ಅಥವಾ

ಒಟ್ಟು 13 ಕಡೆಗಳಲ್ಲಿ , 10 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹಂಕಾರವರತು ಗುರುವಾಗಿ, ಜಗವರತು ಲಿಂಗವಾಗಿ, ತ್ರಿವಿಧವರತು ಜಂಗಮವಾಗಿ, ಸಕಲೇಂದ್ರಿಯದ ಲಂಪಟವರತು ಭಕ್ತನಾಗಿ ಸಂಸಾರವೆಂಬ ಗಡಬಡೆಯಲ್ಲಿ ಸಿಲುಕದೆ, ಆವ ಸ್ಥಲದಲ್ಲಿ ನಿಂದು ನೋಡಿದಡೂ ಭಾವಶುದ್ಧವಾಗಿ ಗುರುವಿಂಗೆ ಗುರುವಾಗಿ, ಲಿಂಗಕ್ಕೆ ಲಿಂಗವಾಗಿ ಜಂಗಮಕ್ಕೆ ಜಂಗಮವಾಗಿ ಭಕ್ತರ ಯುಕ್ತಿಯ ಮಾರಿಕೊಂಡಿಪ್ಪ ಸದ್ಭಕ್ತ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು, ಅದೆಂತೆಂದಡೆ: ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ, ನಿಮ್ಮ ಹಾನಿವೃದ್ಧಿ ಎನ್ನದಾಗಿ. ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ? ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದಬಳಿಕ ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ ! ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ, ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು ! ಅದೆಂತೆಂದಡೆ, ಶಿವರಹಸ್ಯದಲ್ಲಿ: ``ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ ಇಂತೆಂಬ ಶ್ರುತ್ಯರ್ಥವ ಕೇಳದೆ, ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ, ಇದಕ್ಕೆ ಮತ್ತೆಯೂ ಶ್ರುತಿ: ``ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು ಕೋಪ ತಾಪಮಂ ಬಿಟ್ಟು, ಭ್ರಾಂತು ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂದು, ಜಂಗಮವ ಕಂಡು ಗೃಹಕ್ಕೆ ಬಿಜಯಂಗೈಸಿ ತಂದು, ತೊತ್ತಿನ ಕೈಯಲ್ಲಿ ಅಗ್ಗವಣಿಯ ತಂದಿರಿಸಿ ಪಾದಾರ್ಚನೆಯ ಮಾಡುವ ಭಕ್ತನ ಯುಕ್ತಿಯ ಕೇಳಿರಣ್ಣಾ ! ಭಕ್ತರ ಬಸುರಲ್ಲಿ ಬರುತ ಬರುತಲಾ ತೊತ್ತಿನ ಬಸುರಲ್ಲಿ ಬರುತ್ತಿಪ್ಪನು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎನ್ನ ಭಕ್ತಿಯ ಶಕ್ತಿಯು ನೀನೆ, ಎನ್ನ ಯುಕ್ತಿಯ ಶಕ್ತಿಯು ನೀನೆ, ಎನ್ನ ಮುಕ್ತಿಯ ಶಕ್ತಿಯು ನೀನೆ. ಎನ್ನ ಮಹಾಘನದ ನಿಲವಿನ ಪ್ರಭೆಯನುಟ್ಟು ತಳವೆಳಗಾದ ಸ್ವಯಜ್ಞಾನಿ ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ ಮಡಿವಾಳನಿಂದರಿದು ಬದುಕಿದೆನಯ್ಯಾ, ಪ್ರಭುವೆ.
