ಅಥವಾ

ಒಟ್ಟು 51 ಕಡೆಗಳಲ್ಲಿ , 21 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉತ್ಪತ್ಯ ಪಿಂಡವೆಲ್ಲಕ್ಕೂ ಜನನವೊಂದೆ ಭೇದ. ಲಯವಹ ಘಟಕ್ಕೆ ಹಲವು ತೆರನುಂಟು. ಹಲವು ತೆರದ ಲಯವ ಬಲ್ಲಡೆ, ಬೇರೊಂದು ಕುಲಹೊಲೆಸೂತಕವೆಂಬುದುಂಟೆ ? ಬಂದ ಯೋನಿಯ ಹೊಂದುವ ಘಟದ ಉಭಯಸಂಧಿಯಲ್ಲಿ ಸಿಕ್ಕದೆ, ನಿಂದ ನಿಜವೆ ತಾನಾದವಂಗೆ ಬೇರೊಂದು ಇಲ್ಲಾ ಎಂದೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣವೆಂಬ ಜ್ಞಾನೇಂದ್ರಿಯಂಗಳು ತಾನಿರ್ದಲ್ಲಿ. ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಕರ್ಮೇದ್ರಿಯಂಗಳು ತಾನಿರ್ದಲ್ಲಿ. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ಪಂಚೇಂದ್ರಿಯವಿಷಯಂಗಳು ತಾನಿರ್ದಲ್ಲಿ. ವಚನ ಗಮನ ಆದಾನ ವಿಸರ್ಜನ ಆನಂದವೆಂಬ ಕರ್ಮೇಂದ್ರಿಯಂಗಳ ತನ್ಮಾತ್ರಯಂಗಳು ತಾನಿರ್ದಲ್ಲಿ. ಮನ ಬುದ್ಧಿ ಚಿತ್ತ ಅಹಂಕಾರ ಜೀವನೆಂಬ ಜೀವಪಂಚಕಂಗಳು ತಾನಿರ್ದಲ್ಲಿ. ಇವೆಲ್ಲ ತನ್ನಲ್ಲಿ ಉತ್ಪತ್ಯ ಸ್ಥಿತಿ ಲಯವಾಗಿ ಮತ್ತಂ ತನ್ನಾಧೀನದಲ್ಲಿ ಆಡುತ್ತಿಹುದಲ್ಲದೆ ಸ್ವತಂತ್ರ ಪರಬ್ರಹ್ಮವೆ ತಾನೆಂದರಿದ ಮಹಾಶರಣನು ಅದರಾಧೀನದಲ್ಲಿ ತಾನಾಡನು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ. ದೇವರುದೇವರೆಂದರೇನು? ಒಮ್ಮರ ದೇವರೇ? ವಿಶ್ವಾಧಿಪತಿ ಶಿವನೊಬ್ಬನೆ ದೇವನಲ್ಲದೆ, ಉಳಿದವರೆಲ್ಲ ದೇವರೆ? ಬ್ರಹ್ಮ ದೇವರೆಂಬಿರೇ? ಬ್ರಹ್ಮನ ಶಿರವ ಹರ ಚಿವುಟಿದ. ವಿಷ್ಣು ದೇವರೆಂಬಿರೇ? ಹತ್ತವತಾರದಲ್ಲಿ ಹರನಿಂದ ಹತಿಸಿಕೊಂಡ. ಇಂದ್ರ ದೇವರೆಂಬಿರೇ? ಇಂದ್ರನ ಮೈಯೆಲ್ಲಾ ಭಗವಾಗಿ ನಿಂದೆಗೊಳಗಾದ. ಚಂದ್ರ ದೇವರೆಂಬಿರೇ? ಕುಂದ ಹೆಚ್ಚ ತಾಳಿ ಕ್ಷಣಿಕನಾದ. ಸೂರ್ಯ ದೇವರೆಂಬಿರೇ? ಸೂರ್ಯ ಕುಷ*ರೋಗದಿಂದ ಭ್ರಷ್ಟಾದ. ಇನ್ನುಳಿದ ದೇವತೆಗಳು ಭಂಗಬಟ್ಟುದಕ್ಕೆ ಕಡೆಯಿಲ್ಲ. ``ಸರ್ವದೇವ ಪಿತಾ ಶಂಭುಃ ಭರ್ಗೋಃ ದೇವಸ್ಯ ಧೀಮಹಿ' ಎಂದುದಾಗಿ, ಸರ್ವದೇವರುಗಳ ಉತ್ಪತ್ಯ ಸ್ಥಿತಿ ಲಯಂಗಳ ಮಾಡುವ ಕರ್ತ ಶಿವನೊಬ್ಬನೇ ದೇವನೆಂದು ನುಡಿದೆನು ನಡೆದೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲದೆ ಇಲ್ಲವೆಂದು.
