ಅಥವಾ

ಒಟ್ಟು 139 ಕಡೆಗಳಲ್ಲಿ , 10 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೊಂದೆ ಬಸಿರು, ಲಿಂಗ ಒಂದೆ ಬಸಿರು ಜಂಗಮ ಒಂದೆ ಬಸಿರು ಪ್ರಸಾದ ಒಂದೆ ಬಸಿರು_ ಇದನಾರಯ್ಯಾ ಅಮಳೋಕ್ಯವ ಮಾಡಿ ತೋರಿದವರು ? ಇದನಾರಯ್ಯಾ ಪ್ರಜ್ವಲಿತವ ಮಾಡಿ ಬೇರೆ ತೋರಿದವರು ? ಪೂರ್ವಾಚಾರಿ ಭಕ್ತಿಭಾಂಡಾರಿ ಬಸವಣ್ಣಾ ಎನಗೆ ನೀನು ಗುಹೇಶ್ವರಲಿಂಗವ ತೋರಿದೆಯಾಗಿ ಲೋಕಾದಿಲೋಕವೆಲ್ಲವು ಎನಗೆ ಕಿಂಚಿತ್.
--------------
ಅಲ್ಲಮಪ್ರಭುದೇವರು
ತನುವಿನಲ್ಲಿ ತನು ಸವೆಯದು, ಮನದಲ್ಲಿ ಮನ ಸವೆಯದು, ಧನದಲ್ಲಿ ಧನ ಸವೆಯದು. ಭಕ್ತಿಯುಕ್ತಿಯ ಮಾತು ನಿನಗೇಕೆ ಹೇಳಾ ಬಸವಾ ? ಮಾಟಕೂಟವೆಂಬ ಕೀರ್ತಿವಾರ್ತೆಗೆ ಸಿಲುಕಿ ಜಂಗಮವೆ ಲಿಂಗವೆಂಬುದ ಮರೆದೆಯೆಲ್ಲಾ ಬಸವಣ್ಣಾ ! ಗುಹೇಶ್ವರನ ಶರಣರಿಗೆ ತ್ರಿಕರಣವನೊಪ್ಪಿಸಿದಲ್ಲದೆ ಭಕ್ತನಾಗಬಾರದು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು ಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲು ಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ ಬಾರದೆ ? ಕನಲಿ ಎದ್ದು ಅಂಕೆಗೆ (ಆಚೆಗೆ ?) ನಿಂದು ನೋಡಲು ಸಪ್ತ ಸಾಗರಂಗಳೆಲ್ಲವು ನಿಮ್ಮ ಕಿರುಪಾದದಲ್ಲಿ ಅಡಗವೆ ಬಸವಣ್ಣಾ ? ಅದನೆಂತು ಕೊಡಬಹುದು, ಅದನೆಂತು ಕೊಳಬಹುದು ? ನಮ್ಮ ಗುಹೇಶ್ವರಲಿಂಗಕ್ಕೆ ನಿಮ್ಮ ಪಾದೋದಕವೆ ಮಜ್ಜನ ಕಾಣಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಬಸವಣ್ಣಾ ಓಂಕಾರದಿಂದತ್ತತ್ತ ನೀನೆ; ಬಸವಣ್ಣಾ ನಾದಬಿಂದುಕಳೆಗಳಿಂದತ್ತತ್ತ ನೀನೆ, ಬಸವಣ್ಣಾ ಪ್ರಥಮಾಚಾರ್ಯ ನೀನೆ, ಬಸವಣ್ಣಾ ಲಿಂಗಾಚಾರ್ಯ ನೀನೆ, ಬಸವಣ್ಣಾ ಜಂಗಮಾಚಾರ್ಯ ನೀನೆ, ಬಸವಣ್ಣಾ ಪ್ರಸಾದಾಚಾರ್ಯ ನೀನೆ, ಬಸವಣ್ಣಾ ಎನಗೆ ಸರ್ವಾಚಾರ್ಯ ನೀನೆ, ನೀನೇ ಗತಿಮತಿಯಾಗಿ ಎನ್ನನುಳುಹಿದ ಕಾರಣ ಕೂಡಲಚೆನ್ನಸಂಗಮದೇವಾ ಆವ ವರ್ಣವಿಲ್ಲದಂದು `ಓಂ ನಮಃ ಶಿವಾಯ' ಎನುತಿರ್ದೆನು.