--------------
ಬಸವಣ್ಣ
ಯುಕ್ತಿಯ ಕೇಳಿದಡೆ ಭಕ್ತಿಯ ತೋರಿದ. ಭಕ್ತಿಯ ಕೇಳಿದಡೆ ಯುಕ್ತಿಯ ತೋರಿದ. ನಿತ್ಯವ ಬೆಸಗೊಂಡಡೆ ಅತ್ತತ್ತಲೋಸರಿಸಿದ. ಗುಹೇಶ್ವರನ ಶರಣ ಬಸವಣ್ಣ, ಮರೆಗೆ ಮರೆಯನೊಡ್ಡಿ ಜಾರಿದನು. ಬಸವಣ್ಣನ ಪರಿ ಎಂತು ಹೇಳಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ಶಿವಭಕ್ತಿಯೆಂಬುದು ಯುಕ್ತಿಯ ಪರಿಯಂತಲ್ಲ, ಸಾಧಕದ ಪರಿಯಂತಲ್ಲ, ಮೂಗರು ಕಂಡ ಕನಸಿನಂತಿಪ್ಪುದು ಕಾಣಿರೆ.ಹೇಳಿ ಕೇಳಿ ಮಾಡುವುದು ಯುಕ್ತಿಭಕ್ತಿ. ಸಾಧಕಾಂಗದಿಂದ ಮಾಡುವುದು ಅಭ್ಯಾಸಭಕ್ತಿ. ಮನ ಕೂರ್ತು ಮಾಡುವುದು ಮುಕ್ತಿಭಕ್ತಿ. ಕೇಡಿಲ್ಲದೆ ಮಾಡುವುದು ನಿತ್ಯಭಕ್ತಿ. ಇದ್ದಂತಿದ್ದು ನಿಜವ ಅಪ್ಪುವುದು ನಿಜಭಕ್ತಿ. ಈ ನಿಜಭಕ್ತಿಯಲ್ಲಿ ಭರಿತರು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಇಷ್ಟಲಿಂಗಕ್ಕೆ ದೃಷ್ಟಪದಾರ್ಥಂಗಳ ಅರ್ಪಿಸುವಲ್ಲಿ ಕಟ್ಟಳೆವುಂಟು, ತನ್ನ ಘಟದ ಲಕ್ಷಣವುಂಟು. ಇಂತೀ ಉಭಯವ ಪ್ರಮಾಣಿಸಿಕೊಂಡು ಅರ್ಪಣದಿಂದ ಅರ್ಪಿಸುವಲ್ಲಿ ತೃಪ್ತಿಯ ಅಭಿಲಾಷೆಯಿಂದ ಸತ್ಯ ಸದೈವರ ಸಹಪಙ್ಞ್ತಯಲ್ಲಿ ಕ್ಷುತ್ತಿನ ಅಪೇಕ್ಷಕ್ಕಾಗಿ ಮತ್ತೆ ಪುನರಪಿಯಾಗಿ ಇಕ್ಕು ತಾಯೆಂದಡೆ, ಅದು ತನ್ನ ಕ್ಷುತ್ತಿನ ಭೇದವೊ ? ಭರಿತಾರ್ಪಣದ ಯುಕ್ತಿಯ ಭಿತ್ತಿಯೊ? ಭರಿತಾರ್ಪಣವೆಂಬಲ್ಲಿ ಲಿಂಗಕ್ಕೆ ಕೊಟ್ಟಲ್ಲದೆ ಮುಟ್ಟೆನೆಂಬ ಕಟ್ಟೊ ? ಅಲ್ಲಾ, ಸಾಧಕಾಂಗಿಗಳ ಸಂಗದ ಗುಣದಿಂದ ಬಂದ ಮುಟ್ಟೊ ? ಇಂತಿವ ತಿಳಿದು, ಮನವಚನಕಾಯ ಕರಣೇಂದ್ರಿಯಂಗಳು ಮುಂತಾದ ಭೇದಂಗಳಲ್ಲಿ ಒಮ್ಮೆಗೊಮ್ಮೆ ತುತ್ತನಿಡುವಲ್ಲಿ, ಸವಿಯಾದ ರಸಾನ್ನಗಳ ಚಪ್ಪಿರಿವಲ್ಲಿ, ಅಲ್ಲಿಗಲ್ಲಿಗೆ ಉಭಯವಳಿದ ಭರಿತಾರ್ಪಣದ ತೆರನ ಕಂಡು, ಈ ಗುಣ ಜಿಹ್ವೇಂದ್ರಿಯದ ಭರಿತಾರ್ಪಣ. ಇಂತೀ ಭರಿತಾರ್ಪಣವನಂಗೀಕರಿಸಿದ ಸರ್ವವ್ಯವಧಾನಿಯ ಎಚ್ಚರಿಕೆಯ ಮುಟ್ಟು, ಮುಂದೆ ಗುಹ್ಯೇಂದ್ರಿಯಕ್ಕೆ ಸಿಕ್ಕು. ಇಂತೀ ವಿಷಯ ವ್ಯಸನಾದಿಗಳಲ್ಲಿ ಭರಿತಾರ್ಪಣದಿಂದ ಕೂಡುವ ಪರಿಯಿನ್ನೆಂತೊ ? ಇಂದ್ರಿಯ ಬಿಡುವನ್ನಕ್ಕ ಪುನರಪಿಯಾಗಿ ಅಂಗೀಕರಿಸಿಯಲ್ಲದೆ ಚಲನೆಯ ಗುಣ ಹೆರೆಹಿಂಗದು. ಅಲ್ಲಿಯ ಭರಿತಾರ್ಪಣದ ಪರಿಯ ಬಲ್ಲವನಾದಡೆ ಸರ್ವ ಎಲ್ಲಾ ಗುಣದಲ್ಲಿ ಭರಿತಾರ್ಪಣ, ಲಿಂಗಾಂಗ ಪರಿಪೂರ್ಣನೆಂಬೆ. ಇಂತೀ ಗುಣವನರಿಯದೆ ಕಂಡಕಂಡವರ ಕಂಡು ಕೈಕೊಂಡು ಈ ವ್ರತವನಂಗೀಕರಿಸಿದನಾದಡೆ ಗುರುವಿಂಗೆ ದೂರ, ಲಿಂಗ ಅವಂಗಿಲ್ಲ, ಚರಪ್ರಸಾದ ಸಲ್ಲ. ಇಂತಿವನರಿಯದೆ, ಗೆಲ್ಲಸೋಲಕ್ಕೆ ಹೋರಿಹೆನೆಂದಡೆ ಚೆನ್ನಬಸವಣ್ಣನ ಕೋರಡಿಯ ಕೊಡುವೆ. ಸಂಗನಬಸವಣ್ಣನ ಮೆಚ್ಚಿಸುವೆ. ಪ್ರಭು ನಿಜಗುಣದೇವರ ತಲೆದೂಗಿಸುವೆ. ಇದಕ್ಕೆ ಹಾಕಿದೆ ಮುಂಡಿಗೆ, ವರ್ಮದ ತಲೆಸುತ್ತು, ಎನ್ನೊಡೆಯ ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಭಕ್ತಿಯಂತುಟಲ್ಲ, ಮುಕ್ತಿಯಂತುಟಲ್ಲ, ಯುಕ್ತಿಯ ಪರಿ ಬೇರೆ. ವೀರವೈರಾಗ್ಯಭಾಷೆಯಂತುಟಲ್ಲ, ಸಹಜದ ಪರಿ ಬೇರೆ. ಅಂಗಲಿಂಗದ ಸಂಬಂಧವು ಸಾರಾಯಂಗಲ್ಲದೆ, ಸುಪ್ರಸಾದ ಗ್ರಾಹಕತ್ವ ಪ್ರಾಣಲಿಂಗಿಗಲ್ಲದೆ. ಪರಿತಃ ಪ್ರಾಣಲಿಂಗೀನಾಂ ಲಿಂಗಪ್ರಾಣಂ ತದುತ್ತಮಂ ಸ್ವಯಮಾತ್ಮವಧಂ ಕುರ್ವನ್ ನರಕೇ ಕಾಲಮಕ್ಷಯಂ ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಸಂಬಂಧಸಾರಾಯಸುಪ್ರಸಾದ, ಪ್ರಾಣನಿಯತ ಲಿಂಗಪ್ರಾಣಿಗಲ್ಲದೆಲ್ಲಿಯದೋ.
