ಅಥವಾ
(151) (76) (19) (2) (20) (3) (0) (0) (79) (11) (0) (35) (8) (0) ಅಂ (25) ಅಃ (25) (110) (0) (32) (0) (0) (13) (1) (30) (0) (0) (0) (0) (1) (0) (0) (38) (0) (28) (9) (74) (32) (1) (45) (43) (81) (2) (5) (0) (46) (30) (42) (0) (76) (96) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾಡುವ ಮಾಡಿಸಿಕೊಂಬ ಎರಡರ ನಡುವೆ ಸಂದುಭೇದ ಉಂಟೆ ದೇವಾ ಕಾಯ ಪ್ರಾಣದ ಸಂಗದಂತೆ ಇದ್ದುದಲ್ಲದೆ. ಬಲ್ಲಂತೆ ಮಾಡು, ಬಲ್ಲಂತೆ ನೀಡು, ನಾನರಿಯೆನೆಂಬುದು ನಿಮಗುಚಿತವೆ ಮಾಡುವಲ್ಲಿ ನೀಡುವಲ್ಲಿ ಹೇಳಿ ಮಾಡಿಸಿಕೊಂಬುದಲ್ಲದೆ. ಕೈ ಕಲಸಿದಡೆ ಬಾಯಿಗೆ ಹಂಗುಂಟೆ ಕೂಡಲಸಂಗಮದೇವಾ
--------------
ಬಸವಣ್ಣ
ಮನೆದೈವ, ಕುಲದೈವ ಎನಗೆ ನಿಮ್ಮವರಯ್ಯಾ. ತನು ವಿೂಸಲು, ಮನ ಮೀಸಲು, ನಯನ ವಿೂಸಲು ಎನ್ನ, ಕೂಡಲಸಂಗಮದೇವಾ, ನಿಮ್ಮ ಶರಣರಿಗೆ. 374
--------------
ಬಸವಣ್ಣ
ಮಾಡುವರಿಲ್ಲ, ನೀ ಮಾಡದೆ ನಿಲ ಸಾಲೆ. ಬೇಡುವರಿಲ್ಲ, ನೀ ಬೇಡದೆ ನಿಲ ಸಾಲೆ. ಕೂಡುವರಿಲ್ಲ, ನೀ ಕೂಡದೆ ನಿಲ ಸಾಲೆ. ಕೂಡಲಸಂಗಮದೇವ ತಾನು ತಾನಾಗಿ ನೀ ನೋಡದೆ ನಿಲ ಸಾಲೆ.
--------------
ಬಸವಣ್ಣ
ಮುಂಡೆಯ ಬೋಳಿಸಿಕೊಂಡು ಗಂಡುದೊತ್ತುವೊಕ್ಕೆನಯ್ಯಾ. ಲಜ್ಜೆಗೆಟ್ಟಾದಡೂ ಲಿಂಗವನೊಲಿಸುವೆ, ನಾಣುಗೆಟ್ಟಾದಡೂ ಲಿಂಗವನೊಲಿಸುವೆ, ಕೆಲದ ಸಂಸಾರಿಗಳು ನಗುತಿರ್ದಡಿರಲಿ, ಕೂಡಲಸಂಗಮದೇವಾ, ಶರಣಗತಿವೊಕ್ಕೆನಯ್ಯಾ. 497
--------------
ಬಸವಣ್ಣ
ಮುನ್ನ ಮಾಡಿದ ಪಾಪ ಬೆನ್ನ ಬಿಡದನ್ನಕ್ಕ ಇನ್ನು ಬಯಸಿದಡುಂಟೆ ? ಭಕ್ತಿಯುಳ್ಳವರ ನೋಡಿ ನೋಡಿ ಬಯಸಿದಡುಂಟೆ, ಕೂಡಲಸಂಗಮದೇವರಲ್ಲಿ ಮುನ್ನ ವರವ ಹಡೆಯದನ್ನಕ್ಕ? 24
--------------
ಬಸವಣ್ಣ
ಮೊನೆ ತಪ್ಪಿದ ಬಳಿಕ ಅಲಗೇನ ಮಾಡುವುದು ವಿಷ ತಪ್ಪಿದ ಬಳಿಕ ಹಾವೇನ ಮಾಡುವುದು ಭಾಷೆ ತಪ್ಪಿದ ಬಳಿಕ ದೇವಾ, ಬಲ್ಲಿದ ಭಕ್ತನೇನ ಮಾಡುವನಯ್ಯಾ ಭಾಷೆ ತಪ್ಪಿದ ಬಳಿಕ ಪ್ರಾಣದಾಸೆಯನು ಹಾರಿದಡೆ ಮೀಸಲನು ಸೊಣಗ ಮುಟ್ಟಿದಂತೆ ಕೂಡಲಸಂಗಮದೇವಾ.
