ಅಥವಾ

ಒಟ್ಟು 33 ಕಡೆಗಳಲ್ಲಿ , 18 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿ ತೆಂಗಿನ ಮರದಲ್ಲಿ ಏರಿತ್ತೊ ? ಅಲ್ಲಾ, ಬೇರೊಂದು ಮಂತ್ರದಲ್ಲಿ ತುಂಬಿತ್ತೊ ? ಅಲ್ಲಾ ವೃಕ್ಷದ ಸಹಜ ಬೀಜವೊ ? ನೀರು ಬಲಿದು ಅದರೊಳಗೆ ಅರತು, ಆ ಸಾರವೆ ಕಾಯಾದಲ್ಲಿ, ಆ ಕಾಯ ತುಷಾರ ಹಿಂಗಿ, ನೆರೆ ಬಲಿತು, ಹಣ್ಣು ಎಣೆಯಾದಲ್ಲಿ, ನೀರೆಲ್ಲಿ ಅಡಗಿತ್ತು? ಹಿಪ್ಪೆ, ಕವಚವೆಲ್ಲಿದ್ದಿತ್ತು ? ಇಂತೀ ಕಾಯ ಆತ್ಮ ಮೇಲೆಂದರಿವೆಂಬ ಕುರುಹೆಲ್ಲಿದ್ದಿತ್ತು ?, ಎಂಬುದನರಿವುದಕ್ಕೆ ಪುರಾಣವ ಪೋಷಿಸಿಕೊಳ್ಳಿ, ಶಾಸ್ತ್ರವ ಸಂದಣಿಸಿಕೊಳ್ಳಿ, ವೇದದ ಆದ್ಯಂತವ ಸಾದ್ಥಿಸಿಕೊಳ್ಳಿ, ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡುಕೊಳ್ಳಿ, ಇಂತೀ ಚಿದಾತ್ಮನು ಬಂಧಮೋಕ್ಷಕರ್ಮಂಗಳಲ್ಲಿ ದ್ವಂದಿತನೋ ? ಆ ಅಂಗಭಾವ ವಿರಹಿತನೋ ? ಈ ಉಭಯದ ಸಂದೇಹವುಳ್ಳನ್ನಕ್ಕ ಕರ್ಮವ ಮಾಡುವಂಗೆ, ನಿರ್ಮಲವೊಂದುಂಟೆಂದು ಅರಿವಂಗೆ, ಇಂತೀ ಭೇದಂಗಳನರಿತು, ನಿರವಯದ ಸಮ್ಮಾನದ ಸುಖಿಯಾದೆನೆಂಬವಂಗೆ, ಅದು ಬ್ಥಿನ್ನರೂಪೋ, ಅಬ್ಥಿನ್ನರೂಪೋ ? ಆ ನಿಜದ ನೆಲೆಯ ನೀವೇ ಬಲ್ಲಿರಿ. ಕಾಮಧೂಮ ಧೂಳೇಶ್ವರನಲ್ಲಿ ಕಾಳಿಕೆ ಹಿಂಗಿದ ಕಣ್ಣಿನವಂಗಲ್ಲದೆ ಕಾಣಬಾರದು.
--------------
ಮಾದಾರ ಧೂಳಯ್ಯ
ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು, ಶಬ್ದದಲ್ಲಿ ಸಂಚಾರಲಕ್ಷಣವನರಿತು, ರೂಪಿನಲ್ಲಿ ಚಿತ್ರವಿ ಚಿತ್ರವಪ್ಪ ಲಕ್ಷಣವ ಲಕ್ಷಿಸಿ, ಗಂಧದಲ್ಲಿ ಸುಗುಣ ದುರ್ಗಣವನರಿವುದು ಒಂದೆ ನಾಸಿಕವಪ್ಪುದಾಗಿ ಒಳಗಿರುವ ಸುಗುಣವ ಹೊರಗೆ ನೇತಿಗಳೆವ ದುರ್ಗಣ[ವು] ಮುಟ್ಟುವುದಕ್ಕೆ ಮುನ್ನವೇ ಅರಿಯಬೇಕು. ಅರಿಯದೆ ಸೋಂಕಿದಲ್ಲಿ ಅರ್ಪಿತವಲ್ಲಾ ಎಂದು, ಅರಿದು ಸೋಂಕಿದಲ್ಲಿ ಅರ್ಪಿತವೆಂದು ಕುರುಹಿಟ್ಟುಕೊಂಡು ಇಪ್ಪ ಅರಿವು ಒಂದೊ, ಎರಡೊ ಎಂಬುದನರಿದು ರಸದಲ್ಲಿ ಮಧುರ, ಕಹಿ, ಖಾರ, ಲವಣಾಮ್ರ ಮುಂತಾದವನರಿವ ನಾಲಗೆ ಒಂದೊ? ಐದೊ? ಇಂತೀ ಭೇದವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು ಸದ್ಯೋಜಾತಲಿಂಗದ ಜಿಹ್ವೆಯನರಿತು ಅರ್ಪಿಸಬೇಕು.
--------------
ಅವಸರದ ರೇಕಣ್ಣ
ನಾನಾ ವ್ರತದ ಭಾವಂಗಳುಂಟು. ಲಕ್ಷಕ್ಕೆ ಇಕ್ಕಿಹೆನೆಂಬ ಕೃತ್ಯದವರುಂಟು. ಬಂದಡೆ ಮುಯ್ಯಾಂತು ಬಾರದಿದ್ದಡೆ ಭಕ್ತರು ಜಂಗಮವ ಆರನೂ ಕರೆಯೆನೆಂಬ ಕಟ್ಟಳೆಯವರುಂಟು. ತಮ್ಮ ಕೃತ್ಯವಲ್ಲದೆ ಮತ್ತೆ ಬಂದಡೆ ಕತ್ತಹಿಡಿದು ನೂಕುವರುಂಟು. ಗುರುಲಿಂಗಜಂಗಮದಲ್ಲಿ ತಪ್ಪಕಂಡಡೆ ಒಪ್ಪುವರುಂಟು. ಮೀರಿ ತಪ್ಪಿದಡೆ ಅರೆಯಟ್ಟಿ ಅಪ್ಪಳಿಸುವರುಂಟು. ಇಂತೀ ಶೀಲವೆಲ್ಲವು ನಾವು ಮಾಡಿಕೊಂಡ ಕೃತ್ಯದ ಭಾವಕೃತ್ಯ. ತಪ್ಪಿದಲ್ಲಿ ದೃಷ್ಟವ ಕಂಡು ಶರಣರೆಲ್ಲರು ಕೂಡಿ ತಪ್ಪ ಹೊರಿಸಿದ ಮತ್ತೆ ಆ ವ್ರತವನೊಪ್ಪಬಹುದೆ ! ಕೊಪ್ಪರಿಗೆಯಲ್ಲಿ ನೀರ ಹೊಯಿದು ಅಪೇಯವ ಅಪ್ಪುವಿನಲ್ಲಿ ಕದಡಿ ಅಶುದ್ಧ ಒಪ್ಪವಿಲ್ಲವೆಂದು ಮತ್ತೆ ಕುಡಿಯಬಹುದೆ? ತಪ್ಪದ ನೇಮವನೊಪ್ಪಿ ತಪ್ಪ ಕಂಡಲ್ಲಿ ಬಿಟ್ಟು ಇಂತೀ ಉಭಯಕ್ಕೆ ತಪ್ಪದ ಗುರು ವ್ರತಾಚಾರಕ್ಕೆ ಕರ್ತನಾಗಿರಬೇಕು. ಇಂತೀ ಕಷ್ಟವ ಕಂಡು ದ್ರವ್ಯದಾಸೆಗೆ ಒಪ್ಪಿದನಾದಡೆ ಅವನೂಟ ಸತ್ತನಾಯಮಾಂಸ. ನಾ ತಪ್ಪಿ ನುಡಿದೆನಾದಡೆ ಎನಗೆ ಎಕ್ಕಲನರಕ. ನಾ ಕತ್ತಲೆಯೊಳಗಿದ್ದು ಅಂಜಿ ಇತ್ತ ಬಾ ಎಂಬವನಲ್ಲ. ವ್ರತ ತಪ್ಪಿದವರಿಗೆ ನಾ ಕಟ್ಟಿದ ತೊಡರು. ಎನ್ನ ಪಿಡಿದಡೆ ಕಾದುವೆ, ಕೇಳಿದಡೆ ಪೇಳುವೆ. ಎನ್ನಾಶ್ರಯದ ಮಕ್ಷಿಕ ಮೂಷಕ ಮಾರ್ಜಾಲ ಗೋ ಮುಂತಾದ ದೃಷ್ಟದಲ್ಲಿ ಕಾಂಬ ಚೇತನಕ್ಕೆಲ್ಲಕ್ಕೂ ಎನ್ನ ವ್ರತದ ಕಟ್ಟು. ಇದಕ್ಕೆ ತಪ್ಪಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎಚ್ಚತ್ತು ಬದುಕು.
--------------
ಅಕ್ಕಮ್ಮ
ನಾನು ನಿನಗೆ ತಂಗಿಯ ಕೊಟ್ಟು ನೀನೆನೆಗೆ ಮೈದುನನಾದೆ. ನಾನು ನಿನಗೆ ಅಕ್ಕನ ಕೊಟ್ಟು ನೀನೆನಗೆ ಭಾವನಾದೆ. ನಾನು ನೀನೂ ಏನಹರೆಂಬುದ ತಿಳಿದು ಅಣ್ಣನಿಗೆ ತಂಗಿ, ಅಕ್ಕನಿಗೆ ತಮ್ಮ ಇವರಿಬ್ಬರೂ ದೃಷ್ಟದಲ್ಲಿ ಒಡಹುಟ್ಟಿದರಾದ ಮತ್ತೆ ತಂಗಿಯ ಮಗಳು ಸೊಸೆಯಾಗಿ, ಅಕ್ಕನ ಮಗ ಅಳಿಯನಾದ ಚಿತ್ರವ ನೋಡಾ! ಒಂದು ಯೋನಿಯಲ್ಲಿ ಬಂದುದನರಿಯದೆ, ನಿನ್ನ ಒಡಹುಟ್ಟಿದ [ವ]ಳಿಗೆ ನೀ ಗಂಡನಾಗಿ, ಎನಗೆ ನೀ ಭಾವನಾದ ಪರಿಯ ನೋಡಿ ನಾಚಿಸಬಂದೆ. ಕಲಕೇತನಲ್ಲಿ ಕೊಳುಕೊಡೆ ಬೇಡ ಮೇಖಲೇಶ್ವರಲಿಂಗದ ಹೊಲಬ ತಿಳಿಯಬಲ್ಲಡೆ.
--------------
ಕಲಕೇತಯ್ಯ
ಮರ್ಕಟನ ಉಚಿತ, ವಿಹಂಗನ ಪವನ, ಪಿಪೀಲಿಕನ ಧ್ಯಾನ, ತ್ರಿವಿಧಾತ್ಮನ ಭೇದ, ಸ್ಥೂಲದ ವಿವರ, ಸೂಕ್ಷ ್ಮದ ಸುಳುಹ, ಕಾರಣದ ಚೋದ್ಯ. ಇಂತೀ ತ್ರಿವಿಧ ವಿವರಂಗಳಲ್ಲಿ ತತ್ವಮಸಿ ಎಂಬ ಭಿತ್ತಿಯ ವಿಚಾರಿಸಿ ಶ್ರುತದಲ್ಲಿ ಕೇಳದುದ ದೃಷ್ಟದಲ್ಲಿ ಕಂಡುದ ಅನುಮಾನದಲ್ಲಿ ಅರಿದುದ ಭಿನ್ನವಿಲ್ಲದೆ ಚಿನ್ಮಯಮೂರ್ತಿ ತಾನಾಗಿ ಕರ್ಮಕ್ರೀಯಲ್ಲಿಯೆ ಲೋಪ. ಶಂಭುವಿನಿಂದಿತ್ತ ಸ್ರಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 69 ||
--------------
ದಾಸೋಹದ ಸಂಗಣ್ಣ
ಅರ್ಚನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು. ಪೂಜನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು. ಇಂತೀ ಉಭಯದೊಳಗಾದ ಅಷ್ಟವಿಧಾರ್ಚನೆ, ಷೋಡಶೋಪಚಾರಕ್ಕೊಳಗಾಯಿತ್ತು ಲಿಂಗವೆಂಬರು, ಇಲ್ಲ, ಇಂತೀ ನೇಮ ಹುಸಿ, ನಿಲ್ಲು. ಇಂತೀ ನೇಮಕ್ಕೆ ಒಳಗಾದಡೆ, ಇಷ್ಟಾರ್ಥ ಕಾಮ್ಯಾರ್ಥ ಮೋಕ್ಷಾರ್ಥ, ತನಗೆ ದೃಷ್ಟದಲ್ಲಿ ಆದುದಿಲ್ಲ. [ಇಹ]ದಲ್ಲಿ ಕಾಣದೆ, ಪರದಲ್ಲಿ ಕಂಡೆನೆಂಬುದು, ಹುಸಿ, ಸಾಕು ನಿಲ್ಲು. ಕುರುಹಿನಿಂದ ಕಾಬಡೆ, ತನ್ನಿಂದಲೋ, ಕುರುಹಿನಿಂದಲೋ ? ಅರಿವಿನಿಂದಲೋ, ಕುರುಹಿನಿಂದಲೋ ? ಕುರುಹಿನಿಂದಲರಿದೆಹೆನೆಂದಡೆ, ಆ ಅರಿವಿನಿಂದ ಬೇರೊಂದು ಕಂಡೆಹೆನೆಂದಡೆ, ಕಾಣಿಸಿಕೊಂಡುದು ನೀನೋ, ನಾನೋ ? ಇಂತುಭಯವೇನೆಂದರಿಯದಿಪ್ಪುದೆ ಬೆಳಗಿನ ಕಳೆಯ ಕಾಂತಿಯೊಳಗಣ ನಿಶ್ಚಯ ತಾನಾದ ಮತ್ತೆ ಏನೂ ಎನಲಿಲ್ಲ, ಅದು ತಾನೇ. ಅದು ತಾ[ನೇನೂ] ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋದೆಹೆನೆಂಬುದು ಕೈಕೂಲಿ. ಭಾಷೆಗೆ ತಪ್ಪಿ ಓಸರಿಸಿದ ಮತ್ತೆ ಅನಿಹಿತವ ಹೇಳಿದಲ್ಲಿ ಮತ್ತೆ ಘಾತಕತನದಿಂದ ಎಯ್ದಿಹೆನೆಂಬುದು ಭಕ್ತಿಗೆ ವಿಹಿತವಲ್ಲ. ದೃಷ್ಟದಲ್ಲಿ ಕೊಟ್ಟುದ ಲಕ್ಷಿಸಲರಿಯದೆ, ಅಲಕ್ಷ್ಯವ ಲಕ್ಷಿಸಿ ಕಾಂಬುದಕ್ಕೆ ಲಕ್ಷ್ಯವೇನು ? ಅದು ನಿರೀಕ್ಷಣೆಯ ಲಕ್ಷ್ಯದಿಂದಲ್ಲದೆ, ಆತ್ಮಂಗೆ ಲಕ್ಷ್ಯವಿಲ್ಲ. ಇಂತೀ ಉಭಯದಲ್ಲಿ ಲಕ್ಷಿತವಾದವಂಗೆ ಮರ್ತ್ಯ ಕೈಲಾಸವೆಂಬುದು; ತನ್ನರಿವು ನಿಶ್ಚಯವಾದಲ್ಲಿ ಅದೆ ಲಕ್ಷ್ಯ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಅಲ್ಲಿ ಇಲ್ಲಿ ಎಲ್ಲಿಯೂ ತಾನೆ.
--------------
ಮೋಳಿಗೆ ಮಹಾದೇವಿ
ಅನಲನೆಂಬ ಗಂಡಂಗೆ ತೃಣವೆಂಬ ಹೆಂಡತಿ ಮೋಹದಿಂದಪ್ಪಲಾಗಿ, ಬೇಯ್ದ[ಆಕೆಯ] ಕರಚರಣಾದಿಗಳು, ಆ ಗಂಡನಲ್ಲಿಯೆ ಒಪ್ಪವಿಟ್ಟಂತಿರಬೇಕು. ಇಂತಪ್ಪ ಇಷ್ಟಲಿಂಗವ ದೃಷ್ಟದಲ್ಲಿ ಹಿಡಿದುದಕ್ಕೆ ಇದೇ ದೃಷ್ಟ. ಹೀಂಗಲ್ಲದೆ ಲೌಕಿಕಾರ್ಚನೆಯ ಮಾಡುವ ಪೂಜಕರ ಮೆಚ್ಚೆನೆಂದ, ನಚ್ಚಿನಗ್ಫಣಿಯ ಮಜ್ಜನದೊಡೆಯ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವ್ರತಾಚಾರವ ಅವಧರಿಸಿದ ಭಕ್ತಂಗೆ ಕತ್ತಿ ಕೋಲು ಅಂಬು ಕಠಾರಿ ಈಟಿ ಕೊಡಲಿ ಮತ್ತಾವ ಕುತ್ತುವ ಕೊರವ ಹಾಕುವ, ಗಾಣ ಮುಂತಾಗಿ ದೃಷ್ಟದಲ್ಲಿ ಕೊಲುವ ಕೈದ ಮಾಡುತ್ತ, ಮತ್ತೆ ಅವ ವ್ರತಿಯೆಂದಡೆ ಮೆಚ್ಚುವರೆ ಪರಮಶಿವೈಕ್ಯರು ಇಂತಿವ ಶ್ರುತದಲ್ಲಿ ಕೇಳಲಿಲ್ಲ, ದೃಷ್ಟದಲ್ಲಿ ಕಾಣಲಿಲ್ಲ, ಅನುಮಾನದಲ್ಲಿ ಅರಿಯಲಿಲ್ಲ. ಸ್ವಪ್ನದಲ್ಲಿ ಕಂಡಡೆ ಎನ್ನ ವ್ರತಕ್ಕದೇ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಒಲ್ಲೆನು.
