ಅಥವಾ

ಒಟ್ಟು 44 ಕಡೆಗಳಲ್ಲಿ , 15 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊಲೆ ಬಿದ್ದು, ಮುಡಿ ಸಡಲಿ, ಗಲ್ಲ ಬತ್ತಿ, ತೋಳು ಕಂದಿದವಳ ಎನ್ನನೇಕೆ ನೋಡುವಿರಿ ಎಲೆ ಅಣ್ಣಗಳಿರಾ ? ಕುಲವಳಿದು ಛಲವಳಿದು ಭವಗೆಟ್ಟು ಭಕ್ತೆಯಾದವಳ, ಎನ್ನನೇಕೆ ನೋಡುವಿರಿ ಎಲೆ ತಂದೆಗಳಿರಾ ? ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದು ಛಲವಳಿದವಳನು.
--------------
ಅಕ್ಕಮಹಾದೇವಿ
ಎನಗೇಕಯ್ಯಾ? ನಾ ಪ್ರಪಂಚಿನ ಪುತ್ಥಳಿ. ಮಾಯಿಕದ ಮಲಭಾಂಡ, ಆತುರದ ಭವನಿಳಯ. ಜಲಕುಂಭದ ಒಡೆಯಲ್ಲಿ ಒಸರುವ ನೆಲೆವನೆಗೇಕಯ್ಯಾ ? ಬೆರಳು ತಾಳಹಣ್ಣ ಹಿಸುಕಿದಡೆ ಮೆಲಲುಂಟೆ ? ಬಿತ್ತೆಲ್ಲಾ ಜೀವ ಅದರೊಪ್ಪದ ತೆರ ಎನಗೆ. ಎನ್ನ ತಪ್ಪನೊಪ್ಪಗೊಳ್ಳಿ, ಚೆನ್ನಮಲ್ಲಿಕಾರ್ಜುನದೇವರದೇವ ನೀವೆ ಅಣ್ಣಗಳಿರಾ.
--------------
ಅಕ್ಕಮಹಾದೇವಿ
ಕೈಯ ಧನವ ಕೊಂಡಡೆ, ಮೈಯ ಭಾಷೆಯ ಕೊಳಬಹುದೆ ? ಉಟ್ಟ ಉಡುಗೆಯ ಸೆಳೆದುಕೊಂಡರೆ, ಮುಚ್ಚಿ ಮುಸುಕಿದ ನಿರ್ವಾಣವ ಸೆಳೆಯಬಹುದೆ ? ನೋಡುವಿರಿ ಎಲೆ ಅಣ್ಣಗಳಿರಾ, ಕುಲವಳಿದು ಛಲವಳಿದು ಭವಗೆಟ್ಟು ಭಕ್ತೆಯಾದವಳ. ಎನ್ನನೇಕೆ ನೋಡುವಿರಿ ಎಲೆ ತಂದೆಗಳಿರಾ, ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದು ಛಲವುಳಿದವಳನು.
--------------
ಅಕ್ಕಮಹಾದೇವಿ
ಆಕಾರವೇ ಭಕ್ತ ನಿರಾಕಾರವೇ ಮಹೇಶ್ವರ ಸಹಕಾರವೇ ಪ್ರಸಾದಿ ಸನ್ಮತ ಈಗಲೇ ಪ್ರಾಣಲಿಂಗಿ ಲೋಕವಿರಹಿತನೇ ಶರಣ ಈ ಭ್ರಾಂತುವಿನ ಬಲೆಯೊಳಗೆ ಸಿಲುಕದಾತನೇ ಐಕ್ಯ. ಅದು ಎಂತು ಎಂದರೆ : ಪೃಥ್ವಿ ಈಗಲೇ ಭಕ್ತ ಅಪ್ಪು ಈಗಲೇ ಮಹೇಶ್ವರ ಅಗ್ನಿ ಈಗಲೇ ಪ್ರಸಾದಿ ವಾಯು ಈಗಲೇ ಪ್ರಾಣಲಿಂಗಿ ಆಕಾಶ ಈಗಲೇ ಶರಣ ಈ ಪಂಚತತ್ವದ ಒಳಗೆ ಬೆಳಕು ಕತ್ತಲೆ ಐಕ್ಯವು. ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯಾ ನಿಮ್ಮ ಶರಣ ಪಂಚತತ್ವದ ಒ?ಗೆ ಪಂಚತತ್ವ ಪಂಚತತ್ವ ಎಂಬ ಅಣ್ಣಗಳಿರಾ ನೀವು ಕೇಳಿರೊ.
