ಅಥವಾ

ಒಟ್ಟು 32 ಕಡೆಗಳಲ್ಲಿ , 19 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕಾರವಿಡಿದು ಪರಬ್ರಹ್ಮ, ನಿರಾಕಾರವಿಡಿದು ಪರಬ್ರಹ್ಮವೆಂಬಿರಿ. ಪರಬ್ರಹ್ಮವ ನುಡಿವಿರಿ, ಪರಬ್ರಹ್ಮವನರಿದಿಹೆವೆಂಬಿರಿ, ಅರಿಹಿಸಿಹೆವೆಂಬಿರಿ, ಆನೆ ಪರಬ್ರಹ್ಮವೆಂಬಿರಿ, ಪರಬ್ರಹ್ಮವನರಿಯದೆ ನುಡಿವಿರಿ, ಬ್ರಹ್ಮದೊಡಕು ಅರಿದು ಕಂಡಿರಣ್ಣಾ. ಈ ಬ್ರಹ್ಮದೊಡಕಿಂದ ಮುನ್ನೊಮ್ಮೆ ದೇವಜಾತಿಗಳು ಋಷಿಜನಂಗಳು ಬ್ರಹ್ಮನನು, ಪರಬ್ರಹ್ಮವ ಬೆಸಗೊಳಲು ಅಹಂ ಬ್ರಹ್ಮವೆಂದು ತಲೆಯ ಹೋಗಾಡಿಕೊಂಡುದು ಸರ್ವಪುರಾಣಪ್ರಸಿದ್ಧ, ಇನ್ನೂ ತಲೆಯ ಮೋಟು ಕಾಣಬರುತ್ತದೆ. ಬ್ರಹ್ಮನ ಶಿರ ಪರಬ್ರಹ್ಮದ ಕೈಯಲ್ಲಿದೆ. ಆನೆ ಪರಬ್ರಹ್ಮವೆಂದು ಸನತ್ಕುಮಾರ ಒಟ್ಟೆಯಾದುದು ಸ್ಕಂದ ಪುರಾಣಪ್ರಸಿದ್ಧ. ಅವರಂತಾಗದೆ, ಪರಬ್ರಹ್ಮದ ನೆಲೆಯ ಕೇಳಿರಣ್ಣಾ: ಲಿಂಗವೇ ಪರಬ್ರಹ್ಮವೆಂದು ಅಥರ್ವಣ ಹೇಳುತ್ತದೆ, `ಏಕೋ ರುದ್ರಸ್ಸ ಈಶಾನಃ ಸ ಭಗವಾನ್ ಸ ಮಹೇಶ್ವರೋ ಮಹಾದೇವ ಇತಿ ಈ ಪ್ರಕಾರದಲೆ ಯಜುರ್ವೇದ ಹೇಳುತ್ತಿದ್ದಿತ್ತು. ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ ಈ ಪ್ರಕಾರದಲ್ಲಿ ಶಿವಸಂಕಲ್ಪೋಪನಿಷತ್ ಹೇಳುತ್ತಿದೆ. ಋತಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ತನ್ಮೇ ಮನಶ್ಶಿವಸಂಕಲ್ಪಮಸ್ತು ಎಂದುದಾಗಿ ಲಿಂಗವೇ ಪರಬ್ರಹ್ಮ. ಮುನ್ನೊಮ್ಮೆ ಹರಿಬ್ರಹ್ಮರ ಸಂವಾದದಲ್ಲಿ ಉರಿಲಿಂಗ ಉದ್ಭವವಾದಲ್ಲಿ ಹರಿಬ್ರಹ್ಮಾದಿಗಳು ಸ್ತೋತ್ರವ ಮಾಡಿದರು. ಲೈಂಗ್ಯ ಪುರಾಣದಲ್ಲಿ, ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ ನಮಶ್ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಇದು ಮುನ್ನೊಮ್ಮೆ ಬ್ರಹ್ಮಕಾರಣ ಲಿಂಗವೇ ಪರಬ್ರಹ್ಮ, ಶಿವನೇ ಪರಬ್ರಹ್ಮವೆಂದು ಮತ್ತೆ ಯಜುರ್ವೇದ ನುಡಿಯುತ್ತಿದೆ. ಈಶಾನಸ್ಸರ್ವವಿದ್ಯಾನಾಮೀಶ್ವರಸ್ಸರ್ವಭೂತಾನಾಂ ಬ್ರಹ್ಮಾಧಿಪತಿ ಬ್ರಹ್ಮಣೋ[s]ಧಿಪತಿಬ್ರ್ರಹ್ಮಾ ಶಿವೋ ಮೇ[s]ಸ್ತು ಸದಾಶಿವೋಂ ಆದಿತ್ಯ ಪುರಾಣದಲೂ ಮಹಾಪುರುಷ ಆದಿತ್ಯ ಹೇಳುತ್ತಿದ್ದಾನೆ: ಪರಬ್ರಹ್ಮಾ ಚ ಈಶಾನ ಏಕೋ ರುದ್ರಸ್ಸ ಏವ ಚ ಭಗವಾನ್ ಮಹೇಶ್ವರಸ್ವಾಕ್ಷಾನ್ಮಹಾದೇವೋ ನ ಸಂಶಯಃ ಯಸ್ಯಾಂತಸ್ಥಾನಿ ಭೂತಾನಿ ಯೇನೇದಂ ಧಾರ್ಯತೇ ಜಗತ್ ಬ್ರಹ್ಮೇತಿ ಯಂ ಜಹುರ್ವೇದಾಃ ಸರ್ವೇ ತಂ ಶರಣಂ ವ್ರಜೇತ್ ಕೂರ್ಮ ಈಶ್ವರಗೀತೆಯಲ್ಲಿ, ಆವ್ಯಕ್ತಂ ಕಾರಣಂ ಪ್ರಾಹುರಾನಂದಂ ಜ್ಯೋತಿರಕ್ಷರಂ ಅಹಮೇವ ಪರಬ್ರಹ್ಮ ಮತ್ತೋ[s]ನ್ಯಂ ಹಿ ನ ವಿದ್ಯತೇ ಅಹಂ ತತ್ಪರಮಂ ಬ್ರಹ್ಮ ಪರಮಾತ್ಮಾ ಸನಾತನಃ ಮಹಾಪುರುಷ ಮನು ಮಾನವಪುರಾಣದಲ್ಲೂ ಹೇಳಿದನು: ಋತಂ ಸತ್ಯಂ ಪರಬ್ರಹ್ಮಪುರುಷಂ ಸೋಮವೀಶ್ವರಂ ಊಧ್ರ್ವರೇತಂ ಸಮುತ್ಪತ್ತಿಸ್ಥಿತಿಸಂಹಾರಕಾರಣಂ ವಿಶ್ವರೂಪಂ ವಿರೂಪಾಕ್ಷಂ ಚಂದ್ರಮೌಳಿಂ ಘೃಣಾನಿಧಿಂ ಹರಣ್ಯಬಾಹುಮದ್ವಂದ್ವಂ ಹಿರಣ್ಯಪತಿಮೀಶ್ವರಂ ಅಂಬಿಕಾಯಾಃ ಪತಿಂ ಸಾಕ್ಷಾದುಮಾಯಾಃ ಪತಿಮಕ್ರಿಯಂ ಪರತತ್ವಂ ಸಮಾಖ್ಯಾತಂ ಶಿವಂ ಧ್ಯಾಯಂತಿ ಸಂತತಂ ತೈತ್ತಿರೀಯ ಶ್ರುತಿ, `ಸದ್ವಿಪ್ರಾಹಿ..... ಎಂದುದಾಗಿ, ಬಹಳ ಬಹಳ ಚಕ್ಷು, ಬಹಳ ಬಹಳ ಮುಖನು, ಬಹಳ ಬಹಳ ಬಾಹು, ಬಹಳ ಪಾದನು, ಇಂತಹ ಬಹಳ ಲಿಂಗವೆ, ಬ್ರಹ್ಮ ಕಾಣಿರಣ್ಣಾ. `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ, ಬಹಳಕ್ಕೆ ಬಹಳ, ಮಹಾಬಹಳ ಲಿಂಗವೆ ಬಹಳಬ್ರಹ್ಮ ಕಾಣಿರಣ್ಣಾ. ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಮನೋವಾಕ್ಕಾಯ ನಾದಬಿಂದುಕಳೆಗೆ ಅತೀತನಾದ ಮಹಾಬಹಳ ಲಿಂಗವನು ಶ್ರೀಗುರು ನಿರೂಪಿಸಿ ಕೊಟ್ಟನಾಗಿ ಈ ಲಿಂಗವೇ ಪರಬ್ರಹ್ಮ ಕಾಣಿರಣ್ಣಾ. ಇದು ಕಾರಣ, ಪರಬ್ರಹ್ಮಲಿಂಗವೆಂದು ಧ್ಯಾನಿಸಿ ಪೂಜಿಸಿ ಮಹಾನಂದ ಪರಮುಕ್ತಿಯನೈದಿದರು ಪೂರ್ವದಲ್ಲಿ ದೇವಜಾತಿಗಳು ಹಲಬರು, ಇದು ಪುರಾಣ ಪ್ರಸಿದ್ಧ. ಕಲಿಯುಗದಲ್ಲಿ ದೃಷ್ಟ: ಬಸವರಾಜದೇವರು ಮೊದಲಾದ ಅಸಂಖ್ಯಾತ ಮಾಹೇಶ್ವರರು ಇದನರಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವೆ ಪರಬ್ರಹ್ಮವೆಂದು ಅರಿದು ಧ್ಯಾನಿಸಿ ಪೂಜಿಸಿ ಮಹದಾನಂದಮುಕ್ತಿಯನೈದಿದರಣ್ಣಾ.
--------------
ಉರಿಲಿಂಗಪೆದ್ದಿ
ಜಗತ್ತೆಂಬ ಯಂತ್ರದ ಹಾಹೆ ಹೇಂಗೆಂದರಿಯಲು ಅಜ್ಞಾನವೆಂಬ ತುಷದ ಚೋಹವ ತೊಡಿಸಿ, ಅಹಂ ಮಮತೆಯೆಂಬ ಸೊಕ್ಕನಿಕ್ಕಿ, ಬಾರದ ಭವದ ಬಟ್ಟೆಯಲ್ಲಿ ಬರಿಸಿ, ಕಾಣದ ಕರ್ಮ ದುಃಖವ ಕಾಣಿಸಿ, ಉಣ್ಣದ ಅಪೇಯವನುಣಿಸಿ, ಮಾರಾರಿ ವಿನೋದಿಸಿದೆಯಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಜಂಗಮ ಪ್ರಸಾದದಿಂದ ಲಿಂಗಕ್ಕೆ ಚೈತನ್ಯಸ್ವರೂಪವೆಂದರಿದು, ಪಾದೋದಕದಿಂದ ಲಿಂಗಕ್ಕೆ ಮಜ್ಜನವೆಂದರಿದು, ಜಂಗಮ ಪ್ರಸಾದವೆ ಲಿಂಗಕ್ಕೆ ಅರ್ಪಿತವಾಗಿ, ಲಿಂಗದಿಂದ ನೋಡುತ್ತ, ಕೇಳುತ್ತ, ರುಚಿಸುತ್ತ, ಮುಟ್ಟುತ್ತ, ವಾಸಿಸುತ್ತ, ಕೂಡುತ್ತ, ಅಹಂ ಮಮತೆಗೆಟ್ಟು, ಸಂದು ಸಂಶಯವರತು, ಹಿಂದ ಮುಂದ ಹಾರದಿಪ್ಪುದೇ ನಿಜವೀರಶೈವ. ಇಂತಲ್ಲದೆ ಉಳಿದುದೆಲ್ಲವು ಇತರ ಶೈವ ಕಾಣಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸದ್ಭಕ್ತನು ತನು ಮನ ಧನ ಪ್ರಾಣಾದಿಗಳನರ್ಪಿಸಿ, ಸಕಲ ಸಾಕಾರ ದ್ರವ್ಯಾದಿಗಳೆಲ್ಲವೂ ಶಿವನ ಸೊಮ್ಮಾಗಿ, ಅದೆಂತೆಂದಡೆ ಋಗ್ವೇದ, ಶಿವೋ ದಾತಾ ಶಿವೋ ಭೋಕ್ತಾ ಶಿವಸ್ಸರ್ವಮಿದಂ ಜಗತ್ ಶಿವೋ ಯಜತಿ ಸರ್ವತ್ರ ಯಶ್ಶಿವಸ್ಸೋ[s]ಹಮೇವ ಚ ಎಂದುದಾಗಿ, ಇದನರಿದು ದಾತೃ ಭೋಕ್ತೃ ಶಿವನೆಂದು, ಅಹಂ ಮಮತೆಗಳಡಗಿ, ಸ್ವಾನುಭಾವವಳವಟ್ಟು, ಬಾಗಿಲುಗಾಹಿಯಾಗಿ ದಾಸೋಹಮಂ ಮಾಡುವುದು, ಇದು ಉತ್ತಮ ಕ್ರಿಯೆಯು. ಇದು ಲಿಂಗದೊಡನೆ ಹುಟ್ಟಿ, ಲಿಂಗದೊಡನೆ ಬೆಳೆದು, ಲಿಂಗದೊಡನೆ ಲೀಯವಹ ಮಹಾಲಿಂಗಾಂಗಿಗಲ್ಲದೆ ಸಾಧ್ಯವಾಗದು. ಇದು ಅಳವಡದಿರ್ದಡೆ ಸದ್ಭಕ್ತನು ತನು, ಮನ, ಧನ, ಪ್ರಾಣ ಮುಂತಾಗಿ ವಂಚನೆ ಇಲ್ಲದೆ ಸದ್ಭಕ್ತಿಯಿಂ ದಾಸೋಹಮಂ ಮಾಡುವುದು. ಇದು ಮಧ್ಯಮ ಕ್ರಿಯೆಯು. ಇದು ಸಾಮಾನ್ಯರಿಗಳವಡದು. ಇದು ಅಸಾಧ್ಯವು. ಇದು ಅಳವಡದಿರ್ದಡೆ, ಸದ್ಭಕ್ತನು ತನ್ನ ತನು ಮನ ಪ್ರಾಣಂಗಳ ಬಳಲಿಸಿ ತನಗೆ ಪ್ರಿಯವಾದ ಪುತ್ರ ಮಿತ್ರ ಕಳತ್ರಾದಿಗಳಿಗೆ ಹೇಗೆ ಸಕಲ ದ್ರವ್ಯಂಗಳಂ ಕೊಡುವನೋ ಹಾಗೆ ಸ್ನೇಹದಿಂದ ದಾಸೋಹವ ಮಾಡುವುದು, ಇದು ಕನಿಷ*ಕ್ರಿಯೆಯು. ಇದು ಮಹಾಜ್ಞಾನಿಪುರುಷರಿಗಲ್ಲದೆ ಅಳವಡದು. ಇದು ಅಳವಡದಿರ್ದಡೆ, ಶಕ್ತ್ಯಾನುಸಾರದಿಂ ಮಾಡುವುದು. ಇದು ನಿಕೃಷ್ಟಕ್ರಿಯೆಯು. ಅದೆಂತೆಂದಡೆ: ಶ್ರೂಯತಾಂ ಧರ್ಮಸರ್ವಸ್ವಂ ಶ್ರುತ್ವಾ ಚೈವಾವಧಾರ್ಯತಾಂ ಆತ್ಮನಃ ಪ್ರತಿಕೂಲಂ ಚ ಪರೇಷಾಂ ನ ಸಮಾಚರೇತ್ ಎಂದುದಾಗಿ ಇದನರಿತು ತನ್ನಂತೆ ಭಾವಿಸಿಯಾದಡೂ ದಾಸೋಹವ ಮಾಡಿ ಪ್ರಸನ್ನತೆಯ ಪಡೆವುದೇ ಸದ್ಭಕ್ತನ ಪಥವು ನೋಡಾ. ಇಂತಪ್ಪ ಉತ್ತಮ ಮಧ್ಯಮ ಕನಿಷ* ನಿಕೃಷ್ಟವೆಂಬ ಈ ನಾಲ್ಕು ಪರ್ಯಾಯದಲ್ಲಾದಡೆಯೂ, ಒಂದು ಪರ್ಯಾಯದಲ್ಲಿ ಭಾವಿಸಿಕೊಂಡು, ತನುಮನಧನವನಿತ್ತು ಸ್ನೇಹದಿಂದ ದಾಸೋಹವ ಮಾಡಿ ಪ್ರಸಾದವ ಪಡೆದು ಭೋಗಿಸಿ, ಭಕ್ತರಾಗಬೇಕು. ಈ ಪ್ರಕಾರದಿಂದಲ್ಲದೆ, ಮುಕ್ತಿ ಇಲ್ಲ. ಈ ಚತುರ್ವಿಧ ಕ್ರಿಯೆಗಳೊಳಗೆ ಆವುದನು ಮಾಡದೆ, ದುಷ್ಕ್ರಿಯೆಯಲ್ಲಿ ವರ್ತಿಸುತ್ತ ದಾಸೋಹವವಿಲ್ಲದೆ, ತನ್ನೊಡಲನೆ ಹೊರೆದಡೆ ಅವನು ಸದ್ಭಕ್ತರೊಳಗೆ ಸಲ್ಲ, ಅವಂಗೆ ಪ್ರಸಾದವಿಲ್ಲ. ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಅವನು ಉಭಯಭ್ರಷ್ಟ. ಇದನರಿತು ತನ್ನಂತೆ ಭಾವಿಸಿ, ವಿಶ್ವಾಸದಿಂ ದಾಸೋಹವಂ ಮಾಡಲು, ಇಹಸಿದ್ಧಿ, ಪರಸಿದ್ಧಿ, ಸರ್ವಸಿದ್ಧಿಯಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಉಪ ಜೀವೋಪಜೀವಕ ಶತ್ರು ಮಿತ್ರಾದಿ ಉದಾಸೀನ. ಸ್ತುತಿ ನಿಂದೆ ಮಾನಾಪಮಾನ ಪ್ರಾರಬ್ಧ ಸುಖದುಃಖ ಭೋಗೋಪಭೋಗಂಗಳನುಳ್ಳ ತನು ಉಳ್ಳನ್ನಕ್ಕ ಆರಿಗಾದಡೂ ರಾಗದ್ವೇಷವೆತ್ತ ಹೋದಡೊ ಬೆನ್ನಬಿಡವಾಗಿ ಇವ ಮಾಣಿಸಬಾರದು. `ದೃಷ್ಟತ್ವೇನ ಅಹಂ ಮಮ' ಎಂದುದಾಗಿ ಇಂತು ಕಾಮ ಕ್ರೋಧಾದಿಯೇ ಮಾಯೆ. ಈ ಮಾಯೆಯನುಳಿದು ಸೋಹಂಭಾವದೊಳಿರೆ ಆತ ನಿತ್ಯಮುಕ್ತನವ್ಯಕ್ತನಪ್ರಮೇಯ ಪರಮಾನಂದನಪ್ಪ ನಿರವಯನಹ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಚಕ್ರಿಯ ಕುಲವಾಸದ ಮೃತ್ತಿಕೆಯಂತೆ, ಏನ ನೆನೆದಡೂ ಅಪ್ಪುವಾರುವುದಕ್ಕೆ ಮುನ್ನವೆ, ಚಿತ್ತದಲ್ಲಿ ತೋರುವ ತೋರಿಕೆ. ಚಿತ್ರಕುಂಭಂಗಳ ಒಪ್ಪೊಪ್ಪದಲ್ಲಿ ಅಹ ತೆರನಂತೆ, ವಸ್ತು ತನ್ನಯ ಭಾವದಲ್ಲಿ ನಿಶ್ಚಯವಾಗಿ ನಿಂದಲ್ಲಿ, ಕೃತ್ಯ ಅಕೃತ್ಯವೆಂಬ ಹೆಚ್ಚುಕುಂದಿಲ್ಲ. ಕರ್ಮವಿಲ್ಲದ ಪೂಜೆ, ನಿರ್ಮಲವೆಂಬುದು ತೋರದ ಆ ಜಡ, ಉಮ್ಮಳ ದುಮ್ಮಳವೆಂಬ ಉಭಯವಳಿದ ಸುಮ್ಮಾನಸುಖಿಗೆ ಕರ್ಮ ನಿರ್ಮಲವೆಂಬುದೊಂದೂ ಇಲ್ಲ. ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮರಾಮನಾ.
