ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ ಅನಾಚಾರಿಗಳ ಮುಖವ ನೋಡಬಹುದೆ ? ಆಚಾರವಟ್ಟದ ಹೊನ್ನೆ ? ಮೊತ್ತದ ಮಡಕೆಯೆ ? ಸಂತೆಯ ಬೆವಹಾರವೆ ? ಜೂಜಿನ ಮಾತೆ ? ವೇಶ್ಯೆಯ ಸತ್ಯವೆ ? ಪೂಸರ ವಾಚವೆ ? ಇಂತೀ ವ್ರತದ ನಿಹಿತವ ತಿಳಿದಲ್ಲಿ, ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ ನಾನರಿತು ಕೂಡಿದೆನಾದಡೆ, ಅರಿಯದೆ ಕೂಡಿ ಮತ್ತರಿದಡೆ, ಆ ತನುವ ಬಿಡದಿರ್ದಡೆ ಎನಗದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಪ್ಪಿದಡೆ ಹೊರಗೆಂದು ಮತ್ತೆ ಕೂಡಿಕೊಳ್ಳೆ.
--------------
ಅಕ್ಕಮ್ಮ
ಆಚೆಯ ನೀರ ಈಚೆಯಲ್ಲಿ ತೆಗೆವುದು ಚಿಲುಮೆಯಲ್ಲ ; ಆಚೆಯಲ್ಲಿ ಕೇಳಿದ ಮಾತ ಈಚೆಯಲ್ಲಿ ನುಡಿದು ಮತ್ತಾಚೆಯಲ್ಲಿ ಬೆರೆಸುವನ ಭಕ್ತನಲ್ಲ ; ಆತನ ಇದಿರಿನಲ್ಲಿ ಆತನ ಸತಿಯ ಅವ್ವಾ ಎಂದು, ಆತ ಸಂದಲ್ಲಿ ಸತಿ ಎಂಬ ಭಂಡರಿಗೇಕೆ ವ್ರತ ನೇಮ ನಿತ್ಯ ? ಇಂತಿವರಲ್ಲಿ ಕಳೆದುಳಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ.
--------------
ಅಕ್ಕಮ್ಮ
ಆರಾರ ಭಾವಕ್ಕೆ ಒಳಗಾದ ವಸ್ತು, ಆರಾರ ಭ್ರಮೆಗೆ ಹೊರಗಾದ ವಸ್ತು, ಆರಾರ ಆಚಾರಕ್ಕೆ ಒಳಗಾದ ವಸ್ತು, ಆರಾರ ಅನಾಚಾರಕ್ಕೆ ಹೊರಗಾದ ವಸ್ತು, ಆಚಾರ ಶ್ರದ್ಧೆ ಇದ್ದಲ್ಲಿ ನೀನೆಂಬೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ಆ ಗುಣ ಇಲ್ಲದಿರ್ದಡೆ ನೀನು ಎನ್ನವನಲ್ಲಾ ಎಂಬೆ.
--------------
ಅಕ್ಕಮ್ಮ
ಆವಾವ ವ್ರತಕ್ಕೂ ಗುರು ಲಿಂಗ ಜಂಗಮನೆ ಮೂಲಮಂತ್ರ. ಆವಾವುದ ತಾ ಕೊಂಬ ಕೊಡುವಲ್ಲಿ ಲಿಂಗ ಜಂಗಮನ ಮುಂದಿಟ್ಟುಕೊಂಬುದೆ ಶುದ್ಧಕ್ರೀ. ಹೀಗಲ್ಲದೆ, ಲಿಂಗ ಜಂಗಮ ಹೊರತೆಯಾಗಿ ಮತ್ತೊಂದು ಕೊಂಡೆನಾಯಿತ್ತಾದಡೆ, ಎನಗದಲ್ಲದ ದ್ರವ್ಯ, ಎನಗಿದೆ ಭಾಷೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಸಾಕ್ಷಿಯಾಗಿ.
--------------
ಅಕ್ಕಮ್ಮ
ಆಚಾರ ಅನುಸರಣೆಯಾದಲ್ಲಿ ಅಲ್ಲ ಅಹುದೆಂದು ಎಲ್ಲರ ಕೂಡುವಾಗ ಗೆಲ್ಲ ಸೋಲದ ಕಾಳಗವೆ ? ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು, ಸಂದೇಹವ ಬಿಟ್ಟು ಕಂಡ ಮತ್ತೆ ಆತನಂಗವ ಕಂಡಡೆ, ಸಂಗದಲ್ಲಿ ನುಡಿದಡೆ, ಈ ಗುಣಕ್ಕೆ ಹಿಂಗದಿದ್ದನಾದಡೆ ಲಿಂಗಕ್ಕೆ ಸಲ್ಲ, ಜಂಗಮಕ್ಕೆ ದೂರ, ಅದು ಕುಂಭೀನರಕ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಆಚಾರ ತಪ್ಪಿದಲ್ಲಿ, ಶ್ರೇಷ್ಠನು ನಾನೆಂದು ಆಚಾರವನು ಅನುಸರಣೆಯಮಾಡಬಹುದೆ ? ಆಚಾರಕ್ಕೂ ಪಕ್ಷಪಾತ ಉಂಟೆ ? ಕಿತ್ತ ಕಣ್ಣಿ ಗಂಟನಿಕ್ಕಿದ ಮತ್ತೆ ಅಳತಕ್ಕುಂಟೆ ? ಸತ್ಯ ತಪ್ಪಿ ನಡೆದ ಮತ್ತೆ ಭಕ್ತಿಯುಂಟೆ ? ಕೆಟ್ಟು ನಡೆದ ಅಂಗನೆಯಲ್ಲಿ ದೃಷ್ಟವ ಕಂಡ ಮತ್ತೆ ದಿಷ್ಟ ದಿಬ್ಯ ಉಂಟೆ ? ಅದು ಬಾಯ ಬಗದಳದಂತೆ, ಇನ್ನಾರಿಗೆ ಪೇಳುವೆ ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಲ್ಲದ ನೇಮ.
--------------
ಅಕ್ಕಮ್ಮ
ಆರೈದು ನಡೆವಲ್ಲಿ ತನ್ನ ಕ್ರೀಯನರಿತು, ನೀರು ನೆಲ ಬಹುಜನ ಗ್ರಾಮಂಗಳಲ್ಲಿ ತನಗಾದಿಯ ಶೀಲವರಿದು ಅಂಗಂಗಳ ಸೋಂಕುವಲ್ಲಿ ಮನದೆರೆದು ಮಾತನಾಡುವಲ್ಲಿ ತನು ಮನಗೂಡಿ ಬೆರೆಸುವಲ್ಲಿ, ಶಿವಲಿಂಗಪೂಜೆ, ಶಿವಾಧಿಕ್ಯಸಂಬಂಧ, ಶಿವಪ್ರಸಾದಂಗಳಲ್ಲಿ ಸರ್ವವ್ಯವಧಾನವ ತಿಳಿದು, ತಾ ಹಿಡಿದ ಜ್ಞಾನದ ಸೀಮೆಗೆ ತಲೆವಿಡಿ ಕೊಳುವಿಡಿ ಬಾರದೆ ವ್ರತವೆ ಘಟವಾಗಿ, ಸನ್ಮಾರ್ಗವೆ ಆತ್ಮನಾಗಿ, ಇಂತೀ ವ್ರತಸಂಬಂಧ ಕಾಯಜೀವದಂತೆ ಏಕವಾಗಿಪ್ಪ ಮಹಾವ್ರತಿಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ನಮೋ ನಮೋ ಎಂದು ಕೃತಾರ್ಥನಾದನು.
--------------
ಅಕ್ಕಮ್ಮ