ಅಥವಾ

ಒಟ್ಟು 122 ಕಡೆಗಳಲ್ಲಿ , 34 ವಚನಕಾರರು , 73 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇಷಕ್ಕೆ ತಕ್ಕ ಭಾಷೆಯುಳ್ಳರೆ ಹಿರಿಯರು ಮೆಚ್ಚುವರು. ರಾಜಂಗೆ ಯಾಚಕತನ ಹೀನ, ಅಂಗದ ಮೇಲೆ ಲಿಂಗಸನ್ನಿಹಿತನಾಗಿ ಶಿವಜ್ಞಾನ ಬೀಜ, ಭಕ್ತನ ಬಂಧುತ್ವ, ದ್ರವ್ಯತ್ರಯಲಿಂಗಾರ್ಪಣವೆಂಬ ತ್ರಿವಿಧಾಚರಣೆಸಂಪನ್ನ ವೀರಮಾಹೇಶ್ವರ ವೇಷವ ಹೊತ್ತುಕೊಂಡು, ಕಾಸು ವಿಷಯಾದಿಗಳಿಗಾಸೆಮಾಡಿ, ಜಡಸಂಸಾರದೊಳಗಿರ್ಪ ಜನರಿಗೆ ಕೈಯಾಂತು ಬೇಡಿ ಬೆಂಡಾಗಿ ತಿರುಗಿ ಹೊತ್ತುಗಳೆದರೆ ಹಳಸಿತ್ತು ವೇಷ, ಮುಳಿಸಿತ್ತು ಭಾಷೆ, ಮುಂದೆ ಕೆಡಹಿತ್ತು ಆಸೆ ದುರ್ಗತಿ ಗುರುನಿರಂಜನ ಚನ್ನಬಸವಲಿಂಗವನರಿಯದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತನೆಂತೆಂಬೆನಯ್ಯಾ ಭವಿಯ ಸಂಗ ಬಿಡದನ್ನಕ್ಕ ಮಾಹೇಶ್ವರನೆಂತೆಂಬೆನಯ್ಯಾ ಪರಸ್ತ್ರೀ ಪರಧನದಾಸೆ ಬಿಡದನ್ನಕ್ಕ.ಪ್ರಸಾದಿಯೆಂತೆಂಬೆನಯ್ಯಾ ಆಧಿವ್ಯಾಧಿ ನಷ್ಟವಾಗದನ್ನಕ್ಕ. ಪ್ರಾಣಲಿಂಗಿಯೆಂತೆಂಬೆನಯ್ಯಾ ಪ್ರಾಣ ಸ್ವಸ್ಥಿರವಾಗದನ್ನಕ್ಕ. ಶರಣನೆಂತೆಂಬೆನಯ್ಯಾ ಪಂಚೇಂದ್ರಿಯ ನಾಶವಾಗದನ್ನಕ್ಕ. ಐಕ್ಯನೆಂತೆಂಬೆನಯ್ಯಾ ಜನನ ಮರಣ ವಿರಹಿತವಾಗದನ್ನಕ್ಕ. ಇಂತಪ್ಪ ಭಾಷೆ ವ್ರತ ನೇಮಂಗಳ ನಾನರಿಯೆನಯ್ಯಾ, ಅಘಟಿತಘಟಿತ ವರ್ತಮಾನದ ನಾನರಿಯೆನಯ್ಯಾ. ನಿಮ್ಮ ಶರಣರ ತೊತ್ತು-ಭೃತ್ಯಾಚಾರವ ಮಾಡುವೆ ಕೂಡಲಸಂಗಮದೇವಾ. 510
--------------
ಬಸವಣ್ಣ
ಸರ್ವಾಂಗವಾಡ, ಮುಖವಾಡ, ಆತ್ಮವಾಡ_ ಇಂತೀ ವ್ರತನೇಮದ ಕಟ್ಟಿನಲ್ಲಿ ಇಪ್ಪನಿರವು: ತನ್ನ ನೇಮಕ್ಕೆ ನೇಮವ ಅಂಗೀಕರಿಸಿದವನಲ್ಲಿ ಅಂಗಬಂಧವ ತೆಗೆದು ತೋರುವುದು, ಮುಖಬಂಧವ ತೆಗೆದು ನೋಡುವುದು, ಆತ್ಮಬಂಧವ ಬಿಟ್ಟು ಮಾತನಾಡುವುದು. ಇಂತೀ ಭಾಷೆಗೆ ಭಾಷೆ ಒಳಗಾದವನಲ್ಲಿ ಇದು ನಿಹಿತದ ವ್ರತ ಏಲೇಶ್ವರಲಿಂಗಕ್ಕೆ
--------------
ಏಲೇಶ್ವರ ಕೇತಯ್ಯ
ತನುವೆಂಬಂಗವ ತಾಳಿ ಬಂದಾಗವೆ ಮನವೆಂಬ ಮಾರಿ ಒಡಲ ಹೊಕ್ಕಿತ್ತು. ಉಭಯದೊಡಲ ಕೊಂಡು ಬಂದೆ. ಬಲದ ಕೈಯಲ್ಲಿ ಜಗ ಪೂಜಿಸುವ ಶಕ್ತಿ. ಎನ್ನ ಮನದ ಕೊನೆಯಲ್ಲಿ ಕಾಲಾಂತಕ ಭೀಮೇಶ್ವರಲಿಂಗವಲ್ಲದಿಲ್ಲಾ ಎಂಬ ಭಾಷೆ.
