ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭವಭವದಲ್ಲಿ ಎನ್ನ ಮನವು ಸಿಲುಕದೆ ಭವಭವದಲ್ಲಿ ಎನ್ನ ಮನವು ಕಟ್ಟದೆ ಭವಸಾಗರದಲ್ಲಿ ಮುಳುಗದೆ ಭವರಾಟಳದೊಳು ತುಂಬದೆ ಕೆಡಹದೆ ಭವವಿರಹಿತ ನೀನು, ಅವಧಾರು ಕರುಣಿಸು ಕೂಡಲಸಂಗಮದೇವಾ. 68
--------------
ಬಸವಣ್ಣ
ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು. ಲಿಂಗಸಂಬಂದ್ಥಿಯಾದಡೆ ಜಂಗಮಪ್ರೇಮಿ ನೀನಾಗು, ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯಾ, ಜಂಗಮದಲ್ಲಿ ನಿರುತ ಭರಿತ, ಕೂಡಲಸಂಗಮದೇವ.
--------------
ಬಸವಣ್ಣ
ಭಕ್ತಿಯೆಂಬ ನಿಧಾನವ ಸಾದ್ಥಿಸುವಡೆ ಶಿವಪ್ರೇಮವೆಂಬ ಅನಂಜನವನೆಚ್ಚಿಕೊಂಬುದು, ಭಕ್ತನಾದವಂಗೆ ಇದೇ ಪಥವಾಗಿರಬೇಕು. ನಮ್ಮ ಕೂಡಲಸಂಗನ ಶರಣರ ಅನುಭಾವ ಗಜವೈದ್ಯ. 243
--------------
ಬಸವಣ್ಣ
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣನೈಕ್ಯನು ಮೆಲ್ಲ ಮೆಲ್ಲನೆ ಆದೆಹೆನೆಂಬನ್ನಬರ ನಾನು ವಜ್ರದೇಹಿಯೆ ನಾನೇನು ಅಮೃತವ ಸೇವಿಸಿದೆನೆ ಆನು ಮರುಜವಣಿಯ ಕೊಂಡೆನೆ ನುಡಿದ ನುಡಿಯೊಳಗೆ ಷಡುಸ್ಥಲ ಬಂದು ಎನ್ನ ಮನವನಿಂಬುಗೊಳ್ಳದಿದ್ದಡೆ, ಸುಡುವೆನೀ ತನುವ ಕೂಡಲಸಂಗಮದೇವಾ.
--------------
ಬಸವಣ್ಣ
ಭವವಿಲ್ಲದಡೇನು, ಬಂಧನವಿಲ್ಲದಡೇನು, ಶಿವಗಣಂಗಳೆಲ್ಲರ ಮನಕ್ಕೆ ಬಾರದುದೆ ಭವಬಂಧನ ನೋಡಾ. ಪರಹಿತಾರ್ಥವಾಗಬೇಕೆಂದು ಲಿಂಗವ ಕೊಟ್ಟಡೆ ನಿಮ್ಮ ಪ್ರಮಥರ ಮುಂದೆ ಶಿವ ಮುನಿದು ಮತ್ರ್ಯಲೋಕಕ್ಕೆ ಕಳುಹಿಸಿದನು. ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದು ನಂಬಿದಲ್ಲಿ ನಿಮ್ಮ ಪ್ರಮಥರೆನ್ನನೊಳಗಿಟ್ಟುಕೊಂಡರು. ಜಂಗಮಮುಖದಲ್ಲಿ ಲಿಂಗವನರಿಸಿಕೋ ಎಂದಡೆ ದಾಸೋಹವೆಂಬ ಪಸರವನಿಕ್ಕಿದೆನು. ಕೂಡಲಸಂಗಮದೇವರ ಮುಂದೆ ಜಂಗಮಮುಖದಲ್ಲಿ ಎಂದು ಸುಖಿಯಪ್ಪೆನು ಹೇಳಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಭಕ್ತಿುಲ್ಲದ ಬಡವ ನಾನಯ್ಯಾ: ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ. ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
--------------
ಬಸವಣ್ಣ
ಭಕ್ತನಾಗಿ ಲಿಂಗ ಜಂಗಮವ ಪೂಜಿಸಬೇಕು. ಭಕ್ತನಾಗಿ ತನ್ನ ತಾ ಪೂಜಿಸಿಕೊಂಬುದು ಎಂತಯ್ಯಾ ಸ್ವಾಮಿಭೃತ್ಯಸಂಬಂಧವು ಎಂತಯ್ಯಾ ಪೂರುಸುವುದು ಕೂಡಲಸಂಗಮದೇವಾ, ಕಣ್ಣಕಟ್ಟಿ ಕನ್ನಡಿಯ ತೋರುವಂತೆ ! 185
--------------
ಬಸವಣ್ಣ
ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು. ಕರ್ತನಾಗಿ ಕಾಲ ತೊಳೆುಸಿಕೊಂಡಡೆ ಹಿಂದೆ ಮಾಡಿದ ಭಕ್ತಿಗೆ ಹಾನಿ. ಲಕ್ಕಗಾವುದ ದಾರಿಯ ಹೋಗಿ ಭಕ್ತನು ಭಕ್ತನ ಕಾಂಬುದು ಸದಾಚಾರ. ಅಲ್ಲಿ ಕೂಡಿ ದಾಸೋಹವ ಮಾಡಿದಡೆ ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ. 246
--------------
ಬಸವಣ್ಣ
ಭಕ್ತದೇಹಿಕನಪ್ಪ ದೇವನು ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ, ಆಳ್ದನು ಬರಲಾಳು ಮಂಚದ ಮೇಲಿಪ್ಪುದು ಗುಣವೇ ಹೇಳಾ. ಕೂಡಲಸಂಗಮದೇವಾ, ಜಂಗಮರೂಪಾಗಿ ಸಂಗಯ್ಯ ಬಂದಾನೆಂದು ಎಂದೆಂದೂ ನಾನು ಮಂಚವನೇರದ ಭಾಷೆ. 396
--------------
ಬಸವಣ್ಣ
ಭಿತ್ತಿುಲ್ಲದೆ ಬರೆಯಬಹುದೆ ಚಿತ್ತಾರವ ಬಿತ್ತಿ ಬೆಳೆಯಬಹುದೆ ಧರೆುಲ್ಲದೆ ಜಂಗಮವಿಲ್ಲದೆ ಲಿಂಗಾರ್ಚನೆಯ ಮಾಡಬಹುದೆ ರೂಡ್ಥೀಶ್ವರನ ಭೇದಿಸಬಹುದೆ ! ಒಡಲಿಲ್ಲ[ದೆ]. ನಿರಾಳಕರ್ತೃ ಕೂಡಲಸಂಗಮದೇವ ಜಂಗಮಮುಖವಾದನಾಗಿ ಮತ್ತೊಂದನರಿಯೆನಯ್ಯಾ. 399