--------------
ಚನ್ನಬಸವಣ್ಣ
ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ ಅಣ್ಣಗಳಿರಾ, ನೀವು ಕೇಳಿರೊ. ಅವರ ಬಾಳುವೆ ರಿಂತೆಂದಡೆ; ಕುರುಡ ಕನ್ನಡಿಯ ಹಿಡಿದಂತೆ. ತನ್ನ ಒಳಗೆ ಮರೆದು ಇದಿರಿಂಗೆ ಬೋಧೆಯ ಹೇಳಿ, ಉದರವ ಹೊರೆವ ಚದುರರೆಲ್ಲರೂ ಹಿರಿಯರೆ ? ಅಲ್ಲಲ್ಲ. ಇದ ಮೆಚ್ಚುವರೆ ನಮ್ಮ ಶರಣರು ? ಅವರ ನಡೆ ಎಂತೆಂದಡೆ: ಒಳಗನರಿದು, ಹೊರಗ ಮರೆದು, ತನುವಿನೊಳಗಣ ಅನುವ ಹಸುಗೆಯ ಮಾಡಿದರು. ಪೃಥ್ವಿಗೆ ಅಪ್ಪುವಿನ ಅಧಿಕವ ಮಾಡಿದರು. ಅಗ್ನಿಯ ಹುದುಗಿದರು, ವಾಯುವ ಬೀರಿದರು, ಆಕಾಶದಲ್ಲಿ ನಿಂದರು, ಓಂಕಾರವನೆತ್ತಿದರು; ಅದರೊಡಗೂಡಿದರು. ಕಾಣದ ನೆಲೆಯನರಿದರು; ಪ್ರಮಾಣವನೊಂದುಗೂಡಿದರು. ಮಹಾಬೆಳಗಿನಲ್ಲಿ ಓಲಾಡುವ ಶರಣರ ವಾಗ್ಜಾಲವಕಲಿತುಕೊಂಡು ನುಡಿವ ಕಾಕುಮನುಜರೆತ್ತ ಬಲ್ಲರು ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಾವು ಪ್ರಾಣಲಿಂಗಿಗಳೆಂದು ಹೇಳುವ ಅಣ್ಣಗಳಿರಾ, ನೀವು ಪ್ರಾಣಲಿಂಗಿಗಳು ಎಂತಾದಿರಿ ಹೇಳಿರಣ್ಣ? ಅರಿಯದಿರ್ದಡೆ ಕೇಳಿರಣ್ಣ, ಪ್ರಾಣಲಿಂಗವಾದ ಭೇದಾಭೇದವ. ಕಾಯದ ಕಳವಳದಲ್ಲಿ ಕೂಡದೆ, ಮನದ ಭ್ರಾಂತಿಗೊಳಗಾಗದೆ, ಕರಣಂಗಳ ಮೋಹಕ್ಕೀಡಾಗದೆ, ಪ್ರಾಣನ ಪ್ರಪಂಚಿನಲ್ಲಿ ಬೆರೆಯದೆ, ಜೀವನ ಬುದ್ಧಿಯಲ್ಲಿ ಮೋಹಿಸದೆ, ಹಂಸನ ಆಸೆಗೊಳಗಾಗದೆ ನಿಷ್ಪ್ರಪಂಚಿಯಾಗಿ, ಗುರುಲಿಂಗಜಂಗಮದ ಪಾದೋದಕಪ್ರಸಾದದಲ್ಲಿ ಅತಿಕಾಂಕ್ಷೆವುಳ್ಳಾತನಾಗಿ, ತ್ರಿವಿಧಲಿಂಗದಲ್ಲಿ ಸೂಜಿಗಲ್ಲಿನಂತೆ, ಎರಕತ್ವವುಳ್ಳಾತನಾಗಿಪ್ಪಾತನೆ ಲಿಂಗಪ್ರಾಣಿ ನೋಡಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಶಿವಯೋಗಿ ಶಿವಯೋಗಿ ಎಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಅಂಗಕುಳ ಒಳಗೊಂಡು ಕಾಮಿನಿಯರ ಬೆಳೆದ ಹೊಲನ ಹೊಕ್ಕು ಕೂಡಿಸಿ ತಿಂಬುವ ಪಶುವಿನ ನಾಲ್ಕು ಕಾಲನು ಮುರಿದು, ಘಟ್ಟವೆಂಬ ಗವಿಯೊಳಗೆ ಮನದ ದಿಟ್ಟವೆಂಬ ಗೂಟಕ್ಕೆ ಕಟ್ಟಿ, ತನುವೆಂಬ ಗಿರಿಗಹ್ವರದೊಳಗೆ ಬೆಳೆದಿದ್ದ ನಾನಾ ಪರಿಪರಿಯ ಗಿಡ, ಕಸಾದಿಗಳೆಲ್ಲವ ಭಾನುವೊಲು ಮಂತ್ರದಿಂದ್ಹಲ್ಲ ಕಿತ್ತು ಸುಟ್ಟು ಬೂದಿಯನು ಮಾಡಿ ಸರ್ವಕ್ಕೆಲ್ಲ ಪಣಮಾಡಿಕೊಂಡು ಇರಬಲ್ಲರೆ, ಹಲವು ಕಡೆಗೆ ಹರಿದಾಡುವಂತೆ ಮನವನೆಲ್ಲ ನೆಲೆಗೊಳಿಸಿ ನಿಲಿಸಿದಂತಾ ಮಹಿಮನ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೊ ! ನಿಮ್ಮ ಅಂಗ ಗುರುಕೊಟ್ಟ ಅರಿವಿನ ಅರಿವೆಯನು ಬಿಟ್ಟು, ಮರವಿನ ಮನೆಯೊಳಗೆ ಮೂರ್ಛೆಗೈದರೆ, ನಿಮ್ಮನ್ನು ಹರಕೊಂಡು ತಿಂದೆನೆಂದು ಬರುವ ಕಾಳೋರಗನೆಂಬ ಸರ್ಪನ ಉತ್ತರದ ಬಾಯ ಮುಚ್ಚಿ ನವದ್ವಾರಂಗಳನ್ನೆಲ್ಲ ಹೊಲಿದು, ಒಂಬತ್ತು ಬಾಗಿಲಿಗೆ ಬೀಗಮುದ್ರೆಯ ಮಾಡಿ, ತುಂಬಿದಾ ಕುಂಭದೊಳಗಿನ ಉದಕದಂತೆ ಇರಬಲ್ಲರೆ ಅಂತಹವನಿಗಾ ಕಾಲನ ಬಾಧೆಯ ಗೆಲಿದಂಥ ಮಹಿಮನೆಂದೆನ್ನಬಹುದು ಕಾಣಿರೊ! ನಿಮ್ಮಂಗ ಆಧಾರವೆಂಬ ಗದ್ದಿಗೆಯ ಮೇಲೆ ಪದ್ಮಾಸನವೆಂಬ ಪವನಗ್ರಂಥಿಯ ಹೊಲಿದು, ನಿರ್ಮಳ ಸುಚಿತ್ತದಲ್ಲಿ ಮೂರ್ತವನು ಮಾಡಿಕೊಂಡು, ಪೂರ್ವದಿಕ್ಕಿನಲ್ಲಿ ಮುಖವನಿಕ್ಕಿ ಪಂಚಮಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ, ಅಡರೇರಿ ಬರುವ ಸಿಡಿಲು ಮಿಂಚಿನ ಅವಸ್ಥೆ ಶೌರ್ಯವನು ಕಂಡು, ಪಶ್ಚಿಮಕ್ಕೆ ಮುಖವ ತಿರುವಿ ಪೂರ್ವಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ ಭಾನುವಿನ ಸಮೀಪದಲ್ಲಿ ಇದ್ದ ಬಯಲಿಗೆ ಬಯಲು ಆಕಾರಗೆಟ್ಟ ಪುರುಷನ ನಿಲವು ನಿಧಾನವ ನೋಡಿಕೊಂಡು ಸರ್ವಮುನಿಜನಂಗಳಿಗೆಲ್ಲ ಅರ್ತಿಯನು ಮಾಡಿ ಹೇಳಿ ನಿರ್ಮಾಯವಾಗಿ ಹೋಗಬಲ್ಲರೆ ಆತನಿಗಾ ಮರಣಕ್ಕೆ ವಿಧಿಹಿತನಾದಂಥ ಮಹಾಮಹೇಶ್ವರನೆಂದೆನ್ನಬಹುದು ಕಾಣಿರೊ ! ಇಂತು ಇದನರಿಯದೆ ಯೋಗಿ ಶ್ರವಣ ಸನ್ಯಾಸಿ ಕಾಳಾಮುಖಿ ಪಾಶುಪತಿಗಳೆಂಬ ಹೆಸರಿಟ್ಟುಕೊಂಡು ದೇಶವ ತಿರುಗುವ ಶಿವಯೋಗಿಗಳೆಂಬುವ ಮೋಸ ಡಂಬಕರ ಕುಟಿಲಗಳ ಕಂಡು ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಶಿವಯೋಗಿ ಶಿವಯೋಗಿಯೆಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಧ್ಯಾನಮೂಲವೆಂಬ ಮನೆಯ ಪೂರ್ವಸ್ಥಾನ ಬಾಗಿಲೊಳಗೆ ಬರುವ ಭಾನುವಿನ ಬಟ್ಟೆಯ ಬೆಳಕಿನಲ್ಲಿ ನಿಂದು, ಶ್ರೀರಾಮ ರಾಮನೆಂಬುವ ಸ್ಮರಣೆಯನು ಮಾಡಬಲ್ಲರೆ ಆತನಿಗೆ ತನ್ನ ಕಾಯಪುರವೆಂಬ ಪಟ್ಟಣದೊಳಗೆ ಮೇಲುದುರ್ಗದೊಳಗಿರ್ದು ಅರಸಿನ ದಾಳಿಯನು ಮಾಡಿ ಕೊಳುಕೊಂಡು ಹೋದನೆಂದು ಬರುವ ಕಾಲನ ಪರಿವಾರವ ಕಂಡು, ಮೇಲುದುರ್ಗದೊಳಗಿರ್ದ ಅರಸಿನ ವಲಯಂ ಬಿಟ್ಟು, ಪಟ್ಟಣವ ಹಾಳಕೆಡವಿ ಗೋಳಿಟ್ಟ ಅರಸನಂತೆ, ಬಯಲಿಗೆ ಬಯಲು ಆಕಾರದಲ್ಲಿ ನಿಂದು, ಬರುತ್ತಲಾ ಪರಿವಾರವನ್ನು ಕಂಡು, ಕಾದಿ ಜಗಳವನು ಕೊಟ್ಟು ಹಿಂದಕ್ಕೆ ನೂಕಿ, ಪರಾಲಯದೊಳಗಿರ್ದ ಅರಸನನ್ನು ಮೇಲುದುರ್ಗಕ್ಕೆ ತಂದು ಇಂಬಿಟ್ಟು ಹಾಳ ಪಟ್ಟಣವನ್ನು ತುಂಬಿಸಿ ಮೇಳೈಸಿ ಮನೆಯ ಬಂಧು ದಾಯಾದರೆಲ್ಲರು ಆತಂಗೆ ಕಾಲವಂಚನೆಗೆ ಗೆಲಿದಂಥ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ಇಂತು ಕಾಯದ ಕೀಲನೆ ಅರಿಯದೆ, ಕಾಲವಂಚನೆಗೆ ಒಳಗಾಗಿ, ನಾನು ಶಿವಯೋಗಿ ಶಿವಯೋಗಿಯೆಂದು ಹೆಸರಿಟ್ಟುಕೊಂಡು ಒಬ್ಬರಿಗೊಬ್ಬರು ಗುರೂಪದೇಶವ ಕೊಟ್ಟು, ಉರಿಯ ಸೋಂಕಿದ ಕರ್ಪುರದ ಧೂಪದಂತೆ ಇರಬೇಕೆಂದು, ಹೆಂಡಿರ ಬಿಟ್ಟು ಮಕ್ಕಳ ಬಿಟ್ಟು ಮಂಡೆಯನು ಬೋಳಿಸಿಕೊಂಡು ಮನದ ನಿಲುಗಡೆಯನರಿಯದ ಗೂಬೆಗಳು ಕಾವಿಯ ಅರಿವೆಯನು ಹೊದ್ದುಕೊಂಡು, ದೇವರೊಳಗೆ ದೇವರೆಂದು ಪೂಜೆಗೊಂಡು, ಮಠ ಮನೆಯಲ್ಲಿ ಬಸಲ ಪರ್ಯಾದಿಯಲ್ಲಿ ನಿಂದು, ಬೋನದಾಸೆಗೆ ಜ್ಞಾನಬೋಧೆಯನು ಹೇಳುವ ಗುರುವಿನ ಬ್ರಹ್ಮಕಲ್ಪನೆಯ ಮನ ತುಂಬಿ ಬಿರಿಕಿಕ್ಕಿ ಹೋಗುವಾಗ, ಕಾಲನವರು ತಮ್ಮ ಪತ್ರವನು ನೋಡಿಕೊಂಡು ಬಂದು ಹೋಗಲಿತ್ತ ಕಲಿತ ವಿದ್ಯೆ ಕೈಕಾಲನು ಹಿಡಿದು ಎಳಕೊಂಡು ಹೋಗುವಾಗ ಗಟ್ಟಿನೆಲಕ್ಕೆ ಬಿದ್ದು ಕೆಟ್ಟೆ ಕೆಟ್ಟೆ ಸತ್ತೆ ಸತ್ತೆ ಎಂದು ಹಲ್ಲು ಗಂಟಲ್ಹರಕೊಂಡು ಹೋಗುವಂಥ ಶಿವಯೋಗಿಗಳೆಂಬ ಕುಟಿಲರ ಕಂಡು ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ನಾವು ಲಿಂಗೈಕ್ಯ, ಲಿಂಗಾನುಭಾವಿಗಳೆಂದು ಹೇಳುವ ಅಣ್ಣಗಳಿರಾ ನೀವು ಲಿಂಗೈಕ್ಯ ಲಿಂಗಾನುಭಾವಿಗಳು ಎಂತಾದಿರಿ ಹೇಳಿರಣ್ಣ. ಅರಿಯದಿರ್ದಡೆ ಗುರುಕೃಪೆಯಿಂದ ಹೇಳಿಹೆನು ಕೇಳಿರಣ್ಣ, ಲಿಂಗೈಕ್ಯ, ಲಿಂಗಾನುಭಾವದ ಭೇದಾದಿಭೇದವ. ಸರ್ವಸಂಗಪರಿತ್ಯಾಗವ ಮಾಡಬೇಕು. ಲೋಕಾಚಾರವ ಮುಟ್ಟದಿರಬೇಕು. ನುಡಿಯಂತೆ ನಡೆ ದಿಟವಾಗಬೇಕು. ಸರ್ವಾಚಾರಸಂಪತ್ತಿನಾಚರಣೆಯ, ಸದ್ಗುರು ಮುಖದಿಂದರಿತು ಆಚರಿಸಬೇಕು. ನಾನಾರು, ನನ್ನ ಜೀವವೇನು, ನಾ ಬಂದ ಮುಕ್ತಿದ್ವಾರವಾವುದು? ನಾ ಹೋಗುವ ನಿಜಕೈವಲ್ಯಪದವಾವುದು? ನನ್ನಿರವೇನೆಂದು ಅರಿದಾಚರಿಸಬಲ್ಲಾತನೆ, ನಿಜಲಿಂಗೈಕ್ಯ ಲಿಂಗಾನುಭಾವಿ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ನಾವು ಸದ್ವೀರಮಾಹೇಶ್ವರರೆಂದು ಹೇಳುವ ಅಣ್ಣಗಳಿರಾ ನಿಮ್ಮ ವೀರಮಾಹೇಶ್ವರತ್ವದ ಕುರುಹ ಹೇಳಿರಣ್ಣ. ಅರಿಯದಿರ್ದಡೆ ಸದ್ವೀರಮಾಹೇಶ್ವರತ್ವದ ಕುರುಹ ಕೇಳಿರಣ್ಣ. ಪಂಚಮಹಾಪಾತಕಂಗಳ ಬೆರಸದೆ, ಪೂರ್ವವಳಿದು ಪುನರ್ಜಾತರಾದ ಸದ್ಭಕ್ತರಲ್ಲಿ ಪಂಚಸೂತಕಂಗಳ ಕಲ್ಪಿಸದೆ, ಪಂಚಾಚಾರಂಗಳ ಭೇದಿಸಿ, ಅನಾಚಾರಂಗಳ ಸಂಹರಿಸಿ, ತನ್ನ ನಿಜಚಿತ್ಕಳೆಗಳ ತೋರಿಸಿ, ಅವರ ಗೃಹವ ಪೊಕ್ಕು, ಪಾದೋದಕಪ್ರಸಾದವ ಕೊಟ್ಟು ಕೊಳಬಲ್ಲಾತನೆ ಸದ್ವೀರಮಾಹೇಶ್ವರ ನೋಡಾ. ಕಲಿದೇವರದೇವಾ
--------------
ಮಡಿವಾಳ ಮಾಚಿದೇವ
ಪಾದೋದಕವ ಕೊಂಡೆವೆಂಬ ಅಣ್ಣಗಳಿರಾ, ನೀವು ಕೇಳಿರೊ. ಪಾದೋದಕದ ನಿಲವ ನೀವು ಬಲ್ಲರೆ ಹೇಳಿರೊ. ಅರಿಯದಿರ್ದರೆ ಕೇಳಿರೊ. ಅದೆಂತೆಂದಡೆ: 'ಪಾ'ಕಾರವೆ ಪರಾತ್ಪರ ನಾಮವುಳ್ಳುದು, ಪರಬ್ರಹ್ಮವು ಪರಮಾನಂದ ಸ್ವರೂಪವು. 'ದೋ'ಕಾರವೆ ದಯದೋರಿತ್ತುವೆಂಬ ನಾಮವನ್ನುಳ್ಳ ದುರಿತ ವಿನಾಶನವು. 'ದ'ಕಾರವೆ ದಶದಿಶಭರಿತ ಪೂರ್ಣಚಿದಾಂಬುಧಿಯ ಪರಮಜ್ಞಾನವ ತೋರಿತ್ತು. 'ಕ'ಕಾರವೆ ಕರ್ಮವಿನಾಶನವೆನಿಸಿತ್ತು. ಇಂತಪ್ಪ ಪಾದೋದಕವ ನೀಡಿದಾತನೆ ಗುರುಲಿಂಗಜಂಗಮವೆನಿಸಬಹುದು; ಕೊಂಡಾತ[ನೆ] ಸದ್ಭಕ್ತನೆನಬಹುದು. ಇಂತೀ ಭೇದಾಭೇದವನರಿದು ಕೊಟ್ಟು ಕೊಂಡುದುದಕ್ಕೆ ಕಾಯಶುದ್ಧ, ಕರಣಶುದ್ಧ, ಜೀವಶುದ್ಧ, ಭಾವಶುದ್ಧ. ಈ ಚತುರ್ವಿಧ ಶುದ್ಧವಾಯಿತ್ತೆಂದಡೆ, ಕಾಯ ಸುದ್ಧಪ್ರಸಾದವಾಯಿತ್ತು, ಕರಣ ಸಿದ್ಧಪ್ರಸಾದವಾಯಿತ್ತು. ಜೀವ ಪ್ರಸಿದ್ಧಪ್ರಸಾದವಾಯಿತ್ತು, ಭಾವ ಪರಾತ್ಪರಪ್ರಸಾದವಾಯಿತ್ತು. ಈ ಚತುರ್ವಿಧ ಶುದ್ಧವ ಮಾಡಿದಾತ ನಿಮ್ಮ ಶರಣ. ಹೀಗಲ್ಲದೆ ಜಲವ ತೊಳೆದು ಕುಡಿವ ಮಲದೇಹಿಗಳ ಮುಖವ ನೋಡಲಾಗದಯ್ಯಾ. ಇದಕ್ಕೆ ಸಾಕ್ಷಿ: 'ಪಾಕಾರಂ ಪರಮಾನಂದಂ ದೋಕಾರಂ ದೋಷನಾಶನಂ | ದಕಾರಂ ದಹತೇ ಜನ್ಮ ಕಕಾರಂ ಕರ್ಮbs್ಞೀದನಂ ||' ಎಂದುದು, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವಿನ ವಚನವು.
--------------
ಚೆನ್ನಯ್ಯ
ಕುಲದಿಂದಧಿಕವೆಂದು ಹೋರಾಡುವ ಅಣ್ಣಗಳಿರಾ, ಕೇಳಿರಯ್ಯಾ. ಬ್ರಾಹ್ಮಣನವ ಮಧುವಯ್ಯ, ಚಂಡಾಲನವ ಹರಳಯ್ಯ, ದೂರ್ವಾಸನವ ಮಚ್ಚಿಗ, ಊರ್ವಶಿಯಾಕೆ ದೇವಾಂಗನೆ, ಚಂಡಾಲನವ ಪರಾಶರ, ಕುಸುಮಗಂಧಿಯಾಕೆ ಕಬ್ಬಿಲಗಿತ್ತಿ. `ಜಪತಸ್ತಪತೋ ಗುಣತಃ' ಕಪಿಲಸಿದ್ಧಮಲ್ಲಿಕಾರ್ಜುನಾ ಕೇಳಾ, ಕೇದಾರಯ್ಯ.
