ಅಥವಾ

ಒಟ್ಟು 43 ಕಡೆಗಳಲ್ಲಿ , 22 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಶರಣಸತಿ-ಲಿಂಗಪತಿ ಭಾವದಿಂದ ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವ, ನಿರುಪಾದ್ಥಿಕ, ನಿಷ್ಕಳಂಕ, ನಿರಾಳವೆಂಬ ನವವಿಧ ಹಸ್ತಗಳಿಂದ ನವವಿಧ ಪದಾರ್ಥವನ್ನು ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗ- ಆಚಾರಲಿಂಗ-ಗುರುಲಿಂಗ-ಶಿವಲಿಂಗ-ಜಂಗಮಲಿಂಗ ಪ್ರಸಾದಲಿಂಗ-ಮಹಾಲಿಂಗವೆಂಬ ನವವಿಧಲಿಂಗಗಳಿಗೆ ಶ್ರದ್ಧಾಭಕ್ತಿ ಮೊದಲಾಗಿ ನವವಿಧ ಭಕ್ತಿಗಳಿಂದ ಸಮರ್ಪಿಸುವ ಕ್ರಮವೆಂತೆಂದಡೆ : ತನುಸಂಬಂಧವಾದ ರೂಪುಪದಾರ್ಥವನ್ನು ಇಷ್ಟಲಿಂಗಕ್ಕೆ ಸಮರ್ಪಿಸಿ, ಮನಸಂಬಂಧವಾದ ರುಚಿಪದಾರ್ಥವನ್ನು ಪ್ರಾಣಲಿಂಗಕ್ಕೆ ಸಮರ್ಪಿಸಿ, ಧನಸಂಬಂಧವಾದ ತೃಪ್ತಿ ಪದಾರ್ಥವನ್ನು ಭಾವಲಿಂಗಕ್ಕೆ ಸಮರ್ಪಿಸಿ, ಸುಗಂಧಪದಾರ್ಥವನ್ನು ಆಚಾರಲಿಂಗಕ್ಕೆ ಸಮರ್ಪಿಸಿ, ಸುರಸಪದಾರ್ಥವನ್ನು ಗುರುಲಿಂಗಕ್ಕೆ ಸಮರ್ಪಿಸಿ, ಸುರೂಪುಪದಾರ್ಥವನ್ನು ಶಿವಲಿಂಗಕ್ಕೆ ಸಮರ್ಪಿಸಿ, ಸ್ಪರ್ಶನಪದಾರ್ಥವನ್ನು ಜಂಗಮಲಿಂಗಕ್ಕೆ ಸಮರ್ಪಿಸಿ, ಸುಶಬ್ದಪದಾರ್ಥವನ್ನು ಪ್ರಸಾದಲಿಂಗಕ್ಕೆ ಸಮರ್ಪಿಸಿ, ಸುತೃಪ್ತಿಪದಾರ್ಥವನ್ನು ಮಹಾಲಿಂಗಕ್ಕೆ ಸಮರ್ಪಿಸಿ, ಘ್ರಾಣ, ಚಿಹ್ನೆ, ನೇತ್ರ, ತ್ವಕ್ಕು, ಶ್ರೋತ್ರ, ಹೃದಯಂಗಳು ಮೊದಲಾದ ಸಮಸ್ತ ಮುಖಂಗಳಲ್ಲಿ ಬರುವ ಪದಾರ್ಥಂಗಳ ಸಮಸ್ತಲಿಂಗಂಗಳಿಗೆ ಮಿಶ್ರಾಮಿಶ್ರಂಗಳೊಡನೆ ಸಮರ್ಪಿಸಿ, ಆ ಲಿಂಗಂಗಳ ಸಂತೃಪ್ತಿ ಪರಿಣಾಮಪ್ರಸಾದದಲ್ಲಿ ಲೋಲುಪ್ತವಾಗಿರುವಂಥಾದೆ ಪಂಚೇಂದ್ರಿಯಾರ್ಪಿತದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಷ್ಪ್ರಪಂಚ ನಿರಾಲಂಬ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಫಲ ಒಳಗೆ ಪಕ್ವವಾಗಿಯಲ್ಲದೆ, ಹೊರಗಳ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿಹಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನದೇವರದೇವನ ಒಳಗಾದವಳ.