--------------
ಬಸವಣ್ಣ
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ. ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ. 233
--------------
ಬಸವಣ್ಣ
ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು; ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದಡೆ ಒಳಗೆ ಕೆಚ್ಚಿಲ್ಲದಿರಬೇಕು. ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು. ಎನಗಿನ್ನಾವ ಭಯವಿಲ್ಲ ಕಾಣಾ, ಕೂಡಲಸಂಗಮದೇವಾ. 522
--------------
ಬಸವಣ್ಣ
ಮಾಡುವಂತಿರಬೇಕು ಮಾಡದಂತಿರಬೇಕು. ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು. ಕೂಡಲಸಂಗಮದೇವರ ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು.
--------------
ಬಸವಣ್ಣ
ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ ಮಾಡುವ ಸತ್ಕ್ರಿಯೆುಂದ ಭಕ್ತನೆನಿಸಲು ಬಾರದು. ಅರ್ಥಪ್ರಾಣಾಭಿಮಾನವಾರಿಗೆಯೂ ಸಮನಿಸದು, ಲಿಂಗಮುಖದಲುದಯವಾದ ಶರಣಂಗಲ್ಲದೆ ಅಯ್ಯಾ. ಕೂಡಲಸಂಗನ ಶರಣರ ಭಕ್ತಿಭಂಡಾರವು ಎನಗೆಂತು ಸಾಧ್ಯವಪ್ಪುದು ಹೇಳೆನ್ನ ತಂದೆ. 319
--------------
ಬಸವಣ್ಣ
ಮನಕ್ಕೆ ಮನೋಹರವಲ್ಲದ ಗಂಡರು ಮನಕೆ ಬಾರರು, ಕೇಳವ್ವಾ ಕೆಳದೀ, ಪನ್ನಗಭೂಷಣರಲ್ಲದ ಗಂಡರು ಇನ್ನೆನಗಾಗದ ಮೊರೆ, ನೋಡವ್ವಾ. ಕನ್ನೆಯಂದಿನ ಕೂಟ, ಚಿಕ್ಕಂದಿನ ಬಾಳುವೆ, ನಿಮ್ಮಾಣೆಯಯ್ಯಾ, ಕೂಡಲಸಂಗಮದೇವಾ. 503
--------------
ಬಸವಣ್ಣ
ಮನವು ಮಹದೊಳಗೆ ಲೀಯವಾಗಿ ಘಟವಿಡಿದು ಸುಳಿದಾಡುವ ಮಹಾಮಹಿಮಂಗೆ ಅಹುದಾಗದೆಂಬ ಭ್ರಾಂತೇಕೊ ಹಿಡಿತಹುದು, ಬಾರದಡೆ ಶಿರವನರಿದು ತಹುದು. ಕೂಡಲಸಂಗಮದೇವರು ಬಲ್ಲಂತೆ ಮಾಡಲಿ.
--------------
ಬಸವಣ್ಣ
ಮಾವಿನಕಾಯೊಳಗೆ ಒಂದು ಎಕ್ಕೆಯ ಕಾಯಿ ನಾನಯ್ಯಾ. ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ
--------------
ಬಸವಣ್ಣ
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ ಮನದೊಳಗೆ [ಮನದೊ]ಡೆಯನಿದ್ದಾನೊ, ಇಲ್ಲವೊ ಇಲ್ಲ, ಕೂಡಲಸಂಗಮದೇವಾ. 97
--------------
ಬಸವಣ್ಣ
ಮನ ಮಜ್ಜನ, ತನು ಸಿಂಹಾಸನ, ನೆನಹೆ ನಾಗವತ್ತಿಗೆಯಾಯಿತ್ತಾಗಿ ಅರಿಯಲಿಲ್ಲ, ಮರೆಯಲಿಲ್ಲ ತೆರಹಿಲ್ಲದೆ ಇದ್ದುದಾಗಿ. ಈಯನುವ ಅಲ್ಲಮ ತೋರಿದನು.
--------------
ಬಸವಣ್ಣ
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಪ್ಪುದೆ ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದಡೆ, ಗುರುದ್ರೋಹ ಲಿಂಗದ್ರೋಹ ಜಂಗಮದ್ರೋಹ ಆಚಾರದ್ರೋಹ ಪ್ರಸಾದದ್ರೋಹ. ಇಂತೀ ಪಂಚಮಹಾಪಾತಕಂಗಳು ಭಕ್ತಂಗಲ್ಲದೆ ಭವಿಗೆಲ್ಲಿಯದೊ ಗುರುವಿದು, ಲಿಂಗವಿದು, ಜಂಗಮವಿದು ಆಚಾರವಿದು, ಪ್ರಸಾದವಿದೆಂದರಿಯದಿದ್ದಡೆ ಕುಂಭಿಪಾತಕ ನಾಯಕನರಕ ಕೂಡಲಸಂಗಮದೇವಾ.
