ಅಥವಾ

ಒಟ್ಟು 29 ಕಡೆಗಳಲ್ಲಿ , 14 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲದೇಹಿಗಳ ಅಂಗದ ಮೇಲೆ ಲಿಂಗವಿದ್ದರೇನು ಅದು ಲಿಂಗವಲ್ಲ. ಅದೇನು ಕಾರಣವೆಂದರೆ, ಅವನು ಪ್ರಸಾದದೇಹಿ ಸಂಸ್ಕಾರಿದೇಹಿಯಲ್ಲ. ಅವನ ಸೋಂಕಿದ ಲಿಂಗವು ಕೆರೆಯ ಕಟ್ಟೆಯ ಶಿಲೆಯಂತಾಯಿತು. ಅವನು ಲಿಂಗಾಂಗಿ ಲಿಂಗಪ್ರಾಣಿಯಾಗದೆ ಅವನು ಮುಟ್ಟಿದ ಭಾಂಡ ಭಾಜನಂಗಳೆಲ್ಲ ಹೊರಮನೆ ಊರ ಅಗ್ಗವಣಿ ಎಂದೆನಿಸುವವು. ಅವನು ಮಲದೇಹಿ. ಅವನಂಗದಲ್ಲಿ ಗುರುವಿಲ್ಲ ಜಂಗಮವಿಲ್ಲ, ಪಾದೋದಕವಿಲ್ಲ ಪ್ರಸಾದವಿಲ್ಲ. ಅವನು ಅಶುದ್ಧ ಮಲದೇಹಿ. ಅವನ ಪೂಜಿಸಿದವಂಗೆ ರೌರವ ನರಕ ತಪ್ಪದೆಂದಾತ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಅಯ್ಯ, ಮಣ್ಣಿಂಗೆ ಹೊಡೆದಾಡುವಾತನ ಗುರುವೆಂಬೆನೆ? ಆತ ಗುರುವಲ್ಲ. ಹೆಣ್ಣಿಂಗೆ ಹೊಡೆದಾಡುವಂತಾ [ಗೆ?]À ಲಿಂಗವೆಂಬೆನೆ ? ಅದು ಲಿಂಗವಲ್ಲ. ಹೊನ್ನಿಂಗೆ ಹೊಡೆದಾಡುವಾತನ ಜಂಗಮವೆಂಬೆನೆ ? ಆತ ಜಂಗಮವಲ್ಲ. ಈ ತ್ರಿವಿಧಮಲಕ್ಕೆ ಹೊಡೆದಾಡುವಾತನ ಶರಣನೆಂಬೆನೆ ? ಆತ ಶರಣನಲ್ಲ ನೋಡಾ. ಈ ವಿಚಾರವನರಿದು, ಮಲತ್ರಯಂಗಳ ಸರ್ವಾವಸ್ಥೆಯಲ್ಲಿ ಹೊದ್ದಲೀಯದೆ ಗೌರವ ಬುದ್ಧಿ ಲಿಂಗಲೀಯ ಜಂಗಮಾನುಭಾವ ಸರ್ವಾಚಾರಸಂಪತ್ತಿನಾಚರಣೆಯ ಶ್ರುತಿ_ಗುರು_ಸ್ವಾನುಭಾವದಿಂದರಿದು ಆಚರಿಸಿದಡೆ, ಗುಹೇಶ್ವರಲಿಂಗದಲ್ಲಿ ಪರಾತ್ಪರಗುರುಲಿಂಗಜಂಗಮಶರಣನೆಂಬೆ ನೋಡ ಜೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಂಗದ ಮೇಲೆ ಶಿವಲಿಂಗ ನೆಲಸುವಂಗೆ ಮೂರುಸ್ಥಲವಾಗಬೇಕು. ಅವಾವವಯ್ಯಾಯೆಂದಡೆ: ಗುರುಲಿಂಗಜಂಗಮದಲ್ಲಿ ಭಕ್ತಿ. ಅರಿವ ಸಾದ್ಥಿಸುವಲ್ಲಿ ಜ್ಞಾನ. ಕರಣಾದಿಗಳ ಭಂಗ ವೈರಾಗ್ಯ. ಇನಿತಿಲ್ಲದೆ ಲಿಂಗವ ಪೂಜಿಸಿಹೆನೆಂಬ, ಲಿಂಗವ ಧರಿಸಿಹೆನೆಂಬ ಲಜ್ಜೆಭಂಡರ ಕಂಡು, ನಾ ನಾಚಿದೆನಯ್ಯಾ. ಇದು ಕಾರಣ ಗದ್ದುಗೆಗೆಟ್ಟು ಎದ್ದಾತನು ಲಿಂಗವಲ್ಲ ಕಾಣಾ. ಲಿಂಗ ಸತ್ತ, ನಾ ಕೆಟ್ಟೆ, ರಂಡೆಗೂಳೆನಿಸಲಾರೆ. ಎನ್ನ ಹತ್ಯವ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುದೀಕ್ಷೆಯಿಲ್ಲದ ಶಿಲೆಯ ಕೊರಳಲ್ಲಿ ಕಟ್ಟಿಕೊಂಡು ಲಿಂಗವೆಂದು ನುಡಿವ ಚಾಂಡಾಲಿ ನೀ ಕೇಳಾ. ಗುರುದೀಕ್ಷೆಯಿಲ್ಲದುದು ಶಿಲೆಯಲ್ಲದೆ, ಲಿಂಗವಲ್ಲ. ಅದು ಎಂತೆಂದರೆ : ಬ್ಥಿತ್ತಿಯ ಮೇಲಣ ಚಿತ್ರಕ್ಕೆ ಚೈತನ್ಯವುಂಟೇನಯ್ಯಾ ? ಗುರುದೀಕ್ಷವಿಲ್ಲದ ಲಿಂಗಕ್ಕೆ ಪ್ರಾಣಕಳೆಯುಂಟೇನಯ್ಯಾ ? ಪ್ರೇತಲಿಂಗವ ಕೊರಳಲ್ಲಿ ಕಟ್ಟಿ ಭೂತಪ್ರಾಣಿಗಳಾಗಿ ಲಿಂಗವಂತರೆಂಬ ಪಾಷಂಡಿಗಳ ನೋಡಾ ! ಸಾಕ್ಷಿ :``ಪ್ರೇತಲಿಂಗ ಸಂಸ್ಕಾರಿ ಭೂತಪ್ರಾಣೀ ನ ಜಾನಾತಿ'' ಎಂದುದಾಗಿ, ಹೆಸರಿನ ಲಿಂಗ, ಹೆಸರಿನ ಗುರುವಾದರೆ ಅಸಮಾಕ್ಷನ ನೆನಹು ನೆಲೆಗೊಳ್ಳದು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹುಸಿ ಕಳವು ಪರದಾರ ಹಿಂಸೆ ಅಧಿಕಾಶೆಗಳ ಕೂಡಿಸಿಕೊಂಡು ಇದ್ದು ಅನ್ಯ ಅನಾಚಾರದಲ್ಲಿ ವರ್ತಿಸುವವರು, ತಮ್ಮ ಅಂಗದ ಮೇಲೆ ಕಟ್ಟಿಕೊಂಡಿದ್ದ ಲಿಂಗವು ಅದು ಲಿಂಗವಲ್ಲ. ಅವರು ಮಾಡುವ ದೇವಪೂಜೆ ನಿಚ್ಚದಂಡಕ್ಕೆ ಪ್ರಾಯಶ್ಚಿತ್ತವೆಂದು ಶಿವನ ವಾಕ್ಯ ಮೊದಲಾದ ಸಕಲಪುರಾತನರ ವಚನಂಗಳು ಮುಂದೆ ಸಾರಿ ಹೇಳಿಹವು. ಅದು ಕಾರಣ_ಕೂಡಲಚೆನ್ನಸಂಗಯ್ಯಾ ಪ್ರಾಣಲಿಂಗದ ಸಂಬಂಧವಾದ ಸದ್ಭಕ್ತನು ಅನ್ಯಾಯ ಅನಾಚಾರದಲ್ಲಿ ವರ್ತಿಸುವವರ ಬಿಟ್ಟಿಹನು
--------------
ಚನ್ನಬಸವಣ್ಣ
ಕಟೆದ ಕಲ್ಲು ಲಿಂಗವೆಂದೆನಿಸಿತು; ಕಟೆಯದ ಕಲ್ಲು ಕಲ್ಲೆನಿಸಿತ್ತು. ಪೂಜಿಸಿದ ಮಾನವ ಭಕ್ತನೆನಿಸಿದನು; ಪೂಜಿಸದ ಮಾನವ ಮಾನವನೆನಿಸಿದನು. ಕಲ್ಲಾದಡೇನು? ಪೂಜೆಗೆ ಫಲವಾಯಿತ್ತು ; ಮಾನವನಾದಡೇನು? ಭಕ್ತಿಗೆ ಕಾರಣಿಕನಾದನು. ಕಲ್ಲು ಲಿಂಗವಲ್ಲ, ಲಿಂಗ ಕಲ್ಲಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕ್ರೀಯಿಂದಾದುದು ಲಿಂಗವೆಂದೆಂಬರು, ಕ್ರೀಯಿಂದಾದುದು ಜಂಗಮವೆಂದೆಂಬರು. ಕ್ರೀಯಿಂದಾದುದು ಲಿಂಗವಲ್ಲ, ಜಂಗಮವಲ್ಲ, ಜಂಗಮವುಂಟು ಜಂಗಮವಲ್ಲ. ಜಂಗಮ ಸುನಾದರೂಪು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು. ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು. ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು. ಇಂತಿವನೆಲ್ಲವನರಿವ ಚಿತ್ತ ದೇವರಲ್ಲ. ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು. ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ : ಕಂಡವರೊಳಗೆ ಕೈಕೊಂಡಾಡದೆ, ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ, ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ, ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ, ವೀರಬೀರೇಶ್ವರಲಿಂಗದೊಳಗಾದ ಶರಣ.
--------------
ವೀರ ಗೊಲ್ಲಾಳ/ಕಾಟಕೋಟ
ಸತಿಸುತ ಮಾತಾಪಿತರಂದದಿ ಮೋಹದಲಿ ಮನಮಗ್ನವಾದರೆ, ಅವನಿಗೆ ಲಿಂಗವಿಲ್ಲ , ಲಿಂಗಕ್ಕೆ ತಾನಿಲ್ಲ. ಅದೇನು ಕಾರಣವೆಂದರೆ, ಆತನ ಧ್ಯಾನ ಸತಿಯ ಮೇಲೆ ಸುತರ ಮೇಲೆ ಮಾತಾಪಿತರ ಮೇಲೆ ಇಪ್ಪುದಲ್ಲದೆ, ಲಿಂಗದ ಮೇಲಿಲ್ಲ. ಅದು ಕಾರಣ, ಆತ ಕಟ್ಟಿದುದು ಲಿಂಗವಲ್ಲ , ತೊಟ್ಟುದುದು ವಿಭೂತಿ ರುದ್ರಾಕ್ಷಿಯಲ್ಲ . ಅದು ಕಾರಣ, ಆತನಾಚಾರಕ್ಕೆ ದೂರ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ತಾನು ಹೊಳೆಯಲ್ಲಿ ಮುಳುಗಿ ಹೋಗುತ್ತ, ಈಸಬಲ್ಲವರ ಕಂಡೆನೆಂಬಂತೆ, ತಾ ನಾಶಕನಾಗಿ, ಇದಿರಿನಲ್ಲಿ ನಿರಾಶೆಯನರಸುವನಂತೆ, ತಾನಿದ್ದು ತನ್ನ ಕಾಣದೆ, ಕೆಟ್ಟುಹೋದೆಹೆನೆಂದು ಅರಸುವನಂತೆ. ಇಂತೀ ಗುಣವುಳ್ಳನ್ನಕ್ಕ ಗುರುವಲ್ಲ. ಆ ಗುರುವಿನ ಬೆಂಬಳಿಯಿಂದಾದುದು ಲಿಂಗವಲ್ಲ. ಇದಕ್ಕೆ ಮುಂಡಿಗೆಯ ಹಾಕಿದೆ, ಎತ್ತುವ ಧೀರರನಾರುವ ಕಾಣೆ. ಸತ್ತ ಹೆಣನನೆತ್ತಿ ಅರ್ತಿಮಾಡುವನಂತೆ, ಸಚ್ಚಿದಾನಂದ, ನಿಃಕಳಂಕ ಮಲ್ಲಿಕಾರ್ಜುನವರುವ ಬಲ್ಲನಾಗಿ ಒಲ್ಲನು.
