ಅಥವಾ

ಒಟ್ಟು 151 ಕಡೆಗಳಲ್ಲಿ , 38 ವಚನಕಾರರು , 130 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವೆಂಬ ಹೇಳಿಗೆಗೆ ಮನಸರ್ಪನಾವರಿಸಿ, ಇನಿದು ಬಂದಡೆ ಅದಕ್ಕಿಂಬುಗೊಡದೆ, ಇರುತಿರ್ಪ ಸರ್ಪವನು ತೆಗೆದು ಶಿವಲಿಂಗವನು ನೆಲೆಗೊಳಿಸಿದ ಶ್ರೀ ಗುರುವೆ ಶರಣು ಶರಣೆಂಬ, ವಾಕ್ಯಂಗಳ್ಲ ಆಕಾರ ಚತುಷ್ಟಯಮಾನಂದದದಲ್ಲಿರಿಸಿದ ಏಕೋ ರುದ್ರ ಶಿಷ್ಟ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇಂದೆನ್ನ ಮನೆಗೆ ಒಡೆಯರು ಬಂದಡೆ ತನುವೆಂಬ ಕಳಶದಲುದಕವ ತುಂಬಿ, ಕಂಗಳ ಸೋನೆಯೊಡನೆ ಪಾದಾರ್ಚನೆಯ ಮಾಡುವೆ. ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ. ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ. ಹೃದಯಕಮಲ ಪುಷ್ಪದೊಡನೆ ಪೂಜೆಯ ಮಾಡುವೆ. ಸದ್ಭಾವನೆಯೊಡನೆ ಧೂಪವ ಬೀಸುವೆ. ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ. ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ. ಪರಿಣಾಮದೊಡನೆ ಕರ್ಪೂರ ವೀಳೆಯವ ಕೊಡುವೆ. ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ. ಹರುಷದೊಡನೆ ನೋಡುವೆ, ಆನಂದದೊಡನೆ ಕುಣಿಕುಣಿದಾಡುವೆ, ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ, ನಿತ್ಯದೊಡನೆ ಕೂಡಿ ಆಡುವೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ನಿಲವ ತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ.
--------------
ಅಕ್ಕಮಹಾದೇವಿ
ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ ! ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ರಾಣಿವಾಸದಾಣೆ. 453
--------------
ಬಸವಣ್ಣ
ಒಳ್ಳೆ ಪದಾರ್ಥಬಂದಡೆ ನೀಡೆಂಬಿರಿ, ಕೀಳುಪದಾರ್ಥಬಂದಡೆ ಬೇಡೆಂಬಿರಿ. ಕಮ್ಮಾದರೆ ನೀಡೆಂಬಿರಿ, ಆ ಪದಾರ್ಥ ಹೆಚ್ಚಾದರೆ ಪ್ರಸಾದ[ವೆಂದು] ಕೈಕೊಂಬಿರಿ. ಕಡ್ಡಿ ಹರಳು ಮೊದಲಾದ ಕಠಿನಪದಾರ್ಥ ಬಂದಡೆ, ಜಿಹ್ವೆಯಲ್ಲಿ ತೊಂಬಲವನಾರಿಸಿಬಿಡುವಿರಿ. ಮಕ್ಷಿಕ ಮೊದಲಾದ ಕ್ರಿಮಿಗಳು ಬಿದ್ದರೆ ಆರೂ ಅರಿಯದ ಹಾಗೆ ತೆಗೆದು ಸಿಪ್ಪದೆ ವರಸದೆ ಕದ್ದು ಚಲ್ಲುವಿರಿ. ಇಂತಪ್ಪ ಮೂಳಹೊಲೆಯರು ಪ್ರಸಾದಿಗಳೆಂದಡೆ ಪರಶಿವಪ್ರಸಾದಿಗಳಾದ ಶಿವಶರಣರು ಊರ ಸೂಳೆಯರ ಹಾಟಹೊಯಿಸಿ ತಲೆಯಬೋಳಿಸಿ ಪಟ್ಟಿಯ ತೆಗೆದು ಅವರ ಎಡಗಾಲಕೆರ್ಪಿನಿಂದ ಘಟ್ಟಿಸಿ ಮೂಡಲದಿಕ್ಕಿಗೆ ಅಟ್ಟಿದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಚಾರವೆಂಬುದು ಕೂರಲಗು, ತಪ್ಪಿ ಬಂದಡೆ ಪ್ರಾಣವ ತಗಲುವುದು. ಅದು ಕಾರಣ, ಅರಿದರಿದು ಆಚರಿಸಬೇಕು. ಆಚಾರವಿಚಾರ ಉಭಯದ ವಿಚಾರವ ನೋಡದೆ, ಶಿವದೀಕ್ಷೆಯ ಮಾಡಲಾಗದು. ಅದೆಂತೆಂದಡೆ : ಪರರ ಹೆಣ್ಣಿಗೆ ಕಣ್ಣಿಡದಿಹುದೆ ಒಂದನೆಯ ಆಚಾರ. ಪರರ ದ್ರವ್ಯವ ಅಪಹಾರ ಮಾಡದಿಹುದೆ ಎರಡನೆ ಆಚಾರ. ಸುಳ್ಳಾಡದಿರವುದೆ ಮೂರನೆಯ ಆಚಾರ. ವಿಶ್ವಾಸಘಾತವ ಮಾಡದಿಹುದೆ ನಾಲ್ಕನೆಯ ಆಚಾರ. ಪ್ರಾಣಹಿಂಸೆಯ ಮಾಡದಿಹುದೆ ಐದನೆಯ ಆಚಾರ. ಸಕಲ ಶಿವಶರಣರ್ಗೆ ಸಂತೋಷವಂ ಪುಟ್ಟಿಸುವುದೆ ಆರನೆಯ ಆಚಾರ. ಸ್ವೀಕರಿಸಿದ ನೇಮವ ಪ್ರಾಣಾಂತ್ಯವಾಗಿ ಬಿಡೆನೆಂಬುವ ಏಳನೆಯ ಆಚಾರ. ಷಟ್ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತವೆ ಎಂಟನೆ ಆಚಾರ. ಕೆಟ್ಟಜನರ ಸಹವಾಸ ಮಾಡದಿಹುದೆ ಒಂಬತ್ತನೆಯ ಆಚಾರ. ಸಜ್ಜನ ಸಂಗತಿಯ ಬಿಡದಿಹುದೆ ಹತ್ತನೆಯ ಆಚಾರ ಅನ್ಯದೇವತಾಭಜನೆಗೆ ವಿಮುಖನಾಗುವುದೆ ಹನ್ನೊಂದನೆಯ ಆಚಾರ. ಶಿವನೇ ಸರ್ವದೇವಶಿಖಾಮಣಿಯೆಂದು ಮನದಲ್ಲಿ ಅಚ್ಚೊತ್ತಿಪ್ಪುದೆ ಹನ್ನೆರಡನೆಯ ಆಚಾರ. ಶಿವನಿಗೆ ಶಿವಗಣಂಗಳಿಗೆ ಭೇದವ ಮಾಡದಿಹುದೆ ಹದಿಮೂರನೆಯ ಆಚಾರ. ಸಕಲ ಜೀವಿಗಳಿಗೆ ಹಿತವ ಬಯಸುವುದೆ ಹದಿನಾಲ್ಕನೆಯ ಆಚಾರ. ಸರ್ವರಿಗೆ ಹಿತವ ಮಾಡುವುದೆ ಹದಿನೈದನೆಯ ಆಚಾರ. ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಾಡುವುದೆ ಹದಿನಾರನೆಯ ಆಚಾರ. ಸರ್ವಾವಯವವ ಸ್ವಚ್ಛ ಪ್ರಕ್ಷಾಳಿಸುವುದೆ ಹದಿನೇಳನೆಯ ಆಚಾರ ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಾಡದಿಹುದೆ ಹದಿನೆಂಟನೆಯ ಆಚಾರ. ಪ್ರಣವಮುದ್ರೆ ಇಲ್ಲದ ವಸ್ತ್ರ ಹೊದೆಯದಿಹುದೆ ಹತ್ತೊಂಬತ್ತನೆಯ ಆಚಾರ. ಹುಟ್ಟಿದ ಶಿಶುವಿಗೆ ಲಿಂಗಾಧಾರಣ ಮಾಡದೆ, ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೆ ಇಪ್ಪತ್ತನೆಯ ಆಚಾರ. ಆಡಿದ ಭಾಷೆಯ ಕಡೆಪೂರೈಸುವುದೆ ಇಪ್ಪತ್ತೊಂದನೆಯ ಆಚಾರ. ಸತ್ಯವ ನುಡಿದು ತಪ್ಪದಿಹುದೆ ಇಪ್ಪತ್ತೆರಡನೆಯ ಆಚಾರ. ತುರುಗಳ ಕಟ್ಟಿ ರಕ್ಷಿಸುವುದೆ ಇಪ್ಪತ್ತುಮೂರನೆಯ ಆಚಾರ. ತುರುಗಳಿಗೆ ಲಿಂಗಮುದ್ರೆಯಿಕ್ಕಿ ಹಾಲು ಕರೆವುದು ಇಪ್ಪತ್ತುನಾಲ್ಕನೆಯ ಆಚಾರ. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಾಡುವುದೆ ಇಪ್ಪತ್ತೈದನೆಯ ಆಚಾರ. ಆ ಭಸ್ಮದ ರಾಶಿಯ ಪಾದೋದಕದೊಡನೆ ಉಂಡಿಯ ಕಟ್ಟುವುದೆ ಇಪ್ಪತ್ತಾರನೆಯ ಆಚಾರ. ವಿಧಿಯರಿತು ಸ್ಥಾನವರಿತು ರುದ್ರಾಕ್ಷಿಗ? ಧರಿಸುವುದೆ ಇಪ್ಪತ್ತೇಳನೆಯ ಆಚಾರ. ಶಿವಾನುಭವವ ಶಾಸ್ತ್ರವ ವಿಚಾರಿಸುವುದೆ ಇಪ್ಪತ್ತೆಂಟನೆಯ ಆಚಾರ. ಮನವ ನೋಯಿಸಿ ಮಾತನಾಡದಿಹುದೆ ಇಪ್ಪತ್ತೊಂಬತ್ತನೆಯ ಆಚಾರ. ಲಿಂಗದ ಕಲೆಯರಿತು ಲಿಂಗವ ಪೂಜಿಸುವುದೆ ಮೂವತ್ತನೆಯ ಆಚಾರ. ಗುರುಮುಖದಿಂದ `ತಾನಾರು' ತನ್ನ ನಿಜವೇನೆಂದು ಬೆಸಗೊಳ್ಳವುದೆ ಮೂವತ್ತೊಂದನೆಯ ಆಚಾರ. ಷಡ್ವರ್ಗಂಗಳ ಮೆಟ್ಟಿ ಷಟ್ಸ್ಥಲವನಿಂಬುಗೊಂಡುದೆ ಮೂವತ್ತೆರಡನೆಯ ಆಚಾರ. ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಂಡುದೆ ಮೂವತ್ತುಮೂರನೆಯ ಆಚಾರ. ಲಿಂಗದಲ್ಲಿ ಶಿಲೆಯ ಭಾವವನರಸದಿಹುದೆ ಮೂವತ್ತುನಾಲ್ಕನೆಯ ಆಚಾರ. ಜಂಗಮದಲ್ಲಿ ಕುಲವನರಸದಿಹುದೆ ಮೂವತ್ತೈದನೆಯ ಆಚಾರ. ವಿಭೂತಿಯ ಮಾಣ್ಬದಿಹುದೆ ಮೂವತ್ತಾರನೆಯ ಆಚಾರ. ರುದ್ರಾಕ್ಷಿಯ ಶುದ್ಧವ ಮಾಡಿ ಮಣಿಗಳ ಅರಸುವುದೆ ಮೂವತ್ತೇಳನೆಯ ಆಚಾರ. ಪಾದೋದಕದಲ್ಲಿ ಉಚ್ಛಿಷ್ಟವಳಿದುದೆ ಮೂವತ್ತೆಂಟನೆಯ ಆಚಾರ. ಪ್ರಸಾದದಲ್ಲಿ ರುಚಿಯ ನೋಡದಿಹುದೆ ಮೂವತ್ತೊಂಬತ್ತನೆಯ ಆಚಾರ. ಮಂತ್ರದಲ್ಲಿ ಕುತ್ಸಿತಕಲ್ಪನೆಯ ಮಾಡದಿಹುದೆ ನಾಲ್ವತ್ತೆಳನೆಯ ಆಚಾರ. ಲಿಂಗಾರ್ಚನವಿರಹಿತ ಭೋಜನ ಮಾಡದಿಹುದೆ ನಾಲ್ವತ್ತೊಂದನೆಯ ಆಚಾರ. ಐಕ್ಯರ ಸಮಾಧಿಗೊಳಿಸಿ ತಾನು ಲಿಂಗಪೂಜೆಯ ಮಾಡುವುದೆ ನಾಲ್ವತ್ತೆರಡನೆಯ ಆಚಾರ. ಲಿಂಗದ್ರೋಹವ ಕೇಳಿ ತಾನು ಪ್ರಾಣಬಿಡುವುದೆ ನಾಲ್ವತ್ತುಮೂರನೆಯ ಆಚಾರ. ಜಂಗಮದ್ರೋಹವ ಕೇಳಿ ತಾನು ಐಕ್ಯನಾಗುವುದೆ ನಾಲ್ವತ್ತುನಾಲ್ಕನೆಯ ಆಚಾರ. ಲಿಂಗದ್ರೋಹವ ಮಾಡಿದವನ ಪ್ರಾಣವ ಭೇದಿಸುವುದೆ ನಾಲ್ವತ್ತೈದನೆಯ ಆಚಾರ. ಜಂಗಮದ್ರೋಹವ ಮಾಡಿದವನ ಶಿರವನೀಡಾಡುವುದೆ ನಾಲ್ವತ್ತಾರನೆಯ ಆಚಾರ. ಅಷ್ಟಾವರಣಸಂಗವ ಮಾಡುವ ಭೇದವ ತಿಳಿವುದೆ ನಾಲ್ವತ್ತೇ?