--------------
ಬಸವಣ್ಣ
ಭಕ್ತನ ಕಾಯವ ಜಂಗಮ ಧರಿಸಿಪ್ಪ ನೋಡಾ, ಜಂಗಮದ ಪ್ರಾಣವ ಭಕ್ತ ಧರಿಸಿಪ್ಪ ನೋಡಾ. ಭಕ್ತನಲ್ಲಿಯೂ ಭಕ್ತಜಂಗಮವೆರಡೂ ಸನ್ನಹಿತ, ಜಂಗಮದಲ್ಲಿಯೂ ಜಂಗಮಭಕ್ತವೆರಡೂ ಸನ್ನಹಿತ, ಜಂಗಮಕ್ಕಾದಡೂ ಭಕ್ತಿಯೆ ಬೇಕು, ಭಕ್ತಂಗೆ ಭಕ್ತಿಸ್ಥಲವೆ ಬೇಕು. ಭಕ್ತನ ಅರ್ಥಪ್ರಾಣಾಬ್ಥಿಮಾನಕ್ಕೆ ತಾನೆ ಕಾರಣನೆಂದು ಬಂದ ಜಂಗಮ ಆ ಭಕ್ತನ ಮನೆಗೆ ತಾನೆ ಕರ್ತನಾಗಿ ಹೊಕ್ಕು, ತನುಮನಧನಂಗಳೆಲ್ಲವನೊಳಕೊಂಡು, ಆ ಭಕ್ತನ ಪಾವನವ ಮಾಡಬಲ್ಲಡೆ ಆತ ಜಂಗಮವೆಂಬೆ. ಆ ಜಂಗಮದ ಗಳಗರ್ಜನೆಗೆ ಸೈರಿಸಿ, ಮುಡುಹಿಂಗ ಮುನ್ನೂರು ಪಟ್ಟವ ಕಟ್ಟಿದಡೆ ಆತ ಭಕ್ತನೆಂಬೆ. ತನ್ನ ಮಠಕ್ಕೆ ತಾ ಬಹಡೆ ಮುನಿಸುಂಟೆ ಕೂಡಲಸಂಗನ ಶರಣರ ಮನೆಯ ಬಾಗಿಲುಗಾಹಿ ನಾನಾಗಿರ್ದು ಕರ್ತರು ಗೃಹಕ್ಕೆ ಬಂದಡೆ ಬೇಕು ಬೇಡೆನ್ನೆ.
--------------
ಬಸವಣ್ಣ
ಭವರೋಗವೈದ್ಯನೆಂದು ನಂಬಿದೆ ನಾನು, ಒಮ್ಮಿಂಗೆ ಕರುಣಿಸಯ್ಯಾ ಭಕ್ತಿಫಲಪ್ರದಾಯಕ. ನೀನು ಒಮ್ಮಿಂಗೆ ಕರುಣಿಸಯ್ಯಾ ಜಯ ಜಯ ಶ್ರೀ ಮಹಾದೇವ ಎನುತಿರ್ದೆನು. ಕೂಡಲಸಂಗಮದೇವಯ್ಯಾ, ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಬಸವಣ್ಣ
ಭಕ್ತಿಯೆಂಬ ಪಿತ್ತ ತಲೆಗೇರಿ ಕೈಲಾಸದ ಬಟ್ಟೆಯ ಹತ್ತುವ ವ್ಯರ್ಥರ ಕಂಡು ಎನ್ನ ಮನ ನಾಚಿತ್ತು, ನಾಚಿತ್ತು. ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ, ಆ ಪೃಥ್ವಿಗೆ ಲಯವುಂಟು, ಆ ಮೊರಡಿಗೆಯು ಲಯವುಂಟು, ಅಲ್ಲಿರ್ಪ ಗಂಗೆವಾಳುಕಸಮರುದ್ರರಿಗೂ ಲಯವುಂಟು, ಇದು ಕಾರಣ, `ಯದ್ಧೃಷ್ಟಂ ತನ್ನಷ್ಟಂ' ಎಂಬ ಶ್ರುತಿಯ ನೋಡಿ ತಿಳಿದು, ಬಟ್ಟಬಯಲು ತುಟ್ಟತುದಿಯ ಮೆಟ್ಟಿನಿಂದ ಕೂಡಲಸಂಗಾ, ನಿಮ್ಮ ಶರಣ.
--------------
ಬಸವಣ್ಣ
ಭವಭವದಲ್ಲಿ ನಿಮ್ಮ ಜಂಗಮವೆ ಶರಣಯ್ಯಾ. ಅವರುಂಡು ಮಿಕ್ಕುದ ಉಡುಗಿ, ಒಕ್ಕಪ್ರಸಾದವನಾಯ್ದುಕೊಂಬ ಮರುಳ ನಾನಯ್ಯಾ. ನಮ್ಮ ಕೂಡಲಸಂಗನ ಶರಣರ ರಿಣವ ನಾ ಹಿಂಗಲಾರೆ. 472
--------------
ಬಸವಣ್ಣ
ಭಕ್ತರನಲ್ಲದೆ ಒಲ್ಲೆವೆಂದೆಂಬಿರಿ, ಭಕ್ತರಿಗಲ್ಲದೆ ಕೈಯಾನೆವೆಂಬಿರಿ, ಇದೇನ ಮಾಡುವಿರಿ ಇದೆಲ್ಲಿಗೊಯ್ಯುವಿರಿ ಪಾವನವಾದುದನು ಲಿಂಗಕ್ಕೆ ಮಾಡುವುದೆ ಆಚಾರ. ವಿಷಯಕ್ಕೆ ಇಕ್ಕಿ, ಅಸುಗತಿಗಿಳಿಯದಿರಿ ಕೂಡಲಸಂಗನಶರಣರ ಒಡೆವೆಯ.
--------------
ಬಸವಣ್ಣ
ಭೂಮಿಯೊಳಗೆ ನಿಧಾನವಿದ್ದುದ ಅಂಜನವುಳ್ಳವರು ತೋರಿರಯ್ಯಾ. ಅಂಜಲುಬೇಡ ಕಂಡಾ, ಮನದಲ್ಲಿ ಸಂದೇಹವ ಮಾಡದಿರಾ. ಜಂಗಮದೊಳಗೆ ಲಿಂಗಯ್ಯನಿದ್ದಾನೆಂದು ನಂಬುಗೆಯುಳ್ಳಡೆ ತೋರುವ ಕೂಡಲಸಂಗಯ್ಯ. 186
--------------
ಬಸವಣ್ಣ
ಭವಭವದಲ್ಲಿ ಭಕ್ತನಾದಡೆ ಆ ಭವವೆ ಲೇಸು ಕಂಡಯ್ಯಾ. ಲಿಂಗಾರಾಧನೆ, ಜಂಗಮಾನುಭವ ಅಂದಂದಿಗೆ ಪರಮಸುಖವಯ್ಯಾ. ಎಂದೆಂದೂ ನಾನಿದನೆ ಬಯಸುವೆ ತಂದೆ, ಕರುಣಿಸಯ್ಯಾ ಕೂಡಲಸಂಗಮದೇವಾ.
--------------
ಬಸವಣ್ಣ
ಭಕ್ತಿಹೀನನ ದಾಸೋಹವ ಸದ್ಭಕ್ತರು ಸವಿಯರು; ಬೇವಿನ ಹಣ್ಣು ಕಾಗೆಗೆ ಇನಿದಲ್ಲದೆ ಕೋಗಿಲೆಗೆ ಮೆಲಬಾರದು. ಲಿಂಗಸಂಬಂಧವಿಲ್ಲದವರ ನುಡಿ ಕೂಡಲಸಂಗನ ಶರಣರಿಗೆ ಸಮನಿಸದು.