--------------
ಚನ್ನಬಸವಣ್ಣ
ಸತ್ಯವ ನುಡಿಯದು, ಸದಾಚಾರದಲ್ಲಿ ನಡೆಯದು, ಭಕ್ತಿಯ ಪಿಡಿಯದು, ಮುಕ್ತಿಯ ಪಡೆಯದು, ಸುಡು ಸುಡು ಈ ಮನದ ಯುಕ್ತಿಯ. ಅಖಂಡೇಶ್ವರಾ, ನಿಮ್ಮ ಭಕ್ತಿಯ ಭಾವದಲ್ಲಿರಿಸಿ ಸಲಹಯ್ಯ ಎನ್ನ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಷಣ್ಮುಖಸ್ವಾಮಿ
ಅಯ್ಯಾ, ಎನ್ನ ಭಕ್ತಿಪ್ರಕಾಶ ನಿಮ್ಮನಾವರಿಸಿರ್ದು ಮರಳಿಮಾಡುವ ಕುರುಹಿಂಗೆ ಇಂಬುಗಾಣೆನಯ್ಯಾ. ಎನ್ನ ಯುಕ್ತಿಪ್ರಕಾಶ ನಿಮ್ಮನಾವರಿಸಿರ್ದು ಮರಳಿ ಯುಕ್ತಿಯ ಕುರುಹಿಂಗೆ ಇಂಬುಗಾಣೆನಯ್ಯಾ. ಅಯ್ಯಾ, ಎನ್ನ ಜ್ಞಾನತ್ರಿಪುಟಿಗಳ ಪ್ರಕಾಶ ನಿಮ್ಮನಾವರಿಸಿರ್ದು ಮರಳಿ ಜ್ಞಾತೃ, ಜ್ಞಾನ, ಜ್ಞೇಯವೆಂಬ ಕುರುಹಿಂಗೆ ಇಂಬುಗಾಣೆನಯ್ಯಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಲಿಂಗೈಕ್ಯದಾನಂದ ಬೆಳಗನೇನೆಂದುಪಮಿಸಬಹುದು ?
--------------
ದೇಶಿಕೇಂದ್ರ ಸಂಗನಬಸವಯ್ಯ
ಲೋಕವ ತಾ ಹೇಸಿದ ಬಳಿಕ ತನ್ನ ಲೋಕ ಹೇಸುವಂತಿರಬೇಕು. ಲೋಕದ ಚಾರಿತ್ರ ಶೃಂಗಾರವ ತಾ ಹೇಸಿದ ಬಳಿಕ ತನ್ನ ಚಾರಿತ್ರ ಶೃಂಗಾರವ ಲೋಕ ಕಂಡು ಹೇಸುವಂತಿರಬೇಕು. ದೇಹಗುಣರಹಿತವಾದ ವಿರಕ್ತಿ ಜ್ಞಾನಕ್ಕೆ ಇದೇ ಯುಕ್ತಿ. ಈ ಯುಕ್ತಿಯ ತಿಳಿದಡೆ ಅದೇ ಮುಕ್ತಿ! ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಗುರುವೆಂಬ ಅಂಗವ ಧರಿಸಿದಡೇನು? ಚಿತ್ರದ ಸತಿಯ ಕೈಯ ದೀಪಕ್ಕೆ ಮೊತ್ತದ ತಮ ಹರಿದುದುಂಟೆ? ನಿಃಕಳೆಯ ಲಿಂಗವ ಧರಿಸಿದಲ್ಲಿ ಫಲವೇನು? ಮೃತ್ತಿಕೆಯ ಬೊಂಬೆಯ ಕೈಯಲ್ಲಿ ನಿಶ್ಚಯದ ಖಂಡೆಯವಿರೆ, ಕುಟ್ಟಬಲ್ಲುದೆ? ವಿಧಾಂತ ರೂಪು ಲಾಂಛನದ ತೊಟ್ಟು, ಬಹುರೂಪಿಯಾದಲ್ಲಿ ನೆರೆ ಈಶನ ಯುಕ್ತಿಯ ವಿರಕ್ತಿ ಜಂಗಮವಾಗಬಲ್ಲನೆ? ಇಂತೀ ಮಾತಿನ ಬಳಕೆಯ ವೇಷವ ಬಿಟ್ಟು, ನಿಜತತ್ವದ ಸಾಕಾರವೆ ಮೂರ್ತಿಯಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
-->