--------------
ಮೋಳಿಗೆ ಮಾರಯ್ಯ
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ಭೂಮಿಯಲ್ಲಿ ಹುಟ್ಟಿದ ಕಲ್ಲು ತಂದು ಲಿಂಗವೆಂದು ಹೆಸರಿಟ್ಟು, ಶುಕ್ಲ ಶೋಣಿತಾತ್ಮಸಂಬಂಧವಾದ ಮಾತಾಪಿತರ ಸಂಯೋಗದಿಂದ ಪುಟ್ಟಿದ ಮನುಜರಿಗೆ ಭಕ್ತನೆಂದು ಹೆಸರಿಟ್ಟು, ಇಂತಪ್ಪ ಭಕ್ತಂಗೆ ಅಂತಪ್ಪ ಲಿಂಗವನು ವೇಧಾ, ಮಂತ್ರ, ಕ್ರಿಯೆ ಎಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ, ಅಂಗದ ಮೇಲೆ ಲಿಂಗಧಾರಣವ ಮಾಡಿದಡೆ, ಅದು ಲಿಂಗವಲ್ಲ, ಅವನು ಭಕ್ತನಲ್ಲ. ಅದೇನು ಕಾರಣವೆಂದಡೆ: ಅವನು ಮರಣಕ್ಕೆ ಒಳಗಾಗಿ ಹೋಗುವಲ್ಲಿ ಪೃಥ್ವಿಯ ಕಲ್ಲು ಪೃಥ್ವಿಯಲ್ಲಿ ಉಳಿಯಿತು. ಭಕ್ತಿ ಭ್ರಷ್ಟವಾಗಿ ಹೋಯಿತು ಬಿಡಾ ಮರುಳೆ. ಇದು ಲಿಂಗಾಂಗಸ್ವಾಯುತವಲ್ಲ. ಲಿಂಗಾಂಗದ ಭೇದವ ಹೇಳ್ವೆ ಲಾಲಿಸಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗ ಲಿಂಗವೆಂಬರು, ಲಿಂಗ ಅಂಗವೆಂಬರು, ಅದು ಹುಸಿ ಕಾಣಿರೊ, ಅಯ್ಯಾ ! ಅಂಗವೇ ಲಿಂಗವಾದರೆ ಕಾಯದಲ್ಲಿ ಕಳವಳವುಂಟೆ ? ಲಿಂಗವೆ ಅಂಗವಾದರೆ ಪ್ರಳಯಕ್ಕೊಳಗಹುದೆ ? ಅಂಗ ಲಿಂಗವಲ್ಲ, ಲಿಂಗ ಅಂಗವಲ್ಲ. ಅಂಗ-ಲಿಂಗ ಸಂಬಂಧವಳಿದಲ್ಲಿ ಪ್ರಾಣಲಿಂಗಸಂಬಂಧಿ, ಪ್ರಾಣ ನಿಃಪ್ರಾಣವಾದಲ್ಲಿ ಲಿಂಗರೂಪು, ರೂಪು ನಾಸ್ತಿಯಾದಂದು ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಆ ಭಕ್ತಂಗೆ ಲಿಂಗವೇ ಪ್ರಾಣ; ಆ ಲಿಂಗಕ್ಕೆ ಗುರುವೇ ಪ್ರಾಣ; ಆ ಗುರುವಿಂಗೆ ಜಂಗಮವೇ ಪ್ರಾಣ ನೋಡಾ. ಅದೇನುಕಾರಣವೆಂದರೆ: ಆ ನಿತ್ಯ ನಿರಂಜನ ಪರವಸ್ತುವೆ ಘನ ಚೈತನ್ಯವೆಂಬ ಜಂಗಮವು ನೋಡಾ. ಆ ಪರಮ ಜಂಗಮದಿಂದ ನಿಃಕಲ ಗುರುಮೂರ್ತಿ ಉದಯವಾದನು ನೋಡಾ. ಆ ನಿಃಕಲ ಗುರುಮೂರ್ತಿಯಿಂದ ಆದಿಮಹಾಲಿಂಗವು ಉದಯವಾಯಿತ್ತು ನೋಡಾ. ಆ ಆದಿಮಹಾಲಿಂಗದಿಂದ ಮೂರ್ತಿಗೊಂಡನು ಭಕ್ತನು. ಆ ಗುರುವಿಂಗೆ ಆ ಲಿಂಗಕ್ಕೆ ಆ ಭಕ್ತಂಗೆ ಆ ಜಂಗಮ ಪ್ರಸಾದವೇ ಪ್ರಾಣ ನೋಡಾ. ಇದು ಕಾರಣ: ಭಕ್ತನಾದರೂ ಲಿಂಗವಾದರೂ ಗುರುವಾದರೂ ಜಂಗಮ ಪ್ರಸಾದವ ಕೊಳ್ಳಲೇಬೇಕು. ಜಂಗಮ ಪ್ರಸಾದವ ಕೊಳ್ಳದಿದ್ದರೆ ಆತ ಗುರುವಲ್ಲ, ಅದು ಲಿಂಗವಲ್ಲ; ಆತ ಭಕ್ತನಲ್ಲ ನೋಡಾ. ಆ ಶೈವ ಪಾಷಂಡಿಯ ಕೈಯ ಪಡೆದುದು ಉಪದೇಶವಲ್ಲ; ಆತನಿಂದ ಪಡೆದುದು ಲಿಂಗವಲ್ಲ. ಆ ಲಿಂಗವ ಧರಿಸಿಪ್ಪಾತ ಭಕ್ತನಲ್ಲ. ಅವ ಭೂತಪ್ರಾಣಿ ನೋಡಾ. ಇದುಕಾರಣ: ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬಾತನೆ ಶಿವಭಕ್ತನು. ಆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳ್ಳದಿದ್ದರೆ ಅವ ಭವಿಗಿಂದಲು ಕರಕಷ್ಟ ನೋಡಾ. ಆ ಭವಭಾರಿಯ ಮುಖ ನೋಡಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿಯನಾದಿ ಆಚಾರವ ಕಾಣದೆ, ಸಮಮಾನದ ಲಿಂಗದ ಘನವ ತಿಳಿಯದೆ, ದಾಸಿಯ ಸಂಗಂಗೆಯ್ವ ಜಂಗಮಾಚಾರ್ಯಜ್ಞಾನಪುರುಷರು ಚಿತ್ತೈಸಿ, ಶೈವಾರಾದನೆಯ ಸ್ಥಲದಂತೆ ನಡೆದು, ಗಳಹಿಕೊಂಡು ಇಪ್ಪಿರಿ. ಅಂಗದನಿತ ದಾಸೆಗೆ, ಪಂತಿಯ ಗಡಣದ ಹಸುವಿನಾಸೆಗೆ, ಕಾಂಚಾಣದ ಪಂತಿಯಾಸೆಗೆ, ಸ್ಥಲ ಜಂಗಮಸ್ಥಲವಾಸಿಯ ಗಡಣದಾಸೆಗೆ, ಪಂತಿ ಪಾದಾರ್ಚನೆಯ ಹಿರಿಯತನದ ಗಡಣ ಗಮಕದಾಸೆಗೆ, ಕೃತಿಯ ದ್ವೆ ೈತವ ನಟಿಸುವ ಪಂಚಮಹಾಪಾತಕದೇವರ ದೇವತ್ವದ ಬಲ್ಲರು ಕೇಳಿರಣ್ಣ. ನಾ ದೇವತಾದೇವನೆಂಬುದೊಂದು ಸಮದೇವತ್ವದ ಗಳಹುವಿರಿ. ಅಂಗದಲ್ಲಿ ಸೋವಿ ಮಾತ್ರವೆಂಬ ಸ್ತ್ರೀಯ ಆಲಿಂಗನಂಗೈದು ಗಳಹುವಿರಿ. ಶ್ರುತಿಃ ಅರ್ಧವಣಿ ಕಥಃ ಸೋವಿ ವಚಃ ಬಾದಿನಿ ಪರ್ವಣಃ | ಪಾಪಿಷ್ಟಾ ದುಷ್ಟದ್ರೋಹಿ ಚಾ ಪಾಪಿಷ್ಟ ಗುರುದ್ರೋಹಿ ಚಾ | ಗುರುಶಿವಚ್ಚೇದನ ತತ್ ಗುರುಷಾಮಾ ಚಿ ಅಪಹಿನ್ | ಗುರುಬಂಧನ ಗ್ರಾಹಿ ಚಃ | ಇಂತೆಂದುದಾಗಿ, ಸೋವಿಮಾತ್ರವೆಂದು