--------------
ಅಕ್ಕಮಹಾದೇವಿ
ಕಾಯದ ಸೂತಕವ ನೋಟದಿಂದ ಕಳೆದು, ನೋಟದ ಸೂತಕವ ಭಾವದಿಂದ ಕಳೆದು, ಭಾವದ ಪ್ರಕೃತಿ[ಯ] ಜ್ಞಾನದಿಂದ ಕಳೆದು, ಜ್ಞಾನದ ಬೆಳಗು ನಿಂದಲ್ಲಿ, ಅರ್ಕೇಶ್ವರಲಿಂಗವ ಮುಟ್ಟಿದ ಮುಟ್ಟು.
--------------
ಮಧುವಯ್ಯ
ಸಕಲ ವ್ಯಾಪಾರದಲ್ಲಿ ವ್ಯವಹರಣೆಯ ಮಾಡಿ ಬಂದು ನಿಂದ ಧರೆಯ ಮೇಲೆ ಅಯಿದು ರೂಪಾಗಿ ರೂಪಿಂಗೈದು ಕುರುಹಿನ ಭೇದದಲ್ಲಿ ಆರೋಪಿಸಿ ರೂಪು ರೂಪಿನಿಂದ ಅಳಿದು ದೃಷ್ಟವ ದೃಷ್ಟದಿಂದ ಕಾಬಂತೆ ಅರಿವ ಅರಿವಿಂದ ಭಾವವ ಭಾವದಿಂದ ತನ್ನ ತಾ ಕುರುಹಿಟ್ಟುಕೊಂಡು ತತ್ವ ನಿಶ್ಚಯವಾಗಿ ನಿಜವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಅಂಗಪ್ರಸಾದಿ ಆತ್ಮದ್ರೋಹಿ, ಲಿಂಗಪ್ರಸಾದಿ ಲಿಂಗದ್ರೋಹಿ, ಜಂಗಮಪ್ರಸಾದಿ ಜಂಗಮದ್ರೋಹಿ ಎಂದುದಾಗಿ, ಭಾವದಿಂದ ಪ್ರಸಾದವ ಕೊಂಡು, ಅನುಭಾವದಿಂದತಿಗಳೆದಡೆ ಅದು ಪ್ರಸಾದವಲ್ಲ, ಮಾಂಸ. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಸಂಪತ್ತ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಕಾಯದಿಂದ ಕಾಬುದು ಬ್ರಹ್ಮಯೋಗ. ಭಾವದಿಂದ ಕಾಬುದು ವಿಷ್ಣುಯೋಗ. ಜ್ಞಾನದಿಂದ ಕಾಬುದು ಅನಾದಿಶಕ್ತಿ ಸಂಬಂಧ ರುದ್ರಯೋಗ. ಇಂತೀ ತ್ರಿವಿಧಭೇದದಲ್ಲಿ ಸಂಬಂದ್ಥಿಗಳೆಲ್ಲರೂ ಬಂಕೇಶ್ವರಲಿಂಗನ ಶಂಕೆಯನರಿಯರು.
--------------
ಸುಂಕದ ಬಂಕಣ್ಣ
ಒಂದೆ ಭಾವದಿಂದ ಗುರುಲಿಂಗಾರ್ಚನೆ ಪೂಜೆಯಂ ಮಾಡಿ, ಹಿಂದಣ ಭವಜನ್ಮ ದಂದುಗವನೆ ಗೆಲಿದು, ಶಿವನ ಸಲುಸಂದ ಪ್ರಮಥರ ಸರಿಯೆನಿಸಿಕೊಂಬುದು ಸಾಮಾನ್ಯವಲ್ಲ. ಕಂದನ ಶಿವಗರ್ಪಿತವ ಮಾಡಿ, ಸಿರಿಯಾಳಸೆಟ್ಟಿ ಕೈಲಾಸ ಕಾಬುದು ಸಂದೇಹವಾಗಿಹುದೆಂದ. ಹೃದಯದ ಅಂಧಕಾರ ಹರಿಯಲೆಂದು, ಗುರುದೇವನು ಬೆಳಗ ತೋರಿದ. ಹಿಂದಣ ಸೂತಕ ತೊಳೆಯಲೆಂದು ನಿಂದರೂ ಮಾಯಾಬಂಧನದಲ್ಲಿ ಸಿಲ್ಕಿ, ಗುರುವಿಂಗೆ ವಂದನೆಯ ಮಾಡದೆ, ಶಿವಗತಿಗೆ ಸಂದೆನೆಂಬ ಸ್ವಾಮಿದ್ರೋಹಿಗಳಿಗೆ ಎಂದೂ ಗತಿಯಿಲ್ಲವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಬ್ರಹ್ಮಾಂಡವು ಹೇಗೆ ಪುಟ್ಟಿತ್ತು ಪೇಳ್ವೆ ಕೇಳಿರಯ್ಯಾ. ಆದಿ, ಅನಾದಿಯಿಂದತ್ತತ್ತಲಾದ ನಿರಾಕಾರ ಪರವಸ್ತು ತನ್ನ ಸ್ವರೂಪವ ತಾನರಿಯದೆ ಅನಂತ ಕಲ್ಪಕಲ್ಪಾಂತರ ಇರ್ದು ತನ್ನ ಸ್ವಲೀಲೆಯಿಂದ ತಾನೇ ಜಗತ್ಸøಷ್ಟಿ ನಿಮಿತ್ತವಾಗಿ, ನೆನವುದೋರಲು, ಆ ನೆನವು ನಿರ್ಧರವಾಗಿ ಚಿತ್ತೆನಿಸಿತ್ತು. ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು. ಆ ಚಿತ್ತು ತ್ರಿವಿಧಮಲ ಸಹವಾಗಿ ಚತುರ್ವಿಧವು ಘಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾಲಿಂಗದಿಂದ ಆತ್ಮ ಜನನ ; ಆತ್ಮದಿಂದ ಭಾವ ಪುಟ್ಟಿತ್ತು. ಆ ಭಾವದಿಂದ ಮೋಹ ಪುಟ್ಟಿತ್ತು. ಆ ಮೋಹವೆಂದಡೆ, ಮಾಯವೆಂದಡೆ, ಆಶೆಯೆಂದಡೆ, ಮನವೆಂದಡೆ ಏಕಪರ್ಯಾಯಾರ್ಥ. ಇಂತಪ್ಪ ಮೋಹದಿಂದ ತ್ರೈಲೋಕ ಮೊದಲಾಗಿ ಚತುರ್ದಶಭುವನಂಗಳು ಪುಟ್ಟಿದವು. ಆ ಚತುರ್ದಶಭುವನದ ಮಧ್ಯದಲ್ಲಿ ಇರುವೆ ಮೊದಲು ಆನೆ ಕಡೆಯಾಗಿ ಎಂಬತ್ತುನಾಲ್ಕುಲಕ್ಷ ಜೀವರಾಶಿಯೊಳಗೆ ದೇವ-ದಾನವ-ಮಾನವರು ಮೊದಲಾದ ಹೆಣ್ಣು-ಗಂಡು, ಸಚರಾಚರಂಗಳೆಲ್ಲವು ಉತ್ಪತ್ತಿಯಾದವು. ಇಂತೀ ಎಲ್ಲವು ಪರಶಿವನ ನೆನವುಮಾತ್ರದಿಂದ ಮರೀಚಿಕಾಜಲದಂತೆ, ಸುರಚಾಪದಂತೆ, ತೋರಿ ತೋರಿ ಅಡಗುವವಲ್ಲದೆ ನಿಜವಲ್ಲ ಮಿಥ್ಯವೆಂದು ತಿಳಿದು ವಿಸರ್ಜಿಸಿ ಬಿಡುವಾತ ತಾನೇ ಪರಶಿವನೆಂದು ತಿಳಿವುದಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಯದಿಂದ ಕರ್ಮವ ಕಂಡು, ಭಾವದಿಂದ ಲಿಂಗವ ಕಂಡು ಲಿಂಗದಿಂದ ಸ್ವಾನುಭಾವವಾಗಿ, ಅಂಗದ ಸಂಗಕ್ಕೆ ಹೊರಗಾಯಿತ್ತು ಕದಂಬಲಿಂಗವನರಿಯಲಾಗಿ
--------------
ಗೋಣಿ ಮಾರಯ್ಯ
ಓಂ ನಮೋ ಶಿವಾಯವೆಂಬ ಮಂತ್ರವು ನೆನಹಿಂಗೆ ಬಾರದಂದು. ತಾನುತಾನೆಂಬುದು ಭಾವಕೆ ತೋರದಂದು. ಎಂತಿರ್ದ ಬ್ರಹ್ಮವು ತಾನೇ ನೋಡಾ ! ಆ ಬ್ರಹ್ಮದ ಚಿದ್ವಿಲಾಸದಿಂದ ಚಿದಾತ್ಮನಾದ. ಆ ಚಿದಾತ್ಮನ ಭಾವದಿಂದ ಜ್ಞಾನಾತ್ಮನಾದ. ಆ ಜ್ಞಾನಾತ್ಮನ ಭಾವದಿಂದ ಆಧ್ಯಾತ್ಮನಾದ. ಆ ಆಧ್ಯಾತ್ಮನ ಭಾವದಿಂದ ನಿರ್ಮಲಾತ್ಮನಾದ. ಆ ನಿರ್ಮಲಾತ್ಮನ ಭಾವದಿಂದ ಶುದ್ಧಾತ್ಮನಾದ. ಆ ಶುದ್ಧಾತ್ಮನ ಭಾವದಿಂದ ಬದ್ಧಾತ್ಮನಾದ. ಆ ಬದ್ಧಾತ್ಮನ ಭಾವಕೆ ಭಕ್ತನಾದ. ಆ ಶುದ್ಧಾತ್ಮನ ಭಾವಕೆ ಮಹೇಶ್ವರನಾದ. ಆ ನಿರ್ಮಲಾತ್ಮನ ಭಾವಕೆ ಪ್ರಸಾದಿಯಾದ ಆ ಆಧ್ಯಾತ್ಮನ ಭಾವಕೆ ಪ್ರಾಣಲಿಂಗಿಯಾದ. ಆ ಜ್ಞಾನಾತ್ಮನ ಭಾವಕೆ ಶರಣನಾದ. ಆ ಚಿದಾತ್ಮನ ಭಾವಕೆ ಐಕ್ಯನಾದ. ಆ ಐಕ್ಯನ ಕರಕಮಲಕೆ ಮಹಾಲಿಂಗನಾದ. ಆ ಶರಣನ ಕರಕಮಲಕೆ ಪ್ರಸಾದಲಿಂಗನಾದ. ಆ ಪ್ರಾಣಲಿಂಗಿಯ ಕರಕಮಲಕೆ ಜಂಗಮಲಿಂಗನಾದ. ಆ ಪ್ರಸಾದಿಯ ಕರಕಮಲಕೆ ಶಿವಲಿಂಗನಾದ. ಆ ಮಹೇಶ್ವರನ ಕರಕಮಲಕೆ ಗುರುಲಿಂಗನಾದ. ಆ ಭಕ್ತನ ಕರಕಮಲಕೆ ಆಚಾರಲಿಂಗನಾದ. ಆ ಆಚಾರಲಿಂಗಕೆ ಕ್ರಿಯಾಶಕ್ತಿ, ಆ ಗುರುಲಿಂಗಕೆ ಜ್ಞಾನಶಕ್ತಿ, ಆ ಶಿವಲಿಂಗಕೆ ಇಚ್ಫಾಶಕ್ತಿ, ಆ ಜಂಗಮಲಿಂಗಕೆ ಆದಿಶಕ್ತಿ, ಆ ಪ್ರಸಾದಲಿಂಗಕೆ ಪರಾಶಕ್ತಿ, ಆ ಮಹಾಲಿಂಗಕೆ ಚಿಚ್ಭಕ್ತಿ. ಆ ಚಿಚ್ಫಕ್ತಿಸಂಗದಿಂದ ಚಿದ್ಬ್ರಹ್ಮವ ಕೂಡಿ ಚಿದಾನಂದಸ್ವರೂಪವಾದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯ, ನಿನ್ನ ಷಟ್ಚಕ್ರಂಗಳಲ್ಲಿ ಅನಾದಿ ನಿಷ್ಕಳಂಕ ಚಿದ್ಘನ ಇಷ್ಟಮಹಾಲಿಂಗವೆ ಷಡ್ವಿಧಲಿಂಗವಾಗಿ ನೆಲಸಿರ್ಪರು ನೋಡ, ಅದೆಂತೆಂದಡೆ: ಆಧಾರಚಕ್ರದ ನಾಲ್ಕೆಸಳಮಧ್ಯದಲ್ಲಿ ನಕಾರಮಂತ್ರಮೂರ್ತಿ ಆಚಾರಲಿಂಗವಾಗಿ ನೆಲಸಿರ್ಪರು ನೋಡ. ಸ್ವಾಧಿಷಾ*ನಚಕ್ರದ ಆರೆಸಳಮಧ್ಯದಲ್ಲಿ ಮಕಾರಮಂತ್ರಮೂರ್ತಿ ಗುರುಲಿಂಗವಾಗಿ ನೆಲಸಿರ್ಪರು ನೋಡ. ಮಣಿಪೂರಕಚಕ್ರದ ಹತ್ತೇಸಳಮಧ್ಯದಲ್ಲಿ ಶಿಕಾರಮಂತ್ರಮೂರ್ತಿ ಶಿವಲಿಂಗವಾಗಿ ನೆಲಸಿರ್ಪರು ನೋಡ. ಅನಾಹತಚಕ್ರದ ಹನ್ನೆರಡೆಸಳಮಧ್ಯದಲ್ಲಿ ವಕಾರಮಂತ್ರಮೂರ್ತಿ ಚರಲಿಂಗವಾಗಿ ನೆಲಸಿರ್ಪರು ನೋಡ. ವಿಶುದ್ಧಿಚಕ್ರದ ಹದಿನಾರೆಸಳಮಧ್ಯದಲ್ಲಿ ಯಕಾರಮಂತ್ರಮೂರ್ತಿ ಪ್ರಸಾದಲಿಂಗವಾಗಿ ನೆಲಸಿರ್ಪರು ನೋಡ. ಆಜ್ಞಾಚಕ್ರದ ಎರಡೆಸಳ ಮಧ್ಯದಲ್ಲಿ ಓಂಕಾರಮಂತ್ರಮೂರ್ತಿ ಮಹಾಲಿಂಗವಾಗಿ ನೆಲಸಿರ್ಪರು ನೋಡ. ಇಂತು ಷಟ್ಚಕ್ರಂಗಳಮಧ್ಯದಲ್ಲಿ ನೆಲಸಿ, ನಿನ್ನ ಷಡ್ವಿಧಭೋಗಂಗಳ ಕೈಕೊಂಡು, ಆ ಪರಿಣಾಮವ ನಿನಗೆ ಸಂತೃಪ್ತಿಯ ಮಾಡಿ, ಶರಣಸತಿ ಲಿಂಗಪತಿ ಭಾವದಿಂದ ಮೇಲುಗಿರಿಮಂಟಪದ ನವರತ್ನ ಖಚಿತ ಸಹಸ್ರದಳ ಪದ್ಮಯುಕ್ತವಾದ ಪರಿಯಂಕದ ಮೇಲೆ ಲಿಂಗಾನುಭಾವರತಿಸುಖಾನಂದದಿಂದ ಶೋಭಿಸುವಂಥದೆ ಆಧ್ಯಾತ್ಮ ದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಸಹಜವುಳ್ಳ ಭಕ್ತರಿಗೆ ಕಾಮುಕರಾಗಿ ಕೆಡಬೇಡೆಂದು ಅಜ್ಞಾನಕ್ಕೆ ಗುರಿಯಾದಿರಿ. ಮುಂದೆ ಜ್ಞಾನವೆಂಬುದೆಲ್ಲವಾಗಿ ಗುರುಪಾದವ ಹಿಡಿದು ಜ್ಞಾನಮುಕ್ತನಾಗಿ ಮೋಕ್ಷಾರ್ಥವ ಹಾರೈಸಿಕೊಂಡು ತನುವ ಗುರುವಿಗೆ ಅರ್ಪಿಸಬೇಕು, ಮನವ ಲಿಂಗಕ್ಕೆ ಅರ್ಪಿಸಬೇಕು, ಧನವ ಜಂಗಮಕ್ಕೆ ಅರ್ಪಿಸಬೇಕು. ತಮ್ಮ ಭಾವದಿಂದ ಬೋಧಿಸಿ ನುಡಿಯಲ್ಕೆ ಶಿಷ್ಯ ಸುಬುದ್ಧಿಯಿಂದ 'ಗುರುವೇ ನೀನು ಅಧಿಕಾರನು ನಿನ್ನ ಪಾದ ಸೋಂಕಿತೆಂದು' ನುಡಿಯಲಾಗಿ, ಆ ಶಿಷ್ಯಂಗೆ ಮನಮುಖ್ಯವಾದ ಬೋಧೆಯ ಬೋಧಿಸಿ ಆತಂಗೆ ಕಟ್ಟಳೆಯ ಮಾಡಿ ಹೆಣ್ಣು ಹೊನ್ನು ಮಣ್ಣು ಮೂರು ಗುರುವಿಗೆ ಅರ್ಪಿತ ಮಾಡಬೇಕೆಂದು ನುಡಿಯಲಾಗಿ, ಅವನು ವಿಕಾರಿಯಾಗಿ 'ಸ್ವಾಮಿ, ಹೆಣ್ಣು ಹೊನ್ನು ಮಣ್ಣು ಸರ್ವವೂ ನಿಮಗೆ ಸಮರ್ಪಣವೆಂದು' ನುಡಿಯಲಾಗಿ, ಬೋಧಿಸುವ ಆ ಗುರುವಿಂಗೆ ಒಂದು ವಿಕಾರ ಹೋಗಿ ಐದು ವಿಕಾರಗಳಾಗಿ ಪಂಚಭೂತ ಮದಂಗಳೇರಿ ತನುವಿಕಾರಿಯಾಗಿ ಮನವಿಕಾರಿಯಾಗಿ ಆಚಾರ ವಿಚಾರ ಬಿಟ್ಟು ಅನಾಚಾರಿಯಾಗಿ ಕಚ್ಚಡಕನಾಗಿ ಕೊಳ್ಳದ ಆಹಾರಂಗಳ ಕೊಂಡು ಕೆಟ್ಟ ವೇಷಡಂಭಕರ ತೋರದಿರಯ್ಯಾ. ಇಂಥ ತೊಟ್ಟೆ ಕುಡಿಯುವ ಮೆಚ್ಚು ಮಾರಿಗೆ ಎತ್ತಣ ಸ್ವಯಂಭು ಎತ್ತಣ ನಿಜವು. ತೊತ್ತು ದೊರೆಯಾಗುವುದೇನಯ್ಯಾ ? ನಿತ್ಯವನರಿಯದ ಮೃತ್ಯುಮಾರಿಗಳಿಗೆ ಎತ್ತಣ ಬ್ರಹ್ಮವು ? ಬ್ರಹ್ಮವೆತ್ತ, ತಾನೆತ್ತ, ಹೋಗತ್ತ. ಇಂಥ ಭ್ರಾಂತುಯೋಗಿಗಳು ಕೆಟ್ಟ ಕೇಡಿಂಗೆ ಕಡೆಯಿಲ್ಲ. ವಿದೇಹಿ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
>ಅರಿವಿನೆಡೆಯನರಿದೆಹೆನೆಂದರೆ ಅರಿವು ಮರಹಿಂಗೊಳಗಾಯಿತ್ತಾಗಿ, ಆ ಅರಿವಿಂದ ಅರಿದೆವೆಂಬ ಬರಿಜ್ಞಾನಿಯ ಮಾತ ಕೇಳಲಾಗದು. ಭಾವದಿಂದ ಭಾವಿಸಿದರೆ ಭಾವ ಭ್ರಾಂತಿಗೊಳಗಾಯಿತ್ತಾಗಿ ಭಾವದಿಂದ ಭಾವಿಸಿಹೆನೆಂಬ ಭ್ರಮಿತರ ಮಾತ ಕೇಳಲಾಗದು. ಜ್ಞಾನದಿಂದ ಅರಿದೆನೆಂದರೆ ಜ್ಞಾನ ಅಜ್ಞಾನಕ್ಕೊಳಗಾಯಿತ್ತಾಗಿ ಜ್ಞಾನದಿಂದ ಅರಿದೆನೆಂಬ ಅಜ್ಞಾನಿಯ ಮಾತ ಕೇಳಲಾಗದು, ಸುಜ್ಞಾನಭರಿತ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ವಸ್ತುವೆಂದರೆ ಪರಬ್ರಹ್ಮನಾಮ. ಆ ವಸ್ತು ತನ್ನಿಂದ ಭಾವವ ಕಲ್ಪಿಸಿ, ಆ ಭಾವದಿಂದ ಮಾಯವ ಕಲ್ಪಿಸಿ, ಆ ಮಾಯದಿಂದ ಮೋಹವ ಕಲ್ಪಿಸಿ, ಆ ಮೋಹದಿಂದ ಸಕಲ ಪ್ರಪಂಚುವ ಹುಟ್ಟಿಸಿ, ಆ ಪ್ರಪಂಚಿನಿಂದ ಸಮಸ್ತ ಜಗತ್ತು ಹುಟ್ಟಿತ್ತು ನೋಡಾ. ಇಂತಿವೆಲ್ಲವು ನೀನಾಗೆಂದಡಾದವು; ನೀ ಬೇಡಾಯೆಂದಡೆ ಮಾದವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರ್ಪಿತವಾದುದು ಮುಟ್ಟದೆ, ಅನರ್ಪಿತದಲ್ಲಿ ಮುಟ್ಟನರಿದು, ದೃಷ್ಟವ ಕಂಡು ಅರ್ಪಿಸುತ ಕಾಯದಿಂದ ಬಂದ ಕರ್ಮಾರ್ಪಿತ, ಭಾವದಿಂದ ಬಂದ ಭೇದಸ್ವರೂಪು, ಇಂತೀ ಕಾಯವ ಜೀವನರಿದಲ್ಲಿ ದೃಷ್ಟ ತನ್ನಷ್ಟವಾದುದು ಉಭಯ ಅರ್ಪಿತದ ದೃಷ್ಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಇನ್ನಷ್ಟು ... -->