ನೆಯ ಆಚಾರ. ತಾನಾರು ಲಿಂಗವಾರು ಎಂಬ ಭೇದವು ತಿಲಮಾತ್ರ ಇಲ್ಲದಿರುವುದೆ ನಾಲ್ವತ್ತೆಂಟನೆಯ ಆಚಾರ. ತನ್ನ ನಿಜವಿಚಾರವ ತಾ ಮರೆಯದೆ ಷಟ್ಸ್ಥಲದವರಿಗೆ ಅರುಹಿ ತನ್ನಂತೆ ಮಾಡುವುದೆ ನಾಲ್ವತ್ತೊಂಬತ್ತನೆಯ ಆಚಾರ. ಇಂತಿಷ್ಟು ಆಚಾರಂಗಳ ಕಡೆಮುಟ್ಟಿಸುವುದೆ, ಕೂಡಲಚೆನ್ನಸಂಗಮದೇವರಲ್ಲಿ ಐವತ್ತನೆಯ ಆಚಾರ ನೋಡಾ ಸಿದ್ದರಾಮಯ್ಯಾ.
--------------
ಚನ್ನಬಸವಣ್ಣ
ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ ! ಇದೇನು ಸೋಜಿಗ ಹೇಳಾ ? ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ, ದೇವ ಬಂದಡೆ ದೇಗುಲ ಓಡಿತ್ತ ಕಂಡೆ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮೂಗ ಕಂಡ ಕನಸಿನಂತಾಯಿತ್ತಯ್ಯಾ, ಎನ್ನ ಭಕ್ತಿ ಹೇಳಲಾರಿಗೆ ಅರಿದು ಅಯ್ಯಾ, ಮತ್ತೆ ತೋರಲಾರಿಗೆ ಅರಿದು ಅಯ್ಯಾ ಶೂನ್ಯಕಾಯಕ್ಕೆ ಬಂದಡೆ ಸರ್ವರಿಗೆ ಕರತಳಾಮಳಕ ಕಪಿಲಸಿದ್ಧಮಲ್ಲಿಕಾರ್ಜುನ ಅಯಾ
--------------
ಸಿದ್ಧರಾಮೇಶ್ವರ
ನಿರವಯಸ್ಥಲದಲ್ಲಿ ನಿಂದ ಬಳಿಕ ಹೊನ್ನ ಹಿಡಿಯೆನೆಂಬ ಭಾಷೆ ಎನಗೆ. ಹೆಣ್ಣು ಹೊನ್ನು ಮಣ್ಣು ಹಿಡಿದು ಲಿಂಗೈಕ್ಯನಾದೆನೆಂದಡೆ ಎನ್ನ ಅಂಗದ ಮೇಲೆ ಲಿಂಗವಿಲ್ಲ. ಪಟ್ಟೆಮಂಚ ಹಚ್ಚಡ ಬಂದಡೆ ದಿಟ್ಟಿಸಿ ನೋಡೆ. ಸಣ್ಣ ಬಣ್ಣಗಳು ಬಂದಡೆ ಕಣ್ಣೆತ್ತಿ ನೋಡೆನೆಂಬ ಭಾಷೆ ಎನಗೆ. ಎನ್ನ ಲಿಂಗಕ್ಕೆ ಸೆಜ್ಜೆ ಶಿವದಾರವ ಬಾಯೆತ್ತಿ ಭಕ್ತ ಜಂಗಮವ ಬೇಡಿದೆನಾದಡೆ, ಎನ್ನ ಅರುವಿಂಗೆ ಭಂಗ ನೋಡಾ. ಬಸವಣ್ಣ ಸಾಕ್ಷಿಯಾಗಿ, ಪ್ರಭುವಿಗರಿಕೆಯಾಗಿ. ಪ್ರಭುದೇವರ ಕಂಡು ಕೈಯಲ್ಲಿ ಕಟ್ಟಿದ ಬಿರಿದಿಂಗೆ ಹಿಂದೆಗೆದೆನಾದಡೆ ಎನಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕ ಪ್ರಸಾದವೆಂಬುದು ಎಂದೆಂದಿಗೂ ಇಲ್ಲ. ಅಮುಗೇಶ್ವರನೆಂಬ ಲಿಂಗವು ಸ್ವಪ್ನದಲ್ಲಿ ಸುಳಿಯಲಿಲ್ಲ.