--------------
ಚನ್ನಬಸವಣ್ಣ
ವಾರಿಕಲ್ಲ ಪುತ್ಥಳಿಯ ಅಪ್ಪು ಕೊಂಡಂತಾಯಿತ್ತು. ಅಗ್ನಿಪುರುಷನ ಮುಸುಕ ತೆಗೆದ ಕರ್ಪುರದಂತಾಯಿತ್ತು. ಕತ್ತಲೊಳಗೆ ರವಿಯ ಬೆಳಗು ಹೊಕ್ಕಂತಾಯಿತ್ತು. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಯ ಕೃಪೆಯಿಂದ ಬಸವಣ್ಣಾ ನಿನ್ನ ಕಂಡೆನು. ನಿನ್ನನ್ನು ಮಡಿವಾಳನನು ನೀನೆಂದೆ ಕಂಡೆನಯ್ಯಾ.
--------------
ಅಲ್ಲಮಪ್ರಭುದೇವರು
ಪ್ರಸಾದಲಿಂಗ ಉಳ್ಳನ್ನಕ್ಕರ, ಪ್ರಾಣಲಿಂಗವೆಂಬ ವಾರ್ತೆ ಭಂಗ ನೋಡಾ ಬಸವಣ್ಣಾ. ಬೀದಿಯಲ್ಲಿ ಕೊಡನನೊಡೆದು ಬಯಲನುಡುಗಿದಡೆ ಉಂಟೆ ಹೇಳಾ ? ಗುಹೇಶ್ವರಲಿಂಗವ ಬೇರೆಮಾಡಿ ಅರಸಲುಂಟೆ ಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಶುದ್ಧ ದೀಕ್ಷೆಯೊಳಾನು ಸಿದ್ಧನಾದೆನು ಬಸವ ತಂದೆ, ಸಿದ್ಧ ದೀಕ್ಷೆಯೊಳಾನು ಸ್ವಯವಾದೆನೈ. ಶುದ್ಧಸಿದ್ಧವು ಕೂಡಿ ಪ್ರಸಿದ್ಧ ದೀಕ್ಷೆಯೊಳು ಹೊದ್ದಿ ನಡೆವೆನು ಬಸವಣ್ಣ, ನಿನ್ನವರ ಹೊಲಬಿಗನಾಗಿ. ಮತ್ತೆ ಪ್ರಸಾದವನು ಐದಾರನೇ ಗ್ರಹಿಸಿ, ಮತ್ತೆ ಪಾದೋದಕವನೀರೈದ ಧರಿಸಿಯಾನು ಹುಟ್ಟುಗೆಟ್ಟೆನು ಬಸವಣ್ಣಾ ನಿಮ್ಮ ಕರುಣದಿಂದ. ಆನಂದಗುರು ಕಪಿಲಸಿದ್ಧಮಲ್ಲೇಶ್ವರನ ಕಾರಣದ ಶರಣರಿಗೆ ಶಿಶುವಾದೆನು.
