ಅಥವಾ

ಒಟ್ಟು 13 ಕಡೆಗಳಲ್ಲಿ , 11 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಣೆಯ ಕೋಹಿನಲ್ಲಿ ಮೂರು ಬಾಗಿಲುಂಟೆಂಬರು ಯೋಗಿಗಳು. ಅವು ದ್ವಾರಗಳಲ್ಲದೆ ಬಾಗಿಲ ನಾವರಿಯೆವು. ಪ್ರದಕ್ಷಿಣದ ಒಳಗಾದ ಬಾಗಿಲು ಮುಚ್ಚಿದಲ್ಲಿ ಸಿಕ್ಕಿದ ದ್ವಾರಂಗಳಿಗೆ ಕುರುಹಿಲ್ಲ. ಊಧ್ರ್ವನಾಮ ಯೋಗ ಸಂಬಂಧವಾದ ಒಂದು ಬಾಗಿಲು ಕಟ್ಟಿ ಒಂಬತ್ತು ಮುಚ್ಚಿದ ಸಂದಿಗಳೆಲ್ಲವು ಅದರೊಳಗೆ ಸಲೆಸಂದ ಮತ್ತೆ ಹೋಹುದೊಂದೆ ಬಾಗಿಲು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಎಸಳೆಸಳಹೊಸದು ನೋಡುವ ಯೋಗಿಗಳು ಬಸವನೈಕ್ಯವನು ಕಾಣದಾದರು. ರೂಪ ನಿರೀಕ್ಷಿಸುವ ಯೋಗಿಗಳು ಬಸವನೈಕ್ಯವ ಕಾಣದಾದರು. ಸಂಗಯ್ಯಾ, ನಿಮ್ಮ ಬಸವನೈಕ್ಯವ ಬಲ್ಲಾತ ಚೆನ್ನಬಸವಣ್ಣನು.
--------------
ನೀಲಮ್ಮ
ಇಂದಿನ ಚಿಂತೆಯುಳ್ಳವರೆಲ್ಲ ಹಂದಿಗಳು. ನಾಳಿನ ಚಿಂತೆಯುಳ್ಳವರೆಲ್ಲ ನಾಯಿಗಳು. ತನ್ನ ಚಿಂತೆಯುಳ್ಳವರೆಲ್ಲ ಜೋಗಿಗಳು. ನಿನ್ನ ಚಿಂತೆಯುಳ್ಳವರೆಲ್ಲ ಯೋಗಿಗಳು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಯತಿಗಳು ಆಸೆರೋಷವ ಕಳೆಯಲರಿಯದೆ ಮತಿಭ್ರಷ್ಟರಾದರು. ಸಿದ್ಧರು ಆಸೆರೋಷವ ಕಳೆಯಲರಿಯದೆ ಬುದ್ಧಿಹೀನರಾದರು. ಯೋಗಿಗಳು ಆಸೆರೋಷವ ಕಳೆಯಲರಿಯದೆ ಹೆಗ್ಗರಾದರು. ಇಂತೀ ಯತಿ ಸಿದ್ಧ ಸಾಧ್ಯಯೋಗಿಗಳನರಿಯದ ಆಸೆಬದ್ಧವೆಂಬ ಮಾಯೆ ಕುರಿಮಾನವರನೆತ್ತ ಬಲ್ಲುದಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮೂಲದ ಜ್ವಾಲೆಯೆತ್ತಿ, ಕಮಲವ ತಾಳಿ, ಮೇಲೊಂದು ಕೊಡನಿಪ್ಪುದು. ಆ ಕೊಡನುಕ್ಕಿ ಅಮೃತವನುಣ್ಣಬೇಕೆಂಬ ಯೋಗಿಗಳು ಕೇಳಿರೋ, ಅದು ಶರೀರದ ಮಾತಲ್ಲ. ಮೂಲದ ದ್ವಾರವೆಂಬುದು ಬಂದ ಬಟ್ಟೆ, ಕೊಡನೆಂಬುದು ಶರೀರ, ಆ ಶರೀರವನುಂಟು ಮಾಡದೆ ಮೇಲಿಪ್ಪ ರಂಧ್ರಪದವನೊದೆದು ಭಾವಕ್ಕೆ ಬಾರದ ಪರಿಯಲ್ಲಿ ನಿಂದುದು ಅಮೃತಸೇವನೆ. ಆ ಭಾವದಲ್ಲಿ ಅರಿದು ನಿಂದು ತನ್ನಯ ಕುರುಹಿನ ಸುಖವ ವೇಧಿಸಿ ಪರಿಭ್ರಮಣಕ್ಕೆ ಸಿಕ್ಕದೆ ನಿಂದ ನಿಜವು ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಯೋಗದ ಲಾಗನರಿದು ಯೋಗಿಸಿಹೆನೆಂಬ ಯೋಗಿಗಳು ನೀವು ಕೇಳಿ. ನೆಲವಾಗಿಲ ಮುಚ್ಚಿ, ಜಲವಾಗಿಲ ಮುಚ್ಚಿ, ತಲೆವಾಗಿಲ ತೆಗೆದು ಗಗನಗಿರಿಯ ಪೂರ್ವಪಶ್ಚಿಮ ಉತ್ತರ ದಕ್ಷಿಣದ ನಡುವೆ ಉರಿವ ಅಗ್ನಿಯ ಕಂಡು, ಆ ಅಗ್ನಿಯ ಮೇಲೆ ಸ್ವರನಾಲ್ಕರ ಕೀಲುಕೂಟದ ಸಂಚಯವ ಕಂಡು, ಆ ಸಂಚಯದಲ್ಲಿ ಆಮೃತಸ್ವರವ ಹಿಡಿದು ಕೂಡುವುದೇ ಪರಮಶಿವಯೋಗ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅದೇ ಪರಮನಿರ್ವಾಣ.
--------------
ಸ್ವತಂತ್ರ ಸಿದ್ಧಲಿಂಗ
ಆತ್ಮನು ಘಟದಲ್ಲಿದ್ದ ಸೂತ್ರವ ಯೋಗಿಗಳು ಭೇದಿಸಿ ಕಂಡು ಧ್ಯಾನ ಧಾರಣ ಸಮಾಧಿಯಿಂದ ಆತ್ಮನ ಕಟ್ಟುವಡೆದನೆಂದು ನುಡಿದ ದಿಟ್ಟರ ನೋಡಾ. ಆತ್ಮ ಕಟ್ಟುವಡೆದ ಮತ್ತೆ ನಿಧಾನಿಸುವುದೇನು ಧಾರಣದಲ್ಲಿ? ಎಡೆ ತಾಕುವದೇನು ಸಮಾಧಿಯಲ್ಲಿ? ಸಮಾಧಾನದಿಂದ ಸಮಾಧಿಯಲ್ಲಿಪ್ಪುದೇನು ಎಂಬುದ ತಾನರಿತಲ್ಲಿ ಯೋನಿಯ ಯೋಗವೆನಲೇತಕ್ಕೆ? ಈಡಾ ಪಿಂಗಳವೆಂಬ ಎರಡು ದಾರಿಯಲ್ಲಿ ಸುಷುಮ್ನಾನಾಳಕ್ಕೆ ಏರಿದ ಮತ್ತೆ ಆತ್ಮನು ಮತ್ತೆ ಮತ್ತೆ ನಾಡಿನಾಡಿಗಳಲ್ಲಿ ದ್ವಾರದ್ವಾರಂಗಳಲ್ಲಿ ಭೇದಿಸಿ ವೇದಿಸಲೇತಕ್ಕೆ? ಬೀಜದ ತಿರುಳು ಸತ್ತ ಮತ್ತೆ ಎಯ್ದೆ ನೀರಹೊಯ್ದಡೆ ಸಾಗಿಸಿ ಬೆಳೆದುದುಂಟೆ? ಆತ್ಮಯೋಗಿಯಾದಲ್ಲಿ ನೇತ್ರ ಶ್ರೋತ್ರ ಘ್ರಾಣ ತ್ವಕ್ಕು ಜಿಹ್ವೆ ಎಂದಿನ ನಿಹಿತದಂತೆ ಆಡಬಹುದೆ? ಅದು ಯೋಗವಲ್ಲ, ಇವ ಕಲಿತೆಹೆನೆಂಬ ಬಲು ರೋಗವಲ್ಲದೆ, ಇದು ಮೀಸಲುಗವಿತೆ, ಇದು ಘಾತಕರುಗಳಿಗೆ ಅಸಾಧ್ಯ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಹೊಗಬಾರದು ಕಲ್ಯಾಣವನಾರಿಗೆಯೂ ಹೊಕ್ಕಡೇನು ? ಕಲ್ಯಾಣದ ಸ್ಥಾನಮಾನಂಗಳ ನುಡಿಯಬಾರದು. ಈ ಕಲ್ಯಾಣದ ಕಡೆಯ ಕಾಣಬಾರದು. ಕಲ್ಯಾಣದೊಳಗೆ ಹೊಕ್ಕೆಹೆವೆಂದು ಕಲ್ಯಾಣ ಚರಿತ್ರರಾದೆಹೆವೆಂದು ದೇವ ದಾನವ ಮಾನವರೆಲ್ಲರೂ ಭಾವಿಸುತ್ತಿರ್ದುರು ನೋಡಯ್ಯಾ ಕಲ್ಯಾಣವನು. ಅನಂತಮೂರ್ತಿಗಳು ಅನಂತ ಸ್ಥೂಲಮೂರ್ತಿಗಳು ಅನಂತ ಸೂಕ್ಷ್ಮಮೂರ್ತಿಗಳು ಅನಂತ ಮಂತ್ರಧ್ಯಾನರೂಪರು ಪುಣ್ಯಕ್ಕೆ ಅಭಿಲಾಷೆಯ ಮಾಡುವವರು ಪೂಜಕರು ಯೋಗಿಗಳು ಭೋಗಿಗಳು ದ್ವೈತರು ಅದ್ವೈತರು ಕಾಮಿಗಳು ನಿಷ್ಕರ್ಮಿಗಳು ಅಶ್ರಿತರು ಅದೆಂತು ಹೊಗಬಹುದಯ್ಯಾ ಕಲ್ಯಾಣವನು ? ಲಿಂಗದೃಷ್ಟಂಗಲ್ಲದೆ ಲಿಂಗವೇದ್ಯಂಗಲ್ಲದೆ ಲಿಂಗಗಂಭೀರಂಗಲ್ಲದೆ ಪ್ರಸಾದ ಕುಳಾನ್ವಯಂಗಲ್ಲದೆ ಆಸೆಗೆಡೆಗುಡದಿಪ್ಪುದೆ ಕಲ್ಯಾಣ. ಸರ್ವಾಂಗ ವರ್ಣವಳಿದು ಕುಲಮದ ತಲೆದೋರದೆ ಭಕ್ತಿ ನಿತ್ಯವಾದುದೆ ಕಲ್ಯಾಣ. ಈ ಕಲ್ಯಾಣವೆಂಬ ಮಹಾಪುರದೊಳಗೆ ಬಸವಣ್ಣನೂ ನಾನೂ ಕೂಡಿ ಹದುಲಿರ್ದೆವು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಇಪ್ಪತ್ತೆರಡು ಸಾವಿರ ಇಚ್ಛಾನಾಡಿಯಲ್ಲಿ ತಪ್ಪದೆ ರಮಿಸುವಾತನ ಉಪಪ್ರಯೋಗ ಹಂಸನೆಂದೆಂಬೆ. ಆತನ ಪರಿ ಅದಂತಿಲಿ ದ್ವಾರಮೊಂಬತ್ತರಲ್ಲಿ ನಾಯಕದ್ವಾರವನರಿಯಬೇಕು. ಯೋಗಿಗಳು ಬೇರೆ ಜಪ ನಿಮಗೇಕೆ? ಹೇಳಿರೇ? ಹಂಸ ಹಂಸಾಯೆಂಬ ಜಪವು ಸಂಪೂರ್ಣವಾಗಿ ಅತ್ತತ್ತ ಇತ್ರ್ತೆರಕೆ ಕಂಪಿಸದೆ ಇದ್ದಡೆ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಕೂರ್ತು ತತ್ವಮಸಿಯೆಂಬ ಇತ್ತಲಿದ್ದರ್ಥ ಒಯ್ಯುವನವ್ವಾ.
--------------
ಸಿದ್ಧರಾಮೇಶ್ವರ
ಕೊಂಡ ಆಹಾರದ ರಸವ ಕಟ್ಟಿ, ಯೋಗಿಗಳಾದೆವೆಂಬ ಭಂಡರು ನೀವು ಕೇಳಿರೊ. ಜೋಡು ದೇಹದ ಮಲಿನವ ಕಟ್ಟಿ ಮಾಯೆಯ ಗೆದ್ದಿಹೆವೆಂಬರು. ಬಿಂದುವಿನ ಸಂಚವನಿವರೆತ್ತ ಬಲ್ಲರು ? ಮನದ ಮಲಿನವೆ ಮಾಯೆ, ಮನದ ಸಂಚವೆ ಬಿಂದು. ಇಂತಪ್ಪ ಬಿಂದುವ ಕಟ್ಟಿ ಮಾಯೆಯ ಗೆಲಲರಿಯದವರು ಅವರೆತ್ತಣ ಯೋಗಿಗಳು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಇನ್ನು ನಾಡಿಧಾರಣವೆಂತೆಂದಡೆ : ಎಪ್ಪತ್ತೆರಡು ಸಾವಿರ ನಾಡಿಗಳೊಳು ಮೂವತ್ತೆರಡು ನಾಡಿ ಮುಖ್ಯವಾಗಿಹುದು. ಆ ಮೂವತ್ತೆರಡು ನಾಡಿಗಳೊಳು ಚತುರ್ದಶನಾಡಿಗಳು ಪ್ರಧಾನನಾಡಿಗಳಾಗಿಹವು. ಆ ಚತುರ್ದಶನಾಡಿಗಳೊಳು ಮೂರುನಾಡಿ ಮುಖ್ಯವಾಗಿಹುದು. ಆ ಮೂರು ನಾಡಿಗಳೊಳು ಒಂದುನಾಡಿ ಮುಖ್ಯವಾಗಿಹುದು. ಆ ಒಂದು ನಾಡಿಯ ಯೋಗಿಗಳು ಬ್ರಹ್ಮನಾಡಿಯೆಂಬರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎಪ್ಪತ್ತೆರಡು ಸಾವಿರ ಇಚ್ಛಾನಾಡಿಗಳಲ್ಲಿ ತಪ್ಪದೆ ಚರಿಸುವಾತನ ಉಪಪ್ರಯೋಗ ಹಂಸನೆಂದೆಂಬೆ. ಆತನ ಪರಿಯದಂತಿರ. ದ್ವಾರ ಒಂಬತ್ತರಲ್ಲಿ ನಾಯಕದ್ವಾರವನರಿಯಬೇಕು ಯೋಗಿಗಳು; ಬೇರೆ ಜಪ ನಿಮಗೇಕೆ ಹೇಳಿರೆ. `ಹಂಸ ಹಂಸ' ಎಂಬ ಜಪ ಸಂಪೂರ್ಣವಾಗಿ ಅತ್ತತ್ತತ್ತೆರಕ್ಕೆ ಕಂಪಿಸದ್ದಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು ಕೂರ್ತು `ತತ್ವಮಸಿ'ಯೆಂಬ ಭೈತ್ರದಿಂದೊಯ್ವನವ್ವಾ
--------------
ಸಿದ್ಧರಾಮೇಶ್ವರ
-->