ವಾಗದ್ವೈತವನುಂಟುಮಾಡಿ ಕಂಡು, ತಮ್ಮ ಸ್ವಯ ಇಚ್ಛೆಯ ಭಾವಕ್ಕೆ ಗಳಹಿಕೊಂಡು, ಹಿರಿಯರ ಮರೆಯಲ್ಲಿ ಕುಳಿತು, ಒಡಲ ಹೊರೆವ ಶೂಕರನಂತೆ, ತುಡುಗುಣಿತನಕ್ಕೆ ಗಡಣಿಸಿಕೊಂಡು ಹಿರಿಯರೆಂಬಿರಿ. ಶಿವಾಚಾರ ಃ ಗಿರಿಜಾನಾಥಂಗೆ ಗೌರಿ ತ್ರಿವಿಧವಿಧಮೇಕಾರ್ಥಕಲ್ಯಾಣ, ಗಿರಿಜಾಧಾರಿಯಲ್ಲಿ ಶಿವನ ದೇವತ್ವ ಕೆಟ್ಟಿತ್ತೆ ಪಾತಕರಿರಾ? ಸೋವಿಯ ಆಲಿಂಗನಂಗೈದು, ಚುಂಬನ ಕರ ಉರ ಜಘನ ಯೋನಿಚಕ್ರವ ಕೂಡಿ ನೆರೆದ ಬಳಿಕ, ಪ್ರಾತಃಕಾಲದಲ್ಲಿ ಹನ್ನೆರಡು ಜಂಗಮದೇವರಿಗೆ ಹನ್ನೆರಡು ಸುವರ್ಣಗಾಣಿಕೆಯನಿಕ್ಕಿ, ಹನ್ನೆರಡು ದ್ವಿವಸ್ತ್ರ, ಹನ್ನೆರಡು ತೆಂಗಿನಕಾಯಿಂದ ಹನ್ನೆರಡು ಜಂಗಮದೇವರಿಗೆ ಈ ಪರಿಯಾರ್ಥ ಅರ್ಚನೆಯ ಮಾಡಿದರೆ, ನವಭೋಗದೊಳಗಣ ತ್ರಿವಿಧ ಭಾಗೆಯ ಕಲೆಯಿರಣ್ಣ. ಅರಿದು ಮಾಡಿ ಮರದಂತೆ, ಬೆಬ್ಬನೆ ಬೆರೆತುಕೊಂಡಿರುವಾತ ಹಿರಿಯನಲ್ಲ. ಆತ ಗುರುವಲ್ಲ ಲಿಂಗವಲ್ಲ ಜಂಗಮವಲ್ಲ ಪಾದೋದಕ ಪ್ರಸಾದದೊಳಗಲ್ಲ. ಅವ ಅಮೇಧ್ಯ ಸುರ ಭುಂಜಕನು. ಇಂತೆಂಬ ಶ್ರುತಿಯ ಮೀರಿ ಆಚರಿಸುವ, ಬ್ರಹ್ಮರಾಕ್ಷಸ. ನವಕೋಟಿ ಯೋನಿಚಕ್ರದಲ್ಲಿ ರಾಟಾಳದ ಘಟದಂತೆ ತಿರುಗುವನು. ಆದಿಯ ವಚನದ ಸಮ್ಮತವಿದು, ಸೋವಿಯ ಸಂಗ ಆಲಿಂಗನಂಗೈವಿರಿ. ಸೋವಿಯ ಸಂಗ ಆಲಿಂಗನಂಗೈದವ, ಶತಕೋಟಿ ಶೂಕರಯೋನಿಯಲ್ಲಿ ಬಪ್ಪನು. ನವಕೋಟಿ ಗಾರ್ಧಭಯೋನಿಯಲ್ಲಿ ಬಪ್ಪನು. ಶತಕೋಟಿ ಕುಕ್ಕುಟಯೋನಿಯಲ್ಲಿ ಬಪ್ಪನು. ಸಚರಾಚರಯೋನಿ ಯೋನಿನವಕೋಟಿ ತಪ್ಪದು. ಅವಂಗೆ ಜನ್ಮ ಜನ್ಮಾಂತರದಲ್ಲಿ ಬಪ್ಪುದು ತಪ್ಪದು. ಇಂತಿದನರಿದು ಮರೆದೆಡೆ, ದೇವ ಮತ್ರ್ಯ ತಪರ್ಲೋಕಕ್ಕೆ ಸಲ್ಲಸಲ್ಲ, ಅಲ್ಲ ನಿಲ್ಲು, ಮಾಣು, ಹೊರಗಯ್ಯ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಹೊಯ್ಯೋ ಡಂಗುರವ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಇನ್ನಷ್ಟು ... -->