ಅಥವಾ

ಒಟ್ಟು 33 ಕಡೆಗಳಲ್ಲಿ , 19 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತ ವಿರಕ್ತಂಗೆ ಜೂಜು ವೇಂಟೆ ಕುತರ್ಕ ಕರ್ಕಶ ನೆತ್ತ ಚದುರಂಗ ಪಗಡೆ ಪಗುಡಿತನ ಪರಿಹಾಸ ಕುಸರಸ ಕುಚಿತ್ತ ಕುಟಿಲ ಗಣಿಕಾಸಂಗ ಇಂತೀ ಸಮೇಳ ಸ್ವಚ್ಫಂಗಳ ಮಾಡುತ್ತ ವೇದವ ಮರೆದು, ಶಾಸ್ತ್ರವ ತೊರೆದು, ಪುರಾಣದ ಹಾದಿಯನರಿಯದೆ ಆಗಮದ ಆಗುಚೇಗೆಯ ಕಾಣದೆ ಶಿವಾಧಿಕ್ಯ ಸಂಬಂಧನಲ್ಲದೆ, ಶಿವಪೂಜೆಯನೊಲ್ಲದೆ ಶಿವಧ್ಯಾನದಲ್ಲಿ ನಿಲ್ಲದೆ ಶಿವ ಯಥಾ ಕಥನದಲ್ಲಿ ತ್ರಿಕರಣಶುದ್ಧಾತ್ಮನಲ್ಲದೆ ಇಂತೀ ಬಹುದುರ್ವಿಕಾರನಾಗಿ ಆಡುತ್ತ ಮತ್ತವು ತೀರಿದ ಬಳಿಕ ದೇವಂಗೆ ಎಡೆಮಾಡು, ಜಪಕ್ಕೆ ಮಾಲೆಯ ತಾ ಧ್ಯಾನದಲ್ಲಿದ್ದೆಹೆನೆಂದು ಮತ್ತೆ ಅನ್ಯರು ಹೊದ್ದಬೇಡಾಯೆಂದು ಚಿತ್ತಶುದ್ಧನಾಗಿದ್ದೆಹೆನೆಂದು ನುಡಿಗುಟ್ಟುವ ಮಿಟ್ಟೆಯ ಭಂಡಂಗೆ ಕೃತ್ಯ ನಿತ್ಯ ನೇಮ ಜಪ ತಪ ವ್ಯೋಮ ಅನುಸಂಧಾನ ಸತ್ಕ್ರಿಯಾಮಾರ್ಗ ಮತ್ತುಂಟೆ ? ಸಂಸಾರದ ಹರವರಿಯಲ್ಲಿದ್ದಡೂ ಕೋಲದ ಮಣಿಮಾಡದ ಕೆಳೆಯಲ್ಲಿದ್ದ ಅರಸಿನ ಎಚ್ಚರಿಕೆಯ ಇರುವಿನಂತೆ ಇರಬೇಕು. ಇಂತೀ ಸತ್ಕ್ರಿಯಾಮಾರ್ಗಂಗಳಿರವಿನಿಂದ ಕಾಲಕರ್ಮಟಂಗಳಿಂದ ಕಳೆದು, ಸುಗುಣ ದುರ್ಗುಣಂಗಳ ತಿಳಿದು ಉಭಯವ ಕಳೆದು, ತನ್ನ ತಾನರಿದು ಭಿನ್ನಭಾವಿಯಲ್ಲದೆ, ಇಂತೀ ಭಾವ ಸನ್ನೆಗಟ್ಟಿಗೆಯಂತೆ ಕಮಠೇಶ್ವರಲಿಂಗವನರಿವುದಕ್ಕೆ ಕ್ರಿಯಾಪದ ಭಿತ್ತಿ.
