ಅಥವಾ

ಒಟ್ಟು 38 ಕಡೆಗಳಲ್ಲಿ , 18 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ರತವ ಹಿಡಿವಲ್ಲಿ, ವ್ರತವ ಉಪದೇಶ ಮಾಡುವಲ್ಲಿ, ಹಿಡಿವಾತನ ಯುಕ್ತಿ ಎಂತೆಂದಡೆ ಮನ, ವಚನ, ಕಾಯ, ತ್ರಿಕರಣಶುದ್ಧಾತ್ಮನಾಗಿ, ಸತಿ, ಸುತ, ಬಂಧುವರ್ಗಂಗಳೆಲ್ಲವು ಏಕತ್ರವಾಗಿ, ನಡೆವುದ ನಡೆಯದಿಹುದೆಂಬುದ ಸ್ಥಿರೀಕರಿಸಿ, ಶ್ರುತ, ದೃಷ್ಟ, ಅನುಮಾನ, ಮೂರನೊಂದುಮಾಡಿ ಮತ್ತೆ ಏನುವ ತೋರದ ವ್ರತವಸ್ತುವನಾದರಿಸಬೇಕು. ವ್ರತ ದೀಕ್ಷೆಯ ಮಾಡುವಲ್ಲಿ ಗುರುವಿನ ಇರವೆಂತೆಂದಡೆ ; ಅವನ ಆಗು ಚೇಗೆಯನರಿತು ಅರ್ತಿಕಾರರಿಗೆ ಇದಿರು ಮೆಚ್ಚುವಭೇದ. ಹಿರಣ್ಯದ ಒದಗಿನ ಲಾಗು, ಕೊಲೆ ಹಗೆಯಪ್ಪನ ರಾಗವಿರಾಗಗಳೆಂಬ ಭಾವವ ವಿಚಾರಿಸಿ, ಈ ವ್ರತ ನೇಮ ನಿನಗೆ ಲಾಗಲ್ಲ ಎಂದು ಅರೆಬಿರಿದಿನ ನೇಮ. ತೊಡಕಿನಂಬಿನ ಘಾಯ ತಪ್ಪಿದಡೆ ಇಹಪರದಲ್ಲಿ ಉಭಯದೋಷz ಹೀಗೆಂದು ಉಪದೇಶವಂ ಕೊಟ್ಟು ಸಂತೈಸುವುದು ಗುರುಸ್ಥಲ. ಆ ಗುಣಕ್ಕೆ ಮುಯ್ಯಾಂತು, ಪರಮಹರುಷಿತನಾಗಿ, ಗಣಸಮೂಹಂ ಕೂಡಿ, ಪರಮ ವಿರಕ್ತರಂ ಕರೆದು, ಮಹತ್ತು ನೆರಹಿ, ಗುರುಲಿಂಗಜಂಗಮಸಾಕ್ಷಿಯಾಗಿ ಮಾಡುವುದೆ ವ್ರತ. ಹೀಗಲ್ಲದೆ, ಮನಕ್ಕೆ ಬಂದಂತೆ, ತನು ಹರಿದಾಡುವಂತೆ, ಊರೂರ ದಾರಿಗರಲ್ಲಿ ವ್ರತವ ಮಾಡಿಕೊಳ್ಳಿಯೆಂದು ಸಾರಲಿಲ್ಲ. ಇಂತೀ ಉಭಯವನರಿತು ವ್ರತಕ್ಕೆ ಅರ್ಹನಾಗಬೇಕು. ಇಂತೀ ಸರ್ವಗುಣಸಂಪನ್ನ ಮಾಡಿಸಿಕೊಂಬವನೂ ತಾನೆ, ಮಾಡುವಾತನೂ ತಾನೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ನಾನೆಂಬುದ ಮರೆದಲ್ಲಿ ಗುರುಸ್ಥಲ. ಜಗದ ಆಗುಛೇಗೆಗೆ ಸಿಕ್ಕದಿಪ್ಪುದು ಲಿಂಗಸ್ಥಲ. ತ್ರಿವಿಧದ ಬಟ್ಟೆಗೆ ಬಾರದಿಪ್ಪುದು ಜಂಗಮಸ್ಥಲ. ಅಂಗವರತು, ಮನದ ಪ್ರಕೃತಿ ನಿಂದು, ಗುರು ಲಿಂಗ ಜಂಗಮದ ತ್ರಿವಿಧಾಂಗದದಲ್ಲಿ ನಿಶ್ಚಯವಾದ ಸದ್ಭಕ್ತ ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವು ತಾನೆ.
--------------
ನುಲಿಯ ಚಂದಯ್ಯ
ಗುರುಸ್ಥಲ ಘನವೆಂಬೆನೆ ? ಗುರುವಿಂಗೆ ಲಿಂಗವುಂಟು. ಲಿಂಗಸ್ಥಲ ಘನವೆಂಬೆನೆ ? ಲಿಂಗಕ್ಕೆ ಜಂಗಮವುಂಟು. ಆ ಜಂಗಮ ಎಲ್ಲಿ ಇದ್ದಡೆ ಅಲ್ಲಿ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಭಕ್ತಿ ಅನುಭಾವ ಸನ್ನಿಹಿತ ಕಾಣಾ_ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವ ತನ್ನೊಳಗರಿವುದು ಗುಪ್ತಜ್ಞಾನವಯ್ಯ. ಪುರೋಹಿತನಾಗುವುದು ಅಂಗದ್ವಾರಕ್ಕೆ. ಪುರುಷಾರ್ಥ ಮರುಳುಗಳು ಎತ್ತ ಬಲ್ಲರು ಮಂತ್ರ ಉಪದೇಶವ ? ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರುಹಿತರಿಗುಂಟಲ್ಲದೆ ಅನಂಗಿಗುಂಟೆ ? ಗರಿಯಿಲ್ಲದ ಅಂಬ ಹೆದೆಯಿಲ್ಲದ ಬಿಲ್ಲಿನಲ್ಲಿ ಸ್ವರವಂದಿಗನಿಲ್ಲದೆ ಎಚ್ಚಂತೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ ಕಟ್ಟಳೆಯ ವರುಷಕ್ಕೆ ತಪ್ಪದೆ ಅಂಗವಸ್ತ್ರವೆಂದು ಲಿಂಗವಸ್ತ್ರವೆಂದು ಕನಕ ಪರಿಮಳವೆಂದು ಅಂದಣ ಛತ್ರ ಚಾಮರ ಕರಿ ತುರಗಂಗಳೆಂದು ಇವು ಬಂದುದಿಲ್ಲ ಎಂದು ಸಂದಣಿ ಲಂದಣಗಾರರ ಕೈಯಲ್ಲಿಹೇಳಿಸಿ ಅವು ಬಾರದಿರೆ ತಾ ಸಂಧಿಸಿ ಸೂಚಿಸುವ ಲಿಂಗ ಲಿಂಗಮಾರಿಗೆ ಗುರುಸ್ಥಲ ಎಂದಿಗೂ ಇಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ತುರುಗಾಹಿ ರಾಮಣ್ಣ
ಎಮ್ಮ ಶರಣರು ಗುರುಸ್ಥಲ ನಾಸ್ತಿಯಾಯಿತ್ತೆಂಬರು, ಅದೇನು ಕಾರಣವೆಂದರೆ ತಮ್ಮ ಗುಣ ಅವಗುಣವಿಲ್ಲವಾಗಿ. ಲಿಂಗಸ್ಥಲ ನಾಸ್ತಿಯಾಯಿತ್ತೆಂಬರು, ಅಂಗಗುಣವಳಿಯಿತ್ತಾಗಿ. ಜಂಗಮಸ್ಥಲ ನಾಸ್ತಿಯಾಯಿತ್ತೆಂಬರು, ಅದೇನು ಕಾರಣ ? ಭಾವಬಯಲಾಯಿತ್ತಾಗಿ. ಪ್ರಸಾದಿಸ್ಥಲ ನಾಸ್ತಿಯಾಯಿತ್ತೆಂಬರು, ಪರವು ತಮ್ಮಲ್ಲಿ ನಿಂದ ಕಾರಣ. ಇಂತೀ ಸರ್ವಾವಧಾನಿಗಳೆಲ್ಲರು ನಮ್ಮ ಶರಣರು. ಇಂತು ಸರ್ವಾಚಾರಸಂಪನ್ನರಯ್ಯ ನಮ್ಮ ಶರಣರು. ಇಂತು ಸರ್ವಾಂಗಲಿಂಗಿಗಳಯ್ಯ ನಮ್ಮ ಶರಣರು. ಇಂತಪ್ಪ ಶರಣ ಸನ್ನಹಿತ ಚೆನ್ನಮಲ್ಲೇಶ್ವರನ ಪಾದವ ನಂಬಿದ ಕಾರಣ, ನಾ ಹೋದ ಹಾದಿಯನಾರೊ ಅರಿಯರಯ್ಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಸಹಪಂತಿಯಲ್ಲಿ ಗುರುಚರವಿರುತಿರಲಿಕ್ಕಾಗಿ ತನ್ನ ಗುರುವೆಂದು ಮುಂದಿದ್ದ ಪ್ರಸಾದವ ಬಿಟ್ಟು ಕೈವೊಡ್ಡಿ ಕೊಂಡಡೆ, ವಿಚಾರವಿಲ್ಲದೆ ಕೊಟ್ಟಡೆ, ಆ ಗುರುವಿಂಗೆ ಗುರುವಿಲ್ಲ, ಅವನಿಗೆ ಪ್ರಸಾದವಿಲ್ಲ. ಮುಂದೆ ಇದಿರಿಟ್ಟು ತೋರಿದನಾಗಿ ಎಲ್ಲಿಯೂ ನಾನೆ ಎಂದಲ್ಲಿ ಗುರುಸ್ಥಲ. ಅಲ್ಲಿ ಪರಿಪೂರ್ಣನಾಗಿಪ್ಪನು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 95 ||
--------------
ದಾಸೋಹದ ಸಂಗಣ್ಣ
ಗುರುಸ್ಥಲ ನಾಸ್ತಿಯಾದಲ್ಲದೆ ಶಿಷ್ಯನಲ್ಲ; ಲಿಂಗಸ್ಥಲ ನಾಸ್ತಿಯಾದಲ್ಲದೆ ಭಕ್ತನಲ್ಲ, ಜಂಗಮಸ್ಥಲ ನಾಸ್ತಿಯಾದಲ್ಲದೆ ಶರಣನಲ್ಲ. ಇದುಕಾರಣ, ಕೂಡಲಚೆನ್ನಸಂಗಮದೇವಾ ಈ ತ್ರಿವಿಧವು ನಾಸ್ತಿಯಾಗಿ ಭಕ್ತ ಕೆಟ್ಟು ಭವಿಯಾದಲ್ಲದೆ ಲಿಂಗೈಕ್ಯನಲ
--------------
ಚನ್ನಬಸವಣ್ಣ
ಆರುಸ್ಥಲವಿಟ್ಟು ಬೇರೆ ಕರೆದ ಭಾವವಾವುದಯ್ಯಾ ? ಸಕಲಗುಣಂಗಳನರತು, ಸರ್ವಜೀವಕ್ಕೆ ದಯಾಪರನಾಗಿಪ್ಪುದು, ಭಕ್ತಿಸ್ಥಲ. ಸಕಲದೇಹಭಾವಂಗಳಲ್ಲಿ ಕಲೆದೋರದಿಪ್ಪುದು, ಗುರುಸ್ಥಲ. ಉತ್ಪತ್ಯ ಸ್ಥಿತಿ ಲಯಕ್ಕೆ ಹೊರಗಾದುದು, ಲಿಂಗಸ್ಥಲ. ಆ ಮೂರ ಹೆರೆಹಿಂಗಿ ನಿಂದುದು, ಜಂಗಮಸ್ಥಲ. ಆ ಚತುರ್ವಿಧವನೊಳಕೊಂಡದುದು, ಶರಣಸ್ಥಲ. ಆ ಅಯಿದನವಗವಿಸಿ ನಿಂದುದು, ಐಕ್ಯಸ್ಥಲ. ಇಂತೀ ಷಡುಸ್ಥಲದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ನಿಂದುದು, ಒಂದೆ ಸ್ಥಲ. ಮರೆದು ಅರಿದಲ್ಲಿ ಆಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಷಡಂಗಲೇಪವಾಗಿ ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಸದ್ಯೋಜಾತಮುಖ ಚನ್ನಮಲ್ಲಿಕಾರ್ಜುನಲಿಂಗವಾಯಿತ್ತು. ವಾಮದೇವಮುಖ ಭೋಗಮಲ್ಲಿಕಾರ್ಜುನಲಿಂಗವಾಯಿತ್ತು. ಅಘೋರಮುಖ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವಾಯಿತ್ತು. ತತ್ಪುರುಷಮುಖ ಶಾಂತಮಲ್ಲಿಕಾರ್ಜುನಲಿಂಗವಾಯಿತ್ತು. ಈಶಾನಮುಖ ಇಂತೀ ಚತುರ್ವಿಧ ಆಚಾರ್ಯಂಗೆ ಗುರುಮೂರ್ತಿಯಾದಲ್ಲಿ, ಇಷ್ಟಲಿಂಗನ ಕೊಡಬೇಕೆಂದು ತನ್ನ ದೃಷ್ಟಕ್ಕೆ ದೃಷ್ಟನಾದೆಹೆನೆಂದು ಬಂದುದನರಿತು ನಿಂದ ಮಾರ್ಗವೆ ಗುರುಸ್ಥಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ ಉಭಯಮಾರ್ಗ ಗುರುಸ್ಥಲ.
--------------
ಪ್ರಸಾದಿ ಭೋಗಣ್ಣ
ಆಚಾರದಿಂದ ವಿಚಾರಿಸಿ ದೀಕ್ಷೆಯ ಮಾಡುವುದು ಗುರುಸ್ಥಲ. ವಿಚಾರ ಸರ್ವಗಣಾಚಾರದಿಂದ ದೀಕ್ಷೆಯ ಮಾಡುವುದು ಜಂಗಮಸ್ಥಲ. ಈ ಉಭಯದ ಗೊತ್ತ ಮುಟ್ಟಿ, ನಿಶ್ಚಯ ನಿಜವ ಮುಟ್ಟಿ ಪಂಚವಿಂಶತಿತತ್ವಂಗಳಲ್ಲಿ ಷಟ್ಕರ್ಮ ತ್ರಿವಿಧಾತ್ಮ ಭೇದಂಗಳಲ್ಲಿ ಏಕೋತ್ತರಶತಸ್ಥಲವೆಂಬ ಭಿನ್ನಭಾವಂಗಳನರಿದು ಐವತ್ತೊಂದಕ್ಷರದ ಬೀಜನೇಮವನೊಂದಕ್ಷರದಲೈಕ್ಯವನರಿತು ಇಂತೀ ಐವತ್ತೆರಡು ಗುರುಲಫು ಗುಣನೇಮ ಬಿಂದು ವಿಸರ್ಗ ಶಾಖೆ ಮುಂತಾದವನೊಂದುಗೂಡಿ ನಿರುತದಿಂದ ನಿಂದುದು ಜ್ಞಾನದೀಕ್ಷೆ. ಇಂತೀ ಗುರುಸ್ಥಲದ ವಿವರ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಎಂದಿಂತು ಷಟ್‍ಸ್ಥಲವಾರು: ಭಕ್ತ ಮಹೇಶ ಈ ಎರಡು ಗುರುಸ್ಥಲ; ಪ್ರಸಾದಿ ಪ್ರಾಣಲಿಂಗಿ ಈ ಎರಡು ಲಿಂಗಸ್ಥಲ; ಶರಣ ಐಕ್ಯ ಈ ಎರಡು ಜಂಗಮಸ್ಥಲ. ಇವಕ್ಕೆ ಅಂಗಂಗಳಾವವೆಂದಡೆ: ಭಕ್ತಂಗೆ ಪೃಥ್ವಿಯೆ ಅಂಗ, ಮಹೇಶ್ವರಂಗೆ ಅಪ್ಪುವೆ ಅಂಗ, ಪ್ರಸಾದಿಗೆ ಅಗ್ನಿಯೆ ಅಂಗ, ಪ್ರಾಣಲಿಂಗಿಗೆ ವಾಯುವೆ ಅಂಗ, ಶರಣಂಗೆ ಆಕಾಶವೆ ಅಂಗ, ಐಕ್ಯಂಗೆ ಆತ್ಮವೆ ಅಂಗ. ಈ ಅಂಗಂಗಳಿಗೆ ಹಸ್ತಂಗಳಾವವೆಂದಡೆ: ಭಕ್ತಂಗೆ ಸುಚಿತ್ತವೆ ಹಸ್ತ, ಮಹೇಶ್ವರಂಗೆ ಸುಬುದ್ಧಿಯೆ ಹಸ್ತ, ಪ್ರಸಾದಿಗೆ ನಿರಹಂಕಾರವೆ ಹಸ್ತ, ಪ್ರಾಣಲಿಂಗಿಗೆ ಸುಮನವೆ ಹಸ್ತ, ಶರಣಂಗೆ ಸುಜ್ಞಾನವೆ ಹಸ್ತ, ಐಕ್ಯಂಗೆ ಸದ್ಭಾವವೆ ಹಸ್ತ. ಈ ಹಸ್ತಂಗಳಿಗೆ ಲಿಂಗಂಗಳಾವವೆಂದಡೆ: ಸುಚಿತ್ತಹಸ್ತಕ್ಕೆ ಆಚಾರಲಿಂಗ ಸುಬುದ್ಧಿಹಸ್ತಕ್ಕೆ ಗುರುಲಿಂಗ, ನಿರಹಂಕಾರಹಸ್ತಕ್ಕೆ ಶಿವಲಿಂಗ, ಸುಮನಹಸ್ತಕ್ಕೆ ಚರಲಿಂಗ, ಸುಜ್ಞಾನ ಹಸ್ತಕ್ಕೆ ಪ್ರಸಾದಲಿಂಗ, ಸದ್ಭಾವಹಸ್ತಕ್ಕೆ ಮಹಾಲಿಂಗ, ಈ ಲಿಂಗಂಗಳಿಗೆ ಮುಖಂಗಳಾವವೆಂದಡೆ: ಆಚಾರಲಿಂಗಕ್ಕೆ ಘ್ರಾಣ, ಗುರುಲಿಂಗಕ್ಕೆ ಜಿಹ್ವೆ, ಶಿವಲಿಂಗಕ್ಕೆ ನೇತ್ರ, ಚರಲಿಂಗಕ್ಕೆ ತ್ವಕ್ಕು, ಪ್ರಸಾದಲಿಂಗಕ್ಕೆ ಶ್ರೋತ್ರ, ಮಹಾಲಿಂಗಕ್ಕೆ ನಿರ್ಭಾವ. ಈ ಮುಖಂಗಳಿಗೆ ಅರ್ಪಿತಂಗಳಾವವೆಂದಡೆ: ಘ್ರಾಣಕ್ಕೆ ಗಂಧ, ಜಿಹ್ವೆಗೆ ರುಚಿ, ನೇತ್ರಕ್ಕೆ ರೂಪು, ತ್ವಕ್ಕಿಗೆ ಸ್ಪರ್ಶನ, ಶ್ರೋತ್ರಕ್ಕೆ ಶಬ್ದ, ನಿರ್ಭಾವಕ್ಕೆ ನಿರ್ವಯಲು. ಇಂತೀ ಸರ್ವೇಂದ್ರಿಯ ಸಮ್ಮತ ನಿರ್ವಿಕಲ್ಪ ಮಹಾಲಿಂಗಾಂಗಭಾವದ ಸುಚಿತ್ತಲೇಪಗ್ರಾಹಕ ಭಕ್ತ ಗುರುಲಿಂಗವಾದ. ಗುರುಲಿಂಗಾಂಗ ಸುಬುದ್ಧಿಲೇಪಗ್ರಾಹಕ ಮಹೇಶ್ವರ ಶಿವಲಿಂಗವಾದ. ಶಿವಲಿಂಗಾಂಗ ನಿರಹಂಕಾರಲೇಪಗ್ರಾಹಕ ಪ್ರಸಾದಿ ಜಂಗಮಲಿಂಗವಾದ. ಜಂಗಮಲಿಂಗಾಂಗ ಸುಮನಲೇಪಗ್ರಾಹಕ ಶರಣ ಮಹಾಲಿಂಗವಾದ. ಪ್ರಸಾದಲಿಂಗಾಂಗ ಸುಜ್ಞಾನಲೇಪಗ್ರಾಹಕ ಐಕ್ಯ ಅಭೇದಾನಂದ ಪರಿಪೂರ್ಣಮಯವಾದ. `ನಿಶ್ಶಬ್ದಂ ಬ್ರಹ್ಮ ಉಚ್ಯತೇ' ಎಂಬ ಶ್ರುತಿಯ ಮೀರಿ ನಿಂದ ಅಖಂಡಮಹಿಮಂಗೆ, ಸುನಾದಯುಕ್ತಂಗೆ ಶಬ್ದ ನಷ್ಟವಾದಲ್ಲಿ_ ಆಚಾರಲಿಂಗವಿಲ್ಲ ಭಕ್ತಂಗೆ, ಗುರುಲಿಂಗವಿಲ್ಲ ಮಹೇಶ್ವರಂಗೆ, ಶಿವಲಿಂಗವಿಲ್ಲ ಪ್ರಸಾದಿಗೆ, ಚರಲಿಂಗವಿಲ್ಲ ಪ್ರಾಣಲಿಂಗಿಗೆ, ಪ್ರಸಾದಲಿಂಗವಿಲ್ಲ ಶರಣಂಗೆ, ಜಡದೇಹ ಧರ್ಮ ಭಾವವಿಲ್ಲ ಐಕ್ಯಂಗೆ. ಇದು ಕಾರಣ, ಕೂಡಲಚೆನ್ನಸಂಗಯ್ಯಾ, ನಿಮ್ಮ ಷಟ್‍ಸ್ಥಲದ ಪರಿಯಾಯವ ನೀವೆ ಬಲ್ಲಿರಿ. ಉಳಿದ ಅಜ್ಞಾನಿಜೀವಿಗಳೆತ್ತ ಬಲ್ಲರು ?
--------------
ಚನ್ನಬಸವಣ್ಣ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಭಕ್ತಿಸ್ಥಲ ಮಹೇಶ್ವರಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಶರಣಸ್ಥಲ ಐಕ್ಯಸ್ಥಲ ಇಂತೀ ನವಗುಣಸ್ಥಲಂಗಳಲ್ಲಿ ಸಾಧಕ ಮೂರು ಸಾಧ್ಯ ಮೂರು ಅಸಾಧ್ಯ ಮೂರು. ಸಾಧಕದಿಂದ ಸಾಧ್ಯ, ಸಾಧ್ಯದಿಂದ ಅಸಾಧ್ಯ ಅಸಾಧ್ಯದಿಂದ ಭೇದಕತ್ವ ಇಂತೀ ದಶಗುಣಸಿದ್ಧಿ. ಸಿದ್ಧಿಯಾದಲ್ಲಿ ಮೂವತ್ತಾರು ಭೇದ ಇಪ್ಪತ್ತೈದು ತತ್ವ ನೂರುಸ್ಥಲ ಪ್ರಮಾಣು. ಒಂದು ಸ್ಥಲದಲ್ಲಿ ನಿಂದು ಐಕ್ಯವಾಗಲಾಗಿ ಬೀಜದೊಳಗಣ ಫಲ ಪರ್ಣ ಅಂಕುರ ವಿಭೇದವಿಲ್ಲದೆ ಅಡಗಿದಂತೆ. ಈ ಗುಣ ಸರ್ವಸ್ಥಲ ಸಂಪೂರ್ಣವ ಐಕ್ಯಬೀಜ ನಾಮ ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಉಭಯವಳಿದ ನಿರ್ವೀಜ.