--------------
ಬಸವಣ್ಣ
ಮೇಲಾಗಲೊಲ್ಲೆನು ಕೀಳಾಗಲಲ್ಲದೆ, ಕೀಳಿಂಗಲ್ಲದೆ ಹಯನು ಕರೆವುದೆ ಮೇಲಾಗಿ ನರಕದಲೋಲಾಡಲಾರೆನು. ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು, ಮಹಾದಾನಿ ಕೂಡಲಸಂಗಮದೇವಾ. 360
--------------
ಬಸವಣ್ಣ
ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ. ಬಲ್ಲೆನಾಗಿ ಒಲ್ಲೆನು ಅವರ, ಸಲ್ಲರು ಶಿವಪಥಕ್ಕೆ. ಒಳ್ಳಿಹ ಮೈಲಾರನ ಸಿಂಗಾರದಂತೆ, ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ, ಕೂಡಲಸಂಗನ ಶರಣರನರಿಯದೆ ಉಳಿದ ಭಂಗಿತರ.
--------------
ಬಸವಣ್ಣ
ಮನವೆ, ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ, ಮನವೆ ! ಲಿಂಗವ ನಂಬು ಕಂಡಾ, ಮನವೆ ! ಜಂಗಮವ ನಂಬು ಕಂಡಾ, ಮನವೆ ! ಕೂಡಲಸಂಗಮದೇವರ ಬಿಡದೆ ಬೆಂಬತ್ತು ಕಂಡಾ, ಮನವೆ ! 277
--------------
ಬಸವಣ್ಣ
ಮೊರನ ಗೋಟಿಲಿ ಬಪ್ಪ ಕಿರುಕುಳದೈವಕ್ಕೆ ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು, ಕುರಿ ಸತ್ತು ಕಾವುದೆ ಹರ ಮುಳಿದವರ ಕುರಿ ಬೇಡ ಮರಿ ಬೇಡ, ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.
--------------
ಬಸವಣ್ಣ
ಮನ ಮುಟ್ಟಿದ ಭಕ್ತಿಗೆ ತನುವೆ ಅರ್ಪಿತ, ತನು ಮುಟ್ಟಿದ ಭಕ್ತಿಗೆ ಮನವೆ ಅರ್ಪಿತವಯ್ಯಾ, ಎನ್ನ ತನುಮನವೆರಡೂ ನಿಮ್ಮ ಚರಣಕ್ಕೆ ವೇದ್ಯ ನೋಡಯ್ಯಾ. ದೀರ್ಘದಂಡನಮಸ್ಕಾರಂ ನಿರ್ಲಜ್ಜಃ ಗುರುಸನ್ನಿಧೌ ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನೀವೇದಯೇತ್ ಎಂದುದಾಗಿ ತ್ರಾಹಿ ತ್ರಾಹಿ ಶರಣಾರ್ಥಿ ನೀವೇ ಬಲ್ಲಿರಿ ಕೂಡಲಸಂಗಮದೇವಾ.
--------------
ಬಸವಣ್ಣ
ಮರಕ್ಕೆ ಬೇರು ಬಾುಯೆಂದು ತಳುಂಕೆ ನೀರನೆರೆದಡೆ ಮೇಲೆ ಪಲ್ಲವಿಸಿತ್ತು ನೋಡಾ. ಲಿಂಗದ ಬಾು ಜಂಗಮವೆಂದು ಪಡಿಪದಾರ್ಥವ ನೀಡಿದಡೆ ಮುಂದೆ ಸಕಳಾರ್ಥವನೀವನು. ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ. 421
--------------
ಬಸವಣ್ಣ
ಮೌನದಲುಂಬುದು ಆಚಾರವಲ್ಲ. ಲಿಂಗಾರ್ಪಿತವ ಮಾಡಿದ ಬಳಿಕ ತುತ್ತಿಗೊಮ್ಮೆ ಶಿವಶರಣೆನುತ್ತಿರಬೇಕು. ಕರಣವೃತ್ತಿಗಳಡಗುವವು, ಕೂಡಲಸಂಗನ ನೆನೆವುತ್ತ ಉಂಡಡೆ.
--------------
ಬಸವಣ್ಣ
ಮರುಳುತಲೆ ಹುರುಳುತಲೆ ನೀನೆ ದೇವಾ, ಹೆಂಗೂಸು ಗಂಡುಗೂಸು ನೀನೇ ದೇವಾ, ಎಮ್ಮಕ್ಕನ ಗಂಡ ನೀನೇ ದೇವಾ. ಕೂಡಲಸಂಗಮದೇವಾ, ಭ್ರಾಂತಳಿದು ಭಾವನಿಂದುದಾಗಿ.
--------------
ಬಸವಣ್ಣ
ಮಸಿಯನೇಸುಕಾಲ ಬೆಳಗಿದರೆ, ಬಿಳಿದಾಗಬಲ್ಲುದೆ ಕರ್ಮಸ್ಥಿತಿ ಬೆನ್ನ ಬಿಡದು. ಅನಂತಕೋಟಿ ಸನ್ಮಾನವ ಮಾಡಿದರೇನು ನಿಮಿಷದ ಉದಾಸೀನ ಕೆಡಿಸಿತ್ತು. ಕೂಡಲಸಂಗಮದೇವಾ ನಿಮ್ಮ ನಂಬಿಯೂ ನಂಬದ ಡಂಬಕ ನಾನಯ್ಯಾ. 383
--------------
ಬಸವಣ್ಣ

ಇನ್ನಷ್ಟು ...