--------------
ಸಿದ್ಧರಾಮೇಶ್ವರ
ಹಿಂದೆ ಹಲವು ಯುಗಂಗಳು ತಿರುಗಿ ಬಪ್ಪಾಗ ಅವನ್ನು ನೀ ಮಾಡಿದೆಯಲ್ಲದೆ ತಮ್ಮಾಜ್ಞೆಯಲಿ ಬಂದುಲ್ಲ. ಅಯ್ಯ, ನಿನ್ನಾಜ್ಞೆಯಲಿ ಬಂದ ಯುಗಂಗಳು ಭವಭವದಲ್ಲಿ ಎನ್ನನೆ ಕಾಡಿದುವು, ಸಂಸಾರವಾಗಿ ಎನ್ನನೆ ಕಾಡಿದುವು, ಹೊನ್ನು ಹೆಣ್ಣು ಮಣ್ಣು ತ್ರಿವಿಧವಾಗಿ ಎನ್ನನೆ ಕಾಡಿದುವು, ಆಶಾಪಾಶಂಗಳಾಗಿ ಗುರುವೆ ಬಸವಣ್ಣ ಅವೆಲ್ಲಾ ನಿಮ್ಮ ಅಧೀನದವು ಮಾಡಿದಡಾದವು, ಬೇಡಾಯೆಂದಡೆ ಮಾದವು. ಅವಕ್ಕೆ ಎನ್ನನೊಪ್ಪಿಸದೆ, ನಿನ್ನವ ನಿನ್ನವನೆನಿಸಾ ಕಪಿಲಸಿದ್ಧಮಲ್ಲಿಕಾರ್ಜುನನ ತೋರಿದ ಗುರು ಬಸವಣ್ಣಾ.
--------------
ಸಿದ್ಧರಾಮೇಶ್ವರ
ಅಂಗಳ[z] ಬಾಗಿಲ ನೆಲೆಯಲ್ಲಿ ನಿಂದಿದ್ದ ಲಿಂಗವನರಿದುದಿಲ್ಲವೆ ? ಸುಸಂಗಿ ನಿರಂಗಿ ನಿಷ್ಕಲಬ್ರಹ್ಮ ಮರುಳಶಂಕರಲಿಂಗ ! ಪ್ರಸಾದದ ಕುಳಿಯಲ್ಲಿ ನಿಜನಿವಾಸದ ಅಂಗವ ನೋಡು, ಗುಹೇಶ್ವರಲಿಂಗದಲ್ಲಿ ಬಸವಣ್ಣಾ.
--------------
ಅಲ್ಲಮಪ್ರಭುದೇವರು
ಮನದಂತೆ ಮಂಗಳವೆಂಬುದು ತಪ್ಪದು ನೋಡಾ ಬಸವಣ್ಣಾ; ಅರಸುವಂಗೆ ಅರಕೆ ಸಾಧ್ಯವಪ್ಪುದು ತಪ್ಪದು ನೋಡಾ ಬಸವಣ್ಣಾ. ನಿಮ್ಮ ಮನದ ಅರ್ತವನಡಗಿಸುವಡೆ ಕೂಡಲಚೆನ್ನಸಂಗಮದೇವರ ಶರಣ ಪ್ರಭುದೇವರ ಬರವು ತಪ್ಪಲರಿಯದು ಕೇಳಾ ಬಸವಣ್ಣಾ.
--------------
ಚನ್ನಬಸವಣ್ಣ
ಕೃತಯುಗದಲ್ಲಿ ನೀನು ದೇವಾಂಗನೆಂಬ ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ, ಸ್ಥೂಲಕಾಯನೆಂಬ ಜಂಗಮವಾಗಿ ಬಂದು ಲಿಂಗಾರ್ಚನೆಯ ಮಾಡಿಹೋದ; ಅದರ ಕ್ರಿಯಾಂಗವನು ಮರೆದೆಯಲ್ಲಾ ಬಸವಣ್ಣಾ. ತ್ರೇತಾಯುಗದಲ್ಲಿ ನೀನು ಘಂಟಾಕರ್ಣನೆಂಬ ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ, ಶೂನ್ಯಕಾಯನೆಂಬ ಜಂಗಮವಾಗಿ ಬಂದು ಲಿಂಗಾರ್ಚನೆಯ ಮಾಡಿಹೋದ; ಅದರ ಕ್ರಿಯಾಂಗವನು ಮರೆದೆಯಲ್ಲಾ ಬಸವಣ್ಣಾ. ದ್ವಾಪರಯುಗದಲ್ಲಿ ನೀನು ವೃಷಭನೆಂಬ ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ, ಅನಿಮಿಷನೆಂಬ ಜಂಗಮನಾಗಿ ಬಂದು ಲಿಂಗಾರ್ಚನೆಯ ಮಾಡಿಹೋದ; ಅದರ ಕ್ರಿಯಾಂಗವ ಮರೆದೆಯಲ್ಲಾ ಬಸವಣ್ಣಾ. ಕಲಿಯುಗದಲ್ಲಿ ನೀನು ಬಸವನೆಂಬ ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ, ಪ್ರಭುದೇವರೆಂಬ ಜಂಗಮವಾಗಿ ಲಿಂಗಾರ್ಚನೆಯ ಮಾಡಬಂದ ಕಾಣಾ ಬಸವಣ್ಣಾ. ಇಂತೀ ದೇವ ಭಕ್ತನೆಂಬ ನಾಮನಾಟಕ ಬಿನ್ನಾಣವಲ್ಲದೆ, ಬೇರೆಂದು ಕಂಡವರಿಗೆ ನಾಯಕನರಕ ತಪ್ಪದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆದಿ ಜಂಗಮ ಅನಾದಿ ಭಕ್ತನೆಂಬುದನಾರು ಬಲ್ಲರು ಹೇಳಾ ಬಸವಣ್ಣಾ ನೀನಲ್ಲದೆ ? ನಿತ್ಯನಿರಾಕಾರ ಘನವು ಶಕ್ತಿಯಿಲ್ಲದೆ ಇದ್ದಡೆ, ಆಗಲೆ ಬಯಲಾದಹುದೆಂದು, ನೀನು ಘನಚೈತನ್ಯವೆಂಬ ಕಾಯವ ಧರಿಸಿದಡೆ, ಆ ಬಯಲು ಪರಬ್ರಹ್ಮವೆಂಬ ನಾಮವನೆಯ್ದಿತ್ತು. ಆ ಮಹಾಘನವು ತನ್ನ ವಿನೋದದಿಂದ ಸಾಕಾರವನೆಯ್ದಿದಡೆ, [ನೀನು] ಧರ್ಮವೆಂಬ ಕಾಯವ ಧರಿಸಿ, ಆ ಮೂರ್ತಿಗೆ ಆಧಾರವಾದೆಯಾಗಿ ಜಗದ ಕರ್ತ ಶಿವನೆಂಬ ನಾಮವಾಯಿತ್ತಲ್ಲಾ ಬಸವಣ್ಣಾ. ಜಂಗಮವೆ ಲಿಂಗವೆಂದು ನೀನು ಭಾವಿಸಲಾಗಿ, ನಿನ್ನ ಸನ್ನಿಧಿಯಿಂದ ಪ್ರತಿನಿಧಿಯಾಯಿತ್ತು ನೋಡಾ ಬಸವಣ್ಣಾ. ಲಿಂಗವ ಹಿಡಿದು ನೀನು ಪೂಜಿಸಲಾಗಿ, ಲಿಂಗವು ಹೆಸರುವಡೆಯಿತ್ತು ನೋಡಾ ಬಸವಣ್ಣಾ. ಪ್ರಸಾದವನು ನೀನು ಕೊಂಡು ಪಥವ ತೋರಿದೆಯಾಗಿ ಪ್ರಸಾದವು ಹೆಸರಾಯಿತ್ತು ನೋಡಾ ಬಸವಣ್ಣಾ. ಇದು ಕಾರಣ ನೀನೆ ಅನಾದಿ ಭಕ್ತ, ನಾನೆ ಅನಾದಿಯಿಂದತ್ತತ್ತ ! ನೀನು ಮಾಡಲಾಗಿ ಆನಾದೆನೆಂಬುದ ನಮ್ಮ ಗುಹೇಶ್ವರಲಿಂಗವು ಬಲ್ಲ ಕಾಣಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಉದಾಸೀನಂ ಮಾಡಿದರೆಂದು ಬೆಂಬೀಳುವರೆ ಅಯ್ಯಾ ಬಸವಣ್ಣಾ. ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು ಬಸವಣ್ಣಾ. ಎನ್ನ ಜೀವದೊಳಗೆ ನಿನ್ನ ಜೀವವಿಪ್ಪುದು ಬಸವಣ್ಣಾ. ಎನ್ನ ಭಾವದೊಳಗೆ ನಿನ್ನ ಭಾವವಿಪ್ಪುದು ಬಸವಣ್ಣಾ. ಎನ್ನ ಕರಣ, ನಿನ್ನ ಕರಣ ಬಸವಣ್ಣಾ. ಆನು ನೀನಾದ ಕಾರಣ ರೂಪಿಂಗೆ ಕೇಡುಂಟು. ನಿರೂಪು ಕರ್ಪುರ ಅಗ್ನಿ ಬಸವಣ್ಣಾ. ಚಿಂತಿಸುವರೆ ದೇವರದೇವ ಕಲಿದೇವಾ.