--------------
ಅಕ್ಕಮ್ಮ
ಮಹಿಮೆ ರುದ್ರನ ಹಂಗು, ಧ್ಯಾನ ಈಶ್ವರನ ಹಂಗು, ಜ್ಞಾನ ಸದಾಶಿವನ ಹಂಗು. ಇಂತೀ ಒಂದರ ಹಂಗಿನಲ್ಲಿ ಒಂದನರಿದು ಒಂದ ಕಾಣಿಸಿಕೊಂಡು, ಒಂದ ನಿಧಾನಿಸಿಕೊಂಡು ಒಂದರಲ್ಲಿ ಹೆರೆಹಿಂಗದೆ ನಿಂದುದು ತ್ರಿವಿಧ ಸಂಗದ ಸಗುಣ ಇಂತೀ ತ್ರಿವಿಧವನೊಂದುಗೂಡಿ ಕರ್ಪೂರದ ಸುವಾಸನೆ ಕಿಚ್ಚಿನ ತಪ್ಪಲಲ್ಲಿಯೇ ನಷ್ಟವಾದಂತೆ. ಇಂತೀ ತಾ ದೃಷ್ಟದಲ್ಲಿ ಲಕ್ಷಿಸಿ ಅಲಕ್ಷ ್ಯವಾದುದು ಕೂಗಿನ ಹೊರಗು ಮಹಾಮಹಿಮ ಮಾರೇಶ್ವರಾ.
--------------
ಕೂಗಿನ ಮಾರಯ್ಯ
ಇದು ಅರಿಬಿರಿದು ಇದಾರಿಗೂ ಅಸಂಗ. ಹಾವು ಹದ್ದಿನಂತೆ ಹುಲಿ ಹುಲ್ಲೆಯಂತೆ ಹಾವು ಹರಿಯ ಕೂಟದಂತೆ ಅರಿ ಬಿರಿದಿನ ಸಂಗ. ತೆರಹಿಲ್ಲದ ಆಲಯ, ಭಟರಿಲ್ಲದ ಕಟಕ, ದಿಟಪುಟವಿಲ್ಲದ ಜಾವಟಿ, ಎಸಕವಿಲ್ಲದ ಒಲುಮೆ, ರಸಿಕರಿಲ್ಲದ ರಾಜನಗರ ಇಂತಿವರ ಉಪಸಾಕ್ಷಿ ಸಂತೈಸುವದಕ್ಕೆ, ಭ್ರಾಂತನಳಿವುದಕ್ಕೆ ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಆಮ್ನೆಯ ಅನುಮಾನದಲ್ಲಿ ಅರಿದು ಅಭಿನ್ನವಿಲ್ಲದೆ ಅವಿರಳನಾಗಾ, ಮನಸಿಜಪಿತಪ್ರಿಯ ಶ್ರುತಿ ನಾಮ ದೂರ ಗತಿ ಮತಿ ಈವ ರಾಮೇಶ್ವರ ಲಿಂಗದಲ್ಲಿ ಪ್ರತಿಭಿನ್ನವಿಲ್ಲದ ಶರಣಂಗೆ.
--------------
ಗುಪ್ತ ಮಂಚಣ್ಣ
ಲಿಂಗ ಪ್ರಾಣವಾದಲ್ಲಿ ಜಾಗ್ರ ಸ್ವಪ್ನ ಸುಷಪ್ತಿಯಲ್ಲಿ ಉಭಯಭ್ರಾಂತಿಲ್ಲದೆ ದೃಷ್ಟದಲ್ಲಿ ಕಂಡುದಕ್ಕೆ ಆ ಜ್ಞಾನದಲ್ಲಿ ಭಾವಿಸುವುದಕ್ಕೆ ಆ ಜ್ಞಾನ ಉಭಯದೋರದೆ ಸ್ವಯವಾದುದು. ಉಭಯಗುಣ ನಾಸ್ತಿ ಪ್ರಾಣಲಿಂಗಸಂಬಂಧ ಕಾಲಾಂತಕ ಭೀಮೇಶ್ವರಲಿಂಗದಲ್ಲಿ.
--------------
ಡಕ್ಕೆಯ ಬೊಮ್ಮಣ್ಣ
ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಅನುಮಾನದಲ್ಲಿ ಅರಿದು ಮತ್ತೆ ಉಪದೃಷ್ಟದಲ್ಲಿ ಅನ್ಯಭಿನ್ನವ ಮಾಡಿ ಕೇಳಲೇತಕ್ಕೆ? ತಾನರಿದ ಕಲೆಯ ಇದಿರಲ್ಲಿ ದೃಷ್ಟವ ಕೇಳಲೇತಕ್ಕೆ? ಇದು ಪರಿಪೂರ್ಣಭಾವ, ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಉಭಯವಳಿದಕೂಟ.
--------------
ತುರುಗಾಹಿ ರಾಮಣ್ಣ
ಐಕ್ಯಸ್ಥಲದ ಲೇಪಜ್ಞಾನ ವಿವರ : ಅಪ್ಪು ಆವಾವ ಪಾಕಕ್ಕೂ ತಪ್ಪದೆ ಸಾರವ ಕೊಡುವಂತೆ ತಥ್ಯಮಿಥ್ಯವಾದ ದ್ರವ್ಯಕ್ಕೆ ಹೆಚ್ಚುಕುಂದನರಿಯದಿಪ್ಪಂತೆ ವಾಯು ಸುಗುಣ ದುರ್ಗುಣವೆನ್ನದೆ ತನ್ನಯ ಸಹಜದಿಂದ ಸಂಚರಿಸುವಂತೆ ಅಗ್ನಿಗೆ ಕಾಷ* ಸರಿಸ ಡೊಂಕೆನ್ನದೆ ಮಲಿನ ಅಮಲಿನವೆನ್ನದೆ ಆವ ದ್ರವ್ಯ ದೃಷ್ಟದಲ್ಲಿ ಸಿಕ್ಕಿದಡೂ ಭೇದಿಸಿ ವೇಧಿಸಿ ಸುಡುವುದಾಗಿ. ಇಂತಿವು ತ್ರಿವಿಧಸ್ಥಲದಂತೆ ಇಪ್ಪುದು ಐಕ್ಯನ ಅರ್ಪಿತ ಸ್ಥಲಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಹಾಕಿದ ಮುಂಡಿಗೆಯ ಎತ್ತುವರಿಲ್ಲ. ಎತ್ತಿದ ಮುಂಡಿಗೆಯ ದೃಷ್ಟದಲ್ಲಿ , ಶ್ರುತದಲ್ಲಿ ಗೆದ್ದು , ಇಸಕೊಂಬವರಿಲ್ಲ . ಈ ಉಭಯದ ಗೊತ್ತನರಿಯದೆ ಕೆಟ್ಟರು, ನಾವು ಭಕ್ತ ಜಂಗಮರೆಂಬುವರೆಲ್ಲ . ಅದಂತಿರಲಿ. ನಾನು ನೀನು ಎಂಬುಭಯದ ಗೊತ್ತನರಿದು, ದೃಷ್ಟದಲ್ಲಿ ಶ್ರುತದಲ್ಲಿ ಗೆದ್ದು ಕೊಟ್ಟು, ನ್ಯಾಯದಲ್ಲಿ ಜಗವನೊಡಂಬಡಿಸಿ ಕೊಟ್ಟು, ಆ ಸಿಕ್ಕಿಹೋಗುವ ಮುಂಡಿಗೆಯ ಎತ್ತಿಕೊಂಡು, ಸುತ್ತಿ ನೋಡಿದರೆ ಬಟ್ಟಬಯಲಾಗಿರ್ದಿತ್ತು . ಆ ಬಟ್ಟಬಯಲ ದಿಟ್ಟಿಸಿ ನೋಡಲು, ನೆಟ್ಟಗೆ ಹೋಗುತ್ತಿದೆ . ಹೋಗಹೋಗುತ್ತ ನೋಡಿದರೆ, ನಾ ಎತ್ತ ಹೋದೆನೆಂದರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->