ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ. ಈ ಮಾಯೆಯ ಕಳೆವಡೆ ಎನ್ನಳವಲ್ಲ, ನೀವೆ ಬಲ್ಲಿರಿ ಕೂಡಲಸಂಗಮದೇವಾ ! 15
--------------
ಬಸವಣ್ಣ
ಜಗತ್ರಯದ ಹೊ[ಲೆ]ಯನೆಲ್ಲವನು ಉದಕ ಒಳಕೊಂಬುವುದು. ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ; ಯದಾ ಪೃಥ್ವೀಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್ ಎಂದುದಾಗಿ. ಅದಕ್ಕೆ ಮತ್ತೆಯು; ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿಧೀಯತೇ ಎಂದುದಾಗಿ, ಯಥಾ ಉದಕದಿಂದಲಿ ಅಗ್ನಿಯಿಂದಲಿ ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು ಜೀವಮಯವೆಂದು ಹೇಳುತಿರ್ದವಾಗಿ, ಆ ದೋಷದಿಂದಲಾದ ಭೋಜನವನು ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ; ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಕ್ಷಿತಂ ಎಂದುದಾಗಿ ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು, ಹೇಗೆ ಹೋಹುದಯ್ಯಾ ಎಂದಡೆ: ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥ ಮುಖದಿಂದ ಹೋಯಿತ್ತು, ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು. ಇದು ಕಾರಣ, ಈ ವರ್ಮ ಸಕೀಲವು ಪ್ರಭುದೇವರ ವಳಿ ಬಸವಣ್ಣನ ವಂಶಕ್ಕಲ್ಲದೆ ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಜಲವ ನುಂಗಿತ್ತಯ್ಯಾ ಎನ್ನ ಕರವು, ಪತ್ರೆಯ ನುಂಗಿತ್ತಯ್ಯಾ ಎನ್ನ ಶಿಖೆ, ಎನ್ನಯ ಮಂತ್ರ ಬ್ಥಿನ್ನವಾಯಿತ್ತು. ಇಂತೀ ದ್ವಿವಿಧ ಒಂದಾಗದ ಮುನ್ನ ಕೂಡಲಸಂಗಮದೇವರು ಪೂಜೆಗೊಂಡರು.
--------------
ಬಸವಣ್ಣ
ಜಂಗಮವ ಕೂಡಿಕೊಂಡು ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಭಕ್ತಂಗೆ. ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಜಂಗಮಕ್ಕೆ. ಆ ಜಂಗಮದ ಕರ್ತೃತ್ವವೆ ಭಕ್ತಂಗೆ ದಾಸೋಹ, ಆ ಭಕ್ತನ ಕಿಂಕಲವೆ ಆ ಜಂಗಮಕ್ಕೆ ದಾಸೋಹ. ಆ ಭಕ್ತರೊಳಗೆ ಆ ಜಂಗಮವಡಗಿ, ಆ ಜಂಗಮದೊಳಗೆ ಆ ಭಕ್ತನಡಗಿ, ಇದನೇನೆಂದು ಹವಣಿಸುವೆನಯ್ಯಾ, ಎರಡೊಂದಾದ ಘನವ ? ಇದನೇನೆಂದುಪಮಿಸುವೆನಯ್ಯಾ, ತೆರಹಿಲ್ಲದ ಘನವ ? ಈ ಎರಡಕ್ಕೆ ಭವವಿಲ್ಲೆಂದು ಕೂಡಲಸಂಗಯ್ಯಾ, ನಿಮ್ಮ ಶ್ರುತಿಗಳು ಹೇಳಿದವಾಗಿ, ನಿಮ್ಮ ಕರುಣವೆನಗೆ ಆುತ್ತು. 523
--------------
ಬಸವಣ್ಣ
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ, ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ. ನೀನು ಜಗಕ್ಕೆ ಬಲ್ಲಿದನು, ಆನು ನಿನಗೆ ಬಲ್ಲಿದನು, ಕಂಡಯ್ಯಾ. ಕರಿಯು ಕನ್ನಡಿಯೊಳಗಡಗಿದಂತಯ್ಯಾ, ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ.
--------------
ಬಸವಣ್ಣ
ಜನನವಿಲ್ಲದ ಜನಿತನು ನೀನು ನೋಡಯ್ಯಾ, ಜನಿಯಿಸಿ ಸಂಸಾರವನರಿಯದ ನಿರ್ವಿಕಾರಿ ನೀನು ನೋಡಯ್ಯಾ, ಭವಬಂಧನಗಳಿಲ್ಲದ ನಿತ್ಯನಿಜತತ್ವವು ನೀನು ನೋಡಯ್ಯಾ, ನಿನ್ನ ಚರಣಸೇವೆಯ ಮಾಡಿ, ಎನ್ನ ಭವ ಹರಿಯಲೆಂದಿಪ್ಪೆನಲ್ಲದೆ, ನಿಮ್ಮ ಘನವೆಂತೆಂದು ಅರಿಯೆ ನೋಡಯ್ಯಾ. ಕೂಡಲಸಂಗಮದೇವಾ, ನೀನು ಕೊಂಡಾಡಲಾನು ಪ್ರಾಪ್ತನೆ ಹೇಳಾ ಪ್ರಭುವೆ.
--------------
ಬಸವಣ್ಣ
ಜನ್ಮ ಜನ್ಮಕ್ಕೆ ಹೋಗಲೀಯದೆ, `ಸೋ[s]ಹಂ ಎಂದೆನಿಸದೆ `ದಾಸೋ[s]ಹಂ ಎಂದೆನಿಸಯ್ಯಾ. ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ, ಕೂಡಲಸಂಗಮದೇವಾ, ನಿಮ್ಮ ಧರ್ಮ.
--------------
ಬಸವಣ್ಣ
ಜಾಗ್ರಸ್ವಪ್ನಸುಷುಪ್ತಿಯಲ್ಲಿ ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ ! ಹುಸಿಯಾದಡೆ, ದೇವಾ ತಲೆದಂಡ, ತಲೆದಂಡ ! ಕೂಡಲಸಂಗಮದೇವಾ, ನೀವಲ್ಲದೆ ಅನ್ಯವ ನೆನೆದಡೆ ತಲೆದಂಡ, ತಲೆದಂಡ !
--------------
ಬಸವಣ್ಣ
ಜಂಗಮದ ಸನ್ನಿಧಿಯಲ್ಲಿ ವಾಹನವನೇರಲಮ್ಮೆ : ಏರಿದರೆ ಭವ ಹಿಂಗದು. ಏನು ಕಾರಣ ಮುಂದೆ ಸೂಲವನೇರುವ ಪ್ರಾಪ್ತಿಯುಂಟಾದ ಕಾರಣ, ಜಂಗಮ ಬರಲಾಸನದಲ್ಲಿ ಇರಲಮ್ಮೆ : ಇದ್ದರೆ ಭವ ಹಿಂಗದು. ಏನು ಕಾರಣ ಮುಂದೆ ಕಾಯ್ದ ಇಟ್ಟಿಗೆಯ ಮೇಲೆ ಕುಳ್ಳಿರುವ ಪ್ರಾಪ್ತಿಯುಂಟಾದ ಕಾರಣ. ಜಂಗಮದ ಮುಂದೆ ದಿಟ್ಟತನದಲ್ಲಿ ಬೆರೆತು ನಿಂದಿರಲಮ್ಮೆನು ನಿಂದಡೆ ಭವ ಹಿಂಗದಾಗಿ. ಏನು ಕಾರಣ:ಮುಂದೆ ಹೆಡಗುಡಿಯ ಕಟ್ಟಿ ಕುಳ್ಳಿರಿಸುವ ಪ್ರಾಪ್ತಿಯುಂಟಾದ ಕಾರಣ. ಇಂತೀ ಬಾಧೆ ಭವಂಗಳಿಗಂಜುವೆನಯ್ಯಾ. ನಿಮ್ಮವರ ಸುಳುಹು ನೀವೆಂದೇ ಭಾವಿಸಿ, ತೊತ್ತು-ಭೃತ್ಯನಾಗಿಪ್ಪೆನಯ್ಯಾ, ಕೂಡಲಸಂಗಮದೇವಾ. 397
--------------
ಬಸವಣ್ಣ
