ಅಥವಾ

ಒಟ್ಟು 187 ಕಡೆಗಳಲ್ಲಿ , 28 ವಚನಕಾರರು , 145 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಮಸ ಸಂಬಂಧ ಕನಿಷ್ಠಂಗೆ ಹುಸಿ ಜಾಗ್ರದಿಟದಂತೆ ತೋರುಗು. ರಾಜನ ಸಂಬಂಧ ಮಧ್ಯಮಂಗೆ ಹುಸಿ ತೂರ್ಯ ದಿಟದಂತೆ ತೋರುಗು. ಸಾತ್ವಿಕ ಸಂಬಂಧ ಉತ್ತಮಂಗೆ ದಿಟ ತಾನೆ ತಾನಾಗಿ ನಿಜ ನಿತ್ಯವಾಗಿರ್ದುದು, ಸಂದೇಹವಿಲ್ಲ. ಇದು ಸಚ್ಚಿದಾನಂದ ನಿತ್ಯ ಪರಿಪೂರ್ಣ ತೂರ್ಯಾತೀತವಪ್ಪ ತತ್ತ್ವ ಇಂತುಂಟೆಂದು ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಎನ್ನ ಆಧಾರಚಕ್ರವೆ ಶ್ರೀಶೈಲಕ್ಷೇತ್ರ : ಅಲ್ಲಿರ್ಪ ಆಚಾರಲಿಂಗವೇ ಶ್ರೀಮಲ್ಲಿಕಾರ್ಜುನದೇವರು. ಎನ್ನ ಸ್ವಾದ್ಥಿಷ್ಠಾನಚಕ್ರವೆ ಸೇತುಬಂಧಕ್ಷೇತ್ರ; ಅಲ್ಲಿರ್ಪ ಗುರುಲಿಂಗವೆ ರಾಮೇಶ್ವರನು. ಎನ್ನ ಮಣಿಪೂರಕ ಚಕ್ರವೇ ಪಂಪಾಕ್ಪೇತ್ರ; ಅಲ್ಲಿರ್ಪ ಶಿವಲಿಂಗವೆ ವಿರೂಪಾಕ್ಷೇಶ್ವರನು. ಎನ್ನ ಅನಾಹತಚಕ್ರವೇ ಹಿಮವತ್ಕೇದಾರಕ್ಷೇತ್ರ; ಅಲ್ಲಿರ್ಪ ಜಂಗಮಲಿಂಗವೆ ಹಿಮಗಿರೀಶ್ವರನು. ಎನ್ನ ವಿಶುದ್ಧಿಚಕ್ರವೆ ಅವಿಮುಕ್ತಿಕ್ಷೇತ್ರ: ಅಲ್ಲಿರ್ಪ ಪ್ರಸಾದಲಿಂಗವೆ ವಿಶ್ವೇಶ್ವರನು. ಎನ್ನ ಆಜಾÕಚಕ್ರವೆ ಸಂಗಮಕ್ಷೇತ್ರ: ಅಲ್ಲಿರ್ಪ ಮಹಾಲಿಂಗವೆ ಸಂಗಮೇಶ್ವರನು. ಇಂತಿವು ಮೊದಲಾದ ಸಕಲಕ್ಷೇತ್ರಂಗಳನೊಳಕೊಂಡ ಎನ್ನ ಬ್ರಹ್ಮಚಕ್ರವೆ ಮಹಾಕೈಲಾಸ. ಅಲ್ಲಿರ್ಪ ನಿಷ್ಕಲಲಿಂಗವೆ ಅನಾದಿ ಪರಶಿವನು ನೀನೇ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವ ಶಿವ ! ಪರಶಿವಮೂರ್ತಿ ಮಹಾಲಿಂಗವು ಕರುಣಿಸಿದ ಕರುಣದಿಂದ ನಾನಂಜೆ ಅಂಜೆನು. ವಾಙ್ಮನೋತೀತವು ಲಿಂಗವಾಗಿ ಅಂಗದ ಮೇಲೆ ನಿರಂತರವಾಗಿ ಸನ್ನಹಿತವಾಗಿ ಅಂಗಲಿಂಗ ಗುರುಲಿಂಗ ಏಕವಾಗಿ [ಪ್ರಾ]ಣಲಿಂಗವಾದನಾಗಿ [ಪ್ರಾ]ಣಲಿಂಗ. ಜಿಹ್ವೆಯಲ್ಲಿ ಮಂತ್ರಮಯ ಗುರುಲಿಂಗವಾಗಿ ಬಿಜಯಂಗೈದನಾಗಿ ಜಿಹ್ವೆಲಿಂಗ. ಕಂಗಳಲ್ಲಿ ಶಿವಲಿಂಗಮೂರ್ತಿಯಂ ತುಂಬಿದನಾಗಿ ಕಂಗಳು ಲಿಂಗ. ತ್ವಕ್ಕಿನಲ್ಲಿ ಜಂಗಮಲಿಂಗಮೂರ್ತಿಯಂ ತುಂಬಿದನಾಗಿ ತ್ವಕ್ಕು ಲಿಂಗ. ಕಿವಿಗಳಲ್ಲಿ ಲಿಂಗಮಹಾತ್ಮೆಯ ಶ್ರುತಿ ಪುರಾಣ ಪುರಾತರ ವಚನಂಗಳ ತುಂಬಿದನಾಗಿ ಶ್ರೋತ್ರ ಲಿಂಗವು. ಶಿವನ ಶ್ರೀಪಾದಕಮಲಪ್ರಸಾದವ ವಾಸಿಸುವಂತೆ ಮಾಡಿದನಾಗಿ ಘ್ರಾಣಲಿಂಗವು. ಲಿಂಗವ ನಿರಂತರ ಸ್ಪರ್ಶವ ಮಾಡುವಂತೆ ಮಾಡಿದನಾಗಿ ಹಸ್ತ ಲಿಂಗವಾದವು. ಲಿಂಗವನೆ ಭಾವಿಸುವಂತೆ ಮಾಡಿದನಾಗಿ ಭಾವ ಲಿಂಗವು. ಮನದಲ್ಲಿ ನೆನಹು ಭರಿತವಾಗಿ ಮನ ಲಿಂಗವು. ಸುವಿಚಾರ ಸಂಪೂರ್ಣವ ಗ್ರಹಿಸಿತ್ತಾಗಿ ಬುದ್ಧಿ ಲಿಂಗವು. ನಿಶ್ಚಯಪದವ ಹಿಡಿಯಿತ್ತಾಗಿ ಅಹಂಕಾರ ಲಿಂಗವು. ನಿರಂತರ ಮರೆಯದಂತೆ ಮಾಡಿದನಾಗಿ ಚಿತ್ತ ಲಿಂಗವು. ಇಂತು ಅಂತರಂಗ ಬಹಿರಂಗ ಲಿಂಗ, ಸರ್ವಾಂಗಲಿಂಗವ ಮಾಡಿ, ಸದ್ಗುರುಲಿಂಗವಾಗಿ ಜಂಗಮಲಿಂಗವಾಗಿ ಪ್ರಾಣಲಿಂಗವಾಗಿ ಪ್ರಸಾದಲಿಂಗವಾಗಿ ಪ್ರಸಾದವನಿಕ್ಕಿ ಸಲಹಿದನು. ಈ ಮಹಾಘನಪರಿಣಾಮವ ಶಿವ! ಶಿವ ನೀನೇ ಬಲ್ಲೆ ಶಿವ ಶಿವ! ಮಹಾದೇವ, ಶಿವ ಶಿವ! ಮಹಾದೇವ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನೀನೇ ಬಲ್ಲೆ.
--------------
ಉರಿಲಿಂಗಪೆದ್ದಿ
ನಿರ್ಬಯಲು ಮಹಾಬಯಲು ಚಿದ್‍ಬಯಲು ಬಯಲಾತ್ಮ ಸೂರ್ಯ ಚಂದ್ರ ತಾರಕ ಕಠೋರ ವಾಯು ಆಕಾಶ ಅಗ್ನಿ ಅಪ್ಪು ಪೃಥ್ವಿ ಬೀಜ ಅನ್ನರಸ ವೀರ್ಯ ಪಿಂಡ ಪ್ರಾಣ ಮನ ಅಸಿ ಉತ್ಪತ್ತಿ ಸ್ಥಿತಿ ಲಯ ಅಕ್ಷರ ಮೊದಲಾದ ಬ್ರಹ್ಮಾಂಡ ನೀನಾದುದಕ್ಕೆ, ನಿನ್ನ ನೀನರಿವುದಕ್ಕೆ ನೀನೇ ನಾನಾದುದೇ ಇದೇ ಆದಿಯಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ. ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ. ಇಂತೀ ಸರ್ವಗುಣ ಸಂಪನ್ನನಾಗಿ ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ. ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ, ನಿರಂಗಕ್ಕೆ ಸಂಗ ನೀನೇ. ಹಿಂಗೂದಕ್ಕೆ ನಿನ್ನಂಗ ಅನ್ಯ ಬ್ಥಿನ್ನವಲ್ಲ. ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು, ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು, ಇಂತಿವ ಹೇಳುವಡೆ ವಾಙ್ಮನಕ್ಕತೀತ ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನಪೂಜಿತ ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ.
--------------
ಗುಪ್ತ ಮಂಚಣ್ಣ
ದಿಟದ ಚಂದ್ರನು ಅನೇಕ ಘಟದ ಜಲದೊಳಗೆ ಜನಿಸಿ ಅನೇಕ ವ್ಯವಹಾರವಾದಂತೆ ಜೀವನೆ ಜಗ, ಜಗವೆ ಜೀವನಾದ. ಆದಿ ಅನಾದಿ ವಿಚಿತ್ರತರವಾದ ಮಾಯೆ. ಈ ಮಾಯೆಯಿಂದ ತನಗೆ ತಾನೇ ಪ್ರತಿಬಿಂಬ. ಆ ಮಾಯಾ ಪ್ರತಿಬಿಂಬವೆ ತನಗೆ ಸಂಸಾರ. ಆ ಸಂಸಾರವನು ಆ ಪರಮಾತ್ಮನು ಕೂಡಿಯೂ ಕೂಡದೆ ಆ ಘಟ ಜಲ ಚಂದ್ರಮನ ಹಾಂಗೆ ವರ್ತಿಸುತ್ತಿಹನು. ಅದೆಂತೆಂದಡೆ: ``ಏಕ ಏವ ಹಿ ಭೂತಾತ್ಮಾಭೂತೇ ಭೂತೇ ವ್ಯವಸ್ಥಿತಃ| ಏಕಧಾ ಬಹುಧಾಚೈವ ದೃಶ್ಯತೇ ಜಲಚಂದ್ರವತ್||' ಎಂದುದಾಗಿ, ಸಟೆಯ ಮಾಯೆಯ ಸಟೆಯೆಂದು ಕಳೆದುಳಿದ ದ್ಥೀರ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇನಿಯನೆನಗೆ ನೀನು, ಇನ್ನೇನನೊಂದ ನಾನರಿಯೆ. ನೀ ನುಡಿಸಲು ನುಡಿವೆನು, ನಡೆಸಲು ನಡೆವೆನು, ನೀನಲ್ಲದರಿಯೆನು, ನಲ್ಲ ನೀ ಕೇಳಾ. ನೀನೇ ಗತಿ, ನೀನೇ ಮತಿ. ನಿನ್ನಾಣೆಯಯ್ಯಾ, ಉರಿಲಿಂಗದೇವಾ.
--------------
ಉರಿಲಿಂಗದೇವ
ದೃಶ್ಯವ ಕಾಬ ದೃಷ್ಟನಾರೋ ಎಂದಡೆ ದೃಶ್ಯ ದೃಷ್ಟಗಳನರಿವ ಅರಿವದು ದೃಶ್ಯನೂ ಅಲ್ಲ ದೃಷ್ಟನೂ ಅಲ್ಲ. ಅದೃಶ್ಯಭಾವ ದೃಷ್ಟಿ ಚಿನ್ಮಯ ದರ್ಶನಾದಿ ಕ್ರಿಯೆಯಿಲ್ಲದ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಜೀವಂಗೆ ಸ್ವಪ್ನದಂತೆ ದಿಟ ತೋರಿ ಜೀವನೊಡನೆ ಕೆಡುವ ಸಂಸಾರದ ಪರಮನೆಂದೇಕೆನುಡಿವೆಯೊ? ಪರಮನಾದಡೆ ಪರಮನಲ್ಲಿ ಪರಮರಾಗಿಯಾದಡು ಎನಗೆಕಾಣಬಾರದು. ದೋಷಪನ್ನಾರಿ ವೇದಾನುಭವವಿದು ಪ್ರತಿ ಚಿನ್ಮಯವಾಗಿಹುದು. ಈ ನಿಷ್ಕಲಬಿಂಬ ದಿಟವಿದೆಂದು ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮತ್ತಂ ಹಸ್ತಮೆನೆ, ಚಿತ್ತಂ ಬುದ್ಧಿಯಹಂಕಾರಂ ಮನಂ ಜ್ಞಾನಂ ಭಾವಮೆಂಬೀ ಷಡ್ವಿಧಕರಣ ಕರಂಗಳಿಂ ಪಿಡಿದು ಪೂರ್ವೋಕ್ತ ಮುಖಲಿಂಗಂಗಳ್ಗಾ ಷಡ್ವಿಧ ಭಕ್ತ[ರ]ರಿಯಲದನಾ ಲಿಂಗಮುಖದಲ್ಲಿ ನೀನೇ ಉಣ್ಬೆಯಯ್ಯ, ಪರಮ ಶಿವಲಿಂಗೇಶ್ವರ ಚಿದ್ಗಗನ ಭಾಸ್ಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬತ್ತೀಸಾಯುಧವನು ಅನಂತ ದಿನ ಸಾಧಿಸಿ ಪಿಡಿದರೂ ಕಾದುವುದು ಒಂದೇ ಕೈದು ಒಂದೇ ದಿನ. ಆ ಹಾಂಗೆ_ಫಲ ಹಲವಾದಡೂ ಅರಿವುದೊಂದೇ ಮನ, ಒಂದೇ ಲಿಂಗ ! ಆ ಮನವು ಆಲಿಂಗದ ನೆಲೆಯಲ್ಲಿ ನಿಂದು ಸ್ಥಲಲೇಪವಾದ ಮತ್ತೆ ಸ್ಥಲವಿಲ್ಲ ನಿಃಸ್ಥಲವಿಲ್ಲ, ನಿಜ ನೀನೇ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮಾಡುವ ಮಾಡಿಸಿಕೊಂಬ ಎರಡರ ಉಭಯ ಒಂದೆ. ಲಿಂಗವೊಂದೆ, ಜಂಗಮವೊಂದೆ, ಪ್ರಸಾದವೊಂದೆ. ಒಂದಾದಲ್ಲಿ ಎರಡಾಗಿ ಮಾಡುವ ಭಕ್ತ ನೀನೇ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಬಲುಹಾಗಿ ತತ್ವವಡಸಿದಾತ ಸತ್ತನೆ? ಕರಗುವ ತತ್ಪುಂಜನೆಯ ಕರಣವ ತಪ್ಪಿಸಿ ಪ್ರವೇಶಿಸುವಾತ ಸಂಚರಿಸುವ ತದ್ಬ ್ರಮೆಯಿಂದ ಬಯಲ ಕರಣಂಗಳಿಗೆಡೆಗೊಡುವ ಕತದಿಂ ಪಂಚಮಹಾರೂಪನ ಅಹಂಭಾವದ ಜೀವನಿಂದ ರಾಗಾದಿ ಮಲತ್ಯಾಗದಿಂದ, ಸಕಲ ಕರಣ ವ್ಯಾಪಾರದಿಂದ, ಉತ್ತುಂಗ ಪದೋನ್ನತಿಯಿಂದ ಸಮವೆನೆ, ಕರಣದೊಳಿಪ್ಪರಿವಿಂದೆ ಚೇಷ್ಟಿಸುವನಾಗಿ ಪ್ರಾಣಾದಿರೂಪನು. ತಾ ನುಡಿದುದ ತಾನೆ ಕೇಳುವ, ಲೇಸೆಂಬುದ ಹಿಡಿವ, ಮುಂದೆ ನೇತಿಗತಿಯ ಕರಣಂಗಳ ಕಾಬ, ಹೊಲ್ಲಹದವ ಬಿಡುತ್ತ ಸೇವಿಸುವ, ಸ್ವಚ್ಛಾಂಗ ಸುಖವಾಸನೆಗೆರಗುವ, ಕರ್ಮೇಂದ್ರಿಯದ ಬುದ್ಧೀಂದ್ರಿಯಾನಂದ ತಾನೆಂಬುದನಾರೂ ಅರಿಯರಯ್ಯಾ! ನೋಡಲೇನದ ನಿಶ್ಚಯಿಸಿ ನಾ ಬಲ್ಲೆನೆಂಬ ಆರಿದು ಮರೆಯದಂತೆ ರೂಪನಪ್ಪಿ ಸೋಹಮೆಂಬುದು ಜೀವ. ಇಂತಪ್ಪ ಸರ್ವದೃಷ್ಟವನೊಳಕೊಂಡು. ಪಂಚವಿಂಶತಿಯಾಗಿ ತೋರುವ ತೋರಿಕೆಯೆಲ್ಲಾ ಹುಸಿಯೆಂದರಿದರಿವು ನಿಜತತ್ವ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗಬ್ರ್ಥೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾದ್ಥಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.
--------------
ಉರಿಲಿಂಗಪೆದ್ದಿ
ಹಲವು ಲೀಲೆಯೊಳಗೆ ಗುರುಶಿಷ್ಯ ಎರಡಾದ ವಿನೋದವೇನೆಂಬೆ ? ಎನ್ನ ಶ್ರೀಗುರು ಬಸವೇಶ್ವರನು ಎನ್ನ ಶಿಕ್ಷಿಸಿ ದೀಕ್ಷೆಯನೆಸಗಿ ಮೋಕ್ಷದಖಣಿಯಮೂರ್ತಿಯತಂದು, ತನ್ನ ಗುರು ತನ್ನ ಗುರ್ತವ ತೋರಿದಾ. ಆ ಗುರ್ತವ ಎನ್ನ ಕೈಯಲ್ಲಿಟ್ಟು ಈ ಮಹಾಂತನ ಪೂಜಿಸಿ ಮುಕ್ತಿಯ ಪಡಿಯೆಂದು ನಿರೂಪಿಸಲು, ಆ ಗುರುನಿರೂಪವ ಕೈಕೊಂಡು ಮಹಾಂತನ ಮುಂದಿಟ್ಟುಕೊಂಡು ಈ ಮಹಾಂತ ಎನ್ನ ಗುರುವಿನಗುರು ಎನಗೆ ಪರಮಾರಾಧ್ಯ ತಾ ಲಿಂಗವಾಗಿ ಬಂದಕಾರಣವೇನೆಂದು