾನಾನುಭಾವವನೆ ಮಹಾಜ್ಞಾನಮಂಡಲಂಗಳಲ್ಲಿ ತರಹರವಾಗಿ, ಅಲ್ಲಿಂದ ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ, ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ, ಕೊಂಡುದು ಪ್ರಸಾದಿಸ್ಥಲ, ನಿಂದುದು ಓಗರಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ಹದಿನೆಂಟುಸ್ಥಲಂಗಳನ್ನು ಮೂವತ್ತಾರು ಸಕೀಲಂಗಳನೊಳಕೊಂಡು ಪರಿಶೋಬ್ಥಿಸುವಂಥ ಮಹಾಲಿಂಗ. ಜ್ಞಾನಶೂನ್ಯಸ್ಥಲವನೊಳಕೊಂಡು, ನಿರಂಜನಲಿಂಗದಲ್ಲಿ ತಿಳಿದು, ಆ ನಿರಂಜನಬ್ರಹ್ಮವೇ ತಾನೇ ತಾನಾಗಿ, ಮೂವತ್ತಾರು ಚಿತ್ಪಾದೋದಕಪ್ರಸಾದಪ್ರಣಮಂಗಳೆಂಬ ಮೂಲಮಂತ್ರಸ್ವರೂಪನಾಗಿ ವಿರಾಜಿಸುವಾತನೆ ಪರಿಪೂರ್ಣಾನುಭಾವಜಂಗಮಭಕ್ತನಾದ ನಿರವಯಮೂರ್ತಿಯಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->