--------------
ಮಡಿವಾಳ ಮಾಚಿದೇವ
ಬಸವಣ್ಣಾ ನಿನ್ನ ಕಂಡು ಎನ್ನ ತನು ಬಯಲಾಯಿತ್ತು. ಬಸವಣ್ಣಾ ನಿನ್ನ ಮುಟ್ಟಿ ಮುಟ್ಟಿ ಎನ್ನ ಕ್ರೀ ಬಯಲಾಯಿತ್ತು. ಬಸವಣ್ಣಾ ನಿನ್ನ ನೆನೆ ನೆನೆದು ಎನ್ನ ಮನ ಬಯಲಾಯಿತ್ತು. ಬಸವಣ್ಣಾ ನಿನ್ನ ಮಹಾನುಭಾವವ ಕೇಳಿ ಕೇಳಿ ಎನ್ನ ಭವಂ ನಾಸ್ತಿಯಾಯಿತ್ತು. ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಅಜಾತನೆಂಬುದ ನೆಲೆಮಾಡಿ ಭವಪಾಶಂಗಳ ಹರಿದಿಪ್ಪೆಯಾಗಿ, ನಿನ್ನ ಸಂಗದಿಂದಲಾನು ಬದುಕಿದೆನು !
--------------
ಅಲ್ಲಮಪ್ರಭುದೇವರು
ಕಾಲನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ; ಕಾಮನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ; ತನುತ್ರಯಂಗಳೆಂಬ ತ್ರಿಪುರವ ಚಿತ್‍ಶಿಖಿಯೆಂಬ ಜ್ಞಾನಾಗ್ನಿಯಿಂದ ದಹಿಸಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ; ಸಂಚಿತ ಪ್ರಾರಬ್ಧ ಆಗಾಮಿಯೆಂಬ ಕರ್ಮತ್ರಯಂಗಳ ದಹಿಸಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ. ಸತ್ವ ರಜ ತಮಂಗಳ ಸುಟ್ಟುರುಹಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ. ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳ ದಹಿಸಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ. ಜೀವಭಾವ ಇಂದ್ರಿಯಭಾವ ವಿಷಯಭಾವ ಭೂತಭಾವ ಜನನಭಾವ ಬೀಜಭಾವವೆಂಬ ಭವಾಶ್ರಯವ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯೇಕಾರ್ಥವಾದ ಅಗ್ನಿಯಿಂದ ಸುಟ್ಟುರುಹಿದ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ. ಸ್ವರ್ಗ ಮತ್ರ್ಯ ಪಾತಾಳಕ್ಕೆ ಆಧಾರಸ್ಥಾನವೇ ಚಿತ್ತು. ಆ ಚಿತ್‍ಸ್ವರೂಪವೇ ಬಸವಣ್ಣ. ಇದು ಕಾರಣ ಚಿದ್ವಿಭೂತಿಯನೆ ಸದಾಕಾಲದಲ್ಲಿ ಧರಿಸಿ, ಶುದ್ಧ ಚಿದ್ರೂಪನಾಗಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->