ಅಥವಾ

ಒಟ್ಟು 49 ಕಡೆಗಳಲ್ಲಿ , 23 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಸ್ತುಲೀಲಾಲೋಲನಾಗಿ ಅವತಾರಮೂರ್ತಿಯಾದಲ್ಲಿ ತ್ರಿಗುಣ ಸಂಭವವಾಯಿತ್ತು. ಪಂಚಭೌತಿಕ ಬಲಿದು ಪಂಚವಿಂಶತಿತತ್ವವಾಯಿತ್ತು. ಈ ಭೇದವ ಜಗಕ್ಕೆ ತೋರಿ, ತಾ ಹೊರಗಾದ ಸದಾಶಿವಮೂರ್ತಿಲಿಂಗದ ಬೆಡಗು.
--------------
ಅರಿವಿನ ಮಾರಿತಂದೆ
ಗುರು ಪಾದವ ತನ್ನ ಕರದಲ್ಲಿ ಧರಿಸಿ, ಗುರು ಮುದ್ರೆಗಳ ತನ್ನಂತರಂಗ ಬಹಿರಂಗದಲ್ಲಿರಿಸಿ, ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದವ ನಿರಂತರ ಸಾವಧಾನಿಯಾಗಿ ಕೊಂಡು ಕೃತಾರ್ಥರಾಗಲರಿಯದೆ, ಮತ್ತೆ ಬೇರೆ ಗುರುಚರ ಪರದೈವಂಗಳ ದಂಡ ಕಮಂಡಲ ಕಂಥೆ ಕಕ್ಷದಾರ ಭಿಕ್ಷಾಪಾತ್ರೆ ಹಾವುಗೆ ತೀರ್ಥಕುಂಭ ಭಸ್ಮದುಂಡೆ ಎಂಬಿವು ಆದಿಯಾದ ಮುದ್ರೆ ಧಾರಣ ದ್ರವ್ಯ ಪಾದೋದಕಂಗಳ ಗದ್ದುಗೆಯ ಪೂಜೆಯ ಬೋಳುಕರಂತೆ ಇದಿರಿಟ್ಟು ಆರಾಧಿಸುವ ಅನಾಚಾರಿಗಳಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪಾತಕರನು ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವ
--------------
ಚನ್ನಬಸವಣ್ಣ
ಅರಿತೆಹೆನರಿತೆಹೆನೆಂದು ಹೊರಹೊಮ್ಮುವಾಗ ಕಾಯ ಮರುಜವಣಿಯೆ ? ಮಹಾಪ್ರಳಯಕ್ಕೆ ಹೊರಗಾದ ಶ್ರ[ಮ]ಣವೆ ? ಅವತಾರಕ್ಕೆ ಹೊರಗಾದ ನಿರಂಗವೆ ? ಅಸಗ ನೀರಡಿಸಿ ಸತ್ತಂತಾಯಿತ್ತು ಅವನಿರವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶ್ರೀಗುರು ಉಪದೇಶವ ಮಾಡುವಲ್ಲಿ ಭಕ್ತಗಣಸಾಕ್ಷಿಯಾಗಿ ಹಸ್ತಮಸ್ತಕಸಂಯೋಗವ ಮಾಡಿ, ಆ ಮಸ್ತಕಾಗ್ರದೊಳಿಪ್ಪ ನಿತ್ಯನಿರಂಜನ ಶಿವಕಳೆಯ ಭಾವದೊಳು ಭರಿತವೆನಿಸಿ ಮನದೊಳು ಮಂತ್ರಯುಕ್ತದಿಂ ಮೂರ್ತಿಗೊಳಿಸಿ ಚರಪಾದತೀರ್ಥಪ್ರಸಾದದೊಳು ಬೆರಸಿ_ ಇಂತೀ ಗುರುಚರಪರರಾಜ್ಞೆಯಲಿ ಪ್ರಾಣಲಿಂಗವ ಕರಸ್ಥಲಕ್ಕೆ ಬಿಜಯಂಗೈಸಿ ಕೊಟ್ಟ ಬಳಿಕ, ಗುರು ಕೊಟ್ಟ ಇಷ್ಟಲಿಂಗದಲ್ಲಿ ನಿಷೆ*ಗಟ್ಟಿಗೊಂಡು ಮನಮುಟ್ಟಿ ಪೂಜಿಸಿ ಪ್ರಸಾದವಂ ಪಡೆದು ನಿಜಮುಕ್ತಿಯನೈದಲರಿಯದೆ ಈ ಗುರು ಕೊಟ್ಟ ಇಷ್ಟಲಿಂಗವ ಬಿಟ್ಟು ಗುರುಕಾರುಣ್ಯ ಚರಪ್ರಸಾದ ಹೊರಗಾದ, ಧರೆಯ ಮೇಲಣ ಪ್ರತಿಷೆ*ಯನುಳ್ಳ ಭವಿಶೈವದೈವಕ್ಕೆರಗುವ ದುರಾಚಾರಿಗಳಿಗೆ ಅಘೋರನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಸದ್ಗುರುಚರ ಶ್ಮಶಾನದೀಕ್ಷೆಯ ಮಾಡಲಾಗದು. ಪ್ರೇತಾಂಗಕ್ಕೆ ವಿಭೂತಿ ರುದ್ರಾಕ್ಷಿಯ ಪಟ್ಟವ ಕಟ್ಟಬಹುದೆ, ಶಿವಲಿಂಗ ಹೊರತೆಯಾಗಿ? ಬೀಜ ಹೊರತೆಯಾದ ವೃಕ್ಷವುಂಟೆ? ಕಾಂತಿ ಹೊರಗಾದ ಬೆಳಗುಂಟೆ? ಭೂತಕಾಯಕ್ಕೆ ಶಿವಾಧಿಕ್ಯವೆಂಬ ಪಟ್ಟವುಂಟೆ? ತಾ ಪಂಚಾಚಾರಭರಿತನಾಗಿದ್ದು, ಇಷ್ಟಲಿಂಗವಿಲ್ಲದವನ ಮನೆಯ ಹೊಕ್ಕು ಶಿಷ್ಯನೆಂದಡೆ, ಆತ ಘಟ್ಟುವ ಭಂಡನೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸತ್ವ ರಜ ತಮವೆಂಬ ಮೂರು ಭಿತ್ತಿ ಕೂಡಿ ಘಟ್ಟಿಯಾದಲ್ಲಿ ಚಿತ್ತೆಂಬ ಪುತ್ಥಳಿ ಹುಟ್ಟಿತ್ತು. ಪುತ್ಥಳಿಯ ಪತ್ಥಳಿಯಲ್ಲಿ ಜಗಕರ್ತೃ ಹುಟ್ಟಿದ. ಕರ್ತೃವಂ ಹೆತ್ತವನ ನಾಭಿಯ ಮಧ್ಯದ ಬಾಲಲೀಲೆಯ ಸಾಲಿನೊಳಗಾದ ಸಂಪದವರಿವರಲ್ಲಾ ಕಾಲಕ್ಷಯನ ಕರ್ಮನಾಶನ ಭಾಳಾಂಬಕನ ಲೀಲೆಯಲ್ಲಿ ಆಡುತ್ತಿರೆಂದು ಸರ್ವಮಯಕ್ಕೆ ಹೊರಗಾದ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಲ್ಲು ಕವಣೆಯ ನುಂಗಿ, ಇಡುವಾತನ ಹಣೆ ತಾಗಿತ್ತು. ಹಣೆ ಹನಿತು, ಮೂರು ಸೇ[ದೆ]ಯಾಯಿತ್ತು. ಸೇ[ದೆ]ಯಲ್ಲಿ ಆರುಮಂದಿ ಹುಟ್ಟಿ, ಮೂವರ ಕೊಂದು, ಮೂವರು ಆಲುತ್ತೈದಾರೆ. ಆಲುವೆಗೆ ಹೊರಗಾದ ಅನಾಮಯ ಅನುಪಮ, ಎನ್ನ ಗುಡಿಯ ಗುಮ್ಮಟೇಶ್ವರನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ವಾಯದ ಮಾಯದ ಸಂಭ್ರಮದೊಳಗೆ ಸಿಲುಕಿತ್ತು ನೋಡಾ ಭುವನವೆಲ್ಲ. ಮಾಯಕ್ಕೆ ಹೊರಗಾದ ನಿರ್ಮಾಯನ ಕಂಡೆನು. ತಾನೆಂಬ ನುಡಿಗೆ ನಾಚಿ, ನಾನೆಂಬ ನುಡಿಗೆ ಹೇಸಿ, ತಾನು ತಾನಾದ ಘನಮಹಿಮನು. ಕಾಯದಲ್ಲಿ ಕುರುಹಿಲ್ಲ, ಭಾವದಲ್ಲಿ ಭ್ರಮೆಯಿಲ್ಲ. ಜ್ಞಾನ ತಾನೆಂಬ ಭೇದವಿಲ್ಲ. ಸಾವಯನಲ್ಲ ನಿರವಯನಲ್ಲ, ಕಲಿದೇವರದೇವಾ, ನಿಮ್ಮ ಶರಣ ಚೆನ್ನಬಸವಣ್ಣ.
--------------
ಮಡಿವಾಳ ಮಾಚಿದೇವ
ಜನನವಿಲ್ಲದ ಶರಣ, ಮರಣವಿಲ್ಲದ ಶರಣ, ಕಾಲನ ಬಾಧೆಗೆ ಹೊರಗಾದ ಶರಣ, ಕರ್ಮವಿರಹಿತ ಶರಣ, ಮಾಯಾಮೋಹದ ಬೇರ ಕೊರೆದ ಶರಣ, ಭವಜಾಲವ ಹರಿದ ಶರಣ, ಅಖಂಡೇಶ್ವರಾ, ನಿಮ್ಮ ಶರಣನ ಮಹಿಮೆಯ ನೀವೇ ಬಲ್ಲಿರಲ್ಲದೆ ಉಳಿದ ಕೀಟಕಪ್ರಾಣಿಗಳೆತ್ತ ಬಲ್ಲರಯ್ಯಾ.
--------------
ಷಣ್ಮುಖಸ್ವಾಮಿ
ಪಶುವಿನ ಉದರದೊಳಗಿಪ್ಪ ಕ್ಷೀರ ಶಿಶುವಿಂಗಲ್ಲದೆ ಪಶುವಿಂಗಲ್ಲದೆ ಇಪ್ಪ ಪರಿಯಿದೇನೋ? ಪಶುವಿನ ಕಳೇವರದಿಂ ಪೊರಮಟ್ಟು, ಕಾಲಾಗ್ನಿಯಾಗಿ ಪಶುವ ಕೊಂದಿತ್ತು. ಶಿಶುವ ನುಂಗಿತ್ತು. ಪಶುಪತಿಯ ಕೂಡಿ, ಶಿಶುವಿಂಗೆ ಪಶುವಿಂಗೆ ಹೊರಗಾದ ವಿಷಯಾತೀತನು ನಿಮ್ಮ ರೂಹು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಿಷ್ಣು ಆದಿಶಕ್ತಿಯ ಕಂದನಾಗಿ ಬಂದುದನಾರೂ ಅರಿಯರು. ಆ ಕಂದನ ಬೆಂಬಳಿಯಲ್ಲಿ ಕ್ರಿಯಾಶಕ್ತಿಗೆ ಬ್ರಹ್ಮ ಕಂದನಾಗಿ ಬಂದುದನಾರೂ ಅರಿಯರು. ಈ ಉಭಯದ ಆಧಾರವಾಗಿ ಜ್ಞಾನಶಕ್ತಿಯ ಬೆಂಬಳಿಯಲ್ಲಿ ಬಂದ ರುದ್ರನ ಆರೂ ಅರಿಯರು. ಇಂತೀ ತ್ರಿವಿಧಭೇದ ಪ್ರಳಯಕ್ಕೆ ಹೊರಗಾದ ಸದಾಶಿವಮೂರ್ತಿಲಿಂಗವನಾರೂ ಅರಿಯರು.
--------------
ಅರಿವಿನ ಮಾರಿತಂದೆ
ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರಿಗೆ ಅಳಿವು ಉಳಿವಲ್ಲದೆ, ಉಳಿಗೆ ಹೊರಗಾದ ಅಳಿಯದವನನರಿಯಾ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಪರಮನಪ್ಪಣೆಯಿಂದೆ ಧರೆಗಿಳಿದು ಬಂದು ಗುರುಲಿಂಗಜಂಗಮದ ಭಕ್ತಿಯನಳವಡಿಸಿಕೊಂಡು, ಷಟ್‍ಸ್ಥಲಬ್ರಹ್ಮದ ಅನುವನರಿದು ನೂರೊಂದು ಸ್ಥಳಕುಳಂಗಳ ಕರತಳಾಮಳಕವಾಗಿ ತಿಳಿದು, ನಿಜೈಕ್ಯಪಥದಲ್ಲಿ ನಿರ್ವಯಲಾದರು ಬಸವಣ್ಣ ಮೊದಲಾದ ಅಸಂಖ್ಯಾತ ಮಹಾಗಣಂಗಳು. ಅದೆಂತೆಂದೊಡೆ : ಸಂಗನಬಸವಣ್ಣನು ಕಪ್ಪಡಿಯಸಂಗಯ್ಯನೊಳಗೆ ಬಯಲಾದನು. ಅಕ್ಕಮಹಾದೇವಿ, ಪ್ರಭುದೇವರು ಶ್ರೀಶೈಲ ಕದಳಿಯ ಜ್ಯೋತಿರ್ಮಯಲಿಂಗದೊಳಗೆ ಬಯಲಾದರು. ಹಡಪದಪ್ಪಣ್ಣ, ನೀಲಲೋಚನೆತಾಯಿ ಮೊದಲಾದ ಕೆಲವು ಗಣಂಗಳು ತಮ್ಮ ಲಿಂಗದಲ್ಲಿ ಬಯಲಾದರು. ಚೆನ್ನಬಸವಣ್ಣ, ಮಡಿವಾಳ ಮಾಚಿದೇವ, ಕಿನ್ನರಿಯ ಬ್ರಹ್ಮಿತಂದೆ ಮೊದಲಾದ ಉಳಿದ ಗಣಂಗಳು ಉಳಿವೆಯ ಮಹಾಮನೆಯಲ್ಲಿ ಮಹಾಘನಲಿಂಗದೊಳಗೆ ಬಯಲಾದರು. ಇಂತಪ್ಪ ಸಕಲಗಣಂಗಳಿಗೆ ಆಯಾಯ ಸ್ಥಾನದಲ್ಲಿ ನಿರವಯಲಪದವ ಕರುಣಿಸಿಕೊಟ್ಟಾತ ನೀನೊಬ್ಬನಲ್ಲದೆ ಮತ್ತಾರನು ಕಾಣೆನಯ್ಯಾ. ಇಂತಪ್ಪ ಸಕಲಗಣಂಗಳ ತೊತ್ತಿನಮಗನೆಂದು ಎನ್ನನೆತ್ತಿಕೊಂಡು ಸಲಹಿದಿರಾಗಿ ಎನಗೆ ನಿಜೈಕ್ಯ ನಿರವಯಲಪದವೆಲ್ಲಿಹುದೆಂದೊಡೆ : ಉತ್ಪತ್ತಿ ಸ್ಥಿತಿ ಪ್ರಳಯಂಗಳಿಗೆ ಹೊರಗಾದ ನಿಮ್ಮ ಪರಾತ್ಪರ ಪರಮ ಹೃದಯಕಮಲಕರ್ಣಿಕಾವಾಸಮಧ್ಯ ಸೂಕ್ಷ್ಮಬಯಲೊಳಗೆನ್ನ ನಿರವಯಲ ಮಾಡಿಕೊಳ್ಳಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯಾ ಪುಣ್ಯಪಾಪ, ಇಹಪರಂಗಳಿಗೆ ಹೊರಗಾದ ಶಿಷ್ಯಗುರುಜಂಗಮದ ವಿಚಾರವೆಂತೆಂದಡೆ ತನ್ನ ತಾನೆ ಪಕ್ವವಾಗಿ, ವೃಕ್ಷವ ತನ್ನೊಳಗೆ ಮಾಡಿಕೊಂಡು, ಶಿವಾಜ್ಞೆಯಿಂದ ತೊಟ್ಟು ಬಿಟ್ಟ ಹಣ್ಣಿನಂತೆ ಶಿವಭಕ್ತಮತ ಮೊದಲಾಗಿ ಆವ ಜಾತಿಯಲ್ಲಿ ಜನಿತವಾದಡೇನು ? ಪೂರ್ವಗುಣಧರ್ಮಗಳ ಮುಟ್ಟದೆ, ಲೋಕಾಚಾರವ ಹೊದ್ದದೆ, ಪಂಚಮಹಾಪಾತಕಂಗಳ ಬೆರಸದೆ, ಸತ್ಯಶರಣರಸಂಗ, ಸತ್ಯ ನಡೆನುಡಿಯಿಂದಾಚರಿಸಿ, ಲಿಂಗಾಚಾರ ಮೋಹಿಯಾಗಿ, ಅಡಿಗೆರಗಿ ಬಂದ ಪೂರ್ವಜ್ಞಾನಿ ಪುನರ್ಜಾತಂಗೆ, ಪಕ್ಷಿ ಫಳರಸಕ್ಕೆರಗುವಂತೆ ಮೋಹಿಸಿ, ಅಂಗದ ಮಲಿನವ ತೊಡೆದು ಚಿದಂಗವ ಮಾಡಿ, ಚಿದ್ಘನಲಿಂಗವ ಸಂಬಂಧಿಸಿ, ಇಪ್ಪತ್ತೊಂದು ದೀಕ್ಷೆಯ ಕರುಣಿಸುವಾತನೆ ತ್ರಿಣೇತ್ರವುಳ್ಳ ಗುರುವೆಂಬೆನಯ್ಯಾ. ಅಂಥ ಗುರುಕರಜಾತನ ಭೇದಿಸಿ, ತ್ರಿವಿಧ ಜಪವ ಹೇಳಿ, ತ್ರಿವಿಧಲಿಂಗಾನುಭಾವವ ಬೋಧಿಸುವಾತನೆ ಸರ್ವಾಂಗಲೋಚನವುಳ್ಳ ಜಂಗಮವೆಂಬೆ ನೋಡಾ. ಇಂಥ ಸನ್ಮಾರ್ಗಿಗಳಿಗೆ ಭವಬಂಧನ ನಾಸ್ತಿ ಕಾಣಾ ಶಂಭುಜಕ್ಕೇಶ್ವರಾ.
--------------
ಸತ್ಯಕ್ಕ
-->