--------------
ಡಕ್ಕೆಯ ಬೊಮ್ಮಣ್ಣ
ಧ್ಯಾನಕ್ಕೆ ಮೋನವೆಂಬ ಶಸ್ತ್ರವ ಪಿಡಿಯಲರಿಯದೆ ಅಹಂಕಾರದ ಧಾರೆಯ ಮೊನೆಯಲಗೆಂಬ ಶಸ್ತ್ರವ ಪಿಡಿದು ಕೆಟ್ಟೆನಯ್ಯಾ ಅಂಜುವೆನಂಜುವೆನಯ್ಯಾ, ಜಂಗಮಲಿಂಗವೆಂಬ ಭಾಷೆ ಪಲ್ಲಟವಾಯಿತ್ತು. ಇನ್ನು ಜಂಗಮವೆಂಬ ಶಿಕ್ಷಾಶಸ್ತ್ರದಲ್ಲಿ ಎನ್ನ ಹೊಯ್ದು ಬಯ್ದು ರಕ್ಷಿಸುವುದು ಕೂಡಲಸಂಗಮದೇವಾ
--------------
ಬಸವಣ್ಣ
ಇದು ಕಾರಣ, ಎನ್ನ ಮಾನಸ ನಿಮ್ಮುವನೆ ನೆನೆವುತಿಪ್ಪುದು. ಎನ್ನ ವಾಚಕ ನಿಮ್ಮುವನೆ ಕೀರ್ತಿಸುತಿಪ್ಪುದು. ಎನ್ನ ಕಾಯಕ ಷಟ್‍ಕರ್ಮಂಗಳನೆಲ್ಲ ಮರೆದು ಶಿವಲಿಂಗಕೃತ್ಯವನೆ ಮಾಡುತಿಪ್ಪುದು ನೋಡಾ. ಈ ಭಾಷೆ ಮನ ಮನತಾರ್ಕಣೆಯಾಗಿ ಹುಸಿಯಲ್ಲ. ತನಗಿಲ್ಲದುದನುಂಟುಮಾಡಿಕೊಂಡು ಹುಸಿವನೇ ಶಿವಶರಣ? ಅದಲ್ಲ ಬಿಡು. ಎನ್ನ ಜಾಗರ ಸ್ವಪ್ನ ಸುಷುಪ್ತಿಯೊಳು ಶಿವ ಶಿವಾ ಶಿವ ಶಿವಾಯೆಂದು ಭವಭಾರವ ನೀಗಿ ನಾನು ಭಕ್ತನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುನ್ನಿನ ಭವದವರನರಸಿ ಹರಿವುದೆ ಹಾ! ಅಯ್ಯಾ! ಸುಡು! ನಿನ್ನ ಭಾಷೆ ಹೋಗಲಿ. ಕೊಟ್ಟ ಕರ್ತುವ ಬಿಟ್ಟು ಹರಿವುದೆ ಜಗವೈದ್ಯನಾಥ ಕಪಿಲಸಿದ್ಧಮಲ್ಲಿನಾಥನ.