--------------
ಸ್ವತಂತ್ರ ಸಿದ್ಧಲಿಂಗ
ಸಕಲ ಸ್ಥಾವರ ಚರ ಘಟಪಟಾದಿಗಳೆಲ್ಲವು ಪೃಥ್ವಿಯಿಂದವೆ ಜನನ, ಪೃಥ್ವಿಯ ಉತ್ಕೃಷ್ಟದಿಂದವೆ ಮರಣವೆಂಬುದನರಿತಲ್ಲಿ, ಕರ್ಮಕ್ರೀ ವರ್ಮವ ಬಲ್ಲವ. ಸರ್ವಚೇತನ ಭೌತಿಕಕ್ಕೆಲ್ಲಕ್ಕೂ ಅಪ್ಪುವಿನಿಂದವೆ ಉತ್ಪತ್ಯ, ಅಪ್ಪುವಿನ ಉತ್ಕೃಷ್ಟದಿಂದವೆ ನಷ್ಟವೆಂಬುದನರಿತಲ್ಲಿ, ಜೀವನದ ಆಗುಚೇಗೆಯ ಬಲ್ಲವ. ಸರ್ವದೀಪ್ತಿ ಪ್ರಕಾಶ ತೇಜಸ್ಸು ಅಗ್ನಿಯಿಂದವೆ ಉತ್ಪತ್ಯ, ಅಗ್ನಿಯ ಉತ್ಕೃಷ್ಟದಿಂದವೆ ನಷ್ಟವೆಂಬುದನರಿತಲ್ಲಿ, ಪರಮಪ್ರಕಾಶ ಬಲ್ಲವ. ಸರ್ವಗೃಹೀತವಾಗಿ ಸುಳಿವ ಮಾರುತ ಘೋಷ ವಾಯುವಿನಿಂದವೆ ಉತ್ಪತ್ಯ, ವಾಯುವಿನ ಉತ್ಕೃಷ್ಟದಿಂದವೆ ಲಯವೆಂಬುದನರಿದಲ್ಲಿ ದಿವ್ಯಜ್ಞಾನ ಬಲ್ಲವ. ಆಕಾಶ ಮಹದಾಕಾಶದಿಂದವೆ ಉತ್ಪತ್ಯ, ಮಹದಾಕಾಶ ಮಹದೊಡಗೂಡಿದಲ್ಲಿ ಪಂಚಭೌತಿಕ ನಷ್ಟವೆಂಬುದನರಿದು ಈ ಪಂಚಭೌತಿಕದ ತನು, ಸಂಚಿತ ಪ್ರಾರಬ್ಧ ಆಗಾಮಿಗಳ ಕಂಡು, ಸಂಚಿತವೆ ಉತ್ಪತ್ಯ, ಪ್ರಾರಬ್ಧವೆ ಸ್ಥಿತಿ, ಆಗಾಮಿಯೆ ಲಯವೆಂಬುದ ತಿಳಿದು, ಇಂತಿವರೊಳಗಾದ ಸಂಚದಲ್ಲಿ ಸಂಬಂಧಿಸಿಪ್ಪ ಸರ್ವೇಂದ್ರಿಯದ ಗೊಂಚಲು ಮುರಿದು ನಿಂದ ಸ್ವಯಾನುಭಾವಿಗೆ ಕಾಯಕ್ಕೆ ಕರ್ಮವೆಂಬುದಿಲ್ಲ, ಜ್ಞಾನಕ್ಕೆ ಇದಿರೆಡೆಯೆಂಬ ಕೂಟದ ಭಾವ ನಷ್ಟ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು.
