ಅಥವಾ

ಒಟ್ಟು 41 ಕಡೆಗಳಲ್ಲಿ , 22 ವಚನಕಾರರು , 40 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಹಸ್ರದಳ ಕಮಲವ ಸೂಸದೆ ಮೇಲುಕಟ್ಟು ಕಟ್ಟಿ, ಭಾಸುರವೆಂಬ ಹೃದಯದ ಸಿಂಹಾಸನವಿಕ್ಕಿ, ಲೇಸಾಗಿ ಗುರುಸ್ವಾಮಿಯ ಮೂರ್ತಮಾಡಿಸಿ, ನಾಲ್ಕೆಸಳ ಪದ್ಮವ ಸಮ್ಮಾರ್ಜನೆಯ ಮಾಡಿ, ಆರೆಸಳ ಪದ್ಮವ ರಂಗವಾಲೆಯ ತುಂಬಿ, ಹತ್ತೆಸಳ ಪದ್ಮವ ಕರಕಮಲವಂ ಮಾಡಿ, ನಿರ್ಭಾವವೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆರೆದು, ಚಿದ್ಬೆಳಗೆಂಬ ಚಿದ್ವಿಭೂತಿಯ ಧರಿಸಿ, ಶಾಂತಿಯೆಂಬ ಗಂಧವ ಧರಿಸಿ, ಚಿತ್ತನಿರ್ಮಲವೆಂಬ ಅಕ್ಷತೆಯನರ್ಪಿಸಿ, ಹೃತ್ಕಮಲವೆಂಬ ಅರಳಿದ ಪುಷ್ಪವ ಧರಿಸಿ, ಸುಗಂಧವೆಂಬ ಧೂಪವ ಬೀಸಿ, ಕಂಗಳೆ ದೀಪ, ಕರ್ಣವೆ ಗಂಟೆ, ನಾಸಿಕವೆ ಆಲವಟ್ಟಲು, ಜಿಹ್ವೆಯ ತಾಳ, ಪಾದವೆ ಪಾತ್ರದವರು, ಹಸ್ತವೆ ಸೇವಕರು, ನಿಶ್ಚಿಂತವೆಂಬ ಅಕ್ಕಿಯ ತಂದು, ಪಶ್ಚಿಮವೆಂಬೊರಳಿಗೆ ನೀಡಿ, ಏಕೋಭಾವವೆಂಬೊನಕೆಯ ಪಿಡಿದು ತಳಿಸಿ, ಸುಬುದ್ಭಿಯೆಂಬ ಮೊರದಲ್ಲಿ ಕೇರಿ, ತ್ರಿಕೂಟವೆಂಬ ಒಲೆಯ ಹೂಡಿ, ಕರಣಂಗಳೆಂಬ ಸೌದೆಯನಿಟ್ಟು, ಜ್ಞಾನಾಗ್ನಿಯನುರುಹಲು, ಒಮ್ಮನವೆಂಬ ಕಂದಲಿಗೆ ಆನಂದ ಜಲವೆಂಬಗ್ಗಣಿಯನೆತ್ತಿ, ನಿಶ್ಚಿಂತವೆಂಬಕ್ಕಿಯ ನೀಡಿ, ಸುಮ್ಮಾನವೆಂಬ ಹುಟ್ಟಿನಲ್ಲಿ ಉಕ್ಕಿರಿದು, ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ, ಅಹಂಕಾರವೆಂಬ ಭಾಜನದಲ್ಲಿ ಬಾಗಿ, ಜ್ಞಾತೃ ಜ್ಞಾನ ಜ್ಞೇಯವೆಂಬ ಅಡ್ಡಣಿಗೆಯನಿರಿಸಿ, ಮನವೆಂಬ ಹರಿವಾಣದಲ್ಲಿ ಗಡಣಿಸಿ, ಆನಂದವೆಂಬಮೃತವನಾರೋಗಣೆಯ ಮಾಡಿ, ನಿತ್ಯವೆಂಬಗ್ಗವಣಿಯಲ್ಲಿ ಹಸ್ತಪ್ರಕ್ಷಾಲನವ ಮಾಡಿಸಿ, ಸತ್ವರಜತಮವೆಂಬ ವೀಳೆಯವ ಕೊಟ್ಟು, ಅಂತಃಕರಣಚತುಷ್ಟಯವೆಂಬ ನಾಲ್ಕು ಕಾಲು ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಮಂಚವ ಹಾಸಿ, ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಎಂಬ ಸುಪ್ಪತ್ತಿಗೆಯನು ಹಚ್ಚಡಿಸಿ, ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಒರಗು ಇಕ್ಕಿ, ತತ್ವ ಪರತತ್ವವೆಂಬ ಹಸ್ತಕ್ಕೆ ಮೆತ್ತೆಯನಿಕ್ಕಿ, ಸುತ್ತಣ ಪರಿಚಾರಕರು, ಆನೆ ಕುದುರೆ ಅರಸು ಮನ್ನೆಯ ಪ್ರಧಾನಿಗಳು ಎತ್ತ ಹೋದರೆಂದು ಅತ್ತಿತ್ತ ನೋಡುತ್ತಿರಲು, ಊರು ಬಯಲಾಯಿತ್ತು, ಒಕ್ಕಲು ಓಡಿತ್ತು, ಮಕ್ಕಳ ಗಲಭೆ ನಿಂದಿತ್ತು, ಮಾತಿನ ಮಥನವಡಗಿತ್ತು. ಉತ್ತರದಲ್ಲಿ ವಸ್ತುವ ಕಂಡು ಓಲಗಂಗೊಟ್ಟಿರಲು, ಓಲಗದಲ್ಲಿ ಲೋಲುಪ್ತವನೆಯ್ದಿ ಆವಲ್ಲಿ ಹೋದನೆಂದರಿಯೆನಯ್ಯಾ. ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮತ್ತಂ ದೀಕ್ಷೆಯಿಂ ಸಮಸ್ತ ಪಾಶಂಗಳು ತೊಲಗು[ವ]ವಪ್ಪಡೆ ದೀಕ್ಷೆಯಾ ಗಿಯೂ ಶರೀರಸ್ಥಿತಿಯೆಂತು ಸಂಭವಿಪುದೆಂಬ ಚೋದ್ಯಮಂ ದೃಷ್ಟಾಂತಪೂರ್ವಕವಾಗಿ ಪರಿಹರಿಸುತ್ತಿದ್ದನು. ಘಟನಿಷ್ಪತ್ತಿಯಾದರೂ ಮತ್ತೂ ಪರಿಭ್ರಮಿಸುತ್ತಿರ್ದ ಕುಲಾಲಚಕ್ರವೆಂತಂತೆ ದೀಕ್ಷೆಯಾದರೂ ದೀಕ್ಷೋತ್ತರ ಕ್ರಿಯಾವಸ್ಥಾನ ಪರ್ಯಂತರವಾಗಿ ಪ್ರಾರಬ್ಧಕರ್ಮವಾಸನೆಯಿಂದ ಶರೀರಸ್ಥಿತಿ ಸಂಭವಿಪ್ಪುದು. ಮತ್ತಂ ಘಟದೊಳಗಿದ್ದ ದೀಪವು ಘಟವೊಡೆಯಲಾಗಿ, ಘಟದೊಳಗಿರ್ದ ದೀಪ ಎಲ್ಲಾ ಕಡೆಯಲ್ಲಿಯೂ ಎಂತು ಪ್ರಕಾಶಿಸುವುದಂತೆ ದೀಕ್ಷಿತನು ದೇಹಾವಸಾನದಲ್ಲಿ ಪರಮುಕ್ತನಪ್ಪನು. ಇಂತೆಂದು ಕಿರಣಂ ಪೇಳ್ದಪುದು, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಆದಿ ಮಧ್ಯ ಅವಸಾನವ ತಿಳಿದು ಆತ್ಮನನೆಯ್ದಬೇಕೆಂಬುದು ಅದಾವ ಭಾವ? ತಿಳಿದು ಹೇಳಿರಣ್ಣಾ. ಆದಿಯ ತಿಳಿವುದು ಅದಾವ ಆತ್ಮ? ಮಧ್ಯವ ತಿಳಿವುದು ಆದಾವ ಆತ್ಮ? ಅವಸಾನವ ತಿಳಿವುದು ಆದಾವ ಆತ್ಮ? ಅದು ಅರುವೋ, ಮರವೆಯೋ? ಕೆಂಡ ಕೆಟ್ಟಡೆ ಹೊತ್ತುವುದಲ್ಲದೆ, ದೀಪ ನಂದಿದ ಕಿಡಿ ತುಷ ಮಾತ್ರಕ್ಕೆ ಹೊತ್ತಿದುದುಂಟೆ? ಇಂತೀ ಆಧ್ಯಾತ್ಮವ ತಿಳಿದಲ್ಲಿ, ಮೂರುಸ್ಥಲ ಮುಕ್ತ, ಉಭಯವಾರುಸ್ಥಲ ಭರಿತ. ಮಿಕ್ಕಾದ ನೂರೊಂದೆಂದು ಗಾರಾಗಲೇತಕ್ಕೆ? ಪೂರ್ವದಲ್ಲಿ ನಿಂದು, ಉತ್ತರದಲ್ಲಿ ಒಂದೆಂದು, ಸಲೆ ಸಂದಲ್ಲಿ ನಾನಾ ಸ್ಥಲ ಐಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನ್ನ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳೆನೆಂಬ ಶರಣನು, ಬಿಸಿಲಲಿ ನಿಂದರೆ ಬಿಸಿಲ ಲಿಂಗಾರ್ಪಿತವ ಮಾಡಬೇಕು, ನೆಳಲಲಿ ನಿಂದರೆ ನೆಳಲ ಲಿಂಗಾರ್ಪಿತವ ಮಾಡಬೇಕು. ಧೂಪ ದೀಪ ಪರಿಮಳ ವಾಯು ರುಚಿ ರೂಪನು ಕಾಯದ ಕೈಯ್ಯಲು ಮುಟ್ಟಿ ಅರ್ಪಿಸೂದರಿದಲ್ಲ, ನಿಲ್ಲು ಮಾಣು. ಭಾವದ ಕೈಯ್ಯಲು ಮುಟ್ಟಿ ಲಿಂಗಕ್ಕೆಂಬರು ನಾವಿದನರಿಯೆವಯ್ಯಾ. (ಶಬ್ದ ಸ್ಪರ್ಶ ರೂಪ ರಸ ಗಂಧ) ನಿರವಯಲಿಂಗದಲ್ಲಿ. ಈ ತೆರನನರಿಯಬಲ್ಲರೆ ಕೂಡಲಚೆನ್ನಸಂಗಮದೇವ (ನಲ್ಲಿ). (ಆತ ಮಹಾಪ್ರಸಾದಿ)
--------------
ಚನ್ನಬಸವಣ್ಣ
ನಿರ್ವಯಲ ಸ್ಥಲದಲ್ಲಿ ಬಿಳಿಯ ತಾವರೆ ಶತಸಹಸ್ತ್ರ ದಳದಿಂದ ಪ್ರಭಾವಿಸುತ್ತಿಹುದು ನೋಡಾ. ಅದು ಎಳೆ ಮಿಂಚು ಶತಕೋಟಿಗಳ ಬೆಳಗ ಕೀಳ್ಪಡಿಸುವ ಅಮಲ ಬ್ರಹ್ಮ ನೋಡಾ. ಆ ಬ್ರಹ್ಮದಂಗವ ಬಗಿದುಹೊಕ್ಕು, ದೀಪ ದೀಪವ ಬೆರಸಿದಂತೆ, ಏಕರಸಮಯವಾದ ಅಚ್ಚ ಲಿಂಗೈಕ್ಯನು, ಅಚಲಿತ ನಿರಾಳನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ ಷಡೂರ್ಮೆಗಳ ಹುಡಿಮಾಡಿ ಸುಟ್ಟುರುಹಿ, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್‍ವರ್ಗಂಗಳ ಬೇರ ಕಿತ್ತು ಬಿಸುಟು. ಇಷ್ಟಲಿಂಗಕ್ಕೆ ನೈಷೆ*ಯಿಂದ ಜಲ ಗಂಧಾಕ್ಷತೆ ಧೂಪ ದೀಪ ನೈವೇದ್ಯ ತಾಂಬೂಲವೆಂಬ ಅಷ್ಟವಿಧಾರ್ಚನೆಯ ಮಾಡಿ, ಮತ್ತಾ ಲಿಂಗವನು ಧ್ಯಾನಮುಖದಿಂದೆ ಅಂತರಂಗಕ್ಕೆ ಬಿಜಯಂಗೈಸಿ, ಹೃದಯಕಮಲಕರ್ಣಿಕಾಸ್ಥಾನದಲ್ಲಿ ಕುಳ್ಳಿರಿಸಿ, ಪ್ರಾಣಾಯಾಮ ನಿರ್ಗುಣದ ಅಷ್ಟವಿಧಾರ್ಚನೆಯ ಮಾಡಿ, ಚಿತ್ತ ಸ್ವಸ್ಥಿರವಾಗಿ, ಭಾವವು ಬಯಲಬ್ರಹ್ಮದಲ್ಲಿ ಹೂಳಿಹೋಗಿ ತಾನಿದಿರೆಂಬುದನಳಿದು, ಉರಿ ಕರ್ಪುರದಂತೆ ಅವಿರಳ ಸಮರಸವಾಗಿರ್ಪಾತನೆ ನಿಜೈಕ್ಯನು ನೋಡಾ. ಅದೆಂತೆಂದೊಡೆ : ``ಷಡೂರ್ಮಯಶ್ಚ ಷಡ್ವರ್ಗೋ ನಾಸ್ತಿ ಚಾಷ್ಟವಿಧಾರ್ಚನಂ | ನಿರ್ಭಾವಂ ನಿಜಲಿಂಗೈಕ್ಯಂ ಶಿಖಿಕರ್ಪೂರಯೋಗವತ್''|| ಎಂದುದಾಗಿ, ಇಂತಪ್ಪ ನಿಜಲಿಂಗೈಕ್ಯರ ಮಹಾಘನ ನಿಜದ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಂತಪ್ಪ ಲಿಂಗಧಾರಣದ ಭೇದವ ತಿಳಿಯದೆ ಕಲ್ಲ ಲಿಂಗಕ್ಕೆ ಕಾಡಹೂವ ತಂದು, ಹೊಳೆ-ಬಾವಿ-ಹಳ್ಳ-ಕೊಳ್ಳ-ಕೆರೆಯ ನೀರು ತಂದು ಮಜ್ಜನಕ್ಕೆರೆದು, ದೀಪ ಧೂಪ ಪತ್ರಿ ಪುಷ್ಪದಿಂದ ಶಿವನೆಂದು ಭಾವಿಸಿ ಪೂಜೋಪಚಾರವ ಮಾಡಿ, ವರವ ಬೇಡಿದರೆ ಬೇಡಿದ ಫಲವ ಕೊಟ್ಟು ಗಾಡಿಕಾರನಂತೆ ಅವರ ಕಣ್ಣಿಗೆ ಮಂಜುಗವಿಸಿ ಕಡೆಗಾಗಿರ್ಪ ನಮ್ಮ ಶಿವನು. ಇಂತಪ್ಪ ಮೂಢಾತ್ಮರು, ಅಂತಪ್ಪ ಜಡಪಾಷಾಣಲಿಂಗವ ಅನಂತಕಾಲ ಧರಿಸಿ, ಪೂಜೋಪಚಾರವ ಮಾಡಿದಡೆಯೂ ವ್ಯರ್ಥವಲ್ಲದೆ ಸ್ವಾರ್ಥವಲ್ಲ. ಮುಂದೆ ಭವರಾಟಾಳದಲ್ಲಿ ಬಪ್ಪುದು ತಪ್ಪದು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗೈಯೊಳಗಣ ಸಿಂಹಾಸನವಿದೇನೊ? ಅಂಗೈಯ ಮೇಲೆ ಸಿಂಹಾಸನವೆಂದೇನೊ? ಧೂಪ ದೀಪ ನಿವಾಳಿಯೆಂದೇನೊ? ಶರಣಂಗೆ ಕಳಸದ ಮೇಲೆ ನೆಲೆಗಟ್ಟೆಯೆಂಬುದೇನೊ? ಗುಹೇಶ್ವರನೆಂಬ ನಿರಾಳ !
--------------
ಅಲ್ಲಮಪ್ರಭುದೇವರು
ಬಾಹ್ಯ ರಚನೆಯಿಂದಾದ ಭಕ್ತಿ ವಿರಕ್ತಿ ಸತ್ಪಥ ಮಾರ್ಗದಿರವು, ಮಾತಿನಲ್ಲಿಯೊ, ಚೈತನ್ಯಾತ್ಮಕ ಭಾವ ಮುಟ್ಟಿದಲ್ಲಿಯೊ ? ಉಭಯವನರಿದಲ್ಲಿ ಕಾಬವನ ಇರವು, ಮಠದ ದೀಪ ವಾಯುವಿನ ಸಂಗದ ಕೂಟ. ಪಾಷಾಣದಲೊದಗಿದ ಜ್ಯೋತಿಯ ಬೆಳಗು, ವಾಯುವ ನೀತಿಗೊದಗುವುದೆ ? ಕಪಟದ ನಿಃಕಪಟದ ದೀಪದ್ವಯ ಪರಿಯಂತೆ, ವಸ್ತು ನಿರ್ದೇಶದ ಸುಖ ಸಂಭಾಷಣ ದೃಷ್ಟ ಕೊಡು, ಅಲೇಖನಾದ ಶೂನ್ಯ ಕಲ್ಲಿನಲ್ಲಿದ್ದು, ಮೆಲ್ಲನೆ ಓ ಎನಲಾಗದೆ ?
--------------
ವಚನಭಂಡಾರಿ ಶಾಂತರಸ
ಸ್ವಯಾಧೀನಮುಕ್ತನೆಂಬವನೊಬ್ಬ; ಪರಾಧೀನ ಮುಕ್ತನೆಂಬುವನೊಬ್ಬ. ಕರ್ತೃಹೀನವಾಗಿ ಆತ್ಮನು ತನ್ನಿಂದ ತಾನೆ ಮುಕ್ತನೆಂಬುದು ಅದು ಅಜ್ಞಾನ ನೋಡ. ಆತ್ಮನು ಪಶುಪಾಶಬದ್ಧನು, ಅನಾದಿ ಮಲಯುಕ್ತನಾಗಿ, ಪಶುವಾಗಿ, ಆತ್ಮನೊಬ್ಬನುಂಟೆಂಬೆ. ಅನಾದಿಯಾಗಿ ಪಶುಪತಿಯಾಗಿ ನಿರ್ಮಲನಪ್ಪ ಶಿವನೊಬ್ಬನು ಬೇರುಂಟೆಂದೆ. ಮಲ ಮಾಯಾ ಕರ್ಮವನುಂಡು ತೀರಿಸಿ ಶಿವನ ಪ್ರಸಾದದಿಂದ ಮುಕ್ತನೆಂಬೆ. ಆ ಮುಕ್ತಿಯಲ್ಲಿಯು ಪರಾಧೀನಮುಕ್ತನಲ್ಲದೆ ಏಕತ್ವವಿಲ್ಲ ಎಂಬೆ. ಏಕತ್ವವಿಲ್ಲದಾಗಳೆ ಮುಕ್ತಿಯೆಂಬುದು ಹುಸಿ. ಮಸಿಯೆಂದಾದರೂ ಬೆಳ್ಪಾದುದುಂಟೆ? ಅಂಬರ ಮಾಸಿದರೆ ತೊಳದಡೆ ಬೆಳ್ಳಹುದಲ್ಲದೆ, ಮಲದಲ್ಲಿ ಸೀರೆಯ ಮಾಡಿ ತೊಳೆದರೆ ಬಿಳಿದಾಗಬಲ್ಲುದೆ? ಇದು ಕಾರಣ, ದ್ವೆ ೈತಕ್ಕೆ ಎಂದೂ ಮುಕ್ತಿಯಿಲ್ಲಯೆಂದೆ. ಇತರ ಮತಂಗಳಂತಿರಲಿ. ಪರಶಿವನ ಪರಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾದಳು. ಆ ಸುಜ್ಞಾನಶಕ್ತಿಯು ಗರ್ಭದಲ್ಲಿ ಶಿವಶರಣನುದಯವಾದ. ಅಂತುದಯವಾದ ಶರಣನು ಆ ಸುಜ್ಞಾನಶಕ್ತಿಯ ಸಂಗವ ಮಾಡಿ, ಆ ಸುಜ್ಞಾನಶಕ್ತಿಯೊಳಗೆ ತಾನೆಂಬ ಭಾವವ ಮರೆದು, ತಾನೆ ಪರಶಿವತತ್ವದೊಳಗೆ ದೀಪ ದೀಪವ ಬೆರಸಿದಂತೆ ರೂಪೆರಡಳಿದು ಏಕಾರ್ಥವಾಗಿ ನಿತ್ಯ ಮುಕ್ತನಾದ ನಿಜಲಿಂಗೈಕ್ಯನು ದ್ವೆ ೈತಿಯಲ್ಲ; ಅದ್ವೆ ೈತಿಯಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->