--------------
ಬಾಲಸಂಗಣ್ಣ
ಕುದುರೆಯ ಕುಪ್ಪಟ ಘನವಾಯಿತ್ತು. ಆನೆಯ ಹರಿದಾಟ ನಿಲಬಾರದು. ಒಂಟೆಯ ಕತ್ತು ನೆಟ್ಟಗಾಯಿತ್ತು. ಬಂಟರ ಹರಿದಾಟ ಉಂಟು ಕಟ್ಟಿಗೆಯವರು ಉಗ್ಗಡಿಸುತ್ತ, ಭಟರುಗಳು ಪೊಗಳುತ್ತ , ಸಕಲವಾದ್ಯ ರಭಸದೊಳಗೆ ಸಂದಳಿಯೆಂಬ ಅಂದಳದ ಮೇಲೆ ಚಂದವಾಗಿ ಮನೋರಾಜ್ಯಂಗೆಯ್ವುತ್ತಿರಲು, ಈ ಸುಖವನೊಲ್ಲದೆ, ಮುಂದೆ ದುಃಖ ಉಂಟೆಂದು ಶರಣನರಿದು, ತಲೆ ಎತ್ತಿ ನೋಡಿ, ಘನಗುರುವಿನ ಹಸ್ತದಿಂದ ಅನುಜ್ಞೆಯಂ ಪಡೆದು, ಧ್ಯಾನ ಧಾರಣ ಸಮಾಧಿಯಿಂದ ತಿಳಿದು ನೋಡಲಾಗಿ, ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗ ಅರಸು, ಆ ಅರಸಿನ ಗೊತ್ತುವಿಡಿದು ಇತ್ತಲೆ ಮನವೆಂಬ ಅರಸನು ಹಿಡಯಲಾಗಿ ಹಿಡಿದು, ಆನೆ, ಕುದುರೆ, ಸೇನೆಯನೆಲ್ಲ ಸೂರೆಗೊಂಡು, ಭಂಡಾರ ಬೊಕ್ಕಸ ಅರಮನೆಯನೆಲ್ಲ ಸುಟ್ಟು ಬಟ್ಟಬಯಲಮಾಡಿದ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಶಿವಯೋಗಿ ಶಿವಯೋಗಿಯೆಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಧ್ಯಾನಮೂಲವೆಂಬ ಮನೆಯ ಪೂರ್ವಸ್ಥಾನ ಬಾಗಿಲೊಳಗೆ ಬರುವ ಭಾನುವಿನ ಬಟ್ಟೆಯ ಬೆಳಕಿನಲ್ಲಿ ನಿಂದು, ಶ್ರೀರಾಮ ರಾಮನೆಂಬುವ ಸ್ಮರಣೆಯನು ಮಾಡಬಲ್ಲರೆ ಆತನಿಗೆ ತನ್ನ ಕಾಯಪುರವೆಂಬ ಪಟ್ಟಣದೊಳಗೆ ಮೇಲುದುರ್ಗದೊಳಗಿರ್ದು ಅರಸಿನ ದಾಳಿಯನು ಮಾಡಿ ಕೊಳುಕೊಂಡು ಹೋದನೆಂದು ಬರುವ ಕಾಲನ ಪರಿವಾರವ ಕಂಡು, ಮೇಲುದುರ್ಗದೊಳಗಿರ್ದ ಅರಸಿನ ವಲಯಂ ಬಿಟ್ಟು, ಪಟ್ಟಣವ ಹಾಳಕೆಡವಿ ಗೋಳಿಟ್ಟ ಅರಸನಂತೆ, ಬಯಲಿಗೆ ಬಯಲು ಆಕಾರದಲ್ಲಿ ನಿಂದು, ಬರುತ್ತಲಾ ಪರಿವಾರವನ್ನು ಕಂಡು, ಕಾದಿ ಜಗಳವನು ಕೊಟ್ಟು ಹಿಂದಕ್ಕೆ ನೂಕಿ, ಪರಾಲಯದೊಳಗಿರ್ದ ಅರಸನನ್ನು ಮೇಲುದುರ್ಗಕ್ಕೆ ತಂದು ಇಂಬಿಟ್ಟು ಹಾಳ ಪಟ್ಟಣವನ್ನು ತುಂಬಿಸಿ ಮೇಳೈಸಿ ಮನೆಯ ಬಂಧು ದಾಯಾದರೆಲ್ಲರು ಆತಂಗೆ ಕಾಲವಂಚನೆಗೆ ಗೆಲಿದಂಥ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ಇಂತು ಕಾಯದ ಕೀಲನೆ ಅರಿಯದೆ, ಕಾಲವಂಚನೆಗೆ ಒಳಗಾಗಿ, ನಾನು ಶಿವಯೋಗಿ ಶಿವಯೋಗಿಯೆಂದು ಹೆಸರಿಟ್ಟುಕೊಂಡು ಒಬ್ಬರಿಗೊಬ್ಬರು ಗುರೂಪದೇಶವ ಕೊಟ್ಟು, ಉರಿಯ ಸೋಂಕಿದ ಕರ್ಪುರದ ಧೂಪದಂತೆ ಇರಬೇಕೆಂದು, ಹೆಂಡಿರ ಬಿಟ್ಟು ಮಕ್ಕಳ ಬಿಟ್ಟು ಮಂಡೆಯನು