--------------
ಮೋಳಿಗೆ ಮಹಾದೇವಿ
ನೀರೊಳಗೆ ಯಂತ್ರವನೆ ಹೂಡಿ ನಿರಾಮಯವ ತುಂಬಿ, ತುಂಬಿದ ನೀರೊಳಗೆ ಒಲೆಯ ಹೂಡಿ ಅಡುಕಿ ಸುಡುವಿನಂಶವ ನೀವು ನೋಡಲೊಡನೆ ಎಲ್ಲಾ ಉತ್ಪತ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮಯೂರನಾಡಿ, ಮಂಡೂಕನಾಡಿ, ಜಳೂಕನಾಡಿ, ಅಹಿವಳಿನಾಡಿ, ಮಂಡಲಗಮಕನಾಡಿ, ಷಂಡೇತಪಥನಾಡಿ, ದೀರ್ಘನಾಡಿ, ಅಧಮನಾಡಿ, ಉತ್ತರನಾಡಿ, ಪೂರ್ವನಾಡಿ. ಪಶ್ಚಿಮನಾಡಿ, ಗಜಗಮನನಾಡಿ, ಹಚ್ಚೋತಿನಾಡಿ, ವಿಕ್ರಮನಾಡಿ, ಸೂತ್ರನಾಡಿ, ಸಂಚುನಾಡಿ, ಸಂಚಲನಾಡಿ, ಶೈತ್ಯನಾಡಿ, ಉಷ್ಣನಾಡಿ, ವಿಹಂಗನಾಡಿ, ಕೂರ್ಮನಾಡಿ, ಮರ್ಕಟನಾಡಿ, ಪಿಪೀಲಿಕಾನಾಡಿ, ದಂಷ್ಟ್ರನಾಡಿ, ಮಕರನಾಡಿ, ಕರ್ಕೋಟಕನಾಡಿ, ಸಮರಸನಾಡಿ, ಸಂತೋಷನಾಡಿ. ಇಂತೀ ಪ್ರಥಮನಾಡಿಯೊಳಗಾದ ಶರೀರದಲ್ಲಿ ತೋರುವ ನಾಡಿ ಜೀರ್ಣ ಪರ್ಣದಂತೆ ರೋಮಕೂಪದಲ್ಲಿ ಸೂಸುವ ವಾಯು, ಇಂತಿವ ನೋಡಿ ವ್ಯಾಧಿಕ್ರಮವನರಿತೆಹೆನೆಂದಡೆ ಅದಾರಿಗೂ ಅಸಾಧ್ಯ. ನಾ ಮೂರುನಾಡಿಯ ಬಲ್ಲೆ, ಉತ್ಪತ್ಯ ಒಂದು ಸ್ಥಿತಿ ಎರಡು, ಲಯ ಮೂರು. ನಾಳದ ನಾಡಿಯ ಬಲ್ಲೆ, ಭಕ್ತಿಯೆಂಬ ಹಸ್ತವಿಡಿದು ನೋಡಲಾಗಿ. ಗುರುನಾಡಿ ಉಭಯವ ಕೊಂಡೆಡೆಯಾಡುತ್ತಿದೆ, ಲಿಂಗನಾಡಿ ತ್ರಿವಿಧಸಂಧಿಯೊಳಗೆ ಸೂಸುತ್ತಿದೆ. ಜಂಗಮನಾಡಿ ಮೂರರ ಹಂಗು ಬಿಟ್ಟು ಮಹದಲ್ಲಿ ಸಂದಿರುತ್ತದೇಕೊ ? ಇದು ಲಿಂಗಾಂಗಿಗಳ ವೈದ್ಯ. ಸಂಗನಬಸವಣ್ಣ ಬಂದಾಗ ಎನ್ನ ಕೊಂಡು ಬಂದ, ತನ್ನ ವಶಕ್ಕೆ ವೈದ್ಯನೆಂದು. ಈ ವೈದ್ಯದ ಚೀಲವ ಹೊತ್ತು ಗಸಣಿಗೊಳ್ಳುತ್ತಿದೇನೆ. ಈ ಕಾಯಕದ ಸೇವೆಯ ಬಿಡಿಸಿ, ಕರಣಪ್ರಸಾದವ ಕೊಟ್ಟು, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ನಿಮ್ಮಡಿಯೊಳಗೆನ್ನನಿರಿಸು.