--------------
ವೀರ ಗೊಲ್ಲಾಳ/ಕಾಟಕೋಟ
ಪರಾತ್ಪರವಾದ ಪರಶಿವಬ್ರಹ್ಮವನೊಡಗೂಡುವ ಅವಿರಳ ಸಮರಸ ಸದ್‍ಭಕ್ತಿಯಿಲ್ಲದೆ ನಾನು ಬ್ರಹ್ಮವು ತಾನು ಬ್ರಹ್ಮವು ಎಂದು ಪರಬ್ರಹ್ಮದ ನಿಲವನರಿಯದೆ ಕೆಟ್ಟರು ನೋಡಾ ಹಲಬರು ಕೆಲಬರು. ಅವರಾರೆಂದೊಡೆ : ಅಹಂ ಬ್ರಹ್ಮವೆಂದು ನುಡಿದ ಸನತ್ಕುಮಾರಂಗೆ ಒಂಟೆವಿಧಿಯಾಯಿತ್ತು. ಅಹಂ ಬ್ರಹ್ಮವೆಂದು ನುಡಿದ ಹರಿವಿರಿಂಚಿಗಳಿಗೆ ಭವಬಂಧನವಾಯಿತ್ತು. ಅಹಂ ಬ್ರಹ್ಮವೆಂದು ನುಡಿದ ಇಂದ್ರಚಂದ್ರರಿಗೆ ಅಂಗದ ಕೊರತೆಯಾಯಿತ್ತು. ಅಹಂ ಬ್ರಹ್ಮವೆಂದು ನುಡಿದ ಮನುಮುನಿಗಳಿಗೆಲ್ಲ ಮರಣವಾಯಿತ್ತು. ಇದನರಿತು ಹಮ್ಮುಬಿಮ್ಮುವನಳಿದು, ಹೆಮ್ಮೆ ಹಿರಿತನವ ನೀಗಿ, ಪರಬ್ರಹ್ಮವನೊಡಗೂಡಿ ಸುಖಿಯಾಗಿರ್ಪರಯ್ಯ ನಿಮ್ಮ ಶರಣರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಗದಲಳವಟ್ಟ ಸುಖವು ಲಿಂಗದಲ್ಲಿ ಲೀಯವಾಗಿ, ಲಿಂಗದಲ್ಲಿ ಲೀಯವಾದ ಸುಖವು ಮಹಾಲಿಂಗದಲ್ಲಿ ಲೀಯವಾಗಿ ಮಹಾಲಿಂಗದಲ್ಲಿ ಲೀಯವಾದ ಸುಖವು ಜ್ಞಾನಮುಖದಲ್ಲಿ ಲೀಯವಾಗಿ, ಜ್ಞಾನಮುಖದಲ್ಲಿ ಲೀಯವಾದ ಸುಖವು ಮಹಾಜ್ಞಾನದಲ್ಲಿ ಲೀಯವಾಗಿ, ಮಹಾಜ್ಞಾನದಲ್ಲಿ ಲೀಯವಾದ ಸುಖವು ಸರ್ವಾಂಗಮುಖದಲ್ಲಿ ಲೀಯವಾಗಿ, ಸರ್ವಾಂಗ[ಮುಖ]ದಲ್ಲಿ ಲೀಯವಾದ ಸುಖವು ಸಮರಸಸಂಗದಲ್ಲಿ ಲೀಯವಾಗಿ, ಸಮರಸಸಂಗದಲ್ಲಿ ಲೀಯವಾದ ಸುಖವು ಐಕ್ಯಸ್ಥಲದಲ್ಲಿ ಲೀಯವಾಗಿ, ಐಕ್ಯಸ್ಥಲದಲ್ಲಿ ಲೀಯವಾದ ಸುಖವು ನಿರಾಕಾರದಲ್ಲಿ ಲೀಯವಾಗಿ, ನಿರಾಕಾರದಲ್ಲಿ ಲೀಯವಾದ ಸುಖವು ನಿಶ್ಶಬ್ದದಲ್ಲಿ ಲೀಯವಾಗಿ, ನಿಶ್ಶಬ್ದದಲ್ಲಿ ಲೀಯವಾದ ಸುಖವು ನಿರಂಜನದಲ್ಲಿ ಲೀಯವಾಗಿ, ನಿರಂಜನದಲ್ಲಿ ಲೀಯವಾದ ಸುಖವು ಪರಬ್ರಹ್ಮದಲ್ಲಿ ಲೀಯವಾಗಿ, ಪರಬ್ರಹ್ಮದಲ್ಲಿ ಲೀಯವಾದ ಸುಖವ ಅಹಂ ಬ್ರಹ್ಮದಲ್ಲಿ, ಲೀಯವ ಮಾಡಿದರು ನಮ್ಮ ಶರಣರು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯನಲ್ಲಿ ಜನನಮರಣವಿರಹಿತ ನಿಜತತ್ವ ನಿಸ್ಪೃಹ ನಿಃಕಳಂಕ ಮಹಾಶರಣನಲ್ಲದೆ ಮತ್ತೆ ಉಳಿದ ಭೂಲೋಕದ ಭೂಭಾರ ಜೀವಿಗಳಿಗೆ ಅಳವಡುವುದೆ ಮಹಾಲಿಂಗೈಕ್ಯವು ? ಇಂತಪ್ಪ ಮಹಾಲಿಂಗೈಕ್ಯನ ನಿಲವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಆದಿ ಅನಾದಿಯ ಕೂಡಿದ ಮಹಿಮಂಗೆ ಆಧಾರವೆ ಆಚಾರಸ್ಥಲ, ಸ್ಪರ್ಶನವೆ ಗುರುಸ್ಥಲ. ಮಣಿಪೂರಕವೆ ಲಿಂಗಸ್ಥಲ, ಅನಾಹತವೆ ಜಂಗಮಸ್ಥಲ. ವಿಶುದ್ಧಿಯೆ ಪ್ರಸಾದಿಸ್ಥಲ, ಆಜ್ಞೇಯವೆ ಆನಂದಸ್ಥಲ. ಇಂತೀ ಆರು ಸ್ಥಲಂಗಳ ಮೇಳವಾಯಿತ್ತು. ಮೇಲಣ ಮೂರುಸ್ಥಲಂಗಳ ಮೀರಲರಿಯದೆ ಸಂಪರ್ಕವ ಮಾಡುವ ಅಣ್ಣಗಳಿಗೆ ನಾಲ್ಕು ವೇದ, ಹದಿನೆಂಟು ಪುರಾಣ, ಇಪ್ಪತ್ತೆಂಟು ದಿವ್ಯಾಗಮ, ಮೂವತ್ತೆರಡು ಉಪನಿಷತ್ತು, ಆರು ಶಾಸ್ತ್ರ, ಮೂವತ್ತೆರಡು ರಾಗ, ಅರುವತ್ತಾರು ಮಿಶ್ರಾರ್ಪಣ. ಇಂತೀ ಹನ್ನೆರಡು ಸಾವಿರ ಗೀತಪ್ರಬಂಧಕ್ಕೆ ಮುಖ್ಯವಾದ ಬೀಜ ಒಂದೇ ಒಂಕಾರ ಕಾಣಿಭೋ ! ಆ ಒಂಕಾರಕ್ಕೆ ಸೋಕರ ಸೋಹಂ ಎಂಬ ಮಹಾವೃಕ್ಷ. ಅದು ಮಹಾಸಾಜದಿಂದ ವೃಕ್ಷವಾಯಿತ್ತು. ಆ ಸಾಜವೇನು ವೃಕ್ಷವೆ ? ಅಲ್ಲ. ಬೀಜವೇ ಅಹಂ. ಈ ಉಭಯವಿಲ್ಲದೆ ನಿರೂಪಿಸುತ್ತಿರ್ದ ಎಂದುದಾಗಿ ಭವಿಯೊಳಗೆ ಅಡಗಿರ್ದ ಭಕ್ತ, ಆ ಭಕ್ತನೊಳಗೆ ಅಡಗಿರ್ದ ಮಾಹೇಶ್ವರ, ಆ ಮಾಹೇಶ್ವರನೊಳಗೆ ಅಡಗಿರ್ದ ಪ್ರಸಾದಿ, ಆ ಪ್ರಸಾದಿಯೊಳಗೆ ಅಡಗಿರ್ದ ಪ್ರಾಣಲಿಂಗಿ, ಆ ಪ್ರಾಣಲಿಂಗಿಯೊಳಗೆ ಅಡಗಿರ್ದ ಶರಣ ಆ ಶರಣನೊಳಗೆ ಅಡಗಿರ್ದ ಗುರು, ಆ ಗುರುವಿನೊಳಗೆ ಅಡಗಿರ್ದ ಲಿಂಗ, ಆ ಲಿಂಗದೊಳಗೆ ಅಡಗಿರ್ದ ಜಂಗಮ, ಆ ಜಂಗಮದೊಳಗೆ ಅಡಗಿರ್ದ ನಿತ್ಯಮುಕ್ತಿ,, ಆ ನಿತ್ಯಮುಕ್ತಿಯೊಳಗೆ ಅಡಗಿರ್ದ ನಿರಾಳವೆಂಬ ಮಹಾಪ್ರಕಾಶ. ಇವು ಅಡಗಿರ್ದವು ನಿರ್ವಯಲೆಂಬ ದೇಗುಲದೊಳು. ಆ ದೇಗುಲವ ಹೊಕ್ಕು, ಭಾಗಿಲವಂ ತಟ್ಟಿ, ಮೇಗಳ ಶಿಖರವ ಹತ್ತಿ ನೋಡಲಾಗಿ, ಬೆಳಗು ನಿಬ್ಬೆಳಗು ನಿರ್ಲೇಪ ನಿಃಕಾಯವಾದ ಲಿಂಗೈಕ್ಯನ ಕರಣಪ್ರಸಾದಕ್ಕೆ ಆನು ಅಂಗೈಸಿ ಬಂದೆನಯ್ಯಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಭಕ್ತನಾದರೆ ಪೃಥ್ವಿಸಾರದಲಾದ ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ. ಮಹೇಶ್ವರನಾದರೆ ಅಪ್ಪುವಿನ ಸಾರದಿಂದ ಉದಕವ ಲಿಂಗಕ್ಕೆ ಮಜ್ಜನಕ್ಕೆರೆಯದ ಭಾಷೆ. ಪ್ರಸಾದಿಯಾದರೆ ಅಗ್ನಿಯಿಂದಾದ ಕಳೆಯ ಲಿಂಗಕ್ಕೆ ವೇದಿಸದ ಭಾಷೆ. ಪ್ರಾಣಲಿಂಗಿಯಾದರೆ ವಾಯುವಿನಿಂದಾದ ಧ್ಯಾನವ ಲಿಂಗದಲ್ಲಿ ನೋಡದ ಭಾಷೆ. ಐಕ್ಯನಾದರೆ ಆತ್ಮದಿಂದಾದ ಅಹಂ ಮಮತೆಯಲಿ ಲಿಂಗವ ಭಾವಿಸದ ಭಾಷೆ. ಇಂತೀ ಆರರಿಂದ ವಿೂರಿ ತೋರುವ ಘನವು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗುರುವೆಂಬ ಭಾವ ಬ್ರಹ್ಮಮೂರ್ತಿ, ಲಿಂಗವೆಂಬ ಭಾವ ವಿಷ್ಣುಮೂರ್ತಿ, ಜಂಗಮವೆಂಬ ಭಾವ ರುದ್ರಮೂರ್ತಿ. ಅದೆಂತೆಂದಡೆ; ಅನಾದಿವಸ್ತು ರೂಪಾಗಬೇಕಾದ ಕಾರಣ, ಅಹಂ ಬ್ರಹ್ಮವೆಂಬ ಆಕಾರವಿಡಿದು ಬ್ರಹ್ಮಮೂರ್ತಿಯಾದ, ಜ್ಞಾನರುದ್ರ ಪೀಠಸಂಬಂಧಿಯಾದ ಕಾರಣ ವಿಷ್ಣುಮೂರ್ತಿಯಾದ, ಚಿದ್ಘನರುದ್ರ ಚತುರ್ವಿಧಫಲಂಗಳೊಳಗಾದ ಕಾರಣ ಸಂಹಾರರುದ್ರನಾದ. ಸಂಹಾರ ಅಡಗಿ ನಿಂದು, ಉಮಾಪತಿತತ್ವವ ಬಿಟ್ಟು ಸ್ವಯಂಭುಲಿಂಗವಾದ. ಆ ಸ್ವಯಂಭು ಜಂಗಮವೆಂಬಲ್ಲಿ ನಿಂದು ನಿಜವ ಕಂಡಲ್ಲಿ ಲಿಂಗವಾದ. ಲೀಯವಾಗಿ ಕಾಣಲ್ಪಟ್ಟುದ ನಿಲಿಸಿ ಭಾವರಹಿತನಾಗಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಲಿಂಗವಂತನು ಲಿಂಗಾಚಾರ, ಸದಾಚಾರ, ಭೃತ್ಯಚಾರ, ಗಣಾಚಾರ, ಶಿವಾಚಾರ, ಸರ್ವಾಚಾರಸಂಪನ್ನನೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು. ಅನೇಕ ವ್ರತನಿಯಮಂಗಳ ಹಿಡಿದು ನಡೆದು ವ್ರತಸ್ಥನೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು. ಕರುಣಿ ಶಾಂತ ನಿಸ್ಪೃಹನೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು. ತನುವ ಕೊಟ್ಟು, ಮನವ ಕೊಟ್ಟು, ಧನವ ಕೊಟ್ಟು ದಾತೃವೆನಿಸಿಕೊಳಬಹುದಲ್ಲದೆ. ಭಕ್ತನೆನಿಸಿಕೊಳಬಾರದು. `ಏಕ ಮೂರ್ತಿಸ್ತ್ರಿಧಾ ಭೇದಾ' ಎಂಬ ಕ್ರಿಯೆಯಲ್ಲಿ ಶ್ರೀಗುರುಲಿಂಗಜಂಗಮವೊಂದೆಯೆಂದು ಸದ್ಭಾವದಿಂ ತ್ರಿವಿಧದಲ್ಲಿ, ಆ ಮುಖವೊಂದೊಂದರಲ್ಲಿ ತ್ರಿವಿಧವನೂ ಏಕೀಭವಿಸಿ ಕಂಡು ಕಾಲಕರ್ಮಕಲ್ಪಿತ ಉಪಾಧಿರಹಿತನಾಗಿ ಆ ವಸ್ತುಗಳ ಮನೋವಾಕ್ಕಾಯದಲ್ಲಿ ಇಚ್ಚೈಸುತ್ತಂ ತನ್ನ ಮನೋವಾಕ್ಕಾಯದಲ್ಲಿ ತಡವಿಲ್ಲದೆ [ನೆಲೆಗೊಳಿಸಬೇಕು] `ನ ಗುರೋರಧಿಕಂ `ಗುರುಣಾ ದೀಯತೇ ಲಿಂಗಂ `ಗುರುಃ ಪಿತಾ ಗುರುರ್ಮಾತಾ ಎಂದುದಾಗಿ, ದೀಕ್ಷಾಮೂರ್ತಿರ್ಗುರುರ್ಲಿಗಂ ಪೂಜಾಮೂರ್ತಿಸ್ಸದಾಶಿವಃ ಶಿಕ್ಷಾಮೂರ್ತಿಶ್ಚರಸ್ತಸ್ಮಾತ್ ಏವಂ ಭೇದತ್ರಯೋ ಭವೇತ್ ದೀಕ್ಷಾ ಪೂಜಾ ಚ ಶಿಕ್ಷಾ ಚ ಸರ್ವಕರ್ತಾ ಚ ಜಂಗಮಃ ಎಂದುದಾಗಿ, `ಭಕ್ತ್ಯಾಪೂಜಾಂ ಅಹಂ ಕರ್ತಾ' `ನಿಷ್ಪ್ರಪಂಚೋ ನಿರಾಮಯಃ' ಎಂದುದಾಗಿ, ಪ್ರಪಂಚಯುಕ್ತೋ ದಾಸೋಹೀ ನಿಷ್ಪ್ರಪಂಚೋ ಹಿ ಜಂಗಮಃ ಪ್ರಪಂಚಯುಕ್ತೋ ಭಕ್ತಸ್ಸ್ಯಾತ್ ನಿಷ್ಪ್ರಪಂಚೋ ಹಿ ಜಂಗಮಃ ಎಂದುದಾಗಿ, ಸರ್ವಶಕ್ತಿಮಯಃ ಪ್ರೋಕ್ತಃ ಪುರುಷ ಏಕಶ್ಶಿವಸ್ತಧಾ ಭಕ್ತಿಪ್ರಸನ್ನಸ್ಸರ್ವೇಷಾಂ ಯಥಾ ಭಕ್ತಿಸ್ತಥಾ ಶಿವಃ ಸಕಲಶ್ಶಕ್ತಿರೂಪಶ್ಚ ಶಿವ ಏಕೋ ನಿಷ್ಕಲಸ್ತಥಾ ಶಕ್ತ್ಯಧೀನಃ ಪ್ರಪಂಚಸ್ಸ್ಯಾದ್ಯಥಾಭಕ್ತಿಸ್ಸ್ತಥಾ ಶಿವಃ ಗುರುಣಾ ಭಾವಿತಂ ಲಿಂಗಂ ಏಕಮೇವಾದ್ವಿತೀಯಕಂ ತಲ್ಲಿಂಗಸ್ಯ ಪ್ರಭಾ ಲಿಂಗಂ ಸರ್ವಲಿಂಗಂ ನ ಸಂಶಯಃ `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದುದಾಗಿ, `ಏವ ಏಕೋ ಧ್ಯೇಯಃ' ಎಂದುದಾಗಿ `ಅಣೋರಣೀಯಾನ್ಮಹತೋ ಮಹೀಯಾನ್' ಎಂದುದಾಗಿ ಸರ್ವಶಕ್ತಿಮಯಂ ಪ್ರೋಕ್ತಂ ಪುರುಷಮೇಕಂ ಶಿವಸ್ತಥಾ ಯಥಾ ಶಕ್ತಿಶ್ಚ ಸಂಯೋಗಂ ತಥಾ ತತ್ತ್ವಂ ಪರಶ್ಶಿವಃ ಸರ್ವೇಷಾಂ ಶಕ್ತಿರೂಪಂ ಚ ಪುರುಷಾದ್ವೈತಂ ಪರಶಿವಃ ಯಥಾಶಕ್ತಿಸ್ಸ್ತಥಾ ಪುರುಷ ಏಕ ರುದ್ರ ಇತಿ ಸ್ಮೃತಃ ಎಂದುದಾಗಿ, ಯಸ್ಯ ಚಿತ್ತಂ ಶಿವೇ ಲೀನಂ ತಸ್ಯ ಜಾತ್ಯಾದಿ ನ ಸ್ಮರೇತ್ ಶಿವಲಿಂಗೇ ಶಿಲಾಬುದ್ಧಿಂ ಕುರ್ವಾಣ ಇವ ಪಾತಕೀ ಸತ್ಯಭಾವಿ ಮಹತ್ಸತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ ನಿತ್ಯಭಾವಿ ಮಹನ್ನಿತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ ನಾನಾರೂಪಧರೋ ದೇವೋ ನಾನಾರೂಪಸಮನ್ವಿತಃ ನಾನಾಚಿಹ್ನಸಮೋಪೇತೋ ನಾನಾಲೀಲಾಧರೋ ಹರಃ ವೇದಾತೀತಂ ಮನೋತೀತಮಾಗಮಾತೀತಮಾರ್ಗಿಕಂ ಶಾಸ್ತ್ರಾತೀತಂ ಮಹಾಶಾಸ್ತ್ರೀ ತತ್ಸ್ಯಾಜ್ಜಂಗಮಲಕ್ಷಣಂ ಲಿಂಗಧಾರೀ ಮಹಾಲಿಂಗೀ ಲಿಂಗಧ್ಯಾನೀ ನಿರಂತರಂ ಲಿಂಗಾಲಿಂಗೀ ಮಹತ್ಸಂಗೀ ತತ್ಸ್ಯಾಜ್ಜಂಗಮಲಕ್ಷಣಂ ಜಂಗಮೋ ಜಂಗಮಂ ದಃಷ್ಟ್ವಾ ನಮಸ್ಕಾರಂ ತು ಸಂಭ್ರಮಾತ್ ಆಲಿಂಗನಂ ಮಹಾಪ್ರೀತ್ಯಾ ಕುರ್ಯಾಜ್ಜಂಗಮಲಕ್ಷಣಂ ಭೃತ್ಯಪೂಜಾರ್ಹಕರ್ತಾ ಚ ದೀಕ್ಷಾಮೂರ್ತಿರ್ಮಹಾಪ್ರಭುಃ ಶಿಕ್ಷಾಮೂರ್ತಿರ್ಮಹಾಕರ್ತಾ ತತ್ಸ್ಯಾಜ್ಜಂಗಮಲಕ್ಷಣಂ ಸರ್ವಸಂಗಪರಿತ್ಯಾಗೀ ಲಿಂಗಸಂಗೀ ನಿರಂತರಂ ದ್ವಂದ್ವೇ ತು ಸಮದೃಷ್ಟಿಸ್ಸ್ಯಾತ್ ತತ್ಸ್ಯಾಜ್ಜಂಗಮಲಕ್ಷಣಂ ಘೃಣಾದೃಷ್ಟಿರ್ಘೃಣಾವಾಕ್ಯಂ ಘೃಣಾಮೂರ್ತಿರ್ನಿರಂತರಂ ಕ್ರಿಯಾಕರ್ಮಸು ವಿಜ್ಞಶ್ಚ ಶಿಕ್ಷಾಚಾರ್ಯ ಇತಿ ಸ್ಮೃತಃ ಮೂರ್ತಿಶ್ಚ ಲಿಂಗಮೂರ್ತಿಶ್ಚ ಸುಶೀಲಂ ಲಿಂಗಶೀಲವತ್ ಗುಣಂ ಸರ್ವಸ್ಯ ಲಿಂಗಸ್ಯ ತತ್ಸ್ಯಾಜ್ಜಂಗಮಲಕ್ಷಣಂ ಎಂದುದಾಗಿ, ಹನ್ಯಾತ್‍ಕ್ರುದ್ಧೋಪಿ ಚಾಕಾಶಂ ಕ್ಷುಧಾರ್ತಾ ಖಾದಯೇತ್ತುಷಂ ತ್ಯಕ್ತ್ವಾ ಲಿಂಗಾರ್ಚನಂ ಮೂಢೋ ಮುಕ್ತ್ಯರ್ಥೀ ತ್ರಿತಯಂ ವೃಥಾ ಶ್ವಪಚೋ[s]ಪಿ ಮುನಿಶ್ರೇಷ*ಃ ಶಿವಭಕ್ತೋ ದ್ವಿಜಾಧಿಕಃ ಶಿವಭಕ್ತಿವಿಹೀನಸ್ತು ದ್ವಿಜೋ[s]ಪಿ ಶ್ವಪಚಾಧಮಃ ಸ ಲಿಂಗೀ ಸರ್ವದೈವಜ್ಞೋ ಯಸ್ಸ ಚಾಂಡಾಲವದ್ಭುವಿ ಲಿಂಗಾರ್ಚಕಸ್ತು ಶ್ವಪಚೋ ದ್ವಿಜಕೋಟ್ಯಾ ವಿಶಿಷ್ಯತೇ ಶಿವಧರ್ಮೇ, ಉಪನೀತಸಹಸ್ರೇಭ್ಯೋ ಬ್ರಹ್ಮಚಾರೀ ವಿಶಿಷ್ಯತೇ ಬ್ರಹ್ಮಚಾರಿಸಹಸ್ರೇಭ್ಯೋ ವೇದಾಧ್ಯಾಯೀ ವಿಶಿಷ್ಯತೇ ವೇದಾಧ್ಯಾಯಿಸಹಸ್ರೇಭ್ಯಸ್ಸಾಗ್ನಿಹೊತ್ರೀ ವಿಶಿಷ್ಯತೇ ಅಗ್ನಿಹೋತ್ರಿಸಹಸ್ರೇಭ್ಯೊ ಯಜ್ಞಯಾಜೀ ವಿಶಿಷ್ಯತೇ ಯಜ್ಞಯಾಜಿಸಹಸ್ರೇಭ್ಯಃ ಸತ್ರಯಾಜೀ ವಿಶಿಷ್ಯತೇ ಸತ್ರಯಾಜಿಸಹಸ್ರೇಭ್ಯಃ ಸರ್ವವಿದ್ಯಾರ್ಥಪಾರಗಃ ಸರ್ವವಿದ್ಯಾರ್ಥವಿತ್ಕೋಟ್ಯಾ ಶಿವಭಕ್ತೋ ವಿಶಿಷ್ಯತೇ ಎಂದುದಾಗಿ, ನಿಕೃಷ್ಟಾಚಾರಜನ್ಮಾನೋ ವಿರುದ್ಧಾಲೋಕವೃತ್ತಿಷು ಕೋಟಿಭ್ಯೋ ವೇದವಿದುಷಾಂ ಶ್ರೇಷಾ* ಮದ್ಭಾವಭಾವಿತಾಃ ಎಂದುದಾಗಿ, ದೇಶಾಂತರ ಸಂಹಿತೆಯಲ್ಲಿ: ಕ್ರಿಮಿಕೀಟಪತಂಗೇಭ್ಯಃ ಪಶವಃ ಪ್ರಜ್ಞಯಾಧಿಕಾಃ ಪಶುಭ್ಯೋ[s]ಪಿ ನರಾಶ್ಯ್ರೇಷಾ*ಸ್ತೇಷು ಶ್ರೇಷಾ* ದ್ವಿಜಾತಯಃ ದ್ವಿಜಾತಿಷ್ವಧಿಕಾ ವಿಪ್ರಾ ವಿಪ್ರೇಷು ಕ್ರತುಬುದ್ಧಯಃ ಕ್ರತುಬುದ್ಧಿಷು ಕರ್ತಾರಸ್ತೇಭ್ಯಃ ಸನ್ಯಾಸಿನೋಡಿಧಿಕಾಃ ತೇಭ್ಯೋ ವಿಜ್ಞಾನಿನಃ ಶ್ರೇಷಾ*ಸ್ತೇಷು ಶಂಕರಪೂಜಕಾಃ ತೇಷು ಶ್ರೇಷಾ* ಮಹಾಭಾಗಾ ಮಮ ಲಿಂಗಾಂಗಸಂಗಿನಃ ಲಿಂಗಾಂಗಸಂಗಿಷ್ವಧಿಕಃ ಷಟ್‍ಸ್ಥಲಜ್ಞಾನವಾನ್ಪುಮಾನ್ ತಸ್ಮಾದಪ್ಯಧಿಕೋ ನಾಸ್ತಿ ತ್ರಿಷು ಲೋಕೇಷು ಸರ್ವದಾ ಎಂದುದಾಗಿ, ಭೋಗಮೂರ್ತಿರ್ಮಹಾಲಿಂಗಂ ಜಂಗಮಶ್ಚ ನ ಸಂಶಯಃ ಜಂಗಮೋ ಲಿಂಗರೂಪಂ ಚ ಸತ್ಯಂ ಸತ್ಯಂ ನ ಸಂಶಯಃ ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಆಚಾರಶ್ಚ ಗುರುರ್ಲಿಂಗಂ ಜಂಗಮಶ್ಚ ಪ್ರಸಾದಕಃ ಪಂಚವಕ್ತ್ರಸಮಾಯುಕ್ತಂ ಮಹಾಲಿಂಗಸ್ಯ ಲಕ್ಷಣಂ ಜಂಗಮೋ ಲಿಂಗಮಾಚಾರೋ ಮಹಾಲಿಂಗಂ ಗುರುಸ್ತದಾ ಪಂಚವಕ್ತ್ರಸಮಾಯುಕ್ತಃ ಪ್ರಸಾದೋ ಲಿಂಗಲಕ್ಷಣಂ ಆಚಾರೋ ಗುರುಲಿಂಗಂ ಚ ಮಹಾಲಿಂಗಪ್ರಸಾದಕಂ ಪಂಚವಕ್ತ್ರಸಮಾಯುಕ್ತಂ ಸತ್ಯಂ ಜಂಗಮಲಕ್ಷಣಂ ಪ್ರಸಾದೋ ಜಂಗಮಶ್ಚೈವ ಆಚಾರೋ ಗುರುದೇವ ಚ ಮಹಾಲಿಂಗಸಮಾಯುಕ್ತಂ ಶಿವಲಿಂಗಸ್ಯ ಲಕ್ಷಣಂ ಜ್ಞಾನಾಚಾರೋ ಮಹಾಲಿಂಗಂ ಶಿವಲಿಂಗಂ ಚ ಜಂಗಮಃ ಪಂಚವಕ್ತ್ರಸಮಾಯುಕ್ತಂ ಇತ್ಯೇತೇ ಗುರುಲಕ್ಷಣಂ ಮಹಾಲಿಂಗಂ ಪ್ರಸಾದಶ್ಚ ಜಂಗಮೋ ಗುರುಲಿಂಗಕಂ ಪಂಚವಕ್ತ್ರಸಮಾಯುಕ್ತ ಆಚಾರೋ ಲಿಂಗಲಕ್ಷಣಂ ಅಂಗಮಾಚಾರಮಾಶ್ರಿತ್ಯ ಆಚಾರಃ ಪ್ರಾಣಮಾಶ್ರಿತಃ ತತ್ಪ್ರಾಣೋ ಶಿವಲಿಂಗ ಚ ತಲ್ಲಿಂಗಂ ಜಂಗಮಾಶ್ರಿತಂ ಇಂತೆಂದುದಾಗಿ, ಕ್ಷಣದಲ್ಲಿ ಅರಿ ಲಿಂಗವನು, ಕ್ಷಣಾರ್ಧದಲ್ಲಿ ಲಿಂಗವೂ ನಿನ್ನರಿವ. ಕ್ಷಣಾರ್ಧದಲ್ಲಿ ಅರಿ ಭಕ್ತಕಾಯನೆಂದು. ಪ್ರಾಣಲಿಂಗವೆಂದರಿದು ಲಿಂಗವನು ಒಂದು ಕ್ಷಣದಲ್ಲಿ ಮರೆದಡೆ ಕ್ಷಣಾರ್ಧದಲ್ಲಿ ಮರೆದಡೆ, ನಿನ್ನನೂ ಅಜ್ಞಾನಿಯ ಮಾಡಿ ಆಯಸಂ ಬಡಿಸಿ ಆಸೆಗೆ ಒಪ್ಪಿಸಿ ಘಾಸಿಮಾಡದೆ ಬಿಡನು ಲಿಂಗವು. ಕ್ಷಣಾರ್ಧದಲ್ಲಿ ಸರ್ವಪ್ರಪಂಚವೆಲ್ಲವನೂ ಮರೆದು ನಿತ್ಯವಾಗಿ ಲಿಂಗವನರಿ ಮನವೆ. ನಿರಂತರ ಲಿಂಗದಲ್ಲಿದ್ದು ಲಿಂಗವ ಹಾ[ಡೆ] ಸುಖಿಯಪ್ಪೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆ ಸಾಕ್ಷಿ.
--------------
ಉರಿಲಿಂಗಪೆದ್ದಿ
-->