ಬೋಳಿಸಿಕೊಂಡು ಮನದ ನಿಲುಗಡೆಯನರಿಯದ ಗೂಬೆಗಳು ಕಾವಿಯ ಅರಿವೆಯನು ಹೊದ್ದುಕೊಂಡು, ದೇವರೊಳಗೆ ದೇವರೆಂದು ಪೂಜೆಗೊಂಡು, ಮಠ ಮನೆಯಲ್ಲಿ ಬಸಲ ಪರ್ಯಾದಿಯಲ್ಲಿ ನಿಂದು, ಬೋನದಾಸೆಗೆ ಜ್ಞಾನಬೋಧೆಯನು ಹೇಳುವ ಗುರುವಿನ ಬ್ರಹ್ಮಕಲ್ಪನೆಯ ಮನ ತುಂಬಿ ಬಿರಿಕಿಕ್ಕಿ ಹೋಗುವಾಗ, ಕಾಲನವರು ತಮ್ಮ ಪತ್ರವನು ನೋಡಿಕೊಂಡು ಬಂದು ಹೋಗಲಿತ್ತ ಕಲಿತ ವಿದ್ಯೆ ಕೈಕಾಲನು ಹಿಡಿದು ಎಳಕೊಂಡು ಹೋಗುವಾಗ ಗಟ್ಟಿನೆಲಕ್ಕೆ ಬಿದ್ದು ಕೆಟ್ಟೆ ಕೆಟ್ಟೆ ಸತ್ತೆ ಸತ್ತೆ ಎಂದು ಹಲ್ಲು ಗಂಟಲ್ಹರಕೊಂಡು ಹೋಗುವಂಥ ಶಿವಯೋಗಿಗಳೆಂಬ ಕುಟಿಲರ ಕಂಡು ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಮಡದಿಯರೈವರ ಗಂಡರ ಪಿಡಿದೊಯ್ದರು ಕಳ್ಳರು. ಮಡದಿ ಮೊರೆಯಿಟ್ಟೆಹೆನೆಂದು ಅರಸಿನ ಗ್ರಾಮಕ್ಕೆ ಬರಲು, ಅರಸು ಅಂತಃಪುರದೊಳಗೈದಾನೆ. ಅರಸನ ಕೂಡೆ ಏಕಾಂತವ ಮಾಡುವ ಪ್ರಧಾನಿಯ ಕಂಡು ಮೊರೆಯಿಟ್ಟಡೆ, ಪ್ರಧಾನಿ ಪಾಲಿಸುತಿರ್ದ ಬಗೆಯ ನೋಡಾ, ಕಪಿಲಸಿದ್ಧಮಲ್ಲಿನಾಥಯ್ಯಾ!
--------------
ಸಿದ್ಧರಾಮೇಶ್ವರ
ಮೃತ್ಯುವೆಂಬ ಪಟ್ಟಣದಲ್ಲಿ ಒಂದು ಚಿತ್ರವ ಕಂಡೆ. ಆಡು ಆನೆಯ ನುಂಗಿದ ಕಂಡೆ. ಗುಂಗಾಡಿ ಹುಲಿಯ ನುಂಗಿದ ಕಂಡೆ. ಹಂದಿ ಶುನಿಗಳ ಕಚ್ಚಿ ಹರಿದಾಡುವದ ಕಂಡೆ. ಗಗನದೊಳಗಣ ಚಂದ್ರನ ಭೂಮಿಯೊಳಗಣ ಸರ್ಪ ನುಂಗಿದ್ದ ಕಂಡೆ. ಕೋತಿ ಕುದುರೆಯನೇರಿ ಹರಿದಾಡುವದ ಕಂಡೆ. ಅರಸಿನ ಮಗ ಹೊಲತಿಯ ಸಂಗ ಮಾಡುವದ ಕಂಡೆ. ಅಷ್ಟರಲ್ಲಿಯೇ ಒಂದು ಇರುವೆ ಹುಟ್ಟಿ, ಅರಸಿನ ಮಗನ ನುಂಗಿ, ಹೊಲತಿಯ ಕೊಂದು, ಆನೆ ಆಡಿಗೆ ಕಚ್ಚಿ, ಹುಲಿ ಗುಂಗಾಡಿಯ ನುಂಗಿ, ಗಗನದ ಚಂದ್ರನವಗ್ರಹಿಸಿ, ಸರ್ಪನ ಕೊಂದು, ಹಂದಿ, ನಾಯಿ ಕುದುರೆ, ಕೋತಿಯ ಹತಮಾಡಿ, ಮೃತ್ಯುವೆಂಬ ಪಟ್ಟಣವ ಸುಟ್ಟು, ಇರುವೆಯ ಗರ್ಭದಲ್ಲಿ ಇಬ್ಬರು ಹತವಾದರು. ಇಬ್ಬರು ಹತವಾದಲ್ಲಿ ಹಲಬರು ಹತವಾದರು. ಈ ಭೇದವ ತಿಳಿಯಬಲ್ಲರೆ ಅಂಗಲಿಂಗಿ ಪ್ರಾಣಲಿಂಗಿ ಸರ್ವಾಂಗಲಿಂಗಿ ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಸಿನ ಭಕ್ತಿ ಅಹಂಕಾರದಿಂದ ಕೆಟ್ಟಿತ್ತು, ಸೂಳೆಯ ಭಕ್ತಿ ಎಂಜಲ ತಿಂದಾಗಲೆ ಹೋಯಿತ್ತು, ನಂಟುತನದ ಭಕ್ತಿ ನಾಯಕನರಕ, ಬಡವನ ಭಕ್ತಿ ನಿಧಾನ- ಇದು ಕಾರಣ, ಕೂಡಲಚೆನ್ನಸಂಗಮದೇವಾ ನಿಮ್ಮ ಭಕ್ತರಿಗೆ ಬಡತನವನೆ ಕೊಡು.
--------------
ಚನ್ನಬಸವಣ್ಣ
ಓಲೆಯಕಾರ ಭಕ್ತನಾದರೆ ಮನದ ಕ್ರೋಧ ಬಿಡದು. ಒಕ್ಕಲಿಗ ಭಕ್ತನಾದರೆ ಅವನ ಪೂರ್ವಾಶ್ರಯ ಬಿಡದು. ಹಾರುವ ಭಕ್ತನಾದರೆ ಜಾತಿ ಸೂತಕ ಬಿಡದು. ಬೆವಹಾರಿಯ ಭಕ್ತಿಯೊಂದು ಶಬ್ದದಲ್ಲಿ ಹೋಯಿತ್ತು. ಅರಸಿನ ಭಕ್ತಿ ಅರಸಿ ನೋಡಲಿಲ್ಲ. ಸೂಳೆಯ ಭಕ್ತಿ ಹದಿನೆಂಟು ಜಾತಿಯ ಎಂಜಲ ತಿಂದಿತ್ತು. ಕೂಡಲಚೆನ್ನಸಂಗಯ್ಯ ಮಜ್ಜನಕ್ಕೆರೆವ ಭವಿಗಳನೇನೆಂಬೆ?
--------------
ಚನ್ನಬಸವಣ್ಣ
ಅರಸಿನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು, ಓಲೆಕಾರನ ಭಕ್ತಿ ಅಲಗಿನ ಮನೆಯಲ್ಲಿ ಹೋಯಿತ್ತು, ಬಣಜಿಗನ ಭಕ್ತಿ ಬಳ್ಳದ ಮೊನೆಯಲ್ಲಿ ಹೋಯಿತ್ತು, ಅಕ್ಕಸಾಲೆಯ ಭಕ್ತಿ ಅಗ್ಗಷ್ಟಿಗೆಯಲ್ಲಿ ಹೋಯಿತ್ತು, ಶೀಲವಂತನ ಭಕ್ತಿ ಶಂಕೆಯಲ್ಲಿ ಹೋಯಿತ್ತು, ಮಾಟ ಕೊಟದವನ ಭಕ್ತಿ ಅಂಜಿಕೆಯಲ್ಲಿ ಹೋಯಿತ್ತು, ವ್ರತಸ್ಥನ ಭಕ್ತಿ ಪ್ರಪಂಚಿನಲ್ಲಿ ಹೋಯಿತ್ತು. ಇದು ಕಾರಣ, ಕೂಡಲಚೆನ್ನಸಂಗಯ್ಯಾ ಕಿರಾತರು ಹುಟ್ಟಿ ಪುರಾತರು ಅಡಗಿದರು.