--------------
ವೈದ್ಯ ಸಂಗಣ್ಣ
ಜಗತ್ ಸೃಷ್ಟಾ ್ಯರ್ಥಕಾರಣವಾಗಿ ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ದೆಸೆಯಿಂದ ಷಟ್‍ಶಕ್ತಿಗಳುತ್ಪತ್ಯವಾದವು. ಆ ಷಟ್‍ಶಕ್ತಿಯೇ ಕಾರಣವಾಗಿ ಷಡಂಗಗಳು ಉತ್ಪತ್ಯವಾದವು. ಆ ಷಡಂಗದಲ್ಲಿ ಲೋಕಾದಿಲೋಕ ಸಚರಾಚರಂಗಳ ಉತ್ಪತ್ಯ ಲಯವು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಉತ್ಪತ್ಯ ಗುರುವಿನಲ್ಲಿ, ಸ್ಥಿತಿ ಲಿಂಗದಲ್ಲಿ, ಲಯ ಜಂಗಮದಲ್ಲಿ. ಮೂರನರಿತು ಮೀರಿದ ಘನ ಕೂಟ ವಸ್ತುವಿನಲ್ಲಿ. ಇದ ಸಾರಿದೆ, ಗೂಡಿನ ಒಳಗನರಿತು ಕೂಡು, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ.
--------------
ಮನುಮುನಿ ಗುಮ್ಮಟದೇವ
ಆ ಉತ್ಪತ್ಯ ಅಹಂಕಾರದಿಂದ, ಅಹಂಕಾರದ ಕೇಡು ಅರುಹಿನಿಂದ; ಅರುಹಿನ ಕೇಡು ತಾ ಬಯಲಾದಿಂದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಉತ್ಪತ್ಯ ಉದಯ, ಸ್ಥಿತಿ ಮಧ್ಯಾಹ್ನ, ಲಯ ಅಸ್ತಮಯವೆಂಬ ಬಾರದ ಬಟ್ಟೆಯಲ್ಲಿ ಮೆಟ್ಟಿದ ಹಜ್ಜೆಯಲ್ಲಿ ಮೆಟ್ಟಡೆತ್ತು ಜ್ಞಾನಿ. ಇಂತಿದು ದೃಷ್ಟವಾಯಿತ್ತು. ಅವರಿಗದು ನನಗಿದು ತೂತಿನ ಹಾದಿಯೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಇನ್ನು ಆ ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಅಕಾರವೇ ರುದ್ರ, ಉಕಾರವೇ ಈಶ್ವರ, ಮಕಾರವೇ ಸದಾಶಿವ. ಅಕಾರವೆಂಬ ಪ್ರಣವದಲ್ಲಿ ನಕಾರ ಮಕಾರ ಉತ್ಪತ್ಯ ಲಯ. ಉಕಾರವೆಂಬ ಪ್ರಣವದಲ್ಲಿ ಶಿಕಾರ ವಕಾರ ಉತ್ಪತ್ಯ ಲಯ. ಮಕಾರವೆಂಬ ಪ್ರಣವದಲ್ಲಿ ಯಕಾರ ಆತ್ಮನುತ್ಪತ್ಯ ಲಯ. ಅಕಾರ ಮಕಾರ ಉಕಾರ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಓಂಕಾರೋಪನಿಷತ್ : ಅಕಾರವೆಂಬ ಪ್ರಣವದಲ್ಲಿ- ``ನಕಾರಶ್ಚ ಮಕಾರೋ ಭವತಿ | ಓಂ ರುದ್ರೋ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ದ್ವಿತೀಯೇ ಪ್ರಣವಾಂಶಿಕೇ ||'' ಉಕಾರವೆಂಬ ಪ್ರಣವದಲ್ಲಿ- ``ಶಿಕಾರಶ್ಚ ನಕಾರೋ ಭವತಿ | ಓಂ ಈಶ್ವರೋ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಿಕೇ ||'' ಮಕಾರವೆಂಬ ಪ್ರಣವದಲ್ಲಿ- ``ಯಕಾರಶ್ಚಾತ್ಮಾ ಭವತಿ | ಓಂ ಸದಾಶಿವೋ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಿಕೇ ||'' ``ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಯಕ್ಷರಂ | ಅಕಾರಂ ನಾದರೂಪೇಣಂ ಉಕಾರಂ ಬಿಂದುರುಚ್ಯತೇ | ಮಕಾರಂತಿ ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ || ವಕಾರಂ ತಾರಕಾರೂಪಂ ಮಕಾರಂ ದಂಡ ಉಚ್ಯತೇ | ಶಿಕಾರಂ ಕುಂಡಲಾಕಾರಂ ವಕಾರಶ್ಚಾರ್ಧಚಂದ್ರಕಂ | ಯಕಾರಂ ದರ್ಪಣಾಕಾರಂ ಓಂಕಾರೋ ಜ್ಯೋತಿರೂಪಕಂ | ಇತಿ ಪ್ರಣವಂ ವಿಜ್ಞೇಯಂ ಏತದ್ಗೋಪ್ಯಂ ವರಾನನೇ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆರುಸ್ಥಲವಿಟ್ಟು ಬೇರೆ ಕರೆದ ಭಾವವಾವುದಯ್ಯಾ ? ಸಕಲಗುಣಂಗಳನರತು, ಸರ್ವಜೀವಕ್ಕೆ ದಯಾಪರನಾಗಿಪ್ಪುದು, ಭಕ್ತಿಸ್ಥಲ. ಸಕಲದೇಹಭಾವಂಗಳಲ್ಲಿ ಕಲೆದೋರದಿಪ್ಪುದು, ಗುರುಸ್ಥಲ. ಉತ್ಪತ್ಯ ಸ್ಥಿತಿ ಲಯಕ್ಕೆ ಹೊರಗಾದುದು, ಲಿಂಗಸ್ಥಲ. ಆ ಮೂರ ಹೆರೆಹಿಂಗಿ ನಿಂದುದು, ಜಂಗಮಸ್ಥಲ. ಆ ಚತುರ್ವಿಧವನೊಳಕೊಂಡದುದು, ಶರಣಸ್ಥಲ. ಆ ಅಯಿದನವಗವಿಸಿ ನಿಂದುದು, ಐಕ್ಯಸ್ಥಲ. ಇಂತೀ ಷಡುಸ್ಥಲದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ನಿಂದುದು, ಒಂದೆ ಸ್ಥಲ. ಮರೆದು ಅರಿದಲ್ಲಿ ಆಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಷಡಂಗಲೇಪವಾಗಿ ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ನೀರು ನೀರನೆ ಕಡೆದು ನೀರೊಳಗೆ ಉತ್ಪತ್ಯ ನಿರಾಲಂಬರೂಪವು. ಅರಣ್ಯದೊಳಗೆ ಮತ್ತೆ ಓರಂತೆ ಇದ್ದಡೆ ಕಾರಣವ ಹೇಳುವನು ಭಕ್ತಿರೂಪಾ. ಮೂರು ತಾನೇಯಾಗಿ, ಆರರಲಿ ಅನುಕರಿಸಿ ಆರಾರನೇ ಮೀರಿ ಗುರುಕರುಣದಾ ತೋರುವ ಶಿವಭಕ್ತಿ ಮೀರಿಪ್ಪ ವೈರಾಗ್ಯ ನೀರು ನಿರ್ಮಲ ವಜ್ರ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮಹಾಶೂನ್ಯ ಅಂಧಕಾರ ಸುರಾಳ ನಿರಾಳ ನಿರಾಲಂಬದಿಂದತ್ತ ತನ್ಮಯ ಸ್ವಯಂಭು ಸನ್ನದ್ಧವಾಗಿ ಅನಾದಿವಸ್ತು ಆದಿಸ್ವರೂಪವ ತಾಳ್ದು ಬಂದ ವಿವರ: ನಾದ ಬಿಂದು ಕಳೆ ಈ ತ್ರಿವಿಧಭೇದ ಏಕವಾಗಿನಿಂದ ದೆಸೆಯಿಂದ ಆ ವಸ್ತುವಿನ ತಿಲಾಂಶು ಸದಾಶಿವಮೂರ್ತಿಯ ಅಂಶೀಭೂತವಾಗಿ ಏಕಾಂತ ಪ್ರಮಥ ರುದ್ರನ ದೆಸೆಯಿಂದ ದಶರುದ್ರರ ಸಂಬಂಧ ವೈಷ್ಣವಭೇದ. ಆ ವೈಷ್ಣವ ದಶ ಅವತಾರಭೇದ. ದಕ್ಷ ಮುಂತಾದ ನವಬ್ರಹ್ಮತ್ವದಿಂದ ಮನುಮುನಿಗಳು ಮುಂತಾದ ಯಕ್ಷ ರಾಕ್ಷಸ ಶಕ್ತಿದೇವತೆ ಕುಲ ಮುಂತಾದ ಷಡ್ದರ್ಶನ ಪಕ್ಷಪಾತ ಭೇದಂಗಳಾಗಿ ಇಪ್ಪ ತೆರನ ವೇದದ ಹಾದಿಯಿಂದ ಶಾಸ್ತ್ರದ ಸಂದೇಹದಿಂದ ಪುರಾಣದ ಪೂರ್ವ ಮುಂತಾದ ಯುಕ್ತಿಯಿಂದ ತಿಳಿದು ಉತ್ತಮ ಮಧ್ಯಮ ಕನಿಷ*ವೆಂಬ ದೇವತ್ವಕುಲವನರಿ. ಇಂದುವಿನ ಕಳೆಯಿಂದ ಆ ಇಂದುವಿನ ಕಳೆಯನರಿವಂತೆ ಜ್ಯೋತಿಯ ಕಳೆಯಿಂದ ಆ ಜ್ಯೋತಿಯ ಲೇಸು ಕಷ್ಟವ ಕಾಂಬಂತೆ ನಿಮ್ಮ ಶಾಸ್ತ್ರಸಂಪದಗಳಲ್ಲಿ ಏಕಮೇವನದ್ವಿತೀಯನೆಂಬ ಶ್ರುತಿಯ ವಿಚಾರಿಸಿಕೊಂಡು ಇದ್ದ ಮತ್ತೆ ಆರಡಿಯೇತಕ್ಕೆ ? ಇಂತೀ ಭೇದಕ್ಕೆ ವಿಶ್ವಮಯನಾಗಿ ವಿಶ್ವಚಕ್ಷುವಾಗಿ ತತ್ವಂಗಳಿಗೆ ಮುಖ್ಯವಾಗಿ ಉತ್ಪತ್ಯ ಸ್ಥಿತಿ ಲಯಕ್ಕೆ ಕರ್ತೃವಾಗಿ ಆಚಾರ್ಯಮತಕ್ಕೆ ಅಂಗವಾಗಿ ಲೀಲಾಗುಣದಿಂದ ಶಕ್ತಿಸಮೇತವಾಗಿ ಮತ್ತೆ ನಿನ್ನ ಇಚ್ಫೆ ಹಿಂಗಿ ನಿಶ್ಚಯವಾಗಿ ಸ್ವಯಂಭುವಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ
ಅಂಕುರ ಪಲ್ಲವ ತರು ಕುಸುಮಫಲರಸಸಾರಾಯ ಇನಿತಿನಿತೆಲ್ಲಿದುದೊ, ಬೀಜ ಮೊಳೆದೋರದಂದು ? ನಾಭಿಗಳೆಯದ ಪಶುವಿನ ಅಮೃತವೆಲ್ಲಿದ್ದುದೊ, ವೃಷಭ ಮುಟ್ಟದಂದು ? ಘನಕುಚ ಯೌವನೆಯರ ರಜಪ್ರಶ್ನೆಯಲ್ಲಿ ಒದಗಿದ ಹಸುಗೂಸು ಎಲ್ಲಿದ್ದುದೂ, ಕೊಡಗೂಸು ಕನ್ಯೆಯಳಿಯದಂದು ? ತ್ರಿಜಗದ ಉತ್ಪತ್ಯ, ಸಚರಾಚರದ ಗಂಭೀರವೆಲ್ಲಿದ್ದುದೊ, ಶಿವನ ಅಷ್ಟತನುಮೂರ್ತಿಗಳಿಲ್ಲದಂದು ? ಸಪ್ತಸ್ವರ ಬಾವನ್ನಕ್ಷರವೆಲ್ಲಿದ್ದುದೊ, ಜ್ಞಾನ ಉದಯಿಸದಂದು? ಶರಧಿಯೊಳಗಣ ರತ್ನವೆಲ್ಲಿದ್ದುದೊ, ಸ್ವಾತಿಯ ಸಲಿಲವೆರಗದಂದು ? ಶರಣಪಥ ಲಿಂಗೈಕ್ಯವೆಲ್ಲಿದ್ದುದೊ, ಆರಾಧ್ಯ ಸಕಳೇಶ್ವರದೇವರು ಕರುಣಿಸಿ ಕಣ್ದೆರೆದು ತೋರದಂದು ?
--------------
ಸಕಳೇಶ ಮಾದರಸ
ಇನ್ನಷ್ಟು ... -->