--------------
ತುರುಗಾಹಿ ರಾಮಣ್ಣ
ತಾ ಗುರುವಾಹಾಗ ತನ್ನ ಗುರುವ ತಾನರಿತು, ತನಗೆ ಇಹದಲ್ಲಿ ಸುಖ, ತನ್ನ ಗುರುವಿಂಗೆ ಪರದಲ್ಲಿ ಪರಿಣಾಮವನೈದಿಸುವ ಉಭಯ ಗುರು ತಾನಾಗಿ ಇದಿರಿಂಗೆ ಪ್ರತಿಸ್ವರೂಪವ ಕೊಡುವಲ್ಲಿ, ತನ್ನಯ ನಿಜರೂಪ ಪ್ರಾಣಪ್ರತಿಷೆ*ಯ ಮಾಡಿ ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡುವಲ್ಲಿ, ಕಾಯದ ಸೂತಕವ ಕಳೆದು, ಮನದ ವಿಕಾರವ ಹಿಂಗಿಸಿ, ತನ್ನಿರವನರಿತು ಅರಿದರಿವ ಶಿಷ್ಯನ ಹೃತ್ಕಮಲ ಮಧ್ಯದಲ್ಲಿನೆಲೆಗೊಳಿಸಿ, ಅರಿವಿನ ಭೇದದಿಂದ ಶಿಲೆಯ ಸೂತಕವ ಕಳೆದು ಇಷ್ಟಪ್ರಾಣವ ಬೆಸುವ ಬೆಸುಗೆಯ ತೋರಿ, ಉಡುವ ತೊಡುವ, ಕೊಡುವ ಕೊಂಬ, ಮುಟ್ಟುವ ಅರ್ಪಿತಭೇದವ ದೃಷ್ಟದಿಂದ ತೋರಿ, ಗುರುವೆಂಬ ಭಾವ ತನಗೆ ತಲೆದೋರದೆ ಹರಶರಣರ ಮುಂದಿಟ್ಟು ನಿನ್ನಯ ಪರಿದೋಷವ ಪರಿಹರಿಸಿಕೊ ಎಂದು ತ್ರಿವಿಧದ ಭೇದವ ತೋರಿ, ಗುರುವೆಂಬ ಭಾವ ತನಗೆ ತಲೆದೋರದೆ ಹರಶರಣರ ಮುಂದಿಟ್ಟು, ನಿನ್ನಯ ಪರಿದೋಷವ ಪರಿಹರಿಸಿಕೊ ಎಂದು ತ್ರಿವಿಧವ ಭೇದವ ತೋರಿ. ತಾನು ಶುಕ್ತಿ ನುಂಗಿದ ಜಲದಂತೆ, ಭ್ರಮರ ನುಂಗಿದ ಗಂಧದಂತೆ, ದೃಜಕೊಂಡ ದೃಮಣಿಯಂತೆ, ನಾಮ ರೂಪು ಭಾವವಳಿದು ತಾನು ತಾನಾದಡೆ ಗುರುಸ್ಥಲ. ಅದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಉರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ ಮನದ ಕೊನೆಯಿಂದ ಲಿಂಗವನಗಲದಿರಬೇಕು. ಉರ ಗುರುಸ್ಥಲ, ಉರ ಲಿಂಗಸ್ಥಲ, ಉರ ಜಂಗಮಸ್ಥಲ, ಉರ ಪ್ರಸಾದಸ್ಥಲ, ಉರ ಮಹಾಸ್ಥಲ, ಉರ ಮಹಾಮಹಿಮರಿಪ್ಪ ಅನುಭಾವಸ್ಥಲವೆಂದರಿದು ಅನ್ಯಮಿಶ್ರಂಗಳ ಹೊದ್ದಲಾಗದು. ತಟ್ಟು ಮುಟ್ಟು ತಾಗು ನಿರೋಧಗಳಿಗೆ ಗುರಿಯಾಗಲಾಗದು. ಇಂದ್ರಿಯಂಗಳ ಕೂಡ ಮನಸ್ಥಾಪ್ಯಗೊಳದಿದ್ದರೆ, ಇದು ಉರಲಿಂಗ ಸ್ವಾಯತ. ಪ್ರಾಣಲಿಂಗಪ್ರಾಣಿಗಿದು ಚಿಹ್ನೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಇನ್ನಷ್ಟು ... -->