--------------
ಬಸವಣ್ಣ
ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು. ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲಲೀಯರಯ್ಯಾ. ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ ಕೂಡಲಸಂಗಮದೇವಾ. 198
--------------
ಬಸವಣ್ಣ
ಭಕ್ತನೆಂತೆಂಬೆನಯ್ಯಾ ಭವಿಯ ಸಂಗ ಬಿಡದನ್ನಕ್ಕ ಮಾಹೇಶ್ವರನೆಂತೆಂಬೆನಯ್ಯಾ ಪರಸ್ತ್ರೀ ಪರಧನದಾಸೆ ಬಿಡದನ್ನಕ್ಕ.ಪ್ರಸಾದಿಯೆಂತೆಂಬೆನಯ್ಯಾ ಆಧಿವ್ಯಾಧಿ ನಷ್ಟವಾಗದನ್ನಕ್ಕ. ಪ್ರಾಣಲಿಂಗಿಯೆಂತೆಂಬೆನಯ್ಯಾ ಪ್ರಾಣ ಸ್ವಸ್ಥಿರವಾಗದನ್ನಕ್ಕ. ಶರಣನೆಂತೆಂಬೆನಯ್ಯಾ ಪಂಚೇಂದ್ರಿಯ ನಾಶವಾಗದನ್ನಕ್ಕ. ಐಕ್ಯನೆಂತೆಂಬೆನಯ್ಯಾ ಜನನ ಮರಣ ವಿರಹಿತವಾಗದನ್ನಕ್ಕ. ಇಂತಪ್ಪ ಭಾಷೆ ವ್ರತ ನೇಮಂಗಳ ನಾನರಿಯೆನಯ್ಯಾ, ಅಘಟಿತಘಟಿತ ವರ್ತಮಾನದ ನಾನರಿಯೆನಯ್ಯಾ. ನಿಮ್ಮ ಶರಣರ ತೊತ್ತು-ಭೃತ್ಯಾಚಾರವ ಮಾಡುವೆ ಕೂಡಲಸಂಗಮದೇವಾ. 510
--------------
ಬಸವಣ್ಣ
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ. ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ. ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ. 441
--------------
ಬಸವಣ್ಣ
ಭವಬಂಧನ ದುರಿತಂಗಳ ಗೆಲುವಡೆ ಓಂ ನಮಃ ಶಿವಶರಣೆಂದಡೆ ಸಾಲದೆ ಹರ ಹರ ಶಂಕರ, ಶಿವ ಶಿವ ಶಂಕರ, ಜಯ ಜಯ ಶಂಕರ ಶರಣೆನುತ್ತಿದ್ದೇನೆ. ಎನ್ನ ಪಾತಕ ಪರಿಹರ, ಕೂಡಲಸಂಗಮದೇವಾ ಶರಣೆನುತ್ತಿದ್ದೇನೆ. 79
--------------
ಬಸವಣ್ಣ
ಭಕ್ತಿಯೆಂಬುದ ಮಾಡಬಾರದು, ಕರಗಸದಂತೆ ಹೋಗುತ್ತ ಕೊರೆದು, ಬರುತ್ತ ಕೊಯ್ವುದು. ಘಟಸರ್ಪನಲ್ಲಿ ಕೈದುಡುಕಿದಡೆ ಹಿಡಿವುದ ಮಾಬುದೆ ಕೂಡಲಸಂಗಮದೇವಾ 212
--------------
ಬಸವಣ್ಣ
ಭವಕ್ಕೆ ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ, ಆಕಾರ ನಿರಾಕಾರನಲ್ಲ ನೋಡಯ್ಯಾ. ಕಾಯವಂಚಕನಲ್ಲ, ಜೀವವಂಚಕನಲ್ಲ, ಶಂಕೆಯಿಲ್ಲದ ಮಹಾಮಹಿಮ ನೋಡಯ್ಯಾ. ಕೂಡಲಸಂಗನ ಶರಣನುಪಮಾತೀತ, ನೋಡಯ್ಯಾ.
--------------
ಬಸವಣ್ಣ
ಭವರೋಗವೈದ್ಯನೆಂದು ನಾ ನಿಮ್ಮ ಮರೆಹೊಕ್ಕೆ, ಭಕ್ತಿದಾಯಕ ನೀನು ಕರುಣಿಸು ಲಿಂಗತಂದೆ. ಜಯ ಜಯ ಶ್ರೀ ಮಹಾದೇವ, ಜಯ ಜಯ ಶ್ರೀ ಮಹಾದೇವ, ಜಯ ಜಯ ಶ್ರೀ ಮಹಾದೇವ ಎನ್ನುತ್ತಿದ್ದಿತೆನ್ನ ಮನವು. ಕೂಡಲಸಂಗಮದೇವಂಗೆ ಶರಣೆಂದಿತ್ತೆನ್ನ ಮನವು. 484
--------------
ಬಸವಣ್ಣ

ಇನ್ನಷ್ಟು ...