ಅಥವಾ

ಒಟ್ಟು 36 ಕಡೆಗಳಲ್ಲಿ , 17 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲ್ಪಿತವ ಕಳೆದ, ಅಕಲ್ಪಿತವ ತಿಳುಹಿದ, ಮನವ ಮಾಣಿಸಿ ಘನವ ನೆಲೆಗೊಳಿಸಿದ. ತನುವ ಕೆಡಿಸಿ, ಅನುವ ಸ್ಥಾಪ್ಯವ ಮಾಡಿ, ಅಂತರಂಗದಲ್ಲಿ ಮಹಾಜ್ಞಾನವ ತುಂಬಿದ, ಬಹಿರಂಗದಲ್ಲಿ ಸದಾಚಾರವ ನೆಲೆಗೊಳಿಸಿದ. ನಿಮ್ಮ ನಿಲವನೆನಗೆ ಒರೆದೊರೆದು ಹೇಳಿ ತೋರಿಸಿ, ಎನ್ನ ನಿಮ್ಮ ಶ್ರೀಪಾದಕ್ಕೆ ಯೋಗ್ಯನ ಮಾಡಿದ. ಕೂಡಲಸಂಗಮದೇವಯ್ಯಾ, ನಿಮ್ಮ ಮಹಾಮನೆಯಲ್ಲಿ ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ.
--------------
ಬಸವಣ್ಣ
ಆಚಾರಲಿಂಗವಿಡಿದು ಗುರುಲಿಂಗವ ಕಾಣಬೇಕು. ಗುರುಲಿಂಗವಿಡಿದು ಶಿವಲಿಂಗವ ಕಾಣಬೇಕು. ಶಿವಲಿಂಗವಿಡಿದು ಜಂಗಮಲಿಂಗವ ಕಾಣಬೇಕು. ಜಂಗಮಲಿಂಗವಿಡಿದು ಪ್ರಸಾದಲಿಂಗವ ಕಾಣಬೇಕು. ಪ್ರಸಾದಲಿಂಗವಿಡಿದು ಮಹಾಲಿಂಗವ ಕಾಣಬೇಕು. ಇಂತೀ ಷಡುಸ್ಥಲದ ಧಾತುವ ಸಂಬಂಧಿಸಿ ಒಂದು ಮಾಡಿಕೊಂಡಿಪ್ಪ ಈ ಕರಸ್ಥಲದ ಅನುವ ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ, ಬೆಸಗೊಂಬ ಬಾರಾ ಸಿದ್ಧರಾಮಯ್ಯಾ
--------------
ಅಲ್ಲಮಪ್ರಭುದೇವರು
ದಶವಾಯುಗಳು ಅವಾವೆಂದಡೆ ಹೇಳುವ ಕೇಳಿರಣ್ಣಾ : ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳು. ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ : ಪ್ರಾಣವಾಯು ಇಂದ್ರನೀಲವರ್ಣ, ಹೃದಯಸ್ಥಾನದಲ್ಲಿದ್ದು ಅಂಗುಷ* ತೊಡಗಿ ಪ್ರಾಣಾಗ್ರಪರಿಯಂತರದಲು ಸಪ್ರಾಣಿಸಿಕೊಂಡು ಉಚ್ಛ್ವಾಸ ನಿಶ್ವಾಸಮನೈದು ಅನ್ನ ಜೀರ್ಣಕಾರವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ, ಗುದಸ್ಥಾನದಲ್ಲಿದ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಅಧೋದ್ವಾರಮಂ ಬಲಿದು ಅನ್ನರಸವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷೀರವರ್ಣ, ಸರ್ವಸಂಧಿಯಲ್ಲಿದ್ದು ನೀಡಿಕೊಂಡಿದ್ದುದ ಅನುವಂ ಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯು ಎಳೆಮಿಂಚಿನವರ್ಣ, ಕಂಠಸ್ಥಾನದಲ್ಲಿದ್ದು ಸೀನುವ, ಕೆಮ್ಮುವ, ಕನಸುಕಾಣುವ, ಏಳಿಸುವ ಕಾರ್ಯಗೈದು ವರ್ಧಿಸಿ ರೋಧನಂಗಳಂ ಮಾಡಿಸಿ ಅನ್ನರಸ ಆಹಾರ ಸ್ಥಾಪನಂಗೈಸುತ್ತಿಹುದು. ಸಮಾನವಾಯು ನೀಲವರ್ಣ, ನಾಭಿಸ್ಥಾನದಲ್ಲಿದ್ದು ಅಪಾದಮಸ್ತಕ ಪರಿಯಂತರದಲ್ಲು ಸಪ್ರಾಣಿಸಿಕೊಂಡು ಇದ್ದಂಥ ಅನ್ನರಸವನು ಎಲ್ಲ ರೋಮನಾಳಂಗಳಿಗೆ ಹಂಚಿಹಾಕುತ್ತಿಹುದು. ಇಂತಿವು ಪ್ರಾಣಪಂಚಕವು. ಇನ್ನು ನಾಗವಾಯು ಪೀತವರ್ಣ, ರೋಮನಾಳಂಗಳಲ್ಲಿದ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂರ್ಮವಾಯು ಶ್ವೇತವರ್ಣ, ಉದರ ಲಲಾಟದಲ್ಲಿದ್ದು ಶರೀರಮಂ ತಾಳ್ದು ದೇಹಮಂ ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆಯುತ್ತ ನಯನದಲ್ಲಿ ಉನ್ಮೀಲನಮಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ, ನಾಶಿಕಾಗ್ರದಲ್ಲಿದ್ದು ಕ್ಷುಧಾದಿ ಧರ್ಮಂಗಳಂ ನೆಗಳಿಸಿ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದ ತ್ತವಾಯು ಸ್ಫಟಿಕವರ್ಣ, ಗುಹ್ಯ ಕಟಿಸ್ಥಾನದಲ್ಲಿದ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿದ್ದಲ್ಲಿ ಏಳಿಸಿ, ಚೇತರಿಸಿ, ಒರಲಿಸಿ, ಮಾತಾಡಿಸುತ್ತಲಿಹುದು. ಧನಂಜಯವಾಯು ನೀಲವರ್ಣ, ಬ್ರಹ್ಮರಂಧ್ರಸ್ಥಾನದಲ್ಲಿದ್ದು ಕರ್ಣದಲ್ಲಿ ಸಮುದ್ರಘೋಷವಂ ಘೋಷಿಸುತ್ತಿಹುದು. ಮರಣಕಾಲಕ್ಕೆ ನಿರ್ಘೋಷಮಪ್ಪುದು. ಇಂತಿವು ದಶವಾಯುಗಳು. ನಿನ್ನ ಕಟ್ಟಳೆಯಿಲ್ಲದೆ ಅಂಗದೊಳು ಚರಿಸ್ಯಾಡಲು ಈ ದಶವಾಯುಗಳಿಗಳವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆದಿಯ ಕಂಡೆ, ಅನಾದಿಯ ಕಂಡೆ ಘನವ ಕಂಡೆ, ಮನವ ಕಂಡೆ, ಅನುವ ಕಂಡೆ ಆಯತ ಸ್ವಾಯತ ಸನ್ನಹಿತವ ಕಂಡೆ. ಗುಹೇಶ್ವರಲಿಂಗದಲ್ಲಿ ಬಸವಣ್ಣನ ಕೃಪೆಯಿಂದ, ನಿನ್ನ ಕಂಡೆ ಕಾಣಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ಕಾಂಡಾವಿಯ ಕೀಲ ಬಲ್ಲರೆ, ಮಂದರಾವಿಯ ಅನುವ ಬಲ್ಲರೆ, ಷಣ್ಣಾವಿಯ ಭಾವವ ಬಲ್ಲರೆ, ಕಾಳಾಮುಖದ ನಿಲವ ಬಲ್ಲರೆ, ಕೂಡಲಚೆನ್ನಸಂಗನೆಂಬೆನು.
--------------
ಚನ್ನಬಸವಣ್ಣ
ನಾ ಬಂದ ಹಾದಿಯಲ್ಲಿ ಎಂಬತ್ತು ನಾಲ್ಕು ಲಕ್ಷ ಕಳ್ಳರು ಕಟ್ಟಲಂಜಿದರು. ಮೂರು ಠಾವಿನ ಅನುವ ಮೀರಿದೆ. ಬಂದು ನಿಂದಿರಲಾಗಿ, ಈ ದೇಶದ ಅಂದವೇನೊ ಎಂದು ಕೇಳಿದ, ಗೊಹೇಶ್ವರನ ಶರಣ ಅಲ್ಲಮನು.
--------------
ಗಾಣದ ಕಣ್ಣಪ್ಪ
ಲವಣನಿರಶನದ ಆಯತದ ಭೇದವೆಂತೆಂದಡೆ ; ಕಾರಲವಣ ನಿಷೇಧವೆಂದು ಬಿಟ್ಟು, ಮತ್ತೆ ಬಿಳಿಯ ಲವಣಬಳಸುವುದು. ಬಿಳಿಯಲವಣ ನಿಷೇಧವೆಂದು ಬಿಟ್ಟು ಮತ್ತೆ ಸೈಂಧಲವಣ ಬಳಸುವುದು. ಸೈಂಧಲವಣ ನಿಷೇಧವೆಂದು ಬಿಟ್ಟು, ಮತ್ತೆ ಮೃತ್ತಿಕೆಲವಣ ಬಳಸುವುದು. ಮೃತ್ತಿಕೆಲವಣದಲ್ಲಿ ತಟ್ಟುಮುಟ್ಟು ಕಂಡ ಮತ್ತೆ ಉಪ್ಪೆಂಬ ನಾಮವ ಬಿಟ್ಟಿಹುದೇ ಲೇಸು. ಈ ಅನುವ ನಾನೆಂದುದಿಲ್ಲ, ನಿಮ್ಮ ಅನುವ ನೀವೇ ಬಲ್ಲಿರಿ. ಅನುವಿಗೆ ತಕ್ಕ ವ್ರತ, ವ್ರತಕ್ಕೆ ತಕ್ಕ ಆಚಾರ, ಆಚಾರಕ್ಕೆ ತಕ್ಕ ಖಂಡಿತ. ಆವಾವ ನೇಮದಲ್ಲಿಯೂ ಭಾವ ಶುದ್ಧವಾದವಂಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ತುದಿ ಮೊದಲಿಲ್ಲದ ಘನವ ನೋಡಾ, ಒಳಹೊರಗಿಲ್ಲದಿಪ್ಪ ಅನುವ ನೋಡಾ, ಗುರುಲಿಂಗಜಂಗಮ ತಾನೆಯಾಗಿ, ಮತ್ತೆ ತಾನೆಂಬುದೇನೂ ಇಲ್ಲದ ಪರಿಯ ನೋಡಾ ! ತನ್ನ ತಾನಿರ್ದೆಸೆಯ ಮಾಡಿಕೊಂಡು ನಿಜಪದವನೆಯ್ದಿಪ್ಪ ಪರಿಯ ನೋಡಾ. ಕೂಡಲಚೆನ್ನಸಂಗಮದೇವರಲ್ಲಿ ಪ್ರಸಾದಿಯಾಗಿಪ್ಪ ಮರುಳಶಂಕರದೇವರ ನಿಲವ ನೋಡಾ !
--------------
ಚನ್ನಬಸವಣ್ಣ
ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ ಅಣ್ಣಗಳಿರಾ, ನೀವು ಕೇಳಿರೊ. ಅವರ ಬಾಳುವೆ ರಿಂತೆಂದಡೆ; ಕುರುಡ ಕನ್ನಡಿಯ ಹಿಡಿದಂತೆ. ತನ್ನ ಒಳಗೆ ಮರೆದು ಇದಿರಿಂಗೆ ಬೋಧೆಯ ಹೇಳಿ, ಉದರವ ಹೊರೆವ ಚದುರರೆಲ್ಲರೂ ಹಿರಿಯರೆ ? ಅಲ್ಲಲ್ಲ. ಇದ ಮೆಚ್ಚುವರೆ ನಮ್ಮ ಶರಣರು ? ಅವರ ನಡೆ ಎಂತೆಂದಡೆ: ಒಳಗನರಿದು, ಹೊರಗ ಮರೆದು, ತನುವಿನೊಳಗಣ ಅನುವ ಹಸುಗೆಯ ಮಾಡಿದರು. ಪೃಥ್ವಿಗೆ ಅಪ್ಪುವಿನ ಅಧಿಕವ ಮಾಡಿದರು. ಅಗ್ನಿಯ ಹುದುಗಿದರು, ವಾಯುವ ಬೀರಿದರು, ಆಕಾಶದಲ್ಲಿ ನಿಂದರು, ಓಂಕಾರವನೆತ್ತಿದರು; ಅದರೊಡಗೂಡಿದರು. ಕಾಣದ ನೆಲೆಯನರಿದರು; ಪ್ರಮಾಣವನೊಂದುಗೂಡಿದರು. ಮಹಾಬೆಳಗಿನಲ್ಲಿ ಓಲಾಡುವ ಶರಣರ ವಾಗ್ಜಾಲವಕಲಿತುಕೊಂಡು ನುಡಿವ ಕಾಕುಮನುಜರೆತ್ತ ಬಲ್ಲರು ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಎನ್ನ ಕಂಗಳ ಮುಂದಣ ಕಾಮವ ಕಳೆದು ನಿಮ್ಮ ಮಂಗಳಸ್ವರೂಪವ ತೋರಿಸಯ್ಯ ದೇವಾ. ಎನ್ನ ಮನದ ಮುಂದಣ ಆಸೆಯ ಬಿಡಿಸಿ ನಿಮ್ಮ ಮಂತ್ರದ ನೆನಹ ನೆಲೆಗೊಳಿಸಯ್ಯ ದೇವಾ. ಎನ್ನ ಪ್ರಾಣದ ಮುಂದಣ ಪ್ರಪಂಚವ ಕೆಡಿಸಿ ನಿಮ್ಮ ಪ್ರಸಾದವ ನೆಲೆಗೊಳಿಸಯ್ಯ ದೇವಾ. ಎನ್ನ ತನುವ ಮುಸುಕಿದ ತಾಮಸವ ಕಳೆದು ನಿಮ್ಮ ಭಕ್ತಿಯ ಅನುವ ತೋರಿಸಿ ಬದುಕಿಸಯ್ಯ ದೇವಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೆನಹು ನೆನೆವ ಮನದಲ್ಲಿಲ್ಲ, ತನುವಿನಲ್ಲಿ ಆಸೆಯಿಲ್ಲ. ನೆನೆವ ಮನವನತಿಗಳೆದ ಘನಕ್ಕೆ ಘನವೆಂತೆಂಬೆ ? ತನ್ನಲ್ಲಿ ತಾನಾಯಿತ್ತು, ಭಿನ್ನವಿಲ್ಲದೆ ನಿಂದ ನಿಜವು. ಅನಾಯಾಸದ ಅನುವ ಕಂಡು ಆನು ಬೆರಗಾದೆನಯ್ಯಾ. ಎಂತಿದ್ದುದು ಅಂತೆ ಅದೆ ಚಿಂತೆಯಿಲ್ಲದನುಭಾವ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಆದಿಯನರುಹಿದ, ಅನಾದಿಯ ತೋರಿದ, ಇಹವ ಕೆಡಿಸಿದ, ಪರವ ನಿಲಿಸಿದ, ಘನವ ತೋರಿದ. ಮನವ ಸರಿಸವಿಟ್ಟು ಅನುವ ತೋರಿ ಆಯತವ ಮಾಡಿ ತನುವ ಮರೆಸಿ ಮಹವನರುಪಿದ, ಹಿಂದಣ ಪೂರ್ವಾಶ್ರಯವ ಹಿಂದುಮಾಡಿ ತೋರಿ, ಮುಂದಣ ಗತಿಯ ಸಂದೇಹವ ಬಿಡಿಸಿದ. ಕೂಡಲಸಂಗಮದೇವರಲ್ಲಿ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಬಸವಣ್ಣ
ನೇಮಸ್ಥನೇನು ಬಲ್ಲನಯ್ಯ ಲಿಂಗದ ಕುರುಹ ? ಸೂಳೆಯ ಮಗನೇನು ಬಲ್ಲನಯ್ಯ ತಂದೆಯ ಕುರುಹ ? ಜಂಗಮದ ಅನುವ ತೊತ್ತಿನ ಮಗನೇನು ಬಲ್ಲನಯ್ಯ ? ಇಂತಪ್ಪ ಅಂಗವೇ ಲಿಂಗ, ಲಿಂಗವೇ ಅಂಗ, ಲಿಂಗವೇ ಜಂಗಮವು, ಜಂಗಮವೇ ಲಿಂಗವೆಂದರಿಯದವನ ಭಕ್ತರೆಂದರೆ ಅಘೋರನರಕವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಎಲ್ಲರ ಸಂಗವಲ್ಲಲ್ಲಿಯೆ; ಆ ಎಲ್ಲರೂ ನಿರ್ಲೇಪ ಪ್ರಾಣಿಗಳಾದರಯ್ಯ. ಆ ಎಲ್ಲರ ಮೂರ್ತಿಯ ಅನುವ ಕಂಡು ನಿರ್ಲೇಪ ಪ್ರಸಾದಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಆದಿ ಅನಾದಿಯಿಂದತ್ತತ್ತಲಾದ ಮಹಾಘನಾನಂದಪ್ರಕಾಶಪ್ರಸಾದವ ಕಂಡ ಶರಣಂಗೆ, ಬ್ರಹ್ಮ ವಿಷ್ಣು ಇಂದ್ರಾದಿ ಮನುಮುನಿಗಳ ಅನಿತ್ಯಪದವೊಂದು ತೃಣವಾಗಿಪ್ಪುದು. ಅದೇನು ಕಾರಣವೆಂದೊಡೆ : ಅನಂತ ಗುಣಧರ್ಮದಿಂದಾದ ಸಕಲ ಸಂಭ್ರಮವು, ಅಂತಪ್ಪ ಶರಣ ತನ್ನ ವಿನೋದಕಾರಣ ಲೀಲೆಯನವಧರಿಸಿದನಲ್ಲದೆ, ಮಲಬದ್ಧ ಮೂಢ ವೇಷಧಾರಿ ಪಾಷಂಡಿಗಳಂತೆ ಹೊನ್ನೇ ಪ್ರಾಣ, ಮಣ್ಣೇ ಪ್ರಾಣವಾಗಿ, ಸುಂಬಳದಲ್ಲಿ ಸಿಗಬಿದದ ಮಕ್ಷುಕನಂತೆ ಬಿದ್ದು ಹೋಗಬಂದವನಲ್ಲ. ಮತ್ತೆಂತೆದೊಡೆ : ತನ್ನಂಶೀಭೂತರನರಸುತ್ತ ಅಡಿಗೆರಗಿನಿಂದವರಿಗೆ ಅನುವ ತೋರುತ್ತ, ಘನಮಹಿಮ ಗುರುಚರಶೇಷಾಮೃತವ ಸೇವಿಸುತ್ತ ತನತನಗೆ ಸುಜ್ಞಾನ ಸದ್ಭಕ್ತಿಯಿಂದರಿದು ಬಂದುದ ನೋಡಿ ಪರಮವೈರಾಗ್ಯದಿಂದೆ ಕೈಕೊಂಡು ಪಾವನಸ್ವರೂಪನಾಗಿ ಚರಿಸುವ ನಮ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->