ತನ್ನೊಳಗೆ ತಾನೆ ವಿಚಾರಿಸಲು, ಅಲ್ಲಿ ಹೊಳೆದುದು ನೀನು ನನಗೆ ಪರಮಾರಾಧ್ಯ, ಒಂದೇ ಲಿಂಗವೇ ಹಲವರಾಗಿ ತೋರಿದಿರಿ. ಅದೆಂತೆಂದಡೆ : ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯಮಂತ್ರ ಮತ್ತು ಶಿಕ್ಷಾಗುರು ದೀಕ್ಷಾಗುರು ಮೋಕ್ಷಾಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಮಹಾಂತದೇವರ ದೇವ ನೀನೇ ಆದಿ. ನೀವು ಹೀಂಗಾದ ಪರಿಯೆಂತೆಂದಡೆ : ಮೊದಲೇ ಶಿಕ್ಷಾಗುರು ಶಿಖಾಮಣಿಸ್ವಾಮಿಯೆನಿಸಿದಿರಿ, ದೀಕ್ಷಾಗುರು ಗುರುಬಸವಸ್ವಾಮಿಯೆನಿಸಿದಿರಿ, ಮೋಕ್ಷಾಗುರು ಶ್ರೀಮನ್‍ಮಹಾಮುರಘೆಯಸ್ವಾಮಿಗಳ ಚರಮೂರ್ತಿ ಸಿರಿವಾಸ ಚನ್ನಬಸವೇಶ್ವರರೆನಿಸಿದಿರಿ. ಗುರುವಿನಗುರು ಹಳಪ್ಯಾಟಿ ಬಸವಯ್ಯನೆನಿಸಿದಿರಿ. ಪರಮಗುರು ಭಂಗೀಪರ್ವತದೇವರೆನಿಸಿದಿರಿ. ಪರಮಾರಾಧ್ಯ ಗೊಬ್ಬೂರ ಸದಾಶಿವದೇವರೆನಿಸಿದಿರಿ. ಸರ್ವದೇವರು ಮಹೇಶ್ವರರು ಎನಗೆ ಮಹಾಮಹಾಂತನೆನಿಸಿದಿರಿ. ಎನ್ನ ದೇವರದೇವ ಸರ್ವವು ನೀನೇ ಆಗಿರ್ದು, ನೀನು ಒಂದೇ ಪರಮಾರಾಧ್ಯರೆನಲುಂಟೆ ? ಒಂದೇ ನೀ ಎನಗೆ ಲಿಂಗವಾದನೆನಲುಂಟೆ ? ಲಿಂಗವಾದಾತನು ನೀನೆ, ಪರಮಾರಾಧ್ಯನಾದಾತನು ನೀನೆ, ಗುರುವಾದಾತನು ನೀನೆ, ಅರುವಾದಾತನು ನೀನೆ, ನೀನಲ್ಲದೆ ಮತ್ತೊಂದು ಬ್ಯಾರೆ ಭಾವಿಸಲುಂಟೆ ? ಎನ್ನ ಹುಟ್ಟಿಸಿದ ಮಹಾಂತನು ನೀನೆ, ಎನ್ನ ಬೆಳಸಿದ ಶರಣಬಸವಪ್ಪನು ನೀನೆ ಎನ್ನ ಮನ್ನಿಸಿದ ಘನಸಿದ್ದಪ್ಪನು ನೀನೆ, ಎನ್ನ ನಿಂದಿಸಿದ ಹಳಪ್ಯಾಟಿ ಬಸಯ್ಯನು ನೀನೆ, ಉಣಿಸುವ ಉಡಿಸುವ ಹಾಸುವ ಹೊಚ್ಚುವ ಮುಚ್ಚುವ ಚುಚ್ಚುವ ಹಳಿವ ಮುಳಿವ ಸರ್ವವೂ ಎನಗೆ ನೀನಲ್ಲದೆ ಮತ್ತೊಬ್ಬರಿಲ್ಲ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->