ಅಥವಾ

ಒಟ್ಟು 54 ಕಡೆಗಳಲ್ಲಿ , 22 ವಚನಕಾರರು , 51 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನಹು ಸತ್ತಿತ್ತು ಭ್ರಾಂತು ಬೆಂದಿತ್ತು. ಅರಿವು ಮರೆಯಿತ್ತು ಕುರುಹುಗೆಟ್ಟಿತ್ತು. ಗತಿಯನರಸಲುಂಟೆ? ಮತಿಯನರಸಲುಂಟೆ? ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾಯಿತ್ತು. ಕಂಗಳಂಗದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಾಕಾರ ಸಂಗನಲ್ಲಿ ನಿರಾಕಾರವಿಲ್ಲೆಂದು ನಿರಾಕರ ಸಂಗವನರಸಿ ತೊಳಲಿ ಬಳಲಿದೆನಯ್ಯಾ. ನಿಶ್ಚಿಂತ ನಿಜಭಜನೆ ನೆಲೆಗೊಳ್ಳದೆನಗೆ, ಭ್ರಾಂತು ಭ್ರಮೆಯಿಲ್ಲದಂತೆ ಎಂದಪ್ಪುದೋ ಎನಗೆ ಕೂಡಲಸಂಗಮದೇವಾ, ಕೇಳಯ್ಯಾ.
--------------
ಬಸವಣ್ಣ
ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು. ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು. ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ? ಭ್ರಾಂತು ಭ್ರಾಂತನೆ ನುಂಗಿ ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ
--------------
ಅಲ್ಲಮಪ್ರಭುದೇವರು
ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು, ಅದೆಂತೆಂದಡೆ: ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ, ನಿಮ್ಮ ಹಾನಿವೃದ್ಧಿ ಎನ್ನದಾಗಿ. ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ? ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದಬಳಿಕ ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ ! ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ, ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು ! ಅದೆಂತೆಂದಡೆ, ಶಿವರಹಸ್ಯದಲ್ಲಿ: ``ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ ಇಂತೆಂಬ ಶ್ರುತ್ಯರ್ಥವ ಕೇಳದೆ, ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ, ಇದಕ್ಕೆ ಮತ್ತೆಯೂ ಶ್ರುತಿ: ``ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು ಕೋಪ ತಾಪಮಂ ಬಿಟ್ಟು, ಭ್ರಾಂತು ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನಿರಾಲಂಬದಲ್ಲಿ ನಿಜಲಿಂಗ ನಾ(ತಾ)ನೆಂಬ ಮಹದಹಂಕಾರವೆ ಸಂಸಾರಿಯಾಗಿ ಬಂದು ಬಳಲುವ ಭ್ರಾಂತು ಇನ್ನಾರಿಗೆಯೂ ತಿಳಿಯದಯ್ಯಾ. ಇನ್ನಾರು ಪರಿಹರಿಸುವರಯ್ಯಾ ಬಸವಣ್ಣನಲ್ಲದೆ? ಇದು ಕಾರಣ, ಬಸವಣ್ಣನ ಶ್ರೀಪಾದವ ತೋರಿ ಬದುಕಿಸಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಇರುಳೊಂದು ಮುಖ ಹಗಲೊಂದು ಮುಖ ಕಾಯವೊಂದು ಮುಖ ಜೀವವೊಂದು ಮುಖ, ಬುದ್ಧಿಯನರಿಯದಿದೆ ನೋಡಾ ! ಪ್ರಾಣಲಿಂಗವೆಂಬ ಭ್ರಾಂತು ನೋಡಾ ! ಇದು ಕಾರಣ_ಮೂರುಲೋಕವೆಯ್ದೆ ಬರುಸೂರೆವೋಯಿತ್ತು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಲಿಂಗ ನಿಮ್ಮದಾದಡೆ ನಿಮ್ಮ ಅಂಗೈಯೊಳಗೇಕೆ ಅಡಗದು ? ನಿಮ್ಮ ಅಂಗಮಯ ಲಿಂಗವಾದಡೆ ಸಂಸಾರದ ಅಂಗವ ಉಲುಹೇತಕ್ಕೆ ? ಅದು ನಮ್ಮ ಗುಹೇಶ್ವರಲಿಂಗದಲ್ಲಿ ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ.
