ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ, ಬಂಧುಗಳು ಬಂದಾಗಳಿಲ್ಲೆನ್ನ. ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ, ಬಂದ ಪುರಾತರಿಗೆ ಇಲ್ಲೆಂಬ, ಸಾವಾಗ ದೇಹವ ದೇಗುಲಕ್ಕೆ ಒಯ್ಯೆಂಬ, ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ ಕೂಡಲಸಂಗಮದೇವಾ 222
--------------
ಬಸವಣ್ಣ
ಉಪ್ಪರಗುಡಿ ನಂದಿವಾಹನ ಸದ್ಯೋಜಾತನ ಬಾಗಿಲ ಮುಂದೆ ಸಾರುತ್ತೈದಾವೆ, ನೋಡಾ, ಶ್ರುತಿಗಳೂ ನಾಲ್ಕು ವೇದವೂ ಹುಸಿಯಿದೆ `ಭರ್ಗೋ ದೇವಸ್ಯ ದ್ಥೀಮಹಿ' ಎಂದುದಾಗಿ, ಕೂಡಲಸಂಗನಲ್ಲದಿಲ್ಲೆಂದುದು ವೇದ.
--------------
ಬಸವಣ್ಣ
ಉಂಬಲ್ಲಿ [ಊ]ಡುವಲ್ಲಿ ಕ್ರೀಯಳಿಯಿತ್ತೆಂಬರು, ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು, ಎಂತಯ್ಯಾ ಅವರ ಭಕ್ತರೆಂತೆಂಬೆ ಎಂತಯ್ಯಾ ಅವರ ಯುಕ್ತರೆಂತೆಂಬೆ ಕೂಡಲಸಂಗಮದೇವಾ ಕೇಳಯ್ಯಾ, ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ.
--------------
ಬಸವಣ್ಣ
ಉರೆ ತಾಗಿದ ಮೃಗವು ಒಂದಡಿಯನಿಡುವುದೆ ತನುವ ತಾಗಿದ ಸುಖವು ಅಗಲುವುದೆ ಕೂಡಲಸಂಗನ ಶರಣರ ಅನುಭಾವವರಿದವರ ಮರಳಿ ಮತ್ರ್ಯರೆಂದೆನಬಹುದೆ
--------------
ಬಸವಣ್ಣ
ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡುರಿವುದು ಮಾಬುದೆ ಕಲ್ಲು ಗುಗ್ಗರಿಯ ಮೆಲಿದಡೆ ಹಲ್ಲು ಹೋಹುದು ಮಾಬುದೆ ಶರಣರೊಡನೆ ಸರಸವಾಡಿದಡೆ ನರಕ ತಪ್ಪದು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಉತ್ತಮ ಮಧ್ಯಮ ಕನಿಷ್ಟವೆಂದು, ಬಂದ ಜಂಗಮವನೆಂದೆನಾದಡೆ ನೊಂದೆನಯ್ಯಾ, ಬೆಂದೆಯಯ್ಯಾ, ಎನ್ನ ಕಿಚ್ಚು ಎನ್ನ ಸುಟ್ಟಿತ್ತು. ಸುಖಿಜಂಗಮ, ಸಾಮಾನ್ಯಜಂಗಮ ಉಂಟೆ, ಕೂಡಲಸಂಗಮದೇವಾ 401
--------------
ಬಸವಣ್ಣ
ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾುತ್ತು, ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರ ಕಠಿಣವಾುತ್ತು ಮೊದಲಲ್ಲಿ ಲಿಂಗಭಕ್ತಿ ಹಿತವಾುತ್ತು, ಕಡೆಯಲ್ಲಿ ಜಂಗಮಭಕ್ತಿ ಕಠಿಣವಾುತ್ತು ಇದು ಕಾರಣ ಕೂಡಲಸಂಗಮದೇವನವರ ಬಲ್ಲನಾಗಿ ಒಲ್ಲನಯ್ಯಾ. 219
--------------
ಬಸವಣ್ಣ
ಉಪಮಿಸಬಾರದ ಉಪಮಾತೀತರು, ಕಾಲಕರ್ಮರಹಿತರು, ಭವವಿರಹಿತರು, ಕೂಡಲಸಂಗಮದೇವಾ, ನಿಮ್ಮ ಶರಣರು.
--------------
ಬಸವಣ್ಣ
ಉಣಲುಡಲು ಮಾರಿಯಲ್ಲದೆ, ಕೊಲಲು ಕಾಯಲು ಮಾರಿಯೆ ತನ್ನ ಮಗನ ಜವನೊಯ್ದಲ್ಲಿ ಅಂದೆತ್ತ ಹೋದಳು ಮಾರಿಕವ್ವೆ ಈವಡೆ ಕಾವಡೆ ನಮ್ಮ ಕೂಡಲಸಂಗಯ್ಯನಲ್ಲದೆ ಮತ್ತೊಂದು ದೈವವಿಲ್ಲ.
--------------
ಬಸವಣ್ಣ
ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿ ಮಾಡುವ ಕರ್ಮಿ ನೀ ಕೇಳಾ; ಉದಯವೆಂದೇನೊ ಶರಣಂಗೆ ಮಧ್ಯಾಹ್ನವೆಂದೇನೊ ಶರಣಂಗೆ ಅಸ್ತಮಾನವೆಂದೇನೊ ಶರಣಂಗೆ ಮಹಾಮೇರುವಿನ ಮರೆಯಲ್ಲಿರ್ದು ತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ, ನಮ್ಮ ಕೂಡಲಸಂಗಮದೇವರು.