ಜನ್ಮ ಹೊಲ್ಲೆಂಬೆನೆ, ಜನ್ಮವ ಬಿಡಲಹೆನು. ಭಕ್ತರೊಲವ ಪಡೆವೆನೆ, ಭಕ್ತಿಯ ಪಥವನರಿವೆನು. ಲಿಂಗವೆಂದು ಬಲ್ಲೆನೆ, ಜಂಗಮವೆಂದು ಕಾಬೆನು. ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ, ಕೈಲಾಸವ ಕಾಣಬಲ್ಲೆನು. ಎನ್ನಲ್ಲಿ ನಡೆುಲ್ಲಾಗಿ, ನಾನು ಭಕ್ತನೆಂತಹೆನಯ್ಯಾ, ಕೂಡಲಸಂಗಮದೇವಾ 292
--------------
ಬಸವಣ್ಣ
ಜಗತ್ತೆಂಬ ಯಂತ್ರದ ಹಾಹೆ ಹೇಂಗೆಂದರಿಯಲು ಅಜ್ಞಾನವೆಂಬ ತುಷದ ಚೋಹವ ತೊಡಿಸಿ, ಅಹಂ ಮಮತೆಯೆಂಬ ಸೊಕ್ಕನಿಕ್ಕಿ, ಬಾರದ ಭವದ ಬಟ್ಟೆಯಲ್ಲಿ ಬರಿಸಿ, ಕಾಣದ ಕರ್ಮ ದುಃಖವ ಕಾಣಿಸಿ, ಉಣ್ಣದ ಅಪೇಯವನುಣಿಸಿ, ಮಾರಾರಿ ವಿನೋದಿಸಿದೆಯಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಜಂಗಮವಿಲ್ಲದ ಮಾಟ ಕಂಗಳಿಲ್ಲದ ನೋಟ, ಹಿಂಗಿತ್ತು ಶಿವಲೋಕ ಇನ್ನೆಲ್ಲಿಯದಯ್ಯಾ. ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ, ಸಮಯೋಚಿತವನರಿಯದೆ ಉದರವ ಹೊರೆವವರ ನರಕದಲ್ಲಿಕ್ಕದೆ ಮಾಬನೆ ಕೂಡಲಸಂಗಮದೇವ 427
--------------
ಬಸವಣ್ಣ
ಜಜ್ಜನೆ ಜರಿದೆನು, ಜಜ್ಜನೆ ಜರಿದೆನು, ಜಜ್ಜನೆ ಜರಿದೆ ನೋಡಯ್ಯಾ, ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆ ನೋಡಯ್ಯಾ. ನಾನೊಬ್ಬನೆ ಉಳಿದೆನು, ನಾನೊಬ್ಬನೆ ಉಳಿದೆನು, ನಾನೊಬ್ಬನೆ ಉಳಿದೆ ನೋಡಯ್ಯಾ. ಕೂಡಲಸಂಗಮದೇವಾ, ನಿಮ್ಮ ಶರಣರನಗಲಿದ ಕಾರಣ. 370
--------------
ಬಸವಣ್ಣ
ಜಂಗಮವೆ ಜ್ಞಾನರೂಪು, ಭಕ್ತನೆ ಆಚಾರರೂಪವೆಂಬುದು ತಪ್ಪದು ನೋಡಯ್ಯಾ. ನಾನು ನಿಮ್ಮಲ್ಲಿ ಆಚಾರಿಯಾದಡೇನಯ್ಯಾ, ಜ್ಞಾನವಿಲ್ಲದನ್ನಕ್ಕರ ತಲೆಯಿಲ್ಲದ ಮುಂಡದಂತೆ. ಜ್ಞಾನ ಉದಯವಾಗದ ಮುನ್ನವೆ ತಲೆದೋರುವ ಆಚಾರವುಂಟೆ ಜಗದೊಳಗೆ ಜ್ಞಾನದಿಂದ ಆಚಾರ, ಜ್ಞಾನದಿಂದ ಅನುಭಾವ, ಜ್ಞಾನದಿಂದ ಪ್ರಸಾದವಲ್ಲದೆ, ಜ್ಞಾನವನುಳಿದು ತೋರುವ ಘನವ ಕಾಣೆನು. ಎನ್ನ ಆಚಾರಕ್ಕೆ ನೀನು ಜ್ಞಾನರೂಪಾದ ಕಾರಣ ಸಂಗನಬಸವಣ್ಣನೆಂಬ ಹೆಸರುವಡೆದೆನು. ಅನಾದಿ ಪರಶಿವನು ನೀನೆ ಆಗಿ, ಘನಚೈತನ್ಯಾತ್ಮಕನೆಂಬ ಮಹಾಜ್ಞಾನವು ನೀನೆ ಆದೆಯಲ್ಲದೆ, ನಾನೆತ್ತ, ಶಿವತತ್ತ್ವವೆತ್ತಯ್ಯಾ ಕೂಡಲಸಂಗಮದೇವರು ಸಾಕ್ಷಿಯಾಗಿ, ನಾನು ಪ್ರಭುದೇವರ ತೊತ್ತಿನ ಮಗನೆಂಬುದ ಮೂರು ಲೋಕವೆಲ್ಲವೂ ಬಲ್ಲುದು ಕಾಣಾ, ಪ್ರಭುವೆ.
--------------
ಬಸವಣ್ಣ
ಜನ್ಮ ಜನ್ಮಕ್ಕೆ ಹೊಗಲೀಯದೆ, ಸೋsಹಂ ಎಂದೆನಿಸದೆ ದಾಸೋsಹಂ ಎಂದೆನಿಸಯ್ಯಾ. ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ ಕೂಡಲಸಂಗಮದೇವಾ. 474
--------------
ಬಸವಣ್ಣ
ಜಂಗಮನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ ಆಂಗವಣಿಯೆಂತೊರಿ ಶಿವಾ ಶಿವಾ ನಿಂದಿಸುವ ಪೂಜಿಸುವ ಪಾತಕವಿದ ಕೇಳಲಾಗದು. ಗುರುವಿನ ಗುರು ಜಂಗಮ- ಇಂತೆಂದುದು ಕೂಡಲಸಂಗನ ವಚನ. 425
--------------
ಬಸವಣ್ಣ
ಜಂಗಮಸೇವೆಯೆ ಗುರುಪೂಜೆಯೆಂದರಿದ, ಜಂಗಮಸೇವೆಯೆ ಲಿಂಗಪೂಜೆಯೆಂದರಿದ, ಜಂಗಮಸೇವೆಯೆ ತನ್ನಿರವೆಂದರಿದ, ಜಂಗಮಸೇವೆಯೆ ತನ್ನ ನಿಜವೆಂದರಿದ, ಜಂಗಮಸೇವೆಯೆ ಸ್ವಯವೆಂದರಿದ, ಜಂಗಮಸೇವೆಯೆ ನಿತ್ಯಪದವೆಂದರಿದ. ಇದು ಕಾರಣ, ನಮ್ಮ ಕೂಡಲಸಂಗಮದೇವರಲ್ಲಿ ಜಂಗಮಪ್ರಾಣಿಯಾದ ಚಂದಯ್ಯನ ಹಳೆ ಮಗನಾಗಿ, ಆತನ ಶ್ರೀಚರಣಕ್ಕೆ ಶರಣೆಂದು ಶುದ್ಧನು, ಆ ಮಹಾಮಹಿಮನ ಘನವ ನಾನೆತ್ತ ಬಲ್ಲೆನಯ್ಯಾ ಪ್ರಭುವೆ
--------------
ಬಸವಣ್ಣ
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ, ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ, ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.
--------------
ಬಸವಣ್ಣ
ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ. ಕೇಳು, ಕೂಡಲಸಂಗಮದೇವಾ, ಮರಣವೆ ಮಹಾನವಮಿ.