--------------
ಸಿದ್ಧರಾಮೇಶ್ವರ
ಆಗುತಿವೆ ಉದಯ ಮಧ್ಯಾಹ್ನ ಅಸ್ತಮಾನ. ಹೋಗುತಿವೆ ದಿನ ವಾರ ಮಾಸ ಸಂವತ್ಸರವು. ಸಾವುತಿವೆ ಆಯುಷ್ಯ ಭಾಷೆ. ಇವರೊಳು ಬೇಗದಿ ತಿಳಿದು ನೀಗಿ, ನಿಷ್ಪತ್ತಿಯಾದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಜನನ ಮರಣಂಗಳಲ್ಲಿ ಬರಿಸಬಾರದ ಭಾಷೆ, ನಿತ್ಯ ನೀನೆಂದು ಮರೆಹೊಕ್ಕ ಕಾರಣ. ಇಹದಲ್ಲಿ ಪರದಲ್ಲಿ ಇರಿಸಬಾರದ ಭಾಷೆ, ತನ್ನಲ್ಲಿ ತನಗೆ ವಿವರಣೆ ಇಲ್ಲದ ಕಾರಣ. ಪುಣ್ಯಪಾಪಂಗಳ ಉಣಿಸಬಾರದ ಭಾಷೆ, ತನ್ನ ಪಾದೋದಕ ಪ್ರಸಾದಜೀವಿಯಾಗಿ. ತಾ ಸಹಿತ ನಾನಿಪ್ಪೆ, ನಾ ಸಹಿತ ತಾನಿಪ್ಪ ಕಾರಣ, ವಂಚನೆ ಬಾರದು ಎನಗೆ ತನಗೆ. ಶಂಭುಜಕ್ಕೇಶ್ವರದೇವಾ, ಸದ್ಗುರು ಅಪ್ಪಣೆಯಿಂದ ನೀನೊಲಿದು ಸಲಹು ಎನ್ನ ಪ್ರಾಣಲಿಂಗವಾಗಿ.
--------------
ಸತ್ಯಕ್ಕ
ಆವಾವ ವ್ರತಕ್ಕೂ ಗುರು ಲಿಂಗ ಜಂಗಮನೆ ಮೂಲಮಂತ್ರ. ಆವಾವುದ ತಾ ಕೊಂಬ ಕೊಡುವಲ್ಲಿ ಲಿಂಗ ಜಂಗಮನ ಮುಂದಿಟ್ಟುಕೊಂಬುದೆ ಶುದ್ಧಕ್ರೀ. ಹೀಗಲ್ಲದೆ, ಲಿಂಗ ಜಂಗಮ ಹೊರತೆಯಾಗಿ ಮತ್ತೊಂದು ಕೊಂಡೆನಾಯಿತ್ತಾದಡೆ, ಎನಗದಲ್ಲದ ದ್ರವ್ಯ, ಎನಗಿದೆ ಭಾಷೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಸಾಕ್ಷಿಯಾಗಿ.
--------------
ಅಕ್ಕಮ್ಮ
ದ್ರವ್ಯಶೀಲ ಧನಶೀಲ ತನುಶೀಲ ಆತ್ಮಶೀಲ ಇಂತಿವರೊಳಗಾದ ನಾನಾ ಶೀಲಂಗಳೆಲ್ಲವೂ ಓಸರಿಸಿದಲ್ಲಿ ಭಾಷೆ ಹೋಯಿತ್ತು. ಕಳ್ಳನ ತಾಯ ಕಣಿಯ ಕೇಳ ಹೋದಂತೆ. ಅಲ್ಲಿಗಲ್ಲಿಗೆ ಹೋಗದೆ, ಎಲ್ಲರ ಕೂಡಿ ಎನಗೊಂದರಲ್ಲಿ ಇರೆಂದು ಕೇಳುವ ಆತ್ಮಗಳ್ಳನ ಶೀಲ ಮನಕ್ಕೆ ಮನೋಹರ ಶಂಕೇಶ್ವರ ಲಿಂಗವ ಮುಟ್ಟದೆ ಹೋಯಿುತ್ತು.
--------------
ಕರುಳ ಕೇತಯ್ಯ
ಅದಿರಿನ ತಲೆ, ಬಿದಿರಿದ ಬಾಯಿ, ಕಾಡಿನ ಹಕ್ಕೆ, ಓಡಿನ ಊಟಿ ಹತ್ತಿದ ಹೊಟ್ಟೆ, ಬತ್ತಿದ ಗಲ್ಲ, ಊರಿದ ಚರಣ, ಏರಿದ ಭಾಷೆ. ಇದು ಶರಣಂಗಲ್ಲದೆ ನಡುವಣ ಪುಕ್ಕಟವಾದವರಿಗೆಲ್ಲಿಯದೊ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆಯುಷ್ಯ ತೀರಿದಲ್ಲದೆ ಮರಣವಿಲ್ಲ, ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ. ಅಂಜಲದೇಕೋ ಲೋಕ ವಿಗರ್ಭಣೆಗೆ ಅಂಜಲದೇಕೋ, ಕೂಡಲಸಂಗಮದೇವಾ ನಿಮ್ಮಾಳಾಗಿ.
--------------
ಬಸವಣ್ಣ
ಹದಿನೆಂಟು ಯುಗದವರು ಲಿಂಗವ ಪೂಜಿಸಿ ದೃಷ್ಟವಾವುದು ನಷ್ಟವಾವುದೆಂದರಿಯದೆ ಭಾವ ಭ್ರಾಮಿತರಾದರು. ಜೀವ ಸಂಕಲ್ಪಿಗಳಾದವರು ಜೀವದಾಹುತಿಯನೆ ಲಿಂಗಕ್ಕರ್ಪಿತವೆಂಬರು, ಭವದ ಬಳ್ಳಿಯ ಹರಿಯಲರಿಯರು, ಇಂಥವನೆ ಭಕ್ತಳ ಇಂಥವನೆ ಪ್ರಸಾದಿ? ಕೇಳು ಕೇಳು ಭಕ್ತನ ಮಹಿಮೆಯ (ಪ್ರಸಾದಿಯ ಮಹಿಮೆಯ): ಪೃಥ್ವಿಯ ಸಾರಾಯದಲಾದ ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ, ಅಪ್ಪುವಿಂದಾದ ಅಗ್ಘಣೆಯ ಲಿಂಗಕ್ಕೆ ಕೊಡದ ಭಾಷೆ, ತೇಜದಿಂದಾದ ನಿವಾಳಿಯ ಲಿಂಗಕ್ಕೆ ಕೊಡದ ಭಾಷೆ, ವಾಯುವಿನಿಂದಾದ ಪರಿಮಳವ ಲಿಂಗಕ್ಕೆ ಕೊಡದ ಭಾಷೆ ಆಕಾಶದಿಂದಾದ ಶೂನ್ಯವ ಲಿಂಗಕ್ಕೆ ಕೊಡದ ಭಾಷೆ ಇದೇನು ಕಾರಣವೆಂದಡೆ: ಮತ್ತೊಂದು ಪೃಥ್ವಿವುಂಟಾಗಿ, ಮತ್ತೊಂದು ಅಪ್ಪುವುಂಟಾಗಿ, ಮತ್ತೊಂದು ತೇಜವುಂಟಾಗಿ, ಮತ್ತೊಂದು ವಾಯುವುಂಟಾಗಿ ಮತ್ತೊಂದು ಆಕಾಶವುಂಟಾಗಿ, ಇವರ ಮೇಲಣ ಪಾಕದ್ರವ್ಯವ ಲಿಂಗಕ್ಕೆ ಕೊಡುವುದು ಭಕ್ತಿ. ಕೂಡಲಚೆನ್ನಸಂಗಾ ಅರ್ಪಿತ ಮುಖವ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಕಾಮಸಂಹಾರಿ, ಹರಿಯಜರಹಂಕಾರ ದರ್ಪಚ್ಚೈದನ ಲಿಂಗವೆಂದೆಂಬರು, ಅದ ನಾವರಿಯೆವಯ್ಯಾ ! ನಾವು ಬಲ್ಲುದಿಷ್ಟಲ್ಲದೆ ಕಾಮ ಕ್ರೋಧ ಲೋಭ ಮೋಹ ಮಾತ್ಸರ್ಯವಿರಹಿತರು, ನಮ್ಮ ಜಂಗಮದೇವರು ಕಾಣಿರಯ್ಯಾ ! ಇಹನಾಸ್ತಿ ಪರನಾಸ್ತಿ ಫಲಪಥಕ್ಕೆ ಹೊರಗಾಗಿ ಮಾಡುವ ಭುಕ್ತಿಯ ಕೊಟ್ಟು, ಮುಕ್ತಿಯನೀವ. ಚರಿಸಿದಡೆ ವಸಂತ, ನಿಂದಡೆ ನೆಳಲಿಲ್ಲ, ನಡೆದಡೆ ಹೆಜ್ಜೆಯಿಲ್ಲ. ದಗ್ಧಪಟನ್ಯಾಯ, ಯಥಾಸ್ವೇಚ್ಛ ತನ್ನ ನಿಲುವು ಅದಾರಿಗೆ ವಿಸ್ಮಯ, ಅಗೋಚರ. ಚರಾಚರಾ ಸ್ಥಾವರಾತ್ಮಕನು