--------------
ಬಸವಣ್ಣ
ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಲಶವಯ್ಯಾ. ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
--------------
ಬಸವಣ್ಣ
ಉಂಡುದು ಬಂದಿತ್ತೆಂಬ ಸಂದೇಹಿ ಮಾನವ ನೀ ಕೇಳಾ: ಉಂಡುದೇನಾುತ್ತೆಂಬುದ ನಿನ್ನ ನೀ ತಿಳಿದು ನೋಡಾ, ಉಂಡುದು ಆಗಳೆ ಅಪೇಯವಾುತ್ತು. ಆ ಉಂಡುದನುಣಬಂದ ಹಂದಿಯ ಬಾಳುವೆಯವರ ಕಂಡು ಆನು ಮರುಗುವೆನಯ್ಯಾ, ಕೂಡಲಸಂಗಮದೇವಯ್ಯಾ. 200
--------------
ಬಸವಣ್ಣ
ಉದಯಾಸ್ತಮಾನವೆನ್ನ ಬೆಂದ ಬಸುರಿಂಗೆ ಕುದಿಯಲಲ್ಲದೆ, ನಿಮ್ಮ ನೆನೆಯಲು ತೆರಹಿಲ್ಲಯ್ಯಾ. ಎಂತೋ ಲಿಂಗ ತಂದೆ, ಎಂತಯ್ಯಾ ಎನ್ನ ಪೂರ್ವಲಿಖಿತ ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲೆನಗೆ, ನೀ ಕರುಣಿಸು, ಕೂಡಲಸಂಗಮದೇವಾ. 271
--------------
ಬಸವಣ್ಣ
ಉಡುವಿನ ಭಾವದಲ್ಲಿ ಹಡೆದರೆಮ್ಮವರು, ಊಸರವಳ್ಳಿಯಂತೆ ಎನ್ನ ಇರವು, ಬಾವುಲ ಬಾಳುವೆಯ ತರನಂತೆ ! ಹೊತ್ತಾರೆ ಎದ್ದ ಕುರುಡಂಗೆ ಆಗುಸೆಯಲ್ಲಿ ಅಸ್ತಮಾನದಂತೆ- ಆನು ಭಕ್ತಿಯ ಬಯಸಿದಡಹುದೆ ಕೂಡಲಸಂಗಮದೇವಾ 293
--------------
ಬಸವಣ್ಣ
ಉತುಪತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ ಮತ್ತೆ ದುರಿತಂಗಳ ಹೆರುವ ಹೇಗತನವೇಕಯ್ಯಾ ಮೃತ್ಯುವಿನ ಬಾುಗೆ ಒಳಗಾಗಲೇಕೆ ಒತ್ತೊತ್ತೆಯ ಜನನವ ಗೆಲುವಡೆ ಕರ್ತನ ಪೂಜಿಸು ನಮ್ಮ ಕೂಡಲಸಂಗಮದೇವನ. 159
--------------
ಬಸವಣ್ಣ
ಉಮಾಧಿನಾಥರು ಕೋಟಿ, ಪಂಚವಕ್ತ್ರರು ಕೋಟಿ, ನಂದಿವಾಹನರೊಂದು ಕೋಟಿ ನೋಡಯ್ಯಾ. ಸದಾಶಿವರು ಕೋಟಿ, ಗಂಗೆವಾಳುಕ ಸಮರುದ್ರರಿವರೆಲ್ಲರು ಕೂಡಲಸಂಗನ ಸಾನ್ನಿಧ್ಯರಲ್ಲದೆ ಸಮರಸವೇದ್ಯರೊಬ್ಬರೂ ಇಲ್ಲ.
--------------
ಬಸವಣ್ಣ
ಉಟ್ಟು-ತೊಟ್ಟು ಪೂಜ್ಯವಾಗಿ ಬಂದ ಜಂಗಮ ವಿಶೇಷವೆಂದು, ಕಂತೆ-ಬೊಂತೆಯ ಜಂಗಮ ಬಂದಡೆ ಹೀನವೆಂದು ಕಂಡೆನಾದಡೆ ಪಂಚಮಹಾಪಾತಕ. ಇದು ಕಾರಣ, ಅನ್ನ-ವಸ್ತ್ರ-ಧನ ಮಾಟದಲ್ಲಿ ಎರಡಾಗಿ ಕಂಡೆನಾದಡೆ ನರಕದಲ್ಲಿಕ್ಕುವ, ಕೂಡಲಸಂಗಮದೇವ. 412
--------------
ಬಸವಣ್ಣ
ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು, ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು.
--------------
ಬಸವಣ್ಣ
ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ, ಭಾಂಡ ಒಂದೆ ಭಾಜನ ಒಂದೆ, ಬೆಳಗೆ ಕನ್ನಡಿಯೆನಿಸಿತ್ತಯ್ಯಾ. ಅರಿದಡೆ ಶರಣ, ಮರೆದಡೆ ಮಾನವ, ಮರೆಯದೆ ಪೂಜಿಸು ಕೂಡಲಸಂಗನ.
--------------
ಬಸವಣ್ಣ
ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ, ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ, ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ, ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ. ಉನ್ನತ ಮಹಿಮ, ಕೂಡಲಸಂಗಮದೇವಾ, ಶಿವಧೋ ಶಿವಧೋ ! 344
--------------
ಬಸವಣ್ಣ