--------------
ಚನ್ನಬಸವಣ್ಣ
ಒಂದು ಊರಿಗೆ ಒಂಬತ್ತು ಬಾಗಿಲು. ಆ ಊರಿಗೆ ಐವರು ಕಾವಲು, ಆರುಮಂದಿ ಪ್ರಧಾನಿಗಳು, ಇಪ್ಪತ್ತೈದು ಮಂದಿ ಪರಿವಾರ. ಅವರೊಳಗೆ ತೊಟ್ಟನೆ ತೊಳಲಿ ಬಳಲಲಾರದೆ ಎಚ್ಚತ್ತು ನಿಶ್ಚಿಂತನಾದ ಅರಸನ ಕಂಡೆ. ಆ ಅರಸಿನ ಗೊತ್ತುವಿಡಿದು, ಒಂಬತ್ತು ಬಾಗಿಲಿಗೆ ಲಿಂಗಸ್ಥಾಪ್ಯವ ಮಾಡಿ, ಒಂದು ಬಾಗಿಲಲ್ಲಿ ನಿಂದು, ಕಾವಲವನೆ ಕಟ್ಟಿಸಿ, ಪ್ರಧಾನಿಗಳನೆ ಮೆಟ್ಟಿಸಿ, ಪರಿವಾರವನೆ ಸುಟ್ಟು, ಅರಸನ ಮುಟ್ಟಿಹಿಡಿದು ಓಲೈಸಲು ಸಪ್ತಧಾತು ಷಡುವರ್ಗವನೆ ಕಂಡು, ಕತ್ತಲೆಯ ಕದಳಿಯ ದಾಂಟಿ, ನಿಶ್ಚಿಂತದಲ್ಲಿ ಬಚ್ಚಬರಿಯ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು. ಆ ಅರಸಿಂಗೆ ನೋಟ ಬೇಟದವರಿಬ್ಬರು. ಅಷ್ಟಮಣಿಹ ಹರಿಮಣಿಹದವರು. ಅವರ ಸುತ್ತ ಓಲೈಸುವರು ಇಪ್ಪತ್ತೈದು ಮಂದಿ. ಅವರಿಗೆ ಕತ್ತಲೆಯ ಬಲೆಯ ಬೀಸಿ ಕೆಡಹಿ, ಅರಸಿನ ಗೊತ್ತುವಿಡಿದು ಉತ್ತರವನೇರಿ ನಿಶ್ಚಿತವಾಗಿ ನಿಜದಲ್ಲಿ ನಿರ್ವಯಲನೆಯ್ದುವ ಶರಣರ ಪಾದವ ಹಿಡಿದು, ಎತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಜಗದೊಳಗೆ ಜಗ ಹುಟ್ಟಿ ಜಗಮಯವಾಗಿದ್ದುದ ಕಂಡೆನು. ಜಗವನಾಳುವ ದೊರೆ ರಾಕ್ಷಿಗವಿಯಲ್ಲಿ ಸಿಲ್ಕಿ, ಘಾಸಿಯಾಗುತಿರ್ದನು ನೋಡಾ. ಆ ರಾಕ್ಷಿ ಬ್ರಹ್ಮನ ಚರ್ಮವ ಹೊತ್ತು, ವಿಷ್ಣುವಿನ ರಕ್ತವ ಕುಡಿದು, ರುದ್ರನ ಭಸ್ಮವ ಮಾಡಿ, ಈಶ್ವರನ ಗಾಳಿಯಾಗಿ ಹಾರಿಸಿ, ಸದಾಶಿವನ ಆಕಾಶದ ಗುರಿಯನೆ[ಚ್ಚಿ] ಆಡುತಾಡುತ ಬಂದವಳು. ಅರಸಿನ ಪ್ರಜೆ-ಪರಿವಾರ, ಆನೆ-ಸೇನೆ ಎಲ್ಲವ ನುಂಗಿ ತೇಗಿ, ಜಗದೊಳಗಣ ಜಗ ಹಿರಿದಪ್ಪ ಜಗವಾಗಿ ಜಲದ ಕೊಣದಲ್ಲಿ ಹೊರಟು ದೃಷ್ಟವಾಗಿ ನಿಂದುದ ಕಂಡು ರಕ್ಷಿ ನಗುತಿದೆ. ಈ ಭೇದವ ಹಳೆಯ ಮನೆಯ ಸುಟ್ಟು ಹೊಸ ಮನೆಯಾದಲ್ಲಿ ಕಂಡೆ, ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತನುಧನಾದಿಗಳ ಮೋಹ ಮಾಣದೆ, ತನ್ನಲ್ಲಿ ನಿಜದ ನೆನಹು ನೆಲೆಗೊಳ್ಳದೆ, ಎನಗೆ ಕುಲಗೋತ್ರಗಳಿಲ್ಲವೆಂದು ಗಳಹುತ್ತ ವಿಧಿನಿಷೇಧವನಾರಯ್ಯದೆ, ಕಂಡಕಂಡಂತೆ ಕುಣಿವ ಮಂದ ಮನುಜರು ಕೆಟ್ಟು ಭ್ರಷ್ಟರಪ್ಪರಯ್ಯಾ. ಅದೇತಕೆಂದಡೆ:ಬೊಮ್ಮವಾನೆಂಬ ಸುಜ್ಞಾನ ನೆಲೆಗೊಳ್ಳದಾಗಿ. ಅರಸಿನ ಹೆಸರಿನ ಅನಾಮಿಕಂಗೆ, ಅರಸೊತ್ತಿಗೆಯ ಸಿರಿ ದೊರೆಯದಂತೆ ಮಾಯಾ ಜಡಧಿಯಲ್ಲಿ ಮುಳುಗಿದ ಮರುಳುಮಾನವಂಗೆ ಪರಮಸುಖವೆಂತು ದೊರೆವುದಯ್ಯಾ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಬೆಂದು ಹೋಯಿತ್ತೆ ಪಟ್ಟಣ ! ಚಂದವಳಿಯಿತ್ತೆ ಅರಸಿನ ! ಅಂದಗೆಟ್ಟಿತ್ತೆ ರಾಣಿವಾಸ ! ಸುಂದುಗವಿಯಿತ್ತೆ ಸಕಲ ಪರಿಜನರ ಗರ್ಜನೆ ! ಪರವಾಯಿತ್ತೆ ಗಜನೇರಿ ಮೆರೆವ ಮಂತ್ರಿಯ ಸಿರಿಸಂಪತ್ತು ! ಅರಿಯಬಂದನೆ ನಿರಂಜನ ಚನ್ನಬಸವಲಿಂಗ ! ತನ್ನಿಂದ ತನ್ನ ಮೊರೆಯ ಹೋಗುವ ಬನ್ನಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗದೇವರ ಪಾದದ ನೆನೆವ ನಿತ್ಯಮಾಡಿ, ಹೇಮದ ಕೂಟದ ಹಿರಿಯರುಗಳು ಆಶೀರ್ವಾದ ಬಿನ್ನಹ. ಅಂಗದ ಮೇಲೆ ಲಿಂಗವನು ಕಟ್ಟಿ ಶಿವಭಕ್ತರಾದ ಮೇಲೆ ಭವಿಗಳು ಇದ್ದಲ್ಲಿ ಶಿವಶಾಸ್ತ್ರವ ಓದಿ, ಭವಿಗಳ ಪಂಕ್ತಿಯಲ್ಲಿ ಅನ್ನವನು ಉಣಲಾಗದೆಂದು ಬರಿಯ ಮಾತಿನ ಬಣಬೆಯ ಹಿಡಕೊಂಡು ತಿರುಗುವ ನರಗುರಿಗಳು, ಆಧಾರಚಕ್ರದಲ್ಲಿ ಬ್ರಹ್ಮನೆಂಬೊ ಭವಿ ಹುಟ್ಟಿ, ಹೊರಗೆ ಪೃಥ್ವಿತತ್ವದ ಸ್ವಾಧಿಷ್ಟದಲ್ಲಿ ವಿಷ್ಣುವೆಂಬೊ ಭವಿ ಹುಟ್ಟಿ, ಒಳಗೆ ಅಪ್ಪುತತ್ವದ ಹೊರಗೆ ಅಪ್ಪುತತ್ವದ ಮಣಿಪೂರಕದಲ್ಲಿ ರುದ್ರನೆಂಬೊ ಭವಿ ಹುಟ್ಟಿ, ಒಳಗೆ ತೇಜತತ್ವದ ಹೊರಗೆ ತೇಜತತ್ವದ ಅನಾಹತದಲ್ಲಿ ಈಶ್ವರನೆಂಬೊ ಭವಿ ಹುಟ್ಟಿ, ಒಳಗೆ ವಾಯುತತ್ವದ ಹೊರಗೆ ವಾಯುತತ್ವದ ವಿಶುದ್ಧಿಯಲ್ಲಿ ಸದಾಶಿವನೆಂಬ ಭವಿ ಹುಟ್ಟಿ, ಒಳಗೆ ಆಕಾಶತತ್ವದ ಹೊರಗೆ ಆಕಾಶತತ್ವದ ಅಗ್ನಿಯಿಂದ ಪರಬ್ರಹ್ಮನೆಂಬೊ ಭವಿ ಹುಟ್ಟಿ. ಇಂತೀ ಇವರು ಆರುಮಂದಿ ಭವಿಗಳು. ಭಕ್ತನ ಅಂತರಂಗದೊಳು ಹುಟ್ಟಿ, ಅಂತರಂಗದೊಳು ಬೆಳೆದು, ಬೇರೊಂದು ವಿಷ್ಣುಲಿಂಗವಾಗಿ ಬಂದು ಪೂಜೆಗೊಂಬುತಿದರು ಕಾಣಿರೊ. ಅದು ಎಂತೆಂದರೆ : ಬ್ರಹ್ಮನೆಂಬ ಭವಿ, ವಿಷ್ಣುವೆಂಬ ಭವಿ, ರುದ್ರನೆಂಬ ಭವಿ. ಇಂತಿವರು ಮೂರುಮಂದಿ ಭವಿಗಳು ಒಂದುಗೂಡಲಿಕೆ ಈಶ್ವರನೆಂಬ ಲಿಂಗಾಕಾರ ಭವಿಯಾಯಿತು ಕಾಣಿರೊ. ಆ ಲಿಂಗದ ರೂಪನು ನೋಡಿ, ಶಿಲ್ಪಕಾರರು ತಮ್ಮ ಹೊಟ್ಟೆಕಿಚ್ಚಿಗೆ ಕಟೆದಿಟ್ಟು ಮಾರುವ ಶಿಲೆಯ ಲಿಂಗವ ತಂದು, ಶಿರದಲ್ಲಿ ಕಟ್ಟಿ, ಕರದಲ್ಲಿ ಪೂಜೆ ಮಾಡಿ ಶಿವಭಕ್ತರೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳ ಅಂತರಂಗದೊಳು ಕಾಮವೆಂಬೊ ಭವಿ, ಕ್ರೋಧವೆಂಬೊ ಭವಿ, ಲೋಭವೆಂಬೊ ಭವಿ, ಮೋಹವೆಂಬೊ ಭವಿ, ಮದವೆಂಬೊ ಭವಿ, ಮತ್ಸರವೆಂಬೊ ಭವಿ. ಇಂತೀ [ಈ]ರಾರು ಹನ್ನೆರಡುಮಂದಿ ಭವಿಗಳನು ಹತ್ತೇಲಿಯಿಟ್ಟುಕೊಂಡು, ಕೂಡಿಯುಂಡು ಕುಲವನರಸುವಂಥ ಕೋತಿಗಳು ಮಾಡಿದ ಭಕ್ತಿ ಏನಾಯಿತೆಂದರೆ, ಅಜ್ಜಿಗೆ ಅರಸಿನ ಚಿಂತೆಯಾದರೆ, ಮಗಳಿಗೆ ಮಿಂಡಗಾರನ ಚಿಂತೆಯನು ಮಾಡಿಕೊಂಡು, ಹಲವು ಮಿಂಡಗಾರಗೆ ಸೆರಗುಹಾಸಿ ಮಾಡಿಕೊಂಡು ಹೋದಂತಾದೀತು ಕಾಣಿರೊ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬೊ ವಿಪ್ರನ ಗರ್ಭದಲ್ಲಿ ನಕಾರವೆಂಬೊ ಅಕ್ಷರ ಹುಟ್ಟಿ, ಸದ್ಯೋಜಾತಮುಖದಲ್ಲಿ ಬ್ರಹ್ಮನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಹುಟ್ಟಿಸಬೇಕೆಂದು ಚಿಂತೆಯನು ತಾಳಿ, ಪೃಥ್ವಿತತ್ವವೆಂಬೊ ಆದಿ ಆಧಾರ ಬುಡವಾಗಿಯಿದ್ದ ಕಾಣಿರೊ. ಮಕಾರವೆಂಬೊ ಅಕ್ಷರ ಹುಟ್ಟಿ, ವಾಮದೇವಮುಖದಲ್ಲಿ ವಿಷ್ಣುವೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ರಕ್ಷಿಸಬೇಕೆಂಬೊ ಚಿಂತೆಯನು ತಾಳಿ, ಅಪ್ಪುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಶಿಕಾರವೆಂಬೊ ಅಕ್ಷರ ಹುಟ್ಟಿ, ಅಘೋರಮುಖದಲ್ಲಿ ರುದ್ರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಭಕ್ಷಿಸಬೇಕೆಂಬೊ ಚಿಂತೆಯನು ತಾಳಿ, ತೇಜತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ವಕಾರವೆಂಬೊ ಅಕ್ಷರ ಹುಟ್ಟಿ, ತತ್ಪುರುಷಮುಖದಲ್ಲಿ ಈಶ್ವರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ಅಂಗದೊಳಗೆ ಪ್ರಾಣಲಿಂಗವಾಗಿ ಪೂಜೆಗೊಳಬೇಕೆಂಬ ಚಿಂತೆಯನು ತಾಳಿ, ವಾಯುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಯಕಾರವಂಬೊ ಅಕ್ಷರ ಹುಟ್ಟಿ, ಈಶಾನ್ಯಮುಖದಲ್ಲಿ ಸದಾಶಿವನೆಂಬ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ತನ್ನ ಅಂತರಂಗದೊಳಗೆ ಇಂಬಿಟ್ಟು ಇರಬೇಕೆಂಬ ಚಿಂತೆಯನು ತಾಳಿ, ಆಕಾಶತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಅದು ಎಂತೆಂದಡೆ : ಇಂತೀ ಇಪ್ಪತ್ತೈದು ತತ್ವಗಳ ಆಧಾರದಲ್ಲಿ ಹುಟ್ಟಿದ ಭಕ್ತರೆಂಬ ಕೊಂಬೆಗಳು ಮಾಡಿದ ಭಕ್ತಿಯೆನಗಾಯಿತು ಅಂದರೆ, ಪೃಥ್ವಿತತ್ವದ ಆಧಾರದಲ್ಲಿ ಹುಟ್ಟಿದ ಕಸಕಡ್ಡಿಗಳೆಲ್ಲ ಕುಸುಕಿಂದ ಹರಕೊಂಡು ತಿಂದು ಹರಿಹೋದಂತೆ ಕಾಣಿರೊ. ಅದು ಎಂತೆಂದರೆ : ಭವಿಗಳ ಆಧಾರದಲ್ಲಿ ಭಕ್ತರೆಂಬ ಕೊಂಬೆಗಳು ಹುಟ್ಟಿ ಪೃಥ್ವಿತತ್ವವೆಂಬೊ ಭವಿಯ ಹುಟ್ಟಿಸೆಂದರೆ ಹುಟ್ಟಿಸಲಿಲ್ಲ. ಅಪ್ಪುತತ್ವವೆಂಬೊ ಭವಿಯ ರಕ್ಷಿಸಿಯೆಂದರೆ, ರಕ್ಷಿಸಿಯಿದ್ದಿಲ್ಲ. ತೇಜತತ್ವಯೆಂಬೊ ಭವಿಯ ಭಕ್ಷಿಸಿಯೆಂದರೆ, ಭಕ್ಷಿಸಿಯಿದ್ದಿಲ್ಲ. ವಾಯುತತ್ವವೆಂಬೊ ಭವಿಯ ಅಂಗದೊಳಗೆ ಲಿಂಗವಾಗಿ ಪೂಜೆಗೊಂಡಿದ್ದರೆ ಪೂಜೆಗೊಂಡಿದ್ದಿಲ್ಲಾ. ಆಕಾಶತತ್ವಯೆಂಬೊ ಭವಿಯನು ತಮ್ಮ ಅಂತರಂಗದೊಳಗೆ ಮರೆಯೊಳಗೆ ಇಂಬಿಟ್ಟುಕೊಂಡು ಇರಲಾರದ ಅಜ್ಞಾನಿಗಳು. ಪೃಥ್ವಿತತ್ವವೆಂಬೊ ಭವಿ ಆಧಾರದಲ್ಲಿ ಹುಟ್ಟಿ, ಭವಿ ಆಧಾರದಲ್ಲಿ ಬೆಳೆದು, ಆಕಾಶತತ್ವವೆಂಬೊ ಭವಿಯ ಅಂತರಂಗದ ಮರೆಯಲ್ಲಿ ಅಡಗಿಕೊಂಡಿದ ಅಜ್ಞಾನಿಗಳು. ಬ್ರಹ್ಮನೆಂಬೊ ಭವಿ, ವಿಷ್ಣುವೆಂಬೊ ಭವಿ, ರುದ್ರನೆಂಬೊ ಭವಿ. ಮೂವರು ತ್ರಿಮೂರ್ತಿಗಳು ಕೂಡಿ ಏಕಮೂರ್ತಿಯಾದ ಆಕಾರಲಿಂಗವನು ತಂದು, ತಮ್ಮ ಶಿರದಲ್ಲಿ ಕಟ್ಟಿಕೊಂಡು ಶಿವಭಕ್ತನೆ ಹೆಚ್ಚು, ಭವಿ ಕಡಿಮೆಯೆಂದು ಕೈಯಲ್ಲಿ ಕಂಜರದ ಬಾಕನೆ ಹಿಡಿದುಕೊಂಡು, ಕೆಂಜಡೆಯ ಬಿಟ್ಟುಕೊಂಡು, ವೀರಗಾಸೆಯಂತೆ ಕುಣಿದಾಡಿ, ಕೂಗಿ ಕೂಗಿ ಹೇಳುವ ಕುನ್ನಿಗಳು ಮಾಡಿದ ಭಕ್ತಿಯೇನಾಯಿತೆಂದರೆ, ಕೈಲಾಸದ ನಾಯಿಗಳು ಕೈಮೈಯನ್ನ ಹರಕೊಂಡು, ವೈಹಾಳಿಯ ಬಯಲಿಗೆ ಹೋಗಿ, ಒದರಿದರೆ, ಸತ್ತಂತಾಯಿತೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರಾರುಂಟೊ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
-->