ನಮ್ಮ ಜಂಗಮದೇವರು ಕಾಣಿರಯ್ಯಾ. ಆ ಜಂಗಮವು ಭಕ್ತರಿಗೆ ಚರಣವ ಕರುಣಿಪನು. ಆ ಭಕ್ತರು ಪಾದಪ್ರಕ್ಷಾಲನಂ ಗೆಯ್ದು, ಗಂಧಾಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ ವಿಭೂತಿ ರುದ್ರಾಕ್ಷಿಯಂ ಧರಿಸಿ, ಮೈವಾಸವಂ ಭೂಷಣ ಎರೆದಲೆಯನ ಕರದಲ್ಲಿ ಹಿಡಿದು, ಆ ಜಂಗಮದೇವರು ತೀರ್ಥವನೀವುದಯ್ಯಾ. ಆಮೇಲೆ ತಂಡ ಮೊತ್ತಕ್ಕೆ ಮಂಡೆ ಬಾಗಿ, ತಮ್ಮಿಷ್ಟಲಿಂಗಕ್ಕೆ ಮುಷ್ಟಿ ಅರ್ಪಿಸಿ, ತಾವು ಸಲಿಸುವುದಯ್ಯಾ. ಆಮೇಲೆ ಗಣಸಮೂಹವು, ತಾವು ರೋಹ ಅವರೋಹದಿಂದ ಅರ್ಪಿತವ ಮಾಡುವದು, ಆಗಮಾಚಾರವಯ್ಯಾ. ಲಿಂಗ ನಿರ್ಮಾಲ್ಯವನೆ ಲಿಂಗಕ್ಕೆ ಮತ್ತೆ ಮತ್ತೆ ಧರಿಸುವೆ,ಭಾವನಿರ್ಭಾವವನರಿದು, ಇನ್ನೊಂದು ನಿರಂತರದ ಅವಧಾನವುಂಟು. ತಾ ಪ್ರಸಾದವ ಸವಿವಾಗ, ಜಂಗಮಲಿಂಗಕ್ಕೆ ಪದಾರ್ಥವ ಸಮೀಪಸ್ಥವ ಮಾಡಲು, ಅದೇ ಹಸ್ತದಲ್ಲಿ ಸಜ್ಜಾಗೃಹಕ್ಕೆ ಸಮರ್ಪಿಸಿಕೊಂಬುವದೊಂದವಧಾನ. ಆಚೆಗೆ ತೀರ್ಥ ಸಂಬಂಧಿಸಿ, ಎಯ್ದದಿರಲ್ಲದರಲ್ಲಿ ಪಾದೋದಕವ ನೀಡುವದ ದಯಗೊಟ್ಟಡೆ ಸಂದಿಲ್ಲ. ಅವು ಮೂರು, ಇವು ಮೂರು, ಆಚೆ ಹನ್ನೊಂದು, ಈಚೆ ಹತ್ತರ ಅರುವತ್ತರಾಯ ಸಂದಿತ್ತು . ಭಾಷೆ ಪೂರೈಸಿತ್ತು, ಲೆಕ್ಕ ತುಂಬಿತ್ತು, ಬಿತ್ತಕ್ಕೆ ವಟ್ಟವಿಲ್ಲ, ಕಾಳೆಗ ಮೊಗವಿಲ್ಲ. ಕಾಳಿಂಗನ ಹಸ್ತಾಭರಣ, ನಮ್ಮ ಜಂಗಮಲಿಂಗಕ್ಕಯ್ಯಾ ! ಇಂತಪ್ಪ ಈ ನಡೆಯನರಿದಾಚರಿಸಿದ ಸಂಗನಬಸವಣ್ಣಂಗೆ ಆಯತವನಾಯತವೆಂಬ ಅನಾಚಾರಿಯನು ಎನ್ನ ಮುಖದತ್ತ ತೋರದಿರಯ್ಯಾ. ಆ ಮಹಾಮಹಿಮನ ಹೆಜ್ಜೆ ಹೆಜ್ಜೆಗಶ್ವಮೇಧಫಲ ತಪ್ಪದಯ್ಯಾ. ಆ ಸಿದ್ಧಪುರುಷಂಗೆ ನಮೋ ನಮೋ ಎಂಬೆನು ಕಾಣಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಇನ್ನಷ್ಟು ... -->