ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ಕಾಯದ ಕತ್ತಲೆ ಹಿಂಗಿತ್ತು, ಚೆನ್ನಬಸವಣ್ಣಾ ಇಂದಿನಲ್ಲಿ. ಎನ್ನ ತನುಮನಧನದ ಲೋಭವಳಿದು ತಳವೆಳಗಾಯಿತ್ತು, ಚೆನ್ನಬಸವಣ್ಣಾ ಇಂದಿನಲ್ಲಿ. ಎನ್ನನೆಡೆಗೊಂಡ ಅಹಂಕಾರ ನಿರ್ವಯಲಾಯಿತ್ತು ಚೆನ್ನಬಸವಣ್ಣಾ ಇಂದಿನಲ್ಲಿ. ಕೂಡಲಸಂಗಮದೇವರ ತೃಪ್ತಿಯ ತೆರನ ನೀನು ತೋರಿದೆಯಾಗಿ ನಾನು ಬದುಕಿದೆ ಕಾಣಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಎನಿಸನೋದಿದಡೇನು ! ಎನಿಸ ಕೇಳಿದಡೇನು ! ಚತುರ್ವೇದಪಠ ತೀವ್ರವಾದಡೇನು ಲಿಂಗಾರ್ಚನೆ ಹೀನವಾದಡೆ, ಶಿವಶಿವಾ ! ಬ್ರಾಹ್ಮಣನೆಂಬೆನೆ ಎನಲಾಗದು. ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ ಶ್ರುತೇನ ಶ್ರೋತ್ರಿಯಶ್ಚೈವ ಬ್ರಹ್ಮ ಚರತಿ ಬ್ರಾಹ್ಮಣಾ ಎಂದುದಾಗಿ ಬ್ರಹ್ಮನಾಸ್ತಿ ಶ್ವಪಚರಧಮರೆಂದುದಾಗಿ, ಇದು ಕಾರಣ ಕೂಡಲಸಂಗಮದೇವಾ `ವೇದಭಾರಭರಾಕ್ರಾಂತಾ ಬ್ರಾಹ್ಮಣಾಃ ಗರ್ದಭಾಃ ಎಂಬೆನು.
--------------
ಬಸವಣ್ಣ
ಎಮ್ಮಯ್ಯನ ಬಲ್ಲವರು ಒಮ್ಮೆಯೂ ಅರ್ಪಿಸರು, ಅವರರ್ಪಿಸುವನ್ನಬರ ಎಮ್ಮಯ್ಯ ಸುಮ್ಮನಿರನು. ಬೆಂದ ಬಿಸಿಯಾರಿದಡೆ ಪ್ರಾಣೇಶನೊಲ್ಲ, ಕೂಡಲಸಂಗಮದೇವನುಪಚಾರದರ್ಪಿತವನೋಗಡಿಸುವ.
--------------
ಬಸವಣ್ಣ
ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು, ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೇರುವ. ಎಮಗೆ ಆರೂ ಇಲ್ಲವೆಂಬಿರಿ, ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು. ಎಮಗೆ ಆರೂ ಇಲ್ಲವೆಂಬಿರಿ, ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ, ಕೂಡಲಸಂಗಮದೇವಾ. 352
--------------
ಬಸವಣ್ಣ
ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿಘನವೆತ್ತಿ ತೋರಿ, ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು, ನಿಜವೀರಶೈವಾಚಾರವನರುಹಿ ತೋರಿ, ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗಂಗಳಲ್ಲಿಸಂದಿಸಿದ ಶೈವಕರ್ಮವ ಕಳೆದು, ಭವಮಾಲೆಯ ಹರಿದು, ಭಕ್ತಿಮಾಲೆಯನಿತ್ತು, ಭವಜ್ಞಾನವ ಕೆಡೆಮೆಟ್ಟಿ, ಭಕ್ತಿಜ್ಞಾನವ ಗಟ್ಟಿಗೊಳಿಸಿ, ಭವಮಾಟಕೂಟವ ಬಿಡಿಸಿ, ಭಕ್ತಿಮಾಟಕೂಟವ ಹಿಡಿಸಿ, ಭವಶೇಷವನುತ್ತರಿಸಿ, ಭಕ್ತಿಶೇಷವನಿತ್ತು, ಎನಗೆ, ಎನ್ನ ಬಳಿವಿಡಿದು ಬಂದ ಶರಣಗಣಂಗಳೆಲ್ಲರಿಗೆ ಶಿವಸದಾಚಾರದ ಘನವನರುಹಿ ತೋರಿ, ಮತ್ರ್ಯಲೋಕದಲ್ಲಿ ಸತ್ಯಸದಾಚಾರವನು ಹರಿಸಿ, ಶಿವಭಕ್ತಿಯನುದ್ಧರಿಸಿ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣ ಎನ್ನನಾಗುಮಾಡಿ ಉಳುಹಿದನಾಗಿ ಇನ್ನೆನಗೆ ಭವವಿಲ್ಲದೆ, ಬಂಧನವಿಲ್ಲದೆ, ಭಕ್ತಿ ಮಾಟಕೂಟದ ಗೊತ್ತಿನಲ್ಲಿರ್ದು ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕುವೆನು.
--------------
ಬಸವಣ್ಣ
ಎನ್ನ ಕಾಯದ ಕರಸ್ಥಲದಲ್ಲಿ ಅಲ್ಲಮಪ್ರಭುದೇವರ ಕಂಡೆನು, ಎನ್ನ ಮನದ ಕರಸ್ಥಲದಲ್ಲಿ ಚೆನ್ನಬಸವಣ್ಣನ ಕಂಡೆನು, ಎನ್ನ ಅರಿವಿನ ಕರಸ್ಥಲದಲ್ಲಿ ಮಡಿವಾಳಯ್ಯನ ಕಂಡೆನು. ಒಳಗು ಹೊರಗು, ಹೊರಗು ಒಳಗೆಂಬ ಭೇದವನರಿಯದೆ ಇದ್ದೆನು. ಕೂಡಲಸಂಗಮದೇವಯ್ಯಾ,ನಿಮ್ಮ ಶರಣರು ಎನ್ನ ಪಾವನವ ಮಾಡಿದ ಪರಿಣಾಮವ ಅಂತಿಂತೆನಲಮ್ಮದೆ ನಮೋ ನಮೋ ಎನುತ್ತಿದ್ದೆನು.
--------------
ಬಸವಣ್ಣ
ಎನ್ನಂತರಂಗದೊಳಗೆ ಅರಿವಾಗಿ, ಎನ್ನ ಬಹಿರಂಗದೊಳಗೆ ಆಚಾರವಾಗಿ ನೀನೆಡೆಗೊಂಡು, ಎನ್ನ ಮನದೊಳಗೆ ಘನ ನೆನಹಾಗಿ ಮೂರ್ತಿಗೊಂಡು, ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವೆಂಬ ಚತುರ್ವಿಧವನೂ ಎನಗೆ ಸ್ವಾಯತವ ಮಾಡಿ ತೋರಿ, ಪ್ರಾಣಲಿಂಗವೆಂಬ ಹಾದಿಯ ಸೆರಗ ತೋರಿಸಿ, ಎಲ್ಲಾ ಅಸಂಖ್ಯಾತರನೂ ಪಾವನವ ಮಾಡಿದಿರಾಗಿ- ಕೂಡಲಸಂಗಮದೇವಾ, ನಿಮ್ಮಿಂದ ಸಕಲ ಸನುಮತವ ನಾನರಿದೆನಲ್ಲದೆ, ಎನ್ನಿಂದ ನೀನಾದೆ ಎಂಬುದ ನಿಮ್ಮ ಪ್ರಮಥರು ಮೆಚ್ಚರು ನೋಡಯ್ಯಾ.
--------------
ಬಸವಣ್ಣ
ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ, ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ, ಎನ್ನ ಮಾನಾಪಮಾನವೂ ನಿಮ್ಮದಯ್ಯಾ, ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲಸಂಗಮದೇವಾ. 60
--------------
ಬಸವಣ್ಣ
ಎಂಬತ್ತೆಂಟು ಪವಾಡವ ಮೆರೆದು ಹಗರಣದ ಚೋಹದಂತಾಯಿತೆನ್ನ ಭಕ್ತಿ. ತನುವಿನೊಳಗೆ ಮನ ಸಿಲುಕದೆ ಮನದೊಳಗೆ ತನು ಸಿಲುಕದೆ ತನು ಅಲ್ಲಮನಲ್ಲಿ ಸಿಲುಕಿತ್ತು, ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು. ನಾನೇತರಲ್ಲಿ ನೆನೆವೆನಯ್ಯಾ, ಕೂಡಲಸಂಗಮದೇವಾ
--------------
ಬಸವಣ್ಣ
ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು, ಸಾವೆಂಬುದು ಸಯವಲ್ಲ. ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ. ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ, ಉಪಮಿಸಬಲ್ಲವರ ಕಾಣೆನು.
--------------
ಬಸವಣ್ಣ
ಎನ್ನ ಭಕ್ತನೆಂದೆಂಬರು: ಎನ್ನ ಹೊರಹಂಚೆ, ಒಳಬೊಳ್ಳೆತನವನರಿಯರಾಗಿ. ಎನ್ನ ಮಾನಾಪಮಾನವೂ ಶರಣರಲ್ಲಿ, ಜಾತಿವಿಜಾತಿಯೂ ಶರಣರಲ್ಲಿ, ತನುಮನಧನ[ವೂ] ಶರಣರಲ್ಲಿ. ವಂಚನೆಯುಳ್ಳ ಡಂಭಕ ನಾನು. ತಲೆಯೊಡೆಯಂಗೆ ಕಣ್ಣ ಬೈಚಿಡುವೆ ಕೂಡಲಸಂಗಮದೇವಾ. 306
--------------
ಬಸವಣ್ಣ
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ, ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ, ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ, ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ, ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.
--------------
ಬಸವಣ್ಣ
ಎಲವೋ, ಎಲವೋ ಪಾಪಕರ್ಮವ ಮಾಡಿದವನೇ, ಎಲವೋ ಎಲವೋ ಬ್ರಹ್ಮೇತಿಯ ಮಾಡಿದವನೇ, ಒಮ್ಮೆ ಶರಣೆನ್ನೆಲವೋ. ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು. ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು. ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ.
--------------
ಬಸವಣ್ಣ
ಎನ್ನಯ್ಯಾ ನಿಮ್ಮನರಸುತ್ತಿದ್ದೇನೆ, ಎನ್ನಯ್ಯಾ ನಿಮ್ಮನರಸುತ್ತಿದ್ದೇನೆ, ಎನ್ನಯ್ಯಾ ಕೀಟಧ್ಯಾನದಲ್ಲಿ ನಿಮ್ಮನರಸುತ್ತಿದ್ದೇನೆ. ಎನ್ನಯ್ಯಾ ಕೂಡಲಸಂಗಮದೇವಾ, ಭ್ರಮರದ ಲೇಸಿನಂತೆ ಕಾರುಣ್ಯವ ಮಾಡು, ತಪ್ಪೆನ್ನದು, ತಪ್ಪೆನ್ನದು ಶಿವಧೋ ಶಿವಧೋ.
--------------
ಬಸವಣ್ಣ
ಎನ್ನ ತನುಮನವೆರಡನೂ ಗುರು ಕಳೆದು ಲಿಂಗದಲಿ ಏಕವ ಮಾಡಿದನಾಗಿ, ಎನ್ನ ಅಂತರಂಗ ಬಹಿರಂಗವೆರಡೂ ನಿಮ್ಮವು ನೋಡಾ ! ನಿಮ್ಮ ಅಂತರಂಗದೊಳಗೆ ನಿಮ್ಮನೆ ಇಂಬಿಟ್ಟುಕೊಂಬೆ, ನಿಮ್ಮ ಬಹಿರಂಗದೊಳಗೆ ನಿಮ್ಮನೆ ನೀವಾಗಿ ಪೂಜಿಸುವೆ, ನಿಮ್ಮ ಅರಿವಿಂದ ನಿಮ್ಮನೆ ಅರಿವೆ ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಎನ್ನಂಗದ ಮೇಲಿದ್ದ ಲಿಂಗವ ದಿಟಮಾಡಲರಿಯೆನು, ಜಂಗಮವೆ ಲಿಂಗವೆಂಬ ಮಾತೆನಗೆ ಕಷ್ಟ. ಕಲಹ ಕಡುಗೋಪಿ ನಾನಯ್ಯಾ, ದುರಾಚಾರಿ ನಾನು, ಎನಗೆ ಕರುಣಿಸು ಕೂಡಲಸಂಗಮದೇವಾ.
--------------
ಬಸವಣ್ಣ
ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ, ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ. ಕೂಡಲಸಂಗಮದೇವಯ್ಯಾ, ನಿಮ್ಮ ಪ್ರಮಥರ ಮುಂದೆ ಕಿನ್ನರ ಬೊಮ್ಮಣ್ಣ ಸಾಕ್ಷಿ. 323
--------------
ಬಸವಣ್ಣ
ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ, ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎನಗಿದೆ ಮಂತ್ರ, ಇದೇ ಜಪ. ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ. 80
--------------
ಬಸವಣ್ಣ
ಎಂದೊ, ಸಂಸಾರದ ದಂದುಗ ಹಿಂಗುವುದು ? ಎಂದೊ, ಮನದಲ್ಲಿ ಪರಿಣಾಮವಹುದೆನಗೆಂದೋ, ಎಂದೋ ? ಕೂಡಲಸಂಗಮದೇವಾ, ಇನ್ನೆಂದೋ ಪರಮಸಂತೋಷದಲ್ಲಿಹುದೆನಗೆಂದೋ 22
--------------
ಬಸವಣ್ಣ
ಎಲ್ಲರ ಗಂಡರು ಬೇಂಟೆಯ ಹೋದರು, ನೀನೇಕೆ ಹೋಗೆ, ಎಲೆ ಗಂಡನೆ ಸತ್ತುದ ತಾರದಿರು, ಕೈ ಮುಟ್ಟಿ ಕೊಲ್ಲದಿರು. ಅಡಗಿಲ್ಲದ ಮನೆಗೆ ಬಾರದಿರು. ದೇವರ ಧರ್ಮದಲೊಂದು ಬೇಂಟೆ ದೊರೆಕೊಂಡಡೆ ಕೂಡಲಸಂಗಮದೇವಂಗರ್ಪಿತ ಮಾಡುವೆ, ಎಲೆ ಗಂಡನೆ.
--------------
ಬಸವಣ್ಣ
ಎಲೆ ಎಲೆ ಮಾನವಾ, ಅಳಿಯಾಸೆ ಬೇಡವೋ, ಕಾಳ, ಬೆಳೆದಿಂಗಳು, ಸಿರಿ ಸ್ಥಿರವಲ್ಲ. ಕೇಡಿಲ್ಲದ ಪದವಿ ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು. 165
--------------
ಬಸವಣ್ಣ
ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೆ ಮುಖವಾಗಿ ಕಾಡಿ ನೋಡೆನ್ನನು, ಬೇಡಿ ನೋಡೆನ್ನನು, ಬೇಡದಿದ್ದಡೆ, ಅಯ್ಯಾ, ನಿಮಗೆ ಪ್ರಮಥರಾಣೆ. ನೀನಾವ ಮುಖದಲ್ಲಿ ಬಂದು ಬೇಡಿದೊಡೀವೆನು. ಕೂಡಲಸಂಗಮದೇವಾ. 431
--------------
ಬಸವಣ್ಣ
ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ, ವಿಚಾರಿಸಿದಡೆ ಏನೂ ಹುರುಳಿಲ್ಲಯ್ಯಾ. ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪುಮಾಡಿ ನೀವಿರಿಸಿದಿರಿ, ಕೂಡಲಸಂಗಮದೇವಾ. 29
--------------
ಬಸವಣ್ಣ
ಎನ್ನ ಆಪತ್ತು-ಸುಖ-ದುಃಖ ನೀನೆ ಕಂಡಯ್ಯಾ, ಮತ್ತಾರೂ ಇಲ್ಲ, ಹರಹರಾ, ನೀನೆ ಕಂಡಯ್ಯಾ, ಎನ್ನ ಮಾತಾಪಿತನು ನೀನೆ ಕಂಡಯ್ಯಾ. ಕೂಡಸಂಗಮದೇವಾ. 482
--------------
ಬಸವಣ್ಣ
ಎನ್ನ ನುಡಿ ಎನಗೆ ನಂಜಾಯಿತ್ತು, ಎನ್ನ ಅಲಗೆ ಎನ್ನ ಕೊಂದಿತ್ತು. ಆನು ಪಾಪಿಯಯ್ಯಾ, ಆನು ಕೋಪಿಯಯ್ಯಾ. ತರಳತನದಲ್ಲಿ ಕೆಟ್ಟೆನಯ್ಯಾ, ಭಕ್ತಿಯ ಹೊಲಬನರಿಯದೆ ಮರುಳಾದೆನಯ್ಯಾ. ಆಳು ಮುನಿದಡೆ ಆಳೇ ಕೆಡುವನು, ಆಳ್ದ ಮುನಿದಡೆ ಆಳೇ ಕೆಡುವನು. ನೀವು ಮುನಿದಡೆ ನಾನೇ ಕೆಡುವೆನಯ್ಯಾ ಕೂಡಲಸಂಗಮದೇವಾ.
--------------
ಬಸವಣ್ಣ

ಇನ್ನಷ್ಟು ...