--------------
ಅಮುಗೆ ರಾಯಮ್ಮ
ಒಡೆಯರು ದೇವರಿಗೆ ಕೊಟ್ಟಲ್ಲದೆ, ಕೊಳ್ಳೆನೆಂಬ ಮೃಡನ ಭಕ್ತರ ನೋಡಾ. ಒಡೆಯರಿಗೊಂದು ಪರಿ, ತನಗೊಂದು ಪರಿ ಮಾಡುವ ಸಡಗರವ ನೋಡಾ. ಒಡೆಯಂಗೆ ಭೆಟ್ಟಿ, ಮನೆಯೊಡಯಂಗೆ ತುಪ್ಪ ಕಟ್ಟು ಮೊಸರು ಮೃಷ್ಟಾನ್ನ. ಒಡೆಯರಿಗೆ ಕುರುಹ ತೋರಿ, ತಾ ಹಿರಿದಾಗಿ ಉಂಬ ಕಡುಗಲಿಯ ನೋಡಾ. ಇವರಡಿಯಲ್ಲಿ ಬಂದಡೆ, ಇವರನೊಡಗೂಡಿ ನುಡಿದೆನಾದಡೆ, ಜೇನಗಡಿಗೆಯಲ್ಲಿ ಬಿದ್ದ ಗುದಿಮಕ್ಷಿಕನಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೆನಹಿನ ನಲ್ಲನು ಮನೆಗೆ ಬಂದಡೆ ನೆನೆವುದಿನ್ನಾರನವ್ವಾ ? ನೆರೆವ ಕ್ರೀಯಲ್ಲಿ ನೆರೆದು, ಸುಖಿಸುವುದಲ್ಲದೆ ನೆನೆವುದಿನ್ನಾರನವ್ವಾ ? ನೆನಹಿನ ನಲ್ಲ ಉರಿಲಿಂಗದೇವನ ಕಂಡ ಬಳಿಕ ನೆನವುದಿನ್ನಾರ ಹೇಳವ್ವಾ ?