--------------
ಅಲ್ಲಮಪ್ರಭುದೇವರು
ಹಾಹಾ ! ವೇದವೆ ತತ್ವವಾದಡೆ, ಮಾದಾರನ ಮನೆಯಲುಂಡನೊಬ್ಬ. ನಿಧಾನವುಳ್ಳ ಉಪಾಧ್ಯಾಯರಾರೂ ಇಲ್ಲದಾದಡೆ, ಶಾಸ್ತ್ರವೆ ತತ್ವವಾದಡೆ ಶಿವರಾತ್ರಿಯನೊಬ್ಬ ಬೇಡಂಗಿತ್ತುದನೊಬ್ಬ ಶ್ರೋತ್ರಿಯಂಗೀಯಲಾಗದೆ ? ಆಗಮವಿದ್ಥಿಯಲ್ಲಿ ಮಂತ್ರ ಮೂರುತಿಯೆಂಬ ಮಾತಂತಿರಲಿ. ಆದ ಕೇಳಲಾಗದು ಭ್ರಾಂತು ಬೇಡ. ಭಾವಮೂರುತಿ ಬಲ್ಲ ಪ್ರಮಾಣವಿದೆ. ಆ ಕುಲವೆಂದಡೆ ಹೊಕ್ಕ ಕಕ್ಕಯ್ಯಗಳ ಮನೆಯ. ಅಕ್ಕಟಾ, ನಿಮ್ಮ ತರ್ಕ ಮುಕ್ಕಾಯಿತ್ತು, ಲೋಕವರಿಯದೆ ? ಕಲ್ಲಲಿಟ್ಟು ಕಾಲಲೊದೆದಡೆ, ಅಲ್ಲಿ ಮೂರುತಿ ನುಡಿಯಿತ್ತಲ್ಲಯ್ಯಾ. ಬಲ್ವದನು ದ್ವಿಜರು ನೀವೆಲ್ಲರೂ ಹೇಳಿರೆ, ಸಲ್ಲದು, ನಿಮ್ಮ ವಾದ ನಿಲ್ಲಲಿ, ಬಲ್ಲಿದ ನಡೆದುದೇ ಬಟ್ಟೆ. ಮಹಾಲಿಂಗ ಕಲ್ಲೇಶ್ವರಾ, ಲಿಂಗಾಚಾರಿಗಳು ನಿಸ್ಸೀಮರಯ್ಯಾ.
--------------
ಹಾವಿನಹಾಳ ಕಲ್ಲಯ್ಯ
ಕೆರೆ ತೊರೆ ದೇಗುಲಂಗಳ ಕಡೆಯಿಂದ ನಿಮ್ಮ ಕಂಡೆ, ಎಡಹುವ ಕಲ್ಲ ತೆಗೆವ ಮರೆಯಲ್ಲಿ ನಿಧಾನವ ಕಂಡಂತೆ. ಎನ್ನ ಮರವೆಯ ತಮದ ಅದ್ರಿಗೆ ದಿನಮಣಿ ಜನಿಸಿದಂತೆ. ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆಂಬ ಭ್ರಾಂತು ಸ್ವಯವಾಯಿತ್ತು. ಪ್ರಭುದೇವರ ಕಾರುಣ್ಯದಿಂದ.
--------------
ಸಿದ್ಧರಾಮೇಶ್ವರ
ತನ್ನಿಂದ ತನ್ನ ನೋಡಲು, ತನಗೆ ತಾ ಪ್ರತ್ಯಕ್ಷನಾಗೆ ಆ ಪ್ರತ್ಯಕ್ಷವೆಂಬುದೆ ಭ್ರಾಂತು ನೋಡಾ ! ಅದೇನು ಕಾರಣವೆಂದಡೆ; ತನಗೆ ತಾನು ಅನ್ಯವಲ್ಲಾಗಿ, ಎನಗೆ ಅನ್ಯವಿಲ್ಲ. ಅನ್ಯ ನಾನಲ್ಲ ಎಂದು; `ಬ್ರಹ್ಮವು ನಾನು' ಎಂಬೆಡೆ_ ಅದು ಅತಿಶಯದಿಂದ ಭ್ರಾಂತು_ಎಂಬುದನು ತಿಳಿದು ನೋಡಾ. ಅದೇನು ಕಾರಣವೆಂದಡೆ: `ಬ್ರಹ್ಮಕ್ಕೆ ನಾ ಬ್ರಹ್ಮ' ಎಂಬುದು ಘಟಿಸದಾಗಿ ! ಅತಿಶಯದ ಸುಖವಳಿದ ನಿರಂತರ ಸುಖವೆಂತುಟೆಂದಡೆ ಗುರು ಮುಗ್ಧನಾದೆಡೆಯ ತಿಳಿಯಲು ನೋಡಲು ಗುಹೇಶ್ವರಲಿಂಗದ ನಿಲವು ತಾನೆ.
--------------
ಅಲ್ಲಮಪ್ರಭುದೇವರು
ತೂತಿಗೆ ಬಹವರ ಶುದ್ಧಿಯ ಮಾತು, ಅದೇತರ ವೇದ? ಅದೇತರ ಶಾಸ್ತ್ರ? ಅದೇತರ ಆಗಮಯುಕ್ತಿ? ಪೂರ್ವ ಅಪರವೆಂಬ ತೂತಿನ ಭೇದವ ಮುಚ್ಚಿ ಆತನನರಿತಲ್ಲಿ ಸಕಲ ಭ್ರಾಂತು ನಿರಸನ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ನೋಡುವ ದೃಷ್ಟಿಯು ಮುಟ್ಟಿದ ಮತ್ತೆ, ಇದಿರೆಡೆಯ ಕಾಬುದಿನ್ನೇನೊ ? ಕ್ರಿಯ ಸಂಪದಂಗಳ ಮರೆದು, ಅರಿವ ಅರಿವಿನ ತೆರನಿನ್ನೆಂತು ? ಸಕಲವೆಂದಲ್ಲಿ ಜಗ, ನಿಃಕಲವೆಂದಲ್ಲಿ ಕಾಬ ಲಕ್ಷ. ಕಂಡು ನಿಶ್ಚೆ ೈಸಿದಲ್ಲಿ ಕಂಡೆಹೆನೆಂಬ ಭ್ರಾಂತು ಕಾಣಿಸಿಕೊಂಡು ಇದಿರೆಡೆಗೊಟ್ಟುವದು, ಲಲಾಮಭೀಮಸಂಗಮೇಶ್ವರಲಿಂಗವನರಿದ ಶರಣ.
--------------
ವೇದಮೂರ್ತಿ ಸಂಗಣ್ಣ
ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ. ಅದ್ವೈತಿಯಾದಡೆ ತನುವಿಕಾರ, ಮನದ ಸಂಚಲ, ಭಾವದ ಭ್ರಾಂತು, ಅರಿವಿನ ಮರಹು, ಇಂತೀ ಚತುರ್ವಿಧಂಗಳಲ್ಲಿ ವಿಧಿನಿಷೇಧಂಗಳಳಿದು, ಚಿದ್ಬ್ರಹ್ಮದೊಳವಿರಳಾತ್ಮಕವಾದುದು ಅದ್ವೈತ. ಅಂತಪ್ಪ ವಿಧಿನಿಷೇಧಂಗಳು ಹಿಂಗದೆ, ಲಿಂಗವನರಿಯದೆ, ವಾಗದ್ವೈತದಿಂದ ನುಡಿದು ಅದ್ವೈತಿ ಎನಿಸಿಕೊಂಬುದೆ ದ್ವೈತ. ಇಂತಪ್ಪ ದ್ವೈತಾದ್ವೈತಂಗಳಿಗೆ ಸಿಲುಕದ, ಹರಿಹರಬ್ರರ್ಹದಿಗಳನರಿಯದ ವೇದಶಾಸ್ತ್ರ ಆಗದು ಪುರಾಣ ಇತಿಹಾಸ ರಹಸ್ಯಛಂದಸ್ಸು ಅಲಂಕಾರ ನಿಘಂಟು ಶಬ್ದತರ್ಕಂಗಳೆಂಬ ಕುತರ್ಕಂಗಳಿಗೆ ನಿಲುಕದ ನಿತ್ಯನಿಜೈಕ್ಯ ನಿರುಪಮಸುಖಿಯಾಗಿ, ತಾನಿದಿರೆಂಬ ಭಿನ್ನಭಾವವಿಲ್ಲದ ಸ್ವಯಾದ್ವೈತಿ ತಾನೆ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ನಿಮ್ಮಿಂದಲಾದೆ ನಾನು. ಎನಗೆ ದೇಹೇಂದ್ರಿಯ ಮನಃಪ್ರಾಣಾದಿಗಳಾದುವು. ಎನ್ನ ದೇಹೇಂದ್ರಿಯ ಮನಃಪ್ರಾಣಾದಿಗಳ ಕರ್ತ ನೀನೆ. ಅವರ ಆಗುಚೇಗೆ ಸುಖದುಃಖ ನಿನ್ನವು. ಒಳಗೂ ನೀನೆ, ಹೊರಗೂ ನೀನೆ. ನಾನೆಂಬುದು ನಡುವಣ ಭ್ರಾಂತು. ಎಲ್ಲ ವಿನೋದ ನೀನೆ ಬಲ್ಲೆ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಇನ್ನಷ್ಟು ... -->