ಅಥವಾ

ಒಟ್ಟು 43 ಕಡೆಗಳಲ್ಲಿ , 13 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ತನ್ನ ವಿನೋದಕ್ಕೆ ಗುರುವಾದ ಗುರು ತನ್ನ ವಿನೋದಕ್ಕೆ ಲಿಂಗವಾದ ಗುರು ತನ್ನ ವಿನೋದಕ್ಕೆ ಜಂಗಮವಾದ ಗುರು ತನ್ನ ವಿನೋದಕ್ಕೆ ಪಾದೋದಕವಾದ ಗುರು ತನ್ನ ವಿನೋದಕ್ಕೆ ಪ್ರಸಾದವಾದ ಗುರು ತನ್ನ ವಿನೋದಕ್ಕೆ ವಿಭೂತಿಯಾದ ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ. ಇಂತೀ ಭೇದವನರಿಯದೆ, ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು. ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು. ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು ಭವಹೇತುಗಳ ಮಾಡುವನಯ್ಯಾ. ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಕತ್ತೆ ರುದ್ರಾಕ್ಷಿಯ ಹೊತ್ತು ವ್ಯವಹರಿಸಿದಲ್ಲಿ ಮೋಕ್ಷವಾಯಿತು. ಬೇಂಟೆಗಾರನು ಶುನಿಗಳ ಕೂಡಿಕೊಂಡು ಅರಣ್ಯದಲ್ಲಿ ಬೇಂಟೆಯನಾಡುವ ಸಮಯದಲ್ಲಿ ಒಂದು ರುದ್ರಾಕ್ಷಿಯ ಕಂಡು ತನ್ನ ಶುನಿಗಳಿಗೆ ಗಾದಿಯ ಮಣಿಗಳೆಂದು ಕಟ್ಟಿಬಿಡಲು, ಆ ಶುನಿಗಳು ಹೋಗಿ ಹಂದಿಯ ಹಿಡಿಯಲು ಆ ಹಂದಿಗೂ ಆ ಶುನಿಗೂ ಮೋಕ್ಷವಾಯಿತು. ವೇಶ್ಯಾಂಗನೆಯು ತನ್ನ ವಿನೋದಕ್ಕೆ ಮರ್ಕಟ ಕುಕ್ಕುಟಂಗೆ ರುದ್ರಾಕ್ಷಿ ಧರಿಸಲು ಅವಕ್ಕೆ ಮುಂದೆ ಅಂತ್ಯಕಾಲಕ್ಕೆ ಮೋಕ್ಷವಾಯಿತೆಂದು ವೇದ, ಶ್ರುತಿ, ಪ್ರಮಾಣಗಳಿಂದ ಕೇಳಿ ಜೀವಾತ್ಮರು ರುದ್ರಾಕ್ಷಿಯ ಧರಿಸುತ್ತಿರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರು ತನ್ನ ವಿನೋದಕ್ಕೆ ಸ್ಥಾವರವಾದ: ಗುರುತನ್ನ ವಿನೋದಕ್ಕೆ ಜಂಗಮವಾದ; ಗುರು ತನ್ನ ವಿನೋದಕ್ಕೆ ಪ್ರಸಾದವಾದ; ಗುರು ತನ್ನ ವಿನೋದಕ್ಕೆ ಗುರುವಾದ; ಕೂಡಲಚೆನ್ನಸಂಗಯ್ಯನಲ್ಲಿ ಏಕಾರ್ಥವಾದ
--------------
ಚನ್ನಬಸವಣ್ಣ
ನಿರಾಕಾರ ಪರವಸ್ತು ತನ್ನ ಲೀಲಾವಿನೋದದಿಂದ ಎರಡು ಮುಖದಿಂದ ಎರಡು ಸೃಷ್ಟಿಯ ಮಾಡಿದರು. ಒಂದು ಊಧ್ರ್ವಸೃಷ್ಟಿ, ಒಂದು ಅಧೋಸೃಷ್ಟಿ. ಅಧೋಸೃಷ್ಟಿ ಯಾವುದೆಂದಡೆ : ಅಂಡಜ ಪಿಂಡಜ ಜರಾಯುಜ ಉದ್ಭಿಜ ಇವು ನಾಲ್ಕು ಕೂಡಿ ಎಂಬತ್ತುನಾಲ್ಕು ಜೀವರಾಶಿಯ ಮಾಡಿದರು. ಸ್ವರ್ಗ ನರಕ ಇಹ ಪರ ಪುಣ್ಯ ಪಾಪ ಧರ್ಮ ಕರ್ಮ ಸತ್ಯ ಅಸತ್ಯ ಜ್ಞಾನ ಅಜ್ಞಾನ ಹೆಣ್ಣು ಗಂಡು ಹಿರಿದು ಕಿರಿದು ಉತ್ಪತ್ತಿ-ಸ್ಥಿತಿ-ಲಯಕ್ಕೆ ಅದ್ಥಿಕಾರಿಗಳಾದ ಬ್ರಹ್ಮ-ವಿಷ್ಣು-ರುದ್ರರು ಮಾಡಿಟ್ಟರು. ಇನ್ನು ಊಧ್ರ್ವಸೃಷ್ಟಿ ಹೇಗೆಂದಡೆ : ಅಸಂಖ್ಯಾತ ಮಹಾಪ್ರಮಥಗಣಂಗಳು, ಇವರಿಗೆ ಸ್ವರ್ಗ-ನರಕವಿಲ್ಲ, ಇಹ-ಪರವಿಲ್ಲ, ಪುಣ್ಯ-ಪಾಪವಿಲ್ಲ, ಧರ್ಮ-ಕರ್ಮವಿಲ್ಲ, ಹುಸಿ-ಖರೆಯಿಲ್ಲ, ಜ್ಞಾನ-ಅಜ್ಞಾನವಿಲ್ಲ, ಹೆಣ್ಣು-ಗಂಡುವಿಲ್ಲ, ಹಿರಿದು-ಕಿರಿದುವಿಲ್ಲ, ಉತ್ಪತ್ತಿ-ಸ್ಥಿತಿ-ಲಯವಿಲ್ಲ, ಅವರಿಗೆ ಬ್ರಹ್ಮ-ವಿಷ್ಣು ರುದ್ರರು ಇಲ್ಲ. ಅವರಿಗೆ ಮತ್ತಂ, ಆ ನಿರಾಕಾರ ಪರವಸ್ತು ತಾನೆ ಗುರು-ಲಿಂಗ-ಜಂಗಮವಾಗಿ ಗುರುವಿನಲ್ಲಿ ಉತ್ಪತ್ತಿ, ಲಿಂಗದಲ್ಲಿ ಸ್ಥಿತಿ, ಜಂಗಮದಲ್ಲಿ ನಿಜೈಕ್ಯರು. ಮತ್ತೆ ಪರಶಿವಮೂರ್ತಿ ತನ್ನ ವಿನೋದಕ್ಕೆ ಆಟವ ಆಡಬೇಕಾಗಿ ಮಹದಾಕಾಶವ ಮಂಟಪವ ಮಾಡಿ, ಆಕಾಶವ ಪರದೆಯ ಕಟ್ಟಿ, ಅಸಂಖ್ಯಾತ ಪ್ರಮಥಗಣಂಗಳಿಗೆ ಮೂರ್ತವ ಮಾಡಿಸಿ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆ ಸೂತ್ರವ ಮಾಡಿ ತಮ್ಮ ಕೈಯಲ್ಲಿ ಪಿಡಿದು, ಚಿತ್ರವಿಚಿತ್ರದಾಟವ ಆಡಿಸುತ್ತಿಹುದಕ್ಕೆ ಲೆಕ್ಕವಿಲ್ಲ, ಹೇಳುವುದಕ್ಕೆ ಅಸಾಧ್ಯ. ಆ ಪ್ರಮಥಗಣಂಗಳು ನೋಡಿ, ಆ ಬೊಂಬೆಗಳೇನು ಆಡಿಹವು ? ಸೂತ್ರಿಕನು ಆಡಿಸಿದ ಹಾಂಗೆ ಆಡ್ಯಾವು. ಆ ಗೊಂಬೆಗೆ ಸೂತ್ರವಲ್ಲದೆ ಶಿವನಿಲ್ಲ. ಆ ಗೊಂಬೆಯೊಳಗೆ ಶಿವನಿದ್ದರೆ, ಆಡಿಸುವುದು ಹ್ಯಾಂಗೆ ? ಇವೆಲ್ಲವು ಅನಿತ್ಯವೆಂದು ತಿಳಿದು ಪ್ರಮಥಗಣಂಗಳು ತಮ್ಮ ಲಿಂಗದಲ್ಲಿ ನಿಜ ಮೋಕ್ಷಿಗಳಾಗಿ ಶಾಂಭವಪುರಕ್ಕೆ ಹೋದ ಭೇದವ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಕೆಳದಿಯರೊಡನಾಡಿ ಕಾಮಕಲಾಪ್ರೌಡ್ಥಿಯನರಿದು ಪ್ರಾಣಕಾಂತನ ಒಲಿಸಿ ಸುರತಸಂಯೋಗದೊಳಿಪ್ಪ ಕಾಮಿನಿಗೆ ಮತ್ತೆ ಕೆಳದಿಯರ ಕೂಡಣ ವಿನೋದಕ್ಕೆ ಮನವೆಳಸುವುದೇ ಅಯ್ಯ? ಶರಣ ಸಂಭಾಷಣೆಯಿಂದ ಪುರಾತನವಚನದ ಪರಮಾಮೃತವ ದಣಿಯಲುಂಡು ಆ ವಚನದ ಹೆಜ್ಜೆವಿಡಿದು ಹೋಗಿ ತ್ರಿವಿಧಲಿಂಗದ ಆದ್ಯಂತಮಂ ಅರಿದು ಆ ಲಿಂಗಂಗಳಂ ಅರಿವಿಡಿದಾಚರಿಸಿ ಷಡಂಗ ಷsಡ್ವಿಧಲಿಂಗಂಗಳಿಗೆ ಮಾತೃಸ್ಥಾನವಾದ ನಿಷ್ಕಳಬ್ರಹ್ಮವೆನಿಪಾ ಸಿದ್ಧಲಿಂಗ ಪ್ರಭುವಂ ಕಂಡು ಆ ಸಿದ್ಧಲಿಂಗ ಪ್ರಭುವಂ ಹೃದಯ ತ್ರಿಪುಟಿ ಸುಷುಮ್ನೆಯೆಂಬ ಮೂರು ಸಿಂಹಾಸನದ ಮೇಲೆ ಗುರು ಲಿಂಗ ಜಂಗಮವೆನಿಸಿ ಮೂರ್ತಿಗೊಳಿಸಿಕೊಂಡು ತುಂಬಿ ತುಳುಕದ ಮಂದಮಾರುತ ಮೈ ಸೋಂಕದ ಭಾನುವಿನಕಿರಣಕ್ಕೆ ಬಳಲದ ಚಂದ್ರೋದಯಕ್ಕೆ ಅಂದವಾಗದ ಜನರ ಕಣ್ಮನಕ್ಕೆ ಅಗೋಚರವಾದ ಜಾಜಿ ಸಂಪಿಗೆ ಇರವಂತಿಗೆ ಮಲ್ಲಿಗೆ ಕೆಂದಾವರೆ ಸೇವಂತಿಗೆ ಎಂಬ ಭಾವ ಪುಷ್ಪಂಗಳಲ್ಲಿ ಪೂಜೆಯಂ ಮಾಡಿ ಬೀಗಿ ಬೆಳವುತ್ತಿಪ್ಪ ಶರಣಂಗೆ ಮತ್ತೆ ಅನುಭಾವದ ಸುಖ ಸವಿದೋರುವುದೇ ಅಯ್ಯ? ಕೆನೆ ಸಾಧ್ಯವಾದ ಬಳಿಕ ಹಾಲಿನ ಹಂಗೇತಕಯ್ಯಾ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅರ್ಪಿತಾಂಗದ ಮೇಲಿಪ್ಪ ಅಖಂಡಲಿಂಗಕ್ಕೆ ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ. ಅರ್ಪಿತ ಪ್ರಾಣದಮೇಲಿಪ್ಪ ಅವಿರಳಲಿಂಗಕ್ಕೆ ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ, ಅರ್ಪಿತ ಭಾವದಮೇಲಿಪ್ಪ ಅಬ್ಥಿನ್ನ ಲಿಂಗಕ್ಕೆ ಅರ್ಪಿತವನರ್ಪಿಸಿ [ಆನಂದಿಸಿ] ಕೊಂಬುವನಯ್ಯ ತನ್ನ ವಿನೋದಕ್ಕೆ. ಅರ್ಪಿಸಿಕೊಂಡಿಪ್ಪ ಗುರುನಿರಂಜನ ಚನ್ನಬಸವಲಿಂಗಕ್ಕೆ ಅರ್ಪಿತವನರ್ಪಿತವಾಗಿರ್ಪನಯ್ಯ ತನ್ನ ವಿನೋದಕ್ಕೆ ನಿಮ್ಮ ಪ್ರಸಾದಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವ ತನ್ನ ವಿನೋದಕ್ಕೆ ರಚಿಸಿದನು, ಅನಂತ ವಿಶ್ವವನು. ರಚಿಸಿದವನು ವಿಶ್ವಕ್ಕೆ ಹೊರಗಾಗಿರ್ದನೆ ? ಇಲ್ಲ. ವಿಶ್ವಮಯ ತಾನಾದನು, ವಿಶ್ವವೆಲ್ಲವೂ ತಾನಾದಡೆ ವಿಶ್ವದುತ್ಪತ್ತಿಸ್ಥಿತಿಲಯಕ್ಕೊಳಗಾದನೇ ? ಇಲ್ಲ. ಅದೇನು ಕಾರಣವೆಂದಡೆ; ಅಜಾತನಾಗಿ ಉತ್ಪತ್ತಿ ಇಲ್ಲ, ಕರ್ಮರಹಿತನಾಗಿ ಸ್ಥಿತಿಗೊಳಗಲ್ಲ. ಮರಣರಹಿತನಾಗಿ ಲಯಕ್ಕೊಳಗಲ್ಲ, ಇಂತೀ ಗುಣತ್ರಯಂಗಳ ಹೊದ್ದಲರಿಯ. ತಾನಲ್ಲದೆ ವಿಶ್ವಕ್ಕಾಧಾರವಿಲ್ಲಾಗಿ ದೂರಸ್ಥನಲ್ಲ. ತನ್ನಲ್ಲಿ ತಾನಲ್ಲದ ಅನ್ಯವು ತೋರಲರಿಯದಾಗಿ, ಇದಿರಿಲ್ಲ. ಇದಿರಿಲ್ಲಾಗಿ ವಿಶ್ವಮಯ ತಾನಾದುದೇ ಸತ್ಯ. ಅರಸು ಕಾಲಾಳಾಗಬಲ್ಲ ತನ್ನ ವಿನೋದಕ್ಕೆ, ಮರಳಿ ಅರಸಾಗಬಲ್ಲ. ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು, ಜಗವಾಗಲೂ ಬಲ್ಲ, ಜಗವಾಗದಿರಲೂ ಬಲ್ಲನಯ್ಯ.
--------------
ಉರಿಲಿಂಗಪೆದ್ದಿ
ವಸ್ತುವೆಂದರೆ ಪರಬ್ರಹ್ಮದ ನಾಮವು. ಅಂತಪ್ಪ ವಸ್ತುವಿನ ಕಳೆ, ಆ ವಸ್ತುವಿನ ನಿಲವು ಪೇಳ್ವೆ ಕೇಳಿರಯ್ಯ. ಅನಂತಹಸ್ತ, ಅನಂತಪಾದ, ಅನಂತಮುಖ, ಅನಂತನಯನ, ಅನಂತಕರಣ, ಅನಂತಾಂಗ, ಅನಂತ ಮಿಂಚಿನಲತೆಪ್ರಕಾಶದಂತೆ, ಅನಂತ ಚಂದ್ರ ಸೂರ್ಯಪ್ರಕಾಶದಂತೆ, ಅನಂತ ವಜ್ರ ವೈಡೂರ್ಯ ಮಾಣಿಕದ ಪ್ರಕಾಶದಂತೆ, ಇಂತೀ ನಿಲವನು, ಇಂತೀ ಪ್ರಕಾಶವನು ಗರ್ಭೀಕರಿಸಿಕೊಂಡು, ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯದಿಂದತ್ತತ್ತಲಾದ ಪರವಸ್ತು ಸ್ವಯಂಭುವಾಗಿರ್ದು ತನ್ನ ವಿನೋದಕ್ಕೆ ತಾನೆ ಶಂಭುರೂಪದಿಂ ಲೀಲಾಮೂರ್ತಿಯಾಗಿ, ಇಂತೀ ನಿಲವನು, ಇಂತೀ ಕಳೆಯನು ಧರಿಸಿ, ಘನಮಹಾಲಿಂಗವಾಗಿರ್ಪನು. ಅಂತಪ್ಪ ಘನಮಹಾಲಿಂಗವನು ಬಹಿಷ್ಕರಿಸಿ, ಶ್ರೀಗುರು ಶಿಷ್ಯನ ಕರಸ್ಥಳಕ್ಕೆ ಇಷ್ಟಲಿಂಗವ ಮಾಡಿ, ತೋರಿ ಕೊಟ್ಟ ಬಳಿಕ ಆ ಲಿಂಗದಲ್ಲಿ ತನ್ನ ತನುವನು ಅಡಗಿಸಿ, ಆ ತನುವಿನಲ್ಲಿ ಆ ಲಿಂಗವ ಸಂಬಂಧಿಸಿ, ಶಿಖಿ-ಕರ್ಪೂರದ ಸಂಯೋಗದ ಹಾಗೆ ಅಂಗಲಿಂಗವೆಂಬುಭಯ ನಾಮ ನಷ್ಟವಾಗಿರ್ಪಾತನೇ ಶಂಭುಸ್ವಯಂಭುಗಿಂದತ್ತತ್ತ ತಾನೆ ನೋಡಾ, ಶಂಭು-ಎಂದಡೆ ಇಷ್ಟಲಿಂಗ, ಸ್ವಯಂಭು ಎಂದೊಡೆ ಪ್ರಾಣಲಿಂಗ, ಉಭಯದಿಂದತ್ತತ್ತವೆಂದೊಡೆ ಭಾವಲಿಂಗ. ಅಂತಪ್ಪ ಭಾವಲಿಂಗಸ್ವರೂಪ ಶರಣ ತಾನೆ ನೋಡಾ ಎಂದನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಜಗದ ಕರ್ತ ಜಗದ ಸ್ಥಿತಿ-ಗತಿಯ ನಡೆಸುವ ಪರಿಯನು ಆವಂಗೆ ಆವಂಗೆಯೂ ಅರಿಯಬಾರದು. ಅಕಟಕಟಾ ದೇವದಾನವ ಮಾನವರೆಲ್ಲ ಅಹಂ ಎಂದು ಅಹಂಕಾರದಿ ಕೆಟ್ಟರಲ್ಲ. ಆ ಮಹಾಕರ್ತನು ತನ್ನ ಶಕ್ತಿಯ ವಿನೋದಕ್ಕೆ ರಚಿಸಿದ ರಚನೆ: ಮೂವರು ಪ್ರಧಾನರು, ಒಂಬತ್ತು ಪ್ರಜೆ ಪಸಾಯಿತರು, ಪದಿನಾಲ್ಕು ನಿಯೋಗಿಗಳು, ಇಪ್ಪತ್ತೇಳು ಅನುಚರರು, ಅಷ್ಟತನುಗಳಿಂದಾದ ಜಗಸ್ಥಿತಿಯ ನಡೆಸುವರು. ಆ ಮಹಾಕರ್ತನು ಕಟ್ಟಿದ ಕಟ್ಟಳೆಯಲು, ಆಯುಷ್ಯ ನಿಮಿಷ ಮಾತ್ರ ಹೆಚ್ಚಿಸ ಬಾರದು, ಕುಂದಿಸಬಾರದು ನೋಡಾ. ಭಾಷೆಯಲಿ ಅಣು ಮಾತ್ರ ಹೆಚ್ಚಿಸಬಾರದು, ಕುಂದಿಸಬಾರದು ನೋಡಾ. ಇದನಾವಂಗೆಯೂ ಅರಿಯಬಾರದು. ಇದ ಬಲ್ಲರೆ ಎಮ್ಮ ಶರಣರೆ ಬಲ್ಲರು. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸರಸಕ್ಕೆ ಸತ್ತವರುಂಟೆ ? ವಿನೋದಕ್ಕೆ ಪಾರದ್ವಾರ ಉಂಟೆ ? ಅರ್ತಿಯೆಂದು ಕಣ್ಣ ಕುತ್ತಿದಡೆ ಆ ಕೆಟ್ಟ ಕೇಡು ಅದಾರಿಗೆ ಪೇಳಾ ? ಸತ್ಯನಾಗಿದ್ದು ಭಕ್ತರು ಜಂಗಮದಲ್ಲಿ ಚಚ್ಚಗೋಷ್ಠಿಯನಾಡುವ ಮಿಟ್ಟಿಯ ಭಂಡರಿಗೆ ಸತ್ಯಸದಾಚಾರ ಮುಕ್ತಿಭಾವ ಒಂದೂ ಇಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಮಾಯದ ಬಲೆಯಲ್ಲಿ ಸಿಲುಕಿದ ಮರುಳ ನಾನೆಂದರಿದ ಪರಿಯ ನೋಡಾ ! ಲಿಂಗವೆಂದರಿದ ಪರಿಯ ನೋಡಾ ! ತನ್ನ ವಿನೋದಕ್ಕೆ ಬಂದು (ದ?) ನಿಶ್ಚಿಂತ ನಿರಾಳ ಗುಹೇಶ್ವರನೆಂದರಿದ ಪರಿಯ ನೋಡಾ.
--------------
ಅಲ್ಲಮಪ್ರಭುದೇವರು
ಕುರುಹಿಲ್ಲದ ತೆರಹಿಲ್ಲದ ಮರಹಿಲ್ಲದ ಮರಹಿನಿಂದೊಪ್ಪುವ ನಿಲುವಿಂಗೆ ಈ ತೆರನಾಗಿ ಹೆಸರನರುಹಿಸಿ ಕಾಣಿಸಿಕೊಂಬ ಸಮಸ್ತುಗಳೆಲ್ಲ ಅನ್ಯೋನ್ಯವಾಗಿಪ್ಪವಲ್ಲದೆ ತಾವುವೊಂದಾಗಿ ತೋರಿಕೆ ಕಾಣಿಸದು ನೋಡಾ. ಅದೇನು ಕಾರಣವೆಂದರೆ, ತಾನು ತನ್ನ ವಿನೋದಕ್ಕೆ ಶರಣಲಿಂಗಪದಾರ್ಥವೆಂದು ತೋರಿದ ತೋರಿಕೆಯಲ್ಲದೆ ಮತ್ತೇನು ಇಲ್ಲ ಕಾಣಾ. ಬಳಿಕ ಗುರುನಿರಂಜನ ಚನ್ನಬಸವಲಿಂಗ ತಾನೇ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಥಮದಲ್ಲಿ ಬೀಜವಿಲ್ಲದಿದ್ದಡೆ ವೃಕ್ಷ ಅಂಕುರ ಪಲ್ಲವ ಶಾಖೆ ಕುಸುಮ ಫಲವೆಲ್ಲಿಯವಯ್ಯಾ ? ಆ ಫಲದ ಮಹಾಮಧುರವೆಲ್ಲಿಯದಯ್ಯಾ ? ಪರಶಿವಲಿಂಗಮೂರ್ತಿ ಪರಮಾತ್ಮ ಬ್ರಹ್ಮ ಬಯಲಾದಡೆ ನಿಷ್ಕಳತತ್ತ್ವಂಗಳೆಂತಾದವು ? ಕೇವಲ ಸಕಲತತ್ತ್ವಂಗಳೆಂತದಾವು ? ತಾನು ಹುಟ್ಟಿ ತಮ್ಮವ್ವೆ ಬಂಜೆ ಎನ್ನಬಹುದೇ ? ಅರಸು ಒಬ್ಬನು ಸ್ವತಂತ್ರನು, ಸರ್ವಕ್ರೀ ವರ್ತಿಸಬಾರದು. ಪರಶಿವಲಿಂಗಮೂರ್ತಿ ಸರ್ವತತ್ತ್ವಮಯನಪ್ಪ, ಸರ್ವಕಾರಣಕ್ಕೆ ಕಾರಣನಪ್ಪ. ತನ್ನ ವಿನೋದಕ್ಕೆ ಪಂಚಭೂತಂಗಳನು ಇಚ್ಛಾಜ್ಞಾನಕ್ರಿಯಾಶಕ್ತಿಗಳನೂ ಬ್ರಹ್ಮವಿಷ್ಣಾದಿಗಳನೂ, ಅಷ್ಟಾದಶವಿದ್ಯಂಗಳನೂ ಮಾಡಿ ಉತ್ಪತ್ತಿ ಸ್ಥಿತಿಯನೂ ನೋಡಿ, ವಿನೋದಿಸಿ ಮಹಾಲೀಲೆಯಿಂ ಸಂಹರಿಸಿ ಪರಮಸುಖಿಯಾಗಿಪ್ಪನು. ಮತ್ತೆ `ಯಥಾಪೂರ್ವಮಕಲ್ಪಯತ್' ಎಂದುದಾಗಿ ಮರಳಿ ವಿನೋದಿಸುತಿರ್ಪನು. ಪರಶಿವಲಿಂಗಮೂರ್ತಿಪರಮಾತ್ಮನಲ್ಲಿ ಪರಬ್ರಹ್ಮ ಬಯಲಾದಡೆ ಗುರುವೆಂತಾದ ಜಂಗಮವೆಂತಾದ ಹೇಳಿರೆ ? ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ ನಿಷ್ಕಳನು `ಶಿವಂ ಪರಾತ್ಪರಂ ಶೂನ್ಯಂ' ಎಂದುದಾಗಿ `ಶಿವಂ ಪರಮಾಕಾಶಮಧ್ಯೇ ಧ್ರುವಂ' ಎಂದುದಾಗಿ ಶ್ರೀಗುರುಮೂರ್ತಿಯಾಗಿಪ್ಪನು. ಭ್ರೂಮಧ್ಯದಲ್ಲಿ ಪರಂಜ್ಯೋತಿರ್ಲಿಂಗಮೂರ್ತಿಯಾಗಿಪ್ಪನು. `ಪರಾತ್ಪರಂ ಪರಂಜ್ಯೋತಿಭ್ರ್ರೂಮಧ್ಯೇ ತು ವ್ಯವಸ್ಥಿತಂ ಎಂದುದಾಗಿ. ಹೃದಯಸ್ಥಾನದಲ್ಲಿ ಪ್ರಾಣಲಿಂಗವು ಜಂಗಮಲಿಂಗವಾಗಿ ಸಕಲವ್ಯಾಪಾರನಾಗಿಪ್ಪನು. `ಹೃದಯಸ್ಯ ಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಬ್ರಹ್ಮರಂಧ್ರದಲ್ಲಿ ಲಿಂಗಮೂರ್ತಿ ಪರಮಾತ್ಮ, ಭ್ರೂಮಧ್ಯದಲ್ಲಿ ಲಿಂಗಮೂರ್ತಿ ಅಂತರಾತ್ಮ, ಹೃದಯದಲ್ಲಿ ಜಂಗಮಮೂರ್ತಿ ಜೀವಾತ್ಮ, ಬಹಿರಂಗದಲ್ಲಿ ದೀಕ್ಷೆಗೆ ಗುರು, ಪೂಜೆಗೆ ಲಿಂಗ, ಶಿಕ್ಷೆಗೆ ಜಂಗಮ. `ಏಕಮೂರ್ತಿಸ್ತ್ರಿಧಾ ಭೇದಃ' ಎಂದುದಾಗಿ ಅಂತರಂಗ ಬಹಿರಂಗ ಸಕಲ ನಿಷ್ಕಲವೆಲ್ಲವೂ ಏಕೀಭವಿಸಿ `ಇಷ್ಟಂ ಪ್ರಾಣಸ್ತಥಾ' ಎಂದುದಾಗಿ ಲಿಂಗವಾಗಿ ಪೂಜೆಗೊಳ್ಳುತ್ತಿದ್ದಾನು. ಇದು ಕಾರಣ, ಸಕಲತತ್ತ್ವ ಸರ್ವಕಾರಣವಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವಾರಿ ಬಲಿದು ವಾರಿಶಿಲೆಯಾದಂತೆ, ವಾರಿಶಿಲೆ ಕರಗಿ ಉದಕವಾದಂತೆ, ನಿನ್ನ ವಿನೋದಕ್ಕೆ ನೀನೆ ಶರಣನಾದೆ. ನಿನ್ನ ವಿನೋದಕ್ಕೆ ನೀನೆ ಲಿಂಗವಾದೆ. ನಿನ್ನ ವಿನೋದ ನಿಂದಲ್ಲಿ, ನೀನೆ ಶರಣ ಲಿಂಗವೆಂಬುಭಯವಳಿದು ನಿರಾಳ ನಿರ್ಮಾಯನಾಗಿ ನಿಶ್ಯಬ್ದಮಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನ್ನ ವಿನೋದಕ್ಕೆ ತಾನೇ ಹಲವಾದುದರಿತು, ಹಲವಾದ ಹಲವಿನೊಳಗೆ ತಾ ಹಲವಾಗದೆ, ಹಲವು ಹಲವಲ್ಲವೆಂದು ತಾನೇ ಹಲವೆಂದು, ಹಲವು ತಾನೆಂದು, ಹಲವು ಹಲವೆಂದರೇನು, ತಾನು ತಾನೆಂದರಿಯನು. ತಾನೇ ಅಲ್ಲದೆ, ಹಲವು ಎಲ್ಲಿಹದೊ, ಹಲವು ಇಲ್ಲ. ಬೀಜ ವೃಕ್ಷವಾಯಿತ್ತೆ ? ವೃಕ್ಷ ಬೀಜವಾಯಿತ್ತೆ ? ಬೀಜವೃಕ್ಷವಾದ ಮೇಲೆ ಬೀಜವೇನಾಯಿತ್ತು ? ಇದ ತಿಳಿದು ಸರ್ವಲೀಲವ ಸಮಾಪ್ತಮಾಡಿ ಸರ್ವಸಮ ನಿರೀಕ್ಷಣೆಯಲ್ಲಿ ಸಂತುಷ್ಟವಡದು ಅಸ್ತಮಾನದ ಆದಿತ್ಯನಂತೆಯಿರುವುದೇ ಸಮ್ಯಕ್‍ಜ್ಞಾನದೊಳಗೆ ತೋರಿದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->