--------------
ಉರಿಲಿಂಗದೇವ
ಕುದುರೆ- ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು, ಬಡಭಕ್ತರು ಬಂದಡೆ `ಎಡೆುಲ್ಲ, ಅತ್ತ ಸನ್ನಿ' ಎಂಬರು. ಎನ್ನೊಡೆಯ ಕೂಡಲಸಂಗಯ್ಯನವರ ತಡಗೆಡಹಿ ಮೂಗ ಕೊಯ್ಯದೆ ಮಾಬನೆ 414
--------------
ಬಸವಣ್ಣ
ನಿಮ್ಮ ಭಕ್ತಿಯಲ್ಲಿ ಧರಧುರನೆಂಬೆ. ದಿಟಕ್ಕೆ ಬಂದಡೆ ಅಡ್ಡ ಮುಖವನಿಕ್ಕುವೆ- ಗರುಡಂಗೆ ಘಟಸರ್ಪನ ತೋರುವಂತೆ ! ಶಿವಶರಣೆಂದಡೆ ಕಿವಿ ಕೇಳದಂತಿಹೆನು, ಮನಕ್ಕೆ ಮನವೇ ಸಾಕ್ಷಿಯಯ್ಯಾ, ಕೂಡಲಸಂಗಮದೇವಾ. 312
--------------
ಬಸವಣ್ಣ
ಜ್ಯೋತಿಷ್ಯ ಘನವೆಂಬೋ ನೀತಿಗಾರನೇ ನೀ ಕೇಳು : ಅಷ್ಟಗ್ರಹಂಗಳ ಬಲವು ದೊಡ್ಡಿತೆಂದು ನೀ ಪೇಳುವೆ. ಗ್ರಹಂಗಳಿಗೆ ವಿಪತ್ತು ಬಂದಡೆ, ಆರೂ ತಿದ್ದಿಕೊಳಲರಿಯರು ! ಸೂರ್ಯನೇ ಘನವೆಂಬುವೆ, ಚಕ್ರದಂತೆ ತಿರುಗುವನೇಕೆ ? ಚಂದ್ರನೇ ಘನವೆಂಬುವೆ, ಕ್ಷಯರೋಗದಿಂದ ಹೊರಳುವನೇಕೆ ? ಬುಧನೇ ಘನವೆಂಬುವೆ, ಬುದ್ಧಿಯಿಲ್ಲದನೆನಿಸಿಕೊಂಬನೇಕೆ ? ಬೃಹಸ್ಪತಿಯೇ ಘನವೆಂಬುವೆ, ತನ್ನ ಸ್ವಪತ್ನಿಯ ಕಳಕೊಂಡನೇಕೆ ? ಶುಕ್ರನೇ ಘನವೆಂಬುವೆ, ಕೊಡುವ ದಾನಕ್ಕಡ್ಡಲಾದನೇಕೆ ? ಕಣ್ಣಕಳಕೊಂಡನೇಕೆ ? ಶನಿಯೇ ಘನವೆಂಬುವೆ, ಸಂಕೋಲೆಯೊಳಗಿರುವನೇಕೆ ? ರಾಹು ಘನವೆಂಬುವೆ, ಸೆರೆಮನೆಯೊಳು ಬಿದ್ದಿಹನೇಕೆ ? ಇಂಥಾ ಜ್ಯೋತಿಷ್ಯ ಮುಖ್ಯವೇ ? ಮುಖ್ಯವಲ್ಲಾ ! ಮುಖ್ಯವು ದಾವುದೆಂದಡೆ, ನಮ್ಮ ಪ್ರಮಥ ಗಣಾದ್ಥೀಶ್ವರರ ಪ್ರಸಾದ ವಾಕ್ಯವೇ ಸರ್ವಸಿದ್ಧ ಎಂದು ನಂಬುವೆ ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಅಂದಂದಿಗೆ ನೂರು ತುಂಬಿತ್ತೆಂಬ ದಿಟವಿರಬೇಕು. ಸಂದ ಪುರಾತನರ ನೆನೆಯುತ್ತಿರಬೇಕು. ಜಂಗಮ ಮಠಕ್ಕೆ ಬಂದಡೆ, ವಂಚನೆಯಿಲ್ಲದೆ ಮಾಡಬೇಕು. ಎನಗಿದೇ ವರವನೀವುದು, ಬಸವಪ್ರಿಯ ಕೂಡಲಚನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಹುಟ್ಟುಗುರುಡ ಕತ್ತೆಯನೇರಿ ಬಪ್ಪಾಗ, ಮತ್ರ್ಯದ ಮಹಾಗಣಂಗಳು ಕಂಡು, ಕತ್ತೆಯನೇರಿ ಬಂದಡೆ, ಕತ್ತೆಯನೇರಿದ ಕುರುಡ ಹೊತ್ತುಕೊಂಡು, ಕತ್ತೆಯ ಕಾಲೇ ಕುರುಡಂಗೆ, ಕುರುಡನ ಕಾಲೇ ಕತ್ತೆಗೆ. ಈ ಗುಣ ಅಚ್ಚುಗವಾಯಿತ್ತು ಭಕ್ತರೆಲ್ಲರಿಗೆ. ಕತ್ತೆಯ ಕಣ್ಣು ಕಿತ್ತು, ಕುರುಡನ ಕಾಲ ಮುರಿದು, ಭಕ್ತಿ ಮುಕ್ತಿಯೆಂಬುದು ಸತ್ತಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->