ಅಥವಾ

ಒಟ್ಟು 202 ಕಡೆಗಳಲ್ಲಿ , 43 ವಚನಕಾರರು , 179 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಲಿಂಗ ಸಂಬಂಧವಾದ ಬಳಿಕ ಕಾಯಗುಣ ಕೆಟ್ಟು ಲಿಂಗವಾಯಿತ್ತು. ಪ್ರಾಣಲಿಂಗ ಸಂಬಂಧವಾದ ಬಳಿಕ ಕರಣಗುಣ ಕೆಟ್ಟು ಲಿಂಗಕರಣಂಗಳಾದುವು. ಭಾವಲಿಂಗ ಸಂಬಂಧವಾದ ಬಳಿಕ ಇಂದ್ರಿಯಗುಣ ಕೆಟ್ಟು ಲಿಂಗೇಂದ್ರಿಯಗಳಾದುವು. ಇದು ಕಾರಣ- ಶರಣಂಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ. ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು, ಕೂಡಲಚೆನ್ನಸಂಗಯ್ಯಾ ನಿನ್ನೊಳಡಗಿದ ನಿಜೈಕ್ಯಂಗೆ
--------------
ಚನ್ನಬಸವಣ್ಣ
ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುಲಿಂಗಜಂಗಮಾರ್ಚನೆಯ ಕ್ರಮವ ದಯೆಯಿಂದ ಕರುಣಿಪುದು ಸ್ವಾಮಿ. ಕೇಳೈ ಮಗನೆ : ತಾನಿದ್ದ ಊರಲ್ಲಿ ಗುರುವು ಇದ್ದಡೆ ನಿತ್ಯ ತಪ್ಪದೆ ದರುಶನವ ಮಾಡುವುದು. ಗುರುಪೂಜೆಯ ಮಾಡುವಾಗ ಆ ಗುರುವಿನೊಳಗೆ ಲಿಂಗ-ಜಂಗಮವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಗುರುಪೂಜೆ. ಲಿಂಗಪೂಜೆಯ ಮಾಡುವಾಗ ಆ ಲಿಂಗದೊಳಗೆ ಜಂಗಮ-ಗುರುವುಂಟೆಂದುಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಲಿಂಗಪೂಜೆ. ಇನ್ನು ಜಂಗಮದ ಪೂಜೆ ಮಾಡುವಾಗ ಆ ಜಂಗಮದೊಳಗೆ ಗುರು-ಲಿಂಗವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಜಂಗಮಪೂಜೆ. ಈ ತ್ರಿವಿಧಮೂರ್ತಿ ಭಕ್ತನ ತ್ರಿವಿಧ ತನುವಿಗೋಸ್ಕರವಾಗಿ ಇಷ್ಟ ಪ್ರಾಣ ಭಾವಲಿಂಗಸ್ವರೂಪವಾಗಿಹರೆಂದು ನಿರೂಪಿಸಿದಿರಿ ಸ್ವಾಮಿ. ಆ ತ್ರಿವಿಧಲಿಂಗದ ಪೂಜೆಯ [ಕ್ರಮವ] ಕರುಣಿಪುದು ಎನ್ನ ಶ್ರೀಗುರುವೇ. ಕೇಳೈ ಮಗನೆ : ಇಷ್ಟಲಿಂಗದ ಪೂಜೆಯ ಮಾಡುವಾಗ ಆ ಇಷ್ಟಲಿಂಗದೊಳಗೆ ಪ್ರಾಣಲಿಂಗ ಭಾವಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಇಷ್ಟಲಿಂಗದಪೂಜೆ. ಪ್ರಾಣಲಿಂಗದ ಪೂಜೆಯ ಮಾಡುವಾಗ ಆ ಪ್ರಾಣಲಿಂಗದೊಳಗೆ ಇಷ್ಟಲಿಂಗ ಭಾವಲಿಂಗವುಂಟೆಂದು ಭಾವಿಸಿ ಭಾವ-ಮನ-ಕರದೊಳಗಿರಿಸಿ ಪೂಜಿಸುವುದು ಪ್ರಾಣಲಿಂಗದಪೂಜೆ. ಭಾವಲಿಂಗದ ಪೂಜೆಯ ಮಾಡುವಾಗ ಆ ಭಾವಲಿಂಗದೊಳಗೆ ಇಷ್ಟಲಿಂಗ ಪ್ರಾಣಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಭಾವಲಿಂಗದಪೂಜೆ. ಸಾಕ್ಷಿ : 'ಏಕಮೂರ್ತಿಸ್ತ್ರಯೋ ಭಾಗಾಃ ಗುರುರ್ಲಿಂಗಂತು ಜಂಗಮಃ | ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ||' ಎಂದುದಾಗಿ, ತ್ರಿವಿಧವು ಒಂದೇ ಎಂದರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಪರಬ್ರಹ್ಮವೆಂಬ ಲಿಂಗದಿಂದ ಭಾವಲಿಂಗ ಉದಯವಾಯಿತ್ತು. ಆ ಭಾವಲಿಂಗದಿಂದ ಪ್ರಾಣಲಿಂಗ ಉದಯವಾಯಿತ್ತು. ಆ ಪ್ರಾಣಲಿಂಗದಿಂದ ಇಷ್ಟಲಿಂಗ ಉದಯವಾಯಿತ್ತು. ಆ ಇಷ್ಟಲಿಂಗಕ್ಕೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಅರ್ಪಿಸಬಲ್ಲಾತನೆ ನಿಮ್ಮ ಸದ್ಭಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಜಾ.......[ನಂದ ನಿಬ್ರ್ಥಿನ್ನವೆಂಬುವ ನಿತ್ಯನಾತನ ಪಿಂಡದೊಳಗೆ ನಿಶ್ಚಿಂತಾಮೃತವೆಂಬ ದಿವ್ಯಾಮೃತ ಕುಂಭವುಂಟು. ನಾಬ್ಥಿಸ್ಥಾನದೊಳಗೆ ಇದ್ದಂಥಾ ಮಹಾಕುಂಭದೊಳಗೆ ಮಹಾನುಭಾವವೆಂಬುದೊಂದು ಸುವರ್ಣಮಂಟಪವುಂಟು. ಆ ಸುವರ್ಣ ಮಂಟಪದೊಳಗೆ ರತ್ನಸಿಂಹಾಸನವೆಂಬ ಮಹಾಪೀಠಿಕೆಯುಂಟು. ಆ ಪೀಠಿಕೆಯ [ಮೇಲೆ] ಸಾಸಿರ ಅನಂತಕೋಟಿಪ್ರಭೆಯೊಳಗಣ ಕಳಾಸ್ವರೂಪವಪ್ಪುದೊಂದು ಪ್ರಾಣಲಿಂಗ. ಆ ರತ್ನಪೀಠಿಕೆಯ ಮೇಲೆ ಪ್ರಕಾಶಿಸುತ್ತಿರ್ಪ ಲಿಂಗ. ಆ ಲಿಂಗವೆ ತನ್ನ ಸ್ವಯಾನಂದದಿಂದ ಊಧ್ರ್ವವೆಂಬ ಚಕ್ರಸ್ಥಾನದೊಳಗೆ ನಿಂದು ನೋಡುತ್ತಿರಲು ಒಂದು ಕಮಲ ವಿಕಸಿತವಾಯಿತ್ತು. ಆ ಕಮಲದೊಳಗೊಂದು ದಿವ್ಯಜ್ಞಾನವೆಂಬುದೊಂದು [ಲಿಂಗ]. ತಲ್ಲಿಂಗ ತೊಳಗಿ ಬೆಳಗಿ ಪ್ರಕಾಶಿಸಿತ್ತು. ನೋಡುತಿರಲು ತಾನೆ ಪರಂಜ್ಯೋತಿ ದಿವ್ಯವಸ್ತು ಎಂದೆ ಕಾ[ಣಾ], ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗದರಿಕೆಯಾಗಿ.
--------------
ಬಾಚಿಕಾಯಕದ ಬಸವಣ್ಣ
ಪ್ರಾಣಲಿಂಗ ಸಂಬಂದ್ಥಿಯಾದ ಬಳಿಕ ಪರಸ್ತ್ರೀ ಪರದ್ರವ್ಯವ ಮುಟ್ಟದಿರಬೇಕು. ಅಂಗಲಿಂಗ ಸಂಬಂದ್ಥಿಯಾದ ಬಳಿಕ ಸ್ತ್ರೀಸಂಗವ ತೊರೆಯಲೇಬೇಕು. ಪ್ರಸಾದಲಿಂಗ ಸಂಬಂಧವಾದ ಬಳಿಕ ಆಪ್ಯಾಯನವರಿಯಲೇಬೇಕು. ಸರ್ವಾಂಗಂಗ ಸಮ್ಮತ ಸಂಬಂದ್ಥಿಯಾದ ಬಳಿಕ ಸರ್ವವೂ ತಾವಾಗಿರಬೇಕು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಇಂತಪ್ಪವರು ಸುಲಭರೆ? ಎತ್ತಾನಕೊಬ್ಬರಲ್ಲದೆ.
--------------
ಸಿದ್ಧರಾಮೇಶ್ವರ
ಅಂಗದ ಮೇಲೆ ಲಿಂಗಸಾಹಿತ್ಯವಾಗದಿದ್ದರೇನು, ಕಾಯವೇನು ಬರಿ ಕಾಯವೆ ? ಪ್ರಾಣದ ಮೇಲೆ ಲಿಂಗಸಾಹಿತ್ಯವಾಗದಿದ್ದರೇನು ? ಪ್ರಾಣವೇನು ವಾಯುಪ್ರಾಣವೆ ? ಅಹಂಗಲ್ಲ, ನಿಲ್ಲು. Uõ್ಞರವಂ ಕಾಯಸಂಬಂಧಂ ಪ್ರಾಣಸ್ತು ಪ್ರಾಣಸಂಯುತಃ ಕಾರಣಂ ಭಾವಸಂಬಂಧಂ ಗುರೋಃ ಶಿಷ್ಯಮನುಗ್ರಹಂ ಎಂದುದಾಗಿ ಹರರೂಪಾಗಿದ್ದುದೆ ಪ್ರಾಣಲಿಂಗ, ಗುರುರೂಪಾಗಿದ್ದುದೆ ಜಂಗಮಲಿಂಗ. ಹರರೂಪಾಗಿರ್ದ ಪ್ರಾಣಲಿಂಗವಾವ ಕೈಯಲುಂಬುದೆಂದರೆ, ಭಕ್ತನ ಜಿಹ್ವಾಗ್ರದಲುಂಬುದು. ಗುರುರೂಪಾಗಿರ್ದ ಜಂಗಮಲಿಂಗವಾವ ಕೈಯಲುಂಬುದೆಂದರೆ ಜಂಗಮ ಜಿಹ್ವಾಗ್ರದಲುಂಬುದು. ಇದು ಕಾರಣ ಹರರೂಪಾಗಿದ್ದುದೆ ಪ್ರಾಣಲಿಂಗ ಗುರುರೂಪಾಗಿದ್ದುದೆ ಜಂಗಮಲಿಂಗ. ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಎಂಬ ವಚನವನರಿದು ಸ್ಥಾವರವನು ಜಂಗಮವನು ಒಂದೆಂದರಿದೆನಯ್ಯಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎನ್ನ ಪಂಚಾಕ್ಷರವ ಇಷ್ಟಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಸಪ್ತದಶಾಕ್ಷರವ ಪ್ರಾಣಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ತ್ರಿವಿಧಾಕ್ಷರವ ಭಾವಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಷಡಿಂದ್ರಿಯಂಗಳ ಷಡ್ವಿಧಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ನವಚಕ್ರಂಗಳ ನವವಿಧಲಿಂಗಕ್ಷೇತ್ರ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಅನ್ನಮಯವ ಪ್ರಸಾದ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಪ್ರಾಣಮಯವ ಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಮನೋಮಯವ ಶಿವಧ್ಯಾನ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ವಿಜ್ಞಾನಮಯವ ಜ್ಞಾನ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಆನಂದಮಯವ ಶಿವಾನಂದಮಯವಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಷಡ್‍ಧಾತುಗಳ ಷಡಕ್ಷರ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಇಂತೀ ಬಸವಣ್ಣನೇ ಎನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಪರಿಪೂರ್ಣನಾಗಿ ಬಸವಣ್ಣನೇ ಇಷ್ಟವಾಗಿ ತೊಳಗಿ ಬೆಳಗುತ್ತಿಪ್ಪ ಭೇದವನು ಬೋಳಬಸವೇಶ್ವರನೆನಗೆ ಅರುಹಿಕೊಟ್ಟು ಸಿದ್ಧೇಶ್ವರನೆಂಬ ಚಿದಬ್ಧಿಯೊಳಗೆ ಮುಳುಗಿಸಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಉಭಯಭಾವವನರಿಯದೆ ಶಿವಶಿವ ಎನುತಿರ್ದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು, ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ, ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ. ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ, ಮೆಚ್ಚುವರೆ ಪ್ರಾಣಲಿಂಗಿಸಂಬಂದ್ಥಿಗಳು. ಉಂಡವನು ಉಂಡಂತೆ ತೇಗುವ ಸಂದಳಿದು, ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ, ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ, ಭಾವನೆಗೆ ಬಂದವರಾರೆಂದು ವಿಚಾರಿಸಿ, ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ, ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ.
--------------
ಮೋಳಿಗೆ ಮಾರಯ್ಯ
ಊರನಾಶ್ರಯಿಸುವನೆ ಉಪಜೀವಿಗಳಂತೆ? ಕಾಡನಾಶ್ರಯಿಸುವನೆ ಕರಡಿಯಂತೆ? ಊರನಾಶ್ರಯಿಸುವನಲ್ಲ, ಕಾಡಾನಶ್ರಯಿಸುವನೂ ಅಲ್ಲ ನೋಡಾ. ಊರಾವುದು ಕಾಡುವುದು ಎಂದರಿಯದೆ ಕಳವಳಿಸುತ್ತಿಪ್ಪರು ನೋಡಾ. ಊರೆಂದರೆ:ಮಾಯಾಸಂಬಂಧವಾದ ಪಂಚಭೌತಿಕ ಗ್ರಾಮ. ಕಾಡೆಂದರೆ:ಆ ಕಾಯವನಾಶ್ರಯಿಸಿಕೊಂಡಿಪ್ಪ ಸಕಲ ಕರಣಂಗಳು ಕಾಣಮರುಳೆ. ಕಾಯದ ಕರಣಂಗಳಿಗೆ ವಶಗತವಾಗಿರ್ದು ಊರಿಗೆ ಹೊರಗಾಗಿದ್ದೆನೆಂಬ ಉಪಜೀವಿಗಳನೇನೆಂಬೆನಯ್ಯ? ಇದುಕಾರಣ ನಿಮ್ಮ ಶರಣರು ಕಾಯವನು ಜೀವವನು ಕರಣವನು ಕೇವಲ ಪರಂಜ್ಯೋತಿಲಿಂಗದೊಳಗೆ ಬೆರಸಿ ಬೇರಿಲ್ಲದೆ ಕಾಯವನು ಜೀವವನು ಕರಣವನು ಹೊದ್ದದೆ ಮಹಾಘನಲಿಂಗಪದದೊಳಗಿಪ್ಪರಯ್ಯ ಪ್ರಾಣಲಿಂಗ ಸಂಬಂದ್ಥಿಗಳು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಧರೆಯ ಮೇಲೆ ಹರಡಿರುವ ಶಿಲೆಯ ತಂದು ಕಲ್ಲುಕುಟಿಕ ಕಟೆದು ಲಿಂಗವ ಮಾಡಿದರೆ ಅದೆಂತು ಲಿಂಗವೆಂಬೆನಯ್ಯ ? ಅದು ಶಿಲೆಯು. ಆ ಲಿಂಗವ ತಂದು, ಗುರುವಿನ ಕೈಯಲ್ಲಿ ಕೊಟ್ಟು ದೀಕ್ಷೆ ಉಪದೇಶವಂ ಮಾಡಿ, ಆ ಲಿಂಗವ ಧರಿಸಿಕೊಂಡು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ, ಶಿಲಾಲಿಖಿತವ ತೊಡೆದು ಕಲಾಭೇದವನರಿದು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳನರಿದು ಇರಬಲ್ಲ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗ ಪ್ರಾಣಲಿಂಗ ಒಂದೆಯೆಂದರಿಯದೆ ಬ್ಥಿನ್ನವಿಟ್ಟು ನುಡಿವ ಭ್ರಾಂತರ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ತಿಳಿದುಪ್ಪ ಗಟ್ಟಿಗೊಂಡು ಹೆರೆದುಪ್ಪವಾದಂತೆ, ನಿರಾಕಾರ ಪರಬ್ರಹ್ಮವ ಸಾಕಾರಗೊಳಿಸಿ, ಶ್ರೀಗುರುಸ್ವಾಮಿ ಕರುಣಿಸಿ ಕರಸ್ಥಲಕ್ಕೆ ಇಷ್ಟಲಿಂಗವೆನಿಸಿ ಕೊಟ್ಟಬಳಿಕ, ಆ ಲಿಂಗದಲ್ಲಿ ನಿಷ್ಠೆ ಬಲಿಯಲು ಬಾಹ್ಯ ಕರಣಂಗಳು ತರಹರವಾಗಿ, ಆ ಲಿಂಗದ ಚಿತ್‍ಕಳೆ ದೃಷ್ಟಿಸೂತ್ರದಿಂದೆ ತನ್ನ ಅಂತರಂಗಕ್ಕೆ ವೇದ್ಥಿಸಿ ಪ್ರಾಣಲಿಂಗವೆನಿಸುವುದು. ಸ್ಫಟಿಕದ ಘಟದಲ್ಲಿರಿಸಿದ ಜ್ಯೋತಿಯಂತೆ ಒಳಹೊರಗೆ ತೋರುತಿರ್ಪುದು ಒಂದೇ ಲಿಂಗವೆಂದರಿಯದೆ, ಭ್ರಾಂತಿಜ್ಞಾನದಿಂದೆ ಅಂತರಂಗದಲ್ಲಿ ಬೇರೆ ಪ್ರಾಣಲಿಂಗವುಂಟೆಂದು ಇಷ್ಟಲಿಂಗದಲ್ಲಿ ಅವಿಶ್ವಾಸಮಾಡುವ ಭ್ರಷ್ಟಭವಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದ ತಾನಾಯಿತ್ತು. ಕಾರಣ ಅಸ್ಥಿ ಸೌಮ್ಯವಾಯಿತ್ತು. ಮಾಂಸ[ಪಿಂಡ] ಮಂತ್ರರೂಪವಾಯಿತ್ತು. ಚರ್ಮ ಚಿದ್ರೂಪವಾಯಿತ್ತು, ನಾಡಿ ನಿರಂಜನವಾಯಿತ್ತು, ರೋಮ ಓಂ ರೂಪವಾಯಿತ್ತು. ಇಂತೀ ಪಂಚಭೂತಕಾಯ ಪ್ರಸಾದ[ಕಾಯ]ವಾಯಿತ್ತು. ಮಾಂಸಪಿಂಡ ಮಂತ್ರಪಿಂಡವಾಯಿತ್ತು. ವಾಯು ಪ್ರಾಣಲಿಂಗ ಪ್ರಾಣವಾಯಿತ್ತು. ನರರೂಪ ಹರರೂಪವಾಯಿತ್ತು. ಹರರೂಪ ಗುರು ಚರ ಪರಮ ಪ್ರಸಾದವಾಯಿತ್ತು. ದೇವಭಕ್ತನ ಪ್ರಸಾದವೆ ಭಕ್ತಿ ಮುಕ್ತಿಪ್ರಸಾದ ತಾನೆ, ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಎಲ್ಲರ ಪ್ರಾಣಲಿಂಗ ಒಂದೆ ಕಂಡಯ್ಯಾ, ಎನ್ನ ಪ್ರಾಣಲಿಂಗ ಬೇರೆ ಕಂಡಯ್ಯಾ. ಕೂಡಲಸಂಗಮದೇವ ಕೇಳಯ್ಯಾ, ಜಂಗಮವೆನ್ನ ಪ್ರಾಣಲಿಂಗ ಕಂಡಯ್ಯಾ.
--------------
ಬಸವಣ್ಣ
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ, ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ, ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ ತೂರ್ಯದ ಕ್ರಿಯೆ ವೇಧಿಸಿ ನಿಂದವನ ನಿಲವು ಎಂತುಟೆಂದರೆ: ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ. ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು ದೃಷ್ಟವ ಕಂಡು ಬರ....ಕೇಳಲಾಗಿ, ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು. ಅದೇನು ಕಾರಣವೆಂದರೆ: ಮೊಟ್ಟ ಮೊದಲಲ್ಲಿ ಮೂರು ಭಿನ್ನವ ಕೇಳುವದು ಆ ಮೂರು ಭಿನ್ನಯೆಂತಾದವಯ್ಯಯೆಂದರೆ, ಅದರೊಳಗೈದು ಭಿನ್ನ ಉಂಟು. ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂಧಿಸೂದು. ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು. ನೋಡಿ ನಿಶ್ಚಯವಾದ ಮತ್ತೆ ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ, ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು, ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ ತಮ್ಮ ತ್ಯಾಗದ ಮೈಮರೆದಿರ್ದಾತನ ಎಚ್ಚರ ಮಾಡಿ, ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->