--------------
ಸಿದ್ಧರಾಮೇಶ್ವರ
ಲಿಂಗಾಂಗಿಗಳೆಂದು ಒಪ್ಪವಿಟ್ಟು ನುಡಿದ ಅಣ್ಣಗಳಿರಾ ನೀವು ಲಿಂಗಾಂಗಿಗಳೆಂತಾದಿರಿ ಹೇಳಿರಣ್ಣ. ಅರಿಯದಿರ್ದಡೆ ಕೇಳಿರಣ್ಣ, ಅಂಗ ಲಿಂಗವಾದ ಭೇದವ. ಪರದೈವವ ನೆನೆಯದೆ, ಪರಸ್ತ್ರೀಯರ ಮುಟ್ಟದೆ, ಪರದ್ರವ್ಯವ ಅಪಹರಿಸದೆ, ಪರನಿಂದ್ಯವ ಮಾಡದೆ, ಪರಹಿಂಸೆಗೊಡಂಬಡದೆ, ಪರಪಾಕವ ಮುಟ್ಟದೆ, ಪರವಾದವ ಕಲ್ಪಿಸದೆ, ಪರಾತ್ಪರವಾದ ಸತ್ಯಶುದ್ಧ ಕಾಯಕವ ಮಾಡಿ, ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರಿಗೆ ಅತಿಭೃತ್ಯರಾಗಿ ಆಚರಿಸುವರೆ ಲಿಂಗಾಂಗಿಗಳು ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಜ್ಞಾನವೆಂದು ವಿವಾದಿಸುವ ಅಣ್ಣಗಳಿರಾ, ಕೇಳಿರಯ್ಯಾ: ಜ್ಞಾನವೆಂದಡೆ ಮಹತ್ವಗಳ ಮಾಡಿ ಮೆರೆದುದು ಜ್ಞಾನವೆ? ಅಲ್ಲಲ್ಲ. ಜ್ಞಾನವೆಂದಡೆ ಸ್ವರ್ಗದ ವಾರ್ತೆಯ ಕೇಳಿ ಕೀರ್ತಿಯ ಹಬ್ಬಿದುದು ಜ್ಞಾನವೆ? ಅಲ್ಲಲ್ಲ. ಜ್ಞಾನವೆಂದಡೆ ತತ್ಕಾಲಕ್ಕಾಗುವ ಸುಖದುಃಖಗಳ ಹೇಳಿದುದು ಜ್ಞಾನವೆ? ಅಲ್ಲಲ್ಲ. ಇವೆಲ್ಲಾ ಸಾಧನೆಯ ಮಾತು. ಅಘೋರಮುಖದಿಂದ ಹುಟ್ಟಿದ ಮಂತ್ರಂಗಳೆಲ್ಲಾ, ಜಪಿಸಿದಲ್ಲಿ ಮಹತ್ವಗಳಾದವು. ಸೂಕ್ಷ್ಮತಂತ್ರವ ಗಣಿಸಿದಲ್ಲಿ ಸ್ವರ್ಗದ ವಾರ್ತೆಯ ಹೇಳಿದನು. ಪ್ರಸಂಗಚಿಂತಾಮಣಿಯ ನೋಡಿ ಸುಖದುಃಖಂಗಳ ಹೇಳಿದನು. ಇವೆಲ್ಲಾ ಪರಸಾಧನೆಯಯ್ಯಾ. ನಿನ್ನರಿವು ಕೈಕರಣವಾಗಿರೆ ದೇಹವಳಿದಡೇನು, ದೇಹ ಧರಿಸಿ ಬಂದಡೇನು? ಎಲೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಸಪ್ತಪಾತಾಳದಿಂದ ಅತ್ತತ್ತವಿತ್ತು, ಮುಂದೆ ಭುವನದ ಮೂಲವ ತಿಳಿದು ಗುಪ್ತಮಂಡಲವೆಂಬ ಹುತ್ತದೊಳಗೆ ಇರ್ದ ಘಟಸರ್ಪದ ಅಡಿಯ ಮೇಲಕ್ಕೆ ಮಾಡಿ, ಒಡನೆ ನಿಲಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮಂದಿರದ ಮನೆಯೊಳಗೆ ಇದ್ದುಕೊಂಬ, ತನ್ನ ತಲೆಕೆಳಗಾಗಿ ಪಾದ ಮೇಲಾಗಿ ಉಧೋ ಎಂದು ಅರ್ತು ಗುರ್ತವಿಟ್ಟು ಆಳಬಲ್ಲರೆ ಆತನಿಗೆ ಮಹಾಶಿವಜ್ಞಾನಿ ಎಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಸ್ವರ್ಗ ಮತ್ರ್ಯ ಪಾತಾಳ, ಈರೇಳು ಭುವನ, ಹದಿನಾಲ್ಕುಲೋಕ, ಪಂಚಶತಕೋಟಿ ಭುವನದ ವಿಸ್ತಾರವನ್ನೆಲ್ಲ ತನ್ನ ಅಂತರಂಗದೊಳಗೆ ನೋಡಿಕೊಂಡು, ಹೊರಗೆ ಶಿವಶಾಸ್ತ್ರ ಆಗಮ ಪುರಾಣಂಗಳ ನಿರ್ಮಿತವ ಮಾಡಿ, ಇರಬಲ್ಲರೆ ಆತನಿಗೆ ಉತ್ತಮ ಶಿವಕವೀಶ್ವರ ಎಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ನಾಲ್ಕು ದಿಕ್ಕಿನ ಮೂಲವ ತಿಳಿದು ಘಟಿಕಾಸ್ಥಾನವೆಂಬ ಒಂದಾಸನವ ಬರೆದು, ಎಂಬತ್ನಾಲ್ಕು ಆಸನದ ಭೇದದ ಗುಣಾವಗುಣಗಳೆಲ್ಲಾ ಒಂದೇ ಆಸನದಲ್ಲಿ ತಿಳಿದು, ಸತ್ಯವ ಹಿಡಿದು, ನಿತ್ಯನಾಗಿರಬಲ್ಲರೆ ಆತ ತನಗೆ ಬಂದಂತಹ ಮೂನ್ನೂರರವತ್ತು ಕಂಟಕಗಳನ್ನೆಲ್ಲ ಬಡಬಾಗ್ನಿಯ ಕಿಚ್ಚಿನಲ್ಲಿ ಸುಟ್ಟು, ಬೂದಿಯನು ಗಂಗೆಯ ಕೂಡಿಸಿ, ಲಿಂಗಾಂಗಿಯಾಗಿರಬಲ್ಲರೆ ಆತನಿಗೆ ಸ್ನಾನ ನೇಮ ಸಂಧ್ಯಾವಂದನ ಜಪ ಗಾಯತ್ರಿ ಸಪ್ತಗಾಯತ್ರಿಗಳ ಸ್ಥಾನಸ್ಥಾನದಲ್ಲಿ ನುಡಿದು ಪ್ರಾಣಲಿಂಗದ ದರುಶನವಾಗಿರಬಲ್ಲರೆ, ಆತನಿಗೆ ಅನಂತಕಾಲ ಚಕ್ರವ ಗೆಲಿದಂತಹ ಅಖಂಡಪರಿಪೂರ್ಣ ಮಹಾಮಹಾದೇವರೆಂದೆನ್ನಬಹುದು ಕಾಣಿರೋ. ಇಂತು ತಮ್ಮ ಅಂತರಂಗದೊಳಗಿದ್ದ ಕುಲಭಕ್ತನ ಭೇದವನರಿಯದೆ, ನರಕವಿ ವರಕವಿಗಳು ಹಲವು ಶಾಸ್ತ್ರ ಆಗಮ ಪುರಾಣಗಳ ಓದಿ, ಬಹುಮಾತುಗಳ ಕಲಿತು, ಬಂದ ಬರವು ನಿಂದ ನಿಲವು ತಡಿಯನರಿಯದೆ, ಒಂದೊಂದನೆ ಪದ ಪದ್ಯವನು ಮಾಡಿ, ಆಸ್ಥಾನದ ಸಭೆಯೊಳಗೆ ಕುಳಿತುಕೊಂಡು ಹಾಡಿ ಪಾಡುವಂತಹ ಕವಿಗಳೆಂಬ ಕತ್ತೆಗಳ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಇನ್ನಷ್ಟು ... -->