--------------
ಬಸವಣ್ಣ
ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು, ಆನು ಮುತ್ತೈದೆ, ಆನು ನಿಟ್ಟೈದೆ. ಕೂಡಲಸಂಗಮದೇವಯ್ಯಾನಂತಪ್ಪ ಎನಗೊಬ್ಬ ಗಂಡನುಂಟು. 504
--------------
ಬಸವಣ್ಣ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ, ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ, ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ, ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
--------------
ಬಸವಣ್ಣ
ಜಂಗಮದ ಮನ-ಭಾವದಲ್ಲಿ ಭಕ್ತನೆ ಭೃತ್ಯನೆಂದು, ಭಕ್ತನ ಮನ-ಭಾವದಲ್ಲಿ ಜಂಗಮವೆ ಕರ್ತನೆಂದು ಇದ್ದ ಬಳಿಕ, ಬಂದಿತ್ತು-ಬಾರದು, ಇದ್ದತ್ತು-ಹೋುತ್ತೆಂಬ ಸಂದೇಹವಿಲ್ಲದಿರಬೇಕು. ಹೋುತ್ತೆಂಬ ಗುಣವುಳ್ಳನ್ನಕ್ಕ ನಿಮಗೆ ದೂರ, ನಿಮ್ಮವರಿಗೆ ಮುನ್ನವೆ ದೂರ, ಶಿವಾಚಾರಕ್ಕಲ್ಲಿಂದತ್ತ ದೂರ. ಜಂಗಮದ ಹರಿದ ಹರಿವು, ಜಂಗಮದ ನಿಂದ ನಿಲವು, ಜಂಗಮದ ಗಳಗರ್ಜನೆ, ಜಂಗಮದ ಕೋಳಾಟಕ್ಕೆ ಸೈರಿಸದಿದ್ದಡೆ ನೀನಂದ ಮೂಗ ಕೊಯ್ ಕೂಡಲಸಂಗಮದೇವಾ. 429
--------------
ಬಸವಣ್ಣ
ಜಲವ ತಪ್ಪಿದ ಮತ್ಸ್ಯ ಬದುಕುವುದೇ ಸೋಜಿಗ, ಗಣತಿಂತಿಣಿಯೊಳಗಿರಿಸೆನ್ನ ಲಿಂಗವೆ. ಶಿವ ಶಿವಾ, ಕೂಡಲಸಂಗª Àುದೇವಾ, ಸೆರಗೊಡ್ಡಿ ಬೇಡುವೆನು. 368
--------------
ಬಸವಣ್ಣ
ಜಲ ಕೂರ್ಮ ನಾಗ ಮೇದಿನಿ ಸಪ್ತಸಾಗರ ಅಜಾಂಡ ಹರಿವಿರಂಚಿಗಳು ನಿಮ್ಮ ಉದರದ ಕೊನೆಯ ಪ್ರಾಣಿಗಳಯ್ಯಾ. ಕೂಡಲಸಂಗನ ಮಹಾಮನೆಯಲ್ಲಿ ಅಸ್ತಿಗ್ರಾಹಕನೆಂಬ ಗಣೇಶ್ವರನ ಇಚ್ಛಾಮಾತ್ರದಿಂದ ಜಗಜುಗವಯ್ಯಾ.
--------------
ಬಸವಣ್ಣ
ಜಂಗಮವೆ ಲಿಂಗವೆಂಬ ಭಾವ ಫಲಿಸಿದಡೆ ಇಂದಿನ ಪುಣ್ಯಕ್ಕೆ ಸರಿಯುಂಟೆ ಲಿಂಗದ ಒಡಲ ಮನೆಮಾಡಿಪ್ಪ ಜಂಗಮವೆನ್ನ ಕಣ್ಣಮುಂದೆ ಸುಳಿದಡೆ ಇಂದೆನ್ನ ಭಾಗ್ಯಕ್ಕೆ ಕಡೆಯಿಲ್ಲ. ಆ ಜಂಗಮವೆ ದಿಟಕ್ಕೆನ್ನ ಮನೆಗೆ ಬಂದಡೆ ಸಲುಗೆಯ ವರವ ಹಡೆವೆನು ಕಾಣಾ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣಾ, ನೀನಹುದೆನಲಿಕೆ.
--------------
ಬಸವಣ್ಣ

ಇನ್ನಷ್ಟು ...