ಅಥವಾ

ಒಟ್ಟು 23 ಕಡೆಗಳಲ್ಲಿ , 13 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಡಜ ಪಿಂಡಜ ಬಿಂದುಜ ಉದಯವಾಗದಂದು, ಆತ್ಮತತ್ವ ವಿದ್ಯಾತತ್ವ ಶಿವತತ್ವವೆಂಬ ತತ್ವತ್ರಯಂಗಳ ನಾಮಸೀಮೆಗಳೇನುಯೇನೂಯಿಲ್ಲದಂದು, ಆಚಾರ ಅನಾಚಾರವಿಲ್ಲದಂದು, ಸೀಮೆ ನಿಸ್ಸೀಮೆಯಿಲ್ಲದಂದು,
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದಾಯೆಂದಡೆ ನಡೆದು ಹೋಯೆಂದಡೆ ನಿಲ್ಲನೆ ಜಗವ ಹೊರೆಯಲೆಂದು ? ಆತನ ಸಾಹಸವ ಬೆಸಗೊಂಬಡೆ ಈಶ್ವರನ ತಾಳುವನಯ್ಯಾ. ಆವರಿಸಿದಡಲ್ಲಾಡಿದತ್ತು ಕೈಲಾಸವು ! ಗಂಡುಗೆದರಿ ಈಡಾಡಿದಡೆ ಅಂಡಜ ಬ್ರಹ್ಮಾಂಡಗಳು ನಿಲುವವೆ ? ಕೆಲೆದು ಕೆದರಿ ಅಟ್ಟಿದೊಡೆ ಮೊರೆಯೆಂಬರಲ್ಲದೆ ಇದಿರಾನುವರುಂಟೆ ? ಅಯ್ಯಾ ನೀನು ಬಿಟ್ಟು ಬೀದಿವರಿದೋಡೆ ಅಟ್ಟಿ ಹಿಡಿವ ಗಂಡುಗರ ನಾ ಕಾಣೆನಯ್ಯಾ. ಸೃಷ್ಟಿಗೀಶ್ವರನಲ್ಲದೆ ಮತ್ತಾರೂ ಇಲ್ಲ. ಗಂಭೀರವೆಂದಡೆ ಇಂಬುಗೊಳ್ವವೆ ಕೊಳಗು ? ಶಂಭುವೇರುವ ವಾಹನವೆಂದೊಡೆ ಬೆನ್ನು ಬೆಂಕಟ್ಟಾಗದೆ ? ಈ ಕೀಳು ಭುವನಕ್ಕೆ. ನಮ್ಮ ಕೂಡಲ[ಚೆನ್ನ]ಸಂಗಮದೇವನಲ್ಲಿ ತೆತ್ತೀಸಾದಿಗಳಿಗುಬ್ಬಸವಯ್ಯ ಎಮ್ಮ ಬಸವರಾಜನು
--------------
ಚನ್ನಬಸವಣ್ಣ
ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ, ಜೀವರಾಶಿಯ ಕಂಡಿಯಲ್ಲಿ ಹೊಕ್ಕು ಹೊರಡುವ, ಜೀವನ ತಿಳಿಯಲರಿಯದನ್ನಕ್ಕ, ಕಾಯದ ಜೀವದ ಸಂದ ಬಿಚ್ಚಲರಿಯದನ್ನಕ್ಕ, ಮತ್ತೇನ ಮಾಡಿದಡೇನು ಫಲ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವನ ಬಾಳುವೆ, ಮೃತಶರೀರದಂತೆ.
--------------
ಸ್ವತಂತ್ರ ಸಿದ್ಧಲಿಂಗ
ಆದಿಯಿಂದತ್ತತ್ತ ನೀನೆ ಅಯ್ಯಾ, ಅನಾದಿಯಿಂದತ್ತತ್ತ ನೀನೆ ಅಯ್ಯಾ. ಈ ಎರಡನೂ ಮೀರಿದ ಅತ್ಯತಿಷ*ದ್ದಶಾಂಗುಲನಾದೆಯಯ್ಯಾ. `ಚತುರ್ಯುಗ ಸಹಸ್ರಾಣಿ' ಎಂಬ ಸಂಖ್ಯೆ ಯುಗಂಗಳ ಪವಣಿಸದಂದು ಕೆಸರುಗಲ್ಲನಿಕ್ಕಿ ಧರೆ ಮೇರುವ ನೆಲೆಗೊಳಿಸಿ ಅಂಡಜ ಉತ್ಪತ್ಯವಾಗದಂದು ಆತನಂತುವ ನೀನೆ ಬಲ್ಲೆ ನಿನ್ನಂತುವನಾತನೆ ಬಲ್ಲ. ನಿಮ್ಮಿಬ್ಬರ ಮಹಿಮೆಯ ನಾನೆತ್ತ ಬಲ್ಲೆನಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಂಡಜ ಪೃಥ್ವಿ ಉದಯಿಸದಂದು ಭೂಮಂಡಲವಾಗದಂದು ಪಿಂಡಜ ಬೀಜವ ನವಬ್ರಹ್ಮರು ತಾರದಂದು ನವಖಂಡವ ರಚಿಸದಂದು ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಾದಿ [ಸ್ಥ]ಳವಿಡದಂದು ಅನುಕರಿಸದಂದು, ರೂಹಿಸದಂದು ಅತಿಮಥನ ಒಡ್ಡದಂದು ಇಪ್ಪತ್ತೈದರ ಸ್ಥಳವ ಹೆಸರುಗೊಂಡು ಕರೆಯದಂದು ಎನಗೆ ತನಗೆಂಬಿಚ್ಫೆ ತನ್ನ ತಲೆದೋರದಂದು ಋಷಿಗಳಾಶ್ರಯ ಲೋಕದಲ್ಲಿ ಹರಿಯದಂದು ಅಂದು ಬಸವನಿದ್ದ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ
ಪರಮಜ್ಞಾನಕ್ಕೆ ಕರ್ತೃವಾದ ಸದಾಶಿವನೆ ಜೀವಭಾವದಿಂ ಪ್ರಪಂಚಿನ ಘಟದಿಂದೈದೆನುವಪ್ಪ ಪಂಚೇಂದ್ರಿಯಗಳ ಪಂಚವಿಷಯಂಗಳನರಿತರ್ಪಿಸಿ ತೃಪ್ತಿಯನೆಯ್ದಿ, ಆ ಜೀವನು ಅಂಡಜ ಸ್ವೇದಜ ಉದ್ಬಿಜ ಜರಾಯುಜಂಗಳೆಂಬ ಚತುರ್ವಿಧವರ್ಗಂಗಳೊಳು ಚತುರ್ದಶಭುವನದೊಳುದಯಿಸಿ, ಸ್ತ್ರೀ[ಪುಂನ]ಪುಂಸಕಾದಿಯಿಂ ಜನಿಸಿ, ಪುತ್ರ ¥õ್ಞತ್ರಂಗಳಿಂ ದೃಶ್ಯಮಾಗಿ ಯಸ್ಯ ಏವಂ ಆ ಮುನ್ನಿನ ಪರಮಜ್ಞಾನದಿಂದ ಜೀವನು ಸದಾಶಿವನಾದುದಕ್ಕೆ ಶ್ರುತಿ: ಯಥಾ ಖಲು ವೈ ಧೇನುಂ ತೀರ್ಥೇ ತರ್ಪಯತಿ ಏವಮಗ್ನಿ ಹೋತ್ರೀ ಯಜಮಾನಂ ತರ್ಪಯತಿ ಯಸ್ಯ ಪ್ರಜಯಾ ಪಶುಭಿಃ ಪ್ರತುಷ್ಯತಿ ಸುವರ್ಗಂ ಲೋಕಂ ಪ್ರಜಾನಾತಿ ಪಶ್ಯತಿ ಪುತ್ರ ಪೌತ್ರಂ ಪ್ರವ್ರಜಯಾ ಪಶುಭಿರ್ಮಿಥುನೈರ್ಜಾಯತೇ ಯಸ್ಯೇನಂ ವಿದುಷೋ[s]ಗ್ನಿಹೋತ್ರಂ ಯ ಏವಂ ವೇದ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗ ಶಿವನಾಗಬಲ್ಲ ಜಗವಾಗಬಲ್ಲ ಜೀವವಾಗಬಲ್ಲನಯ್ಯಾ.
--------------
ಆದಯ್ಯ
ನಿಃಕಲ ಶಿವನ ಮಧ್ಯದಲ್ಲಿ ಚಚ್ಛಕ್ತಿ ಉದಯಿಸಿದಳು. ಆ ಚಿಚ್ಛಕ್ತಿಯ ಮಧ್ಯದಲ್ಲಿ ಶಾಂತ್ಯತೀತೋತ್ತರೆಯೆಂಬ ಕಲೆ. ಆ ಶಾಂತ್ಯತೀತೋತ್ತರೆಯೆಂಬ ಕಲೆಯ ಮಧ್ಯದಲ್ಲಿ ಮಹಾಲಿಂಗ. ಆತ ಮಹಾಲಿಂಗದ ಮಧ್ಯದಲ್ಲಿ ನಿರ್ಮುಕ್ತಸಾದಾಖ್ಯ. ಆ ನಿರ್ಮುಕ್ತಸಾದಾಖ್ಯದ ಮಧ್ಯದಲ್ಲಿ ಪಶುಪತಿಯೆಂಬ ಕಲಾಮೂರ್ತಿ. ಆ ಪಶುಪತಿಯೆಂಬ ಕಲಾಮೂರ್ತಿಯ ಮಧ್ಯದಲ್ಲಿ ಶಿವನೆಂಬ ಐಕ್ಯನು. ಆ ಶಿವನೆಂಬ ಐಕ್ಯನ ಮಧ್ಯದಲ್ಲಿ ಉಪಮಾತೀತನು. ಆ ಉಪಮಾತೀತನ ಮಧ್ಯದಲ್ಲಿ ಆತ್ಮನು. -ಇಂತು ಮಹಾಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪರಾಶಕ್ತಿ; ಆ ಪರಾಶಕ್ತಿಯ ಮಧ್ಯದಲ್ಲಿ ಶಾಂತ್ಯಾತೀತೆಯೆಂಬ ಕಲೆ. ಆ ಶಾಂತ್ಯಾತೀತೆಯೆಂಬ ಕಲೆಯ ಮಧ್ಯದಲ್ಲಿ ಪ್ರಸಾದಲಿಂಗ. ಆ ಪ್ರಸಾದಲಿಂಗದ ಮಧ್ಯದಲ್ಲಿ ಶಿವಸಾದಾಖ್ಯ. ಆ ಶಿವಸಾದಾಖ್ಯದ ಮಧ್ಯದಲ್ಲಿ ಮಹಾದೇವನೆಂಬ ಕಲಾಮೂರ್ತಿ. ಆ ಮಹಾದೇವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕ್ಷೇತ್ರಜ್ಞನೆಂಬ ಶರಣ. ಆ ಶರಣನ ಮಧ್ಯದಲ್ಲಿ ಸದಾಶಿವನು. ಆ ಸದಾಶಿವನ ಮಧ್ಯದಲ್ಲಿ ಆಕಾಶ. ಇಂತು ಶಿವಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ಮಧ್ಯದಲ್ಲಿ ಶಾಂತಿಯೆಂಬ ಕಲೆ. ಆ ಶಾಂತಿಯೆಂಬ ಕಲೆಯ ಮಧ್ಯದಲ್ಲಿ ಜಂಗಮಲಿಂಗ. ಆ ಜಂಗಮಲಿಂಗದ ಮಧ್ಯದಲ್ಲಿ ಅಮೂರ್ತಿಸಾದಾಖ್ಯ. ಆ ಅಮೂರ್ತಿಸಾದಾಖ್ಯದ ಮಧ್ಯದಲ್ಲಿ ಭೀಮೇಶ್ವರನೆಂಬ ಕಲಾಮೂರ್ತಿ. ಆ ಭೀಮೇಶ್ವರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕರ್ತಾರನೆಂಬ ಪ್ರಾಣಲಿಂಗಿ. ಆ ಕರ್ತಾರನೆಂಬ ಪ್ರಾಣಲಿಂಗಿಯ ಮಧ್ಯದಲ್ಲಿ ಈಶ್ವರ. ಆ ಈಶ್ವರನ ಮಧ್ಯದಲ್ಲಿ ವಾಯು. -ಇಂತು ಅಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ಮಧ್ಯದಲ್ಲಿ ವಿದ್ಯೆಯೆಂಬ ಕಲೆ. ಆ ವಿದ್ಯೆಯೆಂಬ ಕಲೆಯ ಮಧ್ಯದಲ್ಲಿ ಶಿವಲಿಂಗ. ಆ ಶಿವಲಿಂಗದ ಮಧ್ಯದಲ್ಲಿ ಮೂರ್ತಿಸಾದಾಖ್ಯ. ಆ ಮೂರ್ತಿಸಾದಾಖ್ಯದ ಮಧ್ಯದಲ್ಲಿ ಮಹಾರುದ್ರನೆಂಬ ಕಲಾಮೂರ್ತಿ. ಆ ಮಹಾರುದ್ರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಭಾವನೆಂಬ ಪ್ರಸಾದಿ. ಆ ಭಾವನೆಂಬ ಪ್ರಸಾದಿಯ ಮಧ್ಯದಲ್ಲಿ ರುದ್ರನು. ಆ ರುದ್ರನ ಮಧ್ಯದಲ್ಲಿ ಅಗ್ನಿ. -ಇಂತು ಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪ್ರತಿಷೆ*ಯೆಂಬ ಕಲೆ. ಆ ಪ್ರತಿಷೆ*ಯೆಂಬ ಕಲೆಯ ಮಧ್ಯದಲ್ಲಿ ಗುರುಲಿಂಗ. ಆ ಗುರುಲಿಂಗದ ಮಧ್ಯದಲ್ಲಿ ಕರ್ತುಸಾದಾಖ್ಯ. ಆ ಕರ್ತುಸಾದಾಖ್ಯದ ಮಧ್ಯದಲ್ಲಿ ಸರ್ವನೆಂಬ ಕಲಾಮೂರ್ತಿ. ಆ ಸರ್ವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಚೈತನ್ಯವೆಂಬ ಮಾಹೇಶ್ವರ. ಆ ಚೈತನ್ಯನೆಂಬ ಮಾಹೇಶ್ವರನ ಮಧ್ಯದಲ್ಲಿ ವಿಷ್ಣು. ಆ ವಿಷ್ಣುವಿನ ಮಧ್ಯದಲ್ಲಿ ಅಪ್ಪು. -ಇಂತು ಕರ್ತುಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಮಧ್ಯದಲ್ಲಿ ನಿವೃತ್ತಿಯೆಂಬ ಕಲೆ. ಆ ನಿವೃತ್ತಿಯೆಂಬ ಕಲೆಯ ಮಧ್ಯದಲ್ಲಿ ಆಚಾರಲಿಂಗ. ಆ ಆಚಾರಲಿಂಗದ ಮಧ್ಯದಲ್ಲಿ ಕರ್ಮಸಾದಾಖ್ಯ. ಆ ಕರ್ಮಸಾದಾಖ್ಯದ ಮಧ್ಯದಲ್ಲಿ ಭವನೆಂಬ ಕಲಾಮೂರ್ತಿ. ಆ ಭವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಅಂತರ್ಯಾಮಿಯೆಂಬ ಭಕ್ತ. ಆ ಅಂತರ್ಯಾಮಿಯೆಂಬ ಭಕ್ತನ ಮಧ್ಯದಲ್ಲಿ ಬ್ರಹ್ಮ. ಆ ಬ್ರಹ್ಮನ ಮಧ್ಯದಲ್ಲಿ ಪೃಥ್ವಿ. ಆ ಬ್ರಹ್ಮನಿಂದ ನರರು ಸುರರು ಅಸುರರು ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ ಸಕಲ ಚರಾಚರಂಗಳೆಲ್ಲವೂ ಹುಟ್ಟಿದವು. ಇಂತಿವೆಲ್ಲವು ಶಿವನ ನೆನಹುಮಾತ್ರದಿಂದಲಾದವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಡಜ ಸ್ವೇದಜ ಉದ್ಭಿಜ ಜರಾಯುಜ ಈ ನಾಲ್ಕು ಯೋನಿಗಳಲ್ಲಿ ಬರುತ್ತಿಹ ಅನಂತಕೋಟಿ ಜೀವ ಸತ್ತ ಪಾಪವು [ವಿಧಿಯ] ತಾಗೂದೆ ಅಯ್ಯಾ ? (ಕಾರ್ಮೇಘ ಗಗನದಿಂದ ಸುರಿಯಲು ಭೂಮಿ ಜರ್ಜರಿತವಾಗಿ ಹಳ್ಳ ಕೊಳ್ಳ ಕೆರೆ ತುಂಬಿ ದಶದಿಕ್ಕುಗಳೆಲ್ಲ ಭರಿತಂಗಳಾಗಿ ಪುರಂಗಳ ಪೊಗಲು ಅನಂತಕೋಟಿ ಜೀವ ಸತ್ತ ಪಾಪವು ಮೇಘಂಗಳಿಗೆ ತಾಗೂದೆ ಅಯ್ಯಾ?) ಕಾನನದಡವಿಯೊಳಗೆ ಒಂದೊಂದು ಕಾಡುಗಿಚ್ಚು ಹುಟ್ಟಿ ಧಿಗಿಲು ಭುಗಿಲೆಂದು ಉರಿ ಸುಳಿಗೊಂಡಟ್ಟಿ ಸುಡುವಲ್ಲಿ ಅನಂತಕೋಟಿ ಜೀವ ಸತ್ತ ಪಾಪವು ಹುತವಹನ ತಾಗೂದೆ ಅಯ್ಯಾ ? ದೆಸೆದಿಕ್ಕುಗಳು ಭರಿತವಾಗಿ ಪವನನಲ್ಲಿಯೆ ಬಲಿದು ಬ್ರಹ್ಮಾಂಡವ ಮುಟ್ಟಿ ಮಲೆತು ಬೀಸುವಲ್ಲಿ ಅನಂತಕೋಟಿ ಜೀವಗಳು ಸತ್ತ ಪಾಪವು ಪವನನ ತಾಗೂದೆ ಅಯ್ಯಾ ? ಧರೆಹತ್ತಿ ಉರಿದು ಬ್ರಹ್ಮಾಂಡವ ತಾಗಲು ಕೆಂಡದ ಮಳೆ ಸುರಿಯಲು ಸುರರ ಅಸುರರ ಎಲ್ಲಾ ಭುಗಿಲು ಭುಗಿಲುಯೆಂದು ಉರಿಯೆಯ್ದೆ ತಾಗಲ್ಕೆ ವಿಶೇಷ ಪಾಪವು ಗಗನವ ತಾಗೂದೆ ಅಯ್ಯಾ ? ಪೃಥ್ವಿ ಅಪ್ಪು, ತೇಜ, ವಾಯು, ಆಕಾಶ, ಸೂರ್ಯ, ಚಂದ್ರ ಆತ್ಮ ಈ ಅಷ್ಟತನುಮೂರ್ತಿಗಳು ನಷ್ಟವಾದ ಪಾಪ ಸದಾಶಿವನ ತಾಗೂದೆ ಅಯ್ಯಾ ? ಉತ್ಪತ್ತಿ, ಸ್ಥಿತಿ, ಲಯ ಕಾಲಕಲ್ಪಿತನಲ್ಲ ಪ್ರಳಯರಹಿತ ಕೂಡಲಚೆನ್ನಸಂಗಾ ನಿಮ್ಮ ಶರಣ
--------------
ಚನ